ಈ ಪರಿ ನಿರುದ್ಯೋಗದ ಬಗ್ಗೆ ಯಾಕೆ ಮಾತಾಡುತ್ತಿಲ್ಲ ನಾರಾಯಣಮೂರ್ತಿ ?

Update: 2023-11-07 08:45 GMT
Editor : Thouheed | Byline : ಆರ್. ಜೀವಿ

Photo: PTI

ವಾರಕ್ಕೆ 70 ಗಂಟೆ ದುಡಿಯಬೇಕು ಎಂಬ ಇನ್ಫೋಸಿಸ್ ಸಹ ಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ಹೇಳಿಕೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

ಸಹಮತ ವ್ಯಕ್ತವಾಗಿರುವುದು ಒಂದು ಕಡೆಯಾದರೆ, ಟೀಕೆಗೂ ಅವರ ಹೇಳಿಕೆ ದೊಡ್ಡ ಮಟ್ಟದಲ್ಲಿ ತುತ್ತಾಗಿದೆ. ಕಾರ್ಮಿಕ ಕಾನೂನುಗಳ ಅರಿವೇ ಇಲ್ಲದೆ ಮಾತನಾಡಿದ್ದಾರೆ ಎಂಬ ಆಕ್ರೋಶವನ್ನೂ ಜನರು ಹೊರಹಾಕಿದ್ದಾರೆ.

'ಉದ್ಯೋಗಿಗಳು ಹೆಚ್ಚುವರಿ ಗಂಟೆಗಳ ಕಾಲ ಕೆಲಸ ಮಾಡುವಂತೆ ಯಾವುದೇ ಕಂಪೆನಿ ಅವರನ್ನು ಬಲವಂತಪಡಿಸುವಂತಿಲ್ಲ. ಕಂಪೆನಿಗಳು ಬೆವರಿನ ಅಂಗಡಿಗಳು ನಡೆಸಲು ಸಾಧ್ಯವಿಲ್ಲ' ಎಂದು ಕರ್ನಾಟಕ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಾರಾಯಣ ಮೂರ್ತಿ ಈ ಮಾತು ಹೇಳುವಾಗ ಯಾವ ಅರ್ಥದಲ್ಲಿ ಹೇಳಿದರು? ಯಾರಿಗಾಗಿ 70 ಗಂಟೆ ಕೆಲಸ ಮಾಡಬೇಕು ಎಂದರು ಎಂಬುದರ ಬಗ್ಗೆ ಗೊಂದಲಗಳಂತೂ ಇವೆ.

ಕಂಪನಿಗೋಸ್ಕರವಾಗಿಯೇ 70 ಗಂಟೆ ಕೆಲಸ ಮಾಡಿ ಎಂದು ಅವರು ಹೇಳಿರಲಿಕ್ಕಿಲ್ಲ ಎಂಬ ವಿವರಣೆಗಳನ್ನೂ ಟೆಕ್ ಮಹೀಂದ್ರಾ ಸಿಇಒ ಸಿ.ಪಿ.ಗುರ್ನಾನಿ ಅಂಥವರು ಕೊಡುತ್ತಿದ್ಧಾರೆ. ಆದರೆ, ದೇಶದಲ್ಲಿ ಉದ್ಯೋಗಗಳೇ ಇಲ್ಲದಿರುವ ಸನ್ನಿವೇಶದಲ್ಲಿ, ನಿರುದ್ಯೋಗ ಹೆಚ್ಚಾಗಿರುವ ಹೊತ್ತಿನಲ್ಲಿ ಆ ಬಗ್ಗೆ ಏನನ್ನೂ ಹೇಳದ ನಾರಾಯಣ ಮೂರ್ತಿಯವರು 70 ಗಂಟೆ ಕೆಲಸದ ಬಗ್ಗೆ ಮಾತ್ರ ಹೇಳುತ್ತಿರುವುದೇಕೆ?

ಇನ್ಫೋಸಿಸ್ನಂಥ ಕಂಪನಿಗಳಿಗೆ ದುಡಿಯುವವರು 70 ಗಂಟೆ ದುಡಿಯಬೇಕೆಂಬುದು ಅವರ ಮಾತಿನ ಸ್ಪಷ್ಟ ಉದ್ದೇಶವಾಗಿದೆಯೆ?. ಅವರು ದೇಶದಲ್ಲಿನ ಉತ್ಪಾದಕತೆ ಕುಸಿದಿದೆ ಎಂಬ ಹಿನ್ನೆಲೆಯಲ್ಲಿ ಹೆಚ್ಚು ಗಂಟೆಗಳ ದುಡಿಮೆ ಅಗತ್ಯ ಎಂದಿದ್ಧಾರೆ ಎಂದೆಲ್ಲ ವ್ಯಾಖ್ಯಾನಗಳಿವೆ. ಬಹುಶಃ ಈ ದೇಶದ ಕೋಟ್ಯಂತರ ಜನಸಾಮಾನ್ಯರು ವಾರಕ್ಕೆ 70 ಗಂಟೆಗಳಿಗೂ ಹೆಚ್ಚು ಕೆಲಸ ಮಾಡುತ್ತಿದ್ದಾರೆ, ಎಷ್ಟೋ ಯುವಕರು ತಮ್ಮ ಕುಟುಂಬವನ್ನು ತೂಗಿಸುವುದಕ್ಕಾಗಿ ಹೆಚ್ಚು ಗಂಟೆ ದುಡಿಯುತ್ತಿದ್ದಾರೆ ಎಂಬುದು ನಾರಾಯಣ ಮೂರ್ತಿಯವರಿಗೆ ಗೊತ್ತಿಲ್ವಾ ?.

ವಾರ್ಷಿಕ ಕೋಟಿಗಟ್ಟಲೆ ಉದ್ಯೋಗ ಕೊಡುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಮೋದಿ, ಆಮೇಲೆ ಉದ್ಯೋಗ ಕೇಳಿದ ಯುವಕರಿಗೆ ಪಕೋಡ ಮಾರಲು ಹೇಳಿದ್ರು. ಹೀಗೆ ಪಕೋಡ ಮಾರುವುದು ಕೂಡ ಉದ್ಯೋಗವೇ ಅಗಿದೆ ಎಂದು ಉಪದೇಶ ನೀಡುವ ಪ್ರಧಾನಿಯ ದೇಶದಲ್ಲಿ ನಾರಾಯಣ ಮೂರ್ತಿಯವರು ಉತ್ಪಾದಕತೆ ಕುಸಿತದ ಕಾರಣ ಮುಂದೆ ಮಾಡಿ, 70 ಗಂಟೆ ದುಡಿಮೆಯ ಅಗತ್ಯವನ್ನು ಪ್ರತಿಪಾದಿಸುತ್ತಿರುವುದು ವಿಚಿತ್ರವೆನ್ನಿಸುತ್ತಿದೆ.

ಅಸಲಿಗೆ ಉತ್ಪಾದಕತೆಗೂ ಹೆಚ್ಚು ಗಂಟೆಗಳ ದುಡಿಮೆಗೂ ಸಂಬಂಧವಿದೆಯೆ? ಇಂಥ ಪ್ರಶ್ನೆಗಳನ್ನೂ ಪರಿಣಿತರು ಈಗ ವಿಶ್ಲೇಷಿಸುತ್ತಿದ್ದಾರೆ. ಯುವಕರು ಇದು ನನ್ನ ದೇಶ ಎಂದು ಯೋಚಿಸಿ ಕೆಲಸ ಮಾಡಬೇಕು ಎಂಬ ನಾರಾಯಣ ಮೂರ್ತಿಯವರ ಹೇಳಿಕೆಯಲ್ಲಿಯೇ ಒಂದು ಬಗೆಯ ಅಸ್ಪಷ್ಟತೆ ಇದೆ.

ತಮ್ಮ ದೇಶ ಎಂದೇ ಎಲ್ಲರೂ ಯೋಚಿಸುತ್ತಾರೆ. ಆದರೆ ಪ್ರಶ್ನೆಯಿರುವುದು, ನಾರಾಯಣ ಮೂರ್ತಿಯವರು ಹೇಳುವ ಹಾಗೆ ಯುವಕರು ತಮ್ಮ ದೇಶ ಎಂದು ಯೋಚಿಸಿ 70 ಗಂಟೆಗಳ ಕಾಲ ದುಡಿಯಬೇಕಿರುವುದು ಯಾರಿಗೆ?. ಈ ದೇಶದಲ್ಲಿ ನಿತ್ಯದ ತುತ್ತು ಸಂಪಾದಿಸಲು ಹೊತ್ತುಗೊತ್ತಿನ ಪರಿವೆಯಿಲ್ಲದೆ ದುಡಿಯುತ್ತಲೇ ಇರುವ, ಹೈರಾಣಾಗುವ ಜನಸಾಮಾನ್ಯರು, ಬಡವರು, ಕಾರ್ಮಿಕರು ಮಾಡುತ್ತಿರುವ ದುಡಿಮೆ ಈ ದೇಶಕ್ಕಾಗಿ ಮಾಡುತ್ತಿರುವ ದುಡಿಮೆಯಲ್ಲವೆ?

ನಾರಾಯಣ ಮೂರ್ತಿಯವರದೂ ಆಗಿರುವ ಈ ದೇಶದಲ್ಲಿ 80 ಕೋಟಿ ಜನರು ಉಚಿತ ಆಹಾರ ಧಾನ್ಯಗಳ ಮೇಲೆ ಅವಲಂಬಿತರಾಗಿದ್ದಾರೆ. ಅವರ ಆರ್ಥಿಕ ಸ್ಥಿತಿ ತುಂಬಾ ಕೆಟ್ಟದ್ದಾಗಿದೆ. ಯುವಕರು 70 ಗಂಟೆಗಳ ಕಾಲ ಕೆಲಸ ಮಾಡದಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆಯೇ?

ಅಥವಾ ದೊಡ್ಡ ಕೈಗಾರಿಕೋದ್ಯಮಿಗಳು ಶ್ರೀಮಂತರಾಗುತ್ತಲೇ ಇರುವಂತೆ, ಹೆಚ್ಚಿನ ಜನರು ಬಡವರಾಗುತ್ತಲೇ ಇರುವಂತೆ ಮಾಡಿರುವ ಆರ್ಥಿಕ ನೀತಿಗಳು ಈ ಸ್ಥಿತಿಗೆ ಕಾರಣವೆ?. ಅತಿ ಹೆಚ್ಚು ದುಡಿಯುವ ಆದರೆ ಅತಿ ಕಡಿಮೆ ಸಂಬಳವಿರುವ ಅದೆಷ್ಟೋ ಕೋಟಿ ಜನರಿರುವ ಈ ದೇಶದಲ್ಲಿನ ದುಡಿಮೆಯ ವಿಚಾರದಲ್ಲಿ ನಾರಾಯಣ ಮೂರ್ತಿಯವರು ಯಾರ ಬಗ್ಗೆ ಮಾತನಾಡುತ್ತಿದ್ದಾರೆ?

ಸಣ್ಣ ಸಣ್ಣ ಕೆಲಸಗಳಲ್ಲಿ ಗಂಟೆಗಳ ಲೆಕ್ಕವಿಲ್ಲದೆ ದುಡಿಯುತ್ತ, ಸಣ್ಣ ಸಂಬಳ ತೆಗೆದುಕೊಂಡು, ದಿನದ ಬದುಕು ಸಾಗಿಸಲೂ ಆಗದಂತಿರುವ ಜನರು ತಮ್ಮ ಕುಟುಂಬದವರೊಂದಿಗೂ ಸಮಯ ಕಳೆಯಲಾರದ ಸ್ಥಿತಿಯಲ್ಲಿದ್ದಾರೆ. ಈ ಜನರು ನಾರಾಯಣ ಮೂರ್ತಿಯವರ ಗಮನದಲ್ಲಿಲ್ಲವೆ ?. ಇನ್ಫೋಸಿಸ್ನಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದವರು ವರ್ಷಕ್ಕೆ ಮೂರುವರೆ ಲಕ್ಷ ಸಂಬಳ ತೆಗೆದುಕೊಳ್ಳುವ ಹೊತ್ತಲ್ಲಿ ಅದೇ ಕಂಪನಿಯ ಸಿಇಒ ವಾರ್ಷಿಕ ಸುಮಾರು 80 ಕೋಟಿ ಸಂಬಳ ಪಡೆಯುತ್ತಿರುವುದಾದರೆ, ಇಲ್ಲಿ ನನ್ನ ದೇಶ ಎಂದು ಕೆಲಸ ಮಾಡುತ್ತಿರುವವರು ಯಾರು?.

ಒಂದು ಐಟಿ ಕಂಪನಿಯಲ್ಲಿ ಹೊಸಬರ ಸಂಬಳ ಶೇ.45ರಷ್ಟು ಏರಿಕೆಯಾಗುವ ಹೊತ್ತಿನಲ್ಲಿ ಅದೇ ಕಂಪನಿಯ ಸಿಇಒ ಸಂಬಳ ಶೇ.835ರಷ್ಟು ಹೆಚ್ಚಳವಾಗುತ್ತದೆ ಎಂದಾದರೆ, 70 ಗಂಟೆಗಳ ಕೆಲಸದ ಬಗ್ಗೆ ಮಾತನಾಡುವುದರ ಹಿಂದಿನ ಮರ್ಮವೇನು?. ಇನ್ನು, ಕಡಿಮೆ ಉತ್ಪಾದಕತೆಗೆ ಬೇರೆಯದೇ ಕಾರಣಗಳಿರುವಾಗ, ಭಾರತೀಯರು ಎಷ್ಟು ಗಂಟೆ ಕೆಲಸ ಮಾಡುತ್ತಾರೆ ಎಂಬುದಕ್ಕೆ ಅದನ್ನು ನಾರಾಯಣ ಮೂರ್ತಿಯವರು ತಳುಕು ಹಾಕುತ್ತಿರುವುದು ತಪ್ಪು ಎನ್ನುತ್ತಾರೆ ಪರಿಣಿತರು.

ಎರಡನೆಯ ಮಹಾಯುದ್ಧದ ನಂತರ ಜಪಾನ್ ಮತ್ತು ಜರ್ಮನಿಗಳಲ್ಲಿ ಜನರು ಹೆಚ್ಚು ಗಂಟೆ ಕೆಲಸ ಮಾಡಿದ ಕಾರಣಕ್ಕೆ ಆ ದೇಶಗಳು ಶ್ರಿಮಂತವಾದವೆಂಬುದೂ ಒಂದು ಸುಳ್ಳು ಕಥೆ ಎಂಬ ಟೀಕೆ ಕೇಳಿಬರುತ್ತಿದೆ. ಬಂಡವಾಳವಿಲ್ಲದ ಬಡಾಯಿಯಿಂದ ಹೇಗೆ ಉಪಯೋಗವಿಲ್ಲವೊ ಬಂಡವಾಳದ ಬಲವಿಲ್ಲದೆ ಆರ್ಥಿಕ ಪ್ರಗತಿಯೂ ಕಷ್ಟ ಎಂಬುದನ್ನು ತಜ್ಞರು ಗುರುತಿಸುತ್ತಾರೆ.

ನಾರಾಯಣ ಮೂರ್ತಿಯವರು ಉದಾಹರಣೆಯಾಗಿ ಕೊಟ್ಟ ಜಪಾನ್ ಮತ್ತು ಜರ್ಮನಿಯಂತಹ ದೇಶಗಳಲ್ಲಿ 2ನೇ ಮಹಾಯುದ್ಧದ ನಂತರ, ತಾತ್ಕಾಲಿಕವಾಗಿಯಾದರೂ ಸರಾಸರಿ ಕೆಲಸದ ಸಮಯದಲ್ಲಿ ಏರಿಕೆ ಕಂಡದ್ದೇನೋ ನಿಜ. ತಜ್ಞರು ಉಲ್ಲೇಖಿಸುವ ಹಾಗೆ, ಜರ್ಮನಿಯಲ್ಲಿ ವಾರ್ಷಿಕ ಸರಾಸರಿ ಕೆಲಸದ ಸಮಯ 1950ರಿಂದ ಸ್ಥಿರವಾಗಿ ಕುಸಿದಿದೆ.

ಆದರೂ 21ನೇ ಶತಮಾನದ ದ್ವಿತೀಯಾರ್ಧದಲ್ಲಿ ಜರ್ಮನ್ ತಲಾ ಆದಾಯ ಏರುತ್ತಲೇ ಹೋಗಿದೆ. 1960ರ ದಶಕದಿಂದ ಜಪಾನಿಯರ ವಾರ್ಷಿಕ ಸರಾಸರಿ ಕೆಲಸದ ಸಮಯ ಪ್ರತಿ ದಶಕದಲ್ಲಿಯೂ ಕ್ರಮೇಣವಾಗಿ ಕುಸಿದಿದೆ. ಆದರೆ ಆರ್ಥಿಕ ಬೆಳವಣಿಗೆಗೆ ಅದರಿಂದ ಬಾಧಕವಾಗಿಲ್ಲ. ಇದಲ್ಲದೆ, ಸರಾಸರಿ ಭಾರತೀಯ ಕಾರ್ಮಿಕರು ಹಿಂದೆ ಅಥವಾ ಈಗ ಜಪಾನೀಯರು ಅಥವಾ ಜರ್ಮನ್ನರಿಗಿಂತ ಕಡಿಮೆ ಕೆಲಸ ಮಾಡಿದ್ದಾರೆ ಎಂದು ತೋರಿಸುವ ಪುರಾವೆಗಳೇನೂ ಇಲ್ಲ. 1970ರಲ್ಲಿ, ಭಾರತದ ಕೆಲಸದ ಸಮಯದ ಡೇಟಾ ಲಭ್ಯವಾಗತೊಡಗಿದಾಗಿನಿಂದಲೂ ಸರಾಸರಿ ಭಾರತೀಯ ಕಾರ್ಮಿಕರು ವರ್ಷಕ್ಕೆ ಸುಮಾರು 2,077 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಇದರಲ್ಲಿ ಈವರೆಗೆ ಅಂಥ ವ್ಯತ್ಯಾಸವೇನೂ ಆಗಿಲ್ಲ.

1970ರಲ್ಲಿ ಸರಾಸರಿ ಜರ್ಮನ್ ಮತ್ತು ಜಪಾನಿನ ಕಾರ್ಮಿಕರು ಕ್ರಮವಾಗಿ 1,941 ಗಂಟೆಗಳು ಮತ್ತು 2,137 ಗಂಟೆಗಳ ಕಾಲ ಕೆಲಸ ಮಾಡಿದ್ದಾರೆ.

ನಿಜವೇನೆಂದರೆ, 1960ರಿಂದ 1980ರ ದಶಕದವರೆಗೆ ಜಪಾನ್ ಆರ್ಥಿಕವಾಗಿ ಅತಿ ವೇಗದ ಪ್ರಗತಿ ಕಂಡಿದ್ದಾಗ, ಅಲ್ಲಿನ ವಾರ್ಷಿಕ ಕೆಲಸದ ಸಮಯ ಭಾರತದಲ್ಲಿ ಇದ್ದಷ್ಟೇ ಇತ್ತು.

2017ರಲ್ಲಿನ ಅಂಕಿ ಅಂಶಗಳನ್ನು ಗಮನಿಸಿದರೆ, ವಾರ್ಷಿಕ ಕೆಲಸದ ಸಮಯ ಭಾರತದಲ್ಲಿ 2,117 ಗಂಟೆಗಳು ಮತ್ತು ಜಪಾನ್ ಮತ್ತು ಜರ್ಮನಿಯಲ್ಲಿ ಕ್ರಮವಾಗಿ 1,738 ಗಂಟೆಗಳು ಮತ್ತು 1,354 ಗಂಟೆಗಳು. ಐತಿಹಾಸಿಕವಾಗಿ ಅವಲೋಕಿಸಿದರೂ, ವಾರ್ಷಿಕ ಕೆಲಸದ ಸಮಯದ ಕುಸಿತವಿದ್ಧಾಗ ಆರ್ಥಿಕ ಸ್ಥಗಿತತೆಗಿಂತ ಆರ್ಥಿಕ ಪ್ರಗತಿ ಆಗಿರುವುದೇ ಹೆಚ್ಚು.

ಕಳೆದ 150 ವರ್ಷಗಳಲ್ಲಿ ಕೈಗಾರಿಕೀಕರಣವನ್ನು ಪ್ರಾರಂಭಿಸಿದ ಹೆಚ್ಚಿನ ದೇಶಗಳಲ್ಲಿ ಆರ್ಥಿಕ ಉತ್ಪಾದನೆ ಮತ್ತು ಜೀವನಮಟ್ಟ ಹೆಚ್ಚಾದಂತೆ ಅಲ್ಲಿನ ಕಾರ್ಮಿಕರ ಸರಾಸರಿ ಕೆಲಸದ ಸಮಯ ಕಡಿಮೆಯಾಗಿದೆ. 1870ರಲ್ಲಿ ಬಹುಪಾಲು ದೇಶಗಳಲ್ಲಿನ ಕಾರ್ಮಿಕರು ವರ್ಷಕ್ಕೆ 3,000 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದರು. ಇಂದು ಅದೇ ದೇಶಗಳಲ್ಲಿನ ಕೆಲಸದ ಸಮಯ ಸರಿಸುಮಾರು ಅರ್ಧದಷ್ಟು ಕಡಿಮೆಯಾಗಿದೆ.

ಕೈಗಾರಿಕಾ ಪೂರ್ವ ಸಮಾಜಗಳಲ್ಲಿನ ಜನರಿಗೆ ವರ್ಷಕ್ಕೆ 3,000 ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಏಕೆಂದರೆ ಅದು ಅವರ ಉಳಿವಿನ ಪ್ರಶ್ನೆಯಾಗಿತ್ತು. ಆದರೆ ಉದ್ಯಮ ಮತ್ತು ತಂತ್ರಜ್ಞಾನದ ಬೆಳವಣಿಗೆಯ ಜೊತೆಗೇ ಆರ್ಥಿಕ ಉತ್ಪಾದನೆ ಮತ್ತು ಜೀವನಮಟ್ಟ ಏರುತ್ತಿದ್ದಂತೆ ದೀರ್ಘ ಗಂಟೆಗಳ ದುಡಿಮೆ ಅಗತ್ಯವಾಗಲಿಲ್ಲ. ಬದಲಾಗಿ ಕಡಿಮೆ ಸಮಯದಲ್ಲಿಯೇ ಹೆಚ್ಚು ಉತ್ಪಾದಕತೆ ಸಾಧ್ಯವಾಗುವ ಸಂದರ್ಭ ಸೃಷ್ಟಿಯಾಗಿತ್ತು. ಹೆಚ್ಚಿನ ಬಂಡವಾಳ, ಯಂತ್ರೋಪಕರಣಗಳು ಅದನ್ನು ಸಾಧ್ಯ ಮಾಡಿದ್ದವು.

ಕೆಲಸದಲ್ಲಿ ದೀರ್ಘಾವಧಿಯ ವಿಚಾರ ಬಂದರೆ ಭಾರತೀಯರ ದುಡಿಮೆಯ ಅವಧಿ ಇತರ ದೇಶಗಳಿಗಿಂತ ಕಡಿಮೆಯೇನೂ ಇಲ್ಲ.

ಆದರೆ ನಿಜವಾಗಿಯೂ ಕೊರತೆಯಿರುವುದು ಅವರ ಉತ್ಪಾದಕತೆಯನ್ನು ಹೆಚ್ಚಿಸಲು ಬೇಕಿರುವ ಬಂಡವಾಳದ್ದು. ಕಾರ್ಮಿಕರ ಉತ್ಪಾದಕತೆಯನ್ನು ಹೋಲಿಸಿ ನೋಡುವುದಾದರೆ, 2015ರ ಹೊತ್ತಿಗೆ ಜಪಾನ್‌ನಲ್ಲಿ ಗಂಟೆಗೆ 36.22 ಡಾಲರ್, ಅಮೆರಿಕದಲ್ಲಿ 59.77 ಡಾಲರ್ ಆಗಿದ್ದರೆ, ಭಾರತದಲ್ಲಿನ ಉತ್ಪಾದಕತೆ ಗಂಟೆಗೆ 6.46 ಡಾಲರ್ ಆಗಿತ್ತು.

1991ರ ಆರ್ಥಿಕ ಸುಧಾರಣೆಗಳಿಂದ ಭಾರತದ ಕಾರ್ಮಿಕರ ಉತ್ಪಾದಕತೆ ಏರಿಕೆಯಾಗಿದ್ದರೂ, ಅದರ ಬೆಳವಣಿಗೆಯ ವೇಗ 2016ರಿಂದ ಗಣನೀಯ ಕುಸಿತ ಕಂಡಿದೆ. ಅಮೆರಿಕದಲ್ಲಿ ಕೋವಿಡ್ ಬಳಿಕ ವರ್ಕ್ ಫ್ರಮ್ ಹೋಂ ಶುರುವಾದ್ದರಿಂದ ಅಲ್ಲಿನ ಕಾರ್ಮಿಕರ ಉತ್ಪಾದಕತೆಗೆ ವೇಗ ಬಂದಿದೆ.

ಭಾರತದಲ್ಲಿ ಐಟಿ ಕಂಪನಿಗಳು ವರ್ಕ್ ಫ್ರಮ್ ಹೋಂ ಇನ್ನು ಸಾಕು ಎನ್ನುತ್ತಿವೆ. ಇದೇ ಹೊತ್ತಲ್ಲಿ ನಾರಾಯಣ ಮೂರ್ತಿಯವರ ಈ ಹೇಳಿಕೆ ಬಂದಿದೆ.

ಸಂಶೋಧನೆಗಳ ಪ್ರಕಾರ, ಹೆಚ್ಚು ಕೆಲಸ ಮಾಡುವವರು ಖಿನ್ನತೆಗೆ ಒಳಗಾಗುತ್ತಾರೆ. ಅತಿ ಹೆಚ್ಚು ಕೆಲಸದ ಕಾರಣದಿಂದಾಗಿಯೇ ಲಕ್ಷಾಂತರ ಜನ ಸಾವಿಗೆ ತುತ್ತಾಗುತ್ತಾರೆ ಎಂಬ ವರದಿಗಳೂ ಇವೆ. ಅದೇ ವೇಳೆ, ಹೆಚ್ಚು ಗಂಟೆ ಕೆಲಸ ಮಾಡಿದರೆ ಉತ್ತಮ ಫಲಿತಾಂಶ, ಉತ್ತಮ ಉತ್ಪಾದಕತೆ ಸಾಧ್ಯವಾಗುತ್ತದೆ ಎಂದೇನೂ ಇಲ್ಲ. ಯುದ್ಧದ ಸ್ಥಿತಿಯಿದ್ಧ ದೇಶಗಳಲ್ಲಿಯೂ 70 ಗಂಟೆಗಳ ಕೆಲಸದ ಅಗತ್ಯ ಬೀಳದಿರುವಾಗ, ಅಷ್ಟು ಗಂಟೆಗಳ ಕೆಲಸ ಬೋಗಸ್ ಎನ್ನಿಸಿರುವಾಗ ಅಂಥ ಸ್ಥಿತಿ ಇಲ್ಲದಿರುವಲ್ಲಿ 70 ಗಂಟೆಗಳ ಯುದ್ಧೋಪಾದಿ ಕೆಲಸ ಯಾರ ಖಜಾನೆಯನ್ನು ತುಂಬಿಸುವುದಕ್ಕಾಗಿ?. ಈ ಪ್ರಶ್ನೆಯೊಂದು ಎಲ್ಲ ಚರ್ಚೆಗಳ ನಂತರವೂ ಹಾಗೆಯೇ ಉಳಿದುಬಿಡುತ್ತದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News