ಅಟಲ್ ಸೇತುವಿನಿಂದ ʼಜಿಗಿಯಲೆತ್ನಿಸಿದ್ದʼ ಮಹಿಳೆಯ ವೀಡಿಯೊ ಡಿಲೀಟ್‌ ಮಾಡುವಂತೆ ಮುಂಬೈ ಪೋಲಿಸರಿಗೆ ಮಾನಸಿಕ ತಜ್ಞರ ಆಗ್ರಹಿಸಿದ್ದೇಕೆ?

Update: 2024-08-19 12:39 GMT

Photo : indianexpress

ಮುಂಬೈ: ಅಟಲ್‌ ಸೇತುವೆ ಮೇಲಿಂದ ಅರಬ್ಬೀ ಸಮುದ್ರಕ್ಕೆ ಬೀಳಲಿದ್ದ 56 ವರ್ಷದ ಮಹಿಳೆಯೊಬ್ಬರ ಜೀವವನ್ನು ಟ್ಯಾಕ್ಸಿ ಚಾಲಕರೊಬ್ಬರು ಹಾಗು ನಾಲ್ಕು ಮಂದಿ ಟ್ರಾಫಿಕ್‌ ಪೊಲೀಸರು ದಿಟ್ಟ ಕಾರ್ಯಾಚರಣೆಯಿಂದಾಗಿ ಉಳಿಸಿದ ಘಟನೆ ಆ.16ರಂದು ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್‌ ಆಗಿದೆ.

ಮಹಿಳೆಯ ವೀಡಿಯೊವನ್ನು ಪೋಲಿಸರು ಹಂಚಿಕೊಂಡ ಬಳಿಕ ಅದು ವೈರಲ್ ಆಗಿದೆ. ಸಂಭಾವ್ಯ ದುರಂತವನ್ನು ತಡೆದಿದ್ದನ್ನು ಹಲವರು ಸ್ವಾಗತಿಸಿದ್ದರೆ, ಕೆಲವರು ಇಂತಹ ವೀಡಿಯೊಗಳನ್ನು ವ್ಯಾಪಕವಾಗಿ ಹಂಚಿಕೊಳ್ಳುವುದರ ಸಂಭಾವ್ಯ ಅಪಾಯಗಳ ಬಗ್ಗೆ ಎಚ್ಚರಿಕೆಯ ಗಂಟೆ ಮೊಳಗಿಸಿದ್ದಾರೆ.

ಎಕ್ಸ್‌ನಲ್ಲಿ ಕಳವಳಗಳನ್ನು ವ್ಯಕ್ತಪಡಿಸಿರುವ ಮನೋವೈದ್ಯರೋರ್ವರು ವೀಡಿಯೊವನ್ನು ತೆಗೆದುಹಾಕುವಂತೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ‘‘ದಯವಿಟ್ಟು ವೀಡಿಯೊವನ್ನು ತೆಗೆದುಹಾಕಿ, ನಾನೋರ್ವ ಮನೋವೈದ್ಯನಾಗಿದ್ದು, ಆತ್ಮಹತ್ಯೆಗಳನ್ನು ತಡೆಯುವ ಕ್ಷೇತ್ರದಲ್ಲಿ ಕೆಲಸವನ್ನು ಮಾಡುತ್ತಿದ್ದೇನೆ. ಈ ವೀಡಿಯೊ ಆತ್ಮಹತ್ಯೆಗಳ ಮಾಧ್ಯಮ ವರದಿಗಾರಿಕೆಗಾಗಿ ಎಲ್ಲ ಅಂತರರಾಷ್ಟ್ರೀತ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ. ಅದು ‘ಕಾಪಿಕ್ಯಾಟ್’ ಆತ್ಮಹತ್ಯೆಗಳಿಗೆ ಕಾರಣವಾಗಬಹುದು ಮತ್ತು ಅಟಲ್ ಸೇತುವನ್ನು ಆತ್ಮಹತ್ಯೆ ಪ್ರಯತ್ನಗಳಿಗೆ ‘ಹಾಟ್‌ಸ್ಪಾಟ್’ನ್ನಾಗಿ ಮಾಡಬಹುದು ’’ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಆದರೆ ತಜ್ಞರು ಇದನ್ನು ಒಪ್ಪುತ್ತಾರೆಯೇ?

ಯಾರದೇ ನೋವು ಮತ್ತು ಸಂಕಟಗಳಿಗೆ ಸಾಕ್ಷಿಯಾಗುವುದು ನೋಡುಗರಲ್ಲಿ, ವಿಶೇಷವಾಗಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವವರಲ್ಲಿ ದುಃಖ,ಆತಂಕ,ಭಯ ಮತ್ತು ಹತಾಶೆಯ ಭಾವನೆಗಳನ್ನು ಪ್ರಚೋದಿಸಬಹುದು ಎಂದು ಹೇಳಿದ ಕ್ಯಾಡ್‌ಬಮ್ಸ್ ಹಾಸ್ಪಿಟಲ್ಸ್‌ನ ಹಿರಿಯ ಸಮಾಲೋಚಕ ಮನಃಶಾಸ್ತ್ರಜ್ಞ ಡಾ.ಅರುಣ ಕುಮಾರ ಅವರು,ಇಂತಹ ವೀಡಿಯೊಗಳನ್ನು ಪದೇ ಪದೇ ನೋಡುವುದು ವೀಕ್ಷಕರಲ್ಲಿ ಆತ್ಮಹತ್ಯೆ ಸುಲಭ ಎಂಬ ಭಾವನೆಯನ್ನು ಮೂಡಿಸಬಹುದು ಮತ್ತು ಅವರು ಅದಕ್ಕೆ ಮುಂದಾಗುವ ಅಪಾಯವನ್ನು ಹುಟ್ಟು ಹಾಕಬಹುದು. ಈಗಾಗಲೇ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವ ವ್ಯಕ್ತಿಗಳಿಗೆ ಇಂತಹ ವೀಡಿಯೊಗಳು ಸ್ಫೂರ್ತಿಯನ್ನು ನೀಡಬಹುದು ಎಂದು ಹೇಳಿದರು.

ಮಾಧ್ಯಮಗಳಲ್ಲಿ ಆತ್ಮಹತ್ಯೆಯ ವರದಿಗಳು ಹಾಗೂ ‘ವರ್ದರ್ ಎಫೆಕ್ಟ್’ ಅಥವಾ ‘ಕಾಪಿಕ್ಯಾಟ್ ಸುಸೈಡ್’ ಎಂದು ಕರೆಯಲಾಗುವ ಆತ್ಮಹತ್ಯೆ ದರಗಳ ಹೆಚ್ಚಳದ ನಡುವಿನ ಸಂಬಂಧವನ್ನು ತೋರಿಸಿರುವ ಸಂಶೋಧನೆಯನ್ನು ಉಲ್ಲೇಖಿಸಿದ ಡಾ.ಕುಮಾರ,ಇದು ವಿಶೇಷವಾಗಿ ದುರ್ಬಲ ಮನಸ್ಸಿನ ವ್ಯಕ್ತಿಗಳಿಗೆ ಕಳವಳಕಾರಿಯಾಗಿದೆ ಎಂದರು.

ಇದೇ ಭಾವನೆಯನ್ನು ವ್ಯಕ್ತಪಡಿಸಿದ ಮೈಂಡ್‌ಟಾಕ್‌ನ ಹಿರಿಯ ಮನೋವೈದ್ಯೆ ನೇಹಾ ಪರಾಶರ,ಜಾಗ್ರತಿಯನ್ನು ಹೆಚ್ಚಿಸುವುದರ ಮತ್ತು ಸಂಭಾವ್ಯ ಹಾನಿಯನ್ನು ಕಡಿಮೆಗೊಳಿಸುವುದರ ನಡುವೆ ಸಮತೋಲನವನ್ನು ಸಾಧಿಸುವುದು ಬಹು ಮುಖ್ಯವಾಗಿದೆ. ನಾವು ಆತ್ಮಹತ್ಯೆಯ ಚಿಂತನೆಗಳೊಂದಿಗೆ ತೊಳಲಾಡುತ್ತಿರುವರಿಗೆ ಅಗತ್ಯ ಬೆಂಬಲವನ್ನು ನೀಡುವ ಮತ್ತು ಅವರಲ್ಲಿ ಮಾನಸಿಕ ಸ್ಥೈರ್ಯವನ್ನು ತುಂಬುವ ವಾತಾವರಣವನ್ನು ಸೃಷ್ಟಿಸಬಹುದು ಹಾಗೂ ಆತ್ಮಹತ್ಯೆಯ ಚಿಂತನೆಗಳನ್ನು ತಡೆಗಟ್ಟುವ ಮತ್ತು ಸಹಾನುಭೂತಿಯ ಸಂಸ್ಕೃತಿಯನ್ನು ಉತ್ತೇಜಿಸಬಹುದು ಎಂದು ಹೇಳಿದರು.

ನಿರ್ದಿಷ್ಟ ಸ್ಥಳಗಳಲ್ಲಿ ಆತ್ಮಹತ್ಯೆ ಪ್ರಯತ್ನಗಳನ್ನು ಪ್ರಚಾರ ಮಾಡುವುದು ದುರದೃಷ್ಟವಶಾತ್ ಆತ್ಮಹತ್ಯೆ ಹಾಟ್‌ಸ್ಪಾಟ್‌ಗಳನ್ನು ಸೃಷ್ಟಿಸುತ್ತದೆ. ಒಂದು ಸ್ಥಳವು ಆತ್ಮಹತ್ಯಾ ಪ್ರಯತ್ನಗಳಿಗಾಗಿ ಕುಖ್ಯಾತಿ ಪಡೆದಾಗ ಇಂತಹ ವಿದ್ಯಮಾನವು ಸಂಭವಿಸುತ್ತದೆ ಮತ್ತು ದುರ್ಬಲ ವ್ಯಕ್ತಿಗಳು ಅದೇ ಸ್ಥಳದತ್ತ ಸೆಳೆಯಲ್ಪಡುತ್ತಾರೆ ಎಂದು ಡಾ.ಕುಮಾರ ಹೇಳಿದರು.

ಸೇತುವೆಗಳು,ಪ್ರಪಾತಗಳು ಅಥವಾ ಇತರ ಸುಲಭವಾಗಿ ತಲುಪಬಲ್ಲ ಮತ್ತು ಹೆಚ್ಚು ಗೋಚರವಾಗುವ ಸ್ಥಳಗಳು ಅವು ಪಡೆಯುವ ಪ್ರಚಾರದಿಂದಾಗಿ ಆತ್ಮಹತ್ಯೆಯ ಬಗ್ಗೆ ಆಲೋಚಿಸುವವರಿಗೆ ಹೆಚ್ಚು ಆಕರ್ಷಕವಾಗಬಹುದು ಎಂದರು.

ಸಾರ್ವಜನಿಕ ದೃಷ್ಟಿಕೋನವನ್ನು ರೂಪಿಸುವಲ್ಲಿ ಮತ್ತು ನಡವಳಿಕೆಯ ಮೇಲೆ ಪ್ರಭಾವ ಬೀರುವಲ್ಲಿ ಮಾಧ್ಯಮ ಸಂಸ್ಥೆಗಳು ಮತ್ತು ಅಧಕಾರಿಗಳು ನಿರ್ಣಾಯಕ ಪಾತ್ರವನ್ನು ಹೊಂದಿರುತ್ತಾರೆ. ಆತ್ಮಹತ್ಯೆಗಳನ್ನು ತಡೆಗಟ್ಟುವ ಘಟನೆಗಳಿಗೆ ಸಂಬಂಧಿಸಿದಂತೆ ವರದಿಗಾರಿಕೆ ಅಥವಾ ವೀಡಿಯೊಗಳನ್ನು ಹಂಚಿಕೊಳ್ಳುವಾಗ ನೈತಿಕ ಮಾರ್ಗಸೂಚಿಗಳಿಗೆ ಬದ್ಧವಾಗಿರುವುದು ಅತಿ ಮುಖ್ಯವಾಗಿದೆ. ಹಾನಿಯನ್ನು ಕಡಿಮೆ ಮಾಡುವುದು ಮತ್ತು ಕಾಪಿಕ್ಯಾಟ್ ನಡವಳಿಕೆಯನ್ನು ತಡೆಗಟ್ಟುವುದು ಪ್ರಾಥಮಿಕ ಗುರಿಯಾಗಿರಬೇಕು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News