ಮಲ್ಲಿಕಾರ್ಜುನ ಖರ್ಗೆ ಆಗ್ತಾರಾ ಪ್ರಧಾನಿ ಅಭ್ಯರ್ಥಿ ?

Update: 2023-12-22 11:09 GMT
Editor : Thouheed | Byline : ಆರ್. ಜೀವಿ

ಬಿಜೆಪಿಯನ್ನು, ಅದಕ್ಕಿಂತಲೂ ಮೋದಿಯನ್ನು ಒಟ್ಟಾಗಿ ಎದುರಿಸುವ ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾ​ದ ನಾಲ್ಕನೇ ಸಭೆ ದೆಹಲಿಯಲ್ಲಿ ನಡೆದಿದೆ. ​ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಇಂಡಿಯಾ ಮೈತ್ರಿಕೂಟ ಮುಂದುವರಿಯುವ ಬಗ್ಗೆಯೇ ಪ್ರಶ್ನೆಗಳು ಎದ್ದಿದ್ದವು. ಆದರೆ ಮಂಗಳವಾರದ ಸಭೆ ನಡೆದಿರುವ ರೀತಿ ಮುಖ್ಯವಾಗಿ ಕಾಂಗ್ರೆಸ್ ಪಾಲಿಗೆ ಆ ಆತಂಕವನ್ನು ದೂರ ಮಾಡಿದಂತಿದೆ. ಸಂಸದರ ಅಮಾನತು ಕ್ರಮವನ್ನು ಖಂಡಿಸುವ ಮತ್ತು ಅದರ ವಿರುದ್ಧ ಪ್ರತಿಭಟನೆ ನಡೆಸುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸ್ಪಷ್ಟ ಒಗ್ಗಟ್ಟಿನ ಸಂದೇಶವನ್ನು ನೀಡಿರುವುದು ಈ ನಾಲ್ಕನೇ ಸಭೆಯಲ್ಲಿನ ಮಹತ್ವದ ಬೆಳವಣಿಗೆಯಾಗಿದೆ.

ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸುವ ಮೊದಲಿನ ಹಂತವಾಗಿ, ಸರ್ಕಾರದ ಅಪ್ರಜಾಸತ್ತಾತ್ಮಕ ನಡವಳಿಕೆಯ ವಿರುದ್ಧ ಒಟ್ಟಾಗಿ ನಿಲ್ಲುವ ಪ್ರತಿಪಕ್ಷಗಳ ದೃಢತೆ ಈ ಮೂಲಕ ವ್ಯಕ್ತವಾದಂತಾಗಿದೆ. ಒಕ್ಕೂಟದ ಪ್ರಧಾನಿ ಅಭ್ಯರ್ಥಿ, ಸೀಟು ಹಂಚಿಕೆ ಮೊದಲಾದ ವಿಚಾರಗಳು ಪ್ರಮುಖವಾಗಿ ಚರ್ಚೆಯಾಗಿವೆ. ಹೆಚ್ಚು ಸಮಯವಿಲ್ಲವೆಂಬ ಸತ್ಯದ ಬಗ್ಗೆಯೂ ಎಚ್ಚರವಾಗಿರುವ ಪ್ರತಿಪಕ್ಷಗಳು ಬಹುಬೇಗ ಎಲ್ಲದರ ಕುರಿತು ಸ್ಪಷ್ಟ ನಿಲುವು ತಳೆಯುವ ಅಗತ್ಯವನ್ನೂ ಮನಗಂಡಿವೆ ಎಂಬುದು ದೆಹಲಿ ಸಭೆಯಿಂದ ಗೊತ್ತಾಗಿದೆ.

ಆದರೆ, ಇಂಡಿಯಾ ಒಕ್ಕೂಟದ ಎದುರಿನ ದಾರಿ ಸುಲಭವಾಗಿದೆಯೆ?. ಮೈತ್ರಿಕೂಟದ ಪ್ರಮುಖ ಪಕ್ಷಗಳ ನಡುವೆ ಸಾಮರಸ್ಯ ಮೂಡುವ ಹಾದಿ ಯಾವುದು?. ಅದು ಯಾವುದೇ ತೀರ್ಮಾನ ತೆಗೆದುಕೊಂಡರೂ ಅದನ್ನು ಜಾರಿಗೊಳಿಸುವಲ್ಲಿ ಎದುರಾಗಬಹುದಾದ ತೊಡಕುಗಳು ಮತ್ತು ಸವಾಲುಗಳು ಏನೇನು?.

ಅದರೆದುರಿನ ಒಟ್ಟು ಅವಕಾಶಗಳು, ಅನುಕೂಲಗಳು, ಅನನುಕೂಲತೆಗಳು ಏನು?. ಒಕ್ಕೂಟದೊಳಗಿನ ಪಕ್ಷಗಳಲ್ಲೇ ಪರಸ್ಪರ ಇರುವ ಭಾವನೆಗಳು ಮತ್ತು ಅವನ್ನು ಮೀರಿ ಅವೆಲ್ಲವೂ ಒಂದು ಸ್ಪಷ್ಟ ನಿಲುವಿನೊಂದಿಗೆ ಒಗ್ಗಟ್ಟಾಗಬೇಕಾದ ಅನಿವಾರ್ಯತೆಯನ್ನು ಅವು ಹೇಗೆ ನಿಭಾಯಿಸಲಿವೆ?.

ಇಂಥ ಹಲವು ಪ್ರಶ್ನೆಗಳು ಇಂಡಿಯಾ ಮೈತ್ರಿಕೂಟದ ವಿಚಾರವಾಗಿ ಏಳುತ್ತವೆ.ಇದೆಲ್ಲದರ ಸುತ್ತ ಚರ್ಚಿಸುವುದಕ್ಕೆ ಮೊದಲು ದೆಹಲಿ ಸಭೆಯಲ್ಲಿ ಏನೇನಾಯಿತು ಎಂಬುದನ್ನು ಗಮನಿಸೋಣ.

ಇದು ಇಂಡಿಯಾ ಒಕ್ಕೂಟದ ನಾಲ್ಕನೆ ಸಭೆಯಾಗಿತ್ತು. ಇದಕ್ಕೂ ಮೊದಲು, ಜೂನ್ 23ರಂದು ಪಾಟ್ನಾದಲ್ಲಿ ಮೊದಲ ಸಭೆ ನಡೆದಿತ್ತು.

ಜುಲೈ 17-18ರಂದು ಬೆಂಗಳೂರಿನಲ್ಲಿ 2ನೇ ಸಭೆ​. ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ಮುಂಬೈನಲ್ಲಿ ಮೂರನೇ ಸಭೆ ನಡೆದಿತ್ತು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಸ್ಪರ್ಧಿಸಲು ನಿರ್ಣಯಗಳನ್ನು ಅಂಗೀಕರಿಸಲಾಗಿತ್ತು.

ದೆಹಲಿ ಸಭೆ ಮಹತ್ವ ಪಡೆಯಲು ಇದ್ದ ಪ್ರಮುಖ ಕಾರಣವೆಂದರೆ, ಅದು ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಹಿನ್ನೆಡೆಯಾದ ನಂತರದ ಸಭೆ ಎನ್ನುವುದಾಗಿತ್ತು. ಅಧಿಕಾರದಲ್ಲಿದ್ದ ಎರಡು ರಾಜ್ಯಗಳನ್ನು ಕಳೆದುಕೊಂಡಿದ್ದಲ್ಲದೆ, ಮಧ್ಯಪ್ರದೇಶದಲ್ಲೂ ಹೀನಾಯ ಸೋಲು ಕಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ಎದುರು ಒಂದು ಬಗೆಯ ಅಳುಕಿನ ಭಾವನೆ ಇತ್ತು ಎಂಬುದು ನಿಜ.

ಇದೆಲ್ಲದರ ಹೊರತಾಗಿಯೂ ಒಕ್ಕೂಟದ ಎಲ್ಲ ಪಕ್ಷಗಳ ನಾಯಕರೂ ಪಾಲ್ಗೊಳ್ಳುವುದರೊಂದಿಗೆ, ಹಲವು ಮಹತ್ವದ ನಿಲುವುಗಳನ್ನು ರೂಪಿಸುವ ದಿಸೆಯಲ್ಲಿ ಸಭೆ ಮಹತ್ವದ ಪಾತ್ರ ವಹಿಸಿದೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಪಿಪಿ ನಾಯಕಿ ಸೋನಿಯಾ ಗಾಂಧಿ, ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಸಿಎಂ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಲಾಲು ಪ್ರಸಾದ್ ಯಾದವ್, ಶರದ್ ಪವಾರ್, ಎಂ.ಕೆ. ಸ್ಟಾಲಿನ್, ಸೀತಾರಾಮ್ ಯೆಚೂರಿ, ಡಿ.ರಾಜಾ, ಉದ್ಧವ್ ಠಾಕ್ರೆ ಸೇರಿದಂತೆ ಎಲ್ಲ ಹಿರಿಯ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು.

ನಾನಲ್ಲ, ನಾವು ಎಂಬುದು ಸಭೆಯ ಘೋಷವಾಕ್ಯವಾಗಿತ್ತು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ಅಂಶಗಳೆಂದರೆ,

1.ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮಣಿಸಲು ಜಂಟಿ ಪ್ರಚಾರ, ಸೀಟು ಹಂಚಿಕೆ ಮತ್ತು ಕಾರ್ಯತಂತ್ರ ಪುನರ್ ರೂಪಿಸುವ ನಿಟ್ಟಿನಲ್ಲಿ ಚರ್ಚೆ.

2.ಸಂಸತ್ತಿನಿಂದ ವಿರೋಧ ಪಕ್ಷದ ಸಂಸದರನ್ನು ಅಮಾನತುಗೊಳಿಸಿದ ಬಗ್ಗೆ ಚರ್ಚಿಸಲಾಯಿತು ಮತ್ತು ಅದರ ವಿರುದ್ಧ ದೇಶಾದ್ಯಂತ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಯಿತು.

ಲೋಕಸಭೆ ಮತ್ತು ರಾಜ್ಯಸಭೆಯಿಂದ ದಾಖಲೆ ಸಂಖ್ಯೆಯ 141 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಡಿಸೆಂಬರ್ 22ರಂದು ಮೈತ್ರಿಕೂಟದ ಸದಸ್ಯ ಪಕ್ಷಗಳು ಪ್ರತಿಭಟನೆ ನಡೆಸಲಿವೆ ಎಂದು ಖರ್ಗೆ ತಿಳಿಸಿದ್ದಾರೆ.

3.ಸೀಟು ಹಂಚಿಕೆ ವಿಚಾರವವನ್ನು ಡಿಸೆಂಬರ್ 31ರೊಳಗಾಗಿ ಅಂತಿಮಗೊಳಿಸುವ ಬಗ್ಗೆ ಚರ್ಚೆಯಾಗಿರುವುದಾಗಿ ತಿಳಿದುಬಂದಿದೆ.

ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ರೂಪಿಸಲು ಸಾಧ್ಯವಾದಷ್ಟು ಬೇಗ ಸೀಟು ಹಂಚಿಕೆ ಸೂತ್ರ ರೂಪಿಸುವುದು ಅಗತ್ಯ ಎಂಬ ಅಭಿಪ್ರಾಯವನ್ನು ಬಹುತೇಕ ಪ್ರತಿಯೊಬ್ಬ ನಾಯಕರು ಒತ್ತಿ ಹೇಳಿದರು.

ಸೀಟು ಹಂಚಿಕೆ ಕುರಿತು ಮಾತನಾಡಿರುವ ಖರ್ಗೆ, ರಾಜ್ಯಗಳಲ್ಲಿನ ನಾಯಕರು ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ಎಲ್ಲಿಯಾದರೂ ಯಾವುದೇ ಸಮಸ್ಯೆ ಇದ್ದರೆ, ಮೈತ್ರಿಕೂಟದ ನಾಯಕರು ಅದನ್ನು ಬಗೆಹರಿಸಲಿದ್ದಾರೆ ಎಂದಿದ್ದಾರೆ.

ಬಿಜೆಪಿಯೊಂದಿಗೆ ಕಾಂಗ್ರೆಸ್ ನೇರ ಸ್ಪರ್ಧೆ ಎದುರಿಸುವ 280ರಿಂದ 300 ಸ್ಥಾನಗಳ ಹೊರತಾಗಿ ಇತರ ಸ್ಥಾನಗಳನ್ನು ಉಳಿದ ಪಕ್ಷಗಳಿಗೆ ಬಿಟ್ಟುಕೊಡುವಂತೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ ಎನ್ನಲಾಗಿದೆ.

4.ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಸಾಮೂಹಿಕ ಸಂಪರ್ಕ ಕಾರ್ಯಕ್ರಮಗಳು ಮತ್ತು ಜಂಟಿ ರ್ಯಾಲಿಗಳನ್ನು ಆಯೋಜಿಸುವುದಕ್ಕೂ ಎಲ್ಲಾ ನಾಯಕರು ಒಪ್ಪಿಗೆ ನೀಡಿದ್ದಾರೆ ಎಂದು ಆರ್ಜೆಡಿ ನಾಯಕ ಮನೋಜ್ ಝಾ ಹೇಳಿದ್ದಾರೆ.

ಬರುವ ಜನವರಿ 30ರಿಂದ ಜಂಟಿ ಪ್ರಚಾರ ಪ್ರಾರಂಭಿಸುವ ಆಲೋಚನೆ ಇದೆ, ಇದರಿಂದಾಗಿ ಮೈತ್ರಿಕೂಟದ ಎಲ್ಲಾ ಪಕ್ಷಗಳು ರಾಜಕೀಯ ಧೋರಣೆಯ ವಿಚಾರದಲ್ಲಿ ಬೇಗ ಒಮ್ಮತಕ್ಕೆ ಬರಲು ಸಾಧ್ಯವಾಗುತ್ತದೆ ಎಂದು ಖರ್ಗೆ ಹೇಳಿದ್ದಾರೆ.

5.ಅತಿ ಹಿಂದುಳಿದವರು, ಹಿಂದುಳಿದವರು, ದಲಿತರು, ಆದಿವಾಸಿಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿಯನ್ನು ಎದುರಿಸುವುದು ಮೈತ್ರಿಕೂಟದ ರಣತಂತ್ರವಾಗಿದೆ ಎಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹೇಳಿದ್ದಾರೆ.

ಅದರೊಂದಿಗೆ, ಇಂಡಿಯಾ ಒಕ್ಕೂಟದ ಪ್ರಮುಖ ಆದ್ಯತೆಗಳ ನಡುವೆ ಜಾತಿ ಜನಗಣತಿ ವಿಚಾರವೂ ಅಗ್ರ ಸ್ಥಾನದಲ್ಲಿದೆ ಎಂಬುದು ಸ್ಪಷ್ಟವಾಗಿದೆ.

6.ದೇಶಾದ್ಯಂತ 8ರಿಂದ 10 ಸಭೆಗಳನ್ನು ನಡೆಸಲು ನಿರ್ಧರಿಸಿದ್ದೇವೆ. ಮೈತ್ರಿ ಪಕ್ಷಗಳು ಒಂದೇ ವೇದಿಕೆಯಲ್ಲಿ ಒಗ್ಗೂಡದಿದ್ದರೆ ಜನರಿಗೆ ಇದರ ಬಗ್ಗೆ ತಿಳಿಯುವುದಿಲ್ಲ ಎಂಬ ವಿಚಾರವನ್ನೂ ಖರ್ಗೆ ಹೇಳಿದ್ದಾರೆ.

ಈ ನಡುವೆಯೇ ಒಂದು ಮಹತ್ವದ ಬೆಳವಣಿಗೆಯಲ್ಲಿ ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಮೈತ್ರಿ ಚರ್ಚೆಗೆಂದೇ ಸಮಿತಿಯೊಂದನ್ನು ರಚಿಸಿದೆ. ಐವರು ಸದಸ್ಯರ ಈ ಸಮಿತಿಗೆ ಕಾಂಗ್ರೆಸ್ ಹಿರಿಯ ನಾಯಕ ಮುಕುಲ್ ವಾಸ್ನಿಕ್ ಸಂಚಾಲಕರಾಗಿದ್ದಾರೆ. ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ಗಢ ಮಾಜಿ ಸಿಎಂ ಭೂಪೇಶ್ ಬಘೇ​ಲ್ , ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ ಮತ್ತು ಹಿರಿಯ ನಾಯಕ ಮೋಹನ್ ಪ್ರಕಾಶ್ ಸಮಿತಿಯಲ್ಲಿದ್ದಾರೆ.

ದೆಹಲಿ ಸಭೆಯ ಹೊತ್ತಿನ ಮತ್ತೊಂದು ಬೆಳವಣಿಗೆಯೆಂದರೆ, ಇಂಡಿಯಾ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯ ವಿಚಾರ ಪ್ರಸ್ತಾಪವಾದದ್ದು.

ಮಲ್ಲಿಕಾರ್ಜುನ ಖರ್ಗೆಯವರು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯಾಗಲಿ ಎಂಬ ಪ್ರಸ್ತಾಪವನ್ನು ಮಮತಾ ಬ್ಯಾನರ್ಜಿ ಇಟ್ಟರು ಎನ್ನಲಾಗಿದೆ. ಅಚ್ಚರಿಯೆಂದರೆ ಈ ಪ್ರಸ್ತಾಪವನ್ನು ಅರವಿಂದ್ ಕೇಜ್ರಿವಾಲ್ ಕೂಡ ಬೆಂಬಲಿಸಿದರು ಎಂಬುದು.

ಆದರೆ ಮಮತಾ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಖರ್ಗೆ, ಗೆಲ್ಲುವುದು ಮುಖ್ಯ. ಮೊದಲು ಗೆಲ್ಲೋಣ, ಆಮೇಲೆ ನೋಡೋಣ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ. ನಾಯಕನ ಹೆಸರನ್ನು ನಿರ್ಧರಿಸುವುದೇನಿದ್ದರೂ ಚುನಾವಣೆಯ ನಂತರ. ಮೈತ್ರಿಕೂಟದ ಮೊದಲ ಗಮನ ಬಿಜೆಪಿಯನ್ನು ಸೋಲಿಸುವುದು. ಲೋಕಸಭೆ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಗೆಲ್ಲುವುದು ಎಂದಿದ್ದಾರೆ.

ದೇಶದಲ್ಲಿ ಪ್ರಜಾಪ್ರಭುತ್ವನ್ನು ಉಳಿಸಲು ನಾವು ಒಟ್ಟಾಗಿ ಹೋರಾಡಬೇಕು ಎಂಬ ತಿಳುವಳಿಕೆಯೊಂದಿಗೆ ಎಲ್ಲಾ ಪಕ್ಷಗಳು ಒಗ್ಗೂಡಿವೆ. ನಾವೆಲ್ಲರೂ ಹೋರಾಟಕ್ಕೆ ಸಿದ್ಧರಿದ್ದೇವೆ ಎಂದು ಖರ್ಗೆ ಹೇಳಿದರು. 2024ರ ಲೋಕಸಭೆ ಚುನಾವಣೆ ಕೇವಲ ಮತ್ತೊಂದು ಚುನಾವಣಾ ಸ್ಪರ್ಧೆಯಲ್ಲ. ಅದು ಸೈದ್ಧಾಂತಿಕ ಕಾರಣಗಳಿಗಾಗಿ ಮುಖ್ಯವಾಗಿದೆ ಎಂದೂ ಖರ್ಗೆ ಹೇಳಿದ್ದಾರೆ.

ಬಹುಮತ ಪಡೆಯುವುದು ನಮ್ಮ ಗುರಿ. ಬಹುಮತವೇ ಸಿಗದಿದ್ದರೆ ಈಗ ಪ್ರಧಾನಿ ಅಭ್ಯರ್ಥಿ ಬಗ್ಗೆ ಚರ್ಚಿಸಿ ಏನು ಉಪಯೋಗ ಎಂಬ ಪ್ರಶ್ನೆಯನ್ನೂ ಖರ್ಗೆ ಎತ್ತಿದ್ಧಾರೆ.

ಇದು ಇಂಡಿಯಾ ಒಕ್ಕೂಟದ ಉದ್ದೇಶವೇನು ಎಂಬುದರತ್ತ ಫೋಕಸ್ ಮಾಡುವ ನಿಟ್ಟಿನ ಮಹತ್ವದ ನಿಲುವಾಗಿದೆ ಎಂಬುದಂತೂ ನಿಜ.

ಇಲ್ಲಿ ಒಂದು ಕುತೂಹಲಕಾರಿ ಅಂಶವನ್ನು ಗಮನಿಸಬೇಕು. ದೆಹಲಿ ಸಭೆಗೆ ಒಂದು ದಿನ ಮೊದಲಷ್ಟೇ ಎರಡು ವಿಚಾರಗಳು ಗಮನ ಸೆಳೆದಿದ್ದವು. ಮೊದಲನೆಯದಾಗಿ, ಚುನಾವಣೆ ಮುಗಿಯುವವರೆಗೂ ಇಂಡಿಯಾ ಮೈತ್ರಿಕೂಟ ತನ್ನ ಪ್ರಧಾನಿ ಅಭ್ಯರ್ಥಿಯನ್ನು ಘೋಷಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.

ಆದರೆ ಅವರೇ ಆ ಸ್ಥಾನಕ್ಕೆ ಖರ್ಗೆ ಹೆಸರು ಪ್ರಸ್ತಾಪಿಸಿ ಅಚ್ಚರಿ ಮೂಡಿಸಿದರು. ಇದೇ ಮಮತಾ ಅವರ ಟಿಎಂಸಿ, ದೆಹಲಿ ಸಭೆಗೆ ಒಂದು ದಿನ ಮೊದಲು ಕಾಂಗ್ರೆಸ್ ವಿರುದ್ಧ ​ಹರಿ ಹಾಯ್ದಿತ್ತು. ಕಾಂಗ್ರೆಸ್ ತನ್ನ ಜಮೀನ್ದಾರಿ ಮನಸ್ಥಿತಿ ಬಿಟ್ಟು, ಮಮತಾ ಬ್ಯಾನರ್ಜಿಯಂತಹ ಹಿರಿಯ ನಾಯಕರನ್ನು ಮೈತ್ರಿಕೂಟದ ಮುಖವಾಗಿ ಪ್ರತಿಬಿಂಬಿಸಲು ಮುಂದಾಗಬೇಕು ಎಂದು ಟಿಎಂಸಿ ಹೇಳಿತ್ತು.

ಕಾಂಗ್ರೆಸ್ ಪದೇ ಪದೇ ಬಿಜೆಪಿಯನ್ನು ಸೋಲಿಸಲು ವಿಫಲವಾಗಿದೆ. ಮತ್ತೊಂದೆಡೆ, ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಬಿಜೆಪಿಯನ್ನು ಹತ್ತಾರು ಬಾರಿ ಸೋಲಿಸಿದ ದಾಖಲೆ ಬರೆದಿದೆ ಎಂದು ಟಿಎಂಸಿ ಹೇಳಿತ್ತು. ಟಿಎಂಸಿಯ ಈ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಪಶ್ಚಿಮ ಬಂಗಾಳ ಕಾಂಗ್ರೆಸ್ ಘಟಕ ವಕ್ತಾರೆ ಸೌಮ್ಯಾ ರಾಯ್ ಅವರು, ಬಿಜೆಪಿ ವಿರುದ್ಧ ಹೇಗೆ ಹೋರಾಡಬೇಕು ಎಂಬುದರ ಕುರಿತು ನಾವು ಟಿಎಂಸಿಯಿಂದ ಪಾಠ ಕಲಿಯುವ ಅಗತ್ಯ ಇಲ್ಲ. ಕಾಂಗ್ರೆಸ್ ನಿರಂತರವಾಗಿ ಹೋರಾಡುತ್ತಿದೆ. ಆದರೆ ಟಿಎಂಸಿ ಹಲವಾರು ಸಂದರ್ಭಗಳಲ್ಲಿ ಕೇಸರಿ ಪಾಳಯದೊಂದಿಗೆ ರಾಜಿ ಮಾಡಿಕೊಂಡಿದೆ ಎಂದು ​ತಿರುಗೇಟು ನೀಡಿದ್ದರು.

ದೆಹಲಿಯಲ್ಲಿ ಒಂದು ದಿನ ಮೊದಲೇ ಇದ್ದ ಮಮತಾ ಅವರು, ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ ಘೋಷಣೆ ಏನಿದ್ದರೂ ಚುನಾವಣೆಯ ನಂತರ ಎಂದಿದ್ದ ಹೊತ್ತಲ್ಲೇ, ಕೋಲ್ಕತ್ತಾದಲ್ಲಿ ಅವರ ಪಕ್ಷ ಹೀಗೆ ಕಾಂಗ್ರೆಸ್ ವಿರುದ್ಧ ಹರಿಹಾಯುತ್ತ, ಮಮತಾ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿಸುವಂತೆ ಒತ್ತಾಯಿಸಿತ್ತು.

ಬಿಜೆಪಿ ಎದುರು ಒಗ್ಗಟ್ಟಾಗಲು ಬೇಕಾದ ಪೂರ್ತಿ ಸಂಭಾವಿತ ಧೋರಣೆ ಇಂಡಿಯಾ ಮೈತ್ರಿಕೂಟದೊಳಗೆ ಇಲ್ಲವೆಂಬುದಕ್ಕೆ ಇದೊಂದು ಉದಾಹರಣೆ ಮಾತ್ರ.

ಇಂಥ ಅಪಸ್ವರಗಳು ಹಲವಿವೆ. ಇನ್ನೊಂದು ಗಮನಿಸಬೇಕಿರುವ ಅಂಶವೆಂದರೆ, ಇತ್ತ ದೆಹಲಿ ಸಭೆ ನಿಗದಿಯಾಗಿದ್ದಾಗಲೇ, ಅತ್ತ ಪಾಟ್ನಾದಲ್ಲಿ ನಿತೀಶ್ ಅವರ ಪಾತ್ರ ಪ್ರಮುಖ ಎಂದು ಬಿಂಬಿಸುವ ಪೋಸ್ಟರ್ಗಳು ರಾರಾಜಿಸುತ್ತಿದ್ದವು.

​"ಅಗರ್ ಸಚ್ ಮೆ ಜೀತ್ ಚಾಹಿಯೆ ತೊ ಫಿರ್ ಏಕ್ ನಿಶ್ಚಯ್​, ಔರ್ ಏಕ್ ನಿತೀಶ್ ಚಾಹಿಯೆ​" ಎಂಬ ಘೋಷಣೆಗಳಿದ್ದ ಪೋಸ್ಟರ್ಗಳು ಅವಾಗಿದ್ದವು.

ತನಗಾಗಿ ಏನೂ ಬೇಕಿಲ್ಲ ಎಂದು ಪದೇ ಪದೇ ನಿತೀಶ್ ಹೇಳುತ್ತಿರುವಾಗಲೂ ಹೀಗೆ ಪೋಸ್ಟರ್ಗಳು ರಾರಾಜಿಸತೊಡಗಿದ್ದು ಏಕೆ ಎಂಬ ಪ್ರಶ್ನೆಯೇಳದೇ ಇರುವುದಿಲ್ಲ. ನಾಯಕತ್ವಕ್ಕಾಗಿ, ತಮ್ಮ ಪಾತ್ರಕ್ಕಾಗಿ ಒಳಗೊಳಗೇ ಆಸೆಪಡುತ್ತಿರುವ ನಾಯಕರಿಗೆ ಖರ್ಗೆ ಮಾತುಗಳು ಮುಖ್ಯವಾಗಬೇಕು.

ಮೊದಲು ಗೆಲ್ಲಬೇಕು, ಗೆಲ್ಲಲಾಗದೇ ಇದ್ದರೆ ಮುಖ ತೋರಿಸಿ ಮಾಡುವುದೇನು ಎಂಬುದು ಮೈತ್ರಿಕೂಟದ ಎಲ್ಲ ಪಕ್ಷಗಳ ನಾಯಕರಿಗೂ ಮನವರಿಕೆಯಾಗುವುದು ಅಗತ್ಯವಿದೆ.

ಆ ಹಂತವನ್ನು ಅವು ಗೆದ್ದವು ಎಂದಾದರೆ, ಬಿಜೆಪಿಯೆದುರಿನ ಒಗ್ಗಟ್ಟಿನ ಗುರಿ ಅರ್ಧದಷ್ಟು ಸಾಧಿಸಿದಂತಾಗಿಬಿಡುತ್ತದೆ. ಮುಂದಿನದು ಚುನಾವಣಾ ಕಣದಲ್ಲಿ ಗೆಲ್ಲುವ ರಣತಂತ್ರವನ್ನು ರೂಪಿಸುವ ಕೆಲಸವಷ್ಟೆ. ಆದರೆ, ಬಿಜೆಪಿಯೆದುರು ತೋರಿಸಬೇಕಾದ ತಾಕತ್ತನ್ನು ತಮ್ಮತಮ್ಮಲ್ಲೇ ಸ್ಪರ್ಧೆಗೆ ಮುಂದಾಗುವುದರಲ್ಲಿ ತೊಡಗಿಸಿದರೆ ಜನರು ಮತ್ತೆಂದೂ ಇಂಥ ಮೈತ್ರಿಯ ವಿಚಾರವನ್ನು ನಂಬದಂಥ ಸ್ಥಿತಿ ತಲೆದೋರುತ್ತದೆ.

ಅಂಥ ಅಪಾಯ ಬರದಂತೆ ಎಚ್ಚರ ವಹಿಸಬೇಕಿದೆ ಮತ್ತು ಆ ಮೂಲಕ ​ಪ್ರಬಲ ಬಿಜೆಪಿ ವಿರುದ್ಧ ಗೆಲುವನ್ನು ನಿಶ್ಚಯಿಸುವ ಸ್ಪಷ್ಟ ದಾರಿಯನ್ನು ಇಂಡಿಯಾ ಒಕ್ಕೂಟ ಕಂಡುಕೊಳ್ಳಬೇಕಿದೆ. ಈಗಾಗಲೇ ಪ್ರತಿಪಕ್ಷಗಳನ್ನು ಇಲ್ಲವಾಗಿಸುವ, ದಮನಿಸುವ, ಅಮಾನತಿನಲ್ಲಿಡುವ ಮೋದಿ ಸರ್ಕಾರದ ಧೋರಣೆ ಬಗ್ಗೆ ಪ್ರತಿಪಕ್ಷಗಳಿಗೆ ತಿಳಿದೇ ಇದೆ. ಅದನ್ನು ವಿರೋಧಿಸುವ ತನ್ನ ನಡೆಯನ್ನೇ ಚುನಾವಣಾ ಕಣದವರೆಗೂ ಇದೇ ಒಮ್ಮತದಿಂದ ಇಂಡಿಯಾ ಒಕ್ಕೂಟ ತೆಗೆದುಕೊಂಡು ಹೋಗಬೇಕಿರುವುದು ​ಅದರ ದೊಡ್ಡ ಅಗತ್ಯವಾಗಿದೆ ಮತ್ತು ಅದೇ ಅದರ ಸವಾಲು ಕೂಡ ಆಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಆರ್. ಜೀವಿ

contributor

Similar News