ರಾಜಕೀಯ ಅಖಾಡವಾಗಲಿದೆಯೇ ರಾಜಭವನ?
ನಾಯಕತ್ವದ ಶೂನ್ಯತೆ ಅಥವಾ ಗೊಂದಲಗಳು ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ದುರ್ಬಲಗೊಳಿಸಿವೆ. ಇದನ್ನು ಪರಿಹರಿಸಬೇಕಿದ್ದ ಪಕ್ಷದ ಹೈಕಮಾಂಡ್ ಆಗಲಿ ಅಥವಾ ಸಂಘ ಪರಿವಾರವಾಗಲಿ, ಅನುಸರಿಸುತ್ತಿರುವ ಉದ್ದೇಶಪೂರ್ವಕ ವಿಳಂಬ ನೀತಿ ಅಚ್ಚರಿಗೆ ಕಾರಣವಾಗದಿರದು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ಬಿಜೆಪಿಯನ್ನು ಪ್ರಸ್ತುತತೆಯಲ್ಲಿಡಲು ಇರುವ ಏಕಮಾತ್ರ ಅವಕಾಶವೆಂದರೆ ಅದು, ರಾಜಭವನ! ಈ ಆಯ್ಕೆಯನ್ನು ಬಿಜೆಪಿ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಕುರುಹುಗಳು ಢಾಳಾಗಿ ಗೋಚರಿಸುತ್ತಿವೆ.
ಚುನಾವಣಾ ರಾಜಕಾರಣದಲ್ಲಿ ಕರ್ನಾಟಕದ ಮಟ್ಟಿಗೆ ಅಕ್ಷರಶಃ ಹೈರಾಣಾಗಿರುವ ಬಿಜೆಪಿ, ನೂತನ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಕೊಳ್ಳಲಾಗದಷ್ಟು ಆಂತರಿಕ ಬೇಗುದಿಯಿಂದ ತತ್ತರಿಸುತ್ತಿದೆ. ಕೇಡರ್ ಮಟ್ಟದಲ್ಲಿ ಇವತ್ತಿಗೂ ಬಹುವಿಸ್ತಾರದ ಕಾರ್ಯಕರ್ತರ ಜಾಲ ಹೊಂದಿದ್ದರೂ, ನಾಯಕತ್ವದ ಶೂನ್ಯತೆ ಅಥವಾ ಗೊಂದಲಗಳು ಒಂದು ರಾಜಕೀಯ ಪಕ್ಷವಾಗಿ ಬಿಜೆಪಿಯನ್ನು ದುರ್ಬಲಗೊಳಿಸಿವೆ. ಇದನ್ನು ಪರಿಹರಿಸಬೇಕಿದ್ದ ಪಕ್ಷದ ಹೈಕಮಾಂಡ್ ಆಗಲಿ ಅಥವಾ ಸಂಘ ಪರಿವಾರವಾಗಲಿ, ಅನುಸರಿಸುತ್ತಿರುವ ಉದ್ದೇಶಪೂರ್ವಕ ವಿಳಂಬ ನೀತಿ ಅಚ್ಚರಿಗೆ ಕಾರಣವಾಗದಿರದು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ರಾಜಕೀಯವಾಗಿ ಬಿಜೆಪಿಯನ್ನು ಪ್ರಸ್ತುತತೆಯಲ್ಲಿಡಲು ಇರುವ ಏಕಮಾತ್ರ ಅವಕಾಶವೆಂದರೆ ಅದು, ರಾಜಭವನ!
ಈ ಆಯ್ಕೆಯನ್ನು ಬಿಜೆಪಿ ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುವ ಕುರುಹುಗಳು ಢಾಳಾಗಿ ಗೋಚರಿಸುತ್ತಿವೆ. ಕೃಷಿ ಸಚಿವ ಚಲುವರಾಯಸ್ವಾಮಿಯವರ ಮೇಲೆ ಭ್ರಷ್ಟಾಚಾರದ ಆರೋಪವನ್ನು ಮಾಡಿದ್ದಾರೆನ್ನಲಾದ ಇಲಾಖಾ ಅಧಿಕಾರಿಗಳ ವಿವಾದಾಸ್ಪದ ಸಹಿ ಇರುವ ಪತ್ರ ರಾಜಭವನವನ್ನು ತಲುಪಿದ್ದಾಗಲಿ; ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಾಮಗಾರಿಗಳ ಹಣ ಬಿಡುಗಡೆ ಮಾಡಲು ಶೇ. ೧೫ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸುತ್ತಿರುವ ಗುತ್ತಿಗೆದಾರರ ಒಂದು ತಂಡ ರಾಜ್ಯಪಾಲರನ್ನು ಭೇಟಿಯಾಗಿದ್ದಾಗಲಿ; ಈ ಆರೋಪದ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಬಿಜೆಪಿ ನಾಯಕರು, ಇನ್ನೊಂದೆರಡು ದಿನಗಳಲ್ಲಿ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ಹೇಳಿರುವುದಾಗಲಿ..... ಇವೆಲ್ಲವುಗಳಲ್ಲಿ ರಾಜಭವನ ‘ಕಾಮನ್ ಫ್ಯಾಕ್ಟರ್’. ಈ ಹಿಂದೆ ಬಿಜೆಪಿ ಸರಕಾರದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಕೆ.ಎಸ್.ಈಶ್ವರಪ್ಪನವರು ‘‘ನನ್ನ ಇಲಾಖೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅನಗತ್ಯವಾಗಿ ಹಸ್ತಕ್ಷೇಪ ಮಾಡುತ್ತಿದ್ದಾರೆ’’ ಎಂದು ಆರೋಪಿಸಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಂತಹ ಗಂಭೀರ ಪ್ರಕರಣದಲ್ಲಿ ತಟಸ್ಥ ನೀತಿ ಅನುಸರಿಸಿದ್ದ ರಾಜಭವನ, ಈಗ ಕಾಂಗ್ರೆಸ್ ಸರಕಾರದ ಮೇಲೆ ಮಾಡಲಾಗುತ್ತಿರುವ ಆರೋಪಗಳಲ್ಲಿ ಉತ್ಸಾಹ ತೋರುತ್ತಿರುವ ವರದಿಗಳು ಬರುತ್ತಿವೆ. ಇದು ನಿಜವೇ ಆದಲ್ಲಿ, ರಾಜಭವನವನ್ನು ತನ್ನ ರಾಜಕೀಯ ಹಿತಾಸಕ್ತಿಗೆ ಬಳಸಿಕೊಳ್ಳುವ ಬಿಜೆಪಿಯ ನಡೆ ಕರ್ನಾಟಕಕ್ಕೂ ವಿಸ್ತರಣೆಯಾದಂತಾಗಲಿದೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ಕೇರಳ, ತಮಿಳುನಾಡು, ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮಬಂಗಾಳ ರಾಜ್ಯಗಳಲ್ಲಿ ಆಯಾ ರಾಜ್ಯಪಾಲರನ್ನು ಮುಂದಿಟ್ಟುಕೊಂಡು ಬಿಜೆಪಿ, ಅಲ್ಲಿನ ರಾಜ್ಯ ಸರಕಾರದ ಜೊತೆ ನಡೆಸಿದ ಸಂಘರ್ಷ ಕರ್ನಾಟಕದಲ್ಲೂ ಆ ಸಾಧ್ಯತೆಯನ್ನು ಯೋಚಿಸುವಂತೆ ಮಾಡುತ್ತವೆ. ಸಂವಿಧಾನದ ೧೫೩ನೇ ಅನುಚ್ಛೇದವು ರಾಜ್ಯಪಾಲ ಹುದ್ದೆಯನ್ನು ಅಧಿಕೃತಗೊಳಿಸಿದೆ. ಕೇಂದ್ರ ಸರಕಾರದ ಶಿಫಾರಸಿನನ್ವಯ ರಾಷ್ಟ್ರಪತಿಗಳು ರಾಜ್ಯಪಾಲರನ್ನು ನೇಮಕ ಮಾಡುತ್ತಾರಾದರೂ, ಅದೊಂದು ಸಾಂವಿಧಾನಿಕ ಹುದ್ದೆಯಾಗಿದ್ದು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳ ನಡುವಿನ ಸೇತುವೆಯಂತೆ ರಾಜ್ಯಪಾಲರು ಕರ್ತವ್ಯನಿರ್ವಹಿಸಬೇಕೇ ಹೊರತು, ತನ್ನ ನೇಮಕಕ್ಕೆ ಶಿಫಾರಸು ಮಾಡಿದ ಕೇಂದ್ರ ಸರಕಾರದ ಪ್ರತಿನಿಧಿಯಂತೆ ಅಲ್ಲ. ರಾಜ್ಯ ಸರಕಾರದ ಮುಖ್ಯಸ್ಥನ ಸ್ಥಾನ ರಾಜ್ಯಪಾಲರ ಹುದ್ದೆಗಿದೆ. ಆದರೆ ಜನರಿಂದ ಚುನಾಯಿತಗೊಂಡು ರಚನೆಯಾದ ಸರಕಾರದ ಮಂತ್ರಿಮಂಡಲದ ಸಲಹೆಯನ್ವಯ ರಾಜ್ಯಪಾಲರು ಕರ್ತವ್ಯ ನಿರ್ವಹಿಸಬೇಕು. ಆ ಕಾರಣಕ್ಕೆ ರಾಜ್ಯಪಾಲರ ಹುದ್ದೆಯನ್ನು ರಬ್ಬರ್ ಸ್ಟ್ಯಾಂಪ್ ಎಂದು ಲೇವಡಿ ಮಾಡುವ ಪರಿಪಾಠವೂ ಉಂಟು. ಆದರೂ, ನಮ್ಮ ಸಂವಿಧಾನ ರಾಜ್ಯಪಾಲರಿಗೆ ತನ್ನದೇ ಆದ ಸ್ವತಂತ್ರ ವಿವೇಚನೆಯ ಅಧಿಕಾರಗಳನ್ನೂ ನೀಡಿದೆ. ಅದನ್ನು ಎರಡು ವಿಧಗಳಾಗಿ ವಿಂಗಡಿಸಲಾಗಿದೆ. ಮೊದಲನೆಯದು, ಸಾಂವಿಧಾನಿಕ ವಿವೇಚನೆ ಅಧಿಕಾರ; ಎರಡನೆಯದು, ಸಾಂದರ್ಭಿಕ ವಿವೇಚನಾ ಅಧಿಕಾರ. ಸಾಂವಿಧಾನಿಕ ವಿವೇಚನೆ ಅಧಿಕಾರದಡಿ, ರಾಜ್ಯ ಸರಕಾರ ವಿಧಾನಸಭೆಯಲ್ಲಿ ಅನುಮೋದಿಸಿ ಅಂಕಿತಕ್ಕೆ ಕಳುಹಿಸಿಕೊಟ್ಟ ಯಾವುದೇ ಮಸೂದೆಯನ್ನು ರಾಷ್ಟ್ರಪತಿಗಳ ಪರಾಮರ್ಶೆಗೆ ಕಳುಹಿಸಿಕೊಡುವ ಸ್ವತಂತ್ರ ನಿರ್ಣಯವನ್ನು ಅವರು ತೆಗೆದುಕೊಳ್ಳಬಹುದು. ಅದೇ ರೀತಿ, ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಉಂಟಾದಾಗ ಅಥವಾ ಆಡಳಿತ ವೈಫಲ್ಯದಿಂದ ಕಾನೂನು ಸುವ್ಯವಸ್ಥೆ ಭಂಗವಾದಾಗ, ಅರಾಜಕತೆ ಸೃಷ್ಟಿಯಾದಾಗ ರಾಜ್ಯದಲ್ಲಿ ೩೫೬ನೇ ವಿಧಿ ಪ್ರಕಾರ ರಾಷ್ಟ್ರಪತಿ ಆಳ್ವಿಕೆ ಹೇರಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವ ಸ್ವಂತಿಕೆಯನ್ನು ಸಂವಿಧಾನ ರಾಜ್ಯಪಾಲರಿಗೆ ನೀಡಿದೆ.
ಇನ್ನು ಸಾಂದರ್ಭಿಕ ವಿವೇಚನಾ ಅಧಿಕಾರದಡಿ, ಸಂಪೂರ್ಣ ಬಹುಮತ ಸಿಗದೇ ಹೋದಾಗ ಅಥವಾ ಅಧಿಕಾರದಲ್ಲಿರುವ ಸಿಎಂ ನಿಧನರಾದಾಗ ಹೊಸ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಅಧಿಕಾರ ಹಾಗೂ ಸದನದಲ್ಲಿ ಬಹುಮತ ಸಾಬೀತುಪಡಿಸಲು ವಿಫಲವಾದ ಸರಕಾರವನ್ನು ವಿಸರ್ಜನೆಗೊಳಿಸುವ ಅಧಿಕಾರವನ್ನು ರಾಜ್ಯಪಾಲರಿಗೆ ನೀಡಲಾಗಿದೆ. ಆದರೆ ಈ ಅಧಿಕಾರಗಳಿಗೂ ನಿಯಮಗಳು ಅನ್ವಯವಾಗುತ್ತವೆ. ಅವುಗಳನ್ನು ಮೀರಿ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಳ್ಳುವಂತಿಲ್ಲ.
ರಾಷ್ಟ್ರಪತಿ ಆಳ್ವಿಕೆ ಹೇರಿಕೆ, ಅತಂತ್ರ ಪರಿಸ್ಥಿತಿಯಲ್ಲಿ ಯಾರನ್ನು ಸರಕಾರ ರಚನೆಗೆ ಆಹ್ವಾನಿಸಬೇಕು ಹಾಗೂ ಸರಕಾರವನ್ನು ವಿಸರ್ಜಿಸಲು ರಾಜ್ಯಪಾಲರಿಗೆ ಇರುವ ಅಧಿಕಾರಗಳೇ ಕೇಂದ್ರದಲ್ಲಿ ಆಳ್ವಿಕೆ ನಡೆಸುವ ಪಕ್ಷಗಳ ಮೂಲಕ ದುರುಪಯೋಗಗೊಳ್ಳುತ್ತಾ ಬಂದಿವೆ. ಇದಕ್ಕೊಂದು ಅತ್ಯುತ್ತಮ ಉದಾಹರಣೆಯೆಂದರೆ, ನಮ್ಮದೇ ಕರ್ನಾಟಕದ ಎಸ್.ಆರ್.ಬೊಮ್ಮಾಯಿಯವರ ಸರಕಾರವನ್ನು ೧೯೮೯ರಲ್ಲಿ ಅಂದಿನ ರಾಜ್ಯಪಾಲರಾದ ಪಿ. ವೆಂಕಟಸುಬ್ಬಯ್ಯನವರು ವಜಾಗೊಳಿಸಿದ್ದು. ೧೯ ಶಾಸಕರು ಸರಕಾರಕ್ಕೆ ತಾವು ನೀಡಿದ ಬೆಂಬಲವನ್ನು ವಾಪಸ್ ಪಡೆದಿದ್ದೇವೆ ಎಂಬ ಪತ್ರ ಕೊಟ್ಟಿದ್ದಾರೆ ಎಂಬುದನ್ನು ಆಧಾರವಾಗಿಟ್ಟುಕೊಂಡು ಜನತಾ ದಳ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ರಾಜ್ಯಪಾಲರು ಶಿಫಾರಸು ಮಾಡಿದ್ದರು. ಆಗ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿತ್ತು. ರಾಜ್ಯಪಾಲರಾಗಿದ್ದ ವೆಂಕಟಸುಬ್ಬಯ್ಯನವರೂ ಕಾಂಗ್ರೆಸ್ ರಾಜಕಾರಣದ ವ್ಯಕ್ತಿ. ಇಂದಿರಾಗಾಂಧಿ ಮತ್ತು ರಾಜೀವ್ಗಾಂಧಿಯವರ ಸರಕಾರಗಳಲ್ಲಿ ಕೇಂದ್ರ ಮಂತ್ರಿಯಾಗಿದ್ದಂತಹವರು. ಇದರ ವಿರುದ್ಧ ಬೊಮ್ಮಾಯಿಯವರು ಸುಪ್ರೀಂ ಕೋರ್ಟ್ ಮೆಟ್ಟಿಲೇ ರಿದ್ದರು. ೧೯೯೪ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪು, ರಾಷ್ಟ್ರಪತಿ ಆಡಳಿತ ಹೇರುವ ವಿಚಾರದಲ್ಲಿ ಒಂದು ಮಾನದಂಡವಾಗಿ ಪರಿಗಣಿಸಲ್ಪಟ್ಟಿದೆ. ಅಲ್ಲದೆ, ಸರಕಾರದ ಬಹುಮತದ ತೀರ್ಮಾನ ಆಗಬೇಕಿರುವುದು ಸದನದೊಳಗೇ ವಿನಾ, ರಾಜಭವನದ ಅಂಗಳದಲ್ಲಲ್ಲ ಎಂಬುದನ್ನು ತೀರ್ಪು ಸ್ಪಷ್ಟವಾಗಿ ಉಲ್ಲೇಖಿಸಿತ್ತು.
ರಾಜ್ಯಪಾಲರ ಹುದ್ದೆ ಇತ್ತೀಚಿನ ದಿನಗಳಲ್ಲಿ ಎಷ್ಟರಮಟ್ಟಿಗೆ ರಾಜಕೀಯಕ್ಕೊಳಪಟ್ಟಿದೆ ಎನ್ನುವುದಕ್ಕೆ ೨೦೧೯ರಲ್ಲಿ ರಾಜಸ್ಥಾನದ ರಾಜ್ಯಪಾಲರಾಗಿದ್ದ ಕಲ್ಯಾಣ್ ಸಿಂಗ್ (ಉತ್ತರಪ್ರದೇಶದಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿಯಾಗಿದ್ದಂತಹವರು) ಅವರು ನೀಡಿದ್ದ ಹೇಳಿಕೆ ಸಾಕ್ಷಿ. ಲೋಕಸಭಾ ಚುನಾವಣೆಗೂ ಮುನ್ನ, ಟಿಕೆಟ್ ಹಂಚಿಕೆಯ ವಿಚಾರವಾಗಿ ಮನಸ್ತಾಪಗೊಂಡು ರಾಜಭವನದ ಮುಂದೆ ನೆರೆದಿದ್ದ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ, ‘‘ನಾವೆಲ್ಲರೂ ಬಿಜೆಪಿಯ ಕಾರ್ಯಕರ್ತರು, ಎಲ್ಲವನ್ನೂ ಮರೆತು ಬಿಜೆಪಿಯ ಗೆಲುವಿಗೆ ಶ್ರಮಿಸಿ, ಮೋದಿಯವರನ್ನು ಎರಡನೇ ಬಾರಿಗೆ ಪ್ರಧಾನಿ ಮಾಡುವ ಸಂಕಲ್ಪ ಮಾಡೋಣ’’ ಎಂದು ಹೇಳಿದ್ದರು. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿತ್ತು.
ಇಂತಹ ಅಧಿಕಾರ ದುರುಪಯೋಗಗಳನ್ನು ತಡೆಗಟ್ಟುವ ಸಲುವಾಗಿ ರಾಜಮನ್ನಾರ್ ಸಮಿತಿ (೧೯೭೧), ಸರಕಾರಿಯಾ ಆಯೋಗ (೧೯೮೮), ನ್ಯಾ.ಚೆಲ್ಲಯ್ಯ ಆಯೋಗ (೨೦೦೨) ಮತ್ತು ಪುಂಛೀ ಆಯೋಗಗಳು (೨೦೧೦) ಸಾಕಷ್ಟು ಶಿಫಾರಸುಗಳನ್ನು ನೀಡಿವೆ. ಆದರೂ ಪ್ರಕರಣಗಳ ಸಂಖ್ಯೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಲೇ ಇವೆ.
ಇದಕ್ಕೆ ಇತ್ತೀಚಿನ ಉದಾಹರಣೆಗಳೆಂದರೆ ೨೦೧೯ರಲ್ಲಿ ಕರ್ನಾಟಕ ವಿಧಾನಸಭೆ ಹಾಗೂ ೨೦೨೨ರಲ್ಲಿ ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ವಿದ್ಯಮಾನಗಳು. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದಲ್ಲಿ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಉಭಯ ಪಕ್ಷಗಳ ಹದಿನೇಳು ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿ, ಮುಂಬೈಗೆ ತೆರಳಿದ್ದರು. ಅಂದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಸದನದಲ್ಲಿ ಬಹುಮತ ಸಾಬೀತುಪಡಿಸುವಂತೆ ಕುಮಾರಸ್ವಾಮಿಯವರಿಗೆ ಗಡುವು ನೀಡಿ ಪತ್ರಗಳನ್ನು ಬರೆದಿದ್ದರು. ‘‘ಹೀಗೆ ಗಡುವು ನೀಡುವ ಸಾಂವಿಧಾನಿಕ ಅಧಿಕಾರ ರಾಜ್ಯಪಾಲರಿಗೆ ಇಲ್ಲ. ಆದ್ದರಿಂದ ಈ ಪತ್ರಗಳು ಕೇವಲ ಲವ್ಲೆಟರ್ಗಳಷ್ಟೇ’’ ಎಂದು ಕುಮಾರಸ್ವಾಮಿಯವರು ಲೇವಡಿ ಮಾಡಿದ್ದರು. ಅದಕ್ಕೂ ಮೊದಲು, ೨೦೧೮ರಲ್ಲಿ ಅತಂತ್ರ ಫಲಿತಾಂಶ ಬಂದಾಗ, ಚುನಾವಣೋತ್ತರ ಮೈತ್ರಿ ಮಾಡಿಕೊಂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಸರಕಾರ ರಚನೆಗೆ ಆಹ್ವಾನ ನೀಡುವ ಬದಲು, ಅತಿ ಹೆಚ್ಚು ಸೀಟು ಗಳಿಸಿದ ಆಧಾರದ ಮೇಲೆ ಬಿಜೆಪಿಯ ಯಡಿಯೂರಪ್ಪನವರಿಗೆ ಸರಕಾರ ರಚನೆ ಮಾಡಲು ಆಹ್ವಾನ ನೀಡಿದ್ದಲ್ಲದೆ, ಬಹುಮತ ಸಾಬೀತು ಪಡಿಸಲು ಹದಿನೈದು ದಿನಗಳ ಕಾಲಾವಕಾಶ ನೀಡಿದ್ದ ರಾಜ್ಯಪಾಲರ ನಡೆ ಕೂಡಾ ವಿವಾದಕ್ಕೆ ಗುರಿಯಾಗಿತ್ತು. ಅಂತಿಮವಾಗಿ, ವಿಶ್ವಾಸಮತ ಸಾಬೀತು ಮಾಡಲಾಗದ ಯಡಿಯೂರಪ್ಪನವರು ರಾಜೀನಾಮೆ ನೀಡಿ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದಿತ್ತು.
ಮಹಾರಾಷ್ಟ್ರದಲ್ಲೂ ಹೆಚ್ಚೂಕಮ್ಮಿ ಇದೇ ಪರಿಸ್ಥಿತಿ ನಿರ್ಮಾಣ ವಾಗಿತ್ತು. ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ಸರಕಾರ ರಚನೆ ಮಾಡಿತ್ತು. ೨೦೨೨ರಲ್ಲಿ ಶಿವಸೇನೆಯ ಏಕನಾಥ ಶಿಂದೆಯ ನೇತೃತ್ವದಲ್ಲಿ ಒಂದು ತಂಡ, ಪಕ್ಷದಿಂದ ಹೊರಬಂದು ಬಿಜೆಪಿ ಜೊತೆ ಮೈತ್ರಿಗೆ ಸಿದ್ಧವಾದಾಗ, ಅಲ್ಲಿನ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿಯವರು ಉದ್ಧವ್ ಠಾಕ್ರೆಯವರಿಗೆ ಸದನದಲ್ಲಿ ಬಹುಮತ ಸಾಬೀತು ಪಡಿಸುವಂತೆ ಅದೇಶಿಸಿದ್ದರು. ಭಗತ್ಸಿಂಗ್ ಕೋಶ್ಯಾರಿಯವರು ಇದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದಂತಹವರು. ರಾಜ್ಯಪಾಲರ ಈ ನಡೆಯ ವಿರುದ್ಧ ಉದ್ಧವ್ ಠಾಕ್ರೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು. ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರನ್ನು ಒಳಗೊಂಡ ಪಂಚಸದಸ್ಯ ಪೀಠವು ‘‘ಪಕ್ಷವೊಂದರ ಆಂತರಿಕ ವಿದ್ಯಮಾನವನ್ನು ಇತ್ಯರ್ಥಪಡಿಸುವ ಸಲುವಾಗಿ ಸದನದಲ್ಲಿ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು ನಿರ್ಧಾರ ತೆಗೆದುಕೊಂಡದ್ದು ತಪ್ಪು. ಸಂವಿಧಾನ ಅಂತಹ ಯಾವ ಅಧಿಕಾರವನ್ನೂ ಅವರಿಗೆ ನೀಡಿಲ್ಲ. ಅಲ್ಲದೆ, ರಾಜ್ಯಪಾಲರಾದವರು ನೇರ ರಾಜಕೀಯ ಅಖಾಡಕ್ಕಿಳಿಯಬಾರದು’’ ಎಂದು ತೀರ್ಪು ನೀಡಿತ್ತು. ಆದರೆ ಅಷ್ಟರಲ್ಲಾಗಲೇ, ಉದ್ಧವ್ ಠಾಕ್ರೆ ರಾಜೀನಾಮೆ ನೀಡಿ, ಬಿಜೆಪಿ ಮತ್ತು ಶಿವಸೇನೆ (ಶಿಂದೆ ಬಣ) ಮೈತ್ರಿ ಸರಕಾರ ರಚನೆಯಾಗಿತ್ತು.
ಬಿಜೆಪಿಯಿಂದ ನೇಮಿಸಲ್ಪಟ್ಟ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರು ಪಿಣರಾಯಿ ವಿಜಯನ್ ಅವರ ನೇತೃತ್ವದ ಎಲ್ಡಿಎಫ್ ಸರಕಾರಕ್ಕೆ ನಿರಂತರವಾಗಿ ಅಡ್ಡಗಾಲು ಹಾಕುತ್ತಲೇ ಬಂದಿದ್ದಾರೆ. ಇತ್ತೀಚೆಗೆ, ಸದನದಲ್ಲಿ ಅನುಮೋದನೆಗೊಂಡ ಎಂಟು ಮಸೂದೆಗಳಿಗೆ ಸಹಿ ಹಾಕದೆ ಸತಾಯಿಸಿದ್ದರು. ಮಸೂದೆಗಳ ಬಗ್ಗೆ ರಾಜ್ಯಪಾಲರಿಗೆ ಅಸಮ್ಮತಿ ಇದ್ದರೆ ಸದನದ ಮರು ಪರಾಮರ್ಶೆಗೆ ವಾಪಸ್ ಕಳುಹಿಸಿಕೊಡಬಹುದು ಅಥವಾ ರಾಷ್ಟ್ರಪತಿಗಳ ಪರಾಮರ್ಶೆಗೆ ಕಳುಹಿಸಿಕೊಡಬಹುದು. ಆದರೆ ವಿನಾಕಾರಣ, ಅವುಗಳನ್ನು ತಮ್ಮ ಬಳಿ ಇಟ್ಟುಕೊಂಡು ವಿಳಂಬ ಮಾಡುವಂತಿಲ್ಲ. ಇದರ ವಿರುದ್ಧ ಸರಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಆಯ್ಕೆಯನ್ನೂ ಪರಿಶೀಲಿಸಿತ್ತು. ಇದಕ್ಕೂ ಮುನ್ನ, ರಾಜಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ರಾಜ್ಯಪಾಲ ಖಾನ್ ಅವರು ಸರಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ರಾಜ್ಯಪಾಲರಾದವರು, ಹೀಗೆ ಪತ್ರಿಕಾಗೋಷ್ಠಿ ನಡೆಸಿದ್ದು ಚರ್ಚೆಗೆ ಕಾರಣವಾಗಿತ್ತು. ‘‘ಉತ್ತರಪ್ರದೇಶದಂತಹ ರಾಜ್ಯದಿಂದ ಬಂದವರಿಗೆ ಕೇರಳದ ಶೈಕ್ಷಣಿಕ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ’’ ಎಂಬ ಹೇಳಿಕೆ ನೀಡಿದ್ದ ಕೇರಳ ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ಅವರನ್ನು ಮಂತ್ರಿ ಮಂಡಲದಿಂದ ವಜಾ ಮಾಡುವಂತೆ ರಾಜ್ಯಪಾಲ ಖಾನ್ ಅವರು ಸಿಎಂ ವಿಜಯನ್ ಅವರಿಗೆ ಎರಡು ಪತ್ರ ಬರೆದಿದ್ದರು. ಸರಕಾರ ಆ ಪತ್ರಗಳಿಗೆ ಮನ್ನಣೆ ನೀಡಲಿಲ್ಲ.
ಇನ್ನು ತಮಿಳುನಾಡಿನಲ್ಲಿ, ಸ್ಟಾಲಿನ್ ನೇತೃತ್ವದ ಡಿಎಂಕೆ ಸರಕಾರ ಹಾಗೂ ಬಿಜೆಪಿಯಿಂದ ನೇಮಕವಾದ ರಾಜ್ಯಪಾಲ ಆರ್.ಎನ್.ರವಿ ಅವರ ನಡುವಿನ ಸಂಘರ್ಷವೂ ತೀವ್ರ ಸ್ವರೂಪದ್ದು. ರಾಜ್ಯ ಸಚಿವ ಸೆಂಥಿಲ್ ಬಾಲಾಜಿ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಿ ರಾಜ್ಯಪಾಲರು ಅಸಾಂವಿಧಾನಿಕ ಆದೇಶ ಹೊರಡಿಸಿದ್ದರು. ರಾಜ್ಯಪಾಲರ ಈ ಕ್ರಮದ ವಿರುದ್ಧ ಡಿಎಂಕೆ ಪಕ್ಷ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ನೀಡಿತ್ತು. ಸಿಎಂ ಸ್ಟಾಲಿನ್ ಅವರು ‘‘ರಾಜ್ಯಪಾಲರ ಈ ಆದೇಶವು ರದ್ದಿ ಪತ್ರಕ್ಕೆ ಸಮನಾದುದು. ಯಾಕೆಂದರೆ ಮಂತ್ರಿಯನ್ನು ವಜಾ ಮಾಡುವ ಅಧಿಕಾರ ಇರುವುದು ಮುಖ್ಯಮಂತ್ರಿಗೇ ವಿನಾಃ ರಾಜ್ಯಪಾಲರಿಗೆ ಅಲ್ಲ’’ ಎಂದು ಪ್ರತಿಕ್ರಿಯಿಸಿದ್ದರು. ಇದಕ್ಕೂ ಮುನ್ನ, ತಮಿಳುನಾಡಿಗೆ ‘ತಮಿಝಘಂ’ ಎಂದು ಮರುನಾಮಕರಣ ಮಾಡಬೇಕು ಎಂಬ ರಾಜ್ಯಪಾಲರ ವಿವಾದಾತ್ಮಕ ಹೇಳಿಕೆ ವಿಚಾರದಲ್ಲೂ ರಾಜಭವನ ಮತ್ತು ರಾಜ್ಯ ಸರಕಾರದ ನಡುವೆ ಸಂಘರ್ಷವೇರ್ಪಟ್ಟಿತ್ತು. ಇಂತಹ ನಡೆಗಳ ಕಾರಣಕ್ಕೆ, ರಾಜ್ಯಪಾಲರು ಕೇಂದ್ರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದ ತಮಿಳುನಾಡು ಸರಕಾರ, ಸದನದಲ್ಲಿ ರಾಜ್ಯಪಾಲರ ವಿರುದ್ಧ ನಿರ್ಣಯವೊಂದನ್ನು ಅಂಗೀಕರಿಸಿದ್ದನ್ನು ಸ್ಮರಿಸಿಕೊಳ್ಳಬಹುದು. ಅಂತಹ ನಿರ್ಣಯವನ್ನು ಎಲ್ಲಾ ಬಿಜೆಪಿಯೇತರ ರಾಜ್ಯಗಳು ತಮ್ಮ ಸದನದಲ್ಲಿ ಅಂಗೀಕರಿಸಬೇಕೆಂದು ಸಿಎಂ ಸ್ಟಾಲಿನ್ ಕರೆ ಕೊಟ್ಟಿದ್ದರು.
ಮಮತಾ ಬ್ಯಾನರ್ಜಿಯವರು ಮುಖ್ಯಮಂತ್ರಿಯಾಗಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್ ರಾಜ್ಯ ಸರಕಾರ ಹಾಗೂ ಅಲ್ಲಿನ ರಾಜ್ಯಪಾಲ ಜಗದೀಪ್ ಧನ್ಕರ್ ನಡುವಿನ ಸಂಘರ್ಷ ನಿರಂತರವಾಗಿ ಮುಂದುವರಿದುಕೊಂಡೇ ಬಂದಿದೆ. ಓರ್ವ ಮಂತ್ರಿಯೂ ಸೇರಿದಂತೆ ಮೂವರು ತೃಣಮೂಲ ಶಾಸಕರನ್ನು ಬಂಧಿಸಲು ಕೇಂದ್ರ ತನಿಖಾ ದಳಕ್ಕೆ ರಾಜ್ಯಪಾಲರು ಅನುಮತಿ ನೀಡಿದ್ದಾಗಲಿ; ವಿಶ್ವವಿದ್ಯಾನಿಲಯಗಳಿಗೆ ಸಂಬಂಧಿಸಿದ ಮಸೂದೆಗಳಿಗೆ ಸಹಿ ಹಾಕದೆ ವಿಳಂಬ ಮಾಡಿದ್ದಾಗಲಿ; ಡಿಜಿಪಿ ಹಾಗೂ ಸರಕಾರದ ಪ್ರಧಾನ ಕಾರ್ಯದರ್ಶಿಗಳು ತನಗೆ ವರದಿ ಒಪ್ಪಿಸಬೇಕು ಎಂದು ರಾಜ್ಯಪಾಲರು ಹಠ ಹಿಡಿದಿದ್ದಾಗಲಿ ಎಲ್ಲವೂ ಸಾಂವಿಧಾನಿಕ ವ್ಯಾಪ್ತಿಯನ್ನು ಮೀರಿದ ರಾಜಕೀಯ ನಡೆಗಳಾಗಿ ಚರ್ಚೆಗೆ ಒಳಗಾಗಿದ್ದವು. ಇದಕ್ಕೆ ಪ್ರತಿಯಾಗಿ ಅಲ್ಲಿನ ವಿಧಾನ ಸಭಾ ಸ್ಪೀಕರ್ ರಾಷ್ಟ್ರಪತಿಗಳಿಗೆ ಸುದೀರ್ಘ ಪತ್ರ ಬರೆದು, ರಾಜ್ಯಪಾಲರ ಬಗ್ಗೆ ದೂರು ನೀಡಿದ್ದರು. ಇನ್ನು ಸಿಎಂ ಮಮತಾ ಬ್ಯಾನರ್ಜಿಯವರಂತೂ ತೀರಾ ವೈಯಕ್ತಿಕ ಸಂಘರ್ಷಕ್ಕೇ ಇಳಿದಿದ್ದಾರೆ.
ದಿಲ್ಲಿಯ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರು ಅಲ್ಲಿನ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಸಂಘರ್ಷವನ್ನೊಡ್ಡುತ್ತಲೇ ಬರುತ್ತಿದ್ದಾರೆ. ತೀರಾ ಇತ್ತೀಚೆಗೆ ದಿಲ್ಲಿ ಸರಕಾರದಡಿ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ೪೦೦ ಸಿಬ್ಬಂದಿಯನ್ನು ಲೆಫ್ಟಿನೆಂಟ್ ಗವರ್ನರ್, ಏಕಾಏಕಿ ಕೆಲಸದಿಂದ ವಜಾ ಮಾಡಿ ಆದೇಶ ಹೊರಡಿಸಿದ್ದರು. ಅದರ ವಿರುದ್ಧ ಅರವಿಂದ್ ಕೇಜ್ರಿವಾಲ್ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಬಿಜೆಪಿಯೇತರ ಸರಕಾರಗಳಿರುವ ಪಂಜಾಬ್, ಜಾರ್ಖಂಡ್, ತೆಲಂಗಾಣಗಳಲ್ಲೂ ರಾಜಭವನದ ಮೂಲಕ ನಡೆಸಲಾಗುತ್ತಿರುವ ಇದೇ ಬಗೆಯ ತಿಕ್ಕಾಟವನ್ನು ನಾವು ಗಮನಿಸಬಹುದು. ಇವನ್ನೆಲ್ಲ ಪರಿಗಣಿಸಿದಾಗ, ಇತ್ತೀಚೆಗೆ ರಾಜಭವನವನ್ನು ಕೇಂದ್ರವಾಗಿರಿಸಿಕೊಂಡು ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಲ್ಲಿಯೂ ಸಾಂವಿಧಾನಿಕ ಸಂಘರ್ಷದ ಸಾಧ್ಯತೆಯನ್ನು ಮುಂದೊಡ್ಡುತ್ತವೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನದಿಂದ ಜನಪ್ರಿಯವಾಗುತ್ತಿರುವ ಕಾಂಗ್ರೆಸ್ ಸರಕಾರದ ಪ್ರಭಾವವನ್ನು ಕುಗ್ಗಿಸಬೇಕಾಗಿರುವುದು ಈಗ ಬಿಜೆಪಿ ಮುಂದಿರುವ ಬಹುದೊಡ್ಡ ಸವಾಲು. ಇಲ್ಲವಾದರೆ, ಮುಂದಿನ ವರ್ಷ ಎದುರಾಗಲಿರುವ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಮತ್ತೊಮ್ಮೆ ಮುಖಭಂಗ ಅನುಭವಿಸಬೇಕಾಗುತ್ತದೆ. ಅದನ್ನು ತಡೆಗಟ್ಟಬೇಕೆಂದರೆ ಈಗ ಬಿಜೆಪಿಗೆ ಇರುವ ಅಸ್ತ್ರ ರಾಜಭವನ ಮಾತ್ರ. ರಾಜಭವನ ಮತ್ತು ಸರಕಾರದ ನಡುವೆ ಸಂಘರ್ಷವನ್ನು ಸೃಷ್ಟಿಸಿ, ಆ ಮೂಲಕ ಸರಕಾರ ಏನೋ ತಪ್ಪು ಮಾಡುತ್ತಿದೆ ಎಂಬ ಜನಾಭಿಪ್ರಾಯವನ್ನು ರೂಪಿಸಲು ಸಾಧ್ಯವಾದರೆ ಮಾತ್ರ ಲೋಕಸಭೆ ಚುನಾವಣೆಯ ಹೊತ್ತಿಗೆ ಕರ್ನಾಟಕದಲ್ಲಿ ಬಿಜೆಪಿಗೆ ಚೇತರಿಸಿಕೊಳ್ಳಲು ಅವಕಾಶವಾಗಬಹುದು. ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುವ ಪರಿಪಾಠವನ್ನು ಹುಟ್ಟುಹಾಕಿದ್ದೇ ಕಾಂಗ್ರೆಸ್ ಪಕ್ಷ ಎಂಬ ಸಮರ್ಥನೆಯನ್ನು ಹೇಗೂ ಬಿಜೆಪಿ ಬಳಸಿಕೊಳ್ಳಲಿದೆ. ಕಾಂಗ್ರೆಸ್ನ ಯಾವಯಾವ ಚಾರಿತ್ರಿಕ ತಪ್ಪುಗಳನ್ನು ಬಿಜೆಪಿ ಟೀಕಿಸುತ್ತದೆಯೋ, ಅಧಿಕಾರಕ್ಕೇರಿದ ನಂತರ ಅದೇ ತಪ್ಪುಗಳನ್ನು ಅದಕ್ಕಿಂತಲೂ ಉನ್ನತ ಮಟ್ಟದಲ್ಲಿ ಯಾವ ಮುಜುಗರವಿಲ್ಲದೆ ಮಾಡುವುದು ಹಾಗೂ ‘ಇದನ್ನು ಕಾಂಗ್ರೆಸ್ ಮಾಡಿರಲಿಲ್ಲವೇ’ ಎಂದು ತನ್ನ ತಪ್ಪುಗಳನ್ನು ಸಮರ್ಥಿಸಿಕೊಳ್ಳುವುದು ಬಿಜೆಪಿ ಪಕ್ಷಕ್ಕೆ ಅಭ್ಯಾಸವಾಗಿರುವುದರಿಂದ ರಾಜಭವನ ಇನ್ನು ಕೆಲವೇ ದಿನಗಳಲ್ಲಿ ಕರ್ನಾಟಕದ ರಾಜಕೀಯ ಅಖಾಡವಾದರೂ ಅಚ್ಚರಿಯಿಲ್ಲ.