ಚುನಾವಣೆಗೆ ಮೊದಲೇ ಪತನವಾಗಲಿದೆಯೇ ಮಹಾಯುತಿ ಸರಕಾರ?

Update: 2024-07-17 15:32 GMT

ಶರದ್ ಪವಾರ್ | PC : PTI 

ಮಹಾರಾಷ್ಟ್ರಾದಲ್ಲಿ ಮೊದಲೇ ದುರ್ಬಲ ಗೊಂಡಿರುವ ಎನ್ ಡಿ ಎ ಸರಕಾರಕ್ಕೆ ಮತ್ತೊಂದು ದೊಡ್ಡ ಹೊಡೆತ ಬಿದ್ದಿದೆ. ಅಜಿತ್‌ ಪವಾರ್‌ ಬಣದ ಎನ್‌ಸಿಪಿ ನಾಯಕರು ಪಕ್ಷ ತೊರೆದು ಶರದ್ ಪವಾರ್‌ ಬಣಕ್ಕೆ ಸೇರಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿದ್ದ ಅಜಿತ್‌ ಪವಾರ್‌ ಬಣದ ಎನ್‌ಸಿಪಿಗೆ ಮತ್ತೊಮ್ಮೆ ದೊಡ್ಡ ಆಘಾತವಾಗಿದೆ. ಭಾರೀ ಹಿನ್ನಡೆಯುಂಟು ಮಾಡುವ ಬೆಳವಣಿಗೆಯೊಂದರಲ್ಲಿ ಪಕ್ಷದ ನಾಲ್ಕು ಪ್ರಮುಖ ನಾಯಕರು ರಾಜೀನಾಮೆ ನೀಡಿದ್ದಾರೆ. ಈ ನಾಲ್ಕು ಮಂದಿಯೂ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿಗೆ ಸೇರಿಕೊಂಡಿದ್ದಾರೆ.

ಎನ್‌ಸಿಪಿ ಅಜಿತ್‌ ಪವಾರ್‌ ಬಣದ ಪಿಂಪ್ರಿ-ಚಿಂಚ್ವಾಡ್‌ ಘಟಕದ ಮುಖ್ಯಸ್ಥ ಅಜಿತ್‌ ಗವಹಾನಿ, ಪಕ್ಷದ ಪಿಂಪ್ರಿ ಚಿಂಚ್ವಾಡ್‌ ವಿದ್ಯಾರ್ಥಿ ಘಟಕದ ಅಧ್ಯಕ್ಷ ಯಶ್‌ ಸಾನೆ ಹಾಗೂ ಮಾಜಿ ಕಾರ್ಪೊರೇಟರ್‌ಗಳಾದ ರಾಹುಲ್‌ ಬೊಸ್ಲೇ ಮತ್ತು ಪಂಕಲ್‌ ಭಲೇಕರ್‌ ರಾಜೀನಾಮೆ ನೀಡಿದ ಮುಖಂಡರಾಗಿದ್ದಾರೆ. ಇವರಾರೂ ಶಾಸಕರಲ್ಲ. ಆದರೆ ಇದು ಆರಂಭ ಮಾತ್ರ. ಶಾಸಕರೂ ಘರ್ ವಾಪ್ಸಿ ದಾರಿ ಹಿಡಿಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಲೋಕಸಭಾ ಚುನಾವಣೆಯಲ್ಲಿ ನಿರಾಶಾದಾಯಕ ಪ್ರದರ್ಶನದ ಬಳಿಕ ಅಜಿತ್‌ ಪವಾರ್‌ ಬಣದ ಎನ್‌ಸಿಪಿಯಲ್ಲಿ ಅಸಮಾಧಾನ ಹೊಗೆಯಾಡಿತ್ತಲ್ಲದೆ ಹಲವು ನಾಯಕರು ಶರದ್‌ ಪವಾರ್‌ ಬಣಕ್ಕೆ ವಾಪಸಾಗಬಹುದೆಂಬ ಊಹಾಪೋಹಗಳಿದ್ದವು. ಅಜಿತ್ ಪವಾರ್ ಬಣದಿಂದ ಶರದ್ ಪವಾರ್ ಬಣಕ್ಕೆ ಮತ್ತಷ್ಟು ಪಕ್ಷಾಂತರಗಳ ಬಗ್ಗೆ ಊಹಾಪೋಹಗಳು ಹೆಚ್ಚುತ್ತಿವೆ. ವರದಿಗಳ ಪ್ರಕಾರ ಎನ್‌ಸಿಪಿ ಶಾಸಕರು ಮತ್ತು ಶರದ್ ಪವಾರ್ ಬಣದ ಹಿರಿಯ ನಾಯಕರ ನಡುವೆ ಚರ್ಚೆಗಳು ನಡೆಯುತ್ತಿವೆ.

ಇತ್ತೀಚಿನ ಪಕ್ಷದ ನಿರ್ಧಾರಗಳ ಬಗ್ಗೆ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಹಿರಿಯ ನಾಯಕ ಛಗನ್ ಭುಜಬಲ್ ಅವರೂ ಅಜಿತ್ ಪವಾರ್ ಪಕ್ಷ ತೊರೆಯುವ ಬಗ್ಗೆ ಯೋಚಿಸಬಹುದು ಎಂಬ ಸೂಚನೆಗಳಿಂದ ಈ ಆಂತರಿಕ ತಳಮಳ ಹೆಚ್ಚಿದೆ. ಬಾರಾಮತಿ ಲೋಕಸಭೆ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ವಿರುದ್ಧ ಸೋತ ನಂತರ ಅಜಿತ್ ಪವಾರ್ ಅವರು ತಮ್ಮ ಪತ್ನಿ ಸುನೇತ್ರಾ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿರುವುದು ಭುಜಬಲ್ ಕೋಪಕ್ಕೆ ಕಾರಣವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಭಾವಿ ಒಬಿಸಿ ನಾಯಕ ಭುಜಬಲ್ ರಾಜ್ಯಸಭಾ ಸ್ಥಾನ ಮತ್ತು ನಂತರ ಕೇಂದ್ರ ಸಚಿವ ಸ್ಥಾನಕ್ಕಾಗಿ ಪ್ರಯತ್ನಿಸುತ್ತಿದ್ದರು.

ಪಕ್ಷದ ಪ್ರತಿಷ್ಠೆಗೆ ಕುಂದುಂಟು ಮಾಡದ ನಾಯಕರನ್ನು ಒಪ್ಪಿಕೊಳ್ಳುತ್ತೇವೆ ಆದರೆ ತಮ್ಮ ಪಕ್ಷವನ್ನು "ದುರ್ಬಲಗೊಳಿಸಲು" ಬಯಸಿದ ಯಾರನ್ನೂ ಒಪ್ಪಿಕೊಳ್ಳುವುದಿಲ್ಲ ಎಂದು ಕಳೆದ ತಿಂಗಳು ಶರದ್ ಪವಾರ್ ಘೋಷಿಸಿದ್ದರು. "ಪಕ್ಷವನ್ನು ದುರ್ಬಲಗೊಳಿಸಲು ಬಯಸುವವರನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಸಂಘಟನೆಯನ್ನು ಬಲಪಡಿಸಲು ಮತ್ತು ಪಕ್ಷದ ಇಮೇಜ್‌ಗೆ ಧಕ್ಕೆಯಾಗದಂತೆ ಸಹಾಯ ಮಾಡುವ ನಾಯಕರನ್ನು ತೆಗೆದುಕೊಳ್ಳಲಾಗುವುದು" ಎಂದು ಅವರು ಹೇಳಿದಾಗಿ ಎನ್‌ಡಿಟಿವಿ ವರದಿ ಮಾಡಿತ್ತು.

ಲೋಕಸಭೆ ಚುನಾವಣೆಯಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಮಹಾರಾಷ್ಟ್ರದಲ್ಲಿ 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತಾರೂಢ ಎನ್ ಡಿ ಎ - ಮಹಾಯುತಿ ಮೈತ್ರಿಕೂಟಕ್ಕೆ ಆಘಾತ ನೀಡಿತ್ತು. ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ರಾಯಗಢದಲ್ಲಿ ಕೇವಲ ಒಂದು ಸ್ಥಾನವನ್ನು ಪಡೆದರೆ, ಶರದ್ ಪವಾರ್ ಬಣಕ್ಕೆ ಎಂಟು ಸ್ಥಾನಗಳು ಲಭಿಸಿದ್ದವು. ಕಾಂಗ್ರೆಸ್ ಹದಿಮೂರು ಸ್ಥಾನ ಪಡೆದು ರಾಜ್ಯದಲ್ಲೇ ಅತಿ ಹೆಚ್ಚು ಸಂಸದರ ಪಕ್ಷವಾಗಿ ಹೊರಹೊಮ್ಮಿತು.

ಕಳೆದ ವರ್ಷ ಅಜಿತ್ ಪವಾರ್ ತಮ್ಮ ಚಿಕ್ಕಪ್ಪನ ವಿರುದ್ಧ ಬಂಡಾಯವೆದ್ದಿದ್ದರು. ಅವರು ಸುಮಾರು 40 ಎನ್‌ಸಿಪಿ ಶಾಸಕರೊಂದಿಗೆ ಹೋಗಿ ಬಿಜೆಪಿ ಶಿವಸೇನೆ ಸರ್ಕಾರದ ಭಾಗವಾಗಿ ಉಪ ಮುಖ್ಯಮಂತ್ರಿಯಾದರು. ಪಕ್ಷದ ಮೇಲೆ ಹಕ್ಕು ಸಾಧಿಸಲು ಶರದ್ ಪವಾರ್ ಮತ್ತು ಅಜಿತ್ ಪವಾರ್ ನಡುವೆ ಸುದೀರ್ಘ ಹೋರಾಟ ನಡೆದಿತ್ತು. ಅಂತಿಮವಾಗಿ, ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ನಿಜವಾದ ಎನ್‌ಸಿಪಿ ಎಂದು ಪರಿಗಣಿಸಿತ್ತು.

ಆದರೆ ಲೋಕಸಭೆ ಚುನಾವಣಾ ಫಲಿತಾಂಶ ಅಜಿತ್ ಪವಾರ್ ಗೆ ತಲೆನೋವು ನೀಡಿದೆ. ಒಂದೆಡೆ ಅಜಿತ್ ಪವಾರ್ ವಿಧಾನಸಭಾ ಚುನಾವಣೆಗೆ ತಯಾರಿ ನಡೆಸುತ್ತಿದ್ದರೆ, ಮತ್ತೊಂದೆಡೆ ನಾಯಕರು ಪಕ್ಷ ತೊರೆಯುತ್ತಿರುವುದರಿಂದ ಸಮಸ್ಯೆಗಳು ಹೆಚ್ಚಿವೆ. ಇದು ಕೇವಲ ಅಜಿತ್ ಪವಾರ್ ಗೆ ಮಾತ್ರವಲ್ಲದೆ ಮುಖ್ಯಮಂತ್ರಿ ಏಕನಾಥ್ ಶಿಂದೆಯ ಶಿವಸೇನೆ ಮತ್ತು ಬಿಜೆಪಿಗೂ ದೊಡ್ಡ ತಲೆನೋವಾಗಲಿದೆ.

ಏಕನಾಥ್ ಶಿಂದೆ ಬಣದ ಶಿವಸೇನೆಯ ಹಲವು ನಾಯಕರು ಉದ್ಧವ್ ಠಾಕ್ರೆ ಬಣದ ನಾಯಕರ ಜೊತೆ ಚರ್ಚೆಯಲ್ಲಿದ್ದಾರೆ ಎಂಬ ವರದಿಗಳು ಆಗಾಗ ಕೇಳಿ ಬರುತ್ತಿದೆ. ಮೂರೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವಾಗ ಬಿಜೆಪಿ ಮಹಾರಾಷ್ಟ್ರಾದಲ್ಲಿ ಅಧಿಕಾರ ಕಳೆದು ಕೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದು ವರದಿಗಳು ತಿಳಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News