ಸಿದ್ದರಾಮಯ್ಯ ಸರಕಾರ ಹಾಗೂ ಮೋದಿ ಸರಕಾರದ ನಡುವೆ ನಡೆಯಲಿದೆಯೇ ಬಿಗ್ ಫೈಟ್?

Update: 2024-07-23 12:27 GMT

ಸಿದ್ದರಾಮಯ್ಯ , ನರೇಂದ್ರ ಮೋದಿ | PTI

ಬೆಂಗಳೂರು: ರಾಜ್ಯ ಸರಕಾರದ ಮೇಲೆ ಕೇಂದ್ರದ ಮೋದಿ ಸರಕಾರ ಸರ್ಜಿಕಲ್ ಸ್ಟ್ರೈಕ್ ಮಾಡುತ್ತಿದೆ ಎಂದು ಸಚಿವರು ಆರೋಪಿಸಿದ ಬೆನ್ನಿಗೇ, ಕೇಂದ್ರ ತನಿಖಾ ಸಂಸ್ಥೆ ವಿರುದ್ಧವೇ ರಾಜ್ಯ ಸರಕಾರ ತಿರುಗಿ ಬಿದ್ದಿದೆ.

ಪಶ್ಚಿಮ ಬಂಗಾಳದ , ದಿಲ್ಲಿ, ಜಾರ್ಖಂಡ್ ಬಳಿಕ ಈಗ ಸಿದ್ದರಾಮಯ್ಯ ಸರಕಾರ ಹಾಗೂ ಮೋದಿ ಸರಕಾರದ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸಜ್ಜಾಗಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 94.73 ಕೋಟಿ ರೂ. ಅಕ್ರಮ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ಆರೋಪಿಯನ್ನಾಗಿಸಲು ಒತ್ತಡ ಹೇರುತ್ತಿರುವ ಆರೋಪದಡಿ ಈಡಿ ಅಧಿಕಾರಿಗಳ ವಿರುದ್ಧವೇ ನಗರದ ವಿಲ್ಸನ್‌ ಗಾರ್ಡನ್‌ ಪೊಲೀಸ್‌ ಠಾಣೆಯಲ್ಲಿ ಸೋಮವಾರ ಎಫ್‌ಐಆರ್‌ ದಾಖಲಿಸಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಹೆಸರು ಹೇಳುವಂತೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದಡಿ ಇಬ್ಬರು ಈಡಿ ಅಧಿಕಾರಿಗಳ ವಿರುದ್ಧ ವಿಲ್ಸನ್‍ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮದ ಪದನಿಮಿತ್ತ ನಿರ್ದೇಶಕರೂ ಆಗಿದ್ದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಹಿಂದಿನ ನಿರ್ದೇಶಕ ಕಲ್ಲೇಶ್ ಎಂಬುವರು ನೀಡಿನ ದೂರಿನನ್ವಯ ಈಡಿ ಅಧಿಕಾರಿಗಳಾದ ಮಿತ್ತಲ್, ಮುರುಳಿ ಕಣ್ಣನ್ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ದಿಲ್ಲಿ, ಜಾರ್ಖಂಡ್‌ ಮಾದರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಈ ಕೇಸ್ ನಲ್ಲಿ ಸಿಲುಕಿಸಲು ಈಡಿ ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ಸದನದಲ್ಲೂ, ಹೊರಗೂ ಸಚಿವರು, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಆರೋಪಿಸಿದ್ದರು. ಈಗ ಈಡಿ ಅಧಿಕಾರಿಗಳ ವಿರುದ್ಧವೇ ಎಫ್‌ಐಆರ್‌ ದಾಖಲಿಸಿರುವುದರಿಂದ ರಾಜ್ಯ ಸರ್ಕಾರ ಮತ್ತು ಈಡಿ ಮಧ್ಯೆ ನೇರ ಸಂಘರ್ಷ ಆರಂಭವಾಗಿದೆ.

ಆದರೆ ಪರೋಕ್ಷವಾಗಿ ಇದು ಸಿದ್ದರಾಮಯ್ಯ ಸರಕಾರ ಹಾಗೂ ಮೋದಿ ಸರಕಾರದ ನಡುವಿನ ಸಂಘರ್ಷವೇ ಆಗಿದೆ. ಅಕ್ರಮ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಬಿ.ನಾಗೇಂದ್ರ ಅವರನ್ನು ಈಡಿ ಅಧಿಕಾರಿಗಳು ಬಂಧಿಸಿ, ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದ್ದರು. ರಾಯಚೂರು ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಸನಗೌಡ ದದ್ದಲ್‌ ಹಾಗೂ ನಾಗೇಂದ್ರ ಅವರ ಪತ್ನಿ ಮಂಜುಳಾ ಮತ್ತು ಹಲವು ಅಧಿಕಾರಿಗಳ ವಿಚಾರಣೆ ನಡೆಸಿದ್ದರು.

ಪ್ರಕರಣದ ತನಿಖೆಯು ಚುರುಕುಗೊಂಡ ಬೆನ್ನಲ್ಲೇ ಈಡಿಯ ಇಬ್ಬರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಶೇಷಾದ್ರಿಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎನ್‌ಸಿಆರ್‌ ಪ್ರಕರಣವನ್ನು ವಿಲ್ಸನ್‌ಗಾರ್ಡನ್‌ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಅಲ್ಲಿ ಎಫ್ಐಆರ್ ದಾಖಲಾಗಿದೆ. ಈಡಿ ಅಧಿಕಾರಿಗಳ ವಿರುದ್ಧ ದೂರು ನೀಡಿರುವ ಕಲ್ಲೇಶ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಅನುದಾನ ದುರ್ಬಳಕೆ ಮಾಡಿಕೊಂಡ ಆರೋಪದಡಿ ಸದ್ಯ ಅಮಾನತಿನಲ್ಲಿದ್ದಾರೆ.

‘ಇದು ಈಡಿ ಅಧಿಕಾರಿಗಳ ವಿರುದ್ಧ ರಾಜ್ಯ ಪೊಲೀಸರು ದಾಖಲಿಸಿರುವ ಮೊದಲ ಎಫ್‌ಐಆರ್‌. ಹಿಂದೆ ಎಫ್‌ಐಆರ್‌ ದಾಖಲಾದ ಉದಾಹರಣೆಗಳು ಇಲ್ಲ’ ಎಂದು ಮೂಲಗಳು ಹೇಳಿವೆ.

ದೂರಿನಲ್ಲಿ ಏನಿದೆ?

‘ಜುಲೈ 16ರಂದು ದೂರವಾಣಿ ಮೂಲಕ ಕರೆ ಮಾಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಶಾಂತಿನಗರದಲ್ಲಿರುವ ಕಚೇರಿಗೆ ಹೋಗಿದ್ದೆ. ಮುರುಳಿ ಕಣ್ಣನ್‌ ಅವರು ಹೇಳಿಕೆ ದಾಖಲಿಸಿಕೊಂಡಿದ್ದರು. ಅವರು ಕೇಳಿದ 17 ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಅದರಲ್ಲಿ ಮೂರು ಪ್ರಶ್ನೆಗಳಿಗೆ ಉತ್ತರಿಸಲು ಕಡತ ಹಾಗೂ ಕೆಳಹಂತದ ಅಧಿಕಾರಿಗಳು ಬೇಕೆಂದು ತಿಳಿಸಿದ್ದೆ. ಜುಲೈ 18ರಂದು ಮಧ್ಯಾಹ್ನ 2 ಗಂಟೆಗೆ ಕಡತ ಹಾಗೂ ಇತರೆ ಅಧಿಕಾರಿಗಳ ಜತೆಗೆ ಬರುವಂತೆ ಸೂಚಿಸಿದ್ದರು. ಆಗ ಹೇಳಿಕೆಗೆ ಸಹಿ ಪಡೆದ ಮೇಲೆ ಅದರ ಪ್ರತಿ ನೀಡುವಂತೆ ಮನವಿ ಮಾಡಿದ್ದೆ. ಆದರೆ, ಅಧಿಕಾರಿಗಳು ಪ್ರತಿ ನೀಡಲಿಲ್ಲ’ ಎಂದು ಕಲ್ಲೇಶ್ ದೂರಿನಲ್ಲಿ ವಿವರಿಸಿದ್ದಾರೆ.

‘ಅದಾದ ಮೇಲೆ ಮತ್ತೆ ಕೆಲವು ಮೌಖಿಕ ಪ್ರಶ್ನೆಗಳನ್ನು ಕೇಳಿದರು. ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ವಾಲ್ಮೀಕಿ ನಿಗಮದ ಬ್ಯಾಂಕ್‌ ಖಾತೆಗೆ ಖಜಾನೆಯ ಮೂಲಕ ಹಣವನ್ನು ಜಮೆ ಮಾಡಿರುವುದು ತಪ್ಪು ಎಂದು ಹೇಳಿದರು. ಅದಕ್ಕೆ ನಾನು ಸರ್ಕಾರದ ಆದೇಶದ ಪ್ರಕಾರ ಬಿಲ್‌ ಮಾಡಿ, ಮಾರ್ಚ್ 25ರಂದು ಜಮೆ ಮಾಡಿದ್ದೇನೆ. ಆ ಖಾತೆಯಲ್ಲಿ ಮಾರ್ಚ್‌ 5 ರಿಂದಲೇ ಹಣ ಅಕ್ರಮವಾಗಿ ವರ್ಗಾವಣೆಯಾಗಿದ್ದು, ನನ್ನ ತಪ್ಪಿಲ್ಲ ಎಂದು ಹೇಳಿದ್ದರೂ ಬಂಧನ ಮಾಡುವುದಾಗಿ ಬೆದರಿಕೆ ಹಾಕಿದರು’ ಎಂದು ಉಲ್ಲೇಖಿಸಿದ್ದಾರೆ.

‘ಹಣ ವರ್ಗಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವ ಬಿ.ನಾಗೇಂದ್ರ ಹಾಗೂ ಹಣಕಾಸು ಇಲಾಖೆ ಸೂಚನೆ ಇತ್ತು ಎಂಬುದಾಗಿ ಒಪ್ಪಿಕೊಳ್ಳಬೇಕು. ಆಗ ನಿಮಗೆ ಸಹಾಯ ಮಾಡುತ್ತೇವೆ. ಇಲ್ಲದಿದ್ದರೆ ಬಂಧಿಸುತ್ತೇವೆ ಎಂದು ಭಯದ ವಾತಾವರಣ ಸೃಷ್ಟಿಸಿದ್ದರು’ ಎಂದು ಕಲ್ಲೇಶ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ನೀನೊಬ್ಬ ಅಪರಾಧಿ. ಈಡಿ ನಿನ್ನನ್ನು ಬಂಧಿಸಿದರೆ ಎರಡರಿಂದ ಮೂರು ವರ್ಷ ಜಾಮೀನು ಸಿಗುವುದಿಲ್ಲ. ನಿನಗೆ ಸಹಾಯ ಮಾಡಬೇಕೆಂದರೆ, ಮುಖ್ಯಮಂತ್ರಿ, ನಾಗೇಂದ್ರ ಮತ್ತು ಆರ್ಥಿಕ ಇಲಾಖೆ ನಿರ್ದೇಶನದಂತೆ ಹಣ ವರ್ಗಾವಣೆ ಮಾಡಿರುತ್ತೇನೆಂದು ಬರೆದುಕೊಡಬೇಕು. ಇಲ್ಲದಿದ್ದರೆ, ಏಳು ವರ್ಷ ಜೈಲಿಗೆ ಕಳುಹಿಸುವವರೆಗೂ ಬಿಡುವುದಿಲ್ಲವೆಂದು ಅಧಿಕಾರಿ ಮಿತ್ತಲ್ ತಮ್ಮ ಕೊಠಡಿಗೆ ಕರೆಸಿಕೊಂಡು ಬೆದರಿಕೆ ಹಾಕಿದರು. ಕೊನೆಯಲ್ಲಿ, ಇಬ್ಬರೂ ಅಧಿಕಾರಿಗಳು ನನ್ನನ್ನು ಬಂಧಿಸುವುದಾಗಿ ಮಾತನಾಡಿಕೊಂಡರು’ ಎಂದು ದೂರಿನಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News