ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ ಯುವಜನರು
ಕೋವಿಡ್ ಬಳಿಕ ಬಹಳಷ್ಟು ಮಂದಿ ಅದರಲ್ಲಿಯೂ ಯುವಜನರು ಹಠಾತ್ ಹೃದಯಾಘಾತದ ಸಾವುಗಳಿಗೆ ತುತ್ತಾಗುತ್ತಿರುವುದು ಆತಂಕ ತಂದಿದೆ. ಹಾಗೆ ಸಣ್ಣ ವಯಸ್ಸಿನ ಆರೋಗ್ಯವಂತರೇ ಹೃದಯಾಘಾತವಾಗಿ ಸಾವಿಗೀಡಾಗುತ್ತಿರುವ ಘಟನೆಗಳು ಈಗ ದೇಶದ ವಿವಿಧೆಡೆಗಳಿಂದ ಹೆಚ್ಚು ಕಡಿಮೆ ಪ್ರತಿದಿನ ನಡೆಯುತ್ತಲೇ ಇದೆ.
ಹೀಗೆ ಇದ್ದಕ್ಕಿದ್ದಂತೆ ಹೃದಯಾಘಾತ ಪ್ರಕರಣಗಳು ಏರುತ್ತಿರುವುದಕ್ಕೆ, ಅದರಿಂದಾಗಿ ಅತಿ ಕಿರಿಯರೆಲ್ಲ ಹಠಾತ್ ಸಾವನ್ನಪ್ಪುತ್ತಿರುವುದಕ್ಕೆ ಕೋವಿಡ್ ಕಾರಣವಿರಬಹುದೆ ಎಂಬ ಅನುಮಾನಗಳು ಎದ್ದಿದ್ದವು. ಆದರೆ ಅದಕ್ಕೂ ಕೋವಿಡ್ಗೂ ಸಂಬಂಧವಿಲ್ಲ ಎಂದು ಕೇಂದ್ರದ ಬಿಜೆಪಿ ಸರ್ಕಾರ ಖಡಾಖಂಡಿತವೆಂಬಂತೆ ಹೇಳುತ್ತ ಬಂತು.
ಸತ್ಯಾಸತ್ಯತೆಯನ್ನೊಮ್ಮೆ ಖಚಿತಪಡಿಸಿಕೊಳ್ಳುವುದು ಒಳ್ಳೆಯದು ಎಂಬ ಕನಿಷ್ಠ ಕಾಳಜಿಯನ್ನೂ ಅದು ತೋರಿಸದೇ ಹೋಯಿತು. ವೈದ್ಯರು, ಆರೋಗ್ಯ ತಜ್ಞರು, ಪರಿಣತರು, ಸಾಮಾಜಿಕ ಕಾರ್ಯಕರ್ತರು ಈ ಬಗ್ಗೆ ಅದೆಷ್ಟೇ ಬಾರಿ ಹೇಳಿದರೂ ಮೋದಿ ಸರಕಾರ ಅದಕ್ಕೂ ಕೋವಿಡ್ ಗೂ ಯಾವುದೇ ಸಂಬಂಧವಿಲ್ಲ ಎಂದೇ ಹೇಳುತ್ತಾ ಬಂತು. ಈಗ ಅದೇ ಸರ್ಕಾರ, ಹೆಚ್ಚುತ್ತಿರುವ ಹೃದಯಘಾತದ ಸಾವುಗಳಿಗೂ ಕೋವಿಡ್ಗೂ ಕಾರಣವಿರಬಹುದು ಎಂದು ಹೇಳುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅಧ್ಯಯನ ವರದಿಯ ಬಳಿಕ ಸರ್ಕಾರ ಇಂಥದೊಂದು ವಿಚಾರವನ್ನು ಹೇಳತೊಡಗಿದೆ.
ಕೋವಿಡ್ ಬಳಿಕ ದೇಶದಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚಿರುವುದನ್ನು ಐಸಿಎಂಆರ್ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಯುವಜನರು ಕೋವಿಡ್ ಕಾರಣದ ಹಠಾತ್ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಕೋವಿಡ್ ಪರಿಣಾಮವೇ ಆಗಿರಬಹುದು ಎಂಬುದನ್ನು ಈಗ ಸರ್ಕಾರ ಅಲ್ಲಗಳೆಯಲು ಸಾಧ್ಯವಿಲ್ಲ.
ಹಾಗಾಗಿಯೇ ಸರ್ಕಾರ ಈಗ ಕೋವಿಡ್ ಬಾಧಿತರು ಹೆಚ್ಚು ದೈಹಿಕ ಶ್ರಮದ ಕೆಲಸಗಳಿಂದ ದೂರವಿರುವಂತೆ ಸಲಹೆ ನೀಡುತ್ತಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯ, ಕೋವಿಡ್ ಬಾಧಿತರು ಕನಿಷ್ಠ 1 ರಿಂದ 2 ವರ್ಷಗಳ ಕಾಲ ಶ್ರಮದ ಕೆಲಸಗಳಿಂದ ದೂರವಿರುವುದು ಸೂಕ್ತ. ಅತಿಯಾದ ಕೆಲಸ, ವಿಪರೀತ ಓಟ, ಅತಿಯಾದ ವ್ಯಾಯಾಮ ಬೇಡ ಎಂದಿದ್ದಾರೆ.
ಈಚೆಗೆ ಗುಜರಾತ್ನಲ್ಲಿ ಗರ್ಬಾ ನೃತ್ಯ ಕಾರ್ಯಕ್ರಮದ ವೇಳೆ ಕೇವಲ 24 ಗಂಟೆಗಳಲ್ಲಿ 10 ಮಂದಿ ಸಾವನ್ನಪ್ಪಿದ ಆಘಾತಕಾರಿ ಸನ್ನಿವೇಶದ ಬಳಿಕ ಮಾಂಡವೀಯ, ಐಸಿಎಂಆರ್ ಅಧ್ಯಯನದ ವರದಿ ಬಗ್ಗೆ ಬಾಯ್ಬಿಟ್ಟಿದ್ದಾರೆ. ಹೃದಯಾಘಾತಕ್ಕೆ ಬಲಿಯಾಗಿ ಮೃತಪಟ್ಟ 10 ಮಂದಿಯಲ್ಲಿ ಅತ್ಯಂತ ಕಿರಿಯರೆಂದರೆ 17 ವರ್ಷದವರು. ಬರೀ 17ರ ಹರೆಯದಲ್ಲಿ ಹೃದಯಾಘಾತವೆಂದರೆ ಹೇಗೆ ನಂಬುವುದು?
ಇಂಥದೇ ಪ್ರಶ್ನೆಗಳು ಕೋವಿಡ್ ನಂತರದ ದಿನಗಳಲ್ಲಿ ಕಿರಿಯ ವಯಸ್ಸಿನವರಲ್ಲಿ ಹೃದಯಾಘಾತಗಳು ಹೆಚ್ಚು ಸಂಭವಿಸತೊಡಗಿದಾಗಲೂ ಎದ್ದಿದ್ದವು. ಕೋವಿಡ್ ಅಥವಾ ಕೋವಿಡ್ ಲಸಿಕೆಯ ಬಗ್ಗೆ ಅನುಮಾನಗಳು ಎದ್ದಿದ್ದವು. ಆಗ ನಿರಾಕರಿಸುತ್ತಲೇ ಬಂದ ಸರ್ಕಾರ ಈಗ ನಿಧಾನವಾಗಿ ಐಸಿಎಂಆರ್ ಸಂಶೋಧನೆಯನ್ನು ಮುಂದಿಡುತ್ತಾ, ಕೋವಿಡ್ ಬಾಧಿತರು ಹೆಚ್ಚು ಶ್ರಮದ ಕೆಲಸ ಮಾಡಬೇಡಿ ಎನ್ನಲು ಶುರು ಮಾಡಿದೆ. ಅದೂ ಗುಜರಾತ್ನಲ್ಲಿ 24 ಗಂಟೆಗಳಲ್ಲಿ 10 ಮಂದಿ ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಂತೆ ಈ ವರದಿ ವಿಚಾರ ಮುನ್ನೆಲೆಗೆ ಬಂದಿದೆ.
ಐಸಿಎಂಆರ್ ವರದಿ ಹೇಳಿರುವುದೇನು?
ಕೋವಿಡ್ ಬಾಧಿತರು ಹೆಚ್ಚಿನ ದೈಹಿಕ ಶ್ರಮದಿಂದ ದೂರವಿರಬೇಕು. ಕೋವಿಡ್ ನಂತರದಲ್ಲಿ ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಎಚ್ಚರದಿಂದಿರಬೇಕಾಗಿರುವುದು ಅಗತ್ಯ. ಕೋವಿಡ್ ನ ದೀರ್ಘಕಾಲಿಕ ಪರಿಣಾಮಗಳ ಬಗ್ಗೆ ಇನ್ನೂ ಏನೂ ಹೆಚ್ಚಾಗಿ ತಿಳಿದಿಲ್ಲ. ಹೃದಯಾಘಾತಗಳು ಹೆಚ್ಚುತ್ತಿರುವುದು ದೀರ್ಘಕಾಲಿಕ ಕೋವಿಡ್ ಪರಿಣಾಮವೇ ಅಥವಾ ಕೋವಿಡ್ಗೆ ನೀಡಲಾಗುವ ಚಿಕಿತ್ಸೆಯ ಅಡ್ಡ ಪರಿಣಾಮವೆ ಎಂಬುದು ಇನ್ನೂ ಗೊತ್ತಾಗಬೇಕಿದೆ. ಆದರೆ, ಅತಿ ಹೆಚ್ಚು ಕೆಲಸ ಮಾಡುವ ಭಾರತೀಯರ ಪಾಲಿಗೆ ಈ ಅಧ್ಯಯನ ಹೊರಗೆಡಹಿರುವ ವಿಚಾರ ಒಂದು ಎಚ್ಚರಿಕೆಯಾಗಿದೆ. ಏಕೆ ಯುವಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ?. ಇದಕ್ಕೆ ಐಸಿಎಂಆರ್ ಕೊಡುತ್ತಿರುವ ಕಾರಣಗಳು ಹೀಗಿವೆ:
-ಕುಟುಂಬದಲ್ಲಿ ಹಠಾತ್ ಮರಣಕ್ಕೆ ತುತ್ತಾಗಿರುವ ಪ್ರಕರಣಗಳು
-ಕೋವಿಡ್ ಬಾಧಿತರಾಗಿ ಚಿಕಿತ್ಸೆ ಪಡೆದಿರುವುದು
-ಮದ್ಯಸೇವನೆ ಪರಿಣಾಮ
-ಅತಿ ಹೆಚ್ಚು ದೈಹಿಕ ಕೆಲಸ
ಕೋವಿಡ್ ಹೃದಯಕ್ಕೆ ಹಾನಿ ಉಂಟುಮಾಡುತ್ತದೆಯೆ?
ಹೌದು ಎನ್ನುತ್ತಾರೆ ಜಾನ್ ಹಾಪ್ಕಿನ್ಸ್ ಹೃದ್ರೋಗ ತಜ್ಞರು. ಕೋವಿಡ್ ಪ್ರಾಥಮಿಕವಾಗಿ ಉಸಿರಾಟ ಇಲ್ಲವೆ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಯಾದರೂ, ಹೃದಯ ಕೂಡ ಅದರಿಂದ ಹಾನಿಗೊಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೃದಯ ಅಂಗಾಂಶಕ್ಕೆ ತಾತ್ಕಾಲಿಕ ಅಥವಾ ಶಾಶ್ವತವಾದ ಹಾನಿಯಾಗುವುದಕ್ಕೆ ಹಲವಾರು ಅಂಶಗಳು ಕಾರಣವಾಗಬಹುದು. ಅವುಗಳಲ್ಲಿ ಆಮ್ಲಜನಕದ ಕೊರತೆಯೂ ಒಂದು. ಆಮ್ಲಜನಕದ ಕೊರತೆಯಾದಾಗ ದೇಹದ ಮೂಲಕ ರಕ್ತವನ್ನು ಪಂಪ್ ಮಾಡಲು ಹೃದಯ ಹೆಚ್ಚು ಶ್ರಮಿಸಬೇಕಾಗುತ್ತದೆ. ಇದು ಮೊದಲೇ ಹೃದ್ರೋಗ ಹೊಂದಿರುವವರಲ್ಲಿ ಅಪಾಯಕಾರಿ. ಅತಿಯಾದ ಕೆಲಸದಿಂದ ಹೃದಯ ವಿಫಲವಾಗಬಹುದು.
ಅಥವಾ ಆಮ್ಲಜನಕದ ಕೊರತೆ ಜೀವಕೋಶದ ನಾಶ ಮತ್ತು ಹೃದಯ ಮತ್ತಿತರ ಅಂಗಗಳಲ್ಲಿ ಅಂಗಾಂಶ ಹಾನಿಯನ್ನು ಉಂಟುಮಾಡಬಹುದು.
ಕೋವಿಡ್ ಬಾಧಿತರು ಅಸಮರ್ಪಕ ಹೃದಯ ಬಡಿತದ ಬಗ್ಗೆ ಈಗಲೂ ವೈದ್ಯರಲ್ಲಿ ದೂರು ಹೇಳಿಕೊಳ್ಳುತ್ತಲೇ ಇದ್ದಾರೆಂಬುದು ಗಮನಿಸಬೇಕಿರುವ ಸಂಗತಿ.
ತಜ್ಞರು ನೀಡುತ್ತಿರುವ ಪ್ರಮುಖ ಸಲಹೆಗಳು:
►ವಿಶ್ರಾಂತಿ ಬೇಕೆನ್ನಿಸುತ್ತಿದ್ದರೆ ಅದನ್ನು ಅಲಕ್ಷಿಸಬೇಡಿ.
ಸಮತೋಲಿತ ಆಹಾರ ಸೇವಿಸಿ.
► 7ರಿಂದ 8 ತಾಸುಗಳ ನಿದ್ದೆ ಅವಶ್ಯ ಎಂಬುದನ್ನು ಮರೆಯಬೇಡಿ.
► ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುತ್ತಿರಿ.
► ಹಬ್ಬಗಳ ಹೊತ್ತಿನಲ್ಲಿ ಅನಗತ್ಯ ಶ್ರಮಕ್ಕೆ ಎಡೆಮಾಡಿಕೊಡಬೇಡಿ.
ಇಲ್ಲಿಯವರೆಗೆ, ಹಠಾತ್ ಹೃದಯಾಘಾತದ ಸಾವುಗಳಿಗೆ ಕೋವಿಡ್ ಕಾರಣವಲ್ಲ ಎನ್ನುತ್ತಿದ್ದ ಸರ್ಕಾರ, ಈಗ ಮೊದಲ ಬಾರಿಗೆ, ಕೋವಿಡ್ ಕಾರಣ ಇರಬಹುದು ಎನ್ನತೊಡಗಿದೆ.
ಆದರೆ, ಕೋವಿಡ್ ಲಸಿಕೆ ಖಂಡಿತ ಕಾರಣವಲ್ಲ ಎಂಬ ವರಸೆಯನ್ನು ಹಾಗೆಯೇ ಮುಂದುವರಿಸಿದೆ. ಮುಂದೊಂದು ದಿನ ಮತ್ತೆ ಹೇಗೆ ಮಾತು ಬದಲಿಸುತ್ತದೆಯೊ ಗೊತ್ತಿಲ್ಲ. ಆದರೆ, ಈಗ ಸರ್ಕಾರ ಅಥವಾ ಐಸಿಎಂಆರ್ ನಂತಹ ಸಂಸ್ಥೆಗಳು ತುರ್ತಾಗಿ ಮಾಡಬೇಕಿರುವ ಮುಖ್ಯ ಕೆಲಸಗಳು ಬಹಳಷ್ಟಿವೆ.
ಕೋವಿಡ್ ಹಠಾತ್ ಸಾವಿಗೆ ಹೇಗೆ ಕಾರಣ ಆಗುತ್ತಿದೆ?. ಯಾವುದೋ ಒಂದು ನಿರ್ದಿಷ್ಟ ರಕ್ತದ ಗುಂಪು ಅಥವಾ ಜೀನ್ ಇತ್ಯಾದಿ ಯಾವುದಾದರೂ ಹಿನ್ನೆಲೆ ಇರುವವರಿಗೆ ಆಗುತ್ತಿದೆಯೇ ಅಥವಾ ಯಾವುದಾದರೂ ಜೀವನಶೈಲಿ, ಆಹಾರ, ನಿರ್ದಿಷ್ಟ ವಯಸ್ಸಿನವರಲ್ಲಿ ಆಗುತ್ತಿದೆಯೆ?
ಇದಲ್ಲದೆ, ಬೇರೇನಾದರೂ ಇಲ್ಲಿಯ ತನಕ ಗೊತ್ತಾಗಿರದ ಕಾರಣಗಳಿವೆಯೆ?. ಇಂಥ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಿವರವಾಗಿ ಅಧ್ಯಯನಕ್ಕೆ ಒಳಪಡಿಸುವುದು ಅವಶ್ಯ. ಆ ಮೂಲಕ, ಮುಂದಿನ ದಿನಗಳಲ್ಲಿ ಸಾಯಬಹುದಾದ ಜೀವಗಳ ರಕ್ಷಣೆಗೆ ವೈದ್ಯಕೀಯವಾಗಿ ಏನು ಮಾಡಬೇಕು ಎಂಬುದನ್ನು ಕಂಡುಕೊಳ್ಳಲು ಸಾಧ್ಯವಿದೆ.ಮತ್ತಿದು ಬಹಳ ತುರ್ತಾಗಿ ಆಗಬೇಕಿರುವ ಕೆಲಸವೂ ಹೌದು. ಯಾಕೆಂದರೆ ಹಠಾತ್ ಸಾವಿಗೆ ತುತ್ತಾಗುತ್ತಿರುವ ಎಳೆಯ ಜೀವಗಳನ್ನು ಉಳಿಸಬೇಕಿದೆ.
ಜನ ಸಾಯಲು ಕಾರಣವೇನು ಎಂಬುದಕ್ಕಿಂತಲೂ, ಸಾಯುವವರನ್ನು ಹೇಗೆ ಬದುಕಿಸಬಹುದು ಎಂಬುದು ಆದ್ಯತೆಯ ವಿಚಾರವಾಗಬೇಕು. ಯಾಕೆಂದರೆ, ಸರ್ಕಾರಗಳಿರುವುದು ಎಲ್ಲ ಮುಗಿದ ಮೇಲೆ ಪೋಸ್ಟ್ ಮಾರ್ಟಂ ಮಾಡುವುದಕ್ಕಲ್ಲ; ಜನರ ಜೀವ ರಕ್ಷಣೆ ಸರಕಾರದ ಹೊಣೆಗಾರಿಕೆ.
ಕೋವಿಡ್ ಕುರಿತು ಇತ್ತೀಚೆಗೆ ಮಾಡಿರುವ ಎಲ್ಲ ಅಧ್ಯಯನಗಳನ್ನು ಐಸಿಎಂಆರ್ ಸಾರ್ವಜನಿಕರಿಗೆ ಮತ್ತು ವೈದ್ಯಕೀಯ ರಂಗಕ್ಕೆ ಸಿಗುವಂತೆ ಮಾಡಬೇಕು.
ದೇಶದ ಎಲ್ಲ ಕಡೆ ಡೀಮ್ಡ್ ವಿವಿಗಳು, ರಾಜ್ಯಗಳ ವೈದ್ಯಕೀಯ ಸಂಶೋಧನಾ ಕೇಂದ್ರಗಳು ಇತ್ಯಾದಿ ಸಂಸ್ಥೆಗಳ ಖಾಸಗಿ ಸಂಶೋಧನೆಗಳೂ ಈ ವಿಚಾರದಲ್ಲಿ ತ್ವರಿತವಾಗಿ ಇನ್ನಷ್ಟು ಅಧ್ಯಯನ ನಡೆಸಬೇಕಿದೆ. ಇನ್ನು ಮುಂದೆ ಸಂಭವಿಸುವ ಪ್ರತಿಯೊಂದು ಹಠಾತ್ ಸಾವೂ ಕೂಡ ವಿವರವಾದ ಪರೀಕ್ಷೆಗೆ ಮತ್ತು ಸಮಗ್ರ ಅಧ್ಯಯನಕ್ಕೆ ಒಳಪಡಬೇಕು.
ಈ ಕೆಲಸದಲ್ಲಿ ರಾಜ್ಯ ಸರ್ಕಾರಗಳ ಜವಾಬ್ದಾರಿ ಕೂಡ ಬಹಳ ಇದೆ. ಪ್ರತಿಯೊಂದು ಹಠಾತ್ ಸಾವಿನ ಸಮಗ್ರ ಅಧ್ಯಯನಕ್ಕೆ ರಾಜ್ಯ ಸರ್ಕಾರಗಳು ಕ್ರಮ ಕೈಗೊಳ್ಳಬೇಕಿದೆ. ಹೃದಯಾಘಾತ ಮಾತ್ರವಲ್ಲದೇ ಪಾರ್ಶ್ವವಾಯು, ರಕ್ತದೊತ್ತಡ, ರಕ್ತಪರಿಚಲನೆಯಲ್ಲಿನ ತೊಂದರೆಗಳು, ಹೃದಯ ಮತ್ತು ನರವ್ಯವಸ್ಥೆಯ ತೊಂದರೆಗಳು, ಅಲರ್ಜಿಗಳು ಇತ್ಯಾದಿಗಳ ಬಗ್ಗೆಯೂ ವಿವರ ಅಧ್ಯಯನಗಳು ಆಗಬೇಕು.
ಇಂಥ ಲಕ್ಷಣಗಳೆಲ್ಲ ಕೋವಿಡ್ ಅಡ್ಡಪರಿಣಾಮಗಳು ಮತ್ತು ದೀರ್ಘಕಾಲಿಕ ಕೋವಿಡ್ ಪರಿಣಾಮಗಳು ಎಂಬುದು ಜಗತ್ತಿನ ಬೇರೆ ಬೇರೆ ಕಡೆ ಈಗಾಗಲೇ ಅಧ್ಯಯನವಾಗಿದೆ. ಇವೆಲ್ಲದರ ಜೊತೆಗೇ, ಕೋವಿಡ್ ಲಸಿಕೆಯ ಪರಿಣಾಮಗಳ ಬಗ್ಗೆಯೂ ಇಷ್ಟೇ ವಿವರವಾದ ಅಧ್ಯಯನ ಅಗತ್ಯವಿದೆ. ಅದು ಆಗಲೇಬೇಕು.
ಕೋವಿಡ್ ಹೊತ್ತಿನಲ್ಲೂ ಜನರ ಸಾವುಗಳನ್ನು ಗಂಭೀರವಾಗಿ ತೆಗೆದುಕೊಳ್ಳದೆ, ಈ ಸರ್ಕಾರ ತನ್ನ ಪ್ರತಿಷ್ಠೆಯನ್ನು ದೊಡ್ಡದು ಮಾಡಿಕೊಂಡು ಕೂತಿತ್ತು ಮತ್ತು ಅದಕ್ಕಾಗಿ ಟೀಕೆಗಳಿಗೂ ತುತ್ತಾಗಿತ್ತು. ಕೋವಿಡ ಲಸಿಕೆ ಹಂಚುವ ವಿಚಾರವನ್ನೂ ಚುನಾವಣಾ ಲಾಭಕ್ಕೆ ಬಳಸುವ ಕೆಲಸ ಮಾಡಿತ್ತು.
ಕೋವಿಡ್ ಹೊತ್ತಿನ ಅವ್ಯವಸ್ಥೆಗಳನ್ನು ಪ್ರಶ್ನಿಸಿದವರನ್ನು ಇವತ್ತಿನವರೆಗೂ ಅದು ಅನುಮಾನದ ಕಣ್ಣಿಂದಲೇ ನೋಡುತ್ತಿದೆ. ಇಂಥ ಬೇಡದ ಅಪಸವ್ಯಗಳನ್ನು, ಅಹಮ್ಮು ಮತ್ತು ಅನುಮಾನಗಳನ್ನು ಬದಿಗಿಟ್ಟು, ಜನರ ಜೀವದ ಪ್ರಶ್ನೆಯನ್ನು ಅದು ಮುಖ್ಯವಾಗಿ ತೆಗೆದುಕೊಳ್ಳಬೇಕಿದೆ.
ಪ್ರತಿಯೊಂದರಲ್ಲೂ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಬದಿಗಿಟ್ಟು ಜನರ ಜೀವ ಉಳಿಸಲು ಕಟು ವಾಸ್ತವಗಳನ್ನು ಮೊದಲು ಒಪ್ಪಿಕೊಳ್ಳಬೇಕಿದೆ, ಅದನ್ನು ಜನರಿಗೆ ತಿಳಿಸಬೇಕಾಗಿದೆ, ಎಲ್ಲ ವೈಜ್ಞಾನಿಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ ಹಾಗು ಜನರಿಗೆ ಈ ಬಗ್ಗೆ ಮುಕ್ತವಾಗಿ ಮಾಹಿತಿ ನೀಡಬೇಕಾಗಿದೆ.