ಸುರಪುರ | ಕಿರದಳ್ಳಿ ತಾಂಡಾಕ್ಕೆ ಕುಡಿಯುವ ನೀರು ಪೂರೈಸಲು ಆಗ್ರಹ
ಯಾದಗಿರಿ: ಸುರಪುರ ತಾಲ್ಲೂಕಿನ ಹೆಗ್ಗಣದೊಡ್ಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಿರದಳ್ಳಿ ತಾಂಡಾ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಕೂಡಲೇ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಜಯಕರ್ನಾಟಕ ರಕ್ಷಣಾ ಸೇನೆ ಸಂಘಟನೆ ಮುಖಂಡರು ನಗರದ ತಾಲ್ಲೂಕು ಪಂಚಾಯತ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಿರದಳ್ಳಿ ತಾಂಡಾದಲ್ಲಿ ಕುಡಿಯುವ ನೀರಿಗಾಗಿ ಜನರು ತುಂಬಾ ತೊಂದರೆ ಪಡುವಂತಾಗಿದೆ, ಈಗಾಗಲೇ ಹೆಗ್ಗಣದೊಡ್ಡಿ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪ್ರಯೋಜನೆಯಾಗಿಲ್ಲ, ಅಲ್ಲದೆ ಗ್ರಾಮ ಪಂಚಾಯತ್ ಗೆ ಬರುವ ಯಾವುದೇ ಅನುದಾನದ ಬಗ್ಗೆ ಜನರಿಗೆ ಮಾಹಿತಿ ನೀಡದೆ, ಕೇಳಿದವರ ಮೇಲೆ ದರ್ಪ ತೋರುತ್ತಾರೆ. ಕಿರದಳ್ಳಿ ತಾಂಡಾಕ್ಕೆ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಮತ್ತು ಹೆಗ್ಗಣದೊಡ್ಡಿ ಗ್ರಾಮ ಪಂಚಾಯತ್ ಅಭಿವೃಧ್ಧಿ ಅಧಿಕಾರಿಯನ್ನು ಅಮಾನತು ಮಾಡಬೇಕು ಇಲ್ಲದಿದ್ದಲ್ಲಿ ಡಿ.9 ರಂದು ಹೆಗ್ಗಣದೊಡ್ಡಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಬರೆದ ಮನವಿಯನ್ನು ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಂಘಟನೆ ತಾಲ್ಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರಾ,ಕಾರ್ಯಾಧ್ಯಕ್ಷ ಶಿವರಾಜ ವಗ್ಗಾರ್, ಕಾರ್ಯದರ್ಶಿ ಕೃಷ್ಣಾ ಹಾವಿನ್, ರೈತ ಘಟಕದ ಅಧ್ಯಕ್ಷ ಧನರಾಜ ರಾಠೋಡ್, ಆಟೋ ಚಾಲಕರ ಸಂಘದ ಅಧ್ಯಕ್ಷ ಹಣಮಂತ ಭಂಡಾರಿ, ನಗರ ಘಟಕದ ಅಧ್ಯಕ್ಷ ಶಿವಕುಮಾರ ದಿವಳಗುಡ್ಡ, ಗೌರವಾಧ್ಯಕ್ಷ ಹಣಮಂತ ಶುಕ್ಲ, ಸಾಬಣ್ಣ ಕೋಟೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.