ಯಾದಗಿರಿ | ಬೈಕ್ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಯಾದಗಿರಿ: ಕಳ್ಳತನ ಪ್ರಕರಣವನ್ನು ಭೇದಿಸಿದ ನಗರದ ಪೊಲೀಸ್ ಅಧಿಕಾರಿಗಳ ತಂಡ 7 ಲಕ್ಷ ರೂ. ಗೂ ಅಧಿಕ ಮೌಲ್ಯದ 22 ಬೈಕ್ ಗಳನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಥ್ವಿಕ್ ಶಂಕರ್ ತಿಳಿಸಿದ್ದಾರೆ.
ಶನಿವಾರ ಸಂಜೆ ನಗರ ಪೊಲೀಸ್ ಠಾಣೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಲಬುರಗಿ ತಾಲೂಕಿನ ಆಜಾದಪುರದ ಬಾಲಾಜಿ ಹಾಗೂ ಆಳಂದ ತಾಲೂಕಿನ ಯಳಸಂಗಿಯ ಗುರುಶಾಂತ ಎಂಬ ಅರೋಪಿಗಳನ್ನು ಬಂಧಿಸಿಲಾಗಿದೆ. ಆರೋಪಿಗಳು ಕಳೆದ ಎರಡು ವರ್ಷಗಳಿಂದ ಬೈಕ್ ಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪ್ರಥ್ವಿಕ್ ಶಂಕರ್ ಹೇಳಿದ್ದಾರೆ.
ವಿವರ: ಕಳೆದ ಮೇ 29ರಂದು ಇಲ್ಲಿನ ರೈಲ್ವೆ ಸ್ಟೇಷನ್ ಮುಂದೆ ಕುಮಲಯ್ಯ ಕಾವಲಿ ಎಂಬವರು ನಿಲ್ಲಿಸಿದ್ದ ದ್ವಿಚಕ್ರ ವಾಹನ ಕಳ್ಳತನವಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದರ ಪತ್ತೆಗೆ ತಮ್ಮ ಹಾಗೂ ಹೆಚ್ಚುವರಿ ಎಸ್ ಪಿ ಧರಣೇಶ, ಡಿವೈಎಸ್ ಪಿ ಅರುಣಕುಮಾರ ಕೊಳುರು ಮಾರ್ಗದರ್ಶನದಲ್ಲಿ ಸಿಪಿಐ ಸುನೀಲ ಮೂಲಿಮನಿ ಹಾಗೂ ಪಿಎಸ್ ಐ ಮಂಜನಗೌಡ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡ ತನ್ನ ಸಿಬ್ಬಂದಿಯೊಂದಿಗೆ ಎಲ್ಲೆಡೆ ತನಿಖೆ ನಡೆಸಿ ಈ ಇಬ್ಬರು ಆರೋಪಿಗಳಿಂದ 22 ಬೈಕ್ ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇದರಲ್ಲಿ ಯಾದಗಿರಿ ನಗರದ ಏಳು ಮತ್ತು ಕಲಬುರಗಿ ಸೇರಿದಂತೆಯೇ ವಿವಿಧಡೆ ಕಳ್ಳತನವಾಗಿರುವ ಬೈಕ್ ಗಳು ಸೇರಿವೆ. ಜೂಜಾಟ ಚಟಕ್ಕೆ ಅಂಟಿಕೊಂಡಿರುವ ಈ ಆರೋಪಿಗಳು ಅಲ್ಲಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದರೆಂಬ ಮಾಹಿತಿ ಇದೆ ಎಂದು ಅವರು ಹೇಳಿದರು.
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಮೋನಪ್ಪ, ಜಗನ್ಮಾಥರಡ್ಡಿ, ದಾವಲಸಾಬ್, ವೆಂಕಟೇಶ್, ಗೋವಿಂದ ಇದ್ದರು. ಯಾದಗಿರಿ ನಗರದ ಪೊಲೀಸರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದೆ ಎಂದು ಎಸ್ ಪಿ ಹೇಳಿದರು.
ಬಂಧಿತ ಆರೋಪಿಗಳ ವಿರುದ್ಧ ಕಲಬುರಗಿ ಚೌಕ್, ಬ್ರಹ್ಮಪುರ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿವೆ ಎಂದರು.
ನಗರದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಕೆಕೆಆರ್ ಡಿಬಿಯಿಂದ 53 ಲಕ್ಷ ರೂ. ಅನುದಾನ ಮಂಜೂರು ಆಗಿದೆ. ನಗರ ಠಾಣೆಯಲ್ಲಿ ಒಂದು ಕಂಟ್ರೋಲ್ ರೂಂ. ಮಾಡಲಾಗುವುದು. ಗಾಂಧಿ ಚೌಕ್ ನಲ್ಲಿ ನಿರ್ಮಾಣಗೊಂಡಿರುವ ಪೊಲೀಸ್ ಠಾಣೆ ಕೆಲವೇ ದಿನಗಳಲ್ಲಿ ಲೋಕಾರ್ಪಣೆ ಮಾಡಲಾಗುವುದು. ನಗರದ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಶಾಲೆಗಳ ಸಮೀಪದಲ್ಲಿ ವೈಜ್ಞಾನಿಕವಾದ ಹಂಪ್ ಅಳವಡಿಸಿ ಶಾಲಾ ಮಕ್ಕಳ ಸುರಕ್ಷತೆ ಕಾಪಾಡಲಾಗುವುದು.
ಪ್ರಥ್ವಿಕ್ ಶಂಕರ್, ಎಸ್.ಪಿ. ಯಾದಗಿರಿ.