ಯಾದಗಿರಿ | ಬೆಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ
ಯಾದಗಿರಿ : ಸುರಪುರ ತಾಲ್ಲೂಕಿನ ಯಾವುದೇ ಗ್ರಾಮಗಳಲ್ಲಿ ಮಳೆಯಿಂದ ಬೆಳೆ ಹಾನಿಯಾದ ರೈತರ ಜಮೀನುಗಳಿಗೆ ಭೇಟಿ ನೀಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ತಿಳಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಸುರಿದ ಮಳೆಗೆ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿನ ರೈತರ ಜಮೀನುಗಳಲ್ಲಿ ಭತ್ತ, ಹತ್ತಿ ಇತರೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಈ ಹಿಂದೆ ಅಕ್ಟೋಬರ್-ನವೆಂಬರ್ ವರೆಗೆ ಬೆಳೆ ಹಾನಿಯಾದ ಬಗ್ಗೆ ವರದಿ ಸಲ್ಲಿಸಿದ್ದೀರಿ, ಆದರೆ ಈಗ ಮತ್ತೆ ಬೆಳೆ ಹಾನಿಯಾಗಿದ್ದರಿಂದ ಮೊದಲು ಸಲ್ಲಿಸಿದ ವರದಿಗೆ ರೈತರ ತಕರಾರು ನಮೂದಿಸಿ ಮತ್ತೆ ಈಗ ಬೆಳೆ ಹಾನಿಯಾದ ಕುರಿತು ವರದಿ ಸಲ್ಲಿಸಿ ಯಾವುದೇ ರೈತರ ಜಮೀನು ಬಿಟ್ಟು ಹೋಗದಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಸತ್ಯಂಪೇಟೆ ಗ್ರಾಮದ ರೈತರ ಜಮೀನುಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸತ್ಯಂಪೇಟೆ ಅವರು ತಮ್ಮ ಜಮೀನುಗಳಲ್ಲಿನ ಬೆಳೆ ಹಾನಿಯಾದ ಸ್ಥಳಕ್ಕೆ ಜಿಲ್ಲಾಧಿಕಾರಿಗಳನ್ನು ಕರೆದುಕೊಂಡು ಹೋಗಿ ತೋರಿಸಿ ಮಾತನಾಡಿ, ಎರಡು ದಿನಗಳ ಹಿಂದೆ ಸುರಿದ ಮಳೆಗೆ 10 ಎಕರೆ ನನ್ನ ಜಮೀನು ಸೇರಿದಂತೆ ಈ ಭಾಗದ ರೈತರ ಸುಮಾರು ಐದು ನೂರು ಎಕರೆಗಿಂತಲೂ ಹೆಚ್ಚಿನ ಪ್ರದೇಶದಲ್ಲಿ ಬೆಳೆದ ಭತ್ತದ ಬೆಳೆ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡಿ ವರದಿ ಸಲ್ಲಿಸುವಂತೆ ಮನವಿ ಮಾಡಿದರು.
ನಂತರ ತಾಲ್ಲೂಕಿನ ದೇವಾಪುರ ಗ್ರಾಮ ಹಾಗೂ ನಾಗರಾಳ ಗ್ರಾಮಗಳ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿಯನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಹುಸೇನಸಾಬ್ ಎ.ಸರಕಾವಸ್, ಕೃಷಿ ಇಲಾಖೆ ಎ.ಡಿ ಭೀಮರಾಯ ಹವಾಲ್ದಾರ್, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಕಂದಾಯ ಇಲಾಖೆ ಇಎಲ್ಸಿ ಅಶೋಕ ಸೊನ್ನದ್, ವಿಎ ಮಲ್ಲಮ್ಮ ಮತ್ತಿತರರು ಉಪಸ್ಥಿತರಿದ್ದರು.