ಯಾದಗಿರಿ | ಸಾಹಿತಿ ನಾ ಡಿಸೋಜಾ ನಿಧನಕ್ಕೆ ಕಸಾಪ ಸಂತಾಪ
ಯಾದಗಿರಿ/ ಸುರಪುರ : ಹಿರಿಯ ಸಾಹಿತಿ ಡಾ.ನಾ ಡಿಸೋಜಾ ಅವರು ಸರಳ ವ್ಯಕ್ತಿತ್ವದ ನಿಗರ್ವಿ ಸಾಹಿತಿ ಆಗಿದ್ದರು. ಪರಿಸರ ಪ್ರೇಮಿಗಳಾಗಿದ್ದ ಅವರ ಕಥೆ ಕಾದಂಬರಿಗಳಲ್ಲಿ ತಮ್ಮ ಸಾಹಿತ್ಯದ ಮೂಲಕ ಕಾರ್ಮಿಕರ ಬವಣೆ ಹಾಗೂ ಪರಿಸರ ಕುರಿತು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದರು ಎಂದು ಹಿರಿಯ ಸಾಹಿತಿ ಶ್ರೀನಿವಾಸ ಜಾಲವಾದಿ ಹೇಳಿದರು.
ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಿರಿಯ ಸಾಹಿತಿ ಡಾ.ನಾ ಡಿಸೋಜಾ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಏರ್ಪಡಿಸಿದ್ದ ನುಡಿ ನಮನ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಶರಣಬಸವ ಯಾಳವಾರ ಮಾತನಾಡಿ, 79 ಕೃತಿಗಳನ್ನು ನೀಡುವ ಮೂಲಕ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಅವರ ಕಥೆ ಕಾದಂಬರಿಗಳು ಚಲನಚಿತ್ರ ಹಾಗೂ ನಾಟಕಗಳಲ್ಲಿ ಪ್ರದರ್ಶನಗೊಂಡು ರಾಷ್ಟಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿವೆ ಎಂದರು.
ಸಾಹಿತಿ ನಬೀಲಾಲ್ ಮಕಾನದಾರ, ರಮೇಶ ದೊರೆ, ಪ್ರಕಾಶ ಅಲಬನೂರು, ಶ್ರೀಶೈಲ ಯಂಕಂಚಿ, ವೆಂಕಟೇಶ ಬೇಟೆಗಾರ,ನ್ಯಾಯವಾದಿ ಯಲ್ಲಪ್ಪ ಹುಲಿಕಲ್,ನಾಗರೆಡ್ಡಿ ಗೌಡಪ್ಪಗೋಳ, ಗಂಗಾಧರ ರುಮಾಲ ಇತರರಿದ್ದರು. ಹೆಚ್.ರಾಠೋಡ ನಿರೂಪಿಸಿದರು ವೆಂಕಟೇಶಗೌಡ ಪಾಟೀಲ ಸ್ವಾಗತಿಸಿದರು, ದೇವು ಹೆಬ್ಬಾಳ ವಂದಿಸಿದರು.