ಯಾದಗಿರಿ | ಜಿಲ್ಲೆಯ ಐವರು ರೈತರಿಗೆ ನೂತನ ಪಹಣಿ ವಿತರಣೆ
ಯಾದಗಿರಿ : ತಾಲೂಕಿನ 5 ಜನ ರೈತರಿಗೆ ಸೋಮವಾರ ಹೊಸ ಹಿಸ್ಸಾ ಸರ್ವೆ ನಂಬರ್ ನ ಪಹಣಿಯನ್ನು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಅವರು ವಿತರಿಸಿದರು.
ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹೊಸ ಪಹಣಿ ವಿತರಣೆ ಕುರಿತು ಸಭೆ ನಡೆಸಿ, ಯಾದಗಿರಿ ತಾಲೂಕಿನ ಕಿಲ್ಲನ್ ಕೇರಾ, ಗೌಡಗೇರಾ, ಬೊಮ್ಮರಾಲ್ ದೊಡ್ಡಿ, ಬಾಲಚೇಢ ರೈತರಿಗೆ ಜಮೀನಿನ ಪ್ರತ್ಯೇಕ ಪಹಣಿ ಪತ್ರಿಕೆ, ಫಾರ್ಮ್-10, ಆಕಾರ್ ಬಂದ್, ಸ್ಕೆಚ್ ನಕಾಶೆ ವಿತರಣೆ ಮಾಡಿದರು.
ಡಿಸಿ ಡಾ.ಸುಶೀಲ ಬಿ. ಮಾತನಾಡಿ, ರಾಜ್ಯ ಸರ್ಕಾರವು ದರಖಾಸ್ತು ಪೋಡಿ ವಿತರಣೆಗೆ ಸರಳೀಕರಣಗೊಳಿಸಿದ್ದರಿಂದ ಇಂದು ಈ ರೈತರಿಗೆ ಹೊಸ ಪಹಣಿ ದೊರೆಯುತ್ತಿದೆ ಎಂದು ಹೇಳಿದರು.
ಹಲವು ವರ್ಷದ ಸಮಸ್ಯೆಗೆ ಈಗಿನ ಸರ್ಕಾರ ಪರಿಹಾರ ನೀಡಿದೆ. ಇದರಿಂದ ಸಾಲ-ಸೌಲಭ್ಯ ಪಡೆಯಲು ಸಹಾಯವಾಗಲಿದೆ. ಎಲ್ಲದಕ್ಕೂ ಮಿಗಿಲಾಗಿ ನಮ್ಮ ಹೆಸರಿಗೆ ಪ್ರತ್ಯೇಕ ಪಹಣಿ, ಹಿಸ್ಸಾ ದಾಖಲೆಗಳು ಬಂದಿದ್ದು ತುಂಬಾ ಸಂತೋಷವಾಗಿದೆ ಎಂದು ರೈತರು ತಿಳಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ್, ಶರಣಗೌಡ ಕಂದಕೂರ, ಜಿ.ಪಂ.ಸಿಇಓ ರವೀಶ ಒರಡಿಯಾ, ತಹಶೀಲ್ದಾರ್ ಸುರೇಶ್ ಅಂಕಲಗಿ, ಎಡಿಎಲ್ಆರ್ ವೆಂಕಟೇಶ್ ಸೇರಿದಂತೆ ಕಂದಾಯ, ಭೂಮಾಪನಾ ಇಲಾಖೆಯ ಸಿಬ್ಬಂದಿಗಳು ಇದ್ದರು.