ಯಾದಗಿರಿ | ಬಾಲ್ಯ ವಿವಾಹದಿಂದಲೇ ಶಿಶು ಮರಣ ಹೆಚ್ಚಳ : ಶಶಿಧರ ಕೋಸುಂಬೆ
ಯಾದಗಿರಿ : ಬಾಲ್ಯ ವಿವಾಹದಿಂದಲೇ ಅಪ್ರಾಪ್ತೆ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಾಗಿ ಶಿಶು ಮರಣ ಪ್ರಮಾಣ ಹೆಚ್ಚುತ್ತಿದ್ದು, ಬಾಲ್ಯ ವಿವಾಹ ತಡೆಯುವುದೇ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕಿದೆ ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸುಂಬೆ ಹೇಳಿದರು.
ಮಂಗಳವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಯಾದಗಿರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ ಸೇರಿದಂತೆ ಇನ್ನಿತರ ಇಲಾಖೆಗಳ ಸಹಯೋಗದೊಂದಿಗೆ ʼಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಚನೆಯಾಗಿರುವ ವಿವಿಧ ಕಾನೂನುಗಳ ಕುರಿತುʼ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯದಲ್ಲಿ ಕಳೆದ 3-4 ವರ್ಷದಲ್ಲಿ ಬಾಲ್ಯ ವಿವಾಹದಿಂದ 1.60 ಲಕ್ಷ ಅಪ್ರಾಪ್ತರು ಗರ್ಭಿಣಿಯರಾಗಿದ್ದಾರೆ. ಕಳೆದ 3 ವರ್ಷದಲ್ಲಿ 2,079 ತಾಯಂದಿರು ಮರಣ ಹೊಂದಿದ್ದಾರೆ. ಅಪ್ರಾಪ್ತೆ ಕಾರಣ ದೈಹಿಕವಾಗಿ ಆರೋಗ್ಯ ಸದೃಢವಾಗಿಲ್ಲದಕ್ಕೆ ಮೂರು ವರ್ಷದೊಳಗಿನ 21 ಸಾವಿರ ಮಕ್ಕಳ ನಿರ್ಜೀವ ಜನನ ಜೊತೆ ಆರು ತಿಂಗಳೊಳಗಿನ 17 ಸಾವಿರ ಮಕ್ಕಳು ಅಸುನೀಗಿದ್ದಾರೆ. ಇದಕ್ಕೆಲ್ಲ ಮೂಲ ಕಾರಣ ಬಾಲ್ಯ ವಿವಾಹ. ಇದನ್ನು ಬೇರು ಸಮೇತ ಕಿತ್ತು ಹಾಕಬೇಕು. ಅರಿವು ಮತ್ತು ಜಾಗೃತಿಯಿಂದ ಇದನ್ನು ಹೋಗಲಾಡಿಸಬೇಕೆಂದು ಶಶಿಧರ ಕೋಸುಂಬೆ ಕರೆ ನೀಡಿದರು.
ಗ್ರಾಮ ಸಭೆ ಕರೆದು ಮಕ್ಕಳ ಸಮಸ್ಯೆ ಅಲಿಸಿ :
ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಆಯೋಗವು ನಿರಂತರವಾಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಗ್ರಾಮ ಸಭೆ ನಡೆಸಿ ಮಕ್ಕಳ ಸಮಸ್ಯೆ ಆಲಿಸಬೇಕು. ತಾಲ್ಲೂಕು-ಜಿಲ್ಲಾ ಹಂತದಲ್ಲಿ ಮಕ್ಕಳ ರಕ್ಷಣಾ ಸಮಿತಿಗಳು ಕಾಲ ಕಾಲಕ್ಕೆ ಸಭೆ ಕರೆದು ಮಕ್ಕಳ ಹಕ್ಕುಗಳ ರಕ್ಷಣೆ ನಿಟ್ಟಿನಲ್ಲಿ ಪರಿಣಾಮಕಾರಿ ಚರ್ಚೆ ನಡೆಸಿ ಅನುಷ್ಠಾನಕ್ಕೆ ತರಬೇಕೆಂದು ಶಶಿಧರ ಕೋಸುಂಬೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಮಕ್ಕಳ ವಿಷಯದಲ್ಲಿ ಉದಾಸೀನತೆ ಬೇಡ :
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಸಿ.ಇ.ಓ ಲವೀಶ್ ಒರಡಿಯಾ ಮಾತನಾಡಿ, ಮಕ್ಕಳು ಸ್ವಯಂ ರಕ್ಷಣೆ ಮಾಡಿಕೊಳ್ಳಲು ಶಕ್ತರಲ್ಲ. ಹೀಗಾಗಿ ಪಾಲಕ- ಪೋಷಕರು, ಶಿಕ್ಷಕರು ಮಕ್ಕಳ ಅವರ ರಕ್ಷಣೆಗೆ ಧಾವಿಸಬೇಕು. ಇದಕ್ಕಾಗಿ ಅನೇಕ ಕಾಯ್ದೆ, ಕಾನೂನು ಇವೆ. ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಅಪ್ರಾಪ್ತೆಯರ ಮೇಲಿನ ಅತ್ಯಾಚಾರ, ಮಕ್ಕಳ ಸಾಗಣೆದಂತಹ ಅನಿಷ್ಟ ಪದ್ಧತಿ ಹೋಗಲಾಡಿಸಲು ಮತ್ತು ತಡೆಗಟ್ಟಲು ಅಧಿಕಾರಿಗಳು ಬದ್ದತೆ ಪ್ರದರ್ಶಿಸಬೇಕು. ಮಕ್ಕಳ ವಿಷಯದಲ್ಲಿ ಉದಾಸೀನತೆ ಬೇಡ. ಇಲಾಖೆಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್.ಪಿ. ಪೃತ್ವಿಕ್ ಶಂಕರ, ಕೊಪ್ಪಳ ಡಿ.ಸಿ. ರಾಘವೇಂದ್ರ ಭಟ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಈರಣ್ಣಗೌಡ, ಜಿಲ್ಲಾ ಮಕ್ಕಳ ಹಕ್ಕುಗಳ ರಕ್ಷಣಾಧಿಕಾರಿ ಪ್ರೇಮಮೂರ್ತಿ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.