ಯಾದಗಿರಿ ನಗರದ ಐತಿಹಾಸಿಕ ಕೋಟೆ ಅಭಿವೃದ್ಧಿಗೆ 100 ಕೋಟಿ ರೂ. ಮಂಜೂರು : ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು
ಯಾದಗಿರಿ : ʼಒಂದು ಜಿಲ್ಲೆ, ಒಂದು ತಾಣ’ ಯೋಜನೆಯಡಿ ಯಾದಗಿರಿ ನಗರದ ಐತಿಹಾಸಿಕ ಕೋಟೆ ಅಭಿವೃದ್ಧಿಗೆ 100 ಕೋಟಿ ರೂ.ಸರ್ಕಾರ ಮಂಜೂರು ಮಾಡಿದೆ ಎಂದು ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಹೇಳಿದರು.
ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಸಕರ ಅನುದಾನ ಮತ್ತು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಮಾದರಿ ರೀತಿಯಲ್ಲಿ ಕೆಲಸ ಮಾಡಲು ನಿರ್ಧರಿಸಲಾಗಿದೆ ಎಂದರು. ಶಾಸಕರ ಅನುದಾನದಿಂದ 33 ಕೋಟಿ ರೂ. ಹಾಗೂ ಸರ್ಕಾರದ 67 ಕೋಟಿ ರೂ. ಹೀಗೆ ಒಟ್ಟು ನೂರು ಕೋಟಿ ರೂ. ಅನುದಾನದಲ್ಲಿ ಐತಿಹಾಸಿಕ ಕೋಟೆ ಅಭಿವೃದ್ಧಿ ಪಡಿಸಲು ಸರ್ಕಾರ ನಿರ್ಧರಿಸಿದೆ ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ಈ ಕೆಲಸ ಮಾಡಲಾಗುತ್ತದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ತಮ್ಮ ಅನುದಾನದಡಿ 33 ಕೋಟಿ ರೂ. ಈ ಕೆಲಸಕ್ಕೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗುವುದು. ಐತಿಹಾಸಿಕ ಕ್ಷೇತ್ರ ಮೈಲಾಪುರ ಮಲ್ಲಯ್ಯನ ದೇವಸ್ಥಾನದಲ್ಲಿ ರೋಪ್ ವೈ ನಿರ್ಮಾಣಕ್ಕೂ ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಈಗಾಗಲೇ ನಿರ್ಮಾಣದ ಖಾಸಗಿ ಏಜೆನ್ಸಿಯವರು ಸರ್ವೆ ಮಾಡಿಕೊಂಡು ಹೋಗಿದ್ದು, ಅದು ಕೂಡಾ ಮಾಡುವ ಮೂಲಕ ಭಕ್ತರಿಗೆ ಅನುಕೂಲ ಮಾಡಿಕೊಡಲಾಗುವುದೆಂದು ಹೇಳಿದರು.
ಕಳೆದ ಕೆಲ ತಿಂಗಳ ಹಿಂದೆ ಜಿಲ್ಲೆಗೆ ಆಗಮಿಸಿದ್ದ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರನ್ನು ನಗರದ ಐತಿಹಾಸಿಕ ಕೋಟೆಗೆ ಮತ್ತು ಮೈಲಾಪುರಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಆಗಬೇಕಾದ ಕೆಲಸಗಳ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಅದರಂತೆಯೇ ಮುಂದುವರೆದು ಇವುಗಳ ಅಭಿವೃದ್ಧಿಗೆ ಸತತವಾಗಿ ಸರ್ಕಾರದೊಂದಿಗೆ ಸತತ ಸಂಪರ್ಕ ಹೊಂದಿ ಈ ಕೆಲಸ ಮಾಡಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.