ಯಾದಗಿರಿ | ಪಂಚಗ್ಯಾರಂಟಿ ಯೋಜನೆಗಳಡಿ ಅರ್ಹರು ವಂಚಿತರಾಗದಂತೆ ನಿಗಾವಹಿಸಿ : ಶ್ರೇಣಿಕ್ ಕುಮಾರ್ ಧೊಕಾ
ಯಾದಗಿರಿ : ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿ ಯೋಜನೆಗಳಡಿ ಯಾವುದೇ ಅರ್ಹ ಫಲಾನುಭವಿಗಳು ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲು ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷರಾದ ಶ್ರೇಣಿಕ ಕುಮಾರ್ ಧೊಕಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರವು ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆಗಳನ್ನು ಜಾರಿಗೊಳಿಸಿದೆ. ಪ್ರತಿ ಅರ್ಹ ಫಲಾನುಭವಿ ಈ ಯೋಜನೆಯ ಲಾಭ ಪಡೆಯಬೇಕು. ಅಧಿಕಾರಿಗಳು ಈ ದಿಸೆಯಲ್ಲಿ ಅರ್ಹರಿಗೆ ಯೋಜನೆಯ ಲಾಭ ದೊರಕಿಸುವಂತೆ ಅವರು ಸೂಚನೆ ನೀಡಿದರು.
ಅನ್ನಭಾಗ್ಯ ಯೋಜನೆ ಅರ್ಹರಿಗೆ ದೊರೆಯುತ್ತಿದೆಯೇ ಎಂಬುದರ ಬಗ್ಗೆ ನ್ಯಾಯಬೆಲೆ ಅಂಗಡಿವಾರು ಪರಿಶೀಲಿಸಬೇಕು. ಅದರಂತೆ ಅರ್ಹ ಪಡಿತರ ಚೀಟಿದಾರರಿಗೆ ನಗದು ಹಣ ವರ್ಗಾವಣೆ ಸೌಲಭ್ಯ ಸಮರ್ಪಕವಾಗಿ ದೊರೆಯುತ್ತಿರುವ ಬಗ್ಗೆಯೂ ನಿರಂತರ ಪರಿಶೀಲಿಸುವ ಜೊತೆಗೆ ತಪ್ಪಿತಸ್ಥ ನ್ಯಾಯಬೆಲೆ ಅಂಗಡಿದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆಯಡಿ ಜಿ.ಎಸ್.ಟಿ, ಆದಾಯ ತೆರಿಗೆದಾರ ಎಂದು ಕಾರಣ ಹೇಳಿ ಯೋಜನೆಯಿಂದ ಹೊರಗುಳಿಸಿದ ಬಗ್ಗೆ ಸಮಗ್ರ ಮಾಹಿತಿ ಒದಗಿಸುವಂತೆ ತಿಳಿಸಿದ ಅವರು, ಸಹಾಯಧನ ಜಮೆಯಾಗದಿರುವ ಬಗ್ಗೆ ನಿಗಾ ಇಟ್ಟು, ಅರ್ಹರು ಈ ಯೋಜನೆಯಿಂದ ವಂಚಿತರಾಗದಂತೆ ನೋಡಿಕೊಳ್ಳಲೂ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಅದರಂತೆ ಗೃಹ ಜ್ಯೋತಿ, ಯುವ ನಿಧಿ ಯೋಜನೆಗಳ ಬಗ್ಗೆ ತಿಳಿಹೇಳಿ ಅರ್ಹರು ಬಿಟ್ಟು ಹೋಗದಂತೆ ನೋಡಿಕೊಳ್ಳಲು ಸೂಚಿಸಿ ಶಕ್ತಿ ಯೋಜನೆ ಬಗ್ಗೆ ಪರಿಶೀಲಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ ಒರಡಿಯಾ ಅವರು ಪಂಚಗ್ಯಾರಂಟಿ ಯೋಜನೆಗಳ ಕುರಿತು ನೋಡಲ್ ಅಧಿಕಾರಿವೊಬ್ಬರನ್ನು ನೇಮಿಸಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಸಮಿತಿ ಉಪಾಧ್ಯಕ್ಷ ಸ್ಯಾಮಸನ್ ಮಾಳಿಕೇ̧ರಿ ರಮೇಶ ದೊರಿ, ಹಳ್ಳಪ್ಪ ಹವಾಲ್ದಾರ್ ನಗನೂರ, ತಾಲೂಕು ಅಧ್ಯಕ್ಷ ಲಕ್ಷ್ಮಿ ಕಾಂತ ರೆಡ್ಡಿ, ಬೀರಲಿಂಗ್ ಬ್ಯಾದಪುರ, ಸದಸ್ಯರಾದ, ಸಿದ್ದನಗೌಡ ಹಂದರಾಳ, ದಾವೂದ್ ಪಠಾಣ, ಮಾನಪ್ಪ ಸುಗೂರು, ಸಂಜುಕುಮಾರ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ವಿಜಯಕುಮಾರ್ ಮಡ್ಡೆ ಉಪಸ್ಥಿತರಿದ್ದರು.