ಯಾದಗಿರಿ: ತೆರೆದ ಬಾವಿ ಶೀಘ್ರದಲ್ಲೇ ಮುಚ್ಚುವಂತೆ ಗ್ರಾಮಸ್ಥರಿಂದ ಪ್ರತಿಭಟನೆ

Update: 2024-12-21 08:43 GMT

ಯಾದಗಿರಿ: ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಗುರುಮಠಕಲ್ ಮತಕ್ಷೇತ್ರದ ವ್ಯಾಪ್ತಿಗೆ ಬರುವ ನವಬುರ್ಜ ಗ್ರಾಮ ಸ್ವಾತಂತ್ರ್ಯ ಸಿಕ್ಕು ಇಲ್ಲಿಯವರೆಗೂ ಇನ್ನು ಅಭಿವೃದ್ಧಿ ಕಾಣದೇ ಗಬ್ಬೆದ್ದು ನಾರುತ್ತಿದೆ. ಮತ್ತು ಹಳೆ ಪುರಾತನ ಕಾಲದ ತೆರೆದ ಬಾವಿ ಇದ್ದು ಅದರಲ್ಲಿ ಈಗಾಗಲೇ ನಾಯಿ, ಆಡು, ಬೆಕ್ಕುಗಳು, ಕೋಳಿ, ಬಿದ್ದು ಸತ್ತಿರುವ ಬಗ್ಗೆ ಸಂಬಂಧಪಟ್ಟರು ಕಣ್ಣುಮುಚ್ಚಿ ಕುಳಿತಿರುವುದು ದುರದೃಷ್ಟಕರ ಸಂಗತಿ ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ, ಸಾಮಾಜಿಕ ಹೋರಾಟಗಾರ ಉಮೇಶ ಕೆ. ಮುದ್ನಾಳ ಆರೋಪಿಸಿದರು.

ಶೀಘ್ರದಲ್ಲೆ ತೆರೆದ ಬಾವಿ ಮುಚ್ಚಿ ಮುಂದೆ ಉಂಟಾಗುವ ಅನಾಹುತವನ್ನು ತಪ್ಪಿಸಬೇಕು. ಗ್ರಾಮದಲ್ಲಿ ಶಿಥಿಲಗೊಂಡ ಶಾಲೆ ಕೋಣೆ ನೆಲಸಮ ಗೊಳಿಸಿ, ರಸ್ತೆ, ಚರಂಡಿ ನಿರ್ಮಿಸಿ ಸ್ವಚ್ಚತೆಗೆ ಮುಂದಾಗಬೇಕೆಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮದಲ್ಲಿ ಸಾಂಕ್ರಾಮಿಕ ರೋಗದ ಭೀತಿ, ವಿಷಜಂತುಗಳಿಂದ ಮತ್ತು ತೆರೆದ ಬಾವಿ ಇರುವುದರಿಂದ ಮಕ್ಕಳನ್ನು ಹೊರಗಡೆ ಬಿಡಲು ಪೋಷಕರು ಭಯದ ವಾತವರಣದಲ್ಲಿ ಬದುಕುವ ಪರಸ್ಥಿತಿ ನಿರ್ಮಾಣವಾಗಿದೆ. ಹಾಗೂ ಮೂಗು ಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ಇದೆ.  

ಗ್ರಾಮದಲ್ಲಿ ಚರಂಡಿ ಹಾಗೂ ರಸ್ತೆ ಇರದ ಕಾರಣದಿಂದ ಈ ಸಮಸ್ಯೆ ಆಗಿದೆ. ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳ  ಗಮನಕ್ಕೆ ತಂದರೂ ಸಹ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಚರಂಡಿ ನೀರು ರಸ್ತೆ ಮೇಲೆ ಹರಿದು ಗಬ್ಬೆದ್ದು ಗ್ರಾಮವೇ ನಾರುವಂತಾಗಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುತ್ತಿದ್ದು, ಸೊಳ್ಳೆಗಳ ಹಾವಳಿಯಿಂದ ಜನ ಜಾನುವಾರುಗಳು ತತ್ತರಿಸಿವೆ ಎಂದು ಅವರು ದೂರಿದರು.

ಎತ್ತುಬಂಡಿ, ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುವಾಗಿ ಹೊಲಸಿನಲ್ಲಿ ಬಿದ್ದು ಸಂಕಷ್ಟ ಎದುರಿಸುವುದು ನಿತ್ಯದ ಸಂಗತಿಯಾಗಿದೆ. ಶುದ್ಧ ಕುಡಿವ ನೀರು ತರಬೇಕೆಂದರೂ ಹೊಲಸಿನಲ್ಲಿಯೇ ಸಾಗಬೇಕಿದೆ. ಲಕ್ಷ ಲಕ್ಷ ರೂ. ಗಳು ಗ್ರಾಮದ ಅಭಿವೃದ್ಧಿಗೆ ಬಂದ ಹಣ ಯಾರ ಮನೆಯ ತಿಜೋರಿ ಸೇರಿದೆ ಎಂಬುದು ಅರ್ಥವಾಗದ ಪರಿಸ್ಥಿತಿ ಗ್ರಾಮದಲ್ಲಿದೆ ಎಂದು ಅವರು  ಆಕ್ರೋಶ ವ್ಯಕ್ತಪಡಿಸಿದರು.

ಯಾವೊಂದು ಗ್ರಾಮವೂ ಇ ರೀತಿ ಹದಗೆಟ್ಟಿಲ್ಲ ಎಂಬುದು ನಮ್ಮ ಗಮನಕ್ಕೆ ಬಂದಿದ್ದು,  ಡಿಸಿ ಸಿಇಒ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಒಂದು ವಾರದಲ್ಲಿ ಸಮಸ್ಯೆ ಇತ್ಯರ್ಥ ಪಡಿಸಬೇಕು. ಸಂಬಂಧಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಯಾದಗಿರಿ- ಗುರುಮಠಕಲ್ ರಸ್ತೆಯ ಕಂದಕೂರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಣಮಂತ, ತಾಯಪ್ಪ, ನೀಲಕಂಠಯ್ಯಸ್ವಾಮಿ, ಸಣ್ಣ ಹಣಮಂತ, ಸಂತೋಷ, ಶರಣಪ್ಪ, ರಾಮಪ್ಪ, ತಾಯಪ್ಪ, ಮಹಾದೇವಪ್ಪ, ಅನೀಲ, ರಮೇಶ, ಬನ್ನಪ್ಪ, ಕನಕಪ್ಪ, ಬಸವರಾಜ, ಶ್ರೀಕಾಂತ ರವಿ, ಶಂಕ್ರಪ್ಪ, ಮಲ್ಲಪ್ಪ, ವೆಂಕಟಮ್ಮ, ಲಕ್ಷ್ಮೀ ತಾಯಮ್ಮ, ನಾಗಮ್ಮ, ಬಾಲಮ್ಮ, ಸಾಯಮ್ಮ, ಚಂದಮ್ಮ, ಬೀಮವ್ವ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News