ಯಾದಗಿರಿ | ಅಂಗನವಾಡಿ ಕಾರ್ಯಕರ್ತೆ-ಸಹಾಯಕಿಯರ ನೇಮಕಾತಿ : ಜ.5 ರೊಳಗೆ ಪೂರ್ಣ ಅರ್ಜಿ ಸಲ್ಲಿಸಲು ಅವಕಾಶ
ಯಾದಗಿರಿ : ಜಿಲ್ಲೆಯ ಶಹಾಪುರ ಮತ್ತು ವಡಗೇರಾ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯಲ್ಲಿನ ಖಾಲಿ ಇರುವ 48 ಅಂಗನವಾಡಿ ಕಾರ್ಯಕರ್ತೆ ಹಾಗೂ 76 ಅಂಗನವಾಡಿ ಸಹಾಯಕಿಯರ ಗೌರವ ಸೇವೆ ಹುದ್ದೆಗಳಿಗೆ ಕಳೆದ ಆ.13ರಂದು ಅಧಿಸೂಚನೆ ಹೊರಡಿಸಿ, ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ತಾಂತ್ರಿಕ ಸಮಸ್ಯೆ ಕಾರಣ ಅರ್ಜಿಯಲ್ಲಿ ನಾಲ್ಕು ಹಂತ ಪೂರ್ಣಗೊಳಿಸದ ಅಭ್ಯರ್ಥಿಗಳಿಗೆ ಮಾತ್ರ ಸರ್ಕಾರದ ನಿರ್ದೇಶನದಂತೆ ಪೂರ್ಣವಾಗಿ ಅರ್ಜಿ ಸಲ್ಲಿಸಲು ಇದೀಗ ಅವಕಾಶ ನೀಡಲಾಗಿದೆ.
ಆನ್ಲೈನ್ ತಂತ್ರಾಂಶದಲ್ಲಿ ನಿಗದಿತ ಅರ್ಜಿ ನಮೂನೆಯಲ್ಲಿ ಮಾಹಿತಿ ಭರ್ತಿ, ಭಾವಚಿತ್ರ ಮತ್ತು ಸಹಿ, ದಾಖಲಾತಿಗಳನ್ನು ಅಪ್ಲೋಡ್ ಮಾಡುವುದು ಹಾಗೂ ಕೊನೆಯದಾಗಿ ಆಧಾರ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆ 4 ಹಂತದಲ್ಲಿ ಅರ್ಜಿಯನ್ನು ಪೂರ್ಣಗೊಳಿಸಬೇಕಾಗಿರುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ಹುದ್ದೆಗೆ 437 ಹಾಗೂ ಸಹಾಯಕಿಯರ ಹುದ್ದೆಗೆ 205 ಅಪೂರ್ಣ ಅರ್ಜಿಗಳು ತಾಲ್ಲೂಕಿನಲ್ಲಿ ಸ್ವೀಕೃತವಾಗಿದ್ದು, ಇಂತಹ ಅಭ್ಯರ್ಥಿಗಳು ಡಿ.26 ರಿಂದ 2025ರ ಜ.5ರ ಸಂಜೆ 5.30 ಗಂಟೆಯೊಳಗೆ https://karnemakaone.kar.nic.in/abcd/ ಮೂಲಕ ಪೂರ್ಣ ಅರ್ಜಿ ಸಲ್ಲಿಸಬೇಕೆಂದು ಸಿ.ಡಿ.ಪಿ.ಓ ಮಲ್ಲಣ್ಣ ದೇಸಾಯಿ ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ನೇಮಕಾತಿಗೆ ಸಂಬಂಧಿಸಿದಂತೆ ಸೆ.13ಕ್ಕೆ ಕೊನೆಗೊಂಡ ಅರ್ಜಿ ಸಲ್ಲಿಸುವ ಕಾಲಾವಧಿ ಒಳಗೆ ಅರ್ಜಿ ಸಲ್ಲಿಸುವಾಗ ವೆಬ್ಸೈಟ್ನಲ್ಲಿ ಒಟ್ಟು 4 ಹಂತಗಳ ಪೈಕಿ ಕೆಲವರಿಗೆ ಮೊದಲನೇ ಹಂತದಲ್ಲಿಯೇ “ಅಪ್ಲಿಕೇಶನ್ ಸಕ್ಸಸ್ ಫುಲ್ ಅಪ್ಲೋಡೆಡ್” ಎಂಬ ಸಂದೇಶ ಮೊಬೈಲ್ಗೆ ಸ್ವೀಕೃತವಾಗಿರುವುದರಿಂದ ಈ ಅರ್ಜಿಗಳು ಪೂರ್ಣವಾಗಿ ಸಲ್ಲಿಕೆಯಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ ಶಹಾಪುರ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಮತ್ತು ದೂರವಾಣಿ ಸಂಖ್ಯೆ. 8197630873 ಸಂಪರ್ಕಿಸಬಹುದಾಗಿದೆ.