ಯಾದಗಿರಿ | ಡಾ.ಅಂಬೇಡ್ಕರ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಅಮಿತ್ ಶಾರನ್ನು ಗಡಿಪಾರು ಮಾಡಿ : ದಲಿತ ಸಂಘಟನೆ ಆಗ್ರಹ
ಯಾದಗಿರಿ : ಸಂಸತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಶಾ ಅವರ ಭಾರತೀಯ ಪೌರತ್ವ ರದ್ದು ಮಾಡಿ, ದೇಶದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಯಾದಗಿರಿ ಜಿಲ್ಲಾ ಸಮಿತಿಯು ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿತು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂದಗೇರಿ ಅವರು, "ಕೇಂದ್ರ ಸಚಿವ ಅಮಿತ್ ಶಾ ಅವರು ಸಂಸತ್ತಿನಲ್ಲಿ ಮಾತನಾಡುವಾಗ ಅಂಬೇಡ್ಕರ್ ಬಗ್ಗೆ ವ್ಯಂಗ್ಯದಿಂದ ಮಾತನಾಡಿದ್ದಾರೆ. ಅಂಬೇಡ್ಕರ್ ಅವರ ಹೆಸರು ಹೇಳುವ ಬದಲು ದೇವರ ಹೆಸರನ್ನು ಪಠಣ ಮಾಡಿದ್ದರೆ ಸ್ವರ್ಗ ಪ್ರಾಪ್ತಿಯಾಗುತಿತ್ತು ಎಂದು ಹೇಳುವ ಮೂಲಕ ಅಂಬೇಡ್ಕರ್ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ" ಎಂದರು.
ಯಾದಗಿರಿ ಜಿಲ್ಲಾ ಸಂಚಾಲಕ ಶರಣು ಎಸ್ ನಾಟೇಕಾರ್ ಅವರು ಮಾತಾನಾಡಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ ಅವರ ಕುರಿತು ಅಪಹಾಸ್ಯ ಮಾಡಿರುವುದು ಮತ್ತು ಭಾರತೀಯ ಸಂವಿಧಾನ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಶಿವಶರಣಪ್ಪ ವಾಡಿ, ಭೀಮರಾಯ ಕಾಗಿ, ಖಂಡಪ್ಪ, ಸಾಬಣ್ಣ ಬೇಗಾರ, ಶರಣಪ್ಪ ಮಮ್ಮದರ, ಗಿರೀಶ್ ಚಟ್ಟೇರಕರ್, ಗಂಗಮ್ಮ, ಸೇರಿದಂತೆ ಅನೇಕರು ಇದ್ದರು.