ಯಾದಗಿರಿ | ಲಕ್ಷಾಂತರ ರೂಪಾಯಿ ಅವ್ಯವಹಾರ ಆರೋಪ; ತನಿಖೆಗೆ ಆಗ್ರಹ

ಯಾದಗಿರಿ : ಶಹಾಪುರ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಡಾ.ಯಲ್ಲಪ್ಪ ಪಾಟೀಲ್ ಅವರು ಸೇವೆ ಸಲ್ಲಿಸುತ್ತಿರುವ ವೇಳೆಯಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ಮಾಡಿದ್ದು, ತನಿಖಾ ತಂಡ ರಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನಮ್ಮ ಕರ್ನಾಟಕ ಸೇನೆ ವತಿಯಿಂದ ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ ಅವರಿಗೆ ಮನವಿ ಸಲ್ಲಿಸಿದರು.
ಸಿದ್ದು ಪಟ್ಟೇದಾರ್ ಮಾತನಾಡಿ, ಡಾ.ಯಲ್ಲಪ್ಪ ಪಾಟೀಲ್ ಅವರು, ಆಡಳಿತ ವೈದ್ಯಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸುಮಾರು 6 ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಸ್ಥಗಿತಗೊಳಿಸಿ, ಖಾಸಗಿ ಆಸ್ಪತ್ರೆ ಜೊತೆಗೆ ಒಳ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸಿ ಹಣಕ್ಕಾಗಿ ರೋಗಿಗಳ ಹಣ ತಿಂದು ಹಗಲು ದರೋಡೆ ಮಾಡಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗಮನ ಹರಿಸಿ ಈ ಕುರಿತು ತನಿಖಾ ತಂಡ ರಚಿಸಿ, ದುರ್ಬಳಕೆ ಮಾಡಿಕೊಂಡಿರುವ ಹಣ ಮರು ಪಾವತಿ ಮಾಡಿಸಿಕೊಂಡು, ಡಾ.ಯಲ್ಲಪ್ಪ ಪಾಟೀಲ್ ಅವರನ್ನು ಅಮಾನತು ಮಾಡಬೇಕು. ವಿಳಂಬ ಧೋರಣೆ ಅನುಸರಿಸಿದರೆ ಇದೇ 28 ರಂದು ಶಹಾಪುರ ಸಾರ್ವಜನಿಕ ಆಸ್ಪತ್ರೆಯ ಮುಂದೆ ನಿರಂತರ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಪಟ್ಟೇದಾರ್ ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶ್ರೀದೇವಿ ಕಟ್ಟಿಮನಿ, ಅಂಬರೀಷ್ ತೆಲಗುರ್, ರಾಜು ಗುಂಡಗುರ್ತಿ, ಸದಾಮ್ ಮಠ, ಚಂದ್ರು ಹಲಗಿ, ನಬಿ ಪಟೇಲ್,ಶಂಕರ್ ಜಾಗೀರ್ದಾರ್, ಮಲ್ಲಯ್ಯ ಗೌಡ ಬುಸ್ ರೆಡ್ಡಿ, ಕಿರಣ್ ಗುಂಟೂರ್, ಭೀಮರಾಯ ನಾಟ್ಟೇಕಾರ, ವಿಶ್ವರಾಧ್ಯ ನಾಯಕೋಡಿ, ಬಸವರಾಜ್ ಏವುರ್, ಮಲ್ಲಿಕಾರ್ಜುನ ದೊರನಹಳ್ಳಿ ಸೇರಿದಂತೆ ಇತರರು ಇದ್ದರು.