ಯಾದಗಿರಿ | ನೀರಿಗಾಗಿ ಕೃಷ್ಣಾಪುರ ಕಾಡಾ ಕಚೇರಿಗೆ ರೈತರ ಮುತ್ತಿಗೆ

ಸುರಪುರ : ಕಾಲುವೆಗಳಿಗೆ ಸರಿಯಾಗಿ ನೀರು ಬರುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ತಾಲೂಕಿನ ಕೃಷ್ಣಾಪುರ ಕ್ಯಾಂಪ್ ನಲ್ಲಿನ ಕೆಬಿಜೆಏನ್ಎಲ್ ಕಾಡಾ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ.
ಅನೇಕ ರೈತರು ಆಗಮಿಸುವ ಸುದ್ದಿ ತಿಳಿದು ಅಧಿಕಾರಿಗಳು ಕಚೇರಿಗೆ ಬೀಗ ಹಾಕಿಕೊಂಡು ಬೇರೆ ಕಡೆ ಕುಳಿತಿದ್ದಾಗ ಆಕ್ರೋಶಗೊಂಡ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಚೇರಿ ಸ್ಥಳಕ್ಕೆ ಪೊಲೀಸ್ ಇನ್ ಸ್ಪೆಕ್ಟರ್ ಆನಂದ ವಾಗಮೊಡೆ ಆಗಮಿಸಿ ಅಧಿಕಾರಿಗಳನ್ನು ಕರೆದುಕೊಂಡು ಬಂದು ಕಚೇರಿಯ ಬೀಗವನ್ನು ತೆಗೆಸಿದ್ದಾರೆ.
ಈ ಸಂದರ್ಭದಲ್ಲಿ ರೈತರು ಕಾಲುವೆಗಳಿಗೆ ಈಗ ಎಷ್ಟು ಪ್ರಮಾಣದಲ್ಲಿ ನೀರು ಹರಿಯುತ್ತಿದೆ, ಅಷ್ಟೇ ಪ್ರಮಾಣದ ನೀರು ಬರಬೇಕು ಮತ್ತು ಕಾಲುವೆಗಳನ್ನು ವೀಕ್ಷಿಸಲು ಕೆಬಿಜೆಎನ್‍ಎಲ್ ಅಧಿಕಾರಿಗಳು ನಿತ್ಯವೂ ಸಂಚರಿಸಬೇಕು ಹಾಗೂ ಇವರ ಜೊತೆಗೆ ಪೊಲೀಸ್ ಸಿಬ್ಬಂದಿಯನ್ನು ಕೂಡ ನಿಯೋಜಿಸುವಂತೆ ಪಿ ಐ ಅವರಿಗೆ ಮನವಿ ಮಾಡಿಕೊಂಡರು.
ಪಿ ಐ ಆನಂದ ವಾಗಮೊಡೆ ಪೊಲೀಸ್ ಪೇದೆಗಳನ್ನು ಕಳುಹಿಸುವುದಾಗಿ ಭರವಸೆ ನೀಡಿದರು. ನಿರಂತರವಾಗಿ ಇಷ್ಟೇ ಪ್ರಮಾಣದ ನೀರು ಕಾಲುವೆಗೆ ಬರದಿದ್ದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಶಹಾಪುರ ತಾಲೂಕ ಅಧ್ಯಕ್ಷ ಮಲ್ಕಣ್ಣ ಚಿಂತಿ,ಮಹೇಶ್ ಮಂಡಗಳ್ಳಿ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕ ಅಧ್ಯಕ್ಷ ನಿಂಗಪ್ಪ ನಾಯಕ ಬಿಜಾಸಪುರ,ಸೂಗು ದೇಸಾಯಿ,ರೆಡ್ಡಿ ಸೇರಿದಂತೆ ಅನೇಕ ಜನ ರೈತರು ಭಾಗವಹಿಸಿದ್ದರು.