ಯಾದಗಿರಿ | ಜಲಮೂಲಗಳ ನೀರು ಪರೀಕ್ಷಿಸಿ, ಕುಡಿಯಲು ನೀರನ್ನು ಪೂರೈಸಿ; ಜಿಲ್ಲಾ ಪಂಚಾಯತ್ ಸಿಇಒ ಲವೀಶ್ ಒರಡಿಯಾ

ಯಾದಗಿರಿ : ಜಲಮೂಲಗಳಿಂದ ನೀರು ಪೂರೈಕೆ ಮಾಡುವ ಮುನ್ನ ನೀರನ್ನು ಪರೀಕ್ಷಿಸಿಕೊಳ್ಳುವಂತೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆ ನಡೆಸಿ ಅವರು ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು. ಕಲುಷಿತ ನೀರು ಜಲಮೂಲ ಹಾಗೂ ನೀರಿನ ಪೈಪ್ ಲೈನ್ ಗಳಿಗೆ ಸೇರ್ಪಡೆಯಾಗದಂತೆ ಮುನ್ನೆಚ್ಚರಿಕೆ ವಹಿಸಲು ಅವರು ಸೂಚನೆ ನೀಡಿದರು.
ಜಲಮೂಲಗಳ ನೀರನ್ನು ಕುಡಿಯಲು ಯೋಗ್ಯವಿದೆಯೇ ಎಂಬುದರ ಬಗ್ಗೆ ಮುಂಚಿತವಾಗಿ ಪರೀಕ್ಷಿಸಿಕೊಳ್ಳಬೇಕು. ಓವರ್ ಹೆಡ್ ಟ್ಯಾಂಕ್ ಗಳನ್ನು ಸ್ವಚ್ಛಗೊಳಿಸಬೇಕು. ನೀರಲ್ಲಿ ಯಾವುದೇ ಲೋಪ ಕಂಡು ಬಂದ ತಕ್ಷಣ ಆರೋಗ್ಯ ಇಲಾಖೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳು ಮತ್ತು ಅಭಿಯಂತರರು, ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ನೀರು ಸರಬರಾಜು ಸಂದರ್ಭದಲ್ಲಿ ಶಾಲೆ, ವಸತಿ ನಿಲಯಗಳು, ಆರೋಗ್ಯ ಕೇಂದ್ರಗಳು, ಸೇರಿದಂತೆ ಮುಖ್ಯ ಸ್ಥಳಗಳಿಗೆ ಆದ್ಯತೆ ಮೇಲೆ ನೀರಿನ ಸಂಪರ್ಕ ಕಲ್ಪಿಸಬೇಕು. ನೀರಿನ ಕೆಮಿಕಲ್ ಪರೀಕ್ಷೆ ಮಾಡಲಾಗುತ್ತಿದ್ದು, ಜಲಮೂಲಗಳ ನೀರಿನ ದಿನನಿತ್ಯ ಹೆಚ್ಚಿನ ಸ್ಯಾಂಪಲ್ ಟೆಸ್ಟ್ ಮಾಡಿಸಲು ಕ್ರಮಕೈಗೊಳ್ಳಬೇಕು. ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಮಾನವ ದಿನಗಳನ್ನು ಸೃಜಿಸಿ, ಸೂಕ್ತ ಪ್ರಗತಿ ಸಾಧಿಸುವಂತೆ ಅವರು ಸೂಚನೆ ನೀಡಿದರು.
ಸಭೆಯಲ್ಲಿ ಬಹಿರ್ದೆಸೆ ಮುಕ್ತ ಗ್ರಾಮಗಳ ರಚನೆ, ಸ್ವಚ್ಛತೆ,ಒಳಚರಂಡಿ ಸ್ವಚ್ಛತೆ, ಜಲಜೀವನ್ ಮಿಷನ್ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.
ಜಿಲ್ಲಾ ಮಟ್ಟದಲ್ಲಿ ಸ್ವಚ್ಛ ಭಾರತ ಮಿಷನ್ (ಗ್ರಾಮೀಣ)ಹಂತ-2, ಜಲಜೀವನ್ ಮಿಷನ್ ಯೋಜನೆಗಳ ಸಮಗ್ರ ಅನುಷ್ಠಾನಕ್ಕಾಗಿ, ಇದೇ ಮೊದಲ ಬಾರಿಗೆ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ ರಚಿಸಿ ಸರ್ಕಾರ ಆದೇಶ ಹೊರಡಿಸಿದ್ದು, ಅದರನ್ವಯ ಜಲಜೀವನ್ ಮಿಷನ್ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳು/ಉಪ ಆಯುಕ್ತರ ನೇತೃತ್ವದಲ್ಲಿ ಜಿಲ್ಲಾ ನೀರು ಮತ್ತು ನೈರ್ಮಲ್ಯ ಮಿಷನ್ 8 ಸದಸ್ಯರು ಹಾಗೂ ಓರ್ವ ಸದಸ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಲಾಗಿದೆ.
ಜಲಜೀವನ್ ಮಿಷನ್/ಸ್ವಚ್ಛ ಭಾರತ ಮಿಷನ್ ( ಗ್ರಾಮೀಣ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಯೋಜನೆಗಳ ಕಾರ್ಯಾಚರಣೆಯ ಸುಸ್ಥಿರತೆಗೆ, ಪ್ರಾಥಮಿಕವಾಗಿ ಜಿಲ್ಲೆಗಳಲ್ಲಿ ನೀರು ಮತ್ತು ನೈರ್ಮಲ್ಯ ಕಾರ್ಯ ಗಳು ಒಟ್ಟಾರೆ ಅನುಷ್ಠಾನ ಮತ್ತು ಪರಿಶೀಲನೆಗೆ ಕರ್ನಾಟಕ ರಾಜ್ಯದಲ್ಲಿ DWSM ಅನ್ನು ರಚಿ ಸಲಾಗಿದ್ದು, ಜಿ.ಪಂ. ಸಿಇಓ ಅಧ್ಯಕ್ಷರು ಇರಲಿದ್ದು, -11ಸದಸ್ಯರು ಹಾಗೂ ಓರ್ವ ಸದಸ್ಯ ಕಾರ್ಯದರ್ಶಿಗಳು ಇದ್ದಾರೆ. ಈ ಡಿಡಬ್ಲ್ಯುಎಸ್ಎಂನ ಪಾತ್ರ ಮತ್ತು ಜವಾಬ್ದಾರಿಗಳ ಬಗ್ಗೆ ಸರ್ಕಾರದ ಆದೇಶ ಮತ್ತು ಜಿ.ಪಂ ಸಿಇಓ ರವರ ಆದೇಶದಲ್ಲಿ ನೀಡಲಾಗಿದೆ ಎಂದು ಅವರು ಸಭೆಯಲ್ಲಿ ತಿಳಿಸಿದರು.