ಯಾದಗಿರಿ | ಎರಡು ಜಲಾಶಯಗಳಿದ್ದರೂ ನೀರಿಗೆ ಹಾಹಾಕಾರ

ಯಾದಗಿರಿ : ಸಾಲಶೂಲ ಮಾಡಿ ಭತ್ತ ಬೆಳೆದ ರೈತರು ಈಗ ಕಂಗಲಾಗಿದ್ದಾರೆ. ನೀರಿನ ಮೂಲಗಳು ಬತ್ತಿ ಹೋದ ಹಿನ್ನಲೆ ಭತ್ತದ ಬೆಳೆಗೆ ನೀರು ಹರಿಸಿಕೊಳ್ಳಲು ಸಾಧ್ಯವಾಗದೇ ಭತ್ತದ ಬೆಳೆಯು ಒಣಗಿ ಹಾನಿಯಾಗಿದೆ. ಸರಕಾರ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡುವಂತೆ ಅಖಿಲ ಭಾರತೀಯ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ ಅವರು ಒತ್ತಾಯ ಮಾಡಿದ್ದಾರೆ.
ಉಮೇಶ್ ಮುದ್ನಾಳ ಅವರು, ಯಾದಗಿರಿಯ ಗಂಗಾನಗರದ ರೈತರ ಭತ್ತ ಒಣಗಿದ ಜಮೀನಿಗೆ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿದರು. ಗಂಗಾನಗರದಲ್ಲಿರುವ ಹಳ್ಳವು ಸಂಪೂರ್ಣವಾಗಿ ಬತ್ತಿ ಹೋದ ಹಿನ್ನಲೆ ಹಳ್ಳದಿಂದ ರೈತರು ಜಮೀನಿಗೆ ನೀರು ಹರಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿ ಗಂಗಾನಗರದ ರೈತರ ಸುಮಾರು 50 ಎಕರೆ ಭತ್ತದ ಬೆಳೆ ಒಣಗಿ ಹಾನಿಯಾಗಿದೆ.
ಉಮೇಶ್ ಮುದ್ನಾಳ ಅವರು ಮಾತನಾಡಿ, ಹಳ್ಳ ಬತ್ತಿ ಹೋದ ಹಿನ್ನಲೆ ಭತ್ತದ ಬೆಳೆಯು ಒಣಗಿ ರೈತರು ಆರ್ಥಿಕ ನಷ್ಟ ಅನುಭವಿಸಿದ್ದಾರೆ. ಹಾನಿಯಾದ ರೈತರಿಗೆ ಸರಕಾರ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಿ ರೈತರ ಜೀವ ಉಳಿಸಬೇಕಿದೆ. ಇಲ್ಲದಿದ್ದರೆ ರೈತರು ಕೃಷಿ ಬಿಟ್ಟು ಬೆಂಗಳೂರು, ಮುಂಬೈಗೆ ವಲಸೆ ಹೋಗುವಂತಾಗಿದೆ. ಕೂಡಲೇ ಸರಕಾರ ಪರಿಹಾರ ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹನುಮಂತ, ಮಲ್ಲಪ್ಪ, ಭೀಮಪ್ಪ, ಮೌನೇಶ್, ಮಹೇಶ್, ಮಾರ್ಗಪ್ಪ, ಅಂಜಪ್ಪ, ಸಾಬಣ್ಣ, ಮಲ್ಲಪ್ಪ, ಈಶಪ್ಪ, ರಾಜು, ಯಮನಪ್ಪ, ನಿಂಗಪ್ಪ, ಚಂದ್ರಮ್, ಮಲ್ಲಪ್ಪ, ಶರಣಪ್ಪ, ಹನುಮಂತ, ಮಲ್ಲೇಶ್, ದೇವಪ್ಪ, ದುರ್ಗಪ್ಪ, ಸಾಬಣ್ಣ, ರಾಜಪ್ಪ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.