ಯಾದಗಿರಿ | ಶಿಕ್ಷಣದ ಪ್ರಾಮುಖ್ಯತೆ ಪ್ರತಿಯೊಬ್ಬರೂ ಅರಿಯುವಂತಾಗಲಿ : ಗುರುಪ್ರಸಾದ್

ಯಾದಗಿರಿ : ಭಾರತದ ಸಂವಿಧಾನವು 21 ಎ ವಿಧಿಯು 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣದ ಹಕ್ಕನ್ನು ನೀಡಿದೆ. ಶಿಕ್ಷಣದ ಪ್ರಾಮುಖ್ಯತೆ ಪ್ರತಿಯೊಬ್ಬರೂ ಅರಿಯುವಂತಾಗಲಿ, ಪ್ರತಿಯೊಬ್ಬ ವಿದ್ಯಾರ್ಥಿಯು ಈ ಹಕ್ಕನ್ನು ಬಳಸಿಕೊಳ್ಳಬೇಕು ಎಂದು ಉಪನ್ಯಾಸಕರು ಹಾಗೂ ಹಿರಿಯ ಸಾಹಿತಿಗಳಾದ ಗುರುಪ್ರಸಾದ ವೈದ್ಯ ಅವರು ಹೇಳಿದರು.
ವಡಗೇರಾ ತಾಲ್ಲೂಕಿನ ಅಂಬೇಡ್ಕರ್ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ, ಹಾಗೂ ವಿವಿಧ ಇಲಾಖೆ ಮತ್ತು ಸ್ಥಳಿಯ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ 2024-25ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ (ಎಸ್.ಸಿ.ಎಸ್.ಪಿ) ಹಾಗೂ ಗಿರಿಜನ ಉಪಯೋಜನೆ (ಟಿ.ಎಸ್.ಪಿ)ಯಡಿ “ಬಾಲ್ಯಾವಸ್ಥೆ ಹಾಗೂ ಕಿಶೋರಾವಸ್ಥೆ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986, ತಿದ್ದುಪಡಿ ಕಾಯ್ದೆ 2016ರ” ಕುರಿತು ಆಯೋಜಿಸಿದ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ರಿಯಾಜ್ ಪಟೇಲ್ ವರ್ಕನಳ್ಳಿ ಅವರು ಮಾತನಾಡಿ, ಓದುವ ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವುದು ಮತ್ತು ಅಂತಹ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನು ಬಾಹಿರ ಕ್ರಮವಾಗಿದ್ದು, ಇದನ್ನು ಮೀರಿಯೂ ಸಹ ಮಕ್ಕಳನ್ನು ಕೆಲಸಕ್ಕೆ ಸೇರಿಸಿಕೊಂಡಲ್ಲಿ ಅಂತಹ ಅಂಗಡಿ ಮಾಲಕರ ವಿರುದ್ಧ 20,000 ರಿಂದ 50,000 ರೂ.ಗಳವರೆಗೆ ದಂಡ ವಿಧಿಸಲಾಗುವುದು ಮತ್ತು 6 ತಿಂಗಳಿಂದ 2 ವರ್ಷದವರೆಗೆ ಜೈಲು ಶಿಕ್ಷೆ ಸಹ ವಿಧಿಸಲಾಗುವುದು ಎಂದು ಹೇಳಿದರು.
ಬಾಲ, ಕಿಶೋರ ಕಾರ್ಮಿಕ ಪದ್ಧತಿ ನಿಷೇಧದ ಕುರಿತು ಆಯೋಜಿಸಿದ್ದ ರಸ ಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರಶಸ್ತಿ ಪತ್ರಗಳನ್ನು ಸಹ ಈ ಸಂದರ್ಭದಲ್ಲಿ ವಿತರಿಸಲಾಯಿತು. ಅನಿತಾ ಕಾರ್ಯಕ್ರಮ ನಿರೂಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ವಡಗೇರಾ ಅಂಬೇಡ್ಕರ್ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಗುರುಗಳಾದ ಮುದುಕಪ್ಪ, ಶಾಲಾ ಅಭಿವೃದ್ದಿ ಮತ್ತು ಮೇಲ್ವಿಚಾರಣ ಸಮಿತಿಯ (ಎಸ್.ಡಿ.ಎಮ್,ಸಿ) ಅಧ್ಯಕ್ಷರಾದ ಮರೆಪ್ಪ ನಾಟೆಕರ್, ಶಿಕ್ಷಕಿಯರಾದ ಜಯಶ್ರೀ, ಮಂಜುಳಾ, ಶ್ರೀದೇವಿ, ದಲಿತ ಮುಖಂಡರಾದ ಶರಣಪ್ಪ, ಮರೆಪ್ಪ, ಮಲ್ಲಪ್ಪ, ಹಣಮಂತ, ಕಾರ್ಮಿಕ ಇಲಾಖೆಯ ಸಿಬ್ಬಂದಿ ಬಾಲು ನಾಯಕ ಉಪಸ್ಥಿತರಿದ್ದರು.