ಯಾದಗಿರಿ: ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ವಿಘ್ನ; ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹ
ಯಾದಗಿರಿ: ಕಲಬುರಗಿಯಲ್ಲಿ ಸಂಗೊಳ್ಳಿ ರಾಯಣ್ಣನ ಪುತ್ಥಳಿಗೆ ವಿಘ್ನ ಮಾಡಿದ ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕರ್ನಾಟಕ ಪ್ರದೇಶ ಕುರುಬರ ಸಂಘ ಜಿಲ್ಲಾ ಘಟಕದ ವತಿಯಿಂದ ನಗರದ ಸುಭಾಷ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ಮಾಡಲಾಯಿತು.
ಕಲಬುರಗಿ ಜಿಲ್ಲೆಯ ಬಸ್ ನಿಲ್ದಾಣದ ಎದುರುಗಡೆ ಜಗತ್ ಸರ್ಕಲ್ ನಲ್ಲಿರುವ ಸಂಗೊಳ್ಳಿ ರಾಯಣ್ಣ ಪುತ್ಥಳಿಗೆ ಯಾರೋ ಕಿಡಿಗೇಡಿಗಳು ವಿಘ್ನ ಮಾಡಿರುತ್ತಾರೆ. ಆದ ಕಾರಣ ಹಾಲುಮತ ಸಮಾಜ ತೀವ್ರವಾಗಿ ಖಂಡಿಸುತ್ತದೆ. ರಾಜ್ಯದಲ್ಲಿ ಹಲವು ಕಡೆ ಇದೇ ರೀತಿ ಪುತ್ಥಳಿಗೆ ವಿಘ್ನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕಲಬುರ್ಗಿಯಲ್ಲಿ ನಡೆದ ಘಟನೆಯನ್ನು ತೀವ್ರವಾಗಿ ಪರಿಶೀಲನೆ ಮಾಡಿ ಸಂಬಂಧಪಟ್ಟ ಕಿಡಿಗೇಡಿಗಳನ್ನು ಬಂಧಿಸಿ ರಾಜ್ಯದಿಂದ ಬಹಿಷ್ಕಾರ ಹಾಕಬೇಕು. ರಾಜ್ಯದ ಎಲ್ಲಾ ಜಿಲ್ಲೆಗಳ ಎಲ್ಲಾ ಪುತ್ಥಳಿಗೆ ಸಿ.ಸಿ ಕ್ಯಾಮೆರಾ ಅಳವಡಿಸಿ ಮುಂದೆ ಆಗುವ ಘಟನೆಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದರು.
ಯಾದಗಿರಿ ಜಿಲ್ಲೆಯ ಎಲ್ಲಾ ಪುತ್ಥಳಿಗಳಿಗೆ ಜಿಲ್ಲಾಡಳಿತ ಮತ್ತು ನಗರಸಭೆ ಸಿಸಿಟಿವಿ ಅಳವಡಿಸಬೇಕು. ಒಂದು ವೇಳೆ ವಿಳಂಬವಾದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ತಾಲೂಕು ಅಧ್ಯಕ್ಷ ಸೂರ್ಯಕಾಂತ ಅಲ್ಲಿಪೂರ, ಸುರಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜು ಬಾಚಿಮಟ್ಟಿ, ಮಲ್ಲಯ್ಯ ಕಸಿಬಿ, ಬೀರೇಶ ಚಿರತೆನೋರ್,ಮಾಳಿಂಗರಾಯ ಕಂದಳ್ಳಿ, ಶಿವಪ್ಪ ಬೆಳಗುಂದಿ, ಚೆನ್ನಕೇಶವಗೌಡ ಬಾಣಂತಿಹಾಳ, ಬೀರಪ್ಪ ಮುಂಡರಗಿ, ಬೀರಲಿಂಗ ಪೂಜಾರಿ, ಆದೆಪ್ಪ, ಶರಣು ಬೋಳಾರ್, ಸೇರಿದಂತೆ ಅನೇಕರು ಭಾಗವಹಿಸಿದ್ದರು.