ಟೈಟನ್ ದುರಂತದ ನಂತರ ಟೈಟಾನಿಕ್ ದುರಂತದ ಸ್ಥಳಕ್ಕೆ ಜಲಾಂತರ್ಗಾಮಿಯಲ್ಲಿ ತೆರಳಲಿರುವ ಅಮೆರಿಕದ ಕೋಟ್ಯಧಿಪತಿ

Update: 2024-05-29 12:28 GMT

PC : NDTV

ನ್ಯೂಯಾರ್ಕ್: ಟೈಟಾನಿಕ್ ಹಡಗು ದುರಂತ ಸಂಭವಿಸಿದ್ದ ಸ್ಥಳದ ವೀಕ್ಷಣೆಗೆ ತೆರಳಿದ್ದ ಟೈಟನ್ ಜಲಾಂತರ್ಗಾಮಿ ಸ್ಫೋಟಗೊಂಡ ಘಟನೆ ನಡೆದು 11 ತಿಂಗಳಾಗಿದೆ. ಈ ಘಟನೆಯಲ್ಲಿ ಓಶಿಯನ್ ಗೇಟ್ ಸಿಇಒ ಸ್ಟಾಕ್ಟನ್ ರಶ್ ಸೇರಿದಂತೆ ಒಟ್ಟು ಐದು ಮಂದಿ ಮೃತಪಟ್ಟಿದ್ದರು. ಈ ನಡುವೆ, ಇಬ್ಬರು ಪ್ರಯಾಣಿಕರನ್ನು ಹೊಂದಿರುವ ಜಲಾಂತರ್ಗಾಮಿ ನೌಕೆಯ ಪಯಣದ ಮೂಲಕ ಟೈಟಾನಿಕ್ ದುರಂತ ಸ್ಥಳದ ತಳವನ್ನು ಸುರಕ್ಷಿತವಾಗಿ ತಲುಪಲು ಸಾಧ್ಯ ಎಂದು ನಿರೂಪಿಸಲು ಓಹಿಯೊ ರಿಯಲ್ ಎಸ್ಟೇಟ್ ಹೂಡಿಕೆದಾರ ಹಾಗೂ ಕೋಟ್ಯಧಿಪತಿ ಲ್ಯಾರಿ ಕಾರ್ನರ್ ಮುಂದಾಗಿದ್ದಾರೆ.

ಈ ಕುರಿತು The Wall Street Journal ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಲ್ಯಾರಿ ಕಾರ್ನರ್, ನಾನು ಹಾಗೂ ಟ್ರೈಟನ್ ಜಲಾಂತರ್ಗಾಮಿ ಸಂಸ್ಥೆಯ ಸಹ ಸಂಸ್ಥಾಪಕ ಪ್ಯಾಟ್ರಿಕ್ ಲಾಹೆ ಇಬ್ಬರೂ ಒಟ್ಟಾಗಿ ಟೈಟಾನಿಕ್ ಹಡಗು ಅವಶೇಷಗಳಿರುವ 12,400 ಅಡಿಯ ಆಳಕ್ಕೆ ಜಲಾಂತರ್ಗಾಮಿಯಲ್ಲಿ ಪಯಣ ಬೆಳೆಸಲಿದ್ದೇವೆ ಎಂದು ಹೇಳಿದ್ದಾರೆ.

“ಸಾಗರವು ಅತ್ಯಂತ ಶಕ್ತಿಯುತವಾಗಿದ್ದು, ಅದರೊಳಗೆ ನೀವು ಸರಿಯಾದ ಮಾರ್ಗದಲ್ಲಿ ಸಂಚರಿಸಿದರೆ, ಅದು ವಿಸ್ಮಯಕಾರಿ, ಚೇತೋಹಾರಿ ಹಾಗೂ ನಿಜಕ್ಕೂ ಜೀವನದ ದಿಕ್ಕನ್ನು ಬದಲಿಸುವ ಪಯಣವಾಗಲಿದೆ ಎಂಬುದನ್ನು ನಾನು ಇಡೀ ಜಗತ್ತಿಗೆ ತೋರಿಸಲು ಬಯಸಿದ್ದೇನೆ” ಎಂದು ಲ್ಯಾರಿ ಕಾರ್ನರ್ ಹೇಳಿಕೊಂಡಿದ್ದಾರೆ.

ಟೈಟಾನಿಕ್ ಹಡಗಿನ ಅವಶೇಷಗಳಿರುವ ತಳಕ್ಕೆ ತಲುಪಲು ಜೂನ್ 18, 2023ರಂದು ಟೈಟನ್ ಜಲಾಂತರ್ಗಾಮಿ ನೌಕೆಯಲ್ಲಿ ಪ್ರಯಾಣ ಬೆಳೆಸಿದ್ದ ಓಶಿಯನ್ ಗೇಟ್ ಸಿಇಒ ಸ್ಟಾಕ್ಟನ್ ರಶ್ ಸೇರಿದಂತೆ ಒಟ್ಟು ಐದು ಮಂದಿ, ಟೈಟನ್ ಜಲಾಂತರ್ಗಾಮಿ ನೌಕೆಯು ಸ್ಫೋಟಗೊಂಡಿದ್ದರಿಂದ ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News