ಸೌಹಾರ್ದದ ಪರಂಪರೆ ವರ್ತಮಾನದ ಆತಂಕಗಳು
ಕನ್ನಡದ ಬಹುವಿಸ್ತಾರದ ವಿಮರ್ಶಾಲೋಕದಲ್ಲಿ ಹೊಸ ಹೆಜ್ಜೆ-ಹೊಳಹುಗಳಿಂದ ಗಮನಸೆಳೆದಿರುವ ಡಾ. ರವಿಕುಮಾರ್ ನೀಹ ಅವರು ಹಳ್ಳಿಗಾಡಿನ ಪ್ರತಿಭೆ. ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ನೀಲಗೊಂಡನಹಳ್ಳಿಯಲ್ಲಿ ಜನನ. ತಂದೆ ಎನ್.ಸಿ. ಹನುಮಂತಯ್ಯ, ತಾಯಿ ದೊಡ್ಡಕ್ಕ. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ರವಿಕುಮಾರ್ ಬೆಂಗಳೂರು ವಿವಿಯಲ್ಲಿ ಕನ್ನಡ ಎಂ.ಎ. ಪದವಿ ಗಳಿಸಿದ್ದಾರೆ. ಆನಂತರ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಡಾ. ರಹಮತ್ ತರೀಕೆರೆ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಸಾಹಿತ್ಯದಲ್ಲಿ ಪುಸ್ತಕ ವಿಮರ್ಶೆಯ ಸ್ವರೂಪ’ ಎಂಬ ವಿಷಯ ಕುರಿತ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪಡೆದಿದ್ದಾರೆ. ಬರಹದ ಪಯಣದಲ್ಲಿ ವಿಮರ್ಶೆಯ ಮಾರ್ಗ ಹಿಡಿದಿರುವ ರವಿಕುಮಾರ್ ನೀಹ ಸಂಶೋಧನೆ, ಖಂಡಕಾವ್ಯಗಳೆಡೆಗೂ ಗುರುತಿಸಿಕೊಂಡವರು. ಒಂದೂವರೆ ದಶಕದಿಂದಲೂ ಕನ್ನಡ ಪ್ರಾಧ್ಯಾಪಕರಾಗಿ ಅಧ್ಯಾಪನ ನಿರತರಾಗಿರುವ ರವಿಕುಮಾರ್ ಈವರೆಗೆ ಸುಮಾರು ಹನ್ನೆರಡು ಕೃತಿಗಳನ್ನು ರಚಿಸಿದ್ದಾರೆ. ಸೂಲು, ಪುಸ್ತಕ ವಿಮರ್ಶಾ ಕಥನಗಳು, ಕಂಡದಾರಿ, ಧರ್ಮ ರಾಜಕಾರಣ, ಜಲಜಂಬೂಕನ್ಯೆ(ಖಂಡಕಾವ್ಯ), ಕ್ರಿಯಾಪದ, ನೆಲನಿಲ್ಲದ ಭೂಮಿ, ನಡೆದದಾರಿ, ಸುವರ್ಣ ಮುಖಿ, ಪುಸ್ತಕ ವಿಮರ್ಶೆ: ಸಾಂಸ್ಕೃತಿಕ ಬಿಕ್ಕಟ್ಟುಗಳ ಹುಡುಕಾಟ, ನೆರಳಿಲ್ಲದ ಕಾಯ ಮತ್ತು ಬಯಲ ಬನಿ ಪ್ರಕಟಿತ ಕೃತಿಗಳು.
ಡಾ.ರವಿಕುಮಾರ್ ನೀಹ
ಈ ವಿಷಯವನ್ನು ಕುರಿತು ಯೋಚಿಸುವಾಗ ಎರಡು ರೀತಿಯ ಆತಂಕಗಳು ನಮ್ಮ ಮುಂದೆ ಇವೆ. ಸೌಹಾರ್ದವನ್ನು ಗುಪ್ತವಾಗಿ ಉಳಿಸಿಕೊಂಡು ಬಂದಿರುವ ತಾಣಗಳನ್ನು ಲೋಕಕ್ಕೆ ಪರಿಚಯಿಸುವುದರಿಂದ ಅವುಗಳನ್ನು ಛಿದ್ರಗೊಳಿಸುವ ಇವತ್ತಿನ ವಿದ್ಯಮಾನಗಳು ಒಂದು ಕಡೆಯಾದರೆ, ಅಂತಹವುಗಳನ್ನು ಆಧುನಿಕತೆಯ ಹೆಸರಿನಲ್ಲಿ ಮೂಲ ಸ್ವರೂಪವನ್ನು ಹಾಳುಗೆಡಹುವ ಆತಂಕ ಇನ್ನೊಂದು ಬಗೆಯದು. ಇವತ್ತು ಪ್ರಚಾರವೇ ಇಂಥ ತಾಣಗಳಿಗೆ ಒಡ್ಡಿರುವ ಬಹಳ ದೊಡ್ಡ ಸವಾಲು. ಈ ಎರಡು ನೆಲೆಗಳು ಇಬ್ಬಾಯಿ ಖಡ್ಗದಂತೆ ಕೊರೆಯುತ್ತಿವೆ.
ಕಳೆದ ಎಪ್ಪತ್ತರ ದಶಕದಲ್ಲಿ ಕೋಟಿಗಾನಹಳ್ಳಿ ರಾಮಯ್ಯ ಅವರು ಕುಂಬಾರ ಹೆಣ್ಣುಮಗಳು ‘ಅನುಸೂಯಮ್ಮ’ಳ ಬಗೆಗೆ ಬರೆದ ಪ್ರಸಿದ್ಧ್ದ ಹಾಡು ‘ಕೋಟಿ ಕೋಟಿ ಕಷ್ಟಗಳಲ್ಲಿ ನೀ ಹುಟ್ಟಿ ಬೆಳೆದೆಯಮ್ಮ ನನ್ನ ತಂಗಿ ಅನಸೂಯ’ ಇದು ಕ್ರಾಂತಿರೂಪದ ಹಾಡು. ಆ ಕಾಲದ ಎಲ್ಲ ಜೀವಪರ ಮನಸ್ಸುಗಳು ಒಟ್ಟಿಗೆ ಸೇರಲು ಕಾರಣವಾಗಿತ್ತು. ಸೇರಿದ್ದವು. ದಲಿತ ಮನಸ್ಸುಗಳು ಅದರ ಮುಂದಾಳತ್ವ ವಹಿಸಿದ್ದವು. ಅದಾದ ಮೂವತ್ತು- ನಲುವತ್ತು ವರುಷಗಳ ನಂತರ ಈಗ ಈ ಸಮುದಾಯದವರಿಂದಲೇ ಕೆಳ ಸಮುದಾಯಗಳ ಮೇಲೆ ಹಲ್ಲೆ ನಡೆಯುತ್ತಿದೆ. ಹಿಂದೆ ಒಂದಾಗಿದ್ದ ಸಮುದಾಯಗಳು ಈಗ ವಿಘಟನೆಗೊಂಡು ಪರಸ್ಪರ ಎದುರಾಳಿಯಾಗಿ ನಿಂತಿರುವುದು. ಹಾಗೇ ನಿಲ್ಲುವಂತೆ ಮಾಡಿರುವ ವ್ಯವಸ್ಥೆಯಾದರೂ ಯಾವುದು? ಇದೊಂದು ಸಾಮಾಜಿಕ ಪಲ್ಲಟ. ಇದು ಒಂದು ಕಡೆಯಿರಲಿ.
ಸೌಹಾರ್ದ ಇಂದಿನ ಅಗತ್ಯ ಸಂಜೀವಿನಿ. ನಮ್ಮೆಲ್ಲ ಸಂಕಟಗಳಿಗೆ ಅಲ್ಲಿಂದಲೇ ಪ್ರಾಣವಾಯುವನ್ನು ಆಯ್ದು ತರಬೇಕು ನಿಜ. ಆದರೆ ಹಾಗೆ ಆಯ್ದು ತರುವಂಥ ಜಾಗವನ್ನು ಭ್ರಷ್ಟ ಮಾಡುವ ಅಪಾಯ ತಪ್ಪಿದ್ದಲ್ಲ. ಇಂಥ ಸಂದಿಗ್ಧ ಸ್ಥಿತಿಯಲ್ಲಿ ಸೌಹಾರ್ದದ ತಲ್ಲಣಗಳನ್ನು ಕುರಿತು ಯೋಚಿಸಬೇಕಾಗಿದೆ.
ದೈವಕೇಂದ್ರಿತವಾದ ಸಾಂಸ್ಥಿಧರ್ಮವೂ, ರಾಜಕೀಯ ಪ್ರಭುತ್ವವೂ ಏಕೀಭವಿಸಿರುವ ಈ ಕಾಲ ಮತ್ತು ವರ್ತಮಾನದ ಮತೀಯ ದಳ್ಳುರಿಗಳು ಈ ಸೌಹಾರ್ದದ ಕುರಿತ ಮಾತಿಗೆ ಒತ್ತಾಸೆಯಾಗಿ ನಿಂತಿವೆ. ತಾಣಗಳ ಬಗೆಗೆ ಆಪ್ತತೆ, ಆತಂಕವೂ ಇದೆ. ಹಾಗಾಗಿ ಸೌಹಾರ್ದ ಪರಂಪರೆಯನ್ನು ತಳಸಮುದಾಯಗಳ ಅಥವಾ ಶ್ರಮಿಕ ಸಮುದಾಯಗಳಲ್ಲಿರುವ ‘ಆಧ್ಯಾತ್ಮಿಕ ಆರಾಧನೆ’ಯಾಗಿಸಿಕೊಂಡು ನೋಡುವುದು ಸರಿಯೆನಿಸುತ್ತದೆ. ಕಾರಣ ಇಷ್ಟೇ ‘ಸೌಹಾರ್ದ ಪರಂಪರೆ’ ಇವತ್ತಿಗೂ ಜೀವಂತವಾಗಿರುವುದು ಭ್ರಷ್ಟಗೊಳ್ಳದ ತಳಸಮುದಾಯಗಳ ಗುಂಪುಗಳಲ್ಲಿ; ಆರಾಧನೆಗಳಲ್ಲಿ. ಆಚರಣೆಗಳಲ್ಲಿ.
ಇಂಥ ಸೌಹಾರ್ದದ ನೆಲೆಗಳು ಜಾತಿಭೇದ, ಸಾಂಸ್ಥಿಕ ಧರ್ಮ, ಪುರೋಹಿತಶಾಹಿ, ಆಚರಣೆ, ಸ್ವರ್ಗ-ನರಕ ಕಲ್ಪನೆಗಳನ್ನು ನಿರಾಕರಿಸುತ್ತವೆ. ಅರಿವು, ಗುರು, ಸತ್ಸಂಗ, ಭಜನೆ, ಅಮಾಸೆಪೂಜೆ, ಕಾಯಕ, ಆಚರಣೆ ಇತ್ಯಾದಿಗಳು ಈ ನೆಲೆಯ ಪ್ರಮುಖ ಜೀವದ್ರವ್ಯಗಳು.
ನಾಡಿನಾದ್ಯಂತ ಹರಡಿಕೊಂಡಿರುವ ಈ ಪರಂಪರೆಯನ್ನು ಕಳೆದ ಹತ್ತದಿನೈದು ವರುಷಗಳಿಂದೀಚೆಗೆ ಅತಿ ಎನಿಸುವಷ್ಟು ಹಾಳುಗೆಡವಲಾಗುತ್ತಿದೆ. ಸೌಹಾರ್ದ ಎಂದರೆ ಕೇವಲ ಧಾರ್ಮಿಕ ನೆಲೆಯನ್ನು ಕೂಡಿಸುವುದಲ್ಲ. ಅಥವಾ ಹಿಂದೂ-ಮುಸ್ಲಿಮರ ಏಕತೆ ಮಾತ್ರವಲ್ಲ, ಸಕಲ ಜಾತಿ, ಧರ್ಮಗಳು ಒಂದಾಗಿ ಬದುಕುವುದು. ಸಕಲ ಜೀವಿಗಳು ತರತಮಗಳನ್ನು ತೊರೆದು ಜೀವಿಸುವುದು. ಆದರೆ ಸೌಹಾರ್ದವನ್ನು ಕೇವಲ ಹಿಂದೂ-ಮುಸ್ಲಿಮರ ಭಾಗವಾಗಿಯಷ್ಟೇ ನೋಡುವಂತೆ ಒತ್ತಾಯಿಸುವುದು ಒಂದು ರಾಜಕೀಯ ಹುನ್ನಾರ. ಈ ವೈವಿಧ್ಯ ಭಾರತದಲ್ಲಿ ಜಾತಿ, ಲಿಂಗ, ಜೀವಿಗಳ ನಡುವೆ ಕೂಡಿಸಬೇಕಾಗಿದೆ. ಹೀಗಾಗಿ ಸೌಹಾರ್ದ ಧಾರ್ಮಿಕತೆ-ಧರ್ಮಗಳ ಆಚೆಗೂ ವಿಸ್ತರಿಸಿಕೊಳ್ಳುವುದಂಥದ್ದು. ಜಾತಿ, ಲಿಂಗ, ಪ್ರಾಣಿ-ಪಕ್ಷಿಗಳ ನಡುವಿನ ತರತಮದ ಪೊರೆಯನ್ನು ಹರಿದು ಒಟ್ಟಾಗಿ ಕೂಡಿಸುವ ತತ್ವವದು. ಆದರೆ ಸೌಹಾರ್ದ ಎಂಬ ನಿಲುವು ಕಟ್ಟಿಕೊಳ್ಳುವ ಅಥವಾ ಹುಡುಕಿಕೊಳ್ಳುವ ಹೊತ್ತಿನಲ್ಲಿ ಅದನ್ನು ಒಡೆಯುವ ಒಂದು ದೊಡ್ಡ ರಾಜಕಾರಣ ಒಳಗೆ ನಡೆಯುತ್ತಿರುತ್ತದೆ. ಇಂಥ ಅಧಿಕಾರಸ್ಥ ರಾಜಕಾರಣದ ಭಾಗವಾಗಿ ಸೌಹಾರ್ದ ಬಳಕೆಯಾಗುತ್ತಿರುವುದು ಇವತ್ತಿನ ದೊಡ್ಡ ಆತಂಕ.
ಸೌಹಾರ್ದದ ಮೂಲ ತತ್ವವೇ ಜಾತಿ ಧರ್ಮಗಳ ನಿರಾಕರಣೆ. ಆದರೆ ಬದುಕಿನಲ್ಲಿ ಕಾಣುವುದಕ್ಕಿಂತ ಹೆಚ್ಚಾಗಿ ಅನುಭಾವ, ಅಧ್ಯಾತ್ಮಗಳಲ್ಲಿ ಸೌಹಾರ್ದದ ಹರಹಿದೆ. ಎಲ್ಲಿ ಸಾಂಪ್ರದಾಯಿಕ ನಿಲುವುಗಳ ಪ್ರತಿರೋಧವಿರುತ್ತದೆಯೋ ಅಲ್ಲಿ ಸೌಹಾರ್ದ ಜಿನುಗುತ್ತಿರುತ್ತದೆ. ಈ ಸೌಹಾರ್ದವನ್ನು ಒಡೆಯುವ ತಂತ್ರಗಳನ್ನು ವ್ಯವಸ್ಥೆ ನೊಣೆಯುತ್ತಿದ್ದರೂ ಮನಸ್ಸುಗಳು ಕಟ್ಟುತ್ತಿರುತ್ತವೆ. ಯಾವನ್ನು ತಮ್ಮ ಅಸ್ತ್ರಗಳನ್ನಾಗಿ ಬಳಸಿಕೊಂಡು ಒಡೆಯಲು ಪ್ರಯತ್ನಿಸುತ್ತಿರುತ್ತವೆಯೋ ಅಂತಹವುಗಳನ್ನೇ ಬಳಸಿಕೊಂಡು ಸೌಹಾರ್ದ ತನ್ನ ಮಾನವೀಯ ಬದುಕನ್ನು ಬೆಸೆಯುತ್ತಿರುತ್ತದೆ. ಅದು ತತ್ವಪದಕಾರರು, ಗುರುಭಜನೆ, ಪಾರಮಾರ್ಥ, ಅಮಾಸೆ- ಹುಣ್ಣಿಮೆ ಹಾಡು, ಬೆಳದಿಂಗ್ಳಪ್ಪನ ಪೂಜೆ ಮುಂತಾದ ಆಚರಣೆಗಳಲ್ಲಿ ಸಹಜವಾಗಿರುತ್ತವೆ.
ಜನಪದರ ಆಚರಣೆ ಮತ್ತು ‘ಬದುಕು’ ಇವುಗಳ ಸಹಜ ಹೊಂದಾಣಿಕೆ ಸೌಹಾರ್ದದ ಮೂಲ ಬೀಜ. ಬದುಕೆಂದರೆ ಕೇವಲ ಜೀವನ ಎಂಬ ಅರ್ಥ ಇಲ್ಲಿಲ್ಲ. ಇಲ್ಲಿ ಬದುಕು ಎಂದರೆ ‘ಜೀವಿಸು’ವುದರ ಜೊತೆಗೆ ಕೆಲಸವೂ ಹೌದು. ಬದುಕನ್ನು ಬೆಳಗುವುದೆಂದರೆ ಕಾಯಕವನ್ನು ಉಜ್ಜಿ, ತೀಡಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು. ಆ ಮೂಲಕ ಲೋಕವನ್ನು ತೀಡುವುದೂ ಹೌದು. ಶರಣರ ಕಾಯಕ ತತ್ವ ‘ಬದುಕು’ ಆಗಿ ಇಂದಿಗೂ ಸಾಗುತ್ತಿದೆ. ಆಚರಣೆ ಎಂದರೆ ಯಾಂತ್ರಿಕ ರೂಪದ್ದಲ್ಲ. ಅಲ್ಲಿ ಸೇರುವಿಕೆ, ಕಸುಬು-ಕಾಯಕಗಳಿಗೆ ಗೌರವ, ಪರಿಕರಗಳ ಬಗೆಗೆ ದೈವತ್ವ, ಹಾಡು-ಭಜನೆಗಳ ಮೂಲಕ ಅವುಗಳಿಗೆ ವಂದಿಸುವುದು ಇವೆಲ್ಲವೂ ಆಗಿರುತ್ತವೆ.
ಇಂತಹ ಗುರುಭಜನೆಗೆ ಭಾಗೀದಾರರು ಸಹಜವಾಗಿಯೇ ಶ್ರಮಿಕರು, ಮಹಿಳೆಯರು, ದಲಿತರು. ಇವರೇ ಇಂಥ ನೆಲೆಯನ್ನು ಮುನ್ನಡೆಸುತ್ತಿರುತ್ತಾರೆ. ಅಷ್ಟೇ ಅಲ್ಲ ಅವರೇ ಅದರ ಜೀವಶಕ್ತಿ, ಚಾಲಕಶಕ್ತಿಯಾಗಿರುತ್ತಾರೆ. ಇವು ನೇರವಾಗಿ ಆಚರಣಾಲೋಕದವೇ ಆಗಿರುತ್ತವೆ. ಈ ಆಚರಣಾಲೋಕದೊಳಗೆ ಮುಳುಗಿರುವವರಿಗೆ ಸೀಮಿತ ಧಾರ್ಮಿಕ ನೋಟವಿರುವುದಿಲ್ಲ. ಹಾಗಾಗಿ ಬಲಿಷ್ಠಜಾತಿಯವರು, ಸ್ಥಾಪಿತ ಧರ್ಮದವರು ಇದರ ಭಾಗವಾಗಿರುವುದಿಲ್ಲ.
ಈ ಸೌಹಾರ್ದದ ವಿಶೇಷವಾದ ಇನ್ನೊಂದು ಆಯಾಮವೆಂದರೆ ಪಂಚ‘ಮ’ಕಾರಗಳು. ಈ ಪಂಚ‘ಮ’ಕಾರಗಳಲ್ಲಿ ಸೌಹಾರ್ದದ ನೆಲೆಗಳು ಈಗಲೂ ಜೀವಂತವಾಗಿರುತ್ತವೆ. ಈ ಸೌಹಾರ್ದವನ್ನು ಒಡೆಯಲು ಬಳಸುವುದು ಈ ಪಂಚ‘ಮ’ಕಾರಗಳ ಪಲ್ಲಟಗಳನ್ನೇ. ಮುಖ್ಯವಾಗಿ ಆಹಾರದ ಮೇಲೆ ಆಗುತ್ತಿರುವ ಹಲ್ಲೆಗಳು. ಅದರಲ್ಲೂ ಮುಖ್ಯವಾಗಿ ‘ಬಾಡು’ ಮಾಂಸ ಬಳಕೆಯೇ ಇವತ್ತಿನ ದೊಡ್ಡ ಅಸ್ತ್ರ. ಯಾವ ಬಾಡನ್ನು ತಿನ್ನಬೇಕು? ಎಲ್ಲಿಂದ ಕೊಂಡುಕೊಳ್ಳಬೇಕು? ಅಂಗಡಿ ಯಾರದಾಗಿರಬೇಕು? ಇತ್ಯಾದಿಗಳು ನಮ್ಮ ಮುಂದೆ ಕತ್ತಿ ಹಿಡಿದು ಝಳಪಿಸುತ್ತಿವೆ. ಆಹಾರದ ಆಯ್ಕೆಗಳು ನಮ್ಮ ಮುಂದಿಲ್ಲದೆ ಆಳುವ ಸರಕಾರಗಳ ಆಯ್ಕೆಗಳಾಗಿವೆ.
ತುಮಕೂರು ಭಾಗದಲ್ಲಿ ಒಂದು ವಿಶಿಷ್ಟವಾದ ಆಚರಣೆಯಿದೆ. ಬಹುಶಃ ಕರ್ನಾಟಕದ ಎಲ್ಲ ಭಾಗಗಳಲ್ಲಿಯೂ ಇದು ಗುಪ್ತವಾಗಿ ಭಿನ್ನರೂಪದಲ್ಲಿರಬಹುದು. ಅದಕ್ಕೆ ಪಾರಮಾರ್ಥ ಎಂದು ಕರೆಯುತ್ತಾರೆ. ಗುರುಭಜನೆ ಎಂದೂ ಕರೆಯುತ್ತಾರೆ. ಈಗ ಈ ಆಚರಣೆ ಕೇವಲ ಯಾಂತ್ರಿಕವಾಗಿಯಷ್ಟೇ ಉಳಿದಿದೆ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಕಂಡಿದ್ದು. ಆಗ ಅತ್ಯಂತ ಹೆಚ್ಚಾಗಿ ಜೀವಂತವಾಗಿತ್ತು. ಅದರ ಆಚರಣೆಯೇ ವಿಶಿಷ್ಟ. ಗುರುದೀಕ್ಷೆ ತೆಗೆದುಕೊಂಡವರೆಲ್ಲ ಪ್ರತೀ ಅಮಾಸೆಯಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿ ಸೇರುತ್ತಿದ್ದರು. ಅದು ರಾತ್ರಿ ಹೊತ್ತು. ಅಲ್ಲಿ ಲಿಂಗ, ಜಾತಿ, ಧರ್ಮಗಳ ಲೆಕ್ಕಚಾರವಿರುತ್ತಿರಲಿಲ್ಲ. ಎಲ್ಲರೂ ರಾತ್ರಿ ಒಟ್ಟಾಗಿ ಅಡುಗೆ ಮಾಡಿಕೊಳ್ಳುತ್ತಿದ್ದರು. ಅದು ಮಾಂಸದ ಊಟವೇ.(ಅದರಲ್ಲೂ ದನದ ಬಾಡೇ). ಅಡುಗೆ ತಯಾರಾದ ಮೇಲೆ ಎಲ್ಲರೂ ಸುತ್ತ ಕುಳಿತುಕೊಂಡು ಮಧ್ಯದಲ್ಲಿ ಗುರುಪೂಜೆಯನ್ನು ಮಾಡಿ ಎಲ್ಲರೂ ತಟ್ಟೆಗೆ ಊಟವನ್ನು ಬಡಿಸಿಕೊಳ್ಳುತ್ತಿದ್ದರು. ಸ್ವಯಂ ಸೇವೆ ಎಂದು ಹೋಟೆಲಿನಲ್ಲಿ ಇರುತ್ತದ್ದಲ್ಲ, ಆ ರೀತಿಯಲ್ಲಿ ಅಲ್ಲ. ಕೂಡಿಕೊಳ್ಳುವ ಗುಣ ಅಲ್ಲಿ ಮುಖ್ಯವಾದುದು. ಬಡಿಸಿಕೊಂಡ ಮೇಲೆ, ಊಟ ಮಾಡುವ ಕ್ರಮವೂ ವಿಶಿಷ್ಟ. ಭಿನ್ನ. ಇಲ್ಲೊಂದು ಆಚರಣಾ ಲೋಕವೇ ಕಣ್ದೆರೆಯುತ್ತದೆ.
ಪ್ರತಿಯೊಬ್ಬರೂ ತಾವು ತಮ್ಮ ಕೈಯಿಂದ ಊಟ ಮಾಡದೆ ತಮ್ಮ ಪಕ್ಕದಲ್ಲಿ ಯಾರು ಕೂತಿರುತ್ತಾರೋ ಅವರಿಗೆ ಇವರ ಕೈಯಿಂದ ಊಟ ಮಾಡಿಸುತ್ತಿದ್ದರು. ಅವರು ಅವರ ಪಕ್ಕದವರಿಗೆ, ಹೀಗೆ ಎಲ್ಲರೂ ಇನ್ನೊಬ್ಬರಿಗೆ ಊಟ ಮಾಡಿಸುತ್ತಿದ್ದರು. ಊಟ ಮುಗಿದ ಮೇಲೆ ಕೈ ತೊಳೆಯುವುದು ಕೂಡ ಪಕ್ಕದವರ ಕೈಯನ್ನು ತಮ್ಮ ಕೈಯಲ್ಲಿ ಹಿಡಿದು ತೊಳೆಯುತ್ತಿದ್ದರು. ಇದು ಆಚರಣಾ ಲೋಕದೊಳಗೆ ಕೂಡಿಕೊಳ್ಳುವ ಗುಣದ್ದು.
ಈ ಊಟದ ಆಚರಣೆ ಮುಗಿದ ಮೇಲೆ ರಾತ್ರಿಯೆಲ್ಲ ತತ್ವಪದ, ಹಾಡು, ಭಜನೆ, ಚಿಂತನೆ-ಜಿಜ್ಞಾಸೆ ಎಲ್ಲ ಮುಗಿದು ಬೆಳಗಾಗುವ ಸಮಯದಲ್ಲಿ ಮತ್ತೆ ಗುರುಪೂಜೆಯನ್ನು ಮಾಡಿ, ಸುತ್ತ ಕುಳಿತಿರುವ ಎಲ್ಲರ ತಲೆಯ ಮೇಲೂ ಹೂವಿಟ್ಟು ಕೊನೆಗೊಳಿಸುತ್ತಿದ್ದರು. ಅಲ್ಲಿ ಅವರು ಆಚರಿಸುವುದು ಮುಖ್ಯವಾಗಿ ಗುರುಪೂಜೆಯನ್ನು. ಅವರು ಅಲ್ಲಿಂದ ಬಂದಮೇಲೆ ಬೆಳಗಾದ ಮೇಲೆ ತಮ್ಮ ಜಾತಿಗಳ, ಧರ್ಮಗಳ, ಲಿಂಗಗಳ ವರ್ತುಲ ದೊಳಕ್ಕೆ ಸೇರಿಕೊಳ್ಳುತ್ತಿದ್ದರು. ಆದರೆ ರಾತ್ರಿಯ ಆ ಆಚರಣೆಯಲ್ಲಿ ಯಾವುದೇ ಭೇದಗಳಿರುತ್ತಿರಲಿಲ್ಲ. ಅಲ್ಲಿ ಮಾಂಸ ಎಷ್ಟು ಮುಖ್ಯವೋ, ಹೆಂಡವೂ, ಮೈಥುನವೂ ಅಷ್ಟೇ ಮುಖ್ಯವಾದ ಆಚರಣೆಯ ಭಾಗವಾಗಿರುತ್ತಿತ್ತು. ಬೆಳಗಾದ ಮೇಲೆ ತರತಮದ ಸಮರ್ಥಕರಾಗಿಬಿಡುತ್ತಿದ್ದರು. ರಾತ್ರಿಹೊತ್ತಿನಲ್ಲಿ ಅವರು ಈ ಲೌಕಿಕ ಜಗತ್ತಿನೊಳಗೆ ಕೂಡಿಕೊಳ್ಳುವುದನ್ನು ಸಮಾಜ ಸಹಿಸುತ್ತಿರಲಿಲ್ಲ..
ಈ ಆಚರಣೆಯಲ್ಲಿ ಜಾತಿ, ಧರ್ಮ ನಿರಾಕರಣೆಯ ಜೊತೆಗೆ ದೈವಗಳ ನಿರಾಕರಣೆಯಿದೆ. ಅಥವಾ ದೈವ ಈ ಪರಂಪರೆಗೆ ಎರಡನೇ ಆಯ್ಕೆ. ಮೊದಲನೇ ಆಯ್ಕೆಯೇ ಗುರುತತ್ವ. ‘ಗುರು ನಡೆಸಿದ ಹಾಗೆ ನಡೆಯುವೆ, ಎಲ್ಲವೂ ಗುರುವಿಚ್ಛೆ’ ಎಂಬುದು ಈ ಪರಂಪರೆಯ ಮುಖ್ಯ ಧಾರೆ.
ಈ ಕಡೆ ಒಂದು ಕತೆಯಿದೆ. ಅತ್ತೆ, ಸೊಸೆ ಇದ್ದರಂತೆ. ಅವರು ಕುರಿ, ಕೋಳಿ, ಬೆಕ್ಕು, ನಾಯಿ, ದನ ಎಲ್ಲ ಸಾಕಿದ್ದರಂತೆ. ಪ್ರತಿಸಂಜೆ ಅತ್ತೆ ಮಂಕರಿಯ ಕೆಳಕ್ಕೆ ಕೋಳಿಗಳನ್ನು ಕ್ಕೋ ಕ್ಕೋ ಎಂದು ಕೂಗಿ ಅವುಗಳನ್ನು ‘ಗುರುವೇ ಕಾಪಾಡಪ್ಪ’ ಎಂದು ಮಂಕರಿಯಡಿ ಕೂಡುತ್ತಿದ್ದಳಂತೆ. ಹೀಗೆ ಕಾಲ ನಡೀತಿತ್ತಂತೆ. ಒಮ್ಮೆ ಅತ್ತೆ ಎಲ್ಲೋ ಅಸಂದರ್ಭ ಹೋಗಬೇಕಾಗಿ ಬಂತಂತೆ. ತನ್ನ ಸೊಸೆಗೆ ಕೋಳಿ-ಪ್ರಾಣಿಗಳ ಕಾಳಜಿ ವಹಿಸಲು ಹೇಳಿ ಹೋದಳಂತೆ. ಆ ದಿನ ಸಂಜೆ ಸೊಸೆ ಎಲ್ಲವನ್ನು ಅವವುಗಳ ಜಾಗದಲ್ಲಿ ಸೇರಿಸಿ. ಕೋಳಿಯನ್ನು ಕ್ಕೋಕ್ಕೋ ಎಂದು ಕರೆದು ಮಂಕರಿಯಡಿ ಕೂಡಿ ‘ದೇವರೇ ಕಾಪಾಡಪ್ಪ’ ಎಂದು ಆ ರಾತ್ರಿ ಕಳೆದಳಂತೆ. ಬೆಳಗ್ಗೆ ಎದ್ದು ಮಂಕರಿ ಎತ್ತಿ ನೋಡಿದರೆ ಒಂದು ಕೋಳಿಗಳೂ ಇಲ್ಲ. ಅತ್ತೆ ಬಂದು ಕೋಳಿ ಎಲ್ಲಿ? ಎಂದು ಕೇಳಿದಾಗ ರಾತ್ರಿ ನಡೆದ ಎಲ್ಲವನ್ನು ಸೊಸೆ ಹೇಳಿದಳಂತೆ. ಆಗ ಅತ್ತೆ ‘ಅಯ್ಯೋ ಮಂಕೆ ಈ ತರ ಯಾಕೆ ಮಾಡಿದೆ? ದೇವರೇ ಕಾಪಾಡಪ್ಪ ಅಂತ ಹೇಳಬಾರದಿತ್ತು. ಗುರುವೇ ಕಾಪಾಡಪ್ಪ ಎಂದಿದ್ದರೆ ಕೋಳಿಗಳು ಬದುಕುತ್ತಿದ್ದವು. ಅವುಗಳ ಜೀವ ನೀನೇ ಕಳೆದೆ’ ಎಂದಳಂತೆ. ಸೊಸೆ ‘ಅದು ಯಂಗತ್ತೆ’ ಎಂದು ಕೇಳಿದಾಗ, ಅತ್ತೆ ಹೇಳಿದಳಂತೆ, ‘ದೇವರು ಎಲ್ಲವನ್ನು ಕಾಪಾಡುವವನು. ಅವನಿಗೆ ಕೋಳಿಜೀವ ಎಷ್ಟು ಮುಖ್ಯವೋ’ ಬೆಕ್ಕು, ನಾಯಿಯ ಜೀವವೂ ಅಷ್ಟೇ ಮುಖ್ಯ. ಹಾಗಾಗಿ ಬೆಕ್ಕೋ, ನಾಯಿಯೋ ಜೀವ ಉಳಿಸಲು ಕೋಳಿಗಳನ್ನು ತಿನ್ನಲು ಅವಕಾಶ ಕೊಟ್ಟಿದೆ. ಸಕಲ ಜೀವಗಳನ್ನು ಕಾಪಾಡುವ ಹೊಣೆ ದೇವರದು. ಆದರೆ ಗುರುವಿನದು ಅದಲ್ಲ. ಗುರುವಿಗೆ ಹೊಣೆ ನೀಡಿದರೆ ಕಾಪಾಡುವ ಶಕ್ತಿ ಗುರುತತ್ವಕ್ಕಿದೆ. ಎಂದಳಂತೆ. ಇದು ತುಂಬಾ ಪ್ರಸಿದ್ಧವಾದ ಕತೆ. ನಮ್ಮ ಜನಪದಕಾರರು ಗುರುವಿಗೆ ಕೊಟ್ಟ ಮಹತ್ವವಿದು.
ಇಂತಹ ಆಚರಣಾಲೋಕವನ್ನು ಅಧ್ಯಾತ್ಮದ ಹೆಸರಿನಲ್ಲಿ ಸರಳೀಕರಿಸುವುದು ಸರಿಯಲ್ಲ ಎನಿಸಿದರೂ ಎಲ್ಲಿ ಸೌಹಾರ್ದದ ಪಸೆ ಮಿಸುಕಾಡುತ್ತಿರುತ್ತವೆಯೋ ಅವುಗಳನ್ನೆಲ್ಲ ವೇದಾತೀತ ಅಧ್ಯಾತ್ಮ ಎನ್ನಬಹುದೇನೋ. ವೈದಿಕ ಅಧ್ಯಾತ್ಮದಲ್ಲಿ ಭಜನೆ, ವ್ರತ, ದೇವರ ಆರಾಧನೆ, ಇಷ್ಟಾರ್ಥಸಿದ್ಧಿಗೆ ಪೂಜೆ, ಉಪವಾಸ, ಜಪಮಾಲೆ ಇತ್ಯಾದಿಗಳು ಪ್ರಮುಖ ಪಾತ್ರ ವಹಿಸುತ್ತವೆ.
ಆದರೆ ವೇದಾತೀತ ಅಥವಾ ಸಮುದಾಯ ಕೇಂದ್ರಿತ ಅಧ್ಯಾತ್ಮದಲ್ಲಿ ಇವೆಲ್ಲವೂ ಇರುವುದಿಲ್ಲ. ಇದ್ದರೂ ಅವಕ್ಕೆ ಮಹತ್ವವೇ ಇರುವುದಿಲ್ಲ. ಈ ಕೂಡಿಕೊಳ್ಳುವ ಮನೋಭಾವವುಳ್ಳದವರು ಹೆಚ್ಚುದಿನ ಇಂಥ ಲೋಕದೊಳಗೆ ಇರಲಾರರು. ಆ ಕಾರಣದಿಂದಲೋ ಏನೋ ಉಚ್ಚಜಾತಿ/ವರ್ಗಗಳು ಇಂಥ ಆಚರಣಾಲೋಕದಿಂದ ದೂರವಿರುತ್ತವೆ.
ಈ ಆಚರಣಾಲೋಕದಲ್ಲಿ ಪ್ರಾಣಿ-ಸಸ್ಯ, ಪಕ್ಷಿಲೋಕದೊಂದಿಗೆ ಕೂಡಿಕೊಳ್ಳುತ್ತಲೇ ಸಹಪಂಕ್ತಿ, ಸಹಭೋಜನ, ಸಹಬಾಳ್ವೆ, ಕೂತುಣ್ಣುವುದು, ಒಟ್ಟಿಗೆ ಕೂತು ಮಾತಾಡುವುದು, ಕೂಡಿಬಾಳುವುದು ಬಹುಮುಖ್ಯ ತತ್ವ. ಈ ಕೂಡುವಿಕೆ ಈ ಕಾಲದ ತುರ್ತು ಹೌದು. ಆದರೆ ಅದು ಜೀವಂತವಾಗಿರುವುದು ಶ್ರಮಿಕರಲ್ಲಿ, ಮಹಿಳೆಯರಲ್ಲಿ, ದಲಿತರಲ್ಲಿ. ಈ ಪರಸ್ಪರ ಗೌರವ, ಹೊಂದಾಣಿಕೆ, ಭಾವುಣಿಕೆಯ ಕಾರಣಗಳಿಂದ ಎಲ್ಲ ಶ್ರಮಿಕ ಸಮುದಾಯಗಳ ಸಹ ಕಸುಬುಗಳ ಬಗೆಗೆ ಗೌರವಗಳಿರುತ್ತವೆ. ಅಂತಸ್ತು ಲವಲೇಶವೂ ಇಲ್ಲಿ ಸುಳಿಯುವುದಿಲ್ಲ. ಪುರುಷಾಧಿಕಾರವಂತೂ ತಮ್ಮ ಮನೆಗಳಲ್ಲೇ ಬಂದಿಯಾಗಿರುತ್ತದೆ. ಒಟ್ಟಿಗೆ ಕೂತುಣ್ಣುವ, ಬಾಡು ತಿನ್ನುವ, ಹೆಂಡ ಕುಡಿಯುವ, ಹಾಡು ಹೇಳುವ, ಜಿಜ್ಞಾಸೆ ನಡೆಸುವ ಮತ್ತಿತ್ತರ ಆಚರಣಾಲೋಕದೊಳಗೆ ಮುಳುಗಿರುತ್ತವೆ. ಸ್ವಸಾಧನೆ, ಗುರುದೀಕ್ಷೆ, ಗುರುಬೋಧನೆ ಇವೆಲ್ಲವೂ ಗುಪ್ತವಾಗಿ ಸಾಗುತ್ತಿರುತ್ತವೆ. ಬಹುಪಾಲು ಆ ಊರಿನವರಿಗೆ ಇದೇ ಗೊತ್ತಾಗುವುದಿಲ್ಲ. ಇಂಥ ಆಚರಣಾಲೋಕವೂ ಊರಿನ ಹೊರಗೆ, ಊರಿನಿಂದ ದೂರದಲ್ಲಿರುವುದು ಕೇವಲ ಸಾಂಕೇತಿಕ ಮಾತ್ರವಲ್ಲ ಎನಿಸುತ್ತದೆ.
ಯಾಕೆ ಇಂತಹ ವೇದಾತೀತ ಅಥವಾ ಸಮುದಾಯ ಕೇಂದ್ರಿತ ಅಧ್ಯಾತ್ಮಗಳು ರಾತ್ರಿಹೊತ್ತು ಗುಪ್ತವಾಗಿ ಯಾರಿಗೂ ಗೊತ್ತಾಗದೆ ಆಚರಣಾಲೋಕದಲ್ಲಿರುತ್ತವೆ ಎಂದು ನೋಡಿದರೆ, ಅದು ಈ ಲೋಕದಿಂದ ಕಾಣೆಯಾಗಿರುವ ಮಾನವೀಯ ಲೋಕವೊಂದನ್ನು ಗುಪ್ತವಾಗಿ ಉಳಿಸಿಕೊಂಡಿರುತ್ತವೆ. ಯಾವುದೇ ತಾರತಮ್ಯವಿಲ್ಲದೇ ಬದುಕುತ್ತಿರುತ್ತವೆ. ತಿಂಗಳಿಗೆ ಒಂದು ರಾತ್ರಿಯಾದರೂ ಕಳೆದುಕೊಂಡ ಬದುಕನ್ನು ಜೀವಿಸುತ್ತಿರುತ್ತವೆ. ಅಷ್ಟೇ ಅಲ್ಲ ಈ ಲೋಕದ ಬಗೆಗೆ ಅವರಿಗೆ ಭಯವೂ ಇದೆ. ಎಲ್ಲಿ ಬಂದು ಇದನ್ನೆಲ್ಲ ಹಾಳುಗೆಡುವುತ್ತಾರೋ ಎಂದು ಗುಪ್ತ ಆಚರಣಲೋಕದೊಳಗೆ ಬುಡ್ಡೀದೀಪದೊಳಗೆ ಲೋಕವನ್ನು ಮರುಸೃಷ್ಟಿ ಮಾಡುತ್ತಿರುತ್ತಾರೆ. ಇಂಥ ಲೋಕದಿಂದ ಪಡೆಯುವ ವೈಚಾರಿಕತೆಯನ್ನು ತಮ್ಮ ಬಾಳಿನಲ್ಲಿ ಆವಾಹಿಸಿಕೊಳ್ಳಲು ಈ ಗುಂಪು ಪರಿತಪಿಸುತ್ತಿರುತ್ತದೆ. ಆಧುನಿಕಲೋಕವು ಅಲ್ಲಿಂದಲೇ ಮರುಜೀವ ಪಡೆದುಕೊಳ್ಳಬೇಕಾದ ಅಗತ್ಯವಿದೆಯೆನಿಸುತ್ತದೆ.