ವಿದ್ಯಾರ್ಥಿ ಕಾಲದ ಅಗ್ನಿ ಪರೀಕ್ಷೆಗಳು!

ಕವಿತೆ, ಸಿನೆಮಾ, ಸಾಮಾಜಿಕ ಚಿಂತನೆ-ಹೋರಾಟ ಹೀಗೆ ಹಲವಾರು ರಂಗಗಳಲ್ಲಿ ತೊಡಗಿಸಿಕೊಂಡಿರುವ ಸಂವಥರ್ ಸಾಹಿಲ್ ಅವರದ್ದು ಬಹುಮುಖ ಪ್ರತಿಭೆ. ಕನ್ನಡಪ್ರಭದಲ್ಲಿ ಬರೆಯುತ್ತಿದ್ದ ‘ಬಾಳ್ಕಟ್ಟೆ’ ಅಂಕಣ ಬರಹ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಭಾರತದ ವಿವಿಧ ಭಾಷೆಗಳಲ್ಲಿ ಪ್ರಕಟವಾದ ಕವಿತೆಗಳನ್ನು ‘ರೂಪರೂಪಗಳನು ದಾಟಿ’ ಎಂಬ ಶೀರ್ಷಿಕೆಯಡಿಯಲ್ಲಿ ಅನುವಾದಿಸಿದ್ದಾರೆ. ‘ಓದುವುದೆಂದರೆ ಸ್ಪರ್ಶಿಸಿದಂತೆ’ ಅವರ ಮತ್ತೊಂದು ಅನುವಾದಿತ ಕೃತಿ ಇತ್ತೀಚೆಗೆ ಪ್ರಕಟವಾಗಿದೆ.

Update: 2025-01-01 06:49 GMT

ಮಾರ್ಚ್ ತಿಂಗಳು ಬಂತೆಂದರೆ ಜೀವನ ತುಂಬಾ ನೀರಸವಾಗುತಿತ್ತು. ಸೆಪ್ಟಂಬರ್ ಸಹ ಏನೂ ಭಿನ್ನವಾಗಿರುತ್ತಿರಲಿಲ್ಲ. ಶಾಲಾ ಪರೀಕ್ಷೆ ಇರುವ ತಿಂಗಳು ಎಂದರೆ ಹಾಗೇ. ಬೆಳಗ್ಗೆ ಸಹಜವಾಗಿ ಎಚ್ಚರಾಗುವ ಮುನ್ನವೇ ಅಪ್ಪ-ಅಮ್ಮ ನಿದ್ದೆಯಿಂದ ಎಬ್ಬಿಸಿ, ಓದು... ಎಂದು ಹುಕುಂ ಹಾಕುತ್ತಿದ್ದರು. ಸುಮ್ಮನೆ ಸ್ನೇಹಿತರ ಮನೆಗೆ ಹೋದರೆ, ಅವನು ಓದುತ್ತಿದ್ದಾನೆ. ನಿನಗೆ ಓದಲಿಕ್ಕೆ ಇಲ್ಲವಾ? ಅನ್ನೋ ಪ್ರಶ್ನೆ. ಅಪ್ಪಿ ತಪ್ಪಿ ಟೀಚರ್ ಏನಾದರು ದಾರಿಯಲ್ಲೋ ಪೇಟೆಯಲ್ಲೋ ಸಿಕ್ಕಿಬಿಟ್ಟರೆ ಭಯಂಕರ ಗಂಭೀರ ಮುಖ ಮಾಡಿಕೊಂಡು, ಆಯ್ತಾ ತಯಾರಿ? ಅಂತ ಕೇಳೋರು. ಬದುಕಿಗೆ ಪರೀಕ್ಷೆ ಬಿಟ್ಟರೆ ಮತ್ಯಾವ ರಂಗೂ ಇಲ್ಲ ಎನ್ನುವಂತಾಗುತ್ತಿತ್ತು. ಪರೀಕ್ಷೆ ಬಂತೆಂದರೆ ಆಟ, ಹಾಸ್ಯ, ತಮಾಷೆ ಎಲ್ಲವೂ ರಜೆಯ ಮೇಲೆ ಹೋಗುತ್ತಿದ್ದವು. ಆ ನೀರಸ ಜೀವನ ಒಂದು ರೀತಿಯಲ್ಲಿ ಉಪ್ಪು, ಹುಳಿ, ಖಾರ, ಹೀಗೆ ಯಾವುದೇ ಸ್ವಾದ ಇಲ್ಲದ ರೋಗಿಗಳ ಆಹಾರದಂತೆ ಆಗಿಬಿಡುತ್ತಿತ್ತು.

ಆದರೂ ಇಂಥಾ ಭಾವಶೂನ್ಯ ದಿನಗಳಲ್ಲಿ ಒಂದು ಮನರಂಜನೆಯಂತೂ ಖಾತ್ರಿ. ಅದು ಪರೀಕ್ಷೆಯಲ್ಲಿ ನಕಲಿ ಹೊಡೆಯುತ್ತಿದ್ದ ಮತ್ತು ಮೋಸ ಮಾಡುತ್ತಿದ್ದ ಸಹಪಾಠಿಗಳು.

ಅತ್ಯಂತ ಕಷ್ಟದ ಕೆಲಸ ಇದ್ದಾಗ ಮಹಾ ಸೋಂಬೇರಿ ವ್ಯಕ್ತಿಗೆ ಆ ಕೆಲಸ ನೀಡಿದರೆ ಆತ/ ಆಕೆ ಖಂಡಿತವಾಗಿಯೂ ನೀವು ಊಹಿಸದ ಒಂದು ಶಾರ್ಟ್ ಕಟ್ ಮಾರ್ಗ ಸಂಶೋಧಿಸಿ ಆ ಕೆಲಸ ಮುಗಿಸುತ್ತಾನೆ/ಳೆ. ಪರೀಕ್ಷೆ ಪಾಸ್ ಆಗಲು ಸಾಂಪ್ರದಾಯಿಕವಾಗಿ ಬುದ್ಧಿವಂತರು ಎಂದು ಅನಿಸಿಕೊಳ್ಳದೆ ಇರುವವರು ಅನೇಕಾನೇಕ ಶಾರ್ಟ್ ಕಟ್‌ಗಳನ್ನು ಕಂಡುಹಿಡಿಯುತ್ತಾರೆ. ಇಂಥಾ ಅಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಸಮಾಜ ಎಂದೂ ಗೌರವಿಸುವುದಿಲ್ಲ ಮತ್ತು ಅದರೊಳಗೆ ಇರುವ ಸೃಜನಶೀಲ ಗುಣವನ್ನು ಗುರುತಿಸುವುದಿಲ್ಲ. ಎಲ್ಲರೂ ಬರೀ ರ್ಯಾಂಕ್ ಪಡೆದವರನ್ನು ತಲೆ ಮೇಲೆ ಹೊತ್ತುಕೊಂಡು ಮೆರೆಸುತ್ತಾರೆಯೇ ಹೊರತು, ಕೂದಲೆಳೆಯ ಅಂತರದಿಂದ ಸೋಲಿನ ಬಾಯಿಯಿಂದ ತಪ್ಪಿಸಿಕೊಂಡವರ, ಸೋಲುವ ಖಾತ್ರಿ ಇದ್ದರೂ ಧೀರೋದಾತ್ತವಾಗಿ ಸೆಣಸಾಡಿದ ಸೈನಿಕರ ಇತಿಹಾಸ ಯಾರೂ ಬರೆಯುವುದಿಲ್ಲ.

ನೈತಿಕತೆ? ಅದೆಲ್ಲ ಲೋಕದ ರೀತಿನೀತಿಗೆ ಮೆಚ್ಚುಗೆಯಾಗುವಂತೆ ಅಳತೆ ಕೊಟ್ಟು ಹೊಲಿಸಿದ ಬುದ್ಧಿವಂತ ಮಕ್ಕಳಿಗೆ. ಹೆದ್ದಾರಿ ಮೇಲೆ ಓಡಿಸಲು ಗಾಡಿ ಇಲ್ಲದ, ಫುಟ್ಪಾತ್ ಮೇಲೆ ನಡೆಯಲು ಚಪ್ಪಲಿ ಇಲ್ಲದ, ಆದರೂ ತಮ್ಮ ಒಳದಾರಿ (ತೀರಾ ನೈತಿಕವಂತರು ಇದನ್ನು ‘ಅಡ್ಡ ದಾರಿ’ ಇಲ್ಲ ‘ಕಳ್ಳ ದಾರಿ’ ಎಂದು ಓದಿಕೊಳ್ಳಬಹುದು) ತಾವೇ ನಿರ್ಮಿಸಿಕೊಳ್ಳುವ ಬಡಪ್ರಾಣಿಗಳಿಗೆ ನೈತಿಕತೆಯ ಬೋಧೆ ಹೇಳೋದು ಅಂದರೆ, ನ್ಯಾಯನಾ ಸಾರ್?

ಮೇಷ್ಟ್ರುಗಳು ಎದೆಯುಬ್ಬಿಸುವಂತೆ, ಮೀಸೆ ತಿರುಗಿಸುವಂತೆ ಮಾಡುತ್ತಿದ್ದ ರ್ಯಾಂಕ್ ಹೋಲ್ಡರ್ ಬುದ್ಧಿವಂತರ ಬಳಿ ರಾತ್ರಿ ನಿದ್ದೆ ಬಿಟ್ಟು ಓದಿದ ಒಂದೆರಡು ಒಣ ಒಣ ವಾಕ್ಯ ಬಿಟ್ಟರೆ ಹೆಚ್ಚೇನೂ ಹೇಳಿಕೊಳ್ಳಲಿಕ್ಕೆ ಇರುವುದಿಲ್ಲ. ಅದೇ ಕಾಪಿ ಹೊಡೆದ, ಒಳದಾರಿ ನಿರ್ಮಿಸಿ ನಡೆದ ದಡ್ಡ್ ನನ್ ಮಕ್ಳನ್ನ ಕೇಳಿ ನೋಡಿ... ಅವರ ಬಳಿ ಹೇಳಲಿಕ್ಕೆ ಒಂದಾದಮೇಲೊಂದು ಸ್ವಾರಸ್ಯಕರ ಕತೆ ಇರುತ್ತದೆ.

ಇನ್ನೊಬ್ಬರ ಉತ್ತರ ಪತ್ರಿಕೆಯನ್ನು ಇಣುಕಿ ನೋಡಿ ಉತ್ತರ ಕದಿಯೋದು ಸಾಮಾನ್ಯ. ಆದರೆ ಅದು ಅಂಥಾ ಸೃಜನಶೀಲ ಮಾರ್ಗವೇನೂ ಅಲ್ಲ. ಒಂಥರಾ ಆಲಸಿಗಳ ಕಾಪಿ ಹೊಡೆಯೋ ಪದ್ಧತಿ ಅದು. ಟೂ ಬೋರಿಂಗ್.

ಪರೀಕ್ಷಾ ಕೊಠಡಿಯಲ್ಲಿ ಒಂದೇ ತರಗತಿಯ ಮಕ್ಕಳನ್ನು ಒಂದೇ ಬೆಂಚಿನಲ್ಲಿ ಕೂರಿಸದಿರುವುದು ರೂಢಿ. ಒಮ್ಮೆ ಹೀಗೆ ಪರೀಕ್ಷೆಯಲ್ಲಿ ನನ್ನ ಪಕ್ಕದಲ್ಲಿ ಕುಳಿತಿದ್ದ ನನ್ನ ಸೀನಿಯರ್ ಒಬ್ಬ ಹೊತ್ತುಹೊತ್ತಿಗೆ ನೆಲವನ್ನು ನೋಡಿ, ಉತ್ತರ ಬರೆಯುತ್ತಿದ್ದ... ತೊಡೆಯ ಮೇಲೆ ಪುಸ್ತಕ ಏನಾದರು ಇಟ್ಟುಕೊಂಡಿದ್ದಾನೋ ಎಂದು ದೃಷ್ಟಿ ಕೆಳಗಿಳಿಸಿದರೆ ಊನ್ಹೂ... ಇಲ್ಲ. ತೊಡೆಯ ಮೇಲೆ ಚೀಟಿ ಏನೂ ಇಲ್ಲ. ದೃಷ್ಟಿಯನ್ನು ಮತ್ತೊಂದಿಷ್ಟು ಕೆಳಗಿಳಿಸಿದಾಗ ಕಂಡಿದ್ದೇನು? ಆಹಾ... ಹಾಲಿನಂಥಾ ಬಿಳುಪು ಹೆಚ್ಚೇನೂ ಮೈಲಿಗೆಯಾಗದ ಹೊಸ ಪಾರಗಾನ್ ಚಪ್ಪಲಿ ಮೇಲೆ ರೆನಾಲ್ಡ್ಸ್ ಪೆನ್‌ನಿಂದ ಬರೆದ ಉತ್ತರಗಳು. ಪರೀಕ್ಷಾ ನಿರ್ವಹಣಾಧಿಕಾರಿ ಬಳಿ ಬಂದಾಗ ಸುಮ್ಮನೆ ಚಪ್ಪಲಿ ಹಾಕಿಕೊಂಡರಾಯಿತು. ಪಾರಗಾನ್ ಚಪ್ಪಲಿಯವರು ತಮ್ಮ ಜಾಹೀರಾತಿನಲ್ಲಿ, ಪ್ರತಿ ಹೆಜ್ಜೆಯಲ್ಲೂ ನಿಮ್ಮ ಜತೆಗೆ ಎಂದು ಹೇಳುತ್ತಿದ್ದ ಘೋಷವಾಕ್ಯಕ್ಕೆ ಅಂದು ಹೊಸ ಅರ್ಥ ಕಾಣಿಸಿದ ಆ ನನ್ನ ಸೀನಿಯರ್.

ಪರೀಕ್ಷೆಗೆ ಬರುವಾಗ ಹೆಚ್ಚಿನ ಹುಡುಗರು ಇಡಿಗೈ ಅಂಗಿಯನ್ನೇ ತೊಡುತ್ತಿದ್ದರು. ಅಂಗಿಯ ಕೈ ಮಡಚುವಾಗ ಅದರೊಳಗೆ ಚೀಟಿ ಇಟ್ಟುಕೊಂಡು ಕೈಬೀಸಿ ಬರುತ್ತಿದ್ದರು. ಕೊಠಡಿಯಲ್ಲಿ ಪರೀಕ್ಷೆಯ ಚಳಿ ಏರುತ್ತಿದ್ದಂತೆ ಅಂಗಿಯ ಕೈ ಬಿಚ್ಚುತ್ತಿದ್ದರು. ಚೀಟಿ ಹೊರತೆಗೆಯುವುದು ದೊಡ್ಡ ಸಂಗತಿಯಲ್ಲ. ತೆಗೆದು ಅದರಲ್ಲಿದ್ದ ಉತ್ತರವನ್ನು ಭಟ್ಟಿ ಇಳಿಸಿದ ನಂತರ ಆ ಚೀಟಿಯನ್ನು ಏನು ಮಾಡಬೇಕು? ಹಾಗೇ ಮಡಚಿ ಅಂಗಿಯ ಕೈಯೊಳಗಡೆ ಇಡಲು ಬೇಕಾದ ಸಮಯ ಸಂಯಮ ಎರಡೂ ಒಲಿಯದ ಸ್ಥಳ ಮಹಿಮೆ ಪರೀಕ್ಷಾ ಕೊಠಡಿಯದ್ದು. ನಮ್ಮ ಶಾಲೆಯ ಒಬ್ಬ ಹಾಗೇ ತೆಗೆದ ಚೀಟಿಯನ್ನು ಉತ್ತರ ಬರೆದ ನಂತರ ಗುಳುಂ ಮಾಡುತ್ತಿದ್ದ! ಒಮ್ಮೆ ಅದನ್ನು ನೋಡಿದ ಮೇಷ್ಟ್ರೊಬ್ಬರು, ನೀರು ಬೇಕಾ? ಎಂದು ಕೇಳಿದ್ದರು. ಚೀಟಿ ನುಂಗಿದ ಹುಡುಗ ತಾನು ಕಾಪಿ ಮಾಡಿದ್ದಕ್ಕೆ ಇದ್ದ ಏಕೈಕ ಪುರಾವೆ ನಾಶ ಮಾಡಿದ ಹೆಮ್ಮೆಯಲ್ಲಿ, ಮೇಷ್ಟ್ರನ್ನೇ ಪೇಚಿಗೆ ಸಿಲುಕಿಸಿದ ಸಂತೋಷದಲ್ಲಿ ಅವರ ಅಸಹಾಯಕ ಹಾಸ್ಯಚಟಾಕಿಯನ್ನು ನೆಪವಾಗಿಸಿಕೊಂಡು ಅಗತ್ಯಕ್ಕಿಂತ ಹೆಚ್ಚೇ ನಕ್ಕಿದ್ದ. ನಾವೆಲ್ಲರೂ ನಕ್ಕಿದ್ದೆವು.

ದಡ್ಡ್ ನನ್ನ್ ಮಕ್ಕಳಿಗೆಂದೇ ಒಂದಿಷ್ಟು ಗೈಡ್ ಹೊತ್ತಿಗೆಗಳು ಇರುತ್ತಿದ್ದವು. ಸೂಪರ್ ಡೈಜೆಸ್ಟ್. ಡೈಮಂಡ್ ಡೈಜೆಸ್ಟ್. ಹೀಗೆ ಏನೇನೋ ಚಿತ್ರವಿಚಿತ್ರ ಹೆಸರಿನ ಗೈಡ್ ಪುಸ್ತಕಗಳು. ಅವುಗಳಲ್ಲಿ ಪಠ್ಯಪುಸ್ತಕದ ಪಾಠಗಳನ್ನು ತಿಳಿಗೊಳಿಸಿ ಕೊಡಲಾಗುತ್ತಿತ್ತು. ದಡ್ಡರನ್ನೇ ಉದ್ದೇಶಿಸಿ ಮಾಡಲಾದ ಇಂಥಾ ಗೈಡ್ ದಡ್ಡರಿಗೆ ಉಪಕಾರಿಯಾದರೂ ಆಲಸಿಗರಿಗೆ ಹೆಚ್ಚೇನೂ ಉಪಯುಕ್ತವಲ್ಲ. ತಿಳಿಯಾದುದನ್ನೂ ಓದಲಾಗದಷ್ಟು ಆಲಸ್ಯ ಅವರಿಗೆ. ಅದರೊಂದಿಗೆ ಅನಾಸಕ್ತಿಯೂ ಇದ್ದರೆ, ಗೈಡ್ ಆದರೂ ಪಾಪ ಏನು ಸಹಾಯ ಮಾಡಬಲ್ಲದು? ಆದರೂ ಪರೀಕ್ಷಾ ಒತ್ತಡ ಅವರನ್ನೂ ಬಿಡದು. ಹೀಗಿರುವಾಗ ಪರೀಕ್ಷೆ ಎದುರಿಸಲು ಮಾರ್ಗವಾದರೂ ಏನು? ನಮ್ಮೊಳಗಿನ ಒಬ್ಬ ಪೋರ ಪ್ರತಿ ವರ್ಷ ಇಂಥಾ ಗೈಡ್‌ನ ಎರಡೆರಡು ಪ್ರತಿ ಕೊಂಡುಕೊಳ್ಳುತ್ತಿದ್ದ. ಅಕ್ಟೋಬರ್ ಪರೀಕ್ಷೆಗೆ ಒಂದು ಪ್ರತಿಯ ಪುಟಗಳನ್ನೂ ನೀಟಾಗಿ ಕತ್ತರಿಸಿ ಪರೀಕ್ಷೆಗೆ ಕಿಸೆಯೊಳಗೆ ಇಟ್ಟುಕೊಂಡು ಹೋಗುತ್ತಿದ್ದ. ಎರಡನೇ ಪ್ರತಿಗೆ ಕತ್ತರಿ ಬೀಳುತ್ತಿದ್ದದ್ದು ಮಾರ್ಚ್ ತಿಂಗಳ ಪರೀಕ್ಷೆಯ ಸಂದರ್ಭದಲ್ಲಿ. ಚೀಟಿ ಬರೆದುಕೊಂಡು ಹೋಗಲೂ ಆಲಸ್ಯ ಮತ್ತು ದಡ್ಡತನ! ಆ ಗೈಡ್‌ಗಳನ್ನು ಪ್ರಕಟಿಸಿದ ಪ್ರಕಾಶಕರಿಗೂ ಅವರ ಮಹತ್ಕಾರ್ಯ ವಿದ್ಯಾರ್ಥಿಗಳಿಗೆ ಈ ಬಗೆಯಲ್ಲೂ ಸೇವೆ ಸಲ್ಲಿಸಬಹುದು ಎಂದು ಅವರು ಕಲ್ಪಿಸಿಕೊಂಡಿರಲಿಕ್ಕೂ ಸಾಧ್ಯವಿಲ್ಲ.

ನಮ್ಮ ಕಷ್ಟಗಳು ನಮ್ಮಂತೆಯೇ ಕಷ್ಟ ಪಡುವ ಇತರ ಜೀವಿಗಳೊಂದಿಗೆ ವಿಶಿಷ್ಟವಾದ ನಂಟನ್ನು ಏರ್ಪಡಿಸುತ್ತದೆ. ಸಹದುಃಖಿಗಳ, ಸಮಾನದುಃಖಿಗಳ ಸಾಂಗತ್ಯ ಬಹಳ ವಿಶೇಷವಾದದ್ದು. ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ. ಕ್ಯಾಂಪ್ ಎಲ್ಲವೂ ಹಲವು ಶಾಲೆಯ ವಿದ್ಯಾರ್ಥಿಗಳ ಮಾಸ್ಟರ್ ಪ್ಲ್ಯಾನ್ ಎಕ್ಸ್‌ಚೆಂಜ್ ಪ್ರೋಗ್ರಾಮ್ ಸಹ ಆಗಿರುತ್ತಿದ್ದವು. ಅರ್ಧರಾತ್ರಿಯ ಗುಪ್ತ ಗೋಷ್ಠಿಗಳಲ್ಲಿ ವಿದ್ಯಾರ್ಥಿಗಳು ಇತರ ಶಾಲೆಯ ಕಿಲಾಡಿಗಳು ಪರೀಕ್ಷೆ ಎದುರಿಸಲು ಕಂಡುಹುಡುಕಿದ ಸುರಂಗಮಾರ್ಗಗಳ ಬ್ಲೂ ಪ್ರಿಂಟ್ ಪಡೆದುಕೊಂಡು, ಅವರಿಗೆ ತಮ್ಮ ಶಾಲೆಯ ಪಟಿಂಗರು ಕಂಡುಹುಡುಕಿದ ರಹದಾರಿಗಳ ಬಗ್ಗೆ ತಿಳಿಸಿ ಋಣ ತೀರಿಸುತ್ತಿದ್ಧರು.

ಅಂಥಾ ಒಂದು ಗೋಷ್ಠಿಯಲ್ಲಿ ಕೇಳಿದ ಮಜವಾದ ಒಂದು ಕತೆ ಹೀಗಿದೆ...

ಒಂದಾನೊಂದು ಕಾಲದಲ್ಲಿ ಒಂದು ಸಣ್ಣ ಊರಿನಲ್ಲಿದ್ದ ಒಂದೇ ಒಂದು ಶಾಲೆಯಲ್ಲಿ ಒಬ್ಬರು ಮೇಷ್ಟ್ರು ಇದ್ದರು. ತಿಂಗಳ ಪರೀಕ್ಷೆಯ ಉತ್ತರಪತ್ರಿಕೆಗಳನ್ನೂ ಅವರು ಪೆನ್ಸಿಲಿನಿಂದ ತಿದ್ದುತ್ತಿದ್ದರು ಮತ್ತು ಪೆನ್ಸಿಲ್ ಬಳಸಿಯೇ ಅಂಕಗಳನ್ನು ಬರೆಯುತ್ತಿದ್ದರು. ಹಾಗೆ ಪೆನ್ಸಿಲಿನಲ್ಲಿ ತಿದ್ದಿ, ಅಂಕ ಬರೆದ ಉತ್ತರಪತ್ರಿಕೆಗಳನ್ನು ಕ್ಲಾಸಿನಲ್ಲಿ ವಿದ್ಯಾರ್ಥಿಗಳಿಗೆ ನೀಡಿ, ನಿಮಗೆ ಸಿಕ್ಕಿದ ಅಂಕ ಸರಿಯಾಗಿದೆಯೇ ಎಂದು ನೋಡಿ, ಎನ್ನುತ್ತಿದ್ದರು. ಒಂದೊಂದೇ ಕ್ಲಾಸಿನ ನೂರಾರು ಉತ್ತರಪತ್ರಿಕೆಗಳನ್ನು ತಿದ್ದಿದ ಮೇಲೂ ಅವರಿಗಿದ್ದ ಈ ಡೆಮಾಕ್ರಟಿಕ್ ಮನೋಭಾವ ಮೆಚ್ಚುವಂತಹದ್ದೇ. ಯಾವುದೇ ವಿದ್ಯಾರ್ಥಿಗೆ ತಾನು ಬರೆದ ಉತ್ತರಕ್ಕೆ ಹೆಚ್ಚಿನ ಅಂಕ ಸಿಗಬೇಕಿತ್ತು ಅಂತ ಅನ್ನಿಸಿದರೆ, ಅವರು ಮೇಷ್ಟ್ರ ಬಳಿ ಹೋಗಿ ತನ್ನ ಕೇಸ್ ಮಂಡಿಸಬಹುದಾಗಿತ್ತು. ಮೇಷ್ಟ್ರಿಗೆ ವಿದ್ಯಾರ್ಥಿಯ ಮಾತಿನಲ್ಲಿ ತರ್ಕ ಇದೆ ಎಂದು ಕಂಡರೆ, ಅಂಕಗಳನ್ನು ಹೆಚ್ಚಿಸುತ್ತಿದ್ದರು. ಹೀಗೆ ಒಂದು ಬಹಳ ನ್ಯಾಯುತವಾದ ವಾತಾವರಣ ಸೃಷ್ಟಿಸಿದ್ದ ಮೇಷ್ಟ್ರು ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಅಂಕಗಳು ಸರಿಯಾಗಿದೆ ಎಂದು ಹೇಳಿದ ಬಳಿಕ ಉತ್ತರಪತ್ರಿಕೆಯ ಮೇಲೆ ಪೆನ್ನಿನಿಂದ ಫೈನಲ್ ಮಾರ್ಕ್ಸ್ ಬರೆದು ಅದನ್ನೇ ಆಫೀಸ್‌ಗೆ ಕೊಡುತ್ತಿದ್ದರು.

ಇನ್ನ್ಯಾವುದೋ ಯುಗದ ಕತೆಯಾಗಿದ್ದರೆ, ಅದರಲ್ಲಿ ಈ ಮೇಷ್ಟ್ರೇ ಜನಮೆಚ್ಚಿದ ನಾಯಕರಾಗಿರುತ್ತಿದ್ದರು. ಆದರೆ ಇದು ಕಲಿ(ಯದವರ)ಯುಗದ ಕತೆ. ಇಲ್ಲಿ ನಾಯಕ ಇನ್ನ್ಯಾರೋ. ಇಂಥಾ ಮೇಷ್ಟ್ರ ಹೃದಯ ವೈಶಾಲ್ಯವನ್ನೇ ತನ್ನ ಅನುಕೂಲಕ್ಕೆ ತಕ್ಕಂತೆ ಬೆಂಡು ಮಾಡಿದ ಪೋಕರಿಯೇ ಈ ಕತೆಯ ನಾಯಕ. ಈ ಹೈದ, ಪರೀಕ್ಷೆ ಬರೆಯುವ ಸಂದರ್ಭದಲ್ಲೇ ತನ್ನ ಉತ್ತರ ಪತ್ರಿಕೆಯ ಮೇಲೆ ಪೆನ್ಸಿಲ್‌ನಿಂದ 28/50 ಬರೆದು ತನ್ನ ಉತ್ತರ ಪತ್ರಿಕೆ ಒಪ್ಪಿಸುತ್ತಿದ್ದ. ಮೊದಲೇ ಹೇಳಿದಂತೆ ಒಂದೊಂದು ಕ್ಲಾಸಿನಲ್ಲಿ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು. ಅದರಂತೆ ಮೇಷ್ಟ್ರು ನೂರಕ್ಕೂ ಹೆಚ್ಚು ಉತ್ತರ ಪತ್ರಿಕೆ ತಿದ್ದಬೇಕು. ಅಷ್ಟೊಂದು ಉತ್ತರಪತ್ರಿಕೆ ತಿದ್ದುವಾಗ ಪೇಪರ್ ಆಚೀಚೆ ಆಗುವುದು ಸಹಜವೇ. ಹಾಗೆ ಒಂದಾದಮೇಲೊಂದು ಉತ್ತರಪತ್ರಿಕೆ ತಿದ್ದುತ್ತಾ ಹೋಗುವಾಗ ನಡುವಿನಲ್ಲಿ ಆಗಲೇ ಪೆನ್ಸಿಲಿನಿಂದ ಅಂಕ ಬರೆದ ಒಂದು ಉತ್ತರಪತ್ರಿಕೆ ಕೈಗೆ ಸಿಕ್ಕಿದರೆ, ಮೇಷ್ಟ್ರು ತಿದ್ದಿಯಾಗಿದೆ ಎಂದು ಭಾವಿಸಿ ಅದನ್ನು ಆಗಲೇ ತಿದ್ದಿದ ಉತ್ತರಪತ್ರಿಕೆಗಳ ಜೊತೆಗಿಡುತ್ತಿದ್ದರು. ಕ್ಲಾಸಿನಲ್ಲಿ ಉತ್ತರ ಪತ್ರಿಕೆ ಹಂಚಿದಾಗ ಈ ಕಥಾನಾಯಕ ತನ್ನ ಬೆರಳನ್ನು ಎಲ್ಲಾ ಸಾಲಿನ ಮೇಲೆ ಒಮ್ಮೆ ಓಡಿಸಿ, ನಾಟಕೀಯವಾಗಿ ಬೆರಳುಗಳಿಂದ ಅಂಕಗಳನ್ನು ಕೂಡಿಸಿ, ಸರಿಯಾಗಿ ಅಂಕ ಹಾಕಿದ್ದೀರಿ ಸಾರ್, ಎನ್ನುತ್ತಿದ್ದ. ಮೇಷ್ಟ್ರು, ಮುಂದಿನ ಪರೀಕ್ಷೆಯಲ್ಲಿ ಇನ್ನೂ ಚೆನ್ನಾಗಿ ಮಾಡು, ಎಂದು ಹಾರೈಸುತ್ತಿದ್ದರು.

 

ನಮ್ಮ ಶಾಲೆಯಲ್ಲಿ ಅಂಥಾ ಡೆಮಾಕ್ರಟಿಕ್ ಮೇಷ್ಟ್ರುಗಳು ಇರದ ಕಾರಣ, ಈ ಮಾರ್ಗ ನಮ್ಮ ಪಾಲಿಗೆ ‘ರೋಡ್ ಲೆಸ್ ಟ್ರಾವೆಲ್ಡ್’ ಆಗಿಯೇ ಉಳಿಯಿತು.

ನಾವು ಪದವಿಪೂರ್ವ ಕಾಲೇಜು ಮೆಟ್ಟಿಲೇರಿದ ಹೊತ್ತಿಗೆ ಕೇರಳ ಮೂಲದ ಹುಡುಗ ನಮ್ಮ ಗೆಳೆಯರ ಬಳಗದಲ್ಲಿ ಒಬ್ಬನಾದ. ಅವನ ಅಕ್ಕನಿಗೆ ಆಗಷ್ಟೇ ನಮ್ಮೂರಿನಲ್ಲೇ ಕೆಲಸ ಸಿಕ್ಕಿತ್ತು. ಆತ ಆಕೆಯೊಂದಿಗೆ ಇಲ್ಲಿ ಬಂದು ನಮ್ಮ ಕಾಲೇಜ್ ಸೇರಿದ್ದ. ಅವನ ತಲೆಯ ಮೇಲೆ ಬಂದೂಕು ಇಟ್ಟು ಗೋಲಿ ಮಾರುಂಗಾ, ಅಂತ ಹಿಂದಿಯಲ್ಲಿ ಹೇಳಿದರೆ, ಆತ ಜೀವ ಉಳಿಸಿಕೊಳ್ಳಲೂ, ನಹೀ ಎಂಬ ಒಂದೇ ಒಂದು ಹಿಂದಿ ಪದ ಆಡಲು ಸಹ ಬಾರದವನಾಗಿದ್ದ. ಆದರೆ ಕಾಲೇಜಿನಲ್ಲಿ ಭಾಷಾ ಐಚ್ಛಿಕವಾಗಿ ಮಾತ್ರ ಆತ ಹಿಂದಿಯನ್ನೇ ಆಯ್ದುಕೊಂಡಿದ್ದ. ಯಾಕೆಂದರೆ ಲಭ್ಯವಿದ್ದ ಉಳಿದ ಐಚ್ಛಿಕ ಎಂದರೆ ಕನ್ನಡ ಮತ್ತು ಸಂಸ್ಕೃತ. ಮೊದಲ ವರ್ಷದಲ್ಲಿ ಹಾಗೂ ಹೀಗೂ ಹೇಗ್ಹೇಗೋ ಉತ್ತೀರ್ಣನಾದ. ಆದರೆ ನಾವೆಲ್ಲಾ ಎರಡನೇ ಪ.ಪೂ. ತರಗತಿಗೆ ಉತ್ತೀರ್ಣರಾಗಿ ಬರುವಾಗ ಬಹಳ ಸ್ಟ್ರಿಕ್ಟ್ ಆದ ಭೌತಶಾಸ್ತ್ರದ ಅಧ್ಯಾಪಕರೊಬ್ಬರು ಹೊಸ ಪ್ರಾಂಶುಪಾಲರಾಗಿ ನೇಮಕಗೊಂಡರು. ಅವರು ಮುಖ್ಯ ಕುರ್ಚಿ ಏರಿದ ಕ್ಷಣ ಹೊಸ ಹೊಸ ನಿಯಮಗಳು ಕಾಲೇಜನ್ನು ಪ್ರವೇಶಿಸಿದವು. ಅಲ್ಲಿ ತನಕ ಕಾಡಿನಂತಿದ್ದ ನಮ್ಮ ಕಾಲೇಜು, ಒಂದು ಜೂ ಆಗಿ ಮಾರ್ಪಾಡಾಯಿತು. ಅಧಿಕಾರ ಸ್ವೀಕರಿಸಿದ ಹೊಸ ಪ್ರಾಂಶುಪಾಲರು ಎರಡನೇ ಪ.ಪೂ. ತರಗತಿಯ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು -- ತಯಾರಿ ಪರೀಕ್ಷೆಯಲ್ಲಿ ಯಾವ ವಿದ್ಯಾರ್ಥಿ ಅನುತ್ತೀರ್ಣರಾಗುತ್ತಾನೋ ಅವನಿಗೆ ಕೊನೆಯ ಪರೀಕ್ಷೆಯ ಹಾಲ್ ಟಿಕೆಟ್ ಕೊಡುವುದಿಲ್ಲ, ಅವನನ್ನು ಪರೀಕ್ಷೆ ಬರೆಯಲು ಬಿಡುವುದಿಲ್ಲ! ನಮ್ಮ ಈ ಮಲಯಾಳಿ ಸ್ನೇಹಿತನ ಮೇಲೆ ತಯಾರಿ ಪರೀಕ್ಷೆಗೂ ಕೊನೆಯ ಪರೀಕ್ಷೆಯಷ್ಟೇ ಒತ್ತಡವಿತ್ತು. ಅವನ ಮುಳುಗುತ್ತಿರುವ ಹಡಗನ್ನು ಪಾರು ಮಾಡಲು ನಮ್ಮ ಬಳಗದವನೇ ಆದ ಮತ್ತೊಬ್ಬ ಸ್ನೇಹಿತ- ಆತ ಕನ್ನಡ ಭಾಷಾ ಐಚ್ಛಿಕದ ವಿದ್ಯಾರ್ಥಿ- ಒಂದು ಐಡಿಯಾ ಕೊಟ್ಟ...

ಎರಡನೇ ಪ.ಪೂ. ವಿದ್ಯಾರ್ಥಿಗಳಿಗೆ ತಯಾರಿ ಪರೀಕ್ಷೆ ಮತ್ತು ಮೊದಲನೇ ಪ.ಪೂ. ವಿದ್ಯಾರ್ಥಿಗಳ ಕೊನೆಯ ಪರೀಕ್ಷೆ ಏಕಕಾಲಕ್ಕೆ ನಡೆಯುತ್ತಿತ್ತು. ಪರೀಕ್ಷೆ ನಡೆಯುವ ಸಂದರ್ಭ, ಮೊದಲನೇ ವರ್ಷದ ವಿದ್ಯಾರ್ಥಿಗಳನ್ನು ನಡುವೆ ಕೂರಿಸಿ ಅವರ ಎಡ ಬಲಕ್ಕೆ ಎರಡನೇ ವರ್ಷದ ವಿದ್ಯಾರ್ಥಿಗಳನ್ನು ಕೂರಿಸಲಾಗುತಿತ್ತು. ಭಾಷಾ ಪರೀಕ್ಷೆ ಇದ್ದ ದಿನ ನಾವೆಲ್ಲಾ ಅಗತ್ಯಕ್ಕಿಂತ ಬೇಗ ಕಾಲೇಜಿಗೆ ಹೋದೆವು. ನಮ್ಮ ಮಲಯಾಳಿ ಸ್ನೇಹಿತನಿಗೆ ಕುಳಿತುಕೊಳ್ಳಲು ನಿಗದಿಯಾದ ಬೆಂಚಿನ ಮತ್ತೊಂದು ತುದಿ ಯಾರಿಗೆ ನಿಗದಿ ಆಗಿದೆ ಎಂದು ಪತ್ತೆಹಚ್ಚಿದೆವು. ಆ ಸಹಪಾಠಿಯನ್ನು ಕರೆದು ಅವನಿಗೆ ನಮ್ಮ ಐಡಿಯಾ ವಿವರಿಸಿ ಹೇಳಿ ಸಹಕರಿಸುವಂತೆ ಬೇಡಿಕೊಂಡೆವು. ಅವನೂ ಸ್ವಲ್ಪ ಸಾಹಸಿಗ ಆಗಿದ್ದ. ಈ ಕಿತಾಪತಿ ಕೆಲಸದ ಥ್ರಿಲ್ ಗಾಗಿ ಅವನು ಹೆಚ್ಚೇನೂ ರಾಗ ಎಳೆಯದೆ ಒಪ್ಪಿಕೊಂಡ. ಅವನ ಹೆಸರು ಬರೆಯಲಾಗಿದ್ದ ಬೆಂಚಿನ ಮೇಲಿದ್ದ ಅವನ ಹೆಸರನ್ನು ಅಳಿಸಿ, ನಮ್ಮ ಈ ಐಡಿಯಾ ಕೊಟ್ಟ ಗೆಳೆಯನ ಹೆಸರನ್ನು ನಾವೇ ಬರೆದೆವು. ಐಡಿಯಾ ಕೊಟ್ಟ ಗೆಳೆಯನ ಹೆಸರಿದ್ದ ಜಾಗದಲ್ಲಿ ನಮ್ಮ ಸಾಹಸಕ್ಕೆ ಸಹಕರಿಸಿದ ಸಹಪಾಠಿಯ ಹೆಸರನ್ನು ಬರೆದೆವು. ಇಷ್ಟೆಲ್ಲಾ ಮಾಡಿ ಸುಮ್ಮನೆ ಶಾಲಾ ಮೈದಾನದ ಬಳಿ ಇರುವ ಮರದ ಕೆಳಗೆ ಕೂತು ಪರೀಕ್ಷೆಗೆ ಕೊನೇಕ್ಷಣದ ತಯಾರಿ ಮಾಡುವ ನಾಟಕವಾಡಿದೆವು. ಬೆಲ್ ಬಡಿಯಿತು. ನಾವೆಲ್ಲಾ ಕಾಲೇಜ್ ಪ್ರವೇಶಿಸಿ, ಯಾವ ಕೊಠಡಿಯಲ್ಲಿ ಪರೀಕ್ಷೆ ನಡೆಯಲಿತ್ತೋ ಅಲ್ಲಿಗೆ ಹೋಗಿ, ನಮಗೆ ಯಾವ ಬೆಂಚ್ ಅಲೋಟ್ ಮಾಡಲಾಗಿದೆ ಎಂದು ಹುಡುಕಿ, ಅಲ್ಲಲ್ಲಿ ಕುಳಿತುಕೊಂಡೆವು. ಪರೀಕ್ಷೆ ಆರಂಭವಾಯಿತು. ಹಿಂದಿ ಪರೀಕ್ಷೆ ಬರೆಯುತ್ತಿದ್ದ ಮಲಯಾಳಿ ಸ್ನೇಹಿತ ಒಂದು ತುದಿಯಲ್ಲಿ ಮತ್ತು ಕನ್ನಡ ಪರೀಕ್ಷೆ ಬರೆಯುತ್ತಿದ್ದ ಗೆಳೆಯ ಇನ್ನೊಂದು ತುದಿಯಲ್ಲಿ. ನಡುವೆ ಪ್ರಥಮ ಪ.ಪೂ. ತರಗತಿಯ ಒಬ್ಬ ವಿದ್ಯಾರ್ಥಿನಿ. ಕನ್ನಡ ಪ್ರಶ್ನೆಪತ್ರಿಕೆ ಉತ್ತರಿಸುತ್ತಿದ್ದ ಗೆಳೆಯ ಉತ್ತೀರ್ಣನಾಗಲು ಬೇಕಾದಷ್ಟು ಉತ್ತರ ಬರೆದ. ಅಷ್ಟಾದ ಮೇಲೆ ಎರಡು ತುದಿಯಲ್ಲಿದ್ದ ಇವರಿಬ್ಬರು ತಮ್ಮ ತಮ್ಮ ಉತ್ತರ ಪತ್ರಿಕೆ ಅದಲು ಬದಲು ಮಾಡಿಕೊಂಡರು. ನಮ್ಮ ಕನ್ನಡ ಪಂಡಿತ ತನಗೆ ಗೊತ್ತಿದ್ದ ಹಿಂದಿಯಲ್ಲಿ ಪ್ರಬಂಧ, ಪತ್ರ ಲೇಖನ ಹೀಗೆ ತುಂಬಾ ಜನರಲ್ ಪ್ರಶ್ನೆಗಳಿಗೆ ಉತ್ತರ ಬರೆದು ಉತ್ತರ ಪತ್ರಿಕೆಯನ್ನು ಮಲಯಾಳಿ ಗೆಳೆಯನಿಗೆ ಹಿಂದಿರುಗಿಸಿದ. ಅವು ಇವನಿಗೆ ಪಾಸ್ ಆಗುವಷ್ಟು ಅಂಕ ತರಲು ಸಾಕಿತ್ತು. ಸ್ವಲ್ಪ ಹೊತ್ತಾದ ಬಳಿಕ ಇಬ್ಬರೂ ತಮ್ಮ ತಮ್ಮ ಉತ್ತರ ಪತ್ರಿಕೆ ಮೇಲ್ವಿಚಾರಕರ ಕೈಗೆ ಹಸ್ತಾಂತರಿಸಿ ಹೊರ ನಡೆದರು.

ಹೀಗೆ ನಮ್ಮ ಮಲಯಾಳಿ ಸ್ನೇಹಿತ ತಯಾರಿ ಪರೀಕ್ಷೆ ಪಾಸ್ ಮಾಡಿ ಕೊನೆಯ ಪರೀಕ್ಷೆ ಬರೆಯಲು ಅರ್ಹತೆ ಸಂಪಾದಿಸಿದ. ಆದರೆ ಅಲ್ಲಿ ಲಾಗ ಹಾಕಿದ.

ಅಂದು ಅವರಿಬ್ಬರ ನಡುವೆ ಕುಳಿತಿದ್ದ ಮೊದಲನೇ ಪ.ಪೂ. ವಿದ್ಯಾರ್ಥಿನಿ ನನ್ನ ದೋಸ್ತಿ ಆಗಿದ್ದಳು. ಅಂದು ಸಂಜೆ ನನಗೆ ಕರೆ ಮಾಡಿ ಆ ಮಲಯಾಳಿ ಸ್ನೇಹಿತನ ಹೆಸರು ತೆಗೆದು, ಆತ ನಿನ್ನ ಸ್ನೇಹಿತ ಅಲ್ವಾ? ಎಂದು ಕೇಳಿದಳು. ಹೌದು ಎಂದಾಗ, ಕನ್ನಡ ಮತ್ತು ಹಿಂದಿ ಪರೀಕ್ಷೆ ಬರೆಯುವ ಮಂದಿ ಏನು ಕಾಪಿ ಹೊಡಿತಾ ಇದ್ದರು ಅಂತ ತಿಳಿಯಲಿಲ್ಲ, ಎಂದಾಗ ಅವಳಿಗೆ ಇಡೀ ಕತೆ ಹೇಳಿದೆ. ಅದಕ್ಕೆ ಅವಳು ಸಿಡುಕುಸಿಡುಕಾಗಿ, ಓದಲಿಕ್ಕೆ ಅಷ್ಟೆಲ್ಲ ತಲೆ ಖರ್ಚು ಮಾಡಿದರೆ ರ್ಯಾಂಕ್ ಪಡೆಯಬಹುದಿತ್ತು, ಎಂದು ಹೇಳಿ ಫೋನ್ ಇಟ್ಟಳು.

ಸಾಂಪ್ರದಾಯಿಕ ಬುದ್ಧಿವಂತರಿಗೆ ನೈತಿಕ ಅಹಂ ಬಹಳವಿರುತ್ತದೆ. ಪಠ್ಯಪುಸ್ತಕದಲ್ಲಿ ಇರುವುದನ್ನು ಉರು ಹೊಡೆದು, ಪರೀಕ್ಷೆಯಲ್ಲಿ ಭಟ್ಟಿ ಇಳಿಸುವ ಇವರುಗಳ ನೈತಿಕತೆ ತನ್ನ ಮೂಲದಲ್ಲಿ ಒಳಮಾರ್ಗಗಳನ್ನು ಕಂಡುಹುಡುಕಿದವರ ಸೃಜನಶೀಲತೆ ತಮಗಿಲ್ಲ ಎಂಬ ಬಗ್ಗೆ ಹೊಟ್ಟೆಕಿಚ್ಚು ಇದ್ದರೂ ಇರಬಹುದು. ಸ್ವಂತಿಕೆಯುಳ್ಳ ಸೃಜನಶೀಲ ಮಾರ್ಗಗಳ ಬಗ್ಗೆ ಮೇಷ್ಟ್ರುಗಳೂ ಕೆಂಡಾಮಂಡಲವಾಗುತ್ತಾರೆ. ಈ ಸೃಜನಶೀಲ ಮಂದಿಯೆಲ್ಲರೂ ದಡ ಸೇರಿಯೇ ಸೇರುತ್ತಾರೆ ಎಂಬ ಬಗ್ಗೆ ಖಾತ್ರಿಯಿಲ್ಲ. ಅವರಲ್ಲಿ ಹಲವಾರು ಪರೀಕ್ಷೆ ಎಂಬ ರಣಭೂಮಿಯಲ್ಲಿ ಹುತಾತ್ಮರಾಗುತ್ತಾರೆ. ಅವರ ಧೀರತೆಯ ನೆನಪಿನಲ್ಲಿ ಯಾವ ವೀರಗಲ್ಲೂ ಇಲ್ಲ, ಅವರ ಶೂರತನದ ಕುರಿತಾಗಿ ಕಾವ್ಯ ಬರೆಯುವವರೂ ಇಲ್ಲ. ಅವರ ಕತೆ ಹೇಳುವ ಸಹೃದಯಿಗಳು ಯಾರೂ ಇಲ್ಲ. ಇತಿಹಾಸದ ನಿರ್ಲಕ್ಷ್ಯಕ್ಕೆ ಇಂಥಾ ಎಷ್ಟೋ ಮಂದಿ ಗುರಿಯಾಗಿದ್ದಾರೆ. ಅಷ್ಟಕ್ಕೂ, ಇತಿಹಾಸ ರಚಿಸುವುದು ಗೆದ್ದವರೇ ತಾನೇ!

 

ಒಂದು ಅದ್ವಿತೀಯ ಕತೆಯನ್ನು ಹೇಳಿ ಈ ಕಥಾಸರಿತಸಾಗರ ಅಂತ್ಯಗೊಳಿಸುತ್ತೇನೆ. ನಾನು ಅಧ್ಯಾಪನ ವೃತ್ತಿ ಬಿಟ್ಟು ಹೆಚ್ಚಿನ ವಿದ್ಯಾಭಾಸಕ್ಕೆ ಇಳಿದ ದಿನಗಳಲ್ಲಿ ಒಬ್ಬ ಕಿರಿಯ ಗೆಳೆಯನ ಕರೆ ಬಂತು. ನಾನು ಹಿಂದೆ ಪಾಠ ಮಾಡಿದ ಕಾಲೇಜಿನಲ್ಲೇ ಆತ ಕಲಿಯುತ್ತಿದ್ದ. ಪರೀಕ್ಷೆ ನಡೆಯುತ್ತಿದ್ದ ದಿನಗಳಲ್ಲಿ ಕರೆ ಮಾಡಿದ ಈತ ನನ್ನನ್ನು ತನ್ನ ಕೊಠಡಿಗೆ ಬರುವಂತೆ ವಿನಂತಿಸಿಕೊಂಡ. ಸಂಜೆ ಅವನ ಕೊಠಡಿಗೆ ಹೋದಾಗ ಹತ್ತು-ಹದಿನೈದು ಪ್ರಶ್ನೆಗಳನ್ನು ಕೈಗಿಟ್ಟು, ಈ ಪ್ರಶ್ನೆಗಳಿಗೆ ನನ್ನನ್ನು ತಯಾರು ಮಾಡು ಎಂದು ಕೇಳಿಕೊಂಡ. ಸರಿ ಎಂದು ಅವನ ಬಳಿ ನೋಟ್ಸ್ ಕೊಡು ಎಂದರೆ , ಆತ ಒಂದು ಬಂಡಿ ನೋಟ್ಸ್ ನನ್ನ ಮುಂದಿಟ್ಟ. ಅದನ್ನು ನೋಡಿ ಕಂಗಾಲಾದೆ ನಾನು. ಅಷ್ಟೊಂದು ನೋಟ್ಸ್ ಇರುವಾಗ ಈ ಪೋರ ಒಂದೈದು-ಹತ್ತು ಪ್ರಶ್ನೆಗಳಿಗೆ ತಯಾರಿ ಮಾಡುವ ಯೋಜನೆ ಹಾಕಿಕೊಂಡದ್ದು ಅಚ್ಚರಿ ಉಂಟು ಮಾಡಿತು. ಏನಯ್ಯ ಇಷ್ಟೆಲ್ಲಾ ಇದೆ ಓದಲಿಕ್ಕೆ. ಆದರೆ ನೀನು ನೋಡಿದರೆ ಇವಿಷ್ಟೇ ಪ್ರಶ್ನೆಗೆ ತಯಾರಿ ನಡೆಸುವ ಯೋಜನೆ ಹಾಕಿಕೊಂಡಿದ್ದೀಯಲ್ಲ. ಇದೇನು ನಿಮ್ಮ ಟೀಚರ್ ಕೊಟ್ಟ ಮಾಡೆಲ್ ಪ್ರಶ್ನೆ ಪತ್ರಿಕೆನಾ? ಎಂದು ಕೇಳಿದೆ. ಆತ ಬಹಳ ಆರಾಮಾಗಿ ಅಲ್ಲಪ್ಪ, ಎಂದು ಹೇಳಿದ್ದನ್ನು ನೋಡಿ ನನಗೆ ಭಯ ಹೆಚ್ಚಾಯ್ತು. ಏನಯ್ಯ ಕತೆ ನಿಂದು? ಎಂದು ಕೇಳಿದರೆ ಆತ ಮೊದಲಿಗೆ ನನ್ನನು ನಿಶ್ಚಿತನಾಗುವಂತೆ ಕೋರಿ, ತನ್ನ ಪ್ಲ್ಯಾನ್ ವಿವರಿಸಿದ. ಆತನಿಗೆ ಪಾಠ ಹೇಳುತ್ತಿದ್ದ ಟೀಚರ್ ಅದೇ ಶಾಲೆಯ ಹಳೆ ವಿದ್ಯಾರ್ಥಿ. ಇವರ ಕ್ಲಾಸಿನಲ್ಲಿ ಪಾಠ ಮಾಡುವಾಗ ಅವರು ತಾನು ವಿದ್ಯಾರ್ಥಿ ಆಗಿದ್ದಾಗ ಮಾಡಿಕೊಂಡ ನೋಟ್ಸ್ ಅನ್ನೇ ಓದಿ ಹೇಳುತ್ತಿದ್ದರಂತೆ. ಹಾಗೆ ಓದಿ ಹೇಳುತ್ತಿದ್ದದ್ದೇ ಪಾಠವಂತೆ! ಸ್ವಂತದ ಒಂದು ಸಾಲನ್ನು ಪಾಠ ಮಾಡದ ಅವರು ಸ್ವಂತದ ಪ್ರಶ್ನೆಪತ್ರಿಕೆ ತಯಾರಿಸಲು ಸಾಧ್ಯವೇ ಇಲ್ಲ! ಎನ್ನುತ್ತಾ ಈ ಪೋರ ನನ್ನತ್ತ ಕಿಲಾಡಿ ನೋಟ ಬೀರಿದ. ಅವರು ನಮಗೆ ಪಾಠ ಮಾಡುವ ಸಬ್ಜೆಕ್ಟ್ ಮತ್ತು ಅದಕ್ಕೆ ಸಂಬಂಧಿಸಿದ ಯಾವ್ಯಾವ ಸಬ್ಜೆಕ್ಟ್ ಅನ್ನು ಅವರು ವಿದ್ಯಾರ್ಥಿಯಾಗಿದ್ದಾಗ ಆಯ್ದುಕೊಂಡು ಕಲಿತಿದ್ದರೋ, ಆ ಎಲ್ಲ ಸಬ್ಜೆಕ್ಟುಗಳ ಪ್ರಶ್ನೆಪತ್ರಿಕೆಗಳನ್ನ್ನು - ಅದೂ ಅವರು ಪರೀಕ್ಷೆ ಎದುರಿಸಿದ ವರುಷಗಳ ಪ್ರಶ್ನೆಪತ್ರಿಕೆಗಳನ್ನು- ಕಾಲೇಜ್ ಲೈಬ್ರರಿಯಲ್ಲಿ ಹುಡುಕಿ ತೆಗೆದೆ ಎಂದು ಆತ ವಿವರಿಸಿದಾಗ ತಿಳಿಯಿತು, ಆ ಎಲ್ಲಾ ಪ್ರಶ್ನೆಪತ್ರಿಕೆಗಳ ಸಂಕಲನವೇ ಆತ ನನಗೆ ನೀಡಿದ್ದ ಹತ್ತು-ಹದಿನೈದು ಪ್ರಶ್ನೆಗಳು. ನನ್ನನ್ನು ನಂಬು, ಈ ಪ್ರಶ್ನೆಪತ್ರಿಕೆಗಳಿಂದಲೇ ನಾಳಿನ ಪ್ರಶ್ನೆಪತ್ರಿಕೆ ತಯಾರಾಗಿರುವುದು, ಎಂದದ್ದು ಮಾತ್ರವಲ್ಲ, ಅದಕ್ಕೆ ಹಂಡ್ರೆಡ್ ಪರ್ಸೆಂಟ್ ಎಂದು ಬೇರೆ ಸೇರಿಸಿದ. ನನಗೆ ಇವನ ತಲೆ ಓಡಿಸಿದ ರೀತಿ ನಂಬಲೇ ಆಗಲಿಲ್ಲ. ಆ ಹತ್ತು ಹದಿನೈದು ಪ್ರಶ್ನೆಗೆ ಆತನನ್ನು ತಯಾರಿ ಮಾಡಿ ಮನೆಗೆ ಬಂದೆ. ಮಾರನೇ ದಿನ ಪರೀಕ್ಷೆ ಮುಗಿಸಿ ಫೋನ್ ಮಾಡಿದ. ನಾನು ಹೇಳಲಿಲ್ವಾ... ಎಂದು ಆತ ಮಾತು ಆರಂಭಿಸಿದಾಗ ನನಗೆ ನಗು ತಡೆಯಲಾಗಲಿಲ್ಲ. ಇದನ್ನು ನೀವು ಕಾಪಿ ಮಾಡಿದ್ದು, ಮೋಸ ಮಾಡಿದ್ದು ಎಂದು ಹೇಳಲು ಸಾಧ್ಯವೇ ಇಲ್ಲ! ಏನಿದ್ದರೂ ಇಲ್ಲಿ ಕಾಪಿ ಹೊಡೆದದ್ದು ಟೀಚರ್!

ಎಂತೆಂಥಾ ಕಿಲಾಡಿಗಳು! ಎಂತೆಂಥಾ ಕಿತಾಪತಿ ಮಾರ್ಗಗಳನ್ನು ಕಂಡುಹಿಡಿಯುತ್ತಾರಪ್ಪಾ! ಅಬ್ಬಬ್ಬಾ!

ಕೊನೆಗೊಂದು ಅಥರ್ ಸೈಡ್ ಆಫ್ ಡಿ ಟೇಬಲ್‌ನಿಂದ ಒಂದು ಕತೆ...

ನಾನು ಮೇಷ್ಟ್ರಾಗಿ ಕೆಲಸಕ್ಕೆ ಸೇರಿಕೊಂಡಾಗ, ಸಹಜವಾಗಿಯೇ ಎಕ್ಸಾಂ ಇನ್ವಿಜಿಲೇಷನ್ ಡ್ಯೂಟಿ ಬಂತು. ಮೊದಲ ದಿನವೇ ನಾನು ಪರೀಕ್ಷಾ ಕೊಠಡಿ ಹೊಕ್ಕುವಾಗ ಒಬ್ಬ ವಿದ್ಯಾರ್ಥಿ ನನ್ನ ಬಳಿ ಬಂದು ತನ್ನ ಸಹಪಾಠಿ ಒಬ್ಬನ ಹೆಸರು ತೆಗದು, ಆತ ಚೀಟಿ ತೆಗೆದುಕೊಂಡು ಬಂದಿದ್ದಾನೆ ಎಂದು ದೂರು ನೀಡಿದ. ಏನು ಮಾಡಬೇಕು? ಚೀಟಿ ತೆಗೆದುಕೊಂಡು ಬಂದ ವಿದ್ಯಾರ್ಥಿಯನ್ನು ಪರೀಕ್ಷೆಗೆ ಕುಳಿತುಕೊಳ್ಳಲು ಬಿಡಬೇಕೆ ಬೇಡವೇ? ಆತ ಚೀಟಿಯಲ್ಲಿ ಯಾವ ಪ್ರಶ್ನೆಗೆ ಉತ್ತರ ಬರೆದುಕೊಂಡು ಬಂದಿದ್ದಾನೋ, ಪ್ರಶ್ನೆಪತ್ರಿಕೆಯಲ್ಲಿ ಆ ಯಾವ ಪ್ರಶ್ನೆಯೂ ಇಲ್ಲದಿದ್ದರೆ? ಆತನ ಜೇಬನ್ನು ತಡಕಾಡಿದರೆ ಆತ ಹೆದರಿ ಕಲಿತು ಬಂದಿದ್ದ ಒಂದೆರಡು ಉತ್ತರವನ್ನೂ ಮರೆತರೆ? ಹೀಗೆ ಒಂದಿಷ್ಟು ಪ್ರಶ್ನೆಗಳು ನನ್ನೊಳಗೆ... ಆಗ ನನ್ನ ಗುರುಗಳಾದ ಅನಿಲ್ ಪಿಂಟೋ ಹೇಳಿದ ಮಾತೊಂದು ನೆನಪಾಯಿತು. ಅವರು ಹೇಳುತ್ತಿದ್ದರು, ಪರೀಕ್ಷಾ ಸಂವೀಕ್ಷಕನ ಜವಾಬ್ದಾರಿ ಯಾರೂ ಕಾಪಿ ಹೊಡೆಯದಂತೆ ನೋಡಿಕೊಳ್ಳುವುದೇ ಹೊರತು ಕಾಪಿ ಹೊಡೆಯುತ್ತಿರುವವರನ್ನು ಶಿಕ್ಷಿಸುವುದಲ್ಲ, ಎಂದು. ನಾನು ನನ್ನ ವಿದ್ಯಾರ್ಥಿಯನ್ನು ಕೊಠಡಿ ಪ್ರವೇಶಿಸಲು ಬಿಟ್ಟು ಆತ ಪರೀಕ್ಷೆ ಬರೆದು ಮುಗಿಸುವ ತನಕ ಆತನ ಸಮೀಪದಲ್ಲೇ ನಿಂತು ಆತನ ಮೇಲೆ ನಿಗಾ ಇಟ್ಟೆ. ಆತನಿಗೆ ಕಾಪಿ ಹೊಡೆಯಲು ಆಗಲಿಲ್ಲ. ಆದರೆ ಪಾಸ್ ಆದ.

ಈ ಲೇಖನದಲ್ಲಿ ನಿಮ್ಮ ಮುಂದೆ ಬಂದ ಎಲ್ಲಾ ಪಾತ್ರಗಳು ಈಗ ತಮ್ಮ ತಮ್ಮ ಬದುಕನ್ನು ಗೌರವಾರ್ಹವಾಗಿಯೇ ನಡೆಸುತ್ತಿದ್ದಾರೆ. ರ್ಯಾಂಕ್ ಪಡೆದ ಮಿತ್ರರೂ ಗೌರವಾರ್ಹ ಜೀವನವನ್ನೇ ನಡೆಸುತ್ತಿದ್ದಾರೆ. ಮಾತಿಗೆ ಸಿಕ್ಕಾಗ ತಮ್ಮ ಉದ್ಯೋಗ, ತಮ್ಮ ಬದುಕಿನ ಬಗ್ಗೆ, ಉದಾಸೀನ ದನಿಯಲ್ಲಿ, ಅಡ್ಡಿಲ್ಲ. ನಡಿತಾ ಇದೆ ಎಂದು ಹೇಳುತ್ತಾರೆ. ಸ್ವಲ್ಪ ಹೆಚ್ಚು ಸಮೀಪದಿಂದ ಕೇಳಿದರೆ, ಎಲ್ಲರೂ - ಕಾಪಿ ಹೊಡೆದವರೂ, ರ್ಯಾಂಕ್ ಪಡೆದವರೂ- ನಾನು ಮಾಡುತ್ತಿರುವ ಕೆಲಸ ಒಂದು ರೀತಿಯಲ್ಲಿ ಜೀತವೇ. ಅದರ ಇನ್ನೊಂದು ರೂಪವಷ್ಟೇ ಎನ್ನುತ್ತಾರೆ. ಹಾಗಿದ್ದರೆ ನಮ್ಮ ನಮ್ಮ ಮನೆಯವರು, ಮೇಷ್ಟ್ರುಗಳು ಪರೀಕ್ಷೆಯ ಅಂಕಗಳಿಗೆ ಅಷ್ಟೆಲ್ಲಾ ಮಹತ್ವ ಕೊಟ್ಟದ್ದು ಯಾಕೆ? ನಮ್ಮಲ್ಲಿ ಪರೀಕ್ಷೆಯ ಬಗ್ಗೆ ಅಷ್ಟೆಲ್ಲ ಭಯ ಯಾಕೆ ಮೂಡಿಸಲಾಯಿತು? ಮಾರ್ಕ್ ಪಡೆಯುವ ಬುದ್ಧಿವಂತರ ಮತ್ತು ಮಾರ್ಕ್ ಪಡೆಯದ ದಡ್ಡರ ನಡುವೆ ಭೇದ ಭಾವ ಯಾಕೆ ಮಾಡಲಾಯಿತು? ಮಾರ್ಕ್ ಪಡೆದವನ ಅಹಂಕಾರಕ್ಕೆ ಏನರ್ಥವಿತ್ತು? ಮಾರ್ಕ್ ಪಡೆಯದ ದಡ್ಡನಿಗೆ ಕೀಳರಿಮೆ ಯಾಕಿತ್ತು? ಗೊತ್ತಿಲ್ಲ...

ಆದರೆ ನೋಡಿ... ಮಾರ್ಕ್ ಪಡೆಯದ ಮಕ್ಕಳ ಬಳಿ ತಾವು ಕಾಲಿಗೆ ಗುಂಡು ಕೊರಳಿಗೆ ಬೆಂಡು ಕಟ್ಟಿಕೊಂಡು ಪರೀಕ್ಷಾ-ಶರದಿ ದಾಟಿದ ಬಗ್ಗೆ ಕುತೂಹಲಕರವಾದ, ಸ್ವಾರಸ್ಯಕರವಾದ ಕತೆಗಳಿರುತ್ತವೆ. ಅವರ ಸಾಹಸ ಮತ್ತು ಯಶಸ್ಸು - ಹೌದು, ಅರ್ಥಹೀನ ಪರೀಕ್ಷೆಗಳನ್ನು, ನಿರುಪಯುಕ್ತ ಮಾರ್ಕುಗಳ ಒತ್ತಡವನ್ನು ದಾಟುವುದು ಒಂದು ಸಾಹಸವೇ, ಅದು ಒಂದು ಯಶಸ್ಸೇ- ಇವುಗಳನ್ನು ಗುರುತಿಸಲಾಗುವುದಿಲ್ಲ. ಮಹತ್ವದ ಸಂಗತಿ ಏನೆಂದರೆ, ಅವರ ಯಶಸ್ಸು ಅಂಕಗಳಿಲ್ಲದ, ಅಹಂಕಾರವಿಲ್ಲದ, ಭೇದ ಮಾಡದ, ಅನ್ಯರನ್ನು ಕೀಳಾಗಿ ಕಾಣದ ಒಂದು ಯಶಸ್ಸು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಸಂವರ್ಥ ಸಾಹಿಲ್

contributor

Similar News