ವರ್ಚುವಲ್ ವಸಾಹತುಗಳ ವಶದಲ್ಲಿ ಮಕ್ಕಳು!
ಹಿರಿಯ ಪತ್ರಕರ್ತ ಎನ್.ಎ.ಎಂ. ಇಸ್ಮಾಯಿಲ್ ಅವರು ಭಾರತದ ಅತಿದೊಡ್ಡ ಓಟಿಟಿ ವೇದಿಕೆಯ ಕನ್ನಡ ವಿಭಾಗದಲ್ಲಿ ಕೆಲಸ ಮಾಡುತ್ತಾರೆ. ತಂತ್ರಜ್ಞಾನದ ಸಾಮಾಜಿಕ ಪರಿಣಾಮಗಳು ಇವರ ಆಸಕ್ತಿಯ ಕ್ಷೇತ್ರ. ಇವರು ಜನವಾಹಿನಿ, ಉದಯವಾಣಿ, ಪ್ರಜಾವಾಣಿ ಪತ್ರಿಕೆಗಳಲ್ಲಿ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.
ಪ್ರಪಂಚದ ಅತಿದೊಡ್ಡ ಶ್ರೀಮಂತರಲ್ಲಿ ಒಬ್ಬನಾಗಿರುವ ಭವಿಷ್ಯದ ನಿರ್ಮಾತೃವೆಂದು ಹೆಸರಾದ ಶತಕೋಟ್ಯಧಿಪತಿಯೊಬ್ಬ ಮಂಗಳನಲ್ಲಿ ನಿರ್ಮಿಸಲು ಹೊರಟಿರುವ ವಸಾಹತಿನಲ್ಲಿ ವಾಸಿಸುವುದಕ್ಕಾಗಿ ಈಗಷ್ಟೇ ಹತ್ತು ತುಂಬುತ್ತಿರುವ ನಿಮ್ಮ ಮಗಳು ಆಯ್ಕೆಯಾಗಿದ್ದಾಳೆ. ಆಕೆಯ ಜೆನೆಟಿಕ್ ಪ್ರೊಫೈಲ್ ಮಂಗಳನಲ್ಲಿ ವಾಸಿಸಲು ಬೇಕಿರುವ ಎಲ್ಲಾ ಅರ್ಹತೆಗಳನ್ನು ಹೊಂದಿದೆ ಎಂದು ಈ ಶತಕೋಟ್ಯಧಿಪತಿಯ ಕಂಪೆನಿಯ ಬಳಿ ಇರುವ ತಂತ್ರಾಂಶ ಗುರುತಿಸಿದೆ. ಬಾಹ್ಯಾಕಾಶದ ಬಗ್ಗೆ ಬಹಳ ಆಸಕ್ತಿ ಇರುವ ನಿಮ್ಮ ಮಗಳಿಗೆ ಈ ವಿಚಾರ ತಿಳಿದಾಕ್ಷಣ ಅವಳದಕ್ಕೆ ಒಪ್ಪಿಯೂ ಬಿಟ್ಟಿದ್ದಾಳೆ. ಕಂಪೆನಿಯವರು ನಿಮ್ಮನ್ನು ಕೇಳುವ ಉಸಾಬರಿಗೇನೂ ಹೋಗಿಲ್ಲ. ಏಕೆಂದರೆ ನಿಮ್ಮ ಮಗಳು ತುಂಬಿಸಿರುವ ಫಾರ್ಮ್‌ನಲ್ಲಿ ‘ಮಂಗಳನಲ್ಲಿ ವಾಸ ಮಾಡುವುದಕ್ಕೆ ನಿಮ್ಮ ತಂದೆ ತಾಯಿಗಳ ಒಪ್ಪಿಗೆ ಇದೆಯೇ?’ ಎಂಬ ಪ್ರಶ್ನೆ ಇತ್ತು. ಬಾಹ್ಯಾಕಾಶದ ಕುರಿತ ಕುತೂಹಲಕ್ಕೆ ಉತ್ತರ ನೀಡಲು ಸಕಲ ಸಹಾಯ ಮಾಡುವ, ಕಲ್ಪನಾ ಚಾವ್ಲಾ ಮತ್ತು ಸುನೀತಾ ವಿಲಿಯಮ್ಸ್ ರ ಕತೆಗಳನ್ನು ಅನೇಕ ಬಾರಿ ಹೇಳಿರುವ ನೀವು ಅವಳ ಮಂಗಳ ವಾಸವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂಬ ನಂಬಿಕೆ ನಿಮ್ಮ ಮಗಳದ್ದು. ಹಾಗಾಗಿ ಅವಳು ತಂದೆ ತಾಯಿಗಳ ಒಪ್ಪಿಗೆ ಇದೆ ಎಂಬುದಕ್ಕೆ ಟಿಕ್ ಮಾರ್ಕ್ ಹಾಕಿ ಒಪ್ಪಿದ್ದಾಳೆ.
ಈ ವಿಚಾರವನ್ನು ತಿಳಿದಾಗ ಮೊದಲಿಗೆ ಸಹಜವಾಗಿಯೇ ಗಾಬರಿಯಾಯಿತು. ವಿಷಯವೇನೆಂದು ಅರ್ಥ ಮಾಡಿಕೊಳ್ಳಲು ಹೊರಟಾಗ ನಿಮ್ಮ ಗಾಬರಿ ಸಹಜವಾಗಿಯೇ ಹೆಚ್ಚಾಗುತ್ತಲೇ ಹೋಗುತ್ತದೆ. ಮೊದಲನೆಯದಾಗಿ ಕಂಪೆನಿಯವರು ನಿಮ್ಮ ಒಪ್ಪಿಗೆಯನ್ನು ಖಾತರಿ ಪಡಿಸುವುದಕ್ಕೆ ಏನೂ ಮಾಡಿಲ್ಲ. ನಿಮ್ಮ ಮಗಳು ‘ಅಪ್ಪ-ಅಮ್ಮ ಒಪ್ಪಿದ್ದಾರೆ’ ಎಂಬ ಆಯ್ಕೆಗೆ ಟಿಕ್ ಮಾರ್ಕ್ ಹಾಕಿದ್ದನ್ನೇ ಒಪ್ಪಿಗೆ ಎಂದುಕೊಂಡಿದ್ದಾರೆ. ಋತುಮತಿಯಾಗುವ ಮುನ್ನವೇ ಹೆಣ್ಣು ಮಕ್ಕಳು ಮಂಗಳನನ್ನು ತಲುಪಿದರೆ ಅಲ್ಲಿನ ವಾತಾವರಣಕ್ಕೆ ಸುಲಭದಲ್ಲಿ ಹೊಂದಿಕೊಳ್ಳುತ್ತಾರೆ ಎಂಬುದು ಕಂಪೆನಿಯವರ ಲೆಕ್ಕಾಚಾರ. ತಂದೆ ಅಥವಾ ತಾಯಿಯಾಗಿ ಈ ಲೆಕ್ಕಾಚಾರಗಳನ್ನಷ್ಟೇ ನಂಬಲು ನಿಮಗೆ ಸಾಧ್ಯವಿದೆಯೇ? ನೀವು ಮತ್ತಷ್ಟು ಹುಡುಕಲು ತೊಡಗುತ್ತೀರಿ. ಮಂಗಳನ ಮೇಲಿರುವ ವಿಕಿರಣ, ಭೂಮಿಗಿಂತ ಕಡಿಮೆ ಇರುವ ಗುರುತ್ವಾಕರ್ಷಣೆ ಇವೆಲ್ಲವೂ ನಿಮ್ಮ ಮಗಳ ಮೇಲೆ ಬೀರುವ ಪರಿಣಾಮಗಳ ಬಗ್ಗೆ ಊಹಿಸಿಯೇ ಕಂಗಾಲಾಗುತ್ತೀರಿ. ಒಮ್ಮೆ ಅಲ್ಲಿಗೆ ಹೋದ ನಂತರ ಆಕೆಗೆ ಮರಳಿ ಬರಲು ಸಾಧ್ಯವೇ ಎಂಬ ಅಂಶದ ಬಗ್ಗೆ ಯೋಚಿಸಿದಾಗ ನಿಮ್ಮ ಜಂಘಾಬಲವೇ ಉಡುಗಿಹೋಗುತ್ತದೆ. ಖಡಾಖಂಡಿತವಾಗಿ ನಿನ್ನನ್ನು ಮಂಗಳ ಗ್ರಹಕ್ಕೆ ಕಳುಹಿಸಲು ಸಾಧ್ಯವೇ ಇಲ್ಲ ಎಂಬ ನಿರ್ಧಾರಕ್ಕೆ ಬರುತ್ತೀರಿ!
ಈಗ ಮತ್ತೊಂದು ಸಂದರ್ಭವನ್ನು ಊಹಿಸಿಕೊಳ್ಳೋಣ. ನಿಮ್ಮ ಮಗಳು ಅವಳ ಅಜ್ಜಿಯ ಫೋನ್ ಬಳಸಿ ಇನ್‌ಸ್ಟಾಗ್ರಾಂ ಅಕೌಂಟ್ ಒಂದನ್ನು ತೆರೆದು ಅದರಲ್ಲಿ ಅವಳದೇ ಫೋಟೊಗಳನ್ನೂ ವೀಡಿಯೊಗಳನ್ನು ಹಂಚಿಕೊಳ್ಳುತ್ತಿದ್ದಾಳೆ. ಅಜ್ಜಿಯಂತೂ ಸಂತೋಷದಿಂದ ಈ ಟಚ್ ಫೋನಿನ ಎಲ್ಲಾ ವಿಷಯಗಳನ್ನು ನಿರ್ವಹಿಸುವುದು ನನ್ನ ಮೊಮ್ಮಗಳೇ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಾಗ ನೀವೇನು ಮಾಡುತ್ತೀರಿ? ಹೆಚ್ಚಿನ ಸಂದರ್ಭಗಳಲ್ಲಿ ಆ ಸಂತೋಷದಲ್ಲಿ ನೀವು ಪಾಲ್ಗೊಂಡಿರುತ್ತೀರಿ. ‘ಈಗಿನ ಮಕ್ಕಳಿಗೆ ಟೆಕ್ನಾಲಜಿ ಹುಟ್ಟುವಾಗಲೇ ಬಂದುಬಿಟ್ಟಿರುತ್ತದೆ’ ಎಂದು ಉದ್ಗರಿಸಿರಲೂಬಹುದು. ಇನ್ನೂ ಹತ್ತು ತುಂಬದ ಬಾಲೆ ಸೈಬರ್ ಲೋಕವನ್ನು ಮುಂಜಾಗ್ರತೆಗಳಿಲ್ಲದೆ ಪ್ರವೇಶಿಸಿದ್ದು ಹೇಗೆ ಎಂಬ ಪ್ರಶ್ನೆಯನ್ನಾಗಲೀ ಅವಳನ್ನು ಅಲ್ಲಿಗೆ ಪ್ರವೇಶಿಸಲು ಬಿಟ್ಟ ವ್ಯವಸ್ಥೆಯ ಬಗ್ಗೆಯಾಗಲೀ ನಿಮ್ಮ ಮನದೊಳಗೆ ಪ್ರಶ್ನೆಗಳು ಹುಟ್ಟಿಕೊಂಡಿರುವುದೇ ಇಲ್ಲ.
ಲೇಖನದ ಆರಂಭದಲ್ಲಿ ವಿವರಿಸಿದ ಉದಾಹರಣೆಯನ್ನು ನೀಡಿದ್ದು ಪ್ರಖ್ಯಾತ ಸಾಮಾಜಿಕ ಮನೋವಿಜ್ಞಾನಿ ಜೊನಾಥನ್ ಹೈಟ್. ಅವರ ಇತ್ತೀಚಿನ ಪುಸ್ತಕ"‘Anxious Generation ನ ಪ್ರವೇಶಿಕೆಯಲ್ಲೇ ಮಗುವಿನ ಮಂಗಳಯಾನದ ಉದಾಹರಣೆಯಿದೆ. ಪಾಲಕರ ಅನುಮತಿಯೇ ಇಲ್ಲದೆ ಮಗುವೊಂದು ಮಂಗಳನಲ್ಲಿ ವಾಸಿಸುವ ನಿರ್ಧಾರ ಕೈಗೊಳ್ಳುವುದನ್ನು ನಾವು ಕಲ್ಪಿಸಿಕೊಳ್ಳಲೂ ಹೆದರುತ್ತೇವೆ. ಹೆಚ್ಚು ಕಡಿಮೆ ಮಂಗಳನಷ್ಟೇ ಅಪರಿಚಿತವಾದ ಸೈಬರ್ ಲೋಕದಲ್ಲಿ ವಿಹರಿಸುವುದಕ್ಕೆ ನಮ್ಮ ಮಕ್ಕಳು ಯಾವ ಅನುಮತಿಯನ್ನೂ ಪಡೆಯಬೇಕಾದ ಅಗತ್ಯವಿಲ್ಲದಿರುವುದನ್ನು ಜೊನಾಥನ್ ಈ ಉದಾಹರಣೆಯ ಮೂಲಕ ವಿವರಿಸುತ್ತಾರೆ.
ಕಳೆದ ಒಂದೂವರೆ ದಶಕದ ಅವಧಿಯಲ್ಲಿ ಮಂಗಳನಲ್ಲಿ ವಸಾಹತು ರೂಪಿಸಲು ಹೊರಟ ಶತಕೋಟ್ಯಧಿಪತಿಯಂಥದ್ದೇ ಉದ್ಯಮಿಗಳು ಸಾಮಾಜಿಕ ಜಾಲತಾಣಗಳೆಂಬ ವರ್ಚುವಲ್ ವಸಾಹತುಗಳ ಮೂಲಕ ನಮ್ಮ ಮಕ್ಕಳ ಮನಸ್ಸನ್ನೇ ಪುನರ್ ರೂಪಿಸಿಬಿಟ್ಟಿದ್ದಾರೆ. ಇದರ ಪರಿಣಾಮ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ಬಗೆಯಲ್ಲಿ ಕಾಣಿಸಿಕೊಂಡಿದೆ. ಪಾಲಕರು ಇದನ್ನು ಎದುರಿಸುತ್ತಿರುವ ರೀತಿಯೂ ದೇಶಗಳ ತಲಾ ಆದಾಯ ಮತ್ತು ತಂತ್ರಜ್ಞಾನಕ್ಕೆ ತೆರೆದುಕೊಂಡ ಕಾಲಘಟ್ಟಕ್ಕೆ ಅನುಗುಣವಾಗಿ ಭಿನ್ನವಾಗಿವೆ. ಆದರೆ ಒಟ್ಟಾರೆ ಪರಿಣಾಮ ಮಾತ್ರ ಹೆಚ್ಚು ಕಡಿಮೆ ಒಂದೇ. ಆಟವಾಡಿಕೊಂಡು ಬೆಳೆಯಬೇಕಾದ ಮಕ್ಕಳ ಬಾಲ್ಯ ವಿಶ್ವದ ಕೆಲವೇ ಕೆಲವು ಶತಕೋಟ್ಯಧಿಪತಿಗಳು ಸ್ಥಾಪಿಸಿರುವ ವರ್ಚುವಲ್ ವಸಾಹತುಗಳ ವಶವಾಗಿವೆ. ಇದರ ಪರಿಣಾಮ ಕಾಣಿಸುತ್ತಿರುವುದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಅಂಕಿ-ಅಂಶಗಳಲ್ಲಿ. 15ರಿಂದ 24ವರ್ಷಗಳ ಒಳಗಿನ ಪ್ರತೀ ಏಳರಲ್ಲಿ ಒಬ್ಬರು ಖಿನ್ನತೆ ಅಥವಾ ವ್ಯಾಕುಲತೆಗಳ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಎಂಬುದು ಬೇರಾವುದೋ ದೇಶದ ಅಂಕಿ-ಅಂಶವಲ್ಲ. ಇದು ಭಾರತದ ಸ್ಥಿತಿ. ಇದಕ್ಕೆ ಕಾರಣವಾಗಿರುವುದು ಸಾಮಾಜಿಕ ಜಾಲತಾಣಗಳು!
ಈ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಕಳೆದ ಎರಡೂವರೆ ದಶಕಗಳಲ್ಲಿ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುವ ಅಗತ್ಯವಿದೆ. ಐದಾರು ಕಿಲೋ ಮೀಟರುಗಳಷ್ಟು ದೂರದಲ್ಲಿರುವ ಶಾಲೆಗೆ ಮಕ್ಕಳು ನಡೆದುಕೊಂಡೋ ಸರಕಾರಿ ಬಸ್ಸುಗಳಲ್ಲೋ ಹೋಗಿ ತಲುಪುವುದು ತೊಂಭತ್ತರ ದಶಕದಲ್ಲಿಯೂ ಸಾಮಾನ್ಯವಾಗಿತ್ತು. ನಗರ ಪ್ರದೇಶಗಳಲ್ಲಿರುವ ಪ್ರತಿಷ್ಠಿತ ಶಾಲೆಗಳಿಗಷ್ಟೇ ವಿಶೇಷ ಬಸ್ಸುಗಳು ಮತ್ತು ವ್ಯಾನುಗಳಿದ್ದವು. ಶಾಲೆಗೆ ಮಕ್ಕಳನ್ನು ಬಿಡುವ ಆಟೋ ರಿಕ್ಷಾಗಳಿದ್ದದ್ದೂ ದೊಡ್ಡ ನಗರಗಳಲ್ಲೇ. ಐದಾರು ಕಿಲೋಮೀಟರುಗಳಷ್ಟು ನಡೆಯುವ ಇಲ್ಲವೇ ಹತ್ತಾರು ಕಿಲೋಮೀಟರುಗಳಷ್ಟು ದೂರಕ್ಕೆ ಸಾರ್ವಜನಿಕ ಸಾರಿಗೆಯಲ್ಲಿ ಸಂಚರಿಸುವ ಮಕ್ಕಳು ಶಾಲೆ ತಲುಪುತ್ತಾರೋ ಇಲ್ಲವೋ ಎಂದು ಪೋಷಕರು ಭಯಪಟ್ಟಿದ್ದೇ ಇಲ್ಲ. ಆದರೆ ತೊಂಭತ್ತರ ದಶಕದ ಅಂತ್ಯದ ಹೊತ್ತಿಗೆ ಈ ಸ್ಥಿತಿ ನಿಧಾನವಾಗಿ ಬದಲಾಗ ತೊಡಗಿತು. ಅಲ್ಲಿಯ ತನಕ ಪಾಲಕರನ್ನು ಕಾಡದೇ ಇದ್ದ ಸಮಸ್ಯೆಯೊಂದನ್ನು ಪಾಲಕರ ತಲೆಗೆ ತುರುಕಲಾಯಿತು. ಶಾಲಾ ಬಸ್‌ಗಳ ಯುಗ ಆರಂಭವಾಯಿತು. ಖಾಸಗಿ ಶಾಲೆಗಳು ಶಿಕ್ಷಣದ ಜೊತೆಗೆ ಸಾರಿಗೆಯ ಉದ್ಯಮವನ್ನೂ ಆರಂಭಿಸಿದವು! ಈ ಪ್ರಕ್ರಿಯೆಯಲ್ಲಿ ಮಕ್ಕಳ ಮುಕ್ತ ಆಟದ ಸಮಯವೇ ಇಲ್ಲವಾಯಿತು. ತರಗತಿಗಳು ಆರಂಭವಾಗುವುದಕ್ಕೆ ಬಹು ಮೊದಲೇ ತಲುಪಿ ಶಾಲಾ ಮೈದಾನವನ್ನು ಹುಡಿಹಾರಿಸುತ್ತಿದ್ದ ಮಕ್ಕಳ ತಂಡ ಈಗ ಯಾವ ಶಾಲೆಯ ಅಂಗಳದಲ್ಲೂ ಕಾಣಸಿಗುವುದಿಲ್ಲ. ಆಟಕ್ಕೆಂದೇ ಇರುವ ಒಂದು ಪೀರಿಯಡ್‌ನಲ್ಲಿ ಅದೂ ಶಿಕ್ಷಕರೊಬ್ಬರ ಮೇಲ್ವಿಚಾರಣೆಯಲ್ಲಿ ಆಡುವ ಮಕ್ಕಳಷ್ಟೇ ಈಗ ಕಾಣಸಿಗುವುದು.
ಮಕ್ಕಳ ಭೌತಿಕ ಸುರಕ್ಷತೆಯ ಬಗೆಗಿನ ಈ ಅತಿಯಾದ ಕಾಳಜಿಯಿದ್ದ ಅದೇ ತಂದೆ- ತಾಯಿಗಳು ಮಕ್ಕಳ ವರ್ಚುವಲ್ ಬದುಕಿನ ಬಗ್ಗೆ ಯಾವ ಕಾಳಜಿಯನ್ನೂ ವಹಿಸಲೇ ಇಲ್ಲ ಎಂಬುದು ವಿಪರ್ಯಾಸ. ಕೋವಿಡ್ ಸಾಂಕ್ರಾಮಿಕದಿಂದಾಗಿ ಲಾಕ್‌ಡೌನ್‌ಗಳು ಸಂಭವಿಸದೇ ಹೋಗಿದ್ದರೆ ಈಗ ನಾವು ಎದುರಿಸುತ್ತಿರುವ ಸಮಸ್ಯೆಯ ಸ್ವರೂಪ ಸ್ವಲ್ಪ ಬೇರೆಯಾಗಿರುತ್ತಿತ್ತೇನೋ. ಶಾಲೆಗಳು ಎರಡು ವರ್ಷಗಳ ಕಾಲ ಆನ್‌ಲೈನ್ ಕ್ಲಾಸುಗಳನ್ನು ನಡೆಸಿದ್ದಂತೂ ಒಂದು ತಲೆಮಾರಿನ ಬಾಲ್ಯವನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿತು. ಸಾಮಾಜಿಕ ಮನೋವಿಜ್ಞಾನಿ ಜೋನಾಥನ್ ಹೈಟ್ ಬಾಲ್ಯದಲ್ಲಿ ಆದ ಬದಲಾವಣೆಯನ್ನು ಆಟ ಕೇಂದ್ರಿತ ಬಾಲ್ಯ ಮತ್ತು ಫೋನ್ ಕೇಂದ್ರಿತ ಬಾಲ್ಯ ಎಂದು ವಿಭಜಿಸಿ ವಿವರಿಸುತ್ತಾರೆ.
ಜೊನಾಥನ್ ಹೈಟ್ ಈ ವಿಭಾಗೀಕರಣವನ್ನು ಅಮೆರಿಕದ ಬಾಲ್ಯವನ್ನು ಗಮನದಲ್ಲಿಟ್ಟು ಮಾಡಿದ್ದಾರೆ. ಅವರ ದೃಷ್ಟಿಯಲ್ಲಿ ಈ ಪ್ರಕ್ರಿಯೆ ಕೋವಿಡ್ ಲಾಕ್‌ಡೌನ್‌ಗಳ ಆರಂಭಕ್ಕೂ ಮುನ್ನವೇ ಫೋನ್ ಕೇಂದ್ರಿತ ಬಾಲ್ಯ ಶುರುವಾಗಿತ್ತು. ಭಾರತದ ಮಟ್ಟಿಗೆ ಇದನ್ನು ಪೂರ್ಣವಾಗಿ ಅನ್ವಯಿಸಲು ಸಾಧ್ಯವಿಲ್ಲ. ಕೋವಿಡ್ ಲಾಕ್‌ಡೌನ್‌ಗಳಿಗಿಂತ ಮುಂಚಿತವಾಗಿ ಮಕ್ಕಳಿಗೆ ಫೋನ್ ಬಹಳ ಸುಲಭದಲ್ಲಿ ದೊರೆಯುತ್ತಿರಲಿಲ್ಲ. ಅಥವಾ ಮಕ್ಕಳಿಗೊಂದು ಫೋನ್ ಬೇಕು ಎಂದು ಪಾಲಕರೂ ಭಾವಿಸುತ್ತಿರಲಿಲ್ಲ.
ಭಾರತದಲ್ಲಿ ಇಂಟರ್ನೆಟ್ ಮತ್ತು ಮೊಬೈಲ್ ಫೋನ್‌ಗಳ ನಡುವಣ ಸಂಬಂಧಕ್ಕೆ ಒಂದು ವಿಶಿಷ್ಟ ಆಯಾಮವಿದೆ. ಇದನ್ನು ಇಂಟರ್ನೆಟ್‌ಗೆ ಬಹಳ ಹಿಂದೆಯೇ ತೆರೆದುಕೊಂಡ ಪಶ್ಚಿಮದ ದೇಶಗಳಿಗಿಂತ ಸಂಪೂರ್ಣ ಭಿನ್ನ. ಅಲ್ಲಿ ಇಂಟರ್ನೆಟ್‌ನ ಆಗಮನ ಮತ್ತು ಅದು ಮೊಬೈಲ್ ಫೋನ್‌ನಲ್ಲಿ ದೊರೆಯುವುದರ ನಡುವೆ ಕಾಲದ ಅಂತರವಿತ್ತು. ಆದರೆ ಭಾರತದಲ್ಲಿ ಇಂಟರ್ನೆಟ್ ವ್ಯಾಪಕವಾದದ್ದೇ ಮೊಬೈಲು ಪೋನ್‌ಗಳ ಮೂಲಕ. ಭಾರತದಲ್ಲಿ ಹೆಚ್ಚಿನವರು ಮೊಟ್ಟ ಮೊದಲಬಾರಿಗೆ ಇಂಟರ್ನೆಟ್‌ಗೆ ಪ್ರವೇಶ ಪಡೆದದ್ದೇ ಮೊಬೈಲ್ ಫೋನುಗಳ ಮೂಲಕ! ಮುಂದುವರಿದ ದೇಶದ ಮಕ್ಕಳು ಡೆಸ್ಕ್‌ಟಾಪ್ ಮಾತು ಲ್ಯಾಪ್‌ಟಾಪ್‌ಗಳ ಮೂಲಕ ಪ್ರವೇಶಿಸಿದ ಸೈಬರ್ ಲೋಕ ವಿರಾಟ್ ಸ್ವರೂಪವನ್ನು ಪಡೆದುಕೊಳ್ಳುವ ಕಾಲಕ್ಕೆ ಭಾರತದ ಮಕ್ಕಳು ಮೊಬೈಲು ಫೋನುಗಳ ಮೂಲಕ ಸೈಬರ್ ಲೋಕ ಪ್ರವೇಶಿಸಿದರು. ಕೋವಿಡ್ ಸಾಂಕ್ರಾಮಿಕ ಅನಿವಾರ್ಯವಾಗಿಸಿದ ಲಾಕ್‌ಡೌನ್ ಅದರ ಪರಿಣಾಮವಾಗಿ ಆರಂಭವಾದ ಆನ್‌ಲೈನ್ ತರಗತಿಗಳು ಎಲ್ಲಾ ವರ್ಗದ ಮಕ್ಕಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಸೈಬರ್ ಲೋಕದೊಳಕ್ಕೆ ತಳ್ಳಿತು. ಈ ಪ್ರಕ್ರಿಯೆ ಫೋನ್ ಕೇಂದ್ರಿತ ಬಾಲ್ಯವನ್ನು ಭಾರತಕ್ಕೂ ತಂದುಬಿಟ್ಟಿತು.
ಬಹುತೇಕ ಮನೆಗಳಲ್ಲಿ ಮೊಬೈಲು ಫೋನುಗಳ ನಿಯಂತ್ರಕರು ಮಕ್ಕಳೇ ಆಗಿಬಿಟ್ಟದ್ದು ಭಾರತದ ವೈಶಿಷ್ಟ್ಯ, ಟಚ್‌ಸ್ಕ್ರೀನ್ ಮೊಬೈಲು ಮತ್ತು ಅದರ ಆ್ಯಪ್‌ಗಳ ಆಳ-ಅಗಲಗಳ ಅರಿವು ಪಾಲಕರಿಗೆ ಆಗುವ ಮೊದಲೇ ಮಕ್ಕಳು ಅದರಲ್ಲಿ ಪಳಗಿಬಿಟ್ಟಿದ್ದರು. ಭೌತಿಕ ಜಗತ್ತಿನಲ್ಲಿ ತಮ್ಮ ವಯಸ್ಸಿನವರ ಜೊತೆ ಬೆರೆತು ಬದುಕಿನ ಪಾಠಗಳನ್ನು ಕಲಿಯಬೇಕಿದ್ದ ಮಕ್ಕಳು ಅಂಗೈಯೊಳಗೆ ತೆರೆದುಕೊಳ್ಳುವ ಅಸೀಮ ಬ್ರಹ್ಮಾಂಡದ ಮಾಯಾಜಾಲದಲ್ಲಿ ಮುಳುಗಿ ಹೋದರು. ಮಕ್ಕಳ ಕೈಗೆ ಮೊಬೈಲ್ ಕೊಡುವುದು ಯಾವುದೋ ಶತಕೋಟ್ಯಧಿಪತಿ ಸಂಘಟಿಸುತ್ತಿರುವ ಮಂಗಳಯಾನಕ್ಕೆ ಮಕ್ಕಳನ್ನು ಕಳುಹಿಸುವಷ್ಟೇ ಅಪಾಯದ ಕೆಲಸ ಎಂಬುದನ್ನು ಯಾವ ಪಾಲಕರೂ ಅರಿಯಲಿಲ್ಲ.
ಮನುಷ್ಯನ ಸಾಮುದಾಯಿಕ ಬದುಕಿಗೆ ಅಗತ್ಯವಿರುವ ಪಾಠಗಳು ಮಕ್ಕಳಿಗೆ ದೊರೆಯುವುದು ಭೌತಿಕವಾದ ಚಟುವಟಿಕೆಗಳಲ್ಲಿ. ಮನೆಯಿಂದ ಹೊರಬಿದ್ದು ಶಾಲೆಗೆ ಹೋಗಿ ಬರುವ ತನಕದ ಎಲ್ಲಾ ಭೌತಿಕ ಚಟುವಟಿಕೆಗಳಲ್ಲಿಯೂ ಮಕ್ಕಳು ಒಂದಲ್ಲಾ ಒಂದು ಬಗೆಯ ಸಾಮಾಜಿಕ ಕೌಶಲಗಳನ್ನು ಕಲಿಯುತ್ತಲೇ ಇರುತ್ತಾರೆ. ನಡೆದು ಅಥವಾ ಸಾರ್ವಜನಿಕ ಸಾರಿಗೆಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ, ಶಿಕ್ಷಕರ ಮೇಲ್ವಿಚಾರಣೆಯೇ ಇಲ್ಲದೆ ಮೈದಾನದಲ್ಲಿ ಆಟದಲ್ಲಿ ತೊಡಗಿಕೊಳ್ಳುತ್ತಿದ್ದ ಮಕ್ಕಳು ಬದುಕಿನ ಅತ್ಯಂತ ಕಠಿಣ ಸಂದರ್ಭಗಳನ್ನು ಎದುರಿಸುವ ತರಬೇತಿಯನ್ನು ಅವರಿಗೆ ಅರಿವಿಲ್ಲದೆಯೇ ಪಡೆಯುತ್ತಿದ್ದರು. ಇದರಿಂದಾಗಿಯೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಮಕ್ಕಳಲ್ಲಿ ಖಿನ್ನತೆ ಮತ್ತು ವ್ಯಾಕುಲತೆಯಂಥ ಮಾನಸಿಕ ಸಮಸ್ಯೆಗಳು ಬಹಳ ಅಪರೂಪವೆನಿಸುವಂತೆ ಕಾಣಿಸಿಕೊಳ್ಳುತ್ತಿದ್ದವು. ಅವರು ವಯಸ್ಕರಾಗುವ ಹೊತ್ತಿಗೆ ಅತ್ಯಂತ ಕಠಿಣ ಕ್ಷಣಗಳನ್ನು ಲೀಲಾಜಾಲವಾಗಿ ಎದುರಿಸಲು ಸಾಧ್ಯವಾಗುವಂಥ ತರಬೇತಾಗಿರುತ್ತಿದ್ದರು.
ತೊಂಭತ್ತರ ದಶಕದ ಅಂತ್ಯಭಾಗದಲ್ಲಿ ಆರಂಭಗೊಂಡ ಅತಿ ಸುರಕ್ಷಿತ ಪಾಲನಾ ಮಾದರಿಗಳು ಮಕ್ಕಳನ್ನು ಗಟ್ಟಿಗೊಳಿಸುವ ಬದಲಿಗೆ ಸುರಕ್ಷತೆಯ ಚಿಪ್ಪಿನೊಳಗೆ ಬೆಳೆಯುವಂತೆ ಮಾಡಲು ತೊಡಗಿದ್ದವು. ಮೊಬೈಲ್ ಫೋನ್‌ಗಳ ವ್ಯಾಪಕತೆ ಮಕ್ಕಳನ್ನು ಆವರಿಸಿಕೊಳ್ಳುವುದರ ಜೊತೆಗೆ ಆಟ ಕೇಂದ್ರಿತ ಬಾಲ್ಯ ಬಹುತೇಕ ಇಲ್ಲವಾಯಿತು. ಗಂಡು ಮಕ್ಕಳು ವೀಡಿಯೊ ಗೇಮ್‌ಗಳಿಂದ ತೊಡಗಿ ಅಶ್ಲೀಲ ಚಿತ್ರಗಳ ಪ್ರಭಾವಕ್ಕೆ ಒಳಗಾದರೆ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಕ್ಷಣ ಕ್ಷಣಕ್ಕೂ ಫೋಟೊಗಳನ್ನು ಪ್ರಕಟಿಸಿ ಲೈಕುಗಳ ಸಂಖ್ಯೆಯ ಮೇಲೆ ತಮ್ಮ ಅಂದದ ಮೌಲ್ಯಮಾಪನದ ಚಟಕ್ಕೆ ಬಿದ್ದರು.
ಭೌತಿಕವಾಗಿ ಬೆರೆಯುವ ಸಾಮಾಜಿಕ ಚಟುವಟಿಕೆಗಳಲ್ಲಿ ತಪ್ಪುಗಳಾದಾಗ ಅದರ ಪರಿಣಾಮ ಬಹಳ ಸೀಮಿತ ವ್ಯಾಪ್ತಿಯಲ್ಲಿರುತ್ತಿತ್ತು. ಪರಿಚಿತರೇ ಮಾಡುವ ಕೆಲವೇ ಕೆಲವು ಕ್ಷಣದ ತಮಾಷೆ ಇಲ್ಲವೇ ಕೆಲವು ದಿನಗಳಿಗೆ ವ್ಯಾಪಿಸಿರುತ್ತಿದ್ದ ಜಗಳಗಳಲ್ಲಿ ಅದು ಮುಗಿದೂ ಬಿಡುತ್ತಿತ್ತು. ಸಾಮಾಜಿಕ ಜಾಲತಾಣಗಳ ಸ್ವರೂಪ ಇದಕ್ಕೆ ಸಂಪೂರ್ಣ ಭಿನ್ನ. ತಪ್ಪುಗಳು ಅಥವಾ ತಥಾಕಥಿತ ಕುರೂಪಗಳೆಲ್ಲವೂ ಇಲ್ಲಿ ಭೂತಗನ್ನಡಿಯಲ್ಲಿ ಪ್ರದರ್ಶಿತವಾಗುತ್ತವೆ. ವಾಸ್ತವ ಜಗತ್ತಿನಲ್ಲಿ ಪರಿಚಯವೇ ಇಲ್ಲದವರು ಮತ್ತು ಮುಖಗಳೇ ಇಲ್ಲದವರು ಇಲ್ಲಿ ತಮಾಷೆ, ಕಟಕಿ, ಟೀಕೆ ಮತ್ತು ಮೌಲ್ಯಮಾಪನಕ್ಕೆ ಇಳಿಯುತ್ತಾರೆ. ಭೌತಿಕವಾದ ಸಾಮಾಜಿಕ ಚಟುವಟಿಕೆಗಳ ಸಂದರ್ಭದಲ್ಲಿ ಅನಿವಾರ್ಯವಾಗಿ ಕಾಪಾಡಿಕೊಳ್ಳಬೇಕಾದ ಸೌಜನ್ಯಕ್ಕೆ ಸೈಬರ್ ಸಮಾಜದಲ್ಲಿ ಸ್ಥಾನವೇ ಇಲ್ಲ. ಹುಡುಗಿಯೊಬ್ಬಳ ಇನ್‌ಸ್ಟಾಗ್ರಾಂ ಫೋಟೊಗೆ ಬರುವ ಕಮೆಂಟ್‌ಗಳು ಆಕೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಷ್ಟು ಕ್ರೂರವೂ ಆಗಿರಬಹುದು. ಸಾಮಾಜಿಕ ಜಾಲತಾಣ ಎಂದು ಕರೆಯಿಸಿಕೊಳ್ಳುವ ಈ ತಾಣಗಳ ವರ್ಚುವಲ್ ‘ಸಮುದಾಯ’ಗಳಲ್ಲಿ ಸಾಮಾಜಿಕತೆ ಮತ್ತು ಸಾಮುದಾಯಿಕತೆಗಳೆರಡೂ ಇರುವುದಿಲ್ಲ.
ನಾವೆಲ್ಲರೂ ಸೇರಿ ನಮ್ಮ ಮಕ್ಕಳನ್ನು ಯಾವ ತರಬೇತಿಯನ್ನೂ ನೀಡದೆ ಅಪರಿಚಿತವಾದ ಗ್ರಹವೊಂದಕ್ಕೆ ತಳ್ಳುವ ಕೆಲಸವನ್ನಂತೂ ಮಾಡಿಬಿಟ್ಟಿದ್ದೇವೆ. ಅದರ ಪರಿಣಾಮವಾಗಿ ವಯಸ್ಕರಾಗುವ ಮೊದಲೇ ಖಿನ್ನತೆ, ವ್ಯಾಕುಲತೆ ಮತ್ತು ಚಾಂಚಲ್ಯದ ಕಷ್ಟಗಳನ್ನು ಅನುಭವಿಸುವ ತಲೆಮಾರೊಂದನ್ನು ಸೃಷ್ಟಿಸಿಯೂ ಆಗಿದೆ. ಈ ಸಮಸ್ಯೆಗಳನ್ನು ನಿರ್ವಹಿಸುವ ಮಾರ್ಗಗಳನ್ನು ಹುಡುಕುವುದರಲ್ಲಿ ಇರುವ ಉತ್ಸಾಹ ನಮಗೆ ಇದು ಸಂಭವಿಸದಂತೆ ತಡೆಯಲು ಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ಇಲ್ಲ.
ಫೇಸ್‌ಬುಕ್, ಇನ್‌ಸ್ಟಾಗ್ರಾಂ ಅಥವಾ ಗೂಗಲ್ ಖಾತೆಗಳನ್ನು ತೆರೆಯುವುದಕ್ಕೆ ಕನಿಷ್ಠ 13 ವರ್ಷ ವಯಸ್ಸಾಗಿರಬೇಕು ಎಂಬ ನಿಯಮವಿದೆ. ಅಂದರೆ ಹದಿಹರೆಯಕ್ಕೆ ಕಾಲಿಡುತ್ತಿರುವವರು ಈ ಸಾಮಾಜಿಕ ಜಾಲತಾಣಗಳಲ್ಲಿ ಖಾತೆಗಳನ್ನು ತೆರೆಯಬಹುದು ಎಂದರ್ಥ. ಮೊದಲನೆಯದಾಗಿ ಈ ಯಾವುದೇ ಜಾಲತಾಣಗಳನ್ನು ವಯಸ್ಸನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಬೇಕಿರುವ ಏನನ್ನೂ ಮಾಡುವುದಿಲ್ಲ. ಖಾತೆ ತೆರೆಯುವವರು ಕೊಡುವ ಹುಟ್ಟಿದ ದಿನಾಂಕವನ್ನು ಕುರುಡಾಗಿ ಸ್ವೀಕರಿಸುತ್ತವೆ. ಇನ್ನು ಈ 13 ವರ್ಷ ಎಂಬ ಕನಿಷ್ಠ ಮಿತಿಗೆ ಯಾವ ವೈಜ್ಞಾನಿಕ ಆಧಾರವೂ ಇಲ್ಲ. ಇಷ್ಟಾಗಿಯೂ ಮೇಲೆ ಹೇಳಲಾದ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿಯೂ ‘ಚೈಲ್ಡ್ ಇನ್‌ಫ್ಲುಯೆನ್ಸರ್’ಗಳ ದೊಡ್ಡ ದಂಡೇ ಇದೆ. ಈ ತಾಣಗಳವರು ಅದಕ್ಕೆ ನೀಡುವ ಸಮರ್ಥನೆ ಈ ಖಾತೆಗಳನ್ನು ಮಕ್ಕಳ ಪಾಲಕರೇ ನಿರ್ವಹಿಸುತ್ತಿದ್ದಾರೆ ಎಂಬ ಸಬೂಬು ಮಾತ್ರ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಸುರಕ್ಷತೆಯನ್ನು ಖಾತರಿ ಪಡಿಸಿಕೊಳ್ಳುವುದಕ್ಕೆ ಅಗತ್ಯವಿರುವ ಕಾನೂನನ್ನಂತೂ ರೂಪಿಸುವ ಅಗತ್ಯವಿದೆ. ಇಲ್ಲಿಯ ತನಕ ಇರುವ ಕಾನೂನುಗಳೆಲ್ಲವೂ ಪಾಲಕರ ಮೇಲೆ ಜವಾಬ್ದಾರಿ ಹೊರಿಸುವುದಕ್ಕೆ ಸೀಮಿತವಾಗಿವೆ. ಆಸ್ಟ್ರೇಲಿಯ ಭಿನ್ನವಾದಿ ದಿಕ್ಕಿನಲ್ಲಿ ಹೆಜ್ಜೆಯಿಟ್ಟಿದೆ ಈ ವರ್ಷದ ಕೊನೆಯ ವೇಳೆಗೆ ಜಾರಿಗೆ ಬರಲಿರುವ ಕಾನೂನಿನ ಪ್ರಕಾರ 16 ವರ್ಷಕ್ಕೂ ಕಡಿಮೆ ಇರುವ ಮಕ್ಕಳು ಖಾತೆಗಳನ್ನು ತೆರೆಯದಂತೆ ನೋಡಿಕೊಳ್ಳುವ ಹೊಣೆಗಾರಿಕೆ ಜಾಲತಾಣಗಳದ್ದೇ ಆಗಿರುತ್ತದೆ. ಇಂಥದ್ದೊಂದು ಕಾನೂನಿನ ಮೂಲಕ ಎಲ್ಲವೂ ಸರಿಯಾಗಿ ಬಿಡುವುದಿಲ್ಲ. ಭಾರತದ ಸಂದರ್ಭದಲ್ಲಿ ಇನ್ನೂ ಸೂಕ್ಷ್ಮ ಮಟ್ಟದ ಕೆಲಸಗಳು ಸಮುದಾಯಗಳ ಮಟ್ಟದಲ್ಲೇ ನಡೆಯಬೇಕಾಗಿದೆ. ಭಾರತದ ಬಹುತೇಕ ಪಾಲಕರಿಗೆ ಅವರು ಮಕ್ಕಳು ಕೈಗೊಂಡಿರುವ ಅಪಾಯಕಾರಿ ಸೈಬರ್‌ಯಾನದ ಬಗ್ಗೆ ಅರಿವು ಮೂಡಬೇಕಾಗಿದೆ. ಬಹುಶಃ ಇದಕ್ಕೆ ಬಹುದೊಡ್ಡ ಮಾಧ್ಯಮ ಸಾಕ್ಷರತಾ ಆಂದೋಲನವೊಂದರ ಅಗತ್ಯವಿದೆ.