ದಲಿತ್ ಕಿಚನ್ ಕುದ್ದ ಸಮಾಜ, ಬೆಂದ ಜಾತಿ ಎಸರು
ಕವಯಿತ್ರಿ, ಹೋರಾಟಗಾರ್ತಿ, ಕಲಾವಿದೆ ದೀಪಾ ತುಮಕೂರು ಜಿಲ್ಲೆಯ ತುರುವೇಕೆರೆ ತಾಲೂಕಿನ ಸಂಪಿಗೆ ಹಳ್ಳಿಯಲ್ಲಿ ಜನಿಸಿದರು. ‘ದೀಪದ ಮಲ್ಲಿ’ ಇವರ ಕಾವ್ಯನಾಮ. ಪತ್ರಿಕೋದ್ಯಮ ಅಧ್ಯಯನ ಮಾಡಿರುವ ದೀಪಾ ಎಂ.ಎ.ಪದವೀಧರರು. ರಂಗಭೂಮಿ, ಸಾಹಿತ್ಯದೆಡೆಗೆ ಸದಾ ತುಡಿತ ಉಳ್ಳವರು. ಹಲವು ಸಂಘಸಂಸ್ಥೆಗಳಲ್ಲಿ ವಿವಿಧ ಜವಾಬ್ದಾರಿಗಳೊಂದಿಗೆ ಕೆಲಸ ಮಾಡಿರುವ ದೀಪಾ ಸದ್ಯ ಸ್ವಂತ ಉದ್ಯಮ ನಡೆಸುತ್ತಿದ್ದಾರೆ. ಇವರ ಅಸ್ಮಿತಾ ಕವನ ಸಂಕಲನಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ ಲಭಿಸಿದೆ. ಅದೇ ಕೃತಿಗೆ ಕರ್ನಾಟಕ ಲೇಖಕಿಯರ ಸಂಘ ನೀಡುವ ‘ಶ್ರೀ ಲೇಖಾ ದತ್ತಿ ಪ್ರಶಸಿ’್ತಯೂ ದೊರಕಿದೆ. ‘ನರೋ ವಾ’ ನಾಟಕ ಮತ್ತು ‘ಸುಂದರ ಭಾಗ್ ಬೀದಿಯಲ್ಲಿ ನಡೆಯಿತೊಂದು ವಿಸ್ಮಯ’ ಮಕ್ಕಳ ಕತೆಯನ್ನು ಇಂಗ್ಲಿಷ್‌ನಿಂದ ಅನುವಾದ ಮಾಡಿದ್ದಾರೆ. ‘ಸುರಗಿ ಸೀರೆಗಳು’ ಸೀರೆಗಳ ಕುರಿತ ಕನ್ನಡ ಕವಿತೆಗಳನ್ನು ಇವರು ಸಂಗ್ರಹಿಸಿದ್ದಾರೆ.
ಶಾಹು ಪಟೋಲೆ ಅವರ ‘ದಲಿತ್ ಕಿಚನ್ಸ್ ಆಫ್ ಮರಾಠವಾಡಾ’ (ಅನುವಾದ: ಭೂಷಣ್ ಕೊರಗಾಂವಕರ್-2024) ಹೀಗೆ ತಿರುಗಿಸಿ ಹಾಗೆ ಮುಚ್ಚಿಡಬಹುದಾದ ಒಂದು ಸಾಮಾನ್ಯ ಕುಕ್ ಬುಕ್ ಅಲ್ಲ. ಇದರಲ್ಲಿ ಆಹಾರ - ಅಸ್ಮಿತೆ, ಹಸಿವು-ಅಸ್ತಿತ್ವದ ಪ್ರಶ್ನೆಗಳ ಗಟ್ಟಿ ನಿರೂಪಣೆ ಇದೆ. ಮನುಷ್ಯನಿಗೆ ಬದುಕಲು ಬೇಕಾದ ಸಾಮಾನ್ಯ ಸಂಗತಿಯಾದ ‘ಊಟ’ ಅನ್ನುವುದು ಹೇಗೆ ‘ಜಾತಿ’ಯ ಹೆಸರಿನೊಂದಿಗೆ ತಳುಕು ಹಾಕಿಕೊಂಡು ಸಮಾಜದಲ್ಲಿ ಒಡಕು ಮೂಡಿಸಿತು ಎನ್ನುವುದನ್ನು ಬೆತ್ತಲುಗೊಳಿಸುತ್ತಾ ಹೋಗುತ್ತದೆ.
ಮಹಾರಾಷ್ಟ್ರದ ಖಮ್ಗಾವ್ ಹಳ್ಳಿಯ ಮಾಂಗ್ ಸಮುದಾಯಕ್ಕೆ ಸೇರಿದ ಶಾಹು ಮಾಣಿಕ್‌ರಾವ್ ಪಟೋಲೆ ಅವರು 2018ರಲ್ಲಿ ಮರಾಠಿ ಭಾಷೆಯಲ್ಲಿ ‘ಅನ್ನ ಹೇ ಅಪೂರ್ಣ ಬ್ರಹ್ಮ’ ಪುಸ್ತಕ ಬರೆದರು. ಶೀರ್ಷಿಕೆಯೇ ಹೇಳುವಂತೆ ಇದು ಹಲವು ತಲೆಮಾರು ಕಳೆದರೂ ನೆನಪಿಡುವಂತಹ ಆಹಾರ ಅಸಮಾನತೆಯ ಒಂದು ಕಹಿ ರುಚಿಯನ್ನು ನಾಲಗೆಯಲ್ಲಿ ಉಳಿಸಿಹೋಗುತ್ತದೆ.
ಭಾರತದಂತಹ ಜಾತೀಯ ಸಮಾಜದಲ್ಲಿ ಆಹಾರ ಎಂದೂ ನ್ಯೂಟ್ರಲ್ ಅಲ್ಲ. ಕೆಲವು ಸಮುದಾಯಗಳ ಆಹಾರವನ್ನು ಶ್ರೇಷ್ಠ, ಉತ್ಕೃಷ್ಟ ಎಂದು ಲೇಬಲ್ ಮಾಡಿರುವ ಹೊತ್ತಲ್ಲೇ, ದಲಿತರ ಆಹಾರವೆಂದರೆ ‘ಅಶುದ್ಧ, ಅಪವಿತ್ರ’ ಎನ್ನುವ ಹಣೆಪಟ್ಟಿ ಹಚ್ಚಿ ಏಣಿಶ್ರೇಣಿಯ ಮೊಳೆಗೆ ತೂಗುಹಾಕಲಾಗಿದೆ. ಈ ದಿಕ್ಕುಗೆಡಿಸುವ ನರೇಟೀವ್ಸ್ ಗಳ ಬುಡವನ್ನು ಪಟೋಲೆ ಅವರ ಪುಸ್ತಕದ ಹಲವು ಅಡುಗೆಗಳು ಅಲ್ಲಾಡಿಸಿಬಿಡುತ್ತವೆ. ದಲಿತರ ಆಹಾರವೆಂದರೆ ಸುಸ್ಥಿರವೂ, ಸಮೃದ್ಧವೂ, ನೆಲದೊಳಗೆ ಇಳಿಬಿಟ್ಟ ಆಳವಾದ ನಂಬಿಕೆಯೂ ಹೌದು. ಇಂತಹ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಹಲವು ಅಪರೂಪದ ರೆಸಿಪಿಗಳು ಇದರಲ್ಲಿ ಅಡಕವಾಗಿವೆ. ಜೋಳದ ಭಾಕ್ರಿ (ರೊಟ್ಟಿ), ಖದ್ರಾ (ಕುಟ್ಟಿದ ಹಸಿಮೆಣಸಿನಕಾಯಿ ಶೇಂಗಾ ಚಟ್ನಿ), ಕಂಡವಾನಿ (ಈರುಳ್ಳಿ ಚಟ್ನಿ), ಪಿತ್ಲಾ (ಕಡಲೆಹಿಟ್ಟು ಇಲ್ಲವೇ ಹುರಳಿಕಾಳು ಅಥವಾ ಶೇಂಗಾದಿಂದ ತಯಾರಿಸುವ ಸಾರು/ಸಾಗು), ಅಂಬಲಿ, ಹಾಗೆಯೇ, ಕೋಣ, ಹಂದಿಯ ದೇಹದ ಒಂದೊಂದು ಭಾಗದ ಮಾಂಸದಲ್ಲೂ ಹಲವು ವೆರೈಟಿ ರೆಸಿಪಿಗಳು ಇದುವರೆಗೂ ಜಡ್ಡುಗಟ್ಟಿದ್ದ ನಮ್ಮ ನಾಲಗೆಗೆ ಹೊಸ ಚೈತನ್ಯವನ್ನೂ, ಮೆದುಳಿಗೆ ಚಿಂತನೆಯನ್ನೂ ಏಕಕಾಲಕ್ಕೆ ನೀಡುತ್ತದೆ.
ಪುಸ್ತಕದ ಒಂದೊಂದು ರೆಸಿಪಿಯೂ ಚರಿತ್ರೆಯ ಹಲವು ಪಾಠ ಹೇಳುತ್ತದೆ. ದಲಿತರಿಂದ ವಂಚಿಸಲಾದ ಕುಡಿಯುವ ನೀರಿನ ಬಾವಿಗಳು, ಮಾರುಕಟ್ಟೆಯಂತಹ ಸಾರ್ವಜನಿಕ ಸ್ಥಳಗಳು, ಮೂಲಭೂತ ಹಕ್ಕುಗಳು, ಅವುಗಳನ್ನು ಮೀರಿಯೂ ಅವರು ಕಂಡುಕೊಂಡ ರುಚಿಕಟ್ಟಾದ, ಪೌಷ್ಟಿಕ, ಕ್ರಿಯೇಟಿವ್ ಆಹಾರ ಕ್ರಮದ ಕತೆಗಳು ತೆರೆದುಕೊಳ್ಳುತ್ತವೆ. ಕಾಡುಸೊಪ್ಪುಗಳು, ಬೇಲಿಹೂವುಗಳು, ಒರಟು ಧಾನ್ಯಗಳು, ಸಿಂಪಲ್ಲಾದ ಚಟ್ನಿಗಳು ಅವರ ಸಂಪನ್ಮೂಲದ ಸಾಧ್ಯತೆಯನ್ನು ಎತ್ತಿಹಿಡಿದು, ಜಾತಿ ಆಧಾರಿತ ಶ್ರೇಷ್ಠತೆಯ ಕೋಟೆಯನ್ನು ಅಲ್ಲಾಡಿಸುತ್ತದೆ.
ನೆಲದೊಳಗೆ ಬೆಳೆದ ಬೆಳ್ಳುಳ್ಳಿ, ಈರುಳ್ಳಿ, ಶುಂಠಿ ಮುಂತಾದುವನ್ನು ತಿನ್ನದ ಜನರು, ಚಾತುರ್ಮಾಸ ಹೊರತುಪಡಿಸಿ ಬೆಳ್ಳುಳ್ಳಿ ಈರುಳ್ಳಿ ತಿನ್ನುವ ಜನರು, ಪ್ರಧಾನವಾಗಿ ಸಸ್ಯಾಹಾರಿಯಾಗಿದ್ದುಕೊಂಡು ಅಲ್ಪಸ್ವಲ್ಪ ಪ್ರಮಾಣದಲ್ಲಿ ಮೊಟ್ಟೆ-ಮಾಂಸ ತಿನ್ನುವ, ಚಾತುರ್ಮಾಸ ಆಚರಿಸುವ ಜನರು, ದನ, ಎಮ್ಮೆ, ಹಕ್ಕಿ ಮುಂತಾದ ಮಾಂಸಗಳನ್ನು ತಿನ್ನದ, ಶ್ರಾವಣದಲ್ಲಿ ಮಾಂಸ ತ್ಯಜಿಸುವ ಜನರು, ವರ್ಷಾತರವೂ ಯಾವ ಕಟ್ಟುಪಾಡೂ ಇಲ್ಲದೆ ದನ, ಎಮ್ಮೆ, ಹಂದಿ ಮುಂತಾಗಿ ಸಸ್ಯಜನ್ಯ, ಮಾಂಸಜನ್ಯ ಆಹಾರ ತಿನ್ನುವ ಜನರು.. ಹೀಗೆ ಇಲ್ಲಿ ಹಲವು ಬೇಲಿಗಳಿವೆ. ಇಲ್ಲಿ ತಮ್ಮ ತಮ್ಮ ಮೇಲೆ ಕಟ್ಟುಪಾಡು ವಿಧಿಸಿಕೊಂಡು, ಒಬ್ಬರನ್ನು ಮತ್ತೊಬ್ಬರಿಂದ ಬೇರ್ಪಡಿಸಿ ಬದುಕುವ ಜನರು ಸಾತ್ವಿಕ, ರಜಸ್ಸು ತಮಸ್ಸಿನ ಹೆಸರಿನಲ್ಲಿ ತಿನ್ನುವ ಆಹಾರದ ಆಧಾರದ ಮೇಲೆ ಮನುಷ್ಯರ ನಡವಳಿಕೆಯನ್ನೂ ಅಳೆಯುತ್ತಾರೆ. ಇಂತಹ ಪರಿಪಾಠವನ್ನು ‘ಅನ್ನ ಹೆ ಅಪೂರ್ಣ ಬ್ರಹ್ಮ’ ಪ್ರಶ್ನಿಸುತ್ತದೆ.
ಅಷ್ಟು ಮಾತ್ರವಲ್ಲದೆ ಈ ಪುಸ್ತಕವು ದಲಿತ ಮಹಿಳೆಯರು ಜಾತಿ ಹಾಗೂ ಲಿಂಗತ್ವದ ಕಾರಣದಿಂದಾಗಿ ಅನುಭವಿಸುವ ದುಪ್ಪಟ್ಟು ಶೋಷಣೆಯ ಕತೆಯನ್ನೂ ಹೇಳುತ್ತದೆ. ಅಷ್ಟರ ಮಧ್ಯೆಯೂ ದಲಿತ ಅಡುಗೆಯ ಪರಂಪರೆಯನ್ನು ಉಳಿಸಿಕೊಂಡು ಬಂದ ಶ್ರೇಯ ಆ ಮಹಿಳೆಯರಿಗೇ ಸಲ್ಲಬೇಕು ಎನ್ನುತ್ತಾರೆ ಪಟೋಲೆ. ಅವರು ಉಳಿಸಿಕೊಂಡು ಬಂದ ರೆಸಿಪಿಗಳು ಬರೀ ಊಟವಲ್ಲ, ಅವು ತಮ್ಮನ್ನು ಒಲೆಯ ಮೂಲೆಗೆ ಸರಿಸುವ ವ್ಯವಸ್ಥೆಯ ಸಂಚಿಗೆ ಹಚ್ಚಿದ ಬೆಂಕಿಯೂ ಹೌದು. ಹೀಗೆ ದಲಿತರ ಮನೆಯ ಅಡುಗೆ ಕೋಣೆಗಳು ಪ್ರತಿರೋಧದ ಕುಲುಮೆಯೂ ಆಗಿದ್ದನ್ನು ವಿವರಿಸುತ್ತಾರೆ.
ಪಟೋಲೆ ಅವರು ರೆಸಿಪಿಗಳನ್ನು ದಾಖಲಿಸುವ ಕೆಲಸ ಮಾತ್ರ ಮಾಡಿಲ್ಲ. ಅದೊಂದು ಕಾಲ್ ಟು ಆ್ಯಕ್ಷನ್. ದಲಿತರ ಬದುಕು ಬವಣೆ, ಆಚರಣೆ, ದೇವರ ಹರಕೆ, ಬಲಿ, ಉಳುಮೆ ಹೀಗೆ ಎಲ್ಲದರೊಂದಿಗೆ ಬೆಸೆದುಕೊಂಡ ಆಹಾರ ಧರ್ಮವನ್ನು ಪ್ರತಿಪಾದಿಸುತ್ತಾರೆ. ಜೊತೆಗೆ ಈವರೆಗೆ ಸೆಲೆಬ್ರೇಟ್ ಮಾಡಿಕೊಂಡು ಬಂದಿರುವ ಅನೇಕ ಆಹಾರ ಸಂಸ್ಕೃತಿಗಳ ನಡುವೆ ಅವರು ಬಹಳ ಮುಖ್ಯ ಪ್ರಶ್ನೆಯೊಂದನ್ನು ಎತ್ತಿದ್ದಾರೆ, ‘ಗುಡ್ ಫುಡ್’ ಅನ್ನು ನಿರ್ಧರಿಸುವವರು ‘ಯಾರು’?
ಈ ದೇಶದಲ್ಲಿ ದಲಿತರು ಏನು ತಿಂದರು? ಏನು ತಿನ್ನುತ್ತಿದ್ದಾರೆ? ಎಂದು ಯಾರೂ ಕೇಳುವುದಿಲ್ಲ. ನಮ್ಮನ್ನು ಕೇಳಲು ನಾವು ಅವರಿಗೆ ಏನೂ ಅಲ್ಲ. ಇತಿಹಾಸ, ಮಾನವಶಾಸ್ತ್ರದಲ್ಲಿ ಅದರ ಉಲ್ಲೇಖ ಇರುವುದಿಲ್ಲ. ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೂ ನಾವೇನು ತಿಂದೆವು ಗೊತ್ತಿರುವುದಿಲ್ಲ. ಅದರ ಮೌಲ್ಯದ ಅರಿವಿರುವುದಿಲ್ಲ. ಆದ್ದರಿಂದ ನಮ್ಮ ಕತೆ, ನಮ್ಮ ಊಟ ನಾವೇ ಜರೂರು ಹೇಳಬೇಕು.
ಮೇಲ್ವರ್ಗದ ಜನರ ಮನೆಗಳಲ್ಲಿ ಅಗತ್ಯಕ್ಕಿಂತ ಜಾಸ್ತಿ ಆಹಾರ ಬೇಯಿಸುವ ಪರಿಪಾಠ ಇದ್ದೇ ಇತ್ತು. ಉಳಿದ ಊಟ ನಮ್ಮ ಮನೆಗಳನ್ನು ಸೇರುತ್ತಿತ್ತು. ಆದ್ದರಿಂದ ನಮಗೆ ಅವರ ಮನೆಯಲ್ಲಿ ಏನು ತಿನ್ನುತ್ತಿದ್ದರು ಮತ್ತು ಅದು ಹೇಗೆ ರುಚಿಸುತ್ತಿತ್ತು ಅಂತ ಗೊತ್ತಿತ್ತು. ಆದರೆ ಇಲ್ಲಿಯವರೆಗೂ ನಾವು ಏನು ತಿನ್ನುತ್ತೇವೆ? ಅದು ಹೇಗೆ ರುಚಿಸುತ್ತದೆ ಎಂದು ಅವರಿಗೆ ತಿಳಿದಿಲ್ಲ. ಆದರೆ ಮನೆಗೆ ಕವರುಗಳಲ್ಲಿ ಏನು ತರುತ್ತೇವೆ ಎಂಬ ಕುತೂಹಲ ಅವರಿಗೆ ಇರುತ್ತದೆ. ಎಂದೂ ರುಚಿನೋಡದ ಜನರು ವಾಸನೆ ಬೇಗ ಹಿಡಿಯುತ್ತಾರೆ.
1990ರಲ್ಲಿ ಮರಾಠಿ ಪತ್ರಿಕೆಗಳು ಫುಡ್ ಕಾಲಂ ಶುರು ಮಾಡಿದವು. ಆದರೆ ಎಲ್ಲೂ ನಮ್ಮ ಊಟದ ಪ್ರಸ್ತಾವವೇ ಇರುತ್ತಿರಲಿಲ್ಲ, ಇದು ನನ್ನನ್ನು ಯೋಚನೆಗೆ ಹಚ್ಚಿತು. ನಾನು ನಮ್ಮ ರೆಸಿಪಿಗಳನ್ನು ಕಳಿಸಲು ಶುರು ಮಾಡಿದೆ. ಯಾವ ಪತ್ರಿಕೆಯೂ ಅದನ್ನು ಪ್ರಕಟಿಸಲಿಲ್ಲ. ಕೊನೆಗೆ ಯಾರೂ ಮಾಡುವುದಿಲ್ಲವೆಂದು ಅರಿತು ನಾನೇ ಬರೆಯಲು ಶುರುಮಾಡಿದೆ. ಬರೆಯುತ್ತಾ ಹೋದಂತೆ ಗಾತ್ರವೂ ಹೆಚ್ಚಾಯಿತು. ಬರೆಯಲು ಸುಮಾರು ಮೂರು ವರ್ಷ ಹಿಡಿಯಿತು.
ಈಗ ನಾವು ದನದ ಮಾಂಸ ತಿನ್ನುವುದಿಲ್ಲ, ಎಮ್ಮೆಯ ಮಾಂಸ ತಿನ್ನುತ್ತೇವೆ. ಆದರೂ ಅವರು ನಮ್ಮನ್ನು ಸಮಾನರೆಂದು ಕಾಣುವುದಿಲ್ಲ. ಕಾರಣ ಏನು? ಅವರಿಗೆ ಸಮಸ್ಯೆ ಇರುವುದು ನಾವು ತಿನ್ನುವ ಆಹಾರವಲ್ಲ, ನಾವು ಹುಟ್ಟಿದ ಜಾತಿ. ಆದ್ದರಿಂದಲೇ ಇಂದಿಗೂ ನಾವು ಅಸ್ಪಶ್ಯರಾಗೇ ಉಳಿದಿದ್ದೇವೆ. ಈ ತಾರತಮ್ಯವನ್ನು ನಾವು ಚರ್ಚಿಸಬೇಕಲ್ಲವೇ?
ಸೋ ಕಾಲ್ಡ್ ಬಲಿಷ್ಠ ಜಾತಿಗಳು ಪ್ರತಿಯೊಂದು ಆಹಾರದ ಹಿಂದೆಯೂ ಸಾಂಪ್ರದಾಯಿಕ ಹಿನ್ನ್ನೆಲೆಯ ಕತೆಗಳನ್ನು ಪೋಣಿಸಿ ಹರಿಯ ಬಿಡುವಾಗ, ದಲಿತರ ಮನೆಯ ಒಲೆಯ ಕತೆಗಳನ್ನು ಯಾಕೆ ಮಾತನಾಡಬಾರದು? ಆ ರೆಸಿಪಿಗಳು ಯಾಕೆ ಮತ್ತು ಹೇಗೆ ಶ್ರೇಷ್ಠವಲ್ಲ? ಅದನ್ನು ಶ್ರೇಷ್ಠ-ಕನಿಷ್ಠವೆಂದು ಅಳೆಯುವ ಮಾಪನ ಯಾವುದು? ಎಂಬಿತ್ಯಾದಿ ಪ್ರಶ್ನೆಗಳನ್ನು ಎಸೆಯುತ್ತಾ ಸಾಗುವ ಈ ಕುಕ್ ಬುಕ್, ದಲಿತ ಚಳವಳಿಗೆ ಹೊಸತೊಂದು ರೂಟ್ ಮ್ಯಾಪ್ ಹಾಕಿಕೊಡುತ್ತದೆ. ಆ ಮೂಲಕ ಇದು ಕುಕ್ ಬುಕ್ ಮಾತ್ರವಲ್ಲ, ಇದೊಂದು ಮ್ಯಾನಿಫೆಸ್ಟೋ, ಒಂದು ಸಾಂಸ್ಕೃತಿಕ ಸ್ಟೇಟ್ ಮೆಂಟ್, ಅನ್ಯಾಯವನ್ನು ಪ್ರಶ್ನಿಸುವ ಟೂಲ್ ಎಂದು ಕೂಡಾ ಕರೆಯಬಹುದು. ಪಟೋಲೆ ಅವರು ದಲಿತರ ಮನೆಯಲ್ಲಿ ಬೆಂದ ಅಡುಗೆಯ ರುಚಿ ನೋಡಲು ಮಾತ್ರ ನಮ್ಮನ್ನು ಕರೆಯುತ್ತಿಲ್ಲ, ಜೊತೆಗೆ ಬೆಂದ ಬದುಕುಗಳ ಕತೆಗಳನ್ನೂ ಕೇಳಲು ಕರೆಯುತ್ತಿದ್ದಾರೆ.