ಗಝಲ್
ರಾಯಚೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಕವಿ-ಲೇಖಕ ದಸ್ತಗೀರಸಾಬ್ ದಿನ್ನಿ, ತಾಳಕೇರಿ ಬಸವರಾಜ, ಬಿಸಿಲ ಹೂ, ಎಲ್ಲಾ ಕಾಲದ ಬೆಳಕು, ಆದಯ್ಯ, ಹೊಸಗನ್ನಡ ಕಥಾಸಂಗ್ರಹ, ಹಗೇವು, ದಿನ್ನಿ ತಾಳಪಲ್ಲಿ ವೆಂಕಯ್ಯ, ಸಾಹಿತ್ಯ ಸಲ್ಲಾಪ, ಜಾಗತೀಕರಣ ಮತ್ತು ಸಂಸ್ಕೃತಿ ಅವರ ಪ್ರಕಟಿತ ಕೃತಿಗಳು. ರಾಯಚೂರು ತಾಲೂಕಿನ ದಿನ್ನಿ ಗ್ರಾಮದಲ್ಲಿ ಜನನ.ಕವನ, ಗಜಲ್, ಲೇಖನ, ವಿಮರ್ಶೆ ಬರೆದಿದ್ದಾರೆ.
ಗಾಜುಗೊಳದ ಕಂಗಳಲಿ ಚುಂಬಕ ಕನಸೊಂದು ತೂಗುತಿದೆ
ಎದೆಯ ಕಡಲಲಿ ಒಲವ ಅಲೆಯೊಂದು ಏಳುತಿದೆ.
ಬೆಳದಿಂಗಳ ತಂಪಿನಲಿ ಬಯಕೆಯ ಬಳ್ಳಿಯೊಂದು ಚಿಗುರುತಿದೆ
ತುಂಬಿಟ್ಟ ಹೂಜಿಯಲಿ ಮದಿರೆಯ ಘಮಲೊಂದು ಕರೆಯುತಿದೆ.
ರಂಗೇರಿದ ಕೆನ್ನೆಯಲಿ ಲಜ್ಜೆಯ ಹೂವೊಂದು ಅರಳುತಿದೆ
ರಣರಣ ಬಿಸಿಲಲಿ ಮಧುರ ನೆನಪೊಂದು ನಲಿಯುತಿದೆ.
ಒಣಗಿದ ತುಟಿಗಳಲಿ ತುಂಟ ನಗುವೊಂದು ಕುಣಿಯುತಿದೆ
ದೀಪದ ಎದುರು ಪ್ರೇಮವನು ಪತಂಗವೊಂದು ಅರಸುತಿದೆ.
ಮುಂಗಾರಿನ ಮಳೆಗೆ ಮಲ್ಲಿಗೆ ಎಸಳೊಂದು ಮಿಡಿಯುತಿದೆ
‘ದಿನ್ನಿ’ ಲೋಕದ ಕೇಡಿಗೆ ಬೆಳಕಿನ ಸೆಳಕೊಂದು ಉಲಿಯುತಿದೆ. ತುಟಿಯಿಂದ ಜಾರಿದ ಮಾತೊಂದು ಬೆಂಕಿ ಹಚ್ಚಿತು
ಕಣ್ಣಿನ ಬಿನ್ನಾಣದ ನೋಟವೊಂದು ಬೆಂಕಿ ಹಚ್ಚಿತು.
ಗೋಸುಂಬಿಗಳ ಬಡಿವಾರದ ಮಸಲತ್ತು ತಾಂಬೂಲವ ನಾಚಿಸಿತು
ಉಕ್ಕಿದ ಫಳ್ಳನೆಯ ನಗುವೊಂದು ಬೆಂಕಿ ಹಚ್ಚಿತು.
ನೀರನು ಸೋಸಿ ರಕ್ತವನು ಹಾಗೇ ಕುಡಿವ ಕಾಲವಿದು
ಪ್ರೀತಿ ಉಣಿಸಿದ ಕೈಯೊಂದು ಬೆಂಕಿ ಹಚ್ಚಿತು.
ಯಾರದೋ ದಾಳಕೆ ಹೂವಿನ ಗುಡಿಸಲು ಉರಿದು ಹೋಯಿತು
ಅನುಗಾಲ ನಂಬಿದ ನೆರಳೊಂದು ಬೆಂಕಿ ಹಚ್ಚಿತು.
ಮಗುವಿನ ಹಾಡು ಕನಸು ಸುಮ್ಮನೆ ಕಮರಿ ಹೋಯಿತು
ನಗುತ್ತಲೇ ಕರುಣೆಯ ಮುಖವಾಡದ ಮನವೊಂದು
ಬೆಂಕಿ ಹಚ್ಚಿತು
ತಾಯಿ ಪ್ರೀತಿಯ ಕಡಲಿಗೆ ಹುಳಿ ಹಿಂಡುವುದೇ ಫಲಿಸಿತು
ಕಸ ತುಂಬಿಕೊಂಡ ಬಣ್ಣದ ಭಾವವೊಂದು
ಬೆಂಕಿ ಹಚ್ಚಿತು
‘ದಿನ್ನಿ’ ಗಾಯಕೆ ಉಪ್ಪು ಸವರುವುದೇ ಖುಷಿಯ ಕೆಲಸವೀಗ
ಪೊರೆವ ಮಂಜಿನ ಒಡಲೊಂದು ಬೆಂಕಿ ಹಚ್ಚಿತು.