ಸಾಮರಸ್ಯಕ್ಕಾಗಿ ಸಾಹಿತ್ಯ

ಮುಂಬೈ ನೆಲದ ಕನ್ನಡದ ಕರುಳು ಶ್ಯಾಮಲಾ ಮಾಧವ. ಭಾಷಾಂತರ ಸಾಹಿತ್ಯಕ್ಕೆ ಇವರ ಕೊಡುಗೆ ಬಹುದೊಡ್ಡದು. ಗಾನ್ ವಿತ್ ದ ವಿಂಡ್, ಫ್ರಾಂಕಿನ್‌ಸ್ಟೈನ್‌ನಂತಹ ಕಾದಂಬರಿಗಳನ್ನು ಕನ್ನಡಕ್ಕೆ ತಂದವರು. ಉರ್ದುವಿನಿಂದ ಇವರು ಅನುವಾದಿಸಿದ ‘ಆಲಂಪನಾ’ ಕೂಡ ಭಾರೀ ಓದುಗರನ್ನು ತನ್ನೆಡೆಗೆ ಸೆಳೆದುಕೊಂಡಿತು. ಅನುವಾದಗಳಲ್ಲದೆ, ಇನ್ನೂ ಹತ್ತು ಹಲವು ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಗಾನ್ ವಿತ್ ದ ವಿಂಡ್ ಈ ಅನುವಾದ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನವು ಸಂದಿದೆ. ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ. ಸಾವಿತ್ರಮ್ ದತ್ತಿನಿಧಿ ಬಹುಮಾನವೂ ಪ್ರಾಪ್ತವಾಗಿದೆ. ಮಹಾರಾಷ್ಟ್ರ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಪ್ರಶಸ್ತಿ ಹಾಗೂ ಎಸ್.ವಿ.ಪರಮೇಶ್ವರ ಭಟ್ಟ ಸಂಸ್ಕರಣ ಪ್ರಶಸ್ತಿಯಿಂದಲೂ ಸನ್ಮಾನಿತರಾಗಿದ್ದಾರೆ.

Update: 2025-01-08 09:59 GMT

‘ಸಾಹಿತ್ಯದಿಂದ ನಮ್ಮ ಮನಸ್ಸು ಅರಳಬೇಕು. ನಮ್ಮ ಅರಿವಿನ ಸೀಮೆ ನಿರಂತರವಾಗಿ ವಿಸ್ತರಿಸುತ್ತಾ ಹೋಗಬೇಕು. ನಮ್ಮ ಅನುಭವಗಳನ್ನು ವಿಶ್ಲೇಷಿಸುತ್ತಾ, ಪುನರ್‌ವಿಮರ್ಶಿಸುತ್ತಾ ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಹಾಳುರೂಢಿಗಳನ್ನು ಪ್ರಶ್ನಿಸುವ ಧೈರ್ಯ ಮತ್ತು ತಿದ್ದಲು ಬೇಕಾದ ಅರಿವು ನಮಗೆ ಬೇಕು. ಇದು ಬರಹದಿಂದ ಆಗಬೇಕಾದ್ದು. ಸಾಹಿತ್ಯ ಕೇವಲ ಪುಸ್ತಕವೆನಿಸದೆ, ಒಂದು ಸಾಮಾಜಿಕ, ಸಾಂಸ್ಕೃತಿಕ ಪ್ರಕ್ರಿಯೆಯಾಗಬೇಕು’ ಎಂದು ಹೇಳಿದವರು ನಮ್ಮ ಶ್ರೇಷ್ಠ ಚಿಂತಕ, ಸಾಹಿತಿ, ಶಿಕ್ಷಣ ತಜ್ಞ ಕೆ.ಟಿ.ಗಟ್ಟಿ ಅವರು. ಸಮಷ್ಟಿಗೆ ಹಿತವನ್ನುಂಟು ಮಾಡುವುದೇ ಸಾಹಿತ್ಯ ಎಂಬ ಅರಿವು ಎಲ್ಲರಲ್ಲೂ ಇರಬೇಕು.

ನಮ್ಮ ಬಾಲ್ಯದಲ್ಲಿ ಓದಿನ ಸಿರಿಸಂಪದವೇ ನಮಗೆ ಒದಗುವಂತೆ ಮಾಡಿದ ಮಕ್ಕಳ ಸಾಹಿತ್ಯದ ಪಿತಾಮಹ ಪಂಜೆಯವರ ‘ತೆಂಕಣ ಗಾಳಿಯಾಟ’ ಹಾಗೂ ‘ಕಡೆಕಂಜಿ’ ಕಥನ ಕವನ ಎಂದಾದರೂ ನಮ್ಮ ನೆನಪಿನಿಂದ ಮಾಸಿ ಹೋಗುವುವೇ?

ಮಂಜೇಶ್ವರ ಗೋವಿಂದ ಪೈ ಅವರ ‘ಗಿಳಿವಿಂಡು, ‘ಗೊಲ್ಗೊಥಾ ಮತ್ತು ವೈಶಾಖಿ’ ಯನ್ನು ಮರೆಯಲು ಸಾಧ್ಯವೇ? ಸೇಡಿಯಾಪು ಕೃಷ್ಣ ಭಟ್ಟರ ‘ಪಳಮೆಗಳು’ ಹಾಗೂ ಕಡೆಂಗೋಡ್ಲು ಶಂಕರ ಭಟ್ಟರ ‘ನಲ್ಮೆ’ ಮುಂತಾದುವು! ಇನ್ನು, ‘ಕನ್ನಡಾಂತರ್ಗತಂ ತುಳುನಾಡು ನನ್ನದಿದು, ಭಾರತಾಂತರ್ಗತಂ ಕನ್ನಡದ ನಾಡು’ ಎಂದು ಉದ್ಘೋಷಿಸಿದ ಕಯ್ಯಾರರ ‘ಐಕ್ಯಗಾನ’, ‘ನೇಗಿಲ ಹಾಡು’ ಕವನಗಳು ಹಾಗೂ ಇದಿನಬ್ಬರ ಸ್ವಾತಂತ್ರ್ಯ ಮತ್ತು ಸೌಹಾರ್ದ ಗೀತೆಗಳು ಕನ್ನಡದ ಸಿರಿಸಂಪದವೇ ಆಗಿವೆ. ತುಳು ಮತ್ತು ಕನ್ನಡ ತನ್ನ ಇಬ್ಬರು ತಾಯಂದಿರು ಎಂದರು ಕಯ್ಯಾರರು. ಮಲಯಾಳಂ, ತುಳು, ಕನ್ನಡ ಮೂವರು ತಾಯಂದಿರ ಮಗು ತಾನೆಂದರು, ಮೂರೂ ಭಾಷೆಗಳಲ್ಲಿ ಸಾಹಿತ್ಯ ರಚಿಸಿದ ನಮ್ಮ ಅಮೃತ ಸೋಮೇಶ್ವರರು. ಅಂತೆಯೇ ಈ ಮೂರೂ ಭಾಷೆಗಳನ್ನು ಆಡುವವರಲ್ಲದೆ ಬ್ಯಾರಿ, ಕೊಂಕಣಿ, ಇಂಗ್ಲಿಷ್ ಭಾಷೆಗಳೂ ಮನೆಮಾತಾಗಿರುವ ಜನರೆಲ್ಲರ ಭವ್ಯ ಭಾಷಾ ಸಂಸ್ಕೃತಿಯ ನೆಲವಿದು.

ಉಳ್ಳಾಲ ಎಂಬ ಪದ ನನ್ನ ಅಕ್ಷಿಪಟಲದಲ್ಲಿ, ಚಿತ್ತಭಿತ್ತಿಯಲ್ಲಿ ನೆಲೆನಿಂತುದು ನನ್ನ ಮೂರು, ನಾಲ್ಕರ ಎಳೆಯ ಪ್ರಾಯದಲ್ಲೇ. ಮಂಗಳೂರು ಬೆಸೆಂಟ್ ಶಾಲಾ ಆವರಣದ ಮನೆಯಿಂದ ಪ್ರತೀ ರಜೆಯಲ್ಲೂ ನಮ್ಮೂರಿಗೆಂದು ಹೊರಡುವ ರೈಲುಪಯಣ ಕೊನೆಯಾಗುತ್ತಿದ್ದುದು, ಉಳ್ಳಾಲವೆಂಬ ಆ ಚೆಲುವಿನ ನಿಲುದಾಣದಲ್ಲಿ. ಆ ಪಯಣದಲ್ಲಿ ಎದುರಾಗುತ್ತಿದ್ದ ನದಿ ನೇತ್ರಾವತಿ, ಭತ್ತದ ಗದ್ದೆಗಳು, ಕಬ್ಬಿನ ಹೊಲಗಳು, ನೀರ ಮಡುಗಳು, ಅಲ್ಲಿ ಅರಳುವ ತಾವರೆ, ಬೆಳ್ದಾವರೆಗಳು, ಪುಟ್ಟ ಗುಡಿಸಲುಗಳು, ತೆಂಗಿನ ತೋಟಗಳು - ಎಲ್ಲವೂ ಅದೆಲ್ಲಿ ಮಾಯವಾದುವು?!.... ಉಳ್ಳಾಲದಲ್ಲಿಳಿದು ಎರಡು ಮೈಲುದೂರದ ಅಜ್ಜಿಮನೆಯ ದಾರಿಯುದ್ದಕ್ಕೂ ರೈಲುಹಳಿಗಳ ಪಕ್ಕ ತೋಳ್ ಬೀಸುವ ವರ್ಣರಂಜಿತ ಬೋಗನ್‌ವಿಲ್ಯಾ ಪೊದೆಗಳು, ಬಂಧುಗಳ ಕೆಲವೇ ಮನೆಗಳು, ಊರಮಧ್ಯೆ ಉಚ್ಚಿಲ ಶಾಲೆ, ಪಡುವಣದಿ ಮೊರೆವ ಕಡಲು! ಊರ ದಕ್ಷಿಣ ತುದಿಯಲ್ಲಿ ಉಚ್ಚಿಲ ಹೊಳೆಯ ಪಕ್ಕ ಹರಡಿನಿಂತ ವಿಶಾಲ ಗದ್ದೆಗಳಾಚೆ ವಾತ್ಸಲ್ಯದಾಗರವಾಗಿದ್ದ ನಮ್ಮಜ್ಜಿಮನೆ. ಮನೆಯ ಮೂರ್ದಿಕ್ಕಿನಲ್ಲೂ ಗದ್ದೆಗಳು, ಬಡಗು ದಿಕ್ಕಿನಲ್ಲಿ ನನ್ನ ಪ್ರಿಯ ಐಸಕುಂಞಿಯ ಸುವಿಶಾಲ ಹಿತ್ತಿಲು ಮತ್ತು ಮನೆ! ಸಾಮರಸ್ಯ, ಸಹಬಾಳ್ವೆಯ ಮರೆಯಲಾಗದ ಚಿತ್ರವದು! ಪಕ್ಕದಲ್ಲಿ ಹರಿವ ಹೊಳೆಯಿಂದಾಗಿ ನಮ್ಮ ಬಾವಿನೀರು ಉಪ್ಪುಪ್ಪು. ಕುಡಿವ ನೀರಿಗೂ, ಅಡಿಗೆಗೂ ಐಸಕುಂಞಿಯ ಮನೆಯ ಬಂಡೆಗಲ್ಲಿನ ಒರತೆಯ ತಂಪು ತಂಪು ಸಿಹಿನೀರೇ ನಮಗೆ ಗತಿ. ಮೈಲಾಂಜಿ ಪೊದೆಗಳ ಆ ವಿಶಾಲ ಹಿತ್ತಿಲೂ ನಮ್ಮ ಆಡುಂಬೊಲ.. ನನ್ನ ಪ್ರಿಯ ಐಸಕುಂಞಿಯ ಕುಸುರಿಕೆಲಸದ ಬೆಳ್ಳನೆ ಮಲ್ ಬಟ್ಟೆಯ ಕುಪ್ಪಾಯ, ಅಡ್ಡಮುಂಡು, ಶಿರೋವಸ್ತ್ರ, ಒಡ್ಯಾಣ, ದಪ್ಪ ಕಾಲಂದುಗೆ ಮತ್ತು ಕಡಗದ, ಪ್ರೀತಿಯಿಂದ ಅರಳುವ ನೀಲಕಣ್ಗಳ, ಮೃದುಮಾತಿನ ನನ್ನ ಪ್ರಿಯ ಐಸಕುಂಞಿ! ಎಲ್ಲಿ ಮಾಯವಾದುವು, ನನ್ನೂರ ಈ ಪ್ರಿಯ ಬಂಧುಗಳ ಈ ಉಡುಗೆ ತೊಡುಗೆ?! ಐಸಕುಂಞಿಯ ಹೆಸರು ‘ಆಯಿಶಾ’ ಎಂದಿರಬಹುದೆಂದು ನನಗೆ ಹೊಳೆದುದು ನಾನು ಬರವಣಿಗೆಗೆ ತೊಡಗಿದ ಮೇಲೆ.

ವರ್ಷಗಳು ಉರುಳಿ, ಉಕ್ಕೇರಿ ಬಂದ ಪ್ರವಾಹದಲ್ಲಿ ನಮ್ಮಜ್ಜಿಮನೆ ಕುಸಿದು, ಮನೆಯೂ, ಹಿತ್ತಿಲೂ ಈಗ ಹೊಸರೂಪ ತಾಳಿದಂತೇ ಪ್ರಿಯ ಐಸಕುಂಞಯ ಹಿತ್ತಿಲಲ್ಲೂ ಹೊಸಮನೆಗಳೆದ್ದಿವೆ. ಇಬ್ಬಗೆಯಲ್ಲೂ ಪ್ರಿಯಜೀವಗಳೆಲ್ಲ ಅಳಿದು ನಮ್ಮ ಹೃದಯಗಳಲ್ಲಷ್ಟೇ ಉಳಿದಿವೆ. ಆದರೆ ಅಳಿದು ಹೋಗುವುದೇ ಆ ಸಾಮರಸ್ಯದ ಬೆಸುಗೆ?

ವೀರರಾಣಿ ಅಬ್ಬಕ್ಕನ ಕೋಟೆಯ ಅವಶೇಷವಿರುವ ಸೋಮೇಶ್ವರ ದೇವಾಲಯ ನಮ್ಮೂರ ಬಡಗು ತುದಿಯಲ್ಲಿದ್ದರೆ, ತೆಂಕುತುದಿಯಲ್ಲಿ ಬೆಟ್ಟದ ಮೇಲಿರುವ ವಿಷ್ಣುಮೂರ್ತಿ ದೇವಾಲಯವಿರುವುದು, ಟಿಪ್ಪು ಸುಲ್ತಾನನ ಕೋಟೆಯ ಅವಶೇಷದ ಮೇಲೆ. ಅಲ್ಲಿ ಟೀಪುವಿನ ಶಸ್ತ್ರಾಗಾರವಿತ್ತೆಂಬ ಐತಿಹ್ಯವಿದೆ. ಬೆಟ್ಟದ ಬಂಡೆಯನ್ನೇ ಕಡಿದು ಮಾಡಿದ ಕಡಿದಾದ ಬಂಡೆಗಲ್ಲ ಮೆಟ್ಟಲುಗಳನ್ನು ಹತ್ತಿ ನಾವು ಮೇಲೆ ದೇವಳಕ್ಕೆ ಹೋಗುತ್ತಿದ್ದೆವು. ದೇವಳದ ಬಿಸಿಲುಮಚ್ಚಿನಿಂದ ನೋಡಿದರೆ, ಪಶ್ಚಿಮದಲ್ಲಿ ವಿಶಾಲ ಸಾಗರದ ನೀಲಿ; ಪೂರ್ವಕ್ಕೆ ಕಣ್ಣು ಹಾಯ್ದಷ್ಟೂ ದೂರ ಅಷ್ಟೇ ವಿಶಾಲ ಹಸಿರಸಿರಿ! ಅಲ್ಲಿಂದ ಕಾಣಿಸುತ್ತಿದ್ದುದು, ಕೆಳಗೆ ತೆಂಗುಗಳ ನಡುವೆ ಹುದುಗಿದ್ದ ನಮ್ಮಜ್ಜಿಮನೆಯ ಗೋಡೆ ಒಂದೇ. ಈಗ ನೋಡಿದರೆ ದೇರ್ಲಕಟ್ಟೆಯವರೆಗೂ ಕಟ್ಟಡಗಳೆದ್ದಿರುವುದು ಕಣ್ಣಿಗೆ ರಾಚುತ್ತದೆ. ಕೋಟೆ ಬೆಟ್ಟದ ಬಂಡೆಯ ಮೈಯಲ್ಲಿ ಮನುಷ್ಯನೊಬ್ಬ ತೆವಳಿಕೊಂಡು ಪ್ರವೇಶಿಸಬಹುದಾದಷ್ಟು ಗಾತ್ರದ ಸುರಂಗವಿತ್ತು. ಟಿಪ್ಪು ಬ್ರಿಟಿಷರಿಂದ ತಪ್ಪಿಸಿಕೊಂಡು ನೀಲೇಶ್ವರಕ್ಕೆ ಪಲಾಯನ ಮಾಡಿದ ಸುರಂಗ ಎಂದು ನಾವನ್ನುತ್ತಿದ್ದೆವು. ನಮ್ಮ ಸುರೇಶಣ್ಣ ಅದರೆದುರು ನಿಂತು, ಮೈಸೂರಿಗೆ ಯಾರೆಂದು ಕೇಳಿದ್ದೀರಿ? ಎಂದು ಬಯಲಾಟದ ಶೈಲಿಯಲ್ಲಿ ಆರ್ಭಟಿಸುತ್ತಿದ್ದರು.

ತೆಂಕುತುದಿಯಲ್ಲಿ ವಿಷ್ಣುಮೂರ್ತಿಯೂ, ಬಡಗು ತುದಿಯಲ್ಲಿ ಸೋಮನಾಥನೂ ನಡುವೆ ಪಳ್ಳಿಯೂ ಇರುವ ಸಾಮರಸ್ಯದ ಬೀಡು ನಮ್ಮದು. ಕಳೆದ ಶತಮಾನದ ಆದಿಯಲ್ಲಿ ಆರಂಭವಾದ ಕೋಟೆಕಾರು ಶಾಲೆ ದುರ್ದೈವದಿಂದ ಶತಮಾನ ಸಂಭ್ರಮ ಕಾಣದೆ ಮುಚ್ಚಿ ಹೋಗಿದೆ. ಶತಮಾನ ಸಂಭ್ರಮ ಕಂಡ ನಮ್ಮ ಉಚ್ಚಿಲ ಬೋವಿ ವಿದ್ಯಾಶಾಲೆಯಲ್ಲದೆ, ಸಾವಿರದ ಒಂಬೈನೂರ ನಲ್ವತ್ತಾರರಲ್ಲಿ ಆರಂಭವಾದ ಆನಂದಾಶ್ರಮ ಶಾಲೆ, ಸ್ಟೆಲ್ಲಾ ಮೇರೀಸ್ ಕಾನ್ವೆಂಟ್‌ಗಳಂತಹ ವಿದ್ಯಾಸಂಸ್ಥೆಗಳಿದ್ದೆಡೆಗಳಲ್ಲಿ ಈಗ ಹತ್ತು ಹಲವು ಇಂಗ್ಲಿಷ್ ಮಾಧ್ಯಮದ ಶಾಲೆಗಳು ತೆರೆದುಕೊಂಡಿವೆ. ಅನತಿ ದೂರದಲ್ಲಿ ಉಳ್ಳಾಲ ಪಟ್ಟಣವು ಬೆಳೆದಿರುವ ಪರಿಯನ್ನೂ, ಶಿಕ್ಷಣ, ವಾಣಿಜ್ಯ ಹಾಗೂ ಉದ್ಯಮ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿರುವುದನ್ನೂ ನಾವೆಲ್ಲ ಕಾಣುತ್ತಿದ್ದೇವೆ. ನನ್ನ ನೆಚ್ಚಿನ ಲೇಖಕ ಬೊಳುವಾರರು ಉಳ್ಳಾಲದ ಬೀಚ್‌ನಲ್ಲಿ ಕತ್ತಲ ರಾತ್ರಿಯಲ್ಲಿ ಗೆಳೆಯನ ಜತೆ ಜಕಣಿಯನ್ನರಸಿ ಅಲೆದುದನ್ನು ಬಹಳ ರೋಚಕವಾಗಿ ಬಣ್ಣಿಸಿದ್ದಾರೆ. ತವಕ, ತಲ್ಲಣಗಳ, ಅಷ್ಟೇ ತಾಳ್ಮೆಯ ಅವರ ಆ ಮೋನು ಸ್ಮತಿಗೆ ಮಾರು ಹೋದವಳು ನಾನು.

ಮಂಗಳೂರಿಗರಾದ ನಮಗೆ ರಾಣಿ ಅಬ್ಬಕ್ಕ ಹಾಗೂ ಟಿಪ್ಪು ಸುಲ್ತಾನ್, ವಿದೇಶೀಯರ ಆಕ್ರಮಣವನ್ನೆದುರಿಸಿ ತಾಯ್ನಾಡ ರಕ್ಷಣೆಯಲ್ಲಿ ಜೀವ ತೆತ್ತ ವೀರರು! ಜನತೆಯ ಒಳಿತಿಗಾಗಿ ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡು, ನಾಡನ್ನು ಸುಭಿಕ್ಷವಾಗಿರಿಸಿದವರು. ನಮ್ಮ ಕಡಲಲ್ಲಿ ತನ್ನ ನೌಕಾ ಬಲದಿಂದ ಪೋರ್ಚುಗೀಸರನ್ನು ಎದುರಿಸಿ ಸೋಲಿಸಿ, ನಾಡನ್ನು ರಕ್ಷಿಸಿದ ವೀರರಾಣಿ ಅಬ್ಬಕ್ಕ! ಸೋಮೇಶ್ವರ ಸಮುದ್ರ ಕಿನಾರೆಯಲ್ಲಿ, ಬೆಟ್ಟದ ಕೆಳಗೆ ತಲೆಯೆತ್ತಿ ನಿಂತ ರುದ್ರಶಿಲೆಯ ಬಳಿ ಸಾಗರಾಭಿಮುಖವಾಗಿ ನಿಂತರೆ, ರಾಣಿ ಅಬ್ಬಕ್ಕನ ಶೌರ್ಯದ ನೆನಪಿನಿಂದ ಮೈ ನವಿರೇಳದಿರುವುದಿಲ್ಲ. ಹಿಂದೂ, ಮುಸ್ಲಿಮ್, ಜೈನರೆಲ್ಲರನ್ನೂ ಸಮಾನವಾಗಿ ಪೊರೆದ ರಾಣಿ ಅಬ್ಬಕ್ಕನಂತೆ ನಮ್ಮ ಸಮಾಜವು ಸಂಘಟನೆಯತ್ತ ಚಲಿಸಬೇಕೇ ವಿನಃ ವಿಘಟನೆಯತ್ತ ಅಲ್ಲ. ಅಂತೆಯೇ ಮೈಸೂರು ಹುಲಿ ಟಿಪ್ಪು ಸುಲ್ತಾನ್. ನೀರಾವರಿ, ರೇಶ್ಮೆ ಕೃಷಿ ಹಾಗೂ ಇನ್ನಿತರ ಉದ್ಯಮ, ಸಾಗರೋತ್ತರ ಸರಕು ಮಾರಾಟಗಳಿಂದ ರಾಜ್ಯದ ಸಂಪನ್ಮೂಲವನ್ನು ಹೆಚ್ಚಿಸಿ, ಕೃಷಿಕರ ಬಾಳಿಗೆ ಬೆಳಕಾದ, ಹಲವು ದೇವಾಲಯ, ಇಗರ್ಜಿ, ಮಸೀದಿಗಳಿಗೆ ದತ್ತಿನೀಡಿದ, ರಾಕೆಟ್ ಆವಿಷ್ಕಾರದಿಂದ ಬ್ರಿಟಿಷರನ್ನು ಸಾಕಷ್ಟು ಕಾಲ ದೂರವಿರಿಸಿದ ಮೈಸೂರು ಹುಲಿ ಟಿಪ್ಪು ಬಗ್ಗೆ ಇತಿಹಾಸತಜ್ಞರು ಸಾಕಷ್ಟು ಬರೆದಿದ್ದಾರೆ. ಟಿಪ್ಪು ಬಗ್ಗೆ ಮಾತನಾಡಬೇಕಾದವರು ಇತಿಹಾಸತಜ್ಞರೇ ಹೊರತು, ರಾಜಕೀಯ ಪ್ರೇರಿತ ದುರುದ್ದೇಶದಿಂದ ಕೇಡುನುಡಿಯುವವರಲ್ಲ. ಮತೀಯ ವಿದ್ವೇಷದಿಂದ ಹುಟ್ಟಿಕೊಳ್ಳುವ ಕಟ್ಟುಕಥೆಗಳು ದೇಶದ ಒಳಿತಿಗೆ ಮಾರಕವೇ ಹೊರತು, ಬೇರೇನಲ್ಲ ಎಂಬುದು ನಮ್ಮ ಪ್ರಜ್ಞೆಯಲ್ಲಿರಬೇಕು.

ಪ್ರಥಮ ಜಾಗತಿಕ ಮಹಾಯುದ್ಧದ ದಳ್ಳುರಿಯಿಂದ ನಮ್ಮ ಸಮಾಜ, ಊರಜನರು ಅಜ್ಞಾನ, ದಾರಿದ್ರ್ಯದಲ್ಲಿ ಮುಳುಗಿದ್ದಾಗ, ಅವರಿಗೆ ವಿದ್ಯೆಯ ಅಗತ್ಯವನ್ನು ಮನಗಂಡು ನಮ್ಮ ಹಿರಿಯರು ಸ್ಥಾಪಿಸಿದ ಶಾಲೆಯೇ 1918ರಲ್ಲಿ ಅಸ್ತಿತ್ವಕ್ಕೆ ಬಂದ ‘ಉಚ್ಚಿಲ ಬೋವಿ ವಿದ್ಯಾ ಶಾಲೆ’. ವಿದ್ವಾನ್ ರಾಮಚಂದ್ರ ಉಚ್ಚಿಲ್, ಪ್ರೊ. ಕೇಶವ ಉಚ್ಚಿಲ್, ಒಲಿಂಪಿಯನ್ ಸಂಜೀವ ಉಚ್ಚಿಲ್ ಆದಿಯಾಗಿ ವಿವಿಧ ರಂಗಗಳ ಖ್ಯಾತನಾಮರನೇಕರು ಕಲಿತು ಊರಿಗೆ ಬೆಳಕಾದ ಈ ಶಾಲೆಯ ಶತಮಾನೋತ್ಸವವನ್ನು 2019ರ ನವೆಂಬರ್ ತಿಂಗಳಲ್ಲಿ ಮೂರುದಿನಗಳ ಕಾಲ ಅಭೂತಪೂರ್ವವಾಗಿ ಆಚರಿಸಲಾಯ್ತು. ಶತಮಾನೋತ್ಸವ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಅಂದು ನಮ್ಮೊಡನಿದ್ದವರು ಸನ್ಮಾನ್ಯ ಯು.ಟಿ. ಖಾದರ್ ಅವರು. ನಮ್ಮ ‘ಶತದೀವಿಗೆ’ ರಂಗರೂಪಕವನ್ನು ಖ್ಯಾತ ನಿರ್ದೇಶಕ ವಿದ್ದು ಉಚ್ಚಿಲ್ ಅವರು ಎರಡು ಗಂಟೆಗಳ ಧ್ವನಿ - ಬೆಳಕಿನ ರಂಗಪ್ರದರ್ಶನವಾಗಿ ಸುವಿಶಾಲವಾದ ಶಾಲಾ ಬಯಲಲ್ಲಿ ಸ್ಮರಣೀಯವಾಗಿ ಪ್ರಸ್ತುತ ಪಡಿಸಿದರು. ನಾರಾಯಣ ಗುರುಗಳ ಬಗ್ಗೆ ಈಗ ತಿಂಗಳಿಂದ ಎಲ್ಲೆಡೆ ಪ್ರದರ್ಶಿಸಲ್ಪಡುತ್ತಿರುವ ವಿದ್ದೂ ಉಚ್ಚಿಲ್ ಅವರ ‘ಶೂದ್ರ ಶಿವ’ ರಂಗರೂಪಕ ನಮ್ಮ ನಾಡ ಹೆಮ್ಮೆಯೆಂದೇ ಹೇಳಬೇಕು. ಡಾ. ವಿವೇಕ ರೈ ಅವರೂ, ಡಾ. ಪುರುಷೋತ್ತಮ ಬಿಳಿಮಲೆ ಅವರೂ ಸಮಾರೋಪ ಭಾಷಣದಿಂದ ನಮ್ಮನ್ನು ಅಂದು ಅನುಗ್ರಹಿಸಿದರು. ಜಗತ್ತಿಗೆ ಕೊರೋನ ಸಾಂಕ್ರಾಮಿಕ ಕಾಲಿಡುವ ಮೊದಲೇ ನಮ್ಮ ಈ ಮಹತ್ವಾಕಾಂಕ್ಷೆಯ ಶತಮಾನೋತ್ಸವ ಸಂಪನ್ನವಾದ ಧನ್ಯತೆ ನಮ್ಮದು. ಶಾಲೆಗೆ ಅನುಮತಿ ದೊರಕಿಸಿಕೊಟ್ಟ ನಮ್ಮಜ್ಜ ಕಣ್ಣಪ್ಪ ಅಲೋಶಿಯಸ್ ಮತ್ತವರ ಕುಟುಂಬ ಕ್ರಿಸ್ತಾನುಯಾಯಿಗಳಾದರೂ, ಇಂದಿಗೂ ಅವರ ಕುಟುಂಬದೊಡನೆ ನಮಗಿದೆ ಮಧುರ ಬಾಂಧವ್ಯ. ಇಂಗ್ಲಿಷ್ ಸಾಹಿತ್ಯದಲ್ಲಿ ನನ್ನ ಅಭಿರುಚಿ ಹೆಚ್ಚಲು ಮುಖ್ಯ ಕಾರಣರು, ಆಂಗ್ಲ ಸಾಹಿತ್ಯದ ವಿಶ್ವಕೋಶದಂತಿದ್ದ ಅಜ್ಜ ಮತ್ತು ಅವರ ಮಕ್ಕಳು, ಇಂಗ್ಲಿಷ್ ಪ್ರಾಧ್ಯಾಪಕಿಯರು, ಲೀನಾ ಹಾಗೂ ಫ್ಲೇವಿ ಅಲೋಶಿಯಸ್ ಅವರು.

ಹರೇಕಳದ ಅಕ್ಷರ ಸಂತ ಹಾಜಬ್ಬರನ್ನು ನಾನು ಭೇಟಿಯಾದುದು, ಮುಂಬೈಯ ಚೆಂಬೂರ್ ಕರ್ನಾಟಕ ಹೈಸ್ಕೂಲ್ ಸಾಹಿತ್ಯ ಸಹವಾಸದಲ್ಲಿ. ಆ ಪೂಜ್ಯರಿಗೆ ನಮಿಸ ಹೋದಾಗ, ಥಟ್ಟನೆ ತನ್ನ ಪಾದಗಳನ್ನಡಗಿಸಿ ಕುಳಿತುಬಿಟ್ಟ ನಿಜ ಸಂತ ಅವರು! ಅವರಂಥ ಅಕ್ಷರಸಂತ ಪ್ರತಿಊರಲ್ಲೂ ಒಬ್ಬೊಬ್ಬರಿರುತ್ತಿದ್ದರೆ!

ವಿದ್ವಾನ್ ರಾಮಚಂದ್ರ ಉಚ್ಚಿಲರಿಗೆ ಎಂಭತ್ತು ತುಂಬಿದಾಗ ಕಲಾಗಂಗೋತ್ರಿ ಯಕ್ಷಗಾನ ಅಧ್ಯಯನ ಕೇಂದ್ರವು, ನಮ್ಮೂರ ಶಾಲೆಯಲ್ಲಿ ಅಭಿನಂದನಾ ಸಮಾರಂಭ ಏರ್ಪಡಿಸಿ ‘ವಜ್ರಕುಸುಮ’ ಎಂಬ ಅಭಿನಂದನಾ ಗ್ರಂಥವನ್ನು ಸಮರ್ಪಿಸಿತು. ನಾನು ಕಲಿತ ಶಾಲೆ ಅಲ್ಲದಿದ್ದರೂ, ನನ್ನ ಹಿರಿಯರಿಂದ ಸ್ಥಾಪಿಸಲ್ಪಟ್ಟು ನಾಡಿಗೆ ಬೆಳಕಾದ, ಹಾಗೆಯೇ ನಮ್ಮ ತಂದೆ ನಾರಾಯಣ ಉಚ್ಚಿಲರವರು ದೀರ್ಘಕಾಲ ಕರೆಸ್ಪಾಂಡೆಂಟ್ ಆಗಿ ದುಡಿದ ಶಾಲೆ ಎಂಬ ಅಭಿಮಾನ ನನ್ನದು. ಇನ್ನು - ಶಾಲೆ ಆರಂಭವಾದಂದೇ ತಾನು ಹುಟ್ಟಿದೆ, ಎನ್ನುತ್ತಾ ಕೊನೆವರೆಗೂ ಶಾಲಾ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಾ, ಶಾಲಾ ಶತಮಾನೋತ್ಸವದ ಆರಂಭವನ್ನು ಉದ್ಘಾಟಿಸಿದ ನಮ್ಮಜ್ಜ ತಲೆಬಾಡಿ ನಾರಾಯಣರು ತನ್ನ ನೂರ ಮೂರರ ಪ್ರಾಯದಲ್ಲಿ ಕಳೆದ ವರ್ಷ ನಮ್ಮನ್ನು ಅಗಲಿದರು. ತಂದೆಯವರೊಡನೆ ಬೋವಿ ವಿದ್ಯಾ ಸಂಘವನ್ನು ಸ್ಥಾಪಿಸಿ ಶಾಲೆಗಾಗಿ ದುಡಿದ ನಮ್ಮ ಹಿರಿಯ ಬಂಧುಗಳೆಲ್ಲರನ್ನೂ ನಾನಿಂದು ಗೌರವದಿಂದ ನೆನೆಯುತ್ತೇನೆ.

ನಮ್ಮ ತಂದೆಯವರು ನಾರಾಯಣ ಉಚ್ಚಿಲರು ಅಸತ್ಯ, ಅವಿಚಾರ, ಕಂದಾಚಾರಗಳನ್ನೆಲ್ಲ ದೂರೀಕರಿಸಿ ಗಾಂಧೀಮಾರ್ಗದಲ್ಲಿ ನಡೆದವರು. ಇಕ್ಬಾಲ್ ಕವಿಯ ‘ಸಾರೇ ಜಹಾಂ ಸೇ ಅಚ್ಛಾ, ಹಿಂದುಸ್ತಾನ್ ಹಮಾರಾ’ ಹಾಗೂ ವಾಲ್ಟರ್ ಸ್ಕಾಟ್ ಕವಿಯ,

‘ಬ್ರೀತ್ಸ್ ದೇರ್ ದ ಮ್ಯಾನ್ ವಿತ್ ಸೋಲ್ ಸೋ ಡೆಡ್,

ಹೂ ನೆವರ್ ಟು ಹಿಮ್‌ಸೆಲ್ಫ್ ಹ್ಯಾತ್ ಸೆಡ್,

ದಿಸ್ ಈಸ್ ಮೈ ಓನ್, ಮೈ ನೇಟಿವ್ ಲ್ಯಾಂಡ್’

ಕವನಗಳು ಅವರಿಗೆ ಬಲು ಪ್ರಿಯವಾಗಿದ್ದುವು. ಎತ್ತರ ಕಾಯದ, ನೆಟ್ಟನೆ ನಿಲುವಿನ, ಸ್ಥೈರ‌್ಯ, ಧೈರ್ಯಗಳ ಪ್ರತೀಕವಾಗಿದ್ದ ನಮ್ಮ ತಂದೆ ಅತ್ಯಂತ ಸರಳವಾಗಿ ಬಾಳಿದವರು. ಮಿತಭಾಷಿ! ಕೆನರಾ ಫಿಶ್ ಮಾರ್ಕೆಟಿಂಗ್ ಫೆಡರೇಶನ್ ಹಾಗೂ ದಕ್ಷಿಣ ಕನ್ನಡ ಸಹಕಾರಿ ಸಂಸ್ಥೆಗಳಲ್ಲಿ ಅಧ್ಯಕ್ಷರಾಗಿ ನಿಷ್ಠೆಯಿಂದ ದುಡಿದು, ದೇಶದ ವಿದೇಶೀ ವಿನಿಮಯದ ಹೆಚ್ಚಳಕ್ಕೆ ಕಾರಣಕರ್ತರಾದವರು ಅವರು ಎಂದು ನಮ್ಮ ‘ಸತ್ಸಂಚಯ’ ಸ್ಮರಣ ಸಂಚಯದಲ್ಲಿ ರಾಮಚಂದ್ರ ಉಚ್ಚಿಲರು ನುಡಿನಮನ ಸಲ್ಲಿಸಿದ್ದಾರೆ. ಅಂತೆಯೇ ನಾರಾಯಣ ಉಚ್ಚಿಲರು ಕಂಡ ಆದರ್ಶ, ಪ್ರಗತಿಶೀಲ ಸಮಾಜದ ಕನಸು ನನಸಾಗಲೆಂದು ಅಮೃತ ಸೋಮೇಶ್ವರರೂ ನುಡಿಕಾಣಿಕೆ ಸಲಿಸಿದ್ದಾರೆ.

ಸಾವಿರದ ಒಂಬೈನೂರ ಐವತ್ತೈದರಲ್ಲಿ ರಾಮಚಂದ್ರ ಉಚ್ಚಿಲರು ಕೋಟೆಕಾರಿನಲ್ಲಿ ಸ್ಥಾಪಿಸಿದ ಸಾಹಿತ್ಯಸಂಘದ ಬಗ್ಗೆ ವಿದ್ವಾನ್ ಎ.ವಿ.ನಾವಡ ಅವರು ಬಹಳ ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ರಾಮಚಂದ್ರ ಉಚ್ಚಿಲರಿಂದ ಉದ್ಘಾಟಿಸಲ್ಪಟ್ಟು, ನಾವಡರ ಅಧ್ಯಕ್ಷತೆಯಲ್ಲಿ ಸಭೆ ಜರುಗಿದ ಈ ಸಂಘಕ್ಕೆ ಅಮೃತ ಸೋಮೇಶ್ವರರೂ, ಜೇಂಕಳ ಶ್ರೀನಿವಾಸ ಭಟ್ಟರೂ ಕಾರ್ಯದರ್ಶಿಗಳಾಗಿದ್ದರು. ರಾಷ್ಟ್ರಕವಿ ಗೋವಿಂದ ಪೈ, ಕುಕ್ಕಿಲ, ಕಯ್ಯಾರ ಕಿಞ್ಞಣ್ಣ ರೈ, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅಮ್ಮೆಂಬಳ ಶಂಕರ ನಾರಾಯಣ ನಾವಡ, ಅನುಪಮಾ ನಿರಂಜನ, ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟರು, ಪಿ.ಕೆ.ನಾರಾಯಣರೇ ಮುಂತಾದ ಸಾಹಿತಿಶ್ರೇಷ್ಠರು ಅಲ್ಲಿ ನಡೆಯುತ್ತಿದ್ದ ಸಾಹಿತ್ಯಿಕ ಕಾರ್ಯಕ್ರಮ, ತಾಳಮದ್ದಳೆಗಳಲ್ಲಿ ಭಾಗವಹಿಸಿದ್ದರೆಂದು ಅವರು ನೆನೆಯುತ್ತಾರೆ.

ರಾಮಚಂದ್ರ ಉಚ್ಚಿಲರು ಮುಂಬೈಯಲ್ಲಿ ಕನ್ನಡದ ದೀಪ ಬೆಳಗಿದ ಅನನ್ಯ ಸಾಧಕರು. ರಾತ್ರಿಶಾಲೆಗಳಲ್ಲಿ ಕಲಿಸಿ, ಮುಂಬೈಯಲ್ಲಿ ಮುದ್ದಣ ಮತ್ತು ಯಕ್ಷಗಾನದ ಅಧ್ವರ್ಯುವಾಗಿ, ‘ನುಡಿ’ ಹಾಗೂ ‘ತಾಯಿನುಡಿ’ ಪತ್ರಿಕೆಗಾಗಿ ದುಡಿದವರು. ಯಕ್ಷಗಾನ ಪ್ರದರ್ಶನಗಳು ಸಂಪ್ರದಾಯದಿಂದ ಹೊರಳಿದಾಗ, ಮುಂಬೈಯಲ್ಲಿ ‘ಯಕ್ಷಗಾನ ಸಂರಕ್ಷಣಾ ವೇದಿಕೆ’ ಎಂದು ಹೊರಟವರು. ಅವರು ಅಂದು ಹೊತ್ತಿಸಿದ ಕನ್ನಡದ ದೀಪ ಇಂದೂ ಮುಂಬೈ ಮಹಾನಗರಿಯಲ್ಲಿ ಬೆಳಗುತ್ತಲೇ ಇದೆ. ತನ್ನಮ್ಮನಿಂದ ಕೇಳುತ್ತಿದ್ದ ಪಾಡ್ದನಗಳು, ಮಲಯಾಳಂನ ಕಳರಿ ಪಾಟ್ ಹಾಡುಗಳು ಹಾಗೂ ಮೂಡಲಾಗಿನ ಜೈನರ ಮನೆಗಳಲ್ಲಿ ಅವರು ಕೇಳಿದ್ದೆಂದು ಹೇಳುತ್ತಿದ್ದ ಯಶೋದರ ಚರಿತೆಯನ್ನೇ ಹೋಲುವ ಕಥೆಯ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ಉಚ್ಚಿಲರ ‘ಕಡಲಕರೆಯ ಚಿತ್ರಗಳು’ ಒಂದು ಸುಂದರ ದೃಶ್ಯಕಾವ್ಯ. ಎಂ.ವಿ.ಕಾಮತರ ‘ಪುನರಪಿ ಜನನಂ’ ಕೃತಿಯನ್ನು ಅವರು ಇಂಗ್ಲಿಷ್‌ನಿಂದ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ.

ನಮ್ಮೂರ ಮೈದಾನದಲ್ಲೂ ಹಿಂದೆ ಬಯಲಾಟಗಳು ನಡೆಯುತ್ತಿದ್ದುವು. ರಾತ್ರಿಯಿಡೀ ಆಟ ನೋಡಿ ಬೆಳಗ್ಗೆ ಹಿಂದಿರುಗಿದ ಅಣ್ಣಂದಿರು ಬಣ್ಣನೆಯಲ್ಲಿ ತೊಡಗುವಾಗ ಆ ಅವಕಾಶವಿರದ ನಮಗೆ ಹುಡುಗರಾದ ಅವರ ಬಗ್ಗೆ ಅಸೂಯೆಯೆನಿಸುತ್ತಿತ್ತು. ಯಕ್ಷಗಾನದ ಇತಿಹಾಸ ಮತ್ತು ಪರಿವರ್ತನೆಯ ಹಾದಿಯ ಸರಿಯಾದ ಚಿತ್ರ ಲಭ್ಯವಿಲ್ಲವೆಂದು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಹರಕೆ ಮೇಳಗಳು ಪ್ರತಿನಿಧಿಸುವ ಯಕ್ಷಗಾನಗಳು ನಿರ್ವಿವಾದವಾಗಿ ಭಕ್ತಿಯುಗದ ಕೊಡುಗೆಗಳೆಂದೇ ಡಾ. ಪುರುಷೋತ್ತಮ ಬಿಳಿಮಲೆ ಅವರು ಪ್ರತಿಪಾದಿಸಿದ್ದಾರೆ. ಪುತ್ತೂರು ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾಗ ಪ್ರತೀ ವಾರಾಂತ್ಯ ಗುರುಗಳಾದ ಅಮೃತ ಸೋಮೇಶ್ವರರೊಡನೆ ಅವರ ಮನೆಗೆ ಲಗ್ಗೆಯಿಡುತ್ತಿದ್ದ ಬಗ್ಗೆ ಬಿಳಿಮಲೆಯವರು ಬಹಳ ಆತ್ಮೀಯವಾಗಿ ಬರೆದಿದ್ದಾರೆ. ಹಿರಿಯರನ್ನೂ ಕಿರಿಯರನ್ನೂ ಸಮಾನವಾಗಿ ನಡೆಸಿಕೊಂಡು ಹೋಗುತ್ತಿದ್ದ ಶ್ರೀ ಅಮೃತರಿಂದ ಸಾಹಿತ್ಯ, ಸಂಸ್ಕೃತಿ ಕಲಿತುದನ್ನೂ, ಸೋಮೇಶ್ವರದ ರುದ್ರಶಿಲೆಯ ಮೇಲೆ ಕುಳಿತು ಅವರ ‘ರುದ್ರಶಿಲೆ ಸಾಕ್ಷಿ’ಯನ್ನು, ‘ಎಲೆಗಿಳಿ’ ಕವನ ಸಂಕಲನವನ್ನು ಓದಿದುದನ್ನೂ ಅವರು ಅರ್ತಿಯಿಂದ ನೆನೆದಿದ್ದಾರೆ. ಕಲ್ಲೆಗದ ಅಮೃತರ ಪುಟ್ಟ ಕೋಣೆಯಲ್ಲೇ ತನಗೆ ಪ್ರಥಮ ಬಾರಿಗೆ ಪಂಜೆ ಮಂಗೇಶ ರಾಯರು, ಗೋವಿಂದ ಪೈ, ಕಡೆಂಗೋಡ್ಲು, ಸೇಡಿಯಾಪು, ಮುಳಿಯ ತಿಮ್ಮಪ್ಪಯ್ಯ, ಪಾರ್ತಿ ಸುಬ್ಬ ಮೊದಲಾದವರ ಬಗ್ಗೆ ಪ್ರಾಥಮಿಕ ತಿಳುವಳಿಕೆ ದೊರೆಯಿತೆಂದು ಅವರಂದಿದ್ದಾರೆ. ದಿಲ್ಲಿಯಲ್ಲಿ ಜೆ.ಎನ್.ಯು.ನಲ್ಲೂ, ಅಮೆರಿಕನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯನ್ ಲ್ಯಾಂಗ್ವೇಜ್‌ಸ್ ಸಂಸ್ಥೆಯಲ್ಲೂ ಕನ್ನಡವನ್ನು ಬೋಧಿಸುತ್ತಾ, ದಿಲ್ಲಿ ಕರ್ನಾಟಕ ಸಂಘವನ್ನು ಹುಟ್ಟುಹಾಕಿ ಬೆಳೆಸಿ, ಕನ್ನಡದ ದೀಪ ಸದಾ ಬೆಳಗುತ್ತಿರುವಂತೆ ನೋಡಿದವರು ಬಿಳಿಮಲೆ ಅವರು. ಜಪಾನೀ ರಂಗತಜ್ಞ, ಜಾನಪದ ವಿದ್ವಾಂಸ ಪ್ರೊ. ಸುಮಿಯೋ ಮೊರಿಜೆರಿ ಅವರೊಡನೆ ವಿದೇಶದಲ್ಲೂ ಯಕ್ಷಗಾನಕಲೆಯನ್ನು ಬೆಳಗಿಸಿದವರು. ಉಚ್ಚಿಲದ ಕಲಾಗಂಗೋತ್ರಿ ಈ ನಿಟ್ಟಿನಲ್ಲಿ ಸದಾ ತೊಡಗಿಸಿಕೊಂಡ ಸಂಸ್ಥೆ. ನಮ್ಮ ಸದಾಶಿವ ಮಾಷ್ಟ್ರು ಅದರ ರೂವಾರಿಗಳಲ್ಲೊಬ್ಬರು. ಬಿಳಿಮಲೆ ಅವರ ಆತ್ಮಕಥನ ‘ಕಾಗೆ ಮುಟ್ಟಿದ ನೀರು’ ವಿದ್ಯಾರ್ಥಿಗಳೆಲ್ಲರಿಗೂ ಬೋಧಪ್ರದವಾಗಬಲ್ಲ ಅದ್ಭುತ ಜೀವನ ವೃತ್ತಾಂತ.

ಕರುನಾಡ ಹೋರಾಟಗಾತಿ, ‘ಗಿರಿಜಾಬಾಯಿ-ಅನಂತಯ್ಯ ಧಾರೇಶ್ವರ್’ ದಂಪತಿಯ ಪುತ್ರಿ ಕಮಲಾದೇವಿ ಚಟ್ಟೋಪಾಧ್ಯಾಯರನ್ನು, ಮೊನ್ನೆ ಮೊನ್ನೆ ಅಗಲಿದ ಸಾರಾ ಅಬೂಬಕರ್ ಅವರನ್ನು, ನಮ್ಮೂರ ಹೆಂಗಳೆಯರ ಶ್ರಮಜೀವನ ಹಾಗೂ ಕಡಲಿನೊಂದಿಗಿನ ತಾದಾತ್ಮ್ಯವನ್ನು ‘ಪ್ರಗತಿ ಪಥ’ ಎಂಬ ಅದ್ಭುತ ಕಥನವಾಗಿ ಹೆಣೆದ ನಮ್ಮ ಹಿರಿಯರು

ಲಕ್ಷ್ಮೀ ಕುಂಜತ್ತೂರು ಅವರನ್ನು, ಮತ್ತು ನಮ್ಮೊಡನಿರುವ ಸ್ತ್ರೀಶಕ್ತಿ, ವೈಚಾರಿಕತೆಯ ಪ್ರತೀಕ ನಮ್ಮ ಬಿ.ಎಂ.ರೋಹಿಣಿ ಅವರನ್ನು ವಿಶೇಷವಾಗಿ ನೆನೆಯುತ್ತೇನೆ. ರೋಹಿಣಿ ಅವರೊಡನೆ ಕರಾವಳಿ ಲೇಖಕಿಯರ ದನಿಯಾಗಿ ಸಾಂಘಿಕವಾಗಿ ಒಗ್ಗೂಡಿರುವ, ಹಿರಿಯರಾದ ಮನೋರಮಾ ಭಟ್, ಎ.ಪಿ.ಮಾಲತಿ ಅವರಿಂದ ತೊಡಗಿ ಸರ್ವರಿಗೂ ನನ್ನ ಪ್ರೀತ್ಯಾದರ ಸಲ್ಲುತ್ತದೆ.

ನಮ್ಮೂರ ಸರ್ವರ ಬಂಧು ಬಾವುಂಞಿ ಅವರ ಬಗ್ಗೆ ಅರಿಯದವರೇ ನಮ್ಮೂರಲ್ಲಿ ಇಲ್ಲವೆನ್ನಬಹುದು. ಟೆಲಿಫೋನ್ ಮನೆ ಮನೆಗೆ ಬಂದಿರದ ಕಾಲದಲ್ಲಿ ಸರ್ವರಿಗೂ ಸಂದೇಶ ತಲುಪಿಸುವ ಪ್ರಿಯ ಬಂಧುವಾಗಿದ್ದ ಬಾವುಂಞಿ ಅವರ ಹೆಸರು ಮತ್ತು ಫೋನ್ ನಂಬರ್ ನಮ್ಮ ಕಮ್ಯೂನಿಟಿ ಟೆಲಿಫೋನ್ ಡೈರೆಕ್ಟರಿಯಲ್ಲಿ ಮೊದಲಿಗೇ ಇದ್ದುದೇ ಆ ಸೌಹಾರ್ದಕ್ಕೆ ಸಾಕ್ಷಿ. ಹಾಗೆಯೇ ನಮ್ಮ ನೆರೆಯಲ್ಲಿದ್ದ ಪ್ರಿಯಜೀವ ಲತೀಫ್. ನೇರಾನೇರ ಸತ್ಯವನ್ನೇ ನುಡಿವ ಪರೋಪಕಾರಿ ಲತೀಫ್ ನಮ್ಮ ನೆರೆಯಲ್ಲಿದ್ದಷ್ಟೂ ಕಾಲ ನಮಗೆ ಯಾವ ತೊಂದರೆಯೂ ಇರಲಿಲ್ಲ. ಬೇಸಗೆಯಲ್ಲಿ ನಮ್ಮ ಬಾವಿ ಬತ್ತಿದಾಗ, ಲತೀಫ್ ನಮಗೆ ಅವರ ಬಾವಿಯಿಂದ ನೀರಿನ ಕನೆಕ್ಷನ್ ಕೊಡುತ್ತಿದ್ದರು. ಮನೆಯಲ್ಲಾರೂ ಇರದಿದ್ದರೆ, ನಮ್ಮಮ್ಮನ ಯೋಗಕ್ಷೇಮ ನೋಡುತ್ತಿದ್ದರು. ನಮ್ಮ ಹಿತ್ತಿಲಿನಂತೇ ಲತೀಫ್‌ರ ಹಿತ್ತಿಲು, ಹೊಸದಾದ ಮನೆ ಎಲ್ಲವೂ ರಾಜ್ಯ ಹೆದ್ದಾರಿ ಚತುಷ್ಪಥವಾದಾಗ ಅಳಿದು ಹೋದ ಬಳಿಕ ಈಗ ಅನತಿ ದೂರ ನೆಲೆಯಾಗಿರುವ ಲತೀಫ್ ಕುಟುಂಬದೊಡನೆ ಈಗಲೂ ನಮ್ಮ ಸಂಬಂಧ ಸ್ಥಿರವಾಗಿದೆ, ಸಿಹಿಯಾಗಿದೆ.

ಸಾಹಿತ್ಯದಲ್ಲಿ ಸಾಮರಸ್ಯ ಇರಬೇಕಾದಂತೆಯೇ ಪ್ರಕೃತಿಯೊಡನೆಯೂ ಸಾಮರಸ್ಯವನ್ನು ಪ್ರತಿಪಾದಿಸುವುದು ಸಾಹಿತ್ಯದ ಗುರಿಯಾಗಬೇಕು. ಪ್ರಕೃತಿ ಉಳಿಯದಿದ್ದರೆ ಮನುಕುಲಕ್ಕೆ ಉಳಿಗಾಲವಿಲ್ಲ. ಆಧುನಿಕತೆ, ಸೌಲಭ್ಯಗಳ ಹೆಸರಲ್ಲಿ ನಾವು ಕಳೆದುಕೊಂಡುದು ಹೇಗೆ ಪ್ರಕೃತಿಯನ್ನು ತಾರುಮಾರಾಗಿಸಿದೆ ಎಂಬುದನ್ನು ಪ್ರಕೃತಿಯೇ ನಮಗೆ ತೋರಿಸಿಕೊಟ್ಟಿದೆ.

ನಮ್ಮ ತಂದೆಯವರ ಅಸೌಖ್ಯದಲ್ಲಿ ನಮಗೆ ಎರಡನೇ ಮನೆಯಂತಿದ್ದ ಫಾದರ್ ಮುಲ್ಲರ್ಸ್‌ ಆಸ್ಪತ್ರೆಯ ಸಿಬ್ಬಂದಿಯೊಡನೆ, ನಮ್ಮ ಸಂಬಂಧವೂ ಸಾಮರಸ್ಯದಿಂದ ಕೂಡಿದ್ದು, ಅಲ್ಲಿ ನರ್ಸಿಂಗ್ ಹೆಡ್ ಆಗಿದ್ದ ಸಿಸ್ಟರ್ ಲೂಸಿ ಇಂದಿಗೂ ನಮಗೆ ಪರಮಪ್ರಿಯರು. ಜಾತಿ, ವಿಜಾತಿ ಎಂಬ ಭೇದ ಎಂದೂ ನಮ್ಮನ್ನು ತಟ್ಟಲಿಲ್ಲ. ಅಮೆರಿಕದಿಂದ ಇಪ್ಪತ್ತೇಳು ವರ್ಷಗಳ ಬಳಿಕ ತಾಯ್ನಾಡ ಭೇಟಿಗೆಂದು ಬಂದ ಗೆಳತಿ ಕ್ರಿಸ್ತೀನಾಗೆ ನನ್ನ ಪ್ರಿಯ ಕೋಟೆ ದೇವಳ, ಅಲ್ಲಿನ ಪ್ರಕೃತಿ ಸೌಂದರ್ಯ ತೋರಲು ಹೋದಾಗ, ಭಟ್ಟರಿತ್ತ ತೀರ್ಥವನ್ನು ಗೆಳತಿ ಅಷ್ಟೇ ಪ್ರೀತಿಯಿಂದ ಸ್ವೀಕರಿಸಿದಳು. ಮಾನವೀಯತೆಗಿಂತ ಮಿಗಿಲಾದ ಧರ್ಮ ಇದೆಯೇ?

ಮುಂಬೈಯಲ್ಲಿ ರಾಮಚಂದ್ರ ಉಚ್ಚಿಲರು ಆರಂಭಿಸಿದ ಕನ್ನಡದ ಕಾಯಕ ಇಂದಿಗೂ ನಡೆದು ಬಂದಿದೆ. ಅವರು ನಿಸ್ಪಹರಾಗಿ ದುಡಿದ ‘ಮದರ್ ಇಂಡಿಯಾ ನೈಟ್ ಹೈಸ್ಕೂಲ್’ ಹಾಗೂ ಇನ್ನೂ ಕೆಲವು ರಾತ್ರಿಶಾಲೆಗಳು ಈಗಲೂ ವಿದ್ಯಾದಾನದ ಕೈಂಕರ್ಯ ನಡೆಸುತ್ತಿವೆ. ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದಲ್ಲಿ ಎಳೆಯರಂತೆಯೇ ಬಾಳಸಂಜೆಯಲ್ಲಿರುವವರೂ ಅನೇಕರು ಕನ್ನಡ ಎಮ್.ಎ. ತರಗತಿಗಳನ್ನು ಸೇರಿ, ಎಮ್.ಫಿಲ್. ಮಾಡಿ, ಪಿಎಚ್.ಡಿ. ಪದವಿಯನ್ನೂ ಪಡೆದಿದ್ದಾರೆ. ವಿಭಾಗ ಮುಖ್ಯಸ್ಥರಾದ ವಿದ್ವಾಂಸ ಡಾ. ಜಿ.ಎನ್.ಉಪಾಧ್ಯರು ಅಧ್ಯಯನಶೀಲತೆಯ ಮೇರುಶಿಖರ! ಕನ್ನಡ ವಿಭಾಗದಲ್ಲಿ ಕೃತಿ ಬಿಡುಗಡೆ, ಕೃತಿ ಸಮೀಕ್ಷೆ, ಅವಲೋಕನ, ಇನ್ನಿತರ ಎಷ್ಟೋ ಸಾಹಿತ್ಯಿಕ ಕಾರ್ಯಕ್ರಮಗಳು, ವಿಚಾರಸಂಕಿರಣಗಳು ಸಾಹಿತಿಶ್ರೇಷ್ಠರ ಸಾನ್ನಿಧ್ಯದಲ್ಲಿ ಅಲ್ಲಿ ಸಂಪನ್ನವಾಗುತ್ತವೆ. ಕನ್ನಡಿಗರ ಮಾತೃಸಂಸ್ಥೆಯಾಗಿದ್ದ ಮುಂಬೈಯ ಕರ್ನಾಟಕ ಸಂಘದ ಕಟ್ಟಡವು ಪುನರ್ನವೀಕರಣಕ್ಕಾಗಿ ಕೆಡವಲ್ಪಟ್ಟ ಬಳಿಕ, ವಿಶ್ವವಿದ್ಯಾಲಯ ಕನ್ನಡ ವಿಭಾಗವೇ ಅಲ್ಲೀಗ ಮೈಸೂರ್ ಅಸೋಸಿಯೇಶನ್ ಜೊತೆಗೂಡಿ ಕನ್ನಡಿಗರ ಪಾಲಿಗೆ ಆಶ್ರಯದಾಣವಾಗಿದೆ. ಕರ್ನಾಟಕ ಸಂಘದ ನೂತನ ಕಟ್ಟಡದ ಶಿಲಾನ್ಯಾಸವು ಮಂತ್ರಿವರ್ಯರಾಗಿದ್ದ ಸನ್ಮಾನ್ಯ ಯು.ಟಿ. ಖಾದರ್ ಅವರ ಕೈಗಳಿಂದಲೇ ಬಹು ಸಂಭ್ರಮದಿಂದ ನೆರವೇರಿತ್ತು. ನೂತನ ಕಟ್ಟಡಕ್ಕಾಗಿ ಎಲ್ಲ ಕನ್ನಡ ಮನಸ್ಸುಗಳೂ ಕಾತರದಿಂದ ಕಾದಿವೆ.

ಮುಂಬೈ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿದ್ದ ಡಾ. ವಸಂತಕುಮಾರ್ ತಾಳ್ತಜೆ ಅವರ ಮನೆಯಲ್ಲೇ ನಮ್ಮ ‘ಸೃಜನಾ ಮುಂಬೈ ಕನ್ನಡ ಲೇಖಕಿಯರ ಬಳಗ’ವು, ಮುಂಬೈ ಕನ್ನಡಿಗರ ಹಿರಿಯಕ್ಕ ಡಾ. ಸುನೀತಾ ಶೆಟ್ಟಿ ಅವರ ಮುಂದಾಳತ್ವದಲ್ಲಿ ಸ್ಥಾಪನೆ ಯಾಯ್ತು. ಸಾಹಿತ್ಯಿಕವಾಗಿ ಬೆಳೆಯುತ್ತಿರುವ ಸೃಜನಾ ನಮ್ಮ ಕಾರ್ಯಕ್ಷೇತ್ರವೂ ಹೌದು..

ಮನೆಯಲ್ಲಿದ್ದ ತಂದೆಯವರ ಪುಸ್ತಕ ಭಂಡಾರದ ಅನನ್ಯ ಕೃತಿಗಳನ್ನೋದುವ ಭಾಗ್ಯದೊಡನೆ, ನನ್ನ ಬೆಸೆಂಟ್ ಶಾಲಾ ಲೈಬ್ರೆರಿ, ಕಾರ್ನಾಡ್ ಸದಾಶಿವರಾವ್ ಲೈಬ್ರೆರಿ ಹಾಗೂ ಬಾವುಟಗುಡ್ಡೆಯ ಸಾರ್ವಜನಿಕ ಲೈಬ್ರೆರಿ ನನ್ನ ಓದುವ ಆಸೆಗೆ ಪೂರಕವಾಗಿದ್ದುವು. ಕಾರಂತರ ‘ಮರಳಿ ಮಣ್ಣಿಗೆ’ಯ ಕಡಲಿರಲಿ, ಹಾಡಿಯಿರಲಿ, ಸರಸೋತಿ ಪಾರೋತಿ ಯರಿರಲಿ, ನಿರಂಜನರ ‘ಚಿರಸ್ಮರಣೆ’ಯ ಚಿರುಕಂಡ, ಅಪ್ಪುಂಞಿಯರಿರಲಿ, ಓದಿದ್ದನ್ನು ತೀವ್ರವಾಗಿ ಅನುಭವಿಸುತ್ತಾ ಹೃದಯದಲ್ಲಿ ಮಥಿಸುತ್ತಿರುವುದು ನನ್ನ ಅಭ್ಯಾಸ. ತಂದೆಯವರ ಸಂಗ್ರಹದಲ್ಲಿದ್ದ ‘ಅಂಕ್‌ಲ್ ಟಾಮ್ಸ್ ಕ್ಯಾಬಿನ್’, ‘ವಾಂಡರರ್ ಆಫ್ ದ ವೇಸ್ಟ್ ಲ್ಯಾಂಡ್’ನಂತಹ ಇಂಗ್ಲಿಷ್ ಪುಸ್ತಕಗಳೂ ನನ್ನನ್ನು ಆಕರ್ಷಿಸುತ್ತಿದ್ದುವು. ಠಾಗೋರರ, ಶರಶ್ಚಂದ್ರರ ಕೃತಿಗಳ ಅನುವಾದ ನನ್ನನ್ನು ಸೆಳೆದಂತೇ, ನಿರಂಜನರ ಅನುವಾದದಲ್ಲಿ ಮ್ಯಾಕ್ಸಿಂ ಗಾರ್ಕಿಯ ‘ತಾಯಿ’, ಬಾಲಚಂದ್ರ ಘಾಣೇಕರ್ ಅನುವಾದಿಸಿದ ಸಾಣೆ ಗುರೂಜಿಯ ‘ಶ್ಯಾಮನ ತಾಯಿ’ ಬಲು ಇಷ್ಟವಾಗಿದ್ದುವು. ಕೃಷ್ಣಾ ನೆಹರೂ ಹಠೀಸಿಂಗ್ ಅವರ ‘ವಿತ್ ನೋ ರಿಗ್ರೆಟ್ಸ್’ನ ಸಿದ್ದವನಹಳ್ಳಿ ಕೃಷ್ಣಶರ್ಮರ ಅನುವಾದ - ‘ನೆನಪು ಕಹಿಯಲ್ಲ’ ಹಾಗೂ ಕೆಲ ವರ್ಷಗಳ ಬಳಿಕ ಓದಿದ, ಅವರು ಬಲು ಆಕರ್ಷಕವಾಗಿ ಅನುವಾದಿಸಿದ ಪುಟ್ಟ ಪುಟ್ಟ ವಾಕ್ಯಗಳ ಕೆ.ಎಮ್.ಮುನ್ಶಿ ಅವರ ‘ಕೃಷ್ಣಾವತಾರ’ ಅತ್ಯಂತ ಪ್ರಿಯವೆನಿಸಿದುವು. ಚಾರ್ಲ್ಸ್ ಡಿಕನ್ಸ್‌ನ ‘ಡೇವಿಡ್ ಕಾಪರ್‌ಫೀಲ್ಡ್’ ಕೃತಿಯನ್ನು ಎ. ಸುಬ್ಬರಾವ್ ಅವರು ಅನುವಾದಿಸಿ ತಮ್ಮ ಗುರುಗಳಾದ, ನಮ್ಮಜ್ಜ ಕಣ್ಣಪ್ಪ ಅಲೋಶಿಯಸ್ ಅವರಿಗೆ ಸಮರ್ಪಿಸಿದ ಪ್ರತಿ ನಮ್ಮ ಮನೆಯಲ್ಲಿತ್ತು.

ನನ್ನ ಆತ್ಮಕಥನದ ಶೀರ್ಷಿಕೆ ‘ನಾಳೆ ಇನ್ನೂ ಕಾದಿದೆ’ ಎಲ್ಲರಿಗೂ ಇಷ್ಟವಾಗಿದ್ದರೂ, ಹಿರಿಯ ಲೇಖಕಿ ಉಷಾ ರೈ ಅವರು ತಮ್ಮ ಆತ್ಮಕಥನವನ್ನು ಹೆಸರಿಸಿದಂತೆ ‘ಯಾವ ನಾಳೆಯೂ ನಮ್ಮದಲ್ಲ’ ಎಂಬುದೇ ಸತ್ಯ ಎಂಬುದನ್ನು ವಿಧಿ ತೋರಿಸಿಕೊಟ್ಟಿತು......

ಕೊರೋನ ದುರಿತ ಕಾಲ ನನ್ನಂತಹ ಲೇಖಕರಿಗೆ ಓದು, ಬರಹಕ್ಕೆ ಸಾಕಷ್ಟು ಸಮಯ ಒದಗಿಸಿ ಕೊಟ್ಟದ್ದು ಸತ್ಯ. ಆದರೆ ಆ ದುಷ್ಕಾಲದಲ್ಲಿ ಜಗತ್ತು ಕಳೆದುಕೊಂಡುದೂ ಬಹಳ.

ಪ್ರಗತಿಯ ಹಾದಿಯಲ್ಲಿ ಪ್ರಕೃತಿಯ ಸಿರಿಸಂಪದವನ್ನು ಕಳಕೊಳ್ಳುತ್ತಿರುವ ನಾವು ಜೀವಜಲ, ಪ್ರಾಣವಾಯುವಿಗಾಗಿ ತಹತಹಿಸುವ ದಿನಗಳು ಎದುರಾಗುತ್ತಿವೆ. ವಿಶಾಲ ಮರಳ ತಡಿಯ, ಚಬುಕಿನ ಮರದ ಹಾಡಿಯಿದ್ದ ಸಮುದ್ರದಂಡೆ ನಮ್ಮದಾಗಿತ್ತು! ದಟ್ಟ ಹಸಿರಿನ, ನೇರಳೆ ಹೂಗಳ ಕುರುಚಲು ಐವಿ ಬಳ್ಳಿಗಳ, ಚಕ್ರದಂತೆ ಉರುಳುರುಳಿ ಸಮುದ್ರ ಸೇರುತ್ತಿದ್ದ ಚುಳ್ಳಿ ಎಂಬ ಮುಳ್ಳಿನ ಚೆಂಡುಗಳ, ದಡದಲ್ಲಿ ಬಂದಿಳಿಯುತ್ತಿದ್ದ ಕಡಲ್ಕಾಗೆಗಳ - ಈ ಸುಂದರ ತೀರವೀಗ ನಮ್ಮ ಗತವೈಭವವಷ್ಟೆ, ಹಾಡಿಯಲ್ಲಿ ಚಬುಕು, ತೆಂಗುಗಳಿಗೆ ನೀರೆತ್ತಿ ಎರೆಯಲು ಮರಳಲ್ಲೇ ಕೊರೆದ ವೃತ್ತಾಕಾರದ ದಂಡೆಯಿರದ ಬಾವಿಗಳಿದ್ದುವು. ಈಗಿನ ಮಕ್ಕಳಿಗೆ ತೋರಲೂ ಒಂದಾದರೂ ಅಂಥ ಬಾವಿಗಳಿಲ್ಲ. ವರ್ಷಗಳಿಂದ ಹಿಂದೆ ಸರಿದಿದ್ದ ಸಮುದ್ರ ಏರಿ ಮುಂದೆ ಮುಂದೆ ಬಂದಂತೆ, ಈಗ ಸಮುದ್ರದ ಒಡಲಿಗೆ ಬಂಡೆಗಳನ್ನು ಸುರಿದು ತಡೆಗಟ್ಟುವ ನಿರರ್ಥಕ ಯತ್ನ ಸಾಗಿದೆ. ಪ್ರಾಕೃತಿಕ ವಿಕೋಪ ಭುವಿಯನ್ನು ಕಂಗೆಡಿಸುತ್ತಿದೆ. ಇದು ಸಾಲದೆಂಬಂತೆ ರಾಜಕೀಯ ಗಾಳಿ ಬೀಸಿದಂತೆ ಕೆಲವೆಡೆ ಮತೀಯ ವಿದ್ವೇಷದ ದಾವಾನಲ ಹಬ್ಬಿಕೊಂಡು, ಇದು ನನ್ನ ಪ್ರಿಯ ಕರುನಾಡೇ ಎಂಬ ಘೋರ ವಿಷಣ್ಣತೆಯನ್ನು ಹುಟ್ಟಿ ಹಾಕುತ್ತಿದೆ. ಆ ವಿದ್ವೇಷ ನಮ್ಮ ಈ ನೆಲದಲ್ಲಿ ಎಂದೂ ಕಾಲಿರಿಸದಿರಲಿ.

ಸಾಮರಸ್ಯಕ್ಕಾಗಿ ಸಾಹಿತ್ಯದಂತೆ ಸಾಹಿತ್ಯಕ್ಕಾಗಿ ಸಾಮರಸ್ಯ ಇರುವುದೂ ಅಗತ್ಯ. ಆರೋಗ್ಯಕರ ಸಾಹಿತ್ಯ ಸೃಷ್ಟಿಗೆ ಸಾಮರಸ್ಯ ಅತ್ಯವಶ್ಯ. ನಮ್ಮ ಶಾಲಾ ಮಕ್ಕಳಲ್ಲಿ ಕೋಮು ಸಾಮರಸ್ಯವನ್ನು ಬೆಳೆಸಲು ಆ ವಿಷಯವಾಗಿ ಪ್ರಬಂಧ ರಚನೆ, ಚರ್ಚೆ, ಆಶುಭಾಷಣ, ರಸಪ್ರಶ್ನೆ, ಚಿತ್ರರಚನೆ, ಗೀತಗಾಯನ, ನೃತ್ಯ, ನಾಟಕಗಳಂತಹ ಚಟುವಟಿಕೆಗಳನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳಬೇಕು. ಕನ್ನಡದ ಕೃತಿಗಳು ಬೇರೆ ಭಾರತೀಯ ಭಾಷೆಗಳಿಗೆ ಅನುವಾದವಾಗುವಂತೆ ಶಾಲೆಗಳಲ್ಲಿ ಅನ್ಯ ರಾಜ್ಯಗಳ ಮಲಯಾಳಂ, ತಮಿಳು, ತೆಲುಗು, ಉರ್ದು ಭಾಷೆಗಳ ಕಲಿಕೆಯೂ ಸಾಧ್ಯವಾಗುವಂತೆ ಆಗಬೇಕು. ಅರ್ಥಹೀನ ಹ್ರಸ್ವನುಡಿಗಳ ಮೊಬೈಲ್ ಮೆಸೇಜ್ ಭಾಷೆಯನ್ನು ಮಕ್ಕಳು ಕಲಿಯದಿರಲಿ.

ನಮ್ಮ ಚಂದ್ರಯಾನಿ ರಾಕೇಶ್ ಶರ್ಮಾ ಚಂದ್ರನ ಮೇಲೆ ಕಾಲಿಟ್ಟಾಗ, ದೇಶದ ಪ್ರಧಾನಿ ಇಂದಿರಾ ಗಾಂಧಿ, ಊಪರ್ ಸೇ ಭಾರತ್ ಕೈಸೇ ದಿಖ್‌ತಾ ಹೇ? ಎಂದು ಕೇಳಿದಾಗ, ರಾಕೇಶ್ ಶರ್ಮಾ, ಸಾರೇ ಜಹಾಂ ಸೇ ಅಚ್ಛಾ! ಎಂದ ಉತ್ತರ, ನನ್ನ ಪಾಲಿಗೆ ಟಿ.ವಿ.ಯಲ್ಲಿ ಕಂಡ ಅತ್ಯುತ್ತಮ ವಿಶುವಲ್!

ಪಠ್ಯೇತರ ಸಾಹಿತ್ಯದ ಓದು ಮಕ್ಕಳಿಗೆ ಕೈಗೆಟುಕಬೇಕು. ನಮ್ಮ ಶಾಲಾದಿನಗಳಲ್ಲಿದ್ದಂತೆ ಈಗಲೂ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಲೈಬ್ರೆರಿ ಪೀರಿಯಡ್ ಇದ್ದು, ಓದಿದುದನ್ನು ಒಂದೆರಡು ಮಾತಿನಲ್ಲಾದರೂ ಮಕ್ಕಳು ಹಂಚಿಕೊಳ್ಳುವಂತಾಗಬೇಕು,

ಹಿಂದೂ, ಮುಸ್ಲಿಮ್, ಕ್ರೈಸ್ತರೆಲ್ಲರಿಗೊಂದೆ ಭಾರತ ಮಂದಿರ,

ಶಾಂತಿದಾತನು ಗಾಂಧಿತಾತನು ಎದೆಯ ಬಾನಿನ ಚಂದಿರ

ಹಾಡು ಮಕ್ಕಳೆಲ್ಲರ ಬಾಯಲ್ಲಿ ನಲಿಯುತ್ತಿರಲಿ; ಅವರ ನಾಳೆಗಳು ಶಾಂತಿ, ಸಂತೋಷದಿಂದ ತುಂಬಿರಲಿ!

Writer - ವಾರ್ತಾಭಾರತಿ

contributor

Editor - Musaveer

contributor

Byline - ಶ್ಯಾಮಲಾ ಮಾಧವ

contributor

Similar News

ಒಳಗಣ್ಣು
ವೃತ್ತಾಂತ