ನೊಂದ ಆದಿವಾಸಿಗಳ ತಾಯಿ ಮಹಾಶ್ವೇತಾದೇವಿ

ಪೌರಕಾರ್ಮಿಕರ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಡುತ್ತಾ ಬಂದಿರುವ ದು.ಸರಸ್ವತಿ ಅವರು ಹೋರಾಟಕ್ಕಾಗಿಯೇ ತಮ್ಮ ಕಾವ್ಯ, ಬರಹ, ನಾಟಕಗಳನ್ನು ದುಡಿಸಿಕೊಂಡು ಬರುತ್ತಿರುವವರು. ‘ಹೆಣೆದರೆ ಜೇಡನಂತೆ’, ‘ಜೀವಸಂಪಿಗೆ’ ಇವರ ಕಾವ್ಯಸಂಕಲನ. ‘ಈಗೇನ್ಮಾಡೀರಿ’ ಅನುಭವ ಕಥನ. ಮಹಿಳೆಯ ಹಕ್ಕುಗಳಿಗಾಗಿಯೂ ಸರಸ್ವತಿ ಧ್ವನಿಯೆತ್ತುತ್ತಾ ಬಂದವರು. ಒಂದು ರೀತಿಯಲ್ಲಿ ತಳಸ್ತರದ ಜನರ ಬದುಕಿನ ಹಕ್ಕಿಗಾಗಿ ಬಹುರೂಪಿಯಾಗಿ ಕೆಲಸ ಮಾಡುತ್ತಿರುವವರು. ಸ್ವಚ್ಛತಾ ಕಾರ್ಮಿಕರ ಹಕ್ಕುಗಳಿಗಾಗಿ ಇವರು ಮಾಡಿರುವ ಕೆಲಸಗಳನ್ನು ಪರಿಗಣಿಸಿ ರಾಜ್ಯ ಸರಕಾರ 2024ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

Update: 2025-01-01 07:03 GMT
Editor : Musaveer | Byline : ದು. ಸರಸ್ವತಿ

ಮಹಾಶ್ವೇತಾದೇವಿಯವರು ಚಿಂತಕಿ ಗಾಯತ್ರಿ ಸ್ಪಿವಾಕ್ ಅವರಿಗೆ ನೀಡಿದ ಸಂದರ್ಶನದಲ್ಲಿ ಆಡಿರುವ ಮಾತುಗಳಿವು. ‘‘ಸೃಜನಶೀಲ ಸಾಹಿತಿಗೆ ಸಾಮಾಜಿಕ ಬದ್ಧತೆ ಇರಲೇಬೇಕು ಎಂಬುದು ನನ್ನ ನಿಲುವು. ಸಮಾಜದ ಬಗೆಗೆ ನನ್ನ ಕರ್ತವ್ಯ ಇದೆ. ಇಷ್ಟಾಗಿಯೂ ನಾನು ಇದನ್ನೆಲ್ಲಾ ಏಕೆ ಮಾಡುತ್ತಿದ್ದೇನೆ ಎಂದು ಖಚಿತವಾಗಿ ನನಗೆ ತಿಳಿದಿಲ್ಲ. ಈ ಕರ್ತವ್ಯ ಪ್ರಜ್ಞೆ ಎಂಬುದು ನನ್ನ ಪಾಲಿಗೆ ಗೀಳಾಗಿ ಬಿಟ್ಟಿದೆಯೇನೋ. ನನ್ನ ಆತ್ಮಕ್ಕಂತೂ ಉತ್ತರಿಸಬೇಕಲ್ಲ. ನನಗೆ ನಾನೇ ಸಾವಿರ ಬಾರಿ ಒಂದು ಪ್ರಶ್ನೆಯನ್ನು ಕೇಳಿಕೊಳ್ಳುತ್ತೇನೆ. ನನ್ನಿಂದ ಏನು ಸಾಧ್ಯವಿತ್ತೊ ಅಷ್ಟನ್ನು ಮಾಡಿದ್ದೇನೆಯೇ? ನನ್ನ ಮನೆಯ ತುಂಬಾ ಅವರೇ. ಅವರು ನನಗೆ ಬರೆಯುತ್ತಾರೆ. ನನ್ನಲ್ಲಿಗೆ ಬರುತ್ತಾರೆ. ನನ್ನೊಂದಿಗೆ ಇರುತ್ತಾರೆ. ನಾನು ಅವರಲ್ಲಿಗೆ ಹೋಗುತ್ತೇನೆ. ಅವರೊಂದಿಗೆ ಇರುತ್ತೇನೆ. ಇದನ್ನೆಲ್ಲಾ ಪತ್ರಿಕೆಗಳಲ್ಲಿ ಪ್ರಚುರಪಡಿಸುವುದು ತೀರಾ ಅಗತ್ಯ. ನಾನು ತರುಣಿಯರನ್ನು ಕುರಿತು ಹೇಳುವುದಿಷ್ಟು. ನೀವೇನೂ ಹಳ್ಳಿಗಳಿಗೆ ಹೋಗಬೇಕೆಂದಿಲ್ಲ. ನಿಮ್ಮ ಯೂನಿವರ್ಸಿಟಿಯ ಪಕ್ಕಕ್ಕೇ ಅಂಟಿಕೊಂಡಂತೆ ಹಾದಿಬದಿಯಲ್ಲಿ ಸ್ಲಂಗಳಿರುವುದನ್ನು, ಅಲ್ಲಿನ ಜನ ವಿದ್ಯುತ್ತು, ನೀರು ಇಂತಹ ಮೂಲಭೂತ ಅನುಕೂಲಗಳೂ ಇಲ್ಲದೆ ಬದುಕುತ್ತಿದ್ದಾರೆ ಎಂಬುದನ್ನು ಕುರಿತು ಬರೆಯಿರಿ ಸಾಕು. ಸರಕಾರಿ ಅಧಿಕಾರಿಗಳಂತೂ ನನ್ನನ್ನು ಕಂಡರೆ ಹೆದರಿಕೆ ಎಂಬುದನ್ನು ಒಪ್ಪಿಕೊಳ್ಳುತ್ತಾರೆ. ಮುಂದೆ ಇನ್ನೇನು ಬರೆದುಬಿಡುವನೋ ಎಂದು ಅವರು ಸದಾ ಹೆದರುತ್ತಾರೆ’’.

ಭಾರತ ದೇಶದ ಇತಿಹಾಸವನ್ನು ಮಹಾಶ್ವೇತದೇವಿಯವರು ಆದಿವಾಸಿಗಳ ದರ್ಶನದ ಮೂಲಕ ಕಟ್ಟಿದ್ದು ಹಾಗೂ ತಮ್ಮ ಬರಹಗಳ ಮೂಲಕ ಆದಿವಾಸಿಗಳ ಇತಿಹಾಸವನ್ನು ಕಟ್ಟಿದ್ದು ಅತ್ಯಂತ ಮಹತ್ವದ್ದು.

ಭಾರತದಲ್ಲಿ 77ರಲ್ಲಿ ಹೇರಿದ್ದ ತುರ್ತುಪರಿಸ್ಥಿತಿ ಕರಾಳ ಇತಿಹಾಸ. ಆ ಕುರಿತು ಮಾತನಾಡುವಾಗ ಅವರು ಹೇಳುವ ಮಾತುಗಳಿವು- ನಾನು 60ರ ದಶಕದಲ್ಲಿ ಮುಂಡಾ ಹಳ್ಳಿಗಳಿಗೆ ಹೋಗುತ್ತಿದ್ದೆ. ಸಂತೆಯಾಗಲಿ, ಎಲ್ಲಿಯೇ ಆಗಲಿ ಅವರು ದಂತಕತೆಗಳಾಗಿದ್ದ ಬಿರ್ಸಾಮುಂಡಾನ ಮತ್ತು ಧನಿ ಮುಂಡಾನ ಕುರಿತು ಮಾತನಾಡುತ್ತಿದ್ದರು. ನೀವು ತುರ್ತು ಪರಿಸ್ಥಿತಿಯ ಮುನ್ನ, ತುರ್ತು ಪರಿಸ್ಥಿತಿಯ ನಂತರ ಎಂದು ಮಾತನಾಡುತ್ತಿದ್ದೀರಿ. 63-75ರ ವರೆಗೂ ನಿರಂತರವಾಗಿ ಅಲ್ಲಿಗೆ ಭೇಟಿ ನೀಡುತ್ತಿದ್ದೆ. ತುರ್ತು ಪರಿಸ್ಥಿತಿ ಎಂದರೇನೆಂಬುದನ್ನು, ಏನು ಮಾಡಲಾಯಿತು ಎಂಬುದನ್ನು ನನ್ನ ಕಣ್ಣಾರೆ ನಾನು ಕಂಡಿದ್ದೇನೆ. ರಾಜಕೀಯದ ಅಪರಾಧೀಕರಣ, ಕೆಳಜಾತಿಗಳು ಮತ್ತು ಬುಡಕಟ್ಟುಗಳ ಪ್ರದೇಶಕ್ಕೆ ಅಪ್ರಯೋಜಕರನ್ನು ಬಿಡುವುದು (ಲಂಪೆನ್), ಅಮಾನವೀಯ ಕಿರುಕುಳ ನೀಡುವುದು, ವಿರೋಧ-ಪ್ರತಿರೋಧವನ್ನ್ನು ನಾನು ನೋಡಿದ್ದೇನೆ. ಆ ಸಮಯದಲ್ಲೇ ನಕ್ಸಲ್ ಹುಡುಗರನ್ನು ಗೌರವಿಸುವುದು, ಅವರಿಗೆ ಆಶ್ರಯ ನೀಡುವುದು, ತಪ್ಪಿಸಿಕೊಳ್ಳಲು ಅವಕಾಶ ನೀಡುವುದು (ಛೋಟಾ ಮುಂಡಾ ಆ್ಯಂಡ್ ಹಿಸ್ ಆರೊ ಕಾದಂಬರಿಯಲ್ಲಿ ಬರುತ್ತದೆ) ನಡೆಯಿತು. ಛೋಟಾ ಮುಂಡಾ ಅಥವಾ ನನ್ನ ಇತರ ಕತೆಗಳಲ್ಲಿ ಬಿರ್ಸಾ ಮುಂಡಾನ ಚಳವಳಿ (1895-1900) ತಿರ್ಕಾ ಮಾಜಿ (1780-85)ಮುಂದುವರಿದಿರುವುದನ್ನು ಚಿತ್ರಿಸಿದ್ದೇನೆ.

ತಮ್ಮ ದುಡಿಮೆ ಮತ್ತು ನೆಲದ ಬಗ್ಗೆ ಹೋರಾಟ ಮಾಡಿದಾಗಲೆಲ್ಲ ಅವರನ್ನು ಅಲ್ಲಿಂದ ಎತ್ತಂಗಡಿ ಮಾಡಲಾಗುತ್ತಿತ್ತು. ಪೂರ್ವ ಭಾರತದಲ್ಲಿನ ಆದಿವಾಸಿಗಳು ಪಶ್ಚಿಮ ಬಂಗಾಳಕ್ಕೆ ವಲಸೆ ಹೋದರು. ಅಸ್ಸಾಮಿನ ಟೀ ಎಸ್ಟೇಟುಗಳಿಗೆ ಕೂಲಿಗಳಾಗಿ ಅವರನ್ನು ಒಯ್ಯಲಾಯಿತು. ಬಂಗಾಳದ ಸುಂದರ್ ಬನದ ಮ್ಯಾನ್ ಗ್ರೂವ್ ಕಾಡುಗಳನ್ನು ತೆರವು ಮಾಡಲು ಕರೆದೊಯ್ಯಲಾಯಿತು. ಇಂಡಿಗೊ ಬೆಳೆಯುವ ಮಾಲಕರು ಅವರನ್ನು ಒಯ್ದರು. ಇದು ಹೀಗೆ ಮುಂದುವರಿಯುತ್ತಿದೆ.

ಆದಿವಾಸಿಗಳ ಕಥಾನಕಗಳಿಗೆ/ಬದುಕಿಗೆ ಐತಿಹಾಸಿಕ ಮಹತ್ವ ನೀಡಿದರು-ಅವರ ಮೌಖಿಕ ಕಥೆಗಳಿಗೆ ಐತಿಹಾಸಿಕ ಮಾನ್ಯತೆ ನೀಡಿದರು. ಆದಿವಾಸಿಗಳ ಕುರಿತು ಬರೆಯಲು ಯಾರೂ ಸಿಗುವುದಿಲ್ಲ. ಅವರಿಗೆ ಲಿಪಿ ಇಲ್ಲ. ಅವರು ಘಟನೆ/ಪ್ರಸಂಗಗಳನ್ನು ಹಾಡುಗಳಾಗಿ/ಪದಗಳಾಗಿ ಸಂಯೋಜಿಸುತ್ತಾರೆ. ಅವು ಏನೋ ಆಗಿ ಮುಂದುವರಿಯುತ್ತವೆ. ‘‘ಅವರ ಇತಿಹಾಸ ಗುರಿ ಇಲ್ಲದೆ ಎಲ್ಲಿಗೋ ಹರಿದು ಹೋಗುವ ಒಂದು ದೊಡ್ಡ ನದಿಯಂತೆ. ಈ ಹಂತಗಳು ಸಣ್ಣ ಹೊಳೆಗಳಂತೆ ಹರಿದು ಬಂದು ಅದಕ್ಕೆ ಸೇರಿಕೊಂಡು ಅವರ ಇತಿಹಾಸವಾಗುತ್ತದೆ. ಆದಿವಾಸಿಗಳ ಲೋಕವನ್ನು ಒಂದು ಖಂಡದಂತೆ ನಮಗೆ ಹ್ಯಾಂಡ್ ಓವರ್ ಮಾಡಲಾಗಿದೆ. ನಾವದನ್ನು ಅನ್ವೇಷಿಸುವ ಗೋಜಿಗೆ ಹೋಗಲಿಲ್ಲ., ಅದರ ಮಿಸ್ಟರಿಗಳನ್ನು ತಿಳಿದುಕೊಳ್ಳಲಿಲ್ಲ., ನಾಶ ಮಾತ್ರ ಮಾಡಿದೆವು. ಅವರ ಪೊಟೆನ್‌ಶಾಲಿಟಿ ಏನು, ಅವರೆಷ್ಟು ತೆತ್ತುಕೊಂಡರು ಎಂಬುದನ್ನು ಅರಿಯದೆ ಇಡೀ ಅನುಭವವನ್ನು ಮರು ಹೆಣೆಯುವುದು ಬಲು ಕಷ್ಟ. ನಾವು ಅವರನ್ನು ಗೌರವಿಸಲಿಲ್ಲ. ಅದು ಅಲಿಖಿತ ಇತಿಹಾಸ. ಆ ಜನರೊಂದಿಗೆ ಇದ್ದು ಅದನ್ನು ಕಲಿತೆ. ಆ ವರ್ಷಗಳಲ್ಲಿ ನನಗೆ ತಾಂತ್ರಿಕವಾಗಿ ಯಾರೊಂದಿಗೋ ಮದುವೆಯಾಗಿತ್ತು., ಆ ಬದುಕು ಬರಡಾಗಿತ್ತು. ಆ ಸಮಯದಲ್ಲೇ ನಾನು ಹಲವಾರು ಮೈಲುಗಳನ್ನು ನಡೆದೆ. ಆ ಜಾಗಗಳು, ಆ ನದಿ ತಟಗಳು, ಮರಗಳು ನನಗೆ ಗೊತ್ತು.

ಆದಿವಾಸಿಗಳು/ಕೆಳಜಾತಿಗಳ ಐಕ್ಯತೆಯೇ ಜಾಗತೀಕರಣಕ್ಕೆ ಒಡ್ಡುವ ನಿಜವಾದ ಪ್ರತಿರೋಧ.

ದೋಪ್ತಿ ಕತೆ ಕುರಿತು ಹೇಳುವಾಗ ಅವರು ಆಡಿರುವ ಮಾತುಗಳಿವು- ಅವರ ಇರುವಿಕೆಯನ್ನೇ ತೆಗೆದೆಸೆಯುವ ಮೂಲಕ ಅವರ ಅಸ್ತಿತ್ವವೇ ಅವಳಿಗಿಲ್ಲವಾಗುತ್ತದೆ. ಸಾಮೂಹಿಕ ಅತ್ಯಾಚಾರ, ಗುಂಪು ಅತ್ಯಾಚಾರದಂತಹ ಗಂಡು ಕೃತ್ಯಗಳಿವೆಯಲ್ಲ ಅವು ಹೆಣ್ಣಿನ ಚೈತನ್ಯವನ್ನು ನಾಶಪಡಿಸಲಾರವು. ಅವರ ಇರವನ್ನೇ ಅವಳು ಗುರುತಿಸುವುದಿಲ್ಲ, ಅವಳಿಗೆ ಅವರು ಅಸ್ತಿತ್ವ ಇರುವ ಜೀವಿಗಳಲ್ಲ.

ಎನ್‌ಜಿಒಗಳ ಕುರಿತಂತೆ ಕಟುವಾಗಿ ವಿಮರ್ಶಿಸುವ ಅವರು ಹೀಗೆ ಹೇಳುತ್ತಾರೆ -ಹಲವಾರು ಕಡೆ ಹಲವಾರು ಸಂಸ್ಥೆಗಳನ್ನು ನಾನು ನೋಡಿದ್ದೇನೆ. ಯಾವ ಉದ್ದೇಶದಿಂದ ಹಣವನ್ನು ನೀಡಲಾಗುತ್ತದೆ ಎಂಬುದನ್ನು ನಾನು ಸಮ್ಮತಿಸುವುದಿಲ್ಲ. ನನಗೆ ಆ ವಿಷಯದ ಬಗ್ಗೆ ಕೋಪ, ಜಿಗುಪ್ಸೆ ಇದೆ.

ಎಷ್ಟೊಂದು ಎನ್‌ಜಿಒಗಳು! ಎಷ್ಟೊಂದು ಉದ್ದೇಶಗಳಿಗಾಗಿ, ಎಷ್ಟೊಂದು ಹಣ. ಅವರಿಗೆ ಅವರ ಪ್ಯಾಕೇಜ್ಡ್ ಪ್ರೋಗ್ರಾಮುಗಳನ್ನು ಮುಗಿಸಿಕೊಳ್ಳಬೇಕು, ಸಾಕ್ಷರತೆ ಇಷ್ಟರೊಳಗೆ ಆಗಬೇಕು ನಂತರ ಇನ್ಯಾಕುಲೇಷನ್.

ಆದಿವಾಸಿಗಳ ಸಂಸ್ಕೃತಿಯನ್ನು ಅಪಾರವಾಗಿ ಗೌರವಿಸುವ ಅವರು ಅದರ ಮಾನವೀಯ ಮುಖ, ಶ್ರೀಮಂತಿಕೆಯ ದರ್ಶನ ಮಾಡಿಸುತ್ತಾರೆ. ಹೌದು, ಬಾಣ ಇತರ ಆಯುಧಗಳನ್ನು ಅವರು ಖಂಡಿತ ಬಳಸುತ್ತಾರೆ. ಕೊಲ್ಲಲು ಅವರು ಒಬ್ಬರೇ ಹೋಗುವುದಿಲ್ಲ. ಅವರು ಬದುಕಿ ಉಳಿಯಲು ಪ್ರಕೃತಿಗೂ ಸಹಾಯ ಮಾಡುತ್ತಾರೆ. ಅವರು ಆಯುಧಗಳನ್ನು ಬಳಸುತ್ತಾರೆ ಆದರೆ, ಅವರು ರಕ್ತದಾಹಿಗಳಲ್ಲ. ಮೂಲತಃ ಅವರು ಜೆಂಟಲ್, ಪೊಲೈಟ್, ಅತ್ಯಂತ ನಾಗರಿಕರು ಹೈಲಿ ಸಿವಿಲೈಝ್ಡ್ಡ್. ಅವರ ರಕ್ತದೊಳಗೆ ಅಂತರ್ಗತವಾಗಿರುವ ನಾಗರಿಕತೆ ಸಾವಿರಾರು ವರ್ಷಗಳ ಹಿಂದಕ್ಕೆ ಹೋಗುತ್ತದೆ. ಅವರು ತಮ್ಮ ಸುತ್ತಲಿನ ಪ್ರಕೃತಿ, ಮನುಷ್ಯರೂ ಇಂಟ್ರೂಡರ್ಸ್‌/ ನುಸುಳುಕೋರರೊಂದಿಗೂ ಸಾಮರಸ್ಯದಿಂದ ಬದುಕುತ್ತಾರೆ. ಹಾಗಾಗಿ ಆತ ಕೊಂದರೆ ಅದು ಅಗತ್ಯಕ್ಕೆ. ಗಾಂಧಿ ಎಂದರೆ ಸಾವಧಾನ, ತಾಳ್ಮೆ, ಕ್ಷಮೆ ಎನ್ನುವುದಾದರೆ ಅದು ಅವರಲ್ಲಿವೆ. ಕಾರಣ ಅವರಿಗೆ ಪುರಾತನ ನಾಗರಿಕತೆ ಇದೆ. ಅವರು ಮಾಡುತ್ತಾರೆ, ನಮಗಾಗುವುದಿಲ್ಲ. ನಮಗೆ ಕೋಪ ಬರುತ್ತದೆ, ತಾಳ್ಮೆ ಕಳೆದುಕೊಳ್ಳುತ್ತೇವೆ, ಮೃಗಗಳಾಗುತ್ತೇವೆ. ಅವರು ಹಾಗಾಗುವುದಿಲ್ಲ. ಹಾಗವರು ಮಾಡಿದಾಗ ಹತಾಶೆಯ(ಡೆಸ್ಪಿರೇಷನ್) ತುತ್ತು ತುದಿ ಮುಟ್ಟಿ ಹಾಗೆ ಮಾಡಿದ್ದಾರೆಂದು ಅರ್ಥಮಾಡಿಕೊಳ್ಳಬೇಕು.

ಬರವಣಿಗೆಯನ್ನು ಅತ್ಯಂತ ಸಮರ್ಥವಾಗಿ, ತೀಕ್ಷ್ಣವಾಗಿ ದುಡಿಸಿಕೊಂಡದ್ದು ಅದರಲ್ಲೂ ವಿಶೇಷವಾಗಿ ಒಂದು ದಮನಿತ ಸಮುದಾಯದ ದನಿಯಾಗಿ ಬಳಸಿಕೊಂಡದ್ದು ಮಹಾಶ್ವೇತ ದೇವಿಯವರ ಬಹುದೊಡ್ಡ ಸಾಧನೆ.

ಮಾಮೂಲಿಯಾಗಿ ಬಳಕೆಯಾಗುವ ರೂಪಕಗಳನ್ನು ಅವರು ಒಡೆಯುವ ರೀತಿ ನೋಡಿ ‘ಚಂದ್ರ ಒಂದಿಷ್ಟು ಬೆಳಕನ್ನು ವಾಂತಿಮಾಡಿ ನಿದ್ದೆಗೆ ಜಾರಿದ್ದ’ ಅವರು ತಮ್ಮ ಬರವಣಿಗೆಯಲ್ಲಿ ಮಾಡುವ ಮೂರು ಮಹಿಳಾ ಮಾದರಿಗಳು ಭಾರತೀಯ ಹೆಣ್ಣಿನ ನಿಜ ರೂಪವಾಗಿದೆ. ಸ್ತನದಾಯಿನಿ, ದೋಪ್ದಿ ಮತ್ತು ಹಜಾರ್ ಚೌರಾಸಿರ್ ಮಾ.

ಒಮ್ಮೆ ಅವರು ಆದಿವಾಸಿ ಹಾಡಿಯಲ್ಲಿ ಇದ್ದಾಗ ಊಟದ ಹೊತ್ತಿನಲ್ಲಿ ಎಲೆಯ ಮೇಲೆ ಅನ್ನ ಉಪ್ಪು ಮೆಣಸು ಬಡಿಸಿರುತ್ತಾರೆ. ನಗರದ ಮೇಲ್ಜಾತಿಯವರಾದ ಅವರು ಅನ್ನದ ಜೊತೆಗೆ ಮೇಲೋಗರ ಬರಬಹುದೆಂದು ಕಾಯುತ್ತ ಪಕ್ಕ ಕುಳಿತ ಹಿರಿಯ ಮಹಿಳೆಯನ್ನು ಕೇಳುತ್ತಾರೆ. ಆಗ ಆಕೆ ಅವರತ್ತ ನೋಡಿ ಹಸಿವು ನೆಂಚಿಕೊಂಡು ಉಣ್ಣು ಎನ್ನುತ್ತಾಳೆ. ಮಹಾಶ್ವೇತ ದೇವಿಯವರನ್ನ್ನು ನೀವು ಮಾರ್ಕ್ಸ್‌ವಾದಿಯೇ ಎಂದು ಕೇಳಿದಾಗ ಹೌದು ಎಂದೂ ‘ಹಸಿವು ನೆಂಚಿಕೊಂಡು ಉಣ್ಣು’ ಎಂಬ ಆದಿವಾಸಿ ಮಹಿಳೆಯ ಮಾತುಗಳು ನನ್ನ ಸಿದ್ಧಾಂತ ಎಂದೂ ಸಂದರ್ಶನ ಒಂದರಲ್ಲಿ ಹೇಳಿದ್ದರು.

ಅವರ ಕುರಿತ ಸಾಕ್ಷ್ಯ ಚಿತ್ರ ಒಂದನ್ನು ಮಾಡಲಾಗಿದೆ. ಆ ಸಾಕ್ಷ್ಯ ಚಿತ್ರದಲ್ಲಿ ಅವರ ವ್ಯಕ್ತಿತ್ವವನ್ನು ಅರ್ಥಪೂರ್ಣವಾಗಿ ಹಿಡಿಯಲಾಗಿದೆ. ಆಕೆಯ ಹೋರಾಟವಷ್ಟೇ ಅಲ್ಲ ಆಕೆಯ ಮಗುವಿನಂತಹ ಮತ್ತು ತಾಯಿಯಂತಹ ಎರಡೂ ಗುಣಗಳ ತೋರುವ ಕೆಲವು ದೃಶ್ಯಗಳು ಮನಮುಟ್ಟುತ್ತವೆ. ರೈಲಿನಲ್ಲಿ ಹೋಗುವಾಗ ಕಿಟಕಿ ಪಕ್ಕದಲ್ಲಿ ಕೂತಿದ್ದಾರೆ. ಮಳೆ ಹನಿಯ ತೊಡಗಿ ಕಿಟಕಿಯ ಕಂಬಿಗಳ ಮೇಲೆ ನೀರು ತೊಟ್ಟಿಕ್ಕ ತೊಡಗುತ್ತವೆ. ಹನಿಗಳನ್ನು ಕೈಯಲ್ಲಿ ಬಳಿದುಕೊಂಡು ಮಗುವಿನಂತೆ ಮುಖಕ್ಕೆ ಬಳಿದುಕೊಳ್ಳುತ್ತಾರೆ ಮಹಾಶ್ವೇತಾದೇವಿ. ಮತ್ತೊಮ್ಮೆ ಪಕ್ಕ ಕೂತವರ ಕೆನ್ನೆಗೆ ಅರಶಿಣ ಬಳಿವಂತೆ ಬಳಿಯುತ್ತಾರೆ. ಜಿ.ಎನ್. ದೇವಿಯವರೊಂದಿಗೆ ಮಾತನಾಡುತ್ತ ‘ದೇವಿ ನಾನು ಸತ್ತರೆ ಆದಿವಾಸಿ ಬಂಧುಗಳು ನನ್ನ ಮಹುವಾ ಮರದಡಿ ಮಣ್ಣಿನಲ್ಲಿ ಮಲಗಿಸುತ್ತಾರೆ. ಸತ್ತರೆ ಸುಡಬೇಕೆಂಬ ನಿನ್ನ ಯೋಜನೆ ಕೈ ಬಿಟ್ಟು ನನ್ನಂತೆಯೇ ಮಣ್ಣಾಗುವ ಬಗ್ಗೆ ತೀರ್ಮಾನಿಸು, ಮಣ್ಣಿನ ಸೂಕ್ಷ್ಮಾಣು ಜೀವಿಗಳು ಚೆನ್ನಾಗಿ ಕೊಳೆಯಿಸುತ್ತವೆ ಎಂದು ಸಹಜವಾಗಿ ಎನ್ನುತ್ತಾರೆ. ಆಗ ದೇವಿಯವರು ಬೂದಿಯೂ ಮಣ್ಣಿನಲ್ಲಿ ಕೊಳೆಯುತ್ತದೆ ತೀರ್ಮಾನ ಬದಲಾಯಿಸುವುದಿಲ್ಲ ಎನ್ನುತ್ತಾರೆ. ಮಕ್ಕಳಂತೆ ಸಾವು, ಮಣ್ಣಾಗುವ ಬಗ್ಗೆ ಅವರು ಸಹಜವಾಗಿ ಮಾತನಾಡುತ್ತಾರೆ. ನೊಂದ ಆದಿವಾಸಿಗಳ ಸಂತೈಸುವಾಗ ಅಪ್ಪಟ ಭೂಮಿತಾಯಿಯಂತೆ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ದು. ಸರಸ್ವತಿ

contributor

Similar News