ಮುಖ್ಯವಾಹಿನಿಯ ಮಾಧ್ಯಮಗಳು ಅಂಚಿನಲ್ಲಿರುವವರ ಸಮಸ್ಯೆಗಳನ್ನು ಇನ್ನು ನಿರ್ಲಕ್ಷಿಸಲು ಆಗದು : ಮೀನಾ ಕೊತ್ವಾಲ್

ಭಾರತದ ಮುಖ್ಯವಾಹಿನಿ ಮಾಧ್ಯಮಗಳ ಸುದ್ದಿಮನೆಗಳಲ್ಲಿ ದಲಿತರು ಹಾಗೂ ಇತರ ಅಂಚಿನಲ್ಲಿರುವವರ ಪ್ರಾತಿನಿಧ್ಯ ಅತ್ಯಂತ ಕಡಿಮೆ ಇದೆ ಎನ್ನುವುದು ಸ್ಥಾಪಿತ ಸತ್ಯ. ಮುಖ್ಯವಾಹಿನಿಯಲ್ಲಿ ಅವಕಾಶ ಪಡೆಯುವ ಕೆಲವೇ ಕೆಲವರು ಸುದ್ದಿಮನೆಯಲ್ಲಿರುವ ಜಾತಿ ತಾರತಮ್ಯದಿಂದ ತಮ್ಮ ಕೆಲಸದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ದೇಶದ ಜನಸಂಖ್ಯೆಯ ಅತಿ ದೊಡ್ಡ ಭಾಗವನ್ನು ಕಾಡುವ ವಿಷಯಗಳನ್ನು ಮಾಧ್ಯಮ ಏಕೆ ಕಡೆಗಣಿಸುತ್ತದೆ ಎಂಬುದನ್ನು ಇದು ವಿವರಿಸುತ್ತದೆ. ಇದಕ್ಕಾಗಿ ನಾವು ದೂಷಿಸಬೇಕಿರುವುದು ಸಾಮಾಜಿಕ ನ್ಯಾಯ ಎಂಬುದನ್ನು ಬರೆಯಲು ಮಾತ್ರ ಬಳಸುವ, ಆದರೆ, ಆಚರಣೆಗೆ ತರಲು ಆಗದ ಆಲೋಚನೆ ಎಂದುಕೊಂಡಿರುವ ದೇಶದ ‘ಪ್ರಖ್ಯಾತ’ ಸಂಪಾದಕರು ಹಾಗೂ ಪತ್ರಕರ್ತರನ್ನು. ಹೊಸದಿಲ್ಲಿಯಲ್ಲಿ 2021ರಲ್ಲಿ ದಲಿತ ಪತ್ರಕರ್ತೆ ಮೀನಾ ಕೊತ್ವಾಲ್ ನೇತೃತ್ವದಲ್ಲಿ ‘ಮೂಕನಾಯಕ್’ ಆನ್‌ಲೈನ್ ಸುದ್ದಿ ಚಾನೆಲ್ ಆರಂಭದೊಂದಿಗೆ ಇದನ್ನು ಬದಲಿಸುವ ಪ್ರಯತ್ನವೊಂದು ಶುರುವಾಯಿತು. ದೇಶದ ಬದಿಗೊತ್ತಲ್ಪಟ್ಟ ಸಮುದಾಯಗಳಿಗೆ ಸಾಮಾಜಿಕ ನ್ಯಾಯವನ್ನು ಕೊಡಿಸಬೇಕು ಎಂಬ ಉದ್ದೇಶ ಹೊಂದಿತ್ತು. ‘ಮೂಕನಾಯಕ್’ ಎಂದರೆ, ಧ್ವನಿಯಿಲ್ಲದವರ ನಾಯಕ ಎಂದರ್ಥ. 1920ರಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸ್ಥಾಪಿಸಿದ್ದ ಎರಡು ವಾರಕ್ಕೆ ಒಮ್ಮೆ ಪ್ರಕಟವಾಗುತ್ತಿದ್ದ ವೃತ್ತಪತ್ರಿಕೆಯ ಹೆಸರನ್ನೇ ಸುದ್ದಿ ಚಾನೆಲ್‌ಗೆ ಇರಿಸಲಾಯಿತು. ಹೊಸದಿಲ್ಲಿಯ ಜಾಮಿಯಾ ಮಿಲ್ಲಿಯಾದಿಂದ ಸಮೂಹ ಸಂವಹನದಲ್ಲಿ ಪದವಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್‌ಕಮ್ಯುನಿಕೇಷನ್‌ನಿಂದ ಸ್ನಾತಕೋತ್ತರ ಪದವಿ ಹಾಗೂ ಲಕ್ನೊದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಿಂದ ಎಂಫಿಲ್ ಪಡೆದಿರುವ ಕೊತ್ವಾಲ್ ಮತ್ತು ಅವರ ತಂಡ ದಲಿತರು ಮತ್ತು ಅಂಚಿನಲ್ಲಿರುವ ಸಮುದಾಯಗಳ ದುಃಸ್ಥಿತಿಯನ್ನು ಎತ್ತಿ ತೋರಿಸುವ ವಿಭಿನ್ನ ಕಥನಗಳು ಮತ್ತು ಕಟುವಾದ ನೆಲಮಟ್ಟದ ವರದಿಗಳನ್ನು ಪ್ರಕಟಿಸಿದೆ. ನಮ್ಮ ವರದಿಗಳಿಂದಾಗಿ ಮುಖ್ಯವಾಹಿನಿ ಮಾಧ್ಯಮಗಳು ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಅಂಚಿನಲ್ಲಿರುವ ಸಮುದಾಯಗಳನ್ನು ಕಡೆಗಣಿಸಲು ಸಾಧ್ಯವಿಲ್ಲದಂತೆ ಆಗಿದೆ. ಇದು ಮೂಕನಾಯಕ್ ನ ಅತ್ಯಂತ ದೊಡ್ಡ ಸಾಧನೆ ಎಂದು ಕೊತ್ವಾಲ್ ಅವರು ‘ವಾರ್ತಾಭಾರತಿ’ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ. ಸಂದರ್ಶನದ ಆಯ್ದ ಭಾಗ:

Update: 2025-01-08 07:32 GMT

ಸಂದರ್ಶನ : ಟಿ. ಎ. ಅಮೀರುದ್ದೀನ್

► ಅಂಚಿನಲ್ಲಿರುವವರ ಪ್ರಾತಿನಿಧ್ಯ ಭಾರತದ ಸುದ್ದಿಮನೆಗಳಲ್ಲಿ ಕಡಿಮೆ ಇರಲು ಕಾರಣವೇನು?


ದೊಡ್ಡ ಮಾಧ್ಯಮ ಸಂಸ್ಥೆಗಳು ಪತ್ರಕರ್ತರ ನೇಮಕಕ್ಕೆ ಜಾಹೀರಾತು ನೀಡಿದಾಗ, ತಾವು ಸಮಾನಾವಕಾಶ ನೀಡುವುದಾಗಿ ಹೇಳಿಕೊಳ್ಳುತ್ತವೆ. ನನ್ನ ಪ್ರಕಾರ, ಇದು ಅಂಚಿನಲ್ಲಿರುವ ಸಮುದಾಯದವರನ್ನು ದೂರ ಇರಿಸಲು ನಡೆಸುವ ಹುನ್ನಾರ. ವೈಯಕ್ತಿಕ ವಿವರ(ಸಿವಿ)ದಲ್ಲಿ ಜಾತಿಯನ್ನು ಬರೆದಲ್ಲಿ, ಆ ಅರ್ಜಿಯನ್ನು ಬದಿಗೆ ಸರಿಸಲಾಗುತ್ತದೆ. ಮಾಧ್ಯಮಗಳಲ್ಲಿ ಮಹಾನ್ ಸಂಪಾದಕರು ಇದ್ದಾರೆ; ಆದರೆ, ಅವರು ಅಂಚಿನಲ್ಲಿರುವ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಿಲ್ಲವೇಕೆ? ಈ ಸಂಪಾದಕರಿಗೆ ಯಾರನ್ನು ನೇಮಿಸಿಕೊಳ್ಳಬೇಕು ಹಾಗೂ ಯಾರನ್ನು ನಿರ್ಲಕ್ಷಿಸಬೇಕು ಎನ್ನುವುದು ಗೊತ್ತಿದೆ. ಆದರೆ, ಅವರು ಪ್ರತಿಭೆಯ ಹೆಸರಿನಲ್ಲಿ ಅವಕಾಶ ನಿರಾಕರಿಸುತ್ತಾರೆ. ಆದರೆ, ಈ ಪ್ರತಿಭೆ ಎನ್ನುವುದು ಸಂಪೂರ್ಣವಾಗಿ ಟೊಳ್ಳು ಹಾಗೂ ಅಂಚಿನಲ್ಲಿರುವ ಸಮುದಾಯಗಳಿಗೆ ಅವಕಾಶ ನಿರಾಕರಿಸಲು ಬಳಸುವ ಸೌಮ್ಯವಾದ ಪದ.

► ನೀವು ಮೂಕನಾಯಕ್ ಆರಂಭಿಸಲು ಕಾರಣವೇನು? 

ನಾನು ಬಡ ಕುಟುಂಬದಿಂದ ಬಂದವಳು. ನನ್ನ ಪೋಷಕರು ಕೂಲಿ ಕಾರ್ಮಿಕರು. ಕುಟುಂಬದ ಹೆಚ್ಚಿನ ಸದಸ್ಯರು ಅನಕ್ಷರಸ್ಥರು. ನಾನು ಪತ್ರಕರ್ತೆ ಆಗುತ್ತೇನೆ ಎಂದುಕೊಂಡಿರಲಿಲ್ಲ. ಆದ್ದರಿಂದಲೇ ನಾನು ನನ್ನನ್ನು ‘ಆಕಸ್ಮಿಕ ಪತ್ರಕರ್ತೆ’ ಎಂದು ಕರೆದುಕೊಳ್ಳುತ್ತೇನೆ.

ಜಾಮಿಯಾ ಮಿಲ್ಲಿಯಾದಿಂದ ಸಮೂಹ ಸಂವಹನದಲ್ಲಿ ಪದವಿ ಹಾಗೂ ಇಂಡಿಯನ್ ಇನ್‌ಸ್ಟ್ಟಿಟ್ಯೂಟ್ ಆಫ್ ಮಾಸ್‌ಕಮ್ಯುನಿಕೇಷನ್‌ನಿಂದ ಸ್ನಾತಕೋತ್ತರ ಪದವಿ ಪಡೆದ ಬಳಿಕ, ಪತ್ರಕರ್ತೆಯಾಗಿ ಕೆಲಸ ಆರಂಭಿಸಿದೆ. ಆದರೆ, ನನ್ನ ಜಾತಿಯಿಂದಾಗಿ ವೃತ್ತಿಯಲ್ಲಿ ಮುಂದುವರಿಯಲು ಆಗಲಿಲ್ಲ. ಹೀಗಾಗಿ, ಅಧ್ಯಯನಕ್ಕೆ ಮರಳಿ, ಲಕ್ನೊದ ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ವಿಶ್ವವಿದ್ಯಾನಿಲಯದಿಂದ ಎಂಫಿಲ್ ಪಡೆದೆ. ಆನಂತರ ಬಿಬಿಸಿ ಹಿಂದಿಯಲ್ಲಿ ಕೆಲಸ ಸಿಕ್ಕಿತು. ಅಂತರ್‌ರಾಷ್ಟ್ರೀಯ ಮಾಧ್ಯಮ ಸಂಸ್ಥೆಯಾಗಿದ್ದರೂ, ಅಲ್ಲಿಯೂ ಜಾತಿ ತಾರತಮ್ಯ ಅನುಭವಿಸಿದೆ. ಈ ಸಂಬಂಧ ದೂರು ನೀಡಿದರೂ, ಆಡಳಿತ ಮಂಡಳಿ ಸಮಸ್ಯೆಯನ್ನು ಬಗೆಹರಿಸಲಿಲ್ಲ. ಆನಂತರ ಕೆಲಸವನ್ನು ಬಿಟ್ಟೆ. ವಿವಿಧ ಮಾಧ್ಯಮ ಸಂಸ್ಥೆಗಳಲ್ಲಿ ಸ್ವತಂತ್ರ ಪತ್ರಕರ್ತೆಯಾಗಿ ಕೆಲಕಾಲ ಕೆಲಸ ಮಾಡಿದ ಬಳಿಕ 2021ರಲ್ಲಿ ಮೂಕನಾಯಕ್ ಆರಂಭಿಸಿದೆ.

► ಪತ್ರಿಕಾ ವೃತ್ತಿಯಲ್ಲಿ ನೀವು ಎದುರಿಸಿದ ಸಮಸ್ಯೆಗಳೇನು?

ಬಿಬಿಸಿ ಬಿಟ್ಟ ಬಳಿಕ ಹಲವು ಮುಖ್ಯವಾಹಿನಿ ಹಾಗೂ ಪರ್ಯಾಯ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸಕ್ಕೆ ಸೇರಲು ಪ್ರಯತ್ನಿಸಿದೆ. ಆದರೆ, ನನ್ನೆಲ್ಲ ಪ್ರಯತ್ನಗಳೂ ವ್ಯರ್ಥವಾದವು. ಬಿಬಿಸಿ ಬಿಟ್ಟ ಬಳಿಕ ನಾನು ಸುದ್ದಿ ಮನೆಗಳಲ್ಲಿರುವ ಜಾತಿ ತಾರತಮ್ಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ್ದ ಪೋಸ್ಟ್‌ಗಳನ್ನು ಈ ಮಾಧ್ಯಮ ಸಂಸ್ಥೆಗಳ ಸಂಪಾದಕರು ಓದಿದ್ದರು ಎನ್ನಿಸುತ್ತದೆ. ಮುಖ್ಯವಾಹಿನಿ ಮಾಧ್ಯಮ ಸಂಸ್ಥೆಗಳಲ್ಲಿ ದಲಿತ ಇಲ್ಲವೇ ಆದಿವಾಸಿಯೊಬ್ಬ ಸಂಪಾದಕ ಆಗುವುದು ಸಾಧ್ಯವೇ ಇಲ್ಲ ಎನ್ನುವುದು ನನಗೆ ಅರಿವಾಯಿತು.

ಹೀಗಾಗಿ, ಸ್ವತಂತ್ರವಾಗಿ ಕೆಲಸ ಮಾಡಲು ಪ್ರಯತ್ನಿಸಿದೆ; ಅದರಿಂದ ನನಗೆ ಸಂತೋಷವಾಗಲಿಲ್ಲ. ಏಕೆಂದರೆ, ಸಂಪಾದಕೀಯ ಸಭೆಯಲ್ಲಿ ಸುದ್ದಿಯನ್ನು ವಿವರಿಸಿದ ಬಳಿಕ, ಸಂಪಾದಕರು ಅದನ್ನು ಪ್ರಕಟಿಸುತ್ತಾರೋ, ಇಲ್ಲವೋ ಎನ್ನುವುದು ಗೊತ್ತಾಗುತ್ತಿರಲಿಲ್ಲ. ವರದಿಗಾರರ ತಂಡ ಈ ಸುದ್ದಿಯನ್ನು ಮಾಡುತ್ತಿದೆ ಎಂಬ ಉತ್ತರ ಕೆಲವೊಮ್ಮೆ ಬರುತ್ತಿತ್ತು. ಅಷ್ಟಲ್ಲದೆ, ವರದಿಯಲ್ಲಿ ಬೇರೊಬ್ಬರ ಬಗ್ಗೆ ಆರೋಪ ಮಾಡಿದ್ದರೆ, ಸುದ್ದಿಮನೆಯ ಮೂವರು ನಿಮ್ಮ ದಿಕ್ಕಿನಲ್ಲಿ ಬೆರಳು ತೋರಿಸಿರುತ್ತಿದ್ದರು.

► ಮೂಕನಾಯಕ್ ಆರಂಭಿಸಲು ಕಾರಣಗಳೇನು?

ದಲಿತೆ ಹಾಗೂ ಮಹಿಳೆ ಎಂಬುದನ್ನು ನಾನು ಬಳಸಿಕೊಳ್ಳುತ್ತಿದ್ದೇನೆ ಎಂದು ಬಹಳಷ್ಟು ಜನ ದೂರಿದ್ದರು. ಆದ್ದರಿಂದ ನನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿತ್ತು. ನನಗೆ ಹೆಚ್ಚು ಅವಕಾಶಗಳು ಇರಲಿಲ್ಲ; ಹೀಗಿರುವಾಗ ನನ್ನ ಸಾಮರ್ಥ್ಯವನ್ನು ತೋರಿಸುವುದು ಹೇಗೆ? ನನ್ನದೇ ಆದ ಮಾಧ್ಯಮ ವೇದಿಕೆಯನ್ನು ಆರಂಭಿಸುವುದು ನನಗಿದ್ದ ಏಕೈಕ ದಾರಿಯಾಗಿತ್ತು; ಆದ್ದರಿಂದ, ಜನವರಿ 2021ರಲ್ಲಿ ಮೂಕನಾಯಕ್ ಆರಂಭಿಸಿದೆ. ಡಾ.ಬಿ.ಆರ್. ಅಂಬೇಡ್ಕರ್ ಅವರು ನನ್ನ ಚೈತನ್ಯದ ಸ್ಫೂರ್ತಿಯಾಗಿದ್ದರು. ವಾಸ್ತವ ವೆಂದರೆ, ಅಂಚಿನಲ್ಲಿರುವ ಸಮುದಾಯಗಳ ಬವಣೆಯನ್ನು ಎತ್ತಿ ತೋರಿಸಲೆಂದೇ ಅಂಬೇಡ್ಕರ್ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗುತ್ತಿದ್ದ ವೃತ್ತಪತ್ರಿಕೆಯನ್ನು ಆರಂಭಿಸಿದ್ದರು. ಅವರು ಅದನ್ನು ಹೆಚ್ಚು ಕಾಲ ನಡೆಸಲು ಆಗಲಿಲ್ಲ. ಆರ್ಥಿಕ ಅಡಚಣೆಗಳು ಹಾಗೂ ಉನ್ನತ ವಿದ್ಯಾಭ್ಯಾಸಕ್ಕೆಂದು ಯುರೋಪಿಗೆ ಹೋಗಬೇಕಾಗಿದ್ದುದು ಇದಕ್ಕೆ ಕಾರಣ.

ಅಂಬೇಡ್ಕರ್ ಅವರ ಉಪಕ್ರಮದ 100 ವರ್ಷಗಳ ಬಳಿಕವೂ ಮುಖ್ಯವಾಹಿನಿ ಮಾಧ್ಯಮಗಳು ಅಂಚಿನಲ್ಲಿರುವ ಸಮುದಾಯಗಳ ವಿಷಯಗಳನ್ನು ನಿರ್ಲಕ್ಷಿಸುತ್ತಿವೆ. ಇದು ಮೂಕನಾಯಕ್ ಆರಂಭಿಸಲು ಇದ್ದ ಇನ್ನೊಂದು ಕಾರಣ. ಅಂಚಿನಲ್ಲಿರುವ ಸಮುದಾಯದ ಮಹಿಳೆಯೊಬ್ಬರಿಗೆ ಸಂಪಾದಕಿಯಾಗುವ ಅವಕಾಶ ಈವರೆಗೆ ಸಿಕ್ಕಿರಲಿಲ್ಲ. ಈ ಮೂಲಕ ನಾನು ಗಾಜಿನ ಛಾವಣಿಯನ್ನು ಛಿದ್ರಗೊಳಿಸಿದ್ದೇನೆ.

► ಮೂಕನಾಯಕ್ ಯಾವುದೇ ಬದಲಾವಣೆ ತಂದಿತೇ?

ಅಂಚಿನಲ್ಲಿರುವ ಸಮುದಾಯಗಳ ಬದುಕನ್ನು ಪ್ರಭಾವಿಸುವ ಹಲವು ವರದಿಗಳನ್ನು ಮೂಕನಾಯಕ್ ಪ್ರಕಟಿಸಿದೆ. ನೀವು ನಮ್ಮ ರೀತಿಯ ಪತ್ರಿಕೋದ್ಯಮವನ್ನು ಇಷ್ಟಪಡಬಹುದು ಇಲ್ಲವೇ ಇಷ್ಟಪಡದೆ ಇರಬಹುದು; ಆದರೆ, ನಮ್ಮನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ನಾವು ವಿಷಯವೊಂದನ್ನು ಎತ್ತಿಕೊಂಡಾಗ, ಇತರ ಮಾಧ್ಯಮಗಳು ಅದನ್ನು ಹಿಂಬಾಲಿಸುತ್ತವೆ. ನಮ್ಮ ಎಲ್ಲ ವರದಿಗಳಲ್ಲೂ ವಾಸ್ತವಿಕ ನಿಖರತೆಯನ್ನು ಖಾತ್ರಿಪಡಿಸಿಕೊಳ್ಳುತ್ತೇವೆ. ಇದರಿಂದ ಮೂಕನಾಯಕ್ ವಿಶ್ವಾಸಾರ್ಹತೆ ಗಳಿಸಿದೆ.

ಉದಾಹರಣೆಗೆ, ಹೊಸದಿಲ್ಲಿಯಲ್ಲಿ 10 ವರ್ಷದ ದಲಿತ ಬಾಲಕಿ ಮೇಲೆ ಅತ್ಯಾಚಾರ ನಡೆದಾಗ, ಮುಖ್ಯವಾಹಿನಿ ಮಾಧ್ಯಮ ಅದನ್ನು ನಿರ್ಲಕ್ಷಿಸಲು ಪ್ರಯತ್ನಿಸಿತು. ತಮ್ಮ ಮೂಗಿನ ಕೆಳಗೇ ಘಟನೆ ನಡೆದಿದ್ದರೂ, ವರದಿಗಾರರನ್ನು ಕಳಿಸಲಿಲ್ಲ. ನಾವು ಘಟನೆ ಬಗ್ಗೆ ವರದಿ ಮಾಡಿದ ಬಳಿಕ, ರಾಹುಲ್ ಗಾಂಧಿ, ಅರವಿಂದ್ ಕೇಜ್ರಿವಾಲ್, ಚಂದ್ರಶೇಖರ್ ಆಝಾದ್ ಹಾಗೂ ಇತರ ಮುಖಂಡರು ಘಟನಾ ಸ್ಥಳಕ್ಕೆ ಭೇಟಿ ನೀಡಿದರು ಮತ್ತು ಅದು ದೊಡ್ಡ ಸುದ್ದಿಯಾಯಿತು. ದೊಡ್ಡ ಮಾಧ್ಯಮಗಳು ಘಟನೆಯನ್ನು ವರದಿ ಮಾಡಲೇಬೇಕಾಗಿ ಬಂದಿತು.

ನಮ್ಮ ವರದಿಗಳಿಂದಾಗಿ ದಲಿತರ ಮೇಲಿನ ಹಲವು ಹಲ್ಲೆ ಪ್ರಕರಣಗಳಲ್ಲಿ ಪೊಲೀಸರು ಎಫ್‌ಐಆರ್ ದಾಖಲಿಸಬೇಕಾಗಿ ಬಂದಿತು; ಬದಿಗೊತ್ತಲ್ಪಟ್ಟ ಸಮುದಾಯಗಳಿಗೆ ವಿದ್ಯುತ್‌ಸಂಪರ್ಕ ಮತ್ತು ನೀರಿನ ಸೌಲಭ್ಯ ದೊರಕಿದೆ. ಮಧ್ಯಪ್ರದೇಶದಲ್ಲಿ ಸರಕಾರ ದಲಿತರು ಹಾಗೂ ಆದಿವಾಸಿಗಳಿಗೆ ಹಣ ಬಿಡುಗಡೆಗೊಳಿಸದೆ ಹಲವು ತಿಂಗಳು ಕಾಲಹರಣ ಮಾಡಿತ್ತು. ನಾವು ನಿರಂತರವಾಗಿ ವರದಿ ಪ್ರಕಟಿಸಿದ್ದರಿಂದ, ಸರಕಾರ ಅನುದಾನ ಬಿಡುಗಡೆಗೊಳಿಸಿತು.

► ನೀವು ಈಗ ಎದುರಿಸುತ್ತಿರುವ ಸವಾಲುಗಳೇನು?

ಆರ್ಥಿಕ ಸಂಕಷ್ಟಗಳಿಂದಾಗಿ ಮೂಕನಾಯಕ್ ಸಂಪಾದಕೀಯ ಕೆಲಸಗಳು ಸ್ವಲ್ಪಮಟ್ಟಿಗೆ ಸಮಸ್ಯೆಗೀಡಾಗಿವೆ. ಆದರೆ, 2023 ನಮಗೆ ಬಹಳ ಉತ್ಪಾದಕ ವರ್ಷ. ಆಗ ಚಾನೆಲ್‌ನಲ್ಲಿ 20 ಪತ್ರಕರ್ತರು ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮ ಇಂಗ್ಲಿಷ್ ವೆಬ್‌ಸೈಟ್ ಕೂಡ ಉತ್ತಮವಾಗಿ ಚಾಲ್ತಿಯಲ್ಲಿತ್ತು. ರಾಜಸ್ಥಾನ, ಉತ್ತರಪ್ರದೇಶ, ದಿಲ್ಲಿ ಹಾಗೂ ಇನ್ನಿತರ ಪ್ರದೇಶಗಳಲ್ಲಿರುವ ನಮ್ಮ ಪತ್ರಕರ್ತರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದರು. ನಾವು ಸ್ಥಳೀಯ, ನೆಲಮಟ್ಟದ ವರದಿಗಳ ಮೇಲೆ ಗಮನ ಕೇಂದ್ರೀಕರಿಸಿದ್ದೆವು. ಡೆಸ್ಕ್ ನಿಂದ ಬಂದ ವರದಿಗಳು ಕಡಿಮೆ. ಈಗ, ಅನುದಾನದ ಕೊರತೆಯಿಂದ ಡೆಸ್ಕ್‌ನಿಂದ ಹೆಚ್ಚು ವರದಿ ಬರುತ್ತಿವೆ.

► ಆರ್ಥಿಕ ಸಂಕಷ್ಟಕ್ಕೆ ಕಾರಣಗಳೇನು?

ಹಣಕಾಸಿನ ಕೊರತೆಗೆ ಎರಡು ಮುಖ್ಯ ಕಾರಣಗಳಿವೆ. ಮೊದಲಿಗೆ, ಕಳೆದ ವರ್ಷ ನ್ಯೂಯಾರ್ಕ್‌ಟೈಮ್ಸ್, ಅಲ್‌ಜಝೀರ, ಡಿಡಬ್ಲ್ಯು, ವಿಒಎ ಸೇರಿದಂತೆ ಹಲವು ಅಂತರ್‌ರಾಷ್ಟ್ರೀಯ ಸುದ್ದಿ ಸಂಸ್ಥೆಗಳು ಮೂಕನಾಯಕ್ ಕುರಿತು ವಿಸ್ತೃತ ವರದಿ ಮಾಡಿದವು. ಆನಂತರ, ಜನರು ನಮ್ಮನ್ನು ಟ್ರೋಲ್ ಮಾಡಲಾರಂಭಿಸಿದರು. ನಾನು ಸವರ್ಣೀಯರಿಂದ ಟ್ರೋಲ್ ನಿರೀಕ್ಷಿಸಿದ್ದೆ. ಆದರೆ, ನನಗೆ ಆಘಾತ ಉಂಟುಮಾಡಿದ್ದು ನನ್ನದೇ ಸಮುದಾಯದ ಪ್ರಬಲ ಉಪಜಾತಿಗಳ ಜನರು ಮಾಡುತ್ತಿದ್ದ ಟ್ರೋಲಿಂಗ್. ನಾನು ದಲಿತಳಲ್ಲ ಎಂದು ಕೆಲವರು ಆರೋಪಿಸಿದರು. ಹಿಂದೂಗಳು ಎಲ್ಲಿಗೇ ಹೋಗಲಿ, ಅವರು ತಮ್ಮೊಡನೆ ಜಾತಿಯನ್ನು ತೆಗೆದುಕೊಂಡು ಹೋಗುತ್ತಾರೆ ಎಂದು ಡಾ.ಅಂಬೇಡ್ಕರ್ ಹೇಳಿದ್ದರು. ನನ್ನನ್ನು ಟ್ರೋಲ್ ಮಾಡಿದ ದಲಿತರು ಪ್ರಬಲ ಉಪ ಜಾತಿಗೆ ಸೇರಿದವರು. ಈಗಲೂ ಟ್ರೋಲಿಂಗ್ ಮುಂದುವರಿಸಿದ್ದಾರೆ. ಟ್ರೋಲ್‌ಗಳಿಂದಾಗಿ ನಾನು ನನ್ನ ಜಾತಿ ಪ್ರಮಾಣಪತ್ರವನ್ನು ಪ್ರಕಟಿಸಬೇಕಾಯಿತು. ಮಾಧ್ಯಮ ಸಂಸ್ಥೆಗಳಿಗೆ ಟ್ಯಾಗ್ ಮಾಡಿ, ನನ್ನ ಕುರಿತ ವರದಿಗಳನ್ನು ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು. ಇನ್ನು ಕೆಲವರು ನಾನು ಅಂಬೇಡ್ಕರ್ ಅವರ ವೃತ್ತಪತ್ರಿಕೆಯ ಹೆಸರು ಬಳಸಿರುವುದಕ್ಕೆ ಆಕ್ಷೇಪಿಸಿದರು. ನನ್ನ ಅಂತರ್ಜಾತಿ ವಿವಾಹವನ್ನು ಒರೆಗೆ ಹಚ್ಚಿದರು. ಕನಿಕರ ಹುಟ್ಟಿಸಲು ನನ್ನ ಮಗುವನ್ನು ಯಾವಾಗಲೂ ಜೊತೆಯಲ್ಲಿ ಕರೆದೊಯ್ಯುತ್ತೇನೆ ಎಂದು ಆಪಾದಿಸಿದರು. ಈ ಟ್ರೋಲಿಂಗ್ ಮೂಕನಾಯಕ್ ಕ್ರೌಡ್ ಫಂಡಿಂಗ್ ಮೇಲೆ ಕೆಟ್ಟ ಪರಿಣಾಮ ಬೀರಿದವು ಮತ್ತು ಜನರು ದೇಣಿಗೆ ನೀಡುವುದನ್ನು ನಿಲ್ಲಿಸಿದರು.

ಇನ್ನೊಂದು ಕಾರಣ- ದೇಣಿಗೆ ನೀಡುವವರು ಪಾನ್(ಪರ್ಮನೆಂಟ್ ಅಕೌಂಟ್ ನಂಬರ್) ವಿವರ ನೀಡಬೇಕೆಂಬ ಸರಕಾರದ ನಿಯಮ. ದೇಣಿಗೆ ನೀಡುತ್ತಿರುವವರಲ್ಲಿ ಹೆಚ್ಚಿನವರು ಪಾನ್ ವಿವರ ನೀಡಲು ಹಿಂಜರಿದರು. ಇದರಿಂದ ಹಣದ ಹರಿವು ನಿಂತಿತು. ಪರ್ಯಾಯ ಮಾಧ್ಯಮ ಸಂಸ್ಥೆಗಳಿಗೆ ಅನುದಾನ ಬಹಳ ಮುಖ್ಯ. ಉತ್ತಮ ಪತ್ರಕರ್ತರ ನೇಮಕ, ಬದಿಗೊತ್ತಲ್ಪಟ್ಟ ಸಮುದಾಯದ ಯುವ ಪತ್ರಕರ್ತರಿಗೆ ಉತ್ತಮ ತರಬೇತಿ, ಗುಣಮಟ್ಟದ ಸಾಧನ-ಸಲಕರಣೆಗಳ ಖರೀದಿ ಹಾಗೂ ಸುದ್ದಿ ಮನೆಯನ್ನು ಉತ್ತಮವಾಗಿ ಇರಿಸಿಕೊಳ್ಳಲು ಹಣದ ಅವಶ್ಯಕತೆಯಿದೆ. ಹಣದ ಕೊರತೆ ಈ ಎಲ್ಲದರ ಮೇಲೆ ಪರಿಣಾಮ ಬೀರುತ್ತದೆ.

► ಪ್ರಸ್ತುತ ಎಷ್ಟು ಮಂದಿ ಕೆಲಸ ಮಾಡುತ್ತಿದ್ದಾರೆ?

ಹಣದ ಕೊರತೆಯಿಂದ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದೆ. ವೇತನ ನೀಡಲು ನಮ್ಮ ಬಳಿ ಹಣ ಇಲ್ಲ. ಹಾಲಿ 6 ಮಂದಿ ಕೆಲಸ ಮಾಡುತ್ತಿದ್ದಾರೆ. 2023ರಲ್ಲಿ 20 ಮಂದಿ ಇದ್ದರು.

► ನಿಮ್ಮ ಯೋಜನೆಗಳೇನು?

ಅವರು ನನ್ನನ್ನು ಟ್ರೋಲ್ ಮಾಡಲಿ; ಟೀಕಿಸಲಿ. ಆದರೆ, ನಾನು ಏನು ಮಾಡುತ್ತಿದ್ದೇನೆಯೋ ಅದನ್ನು ಮುಂದುವರಿಸುತ್ತೇನೆ. ಮೂಕನಾಯಕ್ ಅನ್ನು ನಿಲ್ಲಿಸುವುದಿಲ್ಲ. ಕೊನೇ ಉಸಿರು ಇರುವವರೆಗೆ ಮುಂದುವರಿಸುತ್ತೇನೆ. ಒಬ್ಬಳೇ ನಡೆಸಬೇಕಾಗಿ ಬಂದರೂ, ಹಿಂಜರಿಯುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ಮೀನಾ ಕೊತ್ವಾಲ್

contributor

Similar News

ಒಳಗಣ್ಣು
ವೃತ್ತಾಂತ