ಒಲಿದ ಸ್ವರಗಳು
ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ತಾಕೊಡೆಯವರಾದ ಅನಿತಾ ಪೂಜಾರಿ ಅವರು ಸದ್ಯ ಮುಂಬೈಯಲ್ಲಿ ವಾಸಿಸುತ್ತಿದ್ದಾರೆ. ಕವಯಿತ್ರಿ, ಕತೆಗಾರ್ತಿಯಾಗಿರುವ ಅನಿತಾ ಅವರು ಅಂಕಣಗಾರ್ತಿಯಾಗಿದ್ದಾರೆ. ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಪದವೀಧರರಾಗಿರುವ ಅವರು ಮುಂಬೈ ವಿ.ವಿ.ಯಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕಾಯುತ್ತಾ ಕವಿತೆ, ಅಂತರಂಗದ ಮೃದಂಗ (ಕವನ ಸಂಕಲನ), ಮರಿಯಲದ ಮದಿಮಾಲ್ (ತುಳು ಕವನ ಸಂಕಲನ), ಸವ್ಯಸಾಚಿ ಸಾಹಿತಿ, ಮೋಹನ ತರಂಗ -ಇವರ ಕೃತಿಗಳು. ಸುಶೀಲ ಎಸ್. ಶೆಟ್ಟಿ ಸ್ಮಾರಕ ಕಾವ್ಯ ಪ್ರಶಸ್ತಿ, ಅಲ್ಲಮ ಸಾಹಿತ್ಯ ಪ್ರಶಸ್ತಿ, ಕವಿರತ್ನ ಪುರಸ್ಕಾರ, ಡಿ.ಗೋಪಾಲಕೃಷ್ಣ ಸ್ಮಾರಕ ಪ್ರಶಸ್ತಿ, ಡೊಂಬಿವಲಿ ತುಳುಕೂಟದ ತುಳುಸಿರಿ ಪ್ರಶಸ್ತಿ, ಕಾವ್ಯಸಿರಿ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸೂರ್ಯ
ಅತ್ತಿತ್ತ ಸರಿಯುವ ಅರೆಬರೆ ಮೋಡಗಳ ದಿಂಡು
ನೆರಳು ಬೆಳಕಿನಾಟದಲಿ ಏನೋ ಗುಸು ಗುಸು
ಯಾರೋ ಹಚ್ಚಿದ ಕಿಡಿಗೆ ಒಡಲು ಬಿರಿಯುವ ಸದ್ದು
ಎಲ್ಲಿ ಅವಿತಿರುವೆ ನೀನು...!
ಉರುಳಿದವು ದಿನಗಳು ಹಲವು
ನಿತ್ಯ ನೀ ನಡೆವ ದಾರಿಯಲೂ ಹುಡುಕಿದ್ದಾಯ್ತು
ಪಚ್ಚೆ ಮರ ಹೂವು ಬಳ್ಳಿಗಳು
ಎಂದಿನಂತೆ ರಂಗಾಗಿ ನಿನ್ನಿರುವನು ಸಾರಿವೆ
ಈ ತೆರೆಮರೆಯಾಟ ನನ್ನೊಡನೆ ಮಾತ್ರವೇ...!
ಸೃಷ್ಟಿಯನು ರಂಗಿನೊಲುಮೆಯಲಿ ಮೀಯಿಸುವ
ನಿನ್ನ ನೋಡದಿದ್ದರೆ ನನ್ನ ದಿನವೆಲ್ಲ ಬರಿದು
ಬಿಸಿಲು ಮಳೆಯಾಟದಲಿ ಹೂ ಬಿಸಿಲ ಹಾಸುವುದು
ಬಣ್ಣಗಳ ಜೊತೆಗೆ ನೀ ಮೇಳವಿಸುವುದು
ಇನಿತಿನಿತಾಗಿ ಏರಿ ಇಳಿದು ಬಿಡುವ ಬಗೆಯನು ನೋಡಲು
ನಾನಿರುವಲ್ಲೇ ನಿಂತು ಕಾಯುವುದು
ಆಷಾಢದ ಮಳೆ ಮಾಗಿಯ ಚಳಿ ಬೇಸಿಗೆಯ ಬೆದೆಯೀಗ
ಋತುಮಾನವನೂ ಮೀರಿ ಅದಲು ಬದಲಾಗಿದೆಯಲ್ಲ...!
ಗೋಲವೇ ನಿನ್ನ ಸುತ್ತ ಸುತ್ತುವಲ್ಲಿ
ಬರೀ ಛಾಯೆಯನ್ನಷ್ಟೆ ತೇಲಿಸಿ
ಜೀವ ನೆಡುವ ನಿನ್ನ ಕಾಯ ನೋಡುತ್ತಲೇ
ಅದೆಷ್ಟೋ ಪಾತ್ರಗಳು ಕಳೆದು ಹೊಸದು ಮೂಡುತ್ತಿವೆ
ಚದುರಿದ ಮುಗಿಲಿನ ನಡುವೆ
ಭಾವಬಂಧಗಳ ಅಣಕಿಸುವಾಟ ಒಳಸುಳಿಗಳಾಟ
ಅಂಕೆ ಶಂಕೆಗಳು ಅಂಕು ಡೊಂಕುಗಳಿವೆಯಾದರೂ
ಅದಾವುದರ ಪರಿವೆಯಿಲ್ಲದ ನೀನು ಬೆಳೆಯುತ್ತಲೇ ಇರುವೆ
ನಾನು ಅನುಭವದ ಮೂಸೆಯಲಿ ಅರಳುತ್ತಲೇ ಇದ್ದೇನೆ.
ರೈಲು
ಎಲ್ಲರಂತಲ್ಲ ನಾನು...
ಬಯಲ ಬೆಳಕಿನಲ್ಲಿ ಕತ್ತಲು ಕೊರೆಯುವಲ್ಲಿ
ಓಡಬೇಕು; ಓಡುತ್ತಲೇ ಇರಬೇಕು
ಉಬ್ಬರದ ಅಬ್ಬರದಿ ಬಂದೆರಗುವ ಜನಸಾಗರಕೆ ತೀರವಾಗಬೇಕು
ಶಾಂತವಾಗಿ ನಿರ್ವಾಹವಾಗಿ ಜೀವಜೀವಗಳ ನಿಜಬಂಧುವಾಗಿ
ತುಂಬಿಕೊಂಡಂತೆ ಖಾಲಿಯಾಗುತ್ತಲೇ ಇರಬೇಕು
ಜೀವನದ ಇತಿಮಿತಿಯಲಿ ಗತಿ ತಿರುಗಿದಂತೆ
ಹಳಿಗಳೂ ಬದಲಾಗುತ್ತವೆ, ಎಲ್ಲೋ
ಕವಲೊಡೆದು ಇನ್ನೆಲ್ಲೋ ಕೂಡುತ್ತವೆ
ಉದ್ವೇಗ ಉನ್ಮಾದಗಳ ಬದಿಗೊತ್ತಿ
ನಯನಾಜೂಕಿನಲಿ ನಡೆಯಬೇಕು
ಕೆಂಪು ನಿಶಾನೆಯೆದುರು ಸಮಾಧಾನಿಯಾಗಿರಬೇಕು
ಎಲ್ಲರಂತಲ್ಲ ನಾನು...
ಕನಸಿಗೆ ಕಚಗುಳಿಯಿಟ್ಟು ನೂಕುವ ರಾಯಭಾರಿಯಾಗಬೇಕು
ಚಿಣ್ಣರ ಕೇಕೆ, ಹರೆಯದ ಬಯಕೆ, ಇಳಿವಯಸ್ಸಿನ ಬೇಗೆಗೆ
ನಿತ್ಯವೂ ಹೊಸ ಆಹ್ಲಾದವನೀಯುತ ಭರವಸೆಯ ಬೆಳಕಾಗಬೇಕು
ಮುಗ್ಗರಿಸಿದವರ ನೋವಿಗೆ ಸಾಂತ್ವನವಾಗಬೇಕು
ಅರಿವಿನ ಅರವಟಿಗೆಯಲಿ ಒಡಲು ಗಟ್ಟಿಯಾಗುತಿರಬೇಕು
ನವರಸ ಭಾವ ವಿಭಾವಗಳ ತಾಳಮೇಳದೊಳಗೆ
ಕೋಟಿ ಮನಸ್ಸುಗಳು ಹರಿಯುವುದು ನನ್ನೊಳಗೆ
ಸ್ವರ ವ್ಯಂಜನದೊಳು ಮೂಡಿದ ಬಿರುಕಿಗೆ ತೇಪೆ ಹಾಕಿ
ಸಮರಸ ಸಂಧಾನದ ಉಸಿರು ಚೆಲ್ಲಿ ಮುಂದಡಿಯಿಡಬೇಕು
ನನ್ನಾಂತರ್ಯದೊಳಿರುವ ಪ್ರೇಮ, ವಿರಹ ಗೀತೆಗಳೆಷ್ಟೋ...!
ಕಣ್ಣಂಜಿಕೆಗೆ ಮುಖ ಮರೆಸಿ ಕೂತ ಗುಟ್ಟುಗಳೆಷ್ಟೋ...!
ಯುಗಯುಗಾಂತರದಲಿ ಘಟಿಸಿ ಹೋದ ಕತೆಗಳಲೂ
ಮುಖ್ಯ ಪಾತ್ರಧಾರಿ, ಪರಮ ಸೂತ್ರಧಾರಿಯೂ ನಾನೇ
ಎಲ್ಲರಂತಲ್ಲ ನಾನು... ಸಾಗುತ್ತಲೇ ಇರಬೇಕು
ನಿಂತರೆ ಸ್ತಬ್ಧವಾಗಬಹುದಲ್ಲವೇ ಯಾನ...!
ನಗರದ ನರನಾಡಿಗಳಲಿ ಪ್ರವಹಿಸಿ ಪಥಿಕರ ಗಮ್ಯವಾಗಬೇಕು
ನಿತ್ಯ ಪಥದ ಧ್ಯಾನಿಯಾಗಬೇಕು.