ನಮ್ಮ ನ್ಯಾಯ
ಡಾ. ಸಬಿತಾ ಗುಂಡ್ಮಿ, ಕರ್ನಾಟಕ ರಾಜ್ಯದ ಬುಡಕಟ್ಟು ಸಮುದಾಯಗಳಾದ ಜೇನುಕುರುಬ ಮತ್ತು ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪಡೆದ ಪ್ರಥಮ ಮಹಿಳೆ. 1986ರಲ್ಲಿ ಜನಿಸಿರುವ ಡಾ. ಸಬಿತಾರವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ. ಪದವಿಯಲ್ಲಿ ದ್ವಿತೀಯ ರ್ಯಾಂಕ್‌ನೊಂದಿಗೆ ತೇರ್ಗಡೆ ಹೊಂದಿ, 2010ರಲ್ಲಿ ಪ್ರಥಮ ಪ್ರಯತ್ನದಲ್ಲಿ ಯುಜಿಸಿ ನೆಟ್ ಹಾಗೂ 2011ರಲ್ಲಿ ಸ್ಲೆಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ‘ಇವ್ಯಾಲ್ಯುವೇಶನ್ ಆಫ್ ಪಾಲಿಸಿಸ್ ಆ್ಯಂಡ್ ಪ್ರೋಗ್ಸಾಮ್ಸ್ ಆಫ್ ಡೆವಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್ -ಎ ಸಿಚ್ಯುವೇಶನ್ ಅನಾಲಿಸಿಸ್’ ಎಂಬ ವಿಷಯದಲ್ಲಿ ಪ್ರಬಂಧ ಮಂಡಿಸಿ 2022ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಹೊಸದಿಲ್ಲಿಯ ಜೆಎನ್‌ಯು ಸೇರಿದಂತೆ ರಾಜ್ಯದ ಪ್ರತಿಷ್ಠಿತ ವಿವಿ ಮತ್ತು ಕಾಲೇಜುಗಳಲ್ಲಿ ಕಾರ್ಯಾಗಾರ, ವಿಚಾರ ಸಂಕಿರಣ ಮತ್ತು ಸಮ್ಮೇಳನಗಳಲ್ಲಿ ಭಾಗವಹಿಸಿರುವ ಇವರು, ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲೂಕಿನ ನೀಲೇಶ್ವರದಿಂದ ಉತ್ತರದ ಕುಂದಾಪುರ ತಾಲೂಕಿನ ಬೈಂದೂರಿನ ವರೆಗೆ ಮೂಲ ವಾಸಿಗಳಾದ ಕೊರಗರು ನೆಲೆಗೊಂಡಿದ್ದಾರೆ. ಜೊತೆಗೆ ಬೆರಳೆಣಿಕೆಯಷ್ಟು ಜನರು ಇತರ ಜಿಲ್ಲೆಗಳಲ್ಲಿಯೂ ವಾಸಿಸುತ್ತಿದ್ದಾರೆ. ಸಾಂಸ್ಕೃತಿಕ, ಭಾಷಿಕ ಮತ್ತು ಧಾರ್ಮಿಕವಾಗಿ ಬಹಳ ಮುಕ್ತವಾಗಿ ಪ್ರಕೃತಿಯೊಂದಿಗೆ ಬದುಕುವ ಕೊರಗರು ತಮ್ಮದೇ ಸಾಮಾಜಿಕ ಕಟ್ಟುಪಾಡುಗಳನ್ನು ವಿಧಿಸಿಕೊಂಡು ತಮ್ಮದೇ ಆದಂತಹ ಒಂದು ಒಳ ಆಡಳಿತ ನ್ಯಾಯಾಂಗ ಪದ್ಧತಿಯನ್ನು ಅಳವಡಿಸಿಕೊಂಡಿರುತ್ತಾರೆ. ಅದನ್ನು ನಮ್ಮ ನ್ಯಾಯ ಎಂದು ಕರೆಯುವರು. ಕೋರ್ಟು ಕಚೇರಿಗಳು ಇಲ್ಲದ ಕಾಲಘಟ್ಟದಲ್ಲಿ ಸಮುದಾಯವು ತನ್ನ ಮೌಖಿಕ ವಿಧಿ ವಿಧಾನಗಳಿಂದ, ಕಟ್ಟುಪಾಡುಗಳಿಂದ ವಾದ ವಿವಾದಗಳನ್ನು ಬಗೆಹರಿಸಿ ತಮ್ಮ ಸರಳ ಸಂಬಂಧಗಳನ್ನು ಸುವ್ಯವಸ್ಥೆಯಲ್ಲಿಟ್ಟುಕೊಂಡಿತ್ತು. ಹಾಗಾಗಿ ಕೊರಗರ ಜೀವ ಮತ್ತು ಜೀವನಕ್ರಮಗಳು ನೈಸರ್ಗಿಕ ನ್ಯಾಯದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಜಾಗತಿಕ ಮೌಲ್ಯಗಳ ಹೊಡೆತಕ್ಕೆ ಒಳಗಾದ ಸಮುದಾಯ ತನ್ನ ಮೌಖಿಕ ಮೌಲ್ಯಗಳಿಂದ ಕಡೆಗಣಿಸಲ್ಪಟ್ಟಿದೆ. ಕೊರಗರನ್ನು ಅಕ್ಷರಸ್ಥ ಅಥವಾ ತಂತ್ರಜ್ಞಾನ ಆಧಾರಿತದ ಸಮಾಜದ ಹೊರತಾಗಿ ನೋಡಿದರೆ ಕೊರಗರಲ್ಲಿ ನ್ಯಾಯಕ್ಕೆ ಸಂಬಂಧಿಸಿದ ಯಾವುದೇ ಲಿಖಿತ ಪುರಾವೆಗಳು ಸಿಗುವುದಿಲ್ಲ. ಆದರೆ ಭಾಷೆ, ನಂಬಿಕೆ, ಆಚರಣೆ, ಪದ್ಧತಿ, ನಿಯಮ, ರೂಢಿ ಮತ್ತು ಲೋಕದೃಷ್ಟಿಗಳಲ್ಲಿ ಜೀವಪರ ಮೌಲ್ಯಗಳ ಕುರುಹುಗಳಿರುವುದು ಕಾಣಬಹುದು.
ಕೊರಗರಲ್ಲಿ ಹುಟ್ಟು ಮತ್ತು ಸಾವು ಎರಡಕ್ಕೂ ಸಮಾನವಾದ ಮಹತ್ವವಿದೆ. ಹೆಣ್ಣು ಲಿಂಗ ಎನ್ನುವ ಕಾರಣಕ್ಕೆ ದೂಷಿಸಲ್ಪಡುವ ಅಥವಾ ಮರ್ಯಾದೆ ಹತ್ಯೆಗೊಳಗಾಗುವ ಹೆಣ್ಣು ಕೊರಗ ಸಮುದಾಯದೊಳಗೆ ಮರುಜೀವವನ್ನು ಪಡೆಯುತ್ತಾಳೆ. ತಾನು ಹೆಣ್ಣಾಗಿ ಹುಟ್ಟುವ ಸಮಾನ ಅವಕಾಶವನ್ನು ಸಂಭ್ರಮದಿಂದ ಪಡೆಯುತ್ತಾಳೆ. ಕ್ಷಯ ಎಂದು ಕರೆಯಲ್ಪಡುವ ಸಾವು ಕೂಡ ಸಮುದಾಯದಲ್ಲಿ ವೃದ್ಧಿಯ ಸಂಕೇತ. ಇಹಲೋಕ ತ್ಯಜಿಸಿದ ನಂತರವೂ ಕೊರಗ ವ್ಯಕ್ತಿಗಳು ಸಮುದಾಯವನ್ನು ಬೆಂಗಾವಲಾಗಿ ಕಾಯುತ್ತಾರೆ ಎನ್ನುವ ನಂಬಿಕೆ ಇದೆ. ವಾನಪ್ರಸ್ಥದಲ್ಲಿ ವೃದ್ಧರು ತಮ್ಮ ಅಂತ್ಯ ಕಾಲವನ್ನು ಕಾಡಿನಲ್ಲಿ ಏಕಾಂಗಿಯಾಗಿ ಕಳೆಯುವ ಕಲ್ಪನೆಗಿಂತ ವಿರುದ್ಧವಾದ ಮೌಲ್ಯ ಕೊರಗರ ನಡೆ ಮತ್ತು ನುಡಿಯಲ್ಲಿ ಅಡಗಿದೆ. ಹಾಗಾಗಿ ಕೊರಗರಲ್ಲಿ ವೃದ್ಧಾಪ್ಯಕ್ಕೆ ವಿಶೇಷವಾದ ಸ್ಥಾನವಿದೆ. ಜೊತೆಗೆ ಅವರ ಇರುವಿಕೆ, ಜ್ಞಾನ ಮತ್ತು ಲೋಕದೃಷ್ಟಿ ಸಮುದಾಯಕ್ಕೆ ಹಿರಿಮೆಯಾಗಿದೆ. ಹಾಗಾಗಿ ನಿರ್ಲಕ್ಷ್ಯಕ್ಕೀಡಾಗುವ ಹೆಣ್ಣು ಲಿಂಗ, ಅನಾಥ ಮಕ್ಕಳು, ವೃದ್ಧರು, ವಿಧವೆಯರು, ದಿವ್ಯಾಂಗರು ಸಮುದಾಯದೊಳಗೆ ಮುಕ್ತವಾಗಿ ಬದುಕುವ ಸಮಾನ ಅವಕಾಶ ಕೊರಗರ ನ್ಯಾಯ ನೀಡುತ್ತದೆ.
ನ್ಯೆತಿಕವಾಗಿ ಹಿರಿಯರಿಂದ ಒಪ್ಪಿತವಾದ ಮೌಲ್ಯವನ್ನು ಕೊರಗರು ತಮ್ಮ ಜೀವನಕ್ರಮದಲ್ಲಿ ಅಂತರ್ಗತಗೊಳಿಸಿ, ಭೌತಿಕವಾದ ಸಂಪನ್ಮೂಲಗಳನ್ನು ಇತರ ಜೀವ ವ್ಯೆವಿಧ್ಯತೆಯೊಂದಿಗೆ ಮುಕ್ತವಾಗಿ ಅನುಭವಿಸುವ ಬೌದ್ಧಿಕತೆಯನ್ನು ಹೊಂದಿದ್ದಾರೆ. ಉದಾಹರಣೆಗೆ ಕೊರಗರು ಅರಣ್ಯ ಮೂಲ ಪರಂಪರೆಯನ್ನು ಹೊಂದಿದ್ದು ಆ ಅರಣ್ಯದಲ್ಲಿ ತಮ್ಮ ಜೀವನಾಧಾರಕ್ಕಾಗಿ ಬೇಕಾದ ಬೇರು, ಬಿಳಲು, ಬಿದಿರುಗಳನ್ನು ತೆಗೆದು ಉಳಿದಂತೆ ಅದು ಕೂಡ ತನ್ನ ಸಂತತಿಯನ್ನು ಮುಂದುವರಿಯಲು ಅನುವು ಮಾಡಿಕೊಡುವ ನೈತಿಕ ಹೊಣೆಗಾರಿಕೆ ಹಿರಿಯರು ಆಚರಣೆಯಲ್ಲಿಟ್ಟುಕೊಂಡಿದ್ದಾರೆ. ತಾವು ಮಾಡುವ ಬುಟ್ಟಿಯ ಬಿಳಲನ್ನೂ ಸಂಪೂರ್ಣವಾಗಿ ಕಡಿದು ತಮ್ಮ ವಶ ಮಾಡಿಕೊಳ್ಳುವ ಪ್ರಮೇಯವೇ ಇರುವುದಿಲ್ಲ. ಈ ನೈಸರ್ಗಿಕ ಸಂಪನ್ಮೂಲ ಪ್ರತಿಯೊಬ್ಬರಿಗೂ ಸೇರಿದ್ದು. ಜೊತೆಗೆ ಮುಂದಿನ ಪೀಳಿಗೆಗೂ ಉಳಿಸಬೇಕಾಗಿದೆ ಎನ್ನುವ ದೂರದೃಷ್ಟಿಯನ್ನು ಹೊಂದ್ದಿದ್ದಾರೆ. ಈ ಭೌತಿಕವಾದ ಕಲ್ಲು, ಗಿಡ, ಮರ, ಭೂಮಿ, ಸೂರ್ಯ, ಚಂದ್ರ, ನಕ್ಷತ್ರ, ಗಾಳಿ, ಬೆಳಕು, ನೀರು ಎಲ್ಲವೂ ಕೊರಗರಿಗೆ ದೇವರು. ಜೊತೆಗೆ ಈ ಪ್ರಕೃತಿಯೊಂದಿಗೆ ನಡೆಯುವುದೇ ಧರ್ಮವಾಗಿದೆ. ಹಾಗಾಗಿ ಕೊರಗರು ಈ ಎಲ್ಲವನ್ನು ಮರದಡಿಯಲ್ಲಿ ಆರಾಧಿಸುವ ಮತ್ತು ಸಂರಕ್ಷಿಸುವ ಆಧ್ಯಾತ್ಮಿಕತೆಯೊಂದಿಗೆ ಬದುಕಿದ್ದಾರೆ.
ಆದಿ ಧರ್ಮದ ಆರಾಧಕರಾದ ಕೊರಗರು ತಾವುಗಳು ಪ್ರಕೃತಿಯ ಒಂದು ಭಾಗ ಎಂಬ ನಂಬಿಕೆಯೊಂದಿಗೆ ಬದುಕುತ್ತಾರೆ. ಅದಕ್ಕೆ ಪೂರಕವಾದ ಜೀವನ ಶೈಲಿಯನ್ನು ಹೊಂದಿದ್ದಾರೆ. ಪ್ರಕೃತಿಯ ಒಡನಾಟದಲ್ಲಿರುವ ಕೊರಗರು ಎಲ್ಲಿಯೂ ಕೂಡ ಕಾಡನ್ನು ನಾಶ ಮಾಡಿ ತಮ್ಮ ಆರ್ಥಿಕತೆಯಲ್ಲಿ ಲಾಭ ಪಡೆಯುವ ಅಥವಾ ಗಣಿಗಾರಿಕೆ ಮಾಡಿರುವ ಉದಾಹರಣೆಗಳು ಇಲ್ಲ. ಕೊರಗರ ಧರ್ಮದಲ್ಲಿ ಸುಸ್ಥಿರತೆಗೆ ಹೆಚ್ಚು ಮಹತ್ವವಿದೆ. ಯಾವುದೋ ನಡು ದಾರಿಯ ಕಸದ ತೊಟ್ಟಿಯಲ್ಲಿ ಬಿಸಾಕಿದ ನವಜಾತ ಶಿಶುವನ್ನು ಎತ್ತಿ ತಂದು ಸಾಕುವ ಕೊರಗ ಕುಟುಂಬವು ಕೇವಲ ಮಾನವೀಯತೆಯ ಮೌಲ್ಯವನ್ನು ಹೊಂದಿರುವುದು ಮಾತ್ರವಲ್ಲದೆ ‘ಮುಖ್ಯವಾಹಿನಿ ಸಮಾಜ’ ಎಂದುಕೊಳ್ಳುವ ಸಮಾಜಕ್ಕೆ ಬೇಡವಾದ ಶಿಶುವನ್ನು ಎತ್ತಿ ತಂದು ಸಾಕಿ ಸಲಹುವ ಧರ್ಮವನ್ನು ಉಳಿಸಿಕೊಂಡಿದೆ. ಈ ನಂಬಿಕೆ ಮತ್ತು ಮೌಲ್ಯವು ಕೊರಗ ಹಿರಿಯರ ಘನತೆಯನ್ನು ಹೆಚ್ಚಿಸಿದೆ.
ಮನುಷ್ಯ ಹುಟ್ಟಿನಿಂದ ಸ್ವತಂತ್ರ ಜೀವಿಯಾಗಿದ್ದರೂ ಕೂಡ ಸಂಬಂಧದೊಳಗೆ ಬಂದಿಯಾಗುತ್ತಾನೆ ಎನ್ನುವಂತೆ ಗಂಡ-ಹೆಂಡತಿ, ತಂದೆ-ತಾಯಿ, ಮಕ್ಕಳು ಹೀಗೆ 4-5 ಪೀಳಿಗೆಯೊಂದಿಗೆ ಕೂಡು ಕುಟುಂಬದ ಸಂಬಂಧವನ್ನು ಹೊಂದಿದ್ದಾರೆ. ಈ ಸಂಬಂಧಗಳ ನಡುವೆ ಹುಟ್ಟುವ ವಾದ ವಿವಾದಗಳನ್ನು ಬಹಳ ನಾಜೂಕಿನಿಂದ ಮತ್ತು ಸರಳವಾಗಿ ಬಗೆಹರಿಸುವ ವಿಧಿ ವಿಧಾನಗಳು ಇವೆ. ಉದಾಹರಣೆ ಸಾಮಾಜಿಕವಾದ ಅನಿಷ್ಟ ಪದ್ಧತಿಯಾದ ಅಜಲಿನಲ್ಲಿಯೂ ಕೊರಗರ ನಡುವೆ ವಾದ ವಿವಾದಗಳು ಹುಟ್ಟಿದ್ದು ಇವೆ. ಕೊರಗರು ತಾವು ಪ್ರತಿನಿಧಿಸುವ ಅಜಲು ಕ್ಷೇತ್ರವನ್ನು ಬಿಟ್ಟು ಇತರರ ಅಜಲು ಕ್ಷೇತ್ರವನ್ನು ಪ್ರಜ್ಞಾಪೂರ್ವಕವಾಗಿ ದಾಟುತ್ತಿರಲಿಲ್ಲ. ಯಾಕೆಂದರೆ ತಮ್ಮ ಪರಿಧಿಯೊಳಗೆ ಮಾತ್ರ ಅವಕಾಶವನ್ನು ಪಡೆಯಬಹುದಾಗಿತ್ತು ಜೊತೆಗೆ ಇತರ ಕೊರಗರಿಗೂ ಬದುಕುವ ಮುಕ್ತ ಅವಕಾಶಗಳು ಇತ್ತು. ಈ ಮೌಖಿಕ ವಿಧಿಗಳಿಗೆ ಇಂತಹುದೇ ಕಠಿಣವಾದ ಶಿಕ್ಷೆಗಳೆಂದೇನು ಇರಲಿಲ್ಲ. ಆದರೆ ಅಜಲು ಕ್ಷೇತ್ರ ದಾಟಿದ್ದಲ್ಲಿ ತಪ್ಪು ದಂಡವನ್ನು ನೀಡಬೇಕಾಗಿತ್ತು. ಹಬ್ಬ ಹರಿದಿನಗಳಲ್ಲಿ ಒಂದು ವೇಳೆ ಇತರರ ಅಜಲಿನಲ್ಲಿ ತಿರುಗಾಡಿದರೆ ತಾವು ಬೇಡಿ ತಂದ ಆಹಾರ ಪದಾರ್ಥಗಳನ್ನು ತಪ್ಪು ದಂಡವಾಗಿ ಸಮಪಾಲು ನೀಡಬೇಕಾಗಿತ್ತು. ಇದು ತಪ್ಪಿತಸ್ಥ ಕೊರಗರಿಗೆ ಇನ್ನೊಬ್ಬರ ಊಟದ ತಟ್ಟೆಗೆ ಕೈ ಹಾಕಬಾರದು ಎನ್ನುವ ನೀತಿ ಪಾಠವೂ ಆಗಿತ್ತು. ತನ್ನ ಪರಿಮಿತಿಯೊಳಗೆ ತನ್ನ ಅವಕಾಶವನ್ನು ಪಡೆದು ಇತರರಿಗೂ ಅವಕಾಶನೀಡಬೇಕೆಂದು ಈ ಕಟ್ಟುಪಾಡುಗಳು ಕಲಿಸಿಕೊಡುತ್ತಿತ್ತು. ಎಂಜೆಲೆಲೆಯನ್ನು ಸಂಗ್ರಹಿಸುವಾಗಲೂ ಕಾಗೆ, ಹದ್ದು, ನಾಯಿಗಳ ಜೊತೆಜೊತೆಗೆ ತನ್ನ ಕೂಡು ಕುಟುಂಬದ ಜೊತೆ ಹಂಚಿ ತಿನ್ನುವ ನ್ಯಾಯ ಇತ್ತು.
ಹೀಗೆ ಪ್ರತಿಯೊಂದು ಸಂಬಂಧಗಳು ಅಂದರೆ ಗಂಡ-ಹೆಂಡತಿಯ ಸಂಬಂಧ, ತಂದೆ-ಮಕ್ಕಳ, ನೆರೆಹೊರೆ ಈ ಸಂಬಂಧಗಳ ನಡುವೆ ಪರಸ್ಪರ ಹುಟ್ಟುವ ಪ್ರೀತಿ, ಪ್ರೇಮ, ಮಮತೆ, ದ್ವೇಷ, ಭೇದಗಳು ಆ ಕಾಲಕ್ಕೆ ಸರಳವು ಆಗಿತ್ತು. ಇತ್ತೀಚಿನ ನಮ್ಮ ನ್ಯಾಯದಲ್ಲಿ ಬಗೆಹರಿದ ಒಂದು ವಿವಾದ ಅವಲೋಕಿಸಿದರೆ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿ ಸುಮಾರು ಹತ್ತು ವರುಷಗಳನ್ನು ಪೂರೈಸಿ ಜೊತೆಗೆ ಎರಡು ಮುದ್ದಾದ ಮಕ್ಕಳನ್ನು ಪಡೆದಿದ್ದರು. ಆದರೆ ಪ್ರಸ್ತುತ ಅವರಿಗೆ ತಮ್ಮ ದಾಂಪತ್ಯದಲ್ಲಿ ಬಿರುಕಾಗಿದ್ದು ಇನ್ನು ಮುಂದೆ ಸಹ ಜೀವನ ಅಸಾಧ್ಯ ಎನ್ನುವ ಮಟ್ಟಿಗೆ ಮುಟ್ಟಿತು. ಜೊತೆಗೆ ಅವರ ದಾಂಪತ್ಯ ಬಿರುಕಿಗೆ ಕಾರಣವು ಸರಳ. ಪುರುಷನ ವಾದ ಮಹಿಳೆ ಮನೆ ಕೆಲಸ ಮಾತ್ರ ಮಾಡುವುದು ಆದರೂ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿಲ್ಲ. ಆದೇ ಮಹಿಳೆಯ ವಾದ, ತನಗೆ ದಿಕ್ಕು ದಿಸೆ ಇಲ್ಲ, ಎಲ್ಲವನ್ನೂ ತನ್ನ ಗಂಡನಿಗಾಗಿ ಬಿಟ್ಟು ಬಂದಿದ್ದೇನೆ. ಆದರೆ ಗಂಡ ಕುಟುಂಬದ ಜವಾಬ್ದಾರಿ ತೆಗೆದುಕೊಳ್ಳುವ ಬದಲಿಗೆ ಕುಡಿದು ಬರುತ್ತಾನೆ. ಜೊತೆಗೆ ತಾನು ಪಕ್ಕದ ಮನೆಗೂ ಹೋಗಬಾರದು ಎಂದು ತಡೆಯುತ್ತಾನೆ. ಕುಡಿತದ ಚಟಕ್ಕೆ ಬಲಿಯಾಗಿರುವ ತನ್ನ ಗಂಡ ಅಪಘಾತಕ್ಕೊಳಗಾಗಿ ದುಡಿಮೆ ಇಲ್ಲದಂತಹ ಪರಿಸ್ಥಿತಿ ಉಂಟಾಗಿದೆ. ಈ ಎರಡು ವಾದ ವಿವಾದಗಳು ಇವತ್ತಿನ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಿಂದಾಗಿ ಉತ್ಪತ್ತಿಯಾಗಿದೆ.
ದಾಂಪತ್ಯದ ಬಗ್ಗೆ ಅರಿವಿಲ್ಲದ ವಯಸ್ಸಿನಲ್ಲಿ ನಾನು ಕಂಡ ನನ್ನ ಅಜ್ಜ ಮತ್ತು ಅಜ್ಜಿಯರ ದಾಂಪತ್ಯ ಪರಸ್ಪರ ಅನ್ಯೋನ್ಯವಾಗಿತ್ತು. ಹಾಗಂತ ನನ್ನಜ್ಜನಿಗೆ ನನ್ನಜ್ಜಿ ಮೊದಲ ಪತ್ನಿಯಲ್ಲ ಹಾಗೇ ಅಜ್ಜಿಗೆ ಮೊದಲ ಪತಿಯೂ ಅಲ್ಲ. 60 ವರುಷದ ನಮ್ಮಜ್ಜ ತಿಂಗಳಿಗೊಮ್ಮೆ ಮನೆಗೆ ಭೇಟಿ ಕೊಡುತ್ತಿದ್ದರು. ನಮ್ಮಜ್ಜ ಅಜ್ಜಿಯ ಬಟ್ಟೆಯನ್ನು ಒಗೆಯುತ್ತಿದ್ದರು. ಮನೆ, ಅಂಗಳವನ್ನೆಲ್ಲ ಸ್ವಚ್ಛವಾಗಿ ಗುಡಿಸುತ್ತಿದ್ದರು. ಜೊತೆಗೆ ಪಕ್ಕದ ಸೇಂದಿ ಅಂಗಡಿಗೆ ಒಟ್ಟಿಗೆ ಹೋಗಿ ಕುಡಿಯುತ್ತಿದ್ದರು. ಹಾಗೆಯೇ ಅಜ್ಜಿಯು ಕೂಡ ಮನೆಯಲ್ಲಿ ಮಣ್ಣಿನ ಪಾತ್ರೆಯಲ್ಲಿ ಬಹಳ ರುಚಿಕರವಾದ ಅನ್ನವನ್ನು ಬೇಯಿಸಿ ಎಲ್ಲರಿಗೂ ಪ್ರೀತಿಯಿಂದ ಹಂಚುತ್ತಿದ್ದರು. ಬುಟ್ಟಿಯಿಂದ ಸಂಪಾದಿಸಿದ ಹಣವನ್ನು ವೈಯಕ್ತಿಕ ಸ್ವಾಯತ್ತತೆಯೊಂದಿಗೆ ಮನೆಯವರಿಗಾಗಿ ಖರ್ಚು ಮಾಡುತ್ತಿದ್ದರು. ಎಲ್ಲಿಯೂ ಕೂಡ ಸ್ವಚ್ಛತೆ ಹೆಣ್ಣಿನ ಕೆಲಸ, ಮನೆಯ ನಿರ್ವಹಣೆ ಗಂಡಿನ ಕೆಲಸ ಎಂಬ ಖಡಾ ಖಂಡಿತವಾದ ಭಿನ್ನತೆ ಇರಲಿಲ್ಲ. ಹಾಗಾಗಿ ನಮ್ಮ ಹಿರಿಯರು ಒಪ್ಪಿತವಾದ ಮೌಲ್ಯಗಳನ್ನು ತಮ್ಮ ಜೀವನಗಳಲ್ಲಿ ಅಂತರ್ಗತ ಗೊಳಿಸಿಕೊಂಡು ಮುಕ್ತವಾದ ಮದುವೆಯ ಆಯ್ಕೆಯೊಂದಿಗೆ ತಮ್ಮ ದಾಂಪತ್ಯಗಳನ್ನು ಕೂಡ ಕಟ್ಟುಪಾಡುಗಳೊಂದಿಗೆ ಸುವ್ಯವಸ್ಥಿತವಾಗಿ ಇಟ್ಟುಕೊಳ್ಳುತ್ತಿದ್ದರು.
ಆ ಕಾಲಘಟ್ಟದಲ್ಲಿ ಕೊರಗರ ನಡುವಿನ ಪರಸ್ಪರ ಸಂಬಂಧಗಳು ಧನಾತ್ಮಾಕವಾದ ಪ್ರೀತಿ ಬಾಂಧವ್ಯಕ್ಕೆ ಹೆಚ್ಚು ಒತ್ತು ನೀಡುತ್ತಿತ್ತು. ಪ್ರಸ್ತುತ ಸಂಕೀರ್ಣವಾದ ಸಾಮಾಜಿಕ ಕಾಲಘಟ್ಟದಲ್ಲಿ ಸಮಾಜದ ಚಲನೆಯ ಜೊತೆಗೆ ಆರ್ಥಿಕತೆಯ ಮೂಲಗಳು ಬದಲಾಗಿ ಲಭ್ಯವಿರುವ ಸಂಪನ್ಮೂಲಗಳ ನಿರ್ವಹಣೆಯು ಸಮುದಾಯದ ಸಂಬಂಧಗಳನ್ನು ಇನ್ನಷ್ಟು ಜಟಿಲಗೊಳಿಸುತ್ತಿವೆ. ಹಿಂದಿನ ಕಾಲದಲ್ಲಿ ಹಿರಿಯರು ಬುಟ್ಟಿ ಹೆಣೆಯುವ ಮುಖ್ಯ ಕಸುಬು ಆಗಿದ್ದು ಅದರಿಂದ ಬರುವ ತಲಾ ಆದಾಯವು ಎಲ್ಲಾ ಮನೆಗಳಲ್ಲಿ ಒಂದೇ ಆಗಿತ್ತು. ಜೊತೆಗೆ ಅಜಲು ಕ್ಷೇತ್ರಗಳಿಂದ ಬೇಡಿ ತಂದ ಆಹಾರ ಪದಾರ್ಥಗಳನ್ನು ಹಂಚಿ ತಿನ್ನುವ ಸಮಾನ ಮನಸ್ಸಿತ್ತು. ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಇಬ್ಬರು ಬುಟ್ಟಿ ಹೆಣೆಯುವುದರಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಆದರೆ ಇವತ್ತು ಆಧುನಿಕ ಮತ್ತು ಜಾಗತೀಕರಣದ ಪರಿಣಾಮವಾಗಿ ಸಮುದಾಯದ ಜನರು ಆದಾಯಕ್ಕಾಗಿ ಬೇರೆ ಬೇರೆ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪುರುಷರು ಮಾತ್ರ ಉದ್ಯೋಗಕ್ಕೆ ಹೋಗುವುದು, ಮಹಿಳೆಯರು ಮನೆಯ ಎಲ್ಲಾ ಕೆಲಸಗಳನ್ನು ಸಂಭಾವನೆಯಿಲ್ಲದೇ ನಿರ್ವಹಿಸಬೇಕಾದ ಮತ್ತು ಮನೆಯಲ್ಲಿ ದುಡಿಯುವ ವ್ಯಕ್ತಿಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿಗಳು ಒದಗಿಬಂದಿವೆ. ಪಾಶ್ಚಿಮಾತ್ಯ ದೇಶದ ಮೌಲ್ಯವಾದ ‘ಪಾಧರ್ ಇಸ್ ದಿ ಬ್ರೆಡ್ ವಿನ್ನರ್’ ಎನ್ನುವುದಕ್ಕೆ ಹೆಚ್ಚು ಒತ್ತು ನೀಡುವಂತಿದೆ. ಸಮ ಶ್ರಮದಲ್ಲಿ ತೊಡಗಿಕೊಂಡಿದ್ದ ಗಂಡು ಮತ್ತು ಹೆಣ್ಣು ಇವತ್ತು ಗಂಡಿನ ಶ್ರಮವನ್ನು ಮಾತ್ರ ಉತ್ಪತ್ತಿಯಾಗಿ ವೈಭವೀಕರಿಸುವುದು ಕಾಣುತ್ತೇವೆ. ಬುಡಕಟ್ಟುಗಳಲ್ಲಿ ಗಂಡು ಬೇಟೆಗೆ ಹೋಗಿ ಆಹಾರಗಳನ್ನು ಸಂಗ್ರಹಿಸುತ್ತಿದ್ದು ಕುಟುಂಬದ ಎಲ್ಲ ಸದ್ಯಸರಾದ ಹೆಂಡತಿ, ಮಕ್ಕಳು, ಕುಟುಂಬಸ್ಥರನ್ನು ಸಾಕುವ ಜವಾಬ್ದಾರಿಯನ್ನು ಹೊಂದಿದ್ದಾಗಿಯೂ ಮಹಿಳೆಯು ಸಮಾನವಾದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಮಹಿಳೆ ಮನೆಯಿಂದ ಹೊರಗೆ ಹೋಗದೆಯೇ ಮನೆಯೊಳಗೆ ಮಾತ್ರವೇ ದುಡಿದು ಜೊತೆಗೆ ಆ ದುಡಿಮೆಗೆ ಸಂಭಾವನೆಯನ್ನು ನಿರೀಕ್ಷಿಸದೇ ಬದುಕಬೇಕಾದ ಹೊಂದಾಣಿಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಒದಗಿದೆ. ಜೊತೆಗೆ ಹೊರಗೆ ಹೋಗಿ ದುಡಿಯುವ ಗಂಡ ತನ್ನದೇ ಸಂಪಾದನೆ ಎನ್ನುವಂತೆ ಕುಟುಂಬಕ್ಕೂ ವೆಚ್ಚ ಮಾಡದೆ ಕುಡಿತ, ಧೂಮಪಾನ ಇತ್ಯಾದಿ ದುಶ್ಚಟಗಳಿಗೆ ತನ್ನ ಹಣ ಪೋಲು ಮಾಡುತ್ತಿರುವುದು ಕಾಣುತ್ತೇವೆ. ಒಂದು ವೇಳೆ ಹೆಣ್ಣು ದುಡಿದರೆ ತನ್ನ ಎಲ್ಲಾ ಸಂಭಾವನೆಯನ್ನು ಕುಟುಂಬಕ್ಕಾಗಿ ಮುಡಿಪಾಗಿಡಬೇಕಾದ ಪರಿಸ್ಥಿತಿಗಳು ಒದಗಿಬರುತ್ತವೆ.
ವಿಭಕ್ತ ಕುಟುಂಬದಲ್ಲಿ ಹೆಣ್ಣು ತಾನು ಸಂಪಾದನೆಯಿಲ್ಲದೇ ಮನೆಯ ಪೂರ್ತಿ ಕೆಲಸವನ್ನು ನಿರ್ವಹಿಸಿ ಜೊತೆಗೆ ತಾನು ಮುಕ್ತವಾಗಿ ಇತರರೊಂದಿಗೆ ಮಾತುಕತೆಗೂ ನಿರ್ಬಂಧದ ಪರಿಸ್ಥಿತಿ ಹೆಣ್ಣಿನ ಪಾಲಾಗುತ್ತದೆ. ಈ ಕಾರಣದಿಂದ ಇವತ್ತು ನ್ಯಾಯ ಎನ್ನುವುದು ಓರ್ವ ವ್ಯಕ್ತಿಯಿಂದ ಇನ್ನೊಂದು ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಹೆಣ್ಣು ಕೂಡ ಸಂಪಾದನೆಗಾಗಿ ಹೊರ ಪ್ರಪಂಚಕ್ಕೆ ತೆರೆದುಕೊಂಡು ಸಬಲರಾಗಬೇಕಾಗಿದೆ. ಜೊತೆಗೆ ಗಂಡು ಮತ್ತು ಹೆಣ್ಣು ಇಬ್ಬರು ಸ್ವಚ್ಛವಾದ ವಾತಾವರಣವನ್ನು ತಮ್ಮ ಮಕ್ಕಳಿಗಾಗಿ ಸೃಷ್ಟಿಸುವ ಜವಾಬ್ದಾರಿಯನ್ನು ದಂಪತಿ ನಿರ್ವಹಿಸಬೇಕಾಗಿದೆ.
ಸಮ ಶ್ರಮ ಮೌಲ್ಯ ಹಿರಿಯರಿಂದ ಬಂದಾಗಿಯೂ ಕೂಡ ಪ್ರಚಲಿತದ ಪಾಶ್ಚಿಮಾತ್ಯದ ಸಮಾನತೆಯ ಮೋಹ ಗಂಡು ತನ್ನ ಹೆಂಡತಿಯ ಆದಾಯದಲ್ಲಿ ತನಗೆ ಸಮಾನ ಪಾಲಿದೆ ಎನ್ನುವ ಅಥವಾ ಹೆಂಡತಿ ದುಡಿದರೆ ಸಾಕು ತಾನು ಜವಾಬ್ದಾರಿಯಿಂದ ಕಳಚಿಕೊಳ್ಳಬಹುದು ಎನ್ನುವ ವಾದಗಳು ಹೆಣ್ಣನ್ನು ಇನ್ನಷ್ಟು ಅನ್ಯಾಯಕ್ಕೆ, ಅಸಮಾನತಗೆ ಎಡೆಮಾಡಿಕೊಡುತ್ತದೇ ವಿನಹ ಶತ ಶತಮಾನಗಳಿಂದ ಸಂಪಾದನೆ ಇಲ್ಲದೆ ಬದುಕಿದ ಮಹಿಳೆಯ ಹಕ್ಕನ್ನೂ ಸಮಾನತೆಯ ಹೆಸರಿನಲ್ಲಿ ಮಹಿಳೆಗೆ ಅಸಮಾನ ಅವಕಾಶಗಳನ್ನು ಕಲ್ಪಿಸುತ್ತದೆ. ಹೆಣ್ಣಿನ ಆದಾಯ ಅದು ಅವಳ ಆದಾಯ ಮತ್ತು ಪುರುಷನ ಆದಾಯ ಕುಟುಂಬದ ಆದಾಯ ಎನ್ನುವ ಮಾದರಿಯನ್ನು ಹುಟ್ಟುಹಾಕಬೇಕಾಗಿದೆ.
ಈ ಹಿಂದೆ ಕುಡಿತದ ಅಮಲಿನಲ್ಲಿ ವಾದಗಳನ್ನು ಆಲಿಸಿ ತದನಂತರ ಪಕ್ಷಪಾತವಾದ ನ್ಯಾಯವನ್ನು ನೀಡಿದ ಹಲವಾರು ಘಟನೆಗಳಿವೆ. ಜೊತೆಗೆ ತಪ್ಪು ದಂಡವಾಗಿ ಮದ್ಯ, ಸೇಂದಿಯನ್ನು ತಪ್ಪಿತಸ್ಥರಿಗೆ ನೀಡಿರುವ ವಿಧಿಗಳಿವೆ. ಆದರೆ ತಪ್ಪಿತಸ್ಥರು ಷರತ್ತಿಗೆ ಬದ್ಧರಾಗಿದ್ದರೂ ನ್ಯಾಯ ತಮ್ಮ ಪರವಿಲ್ಲದ ಹಲವಾರು ಘಟನೆಗಳು ನಡೆದುಹೋಗಿವೆ. ಆ ಕಾಲಕ್ಕೆ ಇದ್ದಂತಹ ವಿವಾದಗಳಿಗೆ ಹೋಲಿಸಿದರೆ ಇವತ್ತಿನ ದಾಂಪತ್ಯ, ಭೂಮಿ, ಒಳಜಗಳ ಮತ್ತು ಕಲಹಗಳಿಗೆ ವ್ಯತ್ಯಾಸಗಳಿವೆ. ಪ್ರಸ್ತುತ ಸಂಕೀರ್ಣವಾದ ಸಾಮಾಜಿಕ ಸಂಬಂಧಗಳ ನಡುವಿನ ಪರಸ್ಪರ ಭಿನ್ನಾಭಿಪ್ರಾಯಗಳು ಇನ್ನಷ್ಟು ಜಟಿಲವಾಗುತ್ತಿವೆ. ನಮ್ಮ ವಸ್ತುನಿಷ್ಠ ನ್ಯಾಯದೊಂದಿಗೆ ಲಿಂಗತ್ವ ಮತ್ತು ಮಾನವ ಹಕ್ಕುಗಳ ಸಂವೇದನೆ ಮತ್ತು ನಮ್ಮ ಹಿರಿಯರಿಂದ ಒಪ್ಪಿತವಾದ ಮೌಲ್ಯಗಳ ಅನುಕರಣೆಯೊಂದಿಗೆ ಮಹಿಳೆ ಮತ್ತು ಪುರುಷ, ಹಿರಿಯರು ಮತ್ತು ಕಿರಿಯರ ಜೊತೆಗೆ ನ್ಯಾಯದ ಚೌಕಟ್ಟು ಬಲಗೊಳ್ಳಬೇಕಾಗಿದೆ. ಜೊತೆಗೆ ನಮ್ಮ ನ್ಯಾಯದ ಪಂಚರು ಪ್ರಜಾಪ್ರಭುತ್ವದ ನೆಲೆಯಲ್ಲಿ ನಿಷ್ಪಕ್ಷಪಾತ ವಾದವಿವಾದಗಳನ್ನು ಪರೀಕ್ಷಿಸಿ ವಿಶ್ಲೇಷಿಸಬೇಕಾಗಿದೆ
.