ಕನ್ನಡ ನಾಡು ನುಡಿಯ ರಾಜಮಾರ್ಗ
ಮೈಸೂರು ಮಹಾರಾಜಾ ಕಾಲೇಜಿನಿಂದ ಪತ್ರಿಕೋದ್ಯಮ ಪದವಿಯನ್ನು, ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್.ಡಬ್ಲ್ಯೂ.ಪದವಿಯನ್ನು, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರ್ ಆಫ್ ಲಿಟರೇಚರ್ ಪದವಿಯನ್ನು ಪಡೆದವರು ಡಾ. ಬಂಜಗೆರೆ ಜಯಪ್ರಕಾಶ್. ಜನರನ್ನು ಸಂಘಟಿಸಿ, ಜಾಗೃತಿಗೊಳಿಸಿ ಜಲ ಹೋರಾಟಗಳನ್ನು ಕಟ್ಟಿದರು. ವಸಂತ ಮೇಘಗರ್ಜನೆ (ಅನುವಾದ ಹಾಗೂ ಸಂಪಾದನೆ), ಲಾಲ್ ಬನೋ ಗುಲಾಮಿ ಛೋಡೋ ಬೋಲೊ ವಂದೇ ಮಾತರಮ್ (ಎನ್ಕೆ ಕವನಗಳ ಅನುವಾದ), ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ಇವರ ತೆಲುಗು ಕವಿತೆಗಳ ಅನುವಾದ), ಸಮುದ್ರ ಮತ್ತು ಇತರ ಕವಿತೆಗಳು (ವರವರರಾವ್ ಇವರ ತೆಲುಗು ಕವಿತೆಗಳ ಅನುವಾದ), ತಲೆಮಾರು (ಅಲೆಕ್ಸ್ ಹೀಲಿಯ ’ರೂಟ್ಸ್’ ಕಾದಂಬರಿಯ ಸಂಗ್ರಹಾನುವಾದ), ದೇಗುಲದಲ್ಲಿ ದೆವ್ವ (ಗೂಗಿ ವಾ ಥಿಯಾಂಗೋನ ಡೆವಿಲ್ ಆನ್ ದ ಕ್ರಾಸ್ ಕಾದಂಬರಿಯ ಅನುವಾದ) ಸಹಿತ ಕನ್ನಡ ಸಾಹಿತ್ಯ ಲೋಕಕ್ಕೆ ಹಲವು ಮಹತ್ವದ ವಿಮರ್ಶಾ ಕೃತಿಗಳನ್ನು ನೀಡಿದವರು. ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷರು.
ಒಂದು ಅಲಂಕಾರ ಗ್ರಂಥ, ಒಂದು ಲಾಕ್ಷಣಿಕ ಗ್ರಂಥ-ಸಾಹಿತ್ಯ ಮಾರ್ಗವನ್ನು ಕುರಿತು ಚಿಂತಿಸುವ ಗ್ರಂಥವಾಗಿರುವ ಕವಿರಾಜಮಾರ್ಗ ಕನ್ನಡದ ಬಹಳ ಮುಖ್ಯವಾದ ಕೃತಿ. ಇಂದಿಗೆ 11 ಶತಮಾನಗಳ ಹಿಂದೆ ಬರೆಯಲಾಗಿರುವ ಇದಕ್ಕೆ ಒಂದು ನಿರ್ದಿಷ್ಟ ಕಾರಣ ಮತ್ತು ನಿರ್ದಿಷ್ಟ ಕಾಲಘಟ್ಟದ ಪ್ರೇರಣೆ ಇದೆ. ಅದರಿಂದಲೇ 11 ಶತಮಾನಗಳಾದ ನಂತರವೂ ಅದನ್ನು ಮರುದರ್ಶನ ಮಾಡುವ ವಿಧಾನದಲ್ಲಿ ಮತ್ತೆ ಮತ್ತೆ ನಾವು ಎದುರುಗೊಳ್ಳುತ್ತೇವೆ. ಕವಿರಾಜಮಾರ್ಗಕಾರ ತನ್ನ ಕೃತಿಯಲ್ಲಿ ಎಷ್ಟೋ ವಿಷಯಗಳನ್ನು ಹೇಳಿದ್ದಾನೆ. ದುರ್ಗಸಿಂಹ ಅದರ ಬಗ್ಗೆ ‘ಕನ್ನಡಿಯುಂ ಕೈದೀವಿಗೆಯುಂ’ ಎಂದು ಹೇಳಿರುವ ಮಾತು ಬಹಳ ಮುಖ್ಯವಾದುದು.
ಇದನ್ನು ಬರಿ ಉತ್ಪ್ರೇಕ್ಷೆಯ ಮಾತು ಎಂದು ಭಾವಿಸಬೇಕಾದ ಅಗತ್ಯ ಇಲ್ಲ. ಒಂದು ರೀತಿಯಲ್ಲಿ ಒಂದು ಭವಿಷ್ಯದ ಕಾಣ್ಕೆಯನ್ನು 9ನೇ ಶತಮಾನದ ಮಧ್ಯಭಾಗದಲ್ಲಿ ಕವಿರಾಜಮಾರ್ಗಕಾರ ತನ್ನ ಕೃತಿಯಲ್ಲಿ ಮಂಡಿಸಿದ್ದಾನೆ. ಕನ್ನಡದಲ್ಲಿ ಕೃತಿಗಳನ್ನು ಬರೆಯುವುದಾದರೆ, ಶಾಸ್ತ್ರಗ್ರಂಥಗಳನ್ನ್ನು ಬರೆಯುವುದಾದರೆ ಯಾವ ವಿಧಾನವನ್ನು ಅನುಸರಿಸಬೇಕು ಅನ್ನುವ ವಿಷಯದಲ್ಲಿ ಕನ್ನಡ ಜನಪದಕ್ಕೆ ಒಂದು ಮಾರ್ಗದರ್ಶನ ಮಾಡಬೇಕು ಅನ್ನುವ ಕಾರಣಕ್ಕೆ ರಾಜನ ಅನುಮೋದನೆಯೊಂದಿಗೆ ಒಂದು ಸಾಮಾನ್ಯ ಮಾರ್ಗಸೂಚಿಯನ್ನು ನಮಗೆ ಕವಿರಾಜಮಾರ್ಗಕಾರ ಒದಗಿಸಿಕೊಟ್ಟ. ಅದು ಕವಿಗಳಿಗೂ, ರಾಜರಿಗೂ ಮತ್ತು ಕನ್ನಡ ಜನಪದಕ್ಕೂ ಏಕಕಾಲಕ್ಕೆ ಮಾರ್ಗದರ್ಶಿಯಾಗಿರುವಂತಹ ಒಂದು ಸೂಚಿ.
ಈಗಾಗಲೇ ನಡೆದಿರುವ ಹಲವು ಚರ್ಚೆಯಲ್ಲಿ ಆ ಕೃತಿಯನ್ನು ಮೂರು ಬಗೆಯಲ್ಲಿ ವಿಂಗಡಿಸಿಕೊಳ್ಳಲು ನೋಡಲಾಗಿದೆ. ಅದು ಕವಿಯ ರಾಜಮಾರ್ಗವೇ? ಕವಿರಾಜನ ಮಾರ್ಗವೇ? ಅಥವಾ ಕವಿ ಮತ್ತು ರಾಜನ ಮಾರ್ಗವೇ? ಮೂರೂ ರೀತಿಯಲ್ಲಿಯೂ ಕೂಡ ನಿಜವಾಗುವ ಅರ್ಥಗಳನ್ನು ಅದು ಹೊಂದಿದೆ. ಮತ್ತೆ ಮತ್ತೆ ಆ ಕೃತಿಯಲ್ಲಿ ನೆನಪಿಗೆ ಬರುವ ಈ ಮಾತುಗಳನ್ನು ನೋಡೋಣ-
‘ಪದನರಿದು ನುಡಿಯಲುಂ ನುಡಿ
ದುವನರಿದಾರಯಲುಮಾರರ್ಪರಾ ನಾಡವರ‌್ಗಳ್
ಚದುರರ್ ನಿಜದಿಂ ಕುರಿತೋ
ದದೆಯುಂ ಕಾವ್ಯ ಪ್ರಯೋಗ ಪರಿಣತ ಮತಿಗಳ್’
ಇದನ್ನು ಉತ್ಪ್ರೇಕ್ಷಾಲಂಕಾರ ಅಂತ ಭಾವಿಸಬಹುದಾದರೂ, ಕವಿರಾಜಮಾರ್ಗಕಾರ ತನ್ನ ನಾಡಿನ ಬಗ್ಗೆ, ಭಾಷೆಯ ಬಗ್ಗೆ ಇರುವ ಅಭಿಮಾನಕ್ಕೆ ಆತ ನೀಡಿರುವ ಕಾರಣವೆಂದೂ ಭಾವಿಸಬಹುದು. ಆದರೆ ಕಾಲದ ನಡಿಗೆಯಲ್ಲಿ ಅದು ನಿಜವಾಗಿ ಸಂಭವಿಸಿದ್ದು ಮಾತ್ರ ನಿಜ. 9ನೇ ಶತಮಾನದ ಆ ಕಾಲಘಟ್ಟದಲ್ಲಿ ಬಂದ ಕವಿರಾಜಮಾರ್ಗ ಕನ್ನಡದ ಕೃತಿಗಳು ಯಾವ ಮಾರ್ಗದಲ್ಲಿ ಬರಬೇಕು ಎನ್ನುವ ಆಶಯವನ್ನು ಹೇಳಿತ್ತು. ಅದು ಹೇಗೆ ವಾಸ್ತವಗೊಂಡಿತು ಎಂದರೆ, ಕವಿರಾಜಮಾರ್ಗ ಬಂದ ನಂತರದ ಹಲವು ದಶಕಗಳೊಳಗೆ ಪಂಪ ಕನ್ನಡದಲ್ಲಿ ಒಂದು ಮಹಾಕಾವ್ಯವನ್ನು ಬರೆದ. ಸ್ವಭಾವದಲ್ಲಿ ಮಹಾಕಾವ್ಯ ಅದು. ಗಾತ್ರದಲ್ಲಿ ಅಲ್ಲ. ವಿಕ್ರಮಾರ್ಜುನವಿಜಯ ಗಾತ್ರದಲ್ಲಿ ವಿಸ್ತಾರವಾದುದಲ್ಲ. ಮಹಾಭಾರತವನ್ನೇ ವಸ್ತುವಾಗಿಟ್ಟುಕೊಂಡು, ಆನಂತರ ಕುಮಾರವ್ಯಾಸ ಬರೆದ ಕರ್ಣಾಟ ಭಾರತ ಕಥಾಮಂಜರಿಗೆ ಹೋಲಿಸಿದರೂ ಕೂಡ ವಿಕ್ರಮಾರ್ಜುನವಿಜಯ ಗಾತ್ರದಲ್ಲಿ ಚಿಕ್ಕದು. ಆದರೆ ಅದು ಹಾಕಿ ಕೊಟ್ಟ ಕ್ರಮ ಇದೆಯಲ್ಲಾ ಅದು ಕನ್ನಡಕ್ಕೆ ಅದ್ಭುತವಾದ ಧ್ವನ್ಯಾರ್ಥ ಕ್ರಮದ ಹಾದಿ ತೋರಿಸಿತು. ಕಿರಿದರಲ್ಲಿ ಹಿರಿದಾದ ಅರ್ಥವನ್ನು ಹೇಳುವ ಕ್ರಮ-ವರ್ಣನೆ ವಿವರಣೆಯಾಗುವುದರ ಬದಲು ಧ್ವನಿಸಾಧ್ಯತೆಯೊಂದಿಗೆ ಒಂದು ವಿಷಯವನ್ನು ಓದುಗರಿಗೆ ಮನಗಾಣಿಸುವುದು ಹೇಗೆ? ಪಂಪನಿಗೆ ಬಹುಶಃ ಕನ್ನಡ ದೇಸಿಗರ, ಕನ್ನಡ ನಾಡಿಗರ ವಿವೇಕ ಗೊತ್ತಿತ್ತು ಎಂದು ಕಾಣುತ್ತದೆ. ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎಂಬಂತೆ. ಪಂಪನನ್ನು ನೋಡಿ ಕನ್ನಡ ದೇಸಿ ಕವಿ ಹೇಳಿದ ಮಾತಲ್ಲ ಇದು. ನಮ್ಮ ಜನಪದರು ಹತ್ತು ಕಟ್ಟುವ ಬದಲು ಒಂದು ಮುತ್ತು ಕಟ್ಟು ಎಂದರು. ಕುಮಾರವ್ಯಾಸ ನೂರು ಪದಗಳಲ್ಲಿ ಹೇಳಬಹುದಾದದ್ದನ್ನು ಹತ್ತು ಪದಗಳಲ್ಲಿ ಹೇಳಬಲ್ಲ ಪಂಪ. ಕಾವ್ಯ ಶಕ್ತಿ ಅದು. ಕನ್ನಡಕ್ಕೆ ಇಂತಹ ಒಂದು ಅಸೀಮ ಕಾವ್ಯಶಕ್ತಿ ಇದೆ ಅನ್ನುವುದನ್ನು ಪಂಪ ಈ ಕಾವ್ಯದಲ್ಲಿ ಬರೆದು ತೋರಿಸಿದ.
ಮಹಾಭಾರತದ ಕಥೆ ಬೇರೆ. ವ್ಯಾಸನಿಂದ ತಂದದ್ದೇ ಆಗಿರಬಹುದು. ಆದರೆ ಅದು ತನ್ನದೇ ಸೋಪಜ್ಞತೆಯಲ್ಲಿ, ತನ್ನದೇ ಅನ್ನುವ ರೀತಿಯಲ್ಲಿ, ಅರಿಕೇಸರಿಯನ್ನು ಸಮೀಕರಿಸಿ ಒಂದು ಕಥನ ಮಾಡುವ ಕ್ರಮ ಕನ್ನಡ ತನ್ನ ಸ್ವಂತಿಕೆಯನ್ನು ಗಳಿಸಿಕೊಂಡ ಕ್ರಮಕ್ಕೆ ಒಂದು ಉದಾಹರಣೆ. ಕುವೆಂಪು ಅವರ ನಾಡಗೀತೆ ನಮಗೆಲ್ಲಾ ಗೊತ್ತು, ಭಾರತ ಜನನಿಯ ತನುಜಾತೆ. ಭಾರತ ನಮ್ಮ ಜನನಿ. ಕನ್ನಡ ಮಾತೆ ಅದರ ಮಗಳು, ತನುಜಾತೆ. ಆದರೆ ಮಗಳು, ಅವಳು ಮಗಳಾದ ಮಾತ್ರಕ್ಕೆ ತನ್ನ ಸ್ವಂತಿಕೆಯನ್ನು ಹೊಂದಿರಬಾರದೆಂದೇನಿಲ್ಲ. ತನ್ನ ಸ್ವಂತಿಕೆಯನ್ನು ಹೊಂದಿರಲೇ ಬೇಕು. ಇವಳ ಸಂಸಾರವೇ ಬೇರೆ ತಾನೆ. ಮಾತೆಯ ಮನೆಯಲ್ಲೇ ತನುಜಾತೆಯರು ಉಳಿದುಬಿಡಲ್ಲ. ಅವಳ ಸ್ವಂತ ಸಂಸಾರವನ್ನು ಅವಳು ನಡೆಸುತ್ತಾಳೆ. ಕನ್ನಡದ ಆದರ್ಶ ಅದು. ಮಹಾಭಾರತದ ಕಥೆಯನ್ನೇ ತಂದರೂ, ಅದನ್ನು ಕನ್ನಡದ ಕಥೆಯಾಗಿ ಹೇಳಬಲ್ಲ ಕೌಶಲ್ಯವನ್ನು ಕನ್ನಡದಲ್ಲಿ ಪಂಪ ಮಾಡಿ ತೋರಿಸಿದ. ಕನ್ನಡದ ಪ್ರತಿಭಾಶಕ್ತಿ ಎಷ್ಟು? ಅದಕ್ಕಿರುವ ಶಬ್ದ ಸಂಪತ್ತು ಎಷ್ಟು? ಅದರೊಳಗೆ ಸಂಸ್ಕೃತವನ್ನು ಎಲ್ಲೆಲ್ಲಿ, ಯಾವ ರೀತಿಯಲ್ಲಿ ಜೋಡಿಸಬಲ್ಲೆ? ನುಡಿಗಟ್ಟುಗಳನ್ನು ಬಳಸಬಲ್ಲೆ! ಆ ಮಾತಿನ ಓಘವನ್ನು ನೋಡಿದರೆ, ಕೇಳಿದರೆ ಗೊತ್ತಾಗುತ್ತದೆ ಕನ್ನಡದ ನುಡಿಶಕ್ತಿ ಏನು ಎಂಬುದು.
‘ಕುಲಂ ಕುಲಂಮಲ್ತು, ಚಲಂ ಕುಲಂ, ಗುಣಂ ಕುಲಮಭಿಮಾನವೊಂದೆ ಕುಲಮಣ್ಮುಕುಲಂ’... ಉದ್ದಕ್ಕೂ ಒಂದು ಶಬ್ದ ಪ್ರವಾಹ. ಎಲ್ಲೂ ಹುಸಿಹೋಗದ ಅರ್ಥ. ಸುಮ್ಮನೆ ಬಳಸಿದ ಮಾತು ಅಂತ ನಾವು ಯಾವುದನ್ನೂ ಅನ್ನೋಕಾಗುವುದಿಲ್ಲ. ಒಂದು ಶಬ್ದವನ್ನ್ನು ತೆಗೆದುಹಾಕೋಕಾಗಲ್ಲ. ಹುಸಿಹೋಗುವ ಮಾತಾಡೋದಲ್ಲ ಕನ್ನಡದ ಮಾತುಗಳು. ಅರ್ಥಗರ್ಭಿತವಾದವು. ಕವಿರಾಜಮಾರ್ಗಕಾರ ಯಾವುದನ್ನ್ನು ಸುಭಟರ್ಗಳ್ ಅಂದ, ಯೋಧರು ಅಂದ ಅದನ್ನು ಕನ್ನಡದ ಕಾವ್ಯದಲ್ಲಿ ಪಂಪ ಹೇಳಬಲ್ಲವನಾದ. ಯಾರ ಮುಖಾಂತರ? ಕರ್ಣನ ಮುಖಾಂತರ. ಕರ್ಣನ ಮಾತಿಗೆ ಅದರದ್ದೇ ಆಗಿರುವಂತಹ ಕಾಲಘಟ್ಟದ ಶಕ್ತಿ ಇದೆ. ಅದು ಕಾಲಘಟ್ಟದ ಮಾತು. ಕರ್ಣ ಇದನ್ನ್ನು ವ್ಯಾಸನಲ್ಲಿ ಮಾತನಾಡಿದ್ದಾನಾ? ಅದು ನಮಗೆ ಅಗತ್ಯವಿಲ್ಲ. ಸಂಬಂಧವಿಲ್ಲ. ವ್ಯಾಸಭಾರತದಲ್ಲಿ ಕರ್ಣ ಈ ಮಾತನ್ನು ಆಡುವುದಕ್ಕೆ ಅವಕಾಶವಿತ್ತೋ ಇಲ್ಲವೋ. ಆದರೆ ಪಂಪ ವಿಕ್ರಮಾರ್ಜುನ ವಿಜಯವನ್ನು ಬರೆಯಬೇಕಾದರೆ ಕನ್ನಡದ ನೆಲದಲ್ಲಿ ಆ ಮಾತನ್ನಾಡುವುದಕ್ಕೆ ಬೇಕಾಗಿರುವಂತಹ ಒಂದು ತಳಹದಿ ಇತ್ತು. ಪಂಪ ಆ ರೀತಿಯಾಗಿ ತನ್ನ ಕಾವ್ಯಶಕ್ತಿಯನ್ನು ಮೆರೆದ. ಆನಂತರ ರನ್ನ, ಪೊನ್ನ, ಜನ್ನ ಎಲ್ಲ ಬರೆದರು. ಕಾಲಘಟ್ಟಕ್ಕೊಬ್ಬರು. ಶತಮಾನಕ್ಕೆ ಒಬ್ಬರೋ, ಇಬ್ಬರೋ ಮಹಾಕವಿಗಳು. ಆಗ ಅದು ಒಂದು ಹಳ್ಳ, ಕನ್ನಡದ ಕಾವ್ಯಶಕ್ತಿ, ಕನ್ನಡದ ಬುದ್ಧಿಶಕ್ತಿ ಹಳ್ಳವಾಗಿ ಆರಂಭವಾಗಿದ್ದು, ಅದರ ಮುಂದಿನ ಹಂತದಲ್ಲಿ 12ನೆಯ ಶತಮಾನಕ್ಕೆ ಬರುವಷ್ಟು ಹೊತ್ತಿಗೆ ಒಂದು ನದಿಯಾಗಿದೆ.
ಅಲ್ಲಿ ನಿಜವಾಗಿದೆ- ‘ಕುರಿತು ಓದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ ಎಂಬ ಹೇಳಿಕೆಯ ಸತ್ಯ. ವಚನಗಳನ್ನು ಬರೆದಂಥ ನೂರಾರು ಜನ ವಚನಕಾರರು, ವಚನಕಾರ್ತಿಯರು ಕಾವ್ಯವನ್ನು ಕುರಿತು ಓದಿದವರಲ್ಲ. ಬದುಕನ್ನು ಬಾಳಿದವರು, ಆಲೋಚಿಸಿದವರು. ಕುರಿತು ಓದದೆಯೂ ಕಾವ್ಯವನ್ನು ಪ್ರಯೋಗವನ್ನಾಗಿ ಮಾಡಿದರು, ವಚನಗಳು ಎನ್ನುವ ಅದ್ಭುತ ಪ್ರಕಾರವನ್ನು ಸೃಷ್ಟಿಸಿದರು. ಸಂಸ್ಕೃತ ಬೂಯಿಷ್ಟ ಕನ್ನಡದಿಂದ ಕನ್ನಡದ ಕಾವ್ಯಶಕ್ತಿಯನ್ನು ತೋರಿಸುವಂತಹ ಒಂದು ತೊರೆ, ಕನ್ನಡದ ತೊರೆ ವಚನಕಾರರು ಬರುವ ಹೊತ್ತಿಗೆ ಅಚ್ಚಕನ್ನಡದ ನದಿಯಾಗಿ ಹರಿಯಿತು. ಬರೆದವರ ಸಂಖ್ಯೆಯೂ ಕೂಡ ನೂರ್ಮಡಿಸಿತು. ನೂರಾರು ಜನ- ವಚನಗಳನ್ನ್ನು ಬರೆದವರು ಒಬ್ಬರು ಇಬ್ಬರಲ್ಲ. ಅನುಭಾವದ ಕಥೆಗಳನ್ನು ಬರೆದರು ಅಚ್ಚ ಕನ್ನಡದಲ್ಲಿ. ಜನಸಾಮಾನ್ಯರಿಗೆ ಬಹಳ ಚೆನ್ನಾಗಿ ಅರ್ಥವಾಗುವಂತಹ ಪದ್ಯಗಳು, ಕವಿತೆಗಳು. ಅನುಭಾವವನ್ನು ಅಚ್ಚ ಕನ್ನಡದಲ್ಲಿ ತಲುಪಿಸಬಲ್ಲೆವು, ಕೃತಿಗಳನ್ನು ಬರೆಯುವುದಕ್ಕೆ, ಕಾವ್ಯವನ್ನು ಬರೆಯುವುದಕ್ಕೆ ಸಂಸ್ಕೃತವೇ ಬೇಕೆಂದಿಲ್ಲ. ಕನ್ನಡದಲ್ಲೂ ಸಾಧ್ಯ ಎಂಬುದು ಕವಿರಾಜಮಾರ್ಗಕಾರನ ಸೂಚನೆಯಾದರೆ, ದೇವ ಭಾಷೆಯಾಗಿಯೂ, ಧರ್ಮ ಭಾಷೆಯಾಗಿಯೂ, ಅನುಭಾವದ ಭಾಷೆಯಾಗಿಯೂ ಕೂಡ ಕನ್ನಡವೇ ಸಾಕು ಅಂತ ವಚನಕಾರರು ನಿರೂಪಿಸಿದರು.
ದೇವರ ಜೊತೆ ಮಾತನಾಡುವುದಕ್ಕೆ ಕೂಡ ಇನ್ನು ಸಂಸ್ಕೃತದ ಹಂಗು ಬೇಕಿಲ್ಲ. ಕಾವ್ಯ ಕೃತಿಗಳನ್ನ್ನು, ಶಾಸ್ತ್ರಕೃತಿಗಳನ್ನು ಬರೆಯುವುದಕ್ಕೆ ಮಾತ್ರ ಅಲ್ಲ, ದೇವರ ಜೊತೆಗೆ, ಧರ್ಮದ ಬಗ್ಗೆ, ಅಧ್ಯಾತ್ಮದ ಬಗ್ಗೆ, ಅನುಭಾವದ ಬಗ್ಗೆ ಮಾತನಾಡುವುದಕ್ಕೂ ಕನ್ನಡವೇ ಶಿಷ್ಟವಾಗಿದೆ, ಕನ್ನಡವೇ ಬಲಿಷ್ಠವಾಗಿದೆ ಅನ್ನುವುದನ್ನು ತೋರಿಸಿದರು. ನೂರಾರು ಜನ ಬರೆದರು. ಎಲ್ಲರೂ ಕೂಡ ಕವಿರಾಜಮಾರ್ಗಕಾರ ಹೇಳಿದುದಕ್ಕೆ ನಿದರ್ಶನದಂತಿದ್ದಾರೆ. ಕುರಿತು ಓದದೆಯೂ ಕಾವ್ಯ ಪ್ರಯೋಗ ಮತಿಗಳಾಗಿದ್ದಾರೆ. ಯಾರೂ ಕೂಡ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಕಸುಬಿನ ವಿದ್ಯಾರ್ಥಿಗಳು. ನಿತ್ಯವೂ ನೂರಾಎಂಟು ಕುಲಕಸುಬುಗಳನ್ನ್ನು ಮಾಡಿಸುತ್ತಿದ್ದವರು. ಗ್ರಂಥಪಠಣದಿಂದ ಅವರಿಗೆ ಕಾವ್ಯಶಕ್ತಿ ಬರಲಿಲ್ಲ. ಬದುಕಿನ ಅನುಭವದಿಂದ, ಅವರ ಕಸುಬಿನ ಅನುಭವದ ಮೂಸೆಯಿಂದ ಹೊಮ್ಮಿತು. ಕಸುಬಿಗೆ ಸಂಬಂಧಪಟ್ಟ ಪದಗಳನ್ನು ತಂದು ಕಾವ್ಯಾಲಂಕಾರಗಳನ್ನಾಗಿ ಮಾಡಿ, ಕಾವ್ಯಭಾಷೆಯಾಗಿ, ರೂಪಕಗಳಾಗಿ, ಉಪಮೆಗಳಾಗಿ ಬಳಸಿದರು. ನೇಕಾರರು, ಅಂಬಿಗರು, ಚಮ್ಮಾರರು, ಮೇದಾರರು, ಮಡಿವಾಳರು, ಹಡಪದವರು ಹೀಗೆ ಪ್ರತಿಯೊಬ್ಬರೂ ಕೂಡ ಅವರ ಕಸುಬಿನ ನುಡಿಗಟ್ಟನ್ನೇ ಬಳಸಿದರು. ಇದ್ದ ಸಂಸ್ಕೃತದ ಹಂಗನ್ನು ತೊರೆದು ಕಾವ್ಯವನ್ನು ಬರೆದರು ಅಚ್ಚಕನ್ನಡದಲ್ಲಿ. ಅದರ ನಂತರದ ಎರಡು ಶತಮಾನಗಳನ್ನು ನೋಡಿ- ದಾಸರು ಬಂದರು, ಆಡು ಕನ್ನಡದಲ್ಲಿ ಕೀರ್ತನೆಗಳನ್ನ್ನು ನೂರಾರು ಸಂಖ್ಯೆಯಲ್ಲಿ ಬರೆದರು.
ಆವಂದಿರ ಕುಲವೇನೋ ಎಂದು ವಚನಕಾರರು ಕೇಳಿದರೆ, ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರು ಬಲ್ಲಿರಾ? ಎಂದರು ದಾಸರು. ಮಾಮೂಲಿ ಜನ ಮಾತನಾಡುವ ಬೀದಿಕನ್ನಡದಲ್ಲಿ ಬರೆದರು.
‘ಇಕ್ಕಲಾರೆ ಕೈ ಎಂಜಲು ಚಿಕ್ಕ ಮಕ್ಕಳು ಅಳುತಾರೆ ಹೋಗೋ ದಾಸಯ್ಯ...’; ಆಡು ಕನ್ನಡ, ಗ್ರಾಂಥಿಕ ಕನ್ನಡ ಆ ರೀತಿಯ ಯಾವುದೇ ಹಂಗುಗಳಿಲ್ಲದೆ ದಾಸರು ಬರೆದರು, ನೂರಾರು ಸಂಖ್ಯೆಯಲ್ಲಿ ಜನ ಅದನ್ನ್ನು ಹಾಡಿದರು. ಹಾಡ್ತಾನೇ ಬಂದ್ರು, ಹೆಣ್ಣುಮಕ್ಕಳ ಸಮೇತ. ಕಾವ್ಯವನ್ನು ಕುರಿತು ಓದುವುದಿರಲಿ ಅಕ್ಷರವನ್ನೇ ಕಲಿಯದ ಹೆಣ್ಣುಮಕ್ಕಳೂ ಕೂಡ ಅಷ್ಟು ಚೆನ್ನಾಗಿ ದಾಸರ ಪದಗಳನ್ನು ಹಾಡಿದರು, ವಚನಗಳನ್ನ ಹಾಡಿದರು. ಆಗಲೂ ಒಂದು ನದಿ ಇದೆ. ಅಲ್ಲಿಂದ ದಲಿತ ಬಂಡಾಯ ಬರುವವರೆಗೂ ನಿರಂತರವಾಗಿ ಹರಿಯುತ್ತಲೇ ಬಂದಿರುವ ಕನ್ನಡದ ಕಾವ್ಯಶಕ್ತಿ, ಕೃತಿ ಶಕ್ತಿ, ಶಾಸ್ತ್ರಶಕ್ತಿ- ಇವತ್ತು ಮಹಾ ನದಿ, ಇವತ್ತು ಲಕ್ಷಂತರ ಜನ ಬರೆಯುತ್ತಿದ್ದಾರೆ. ಬರೀತಾ ಇರುವವರಲ್ಲೂ ಕುರಿತೋದದೆಯೂ ಬರಿತಾಯಿರೋರು ಬಹಳ ಜನ ಇದ್ದಾರೆ. ಎಲ್ಲರೂ ಸಾಹಿತ್ಯದ ವಿದ್ಯಾರ್ಥಿಗಳಲ್ಲ. ಜೀವನದ ಹಲವು ಕ್ಷೇತ್ರಗಳಲ್ಲಿ ಕಲಿತವರು, ನ್ಯಾಯವಾದಿಗಳಾಗಿರುವವರು, ವಿಜ್ಞಾನಿಗಳಾಗಿರುವವರು, ಕಂಪ್ಯೂಟರ್ ತಜ್ಞರಾಗಿರುವವರು ಇತ್ಯಾದಿ ಬೇರೆ ಬೇರೆ ಕ್ಷೇತ್ರಗಳಲ್ಲಿರುವವರು, ವ್ಯವಸಾಯದಲ್ಲಿರುವವರು, ಬರೀ ಗೃಹಿಣಿಯರಾಗಿರುವವರು ಎಲ್ಲರೂ ಕೃತಿಗಳನ್ನು ಬರಿಯುತ್ತಿದ್ದಾರೆ.
ಇವತ್ತು ಕನ್ನಡದ ಕೃತಿಶಕ್ತಿ ಅನ್ನುವಂಥದ್ದು ಮಹಾನದಿಯಾಗಿದೆ. ಅವರ್ಯಾರೂ ಕಾವ್ಯಾಲಂಕಾರವನ್ನು ಶಾಸ್ತ್ರೀಯವಾಗಿ ಕಲಿತವರಲ್ಲ. ಅನುಭವವೇ ದೊಡ್ಡದು. ಬದುಕು ದೊಡ್ಡದು. ವಚನಕಾರರ ಕಲ್ಪನೆಯಿದ್ದದ್ದು ಅದೇ, ಕನ್ನಡಿಗರ ಬದುಕು ದೊಡ್ಡದು. ಆ ಬದುಕಿನ ಹಿರಿಮೆಯನ್ನು ನಾನಿವತ್ತು ಹೇಳೋದಕ್ಕೆ ಪ್ರಯತ್ನಪಡ್ತಾಯಿದ್ದೀನಿ. ಆದ್ದರಿಂದಲೇ ಅದು ಕನ್ನಡಿ ಮತ್ತು ಕೈ ದೀವಿಗೆ. ಕನ್ನಡಿ ತಾನಿರುವ ರೀತಿ ಏನು ಅನ್ನೋದನ್ನು ಹೇಳ್ತಾ ಇದೆ. ಕಲ್ಪಿಸಿದ್ದಲ್ಲ.
ಕಾವೇರಿಯಿಂದಮಾ ಗೋದಾವರಿವರಮಿರ್ದ ನಾಡದಾ ಕನ್ನಡದೊಳ್... ಇಲ್ಲಿರುವ ಕನ್ನಡ ನಾಡನ್ನು ಕೃತಿಕಾರ ಕಲ್ಪಿಸಲಿಲ್ಲ. ನಿಶ್ಚಿತವಾಗಿ ಈ ಭಾಗದಲ್ಲಿ ಕನ್ನಡ ಮಾತನಾಡುವ ನುಡಿಗರಿದ್ದಾರೆ. ಇದು ಕನ್ನಡದ ಸೀಮೆ. ಕನ್ನಡದ ಸೀಮೆ ಅಂತ ಹೇಳ್ತಾಯಿರೋದು ಯಾಕಿಲ್ಲಿ ಬಹಳ ಮುಖ್ಯ ಅಂದರೆ, ಇದು ನೃಪತುಂಗನ ರಾಜ್ಯಾಡಳಿತ ಸೀಮೆ ಅಂತ ಹೇಳಿಲ್ಲ. ಇದು ಇಮ್ಮಡಿ ಪುಲಿಕೇಶಿಯ ರಾಜ್ಯಾಡಳಿತದ ಸಾಮ್ರಾಜ್ಯ ಅಂತ ಹೇಳಿಲ್ಲ. ಸಾಮ್ರಾಜ್ಯಗಳ ಯುಗ ಮುಗಿದು ಪ್ರಾದೇಶಿಕ ರಾಜ್ಯಗಳು ನುಡಿಗಳ ಆಧಾರದಲ್ಲಿ ಉಗಮವಾಗುವ ಕಾಲಘಟ್ಟದಲ್ಲಿ ಮಾತನಾಡಿದವನು ಕವಿರಾಜಮಾರ್ಗಕಾರ. ವಾಸ್ತವವಾಗಿ ನೃಪತುಂಗನ ಸಾಮ್ರಾಜ್ಯ ವಿಸ್ತಾರವಾಗಿತ್ತು. ಆದರೆ ಕವಿರಾಜಮಾರ್ಗಕಾರ ಮಾತನಾಡ್ತಾಯಿರೋದು ‘ನಾಡದಾ ಕನ್ನಡದೊಳ್’... ಕನ್ನಡ ನಾಡನ್ನ್ನು ಮಾತ್ರ. ಅದು ಗೋದಾವರಿಯಿಂದ ಕಾವೇರಿಯ ನಡುವೆ ಇದೆ. ಅದರಾಚೆಗೂ ನೃಪತುಂಗನ ಸಾಮ್ರಾಜ್ಯ ಇದೆ. ಆಡಳಿತ ಇದೆ. ಇವನಿಗೆ ಮುಖ್ಯವಾದದ್ದು ಕನ್ನಡವನ್ನು ಆಡುವ ನುಡಿಗರಿರುವಂತಹ ನಾಡು. ನಾಡದಾ ಕನ್ನಡದೊಳ್, ಅದನ್ನು ಭಾವಿಸುವ ಜನಪದ. ನಾವು ಕನ್ನಡದ ಜನರು ಅಂತ ಭಾವಿಸುವ ಜನಪದ. ನಾವು ನೃಪತುಂಗನ ಪ್ರಜೆಗಳು ಅಂತ ಹೇಳೋರಲ್ಲ. ರಾಷ್ಟ್ರಕೂಟರ ಪ್ರಜೆಗಳು ಅಂತ ಹೇಳೋರಲ್ಲ. ಇಮ್ಮಡಿ ಪುಲಿಕೇಶಿಯ ಪ್ರಜೆಗಳು ಅಂತ ಹೇಳ್ತಿಲ್ಲ ಅವರು. ಮೂರನೇ ಕೃಷ್ಣನ ಪ್ರಜೆಗಳು ಅಂತ ಹೇಳ್ತಿಲ್ಲ, ನಾವು ಕನ್ನಡದವರು ಅಂತ ಭಾವಿಸುವ ಜನಪದ. ನೀನು ಅವರಿಗೆ ಪ್ರಭುವಲ್ಲ. ಚಕ್ರವರ್ತಿಯ ಲೆಕ್ಕವಿಲ್ಲದೆ, ನಮ್ಮ ನುಡಿ ಇದು, ಅದನ್ನಾಡುವ ನಾಡವರು. ಈ ಹೊಸ ಪ್ರಜ್ಞೆಯನ್ನು ಸಂಕೇತಿಸುವ ಕೃತಿಯಾಗಿರುವುದಕ್ಕೇ ಹನ್ನೊಂದು ಶತಮಾನಗಳ ನಂತರವೂ ಅದೊಂದು ಪ್ರಾತಿನಿಧಿಕ ಕೃತಿಯಾಗಿ ಚರ್ಚೆಗೆ ಒಳಪಡ್ತಾಯಿದೆ. ಒಳಪಡಬೇಕಾಗುತ್ತೆ.
ಅಧ್ಯಯನಕಾರರು ಹೇಳಿದರು ಕವಿರಾಜಮಾರ್ಗದಲ್ಲಿರೋದು ಅಸ್ಮಿತೆಯ ಪ್ರಶ್ನೆ ಅಂತ. ಅಸ್ಮಿತೆಯು ಕನ್ನಡಿಯೂ ಹೌದು, ಹಾಗೆಯೇ ಅದು ಯಾವ ದಿಕ್ಕಿಗೆ ಹೋಗಬೇಕು ಅನ್ನುವ ಕೈದೀವಿಗೆಯೂ ಹೌದು. ಏಕ ಕಾಲದಲ್ಲಿ ಮಾರ್ಗದರ್ಶನ ಮಾಡುತ್ತೆ ಮತ್ತು ನಾನು ಇದಾಗಿದೀನಿ ಅಂತ ಹೇಳುತ್ತೆ. ಆ ಗುಣವಿಶೇಷಣಗಳನ್ನು ಹೇಳಬೇಕಾದರೆ ಅವನು ಹೇಳಿದ್ದಾನೆ. ಆ ಮಾತುಗಳಲ್ಲಿ ಎರಡು ನನ್ನ ಗಮನ ಸೆಳೆದಿರುವಂಥದ್ದು. ಸುಭಟರ್ಗಳ್, ಸ್ವಾಭಿಮಾನಿಗಳ್- ಅಷ್ಟನ್ನೇ ಹೇಳಿಬಿಟ್ಟಿದ್ದಿದ್ರೆ ಯಾವುದೋ ಯೋಧಕುಲವನ್ನು ಅವರು ವರ್ಣಿಸುತ್ತಿದ್ದಾರೆನ್ನಬಹುದಿತ್ತ್ತು. ಏಕೆಂದರೆ ಕನ್ನಡಿಗರ ಬಗ್ಗೆ ‘ಕಪಿಧ್ವಜರ್, ಕೂಂದಲರ್, ಭಲ್ಲೇಕ ದಂಡ ಹಸ್ತರ್’ ಅಂತ ವರ್ಣನೆ ಇದೆ. ಸುಭಟರ್ ತರ ಅಲ್ಲ ಅದು. ವಿವೇಕಿಗಳ್. ಕನ್ನಡದ ವಿವೇಕ ಎಷ್ಟು ದೊಡ್ಡದು ಅಂತ ಹೇಳಿದರೆ, ನಮ್ಮದು ಮಧ್ಯಸ್ಥ ಭಾಗದಲ್ಲಿರುವಂಥ ಭೂಪ್ರದೇಶ. ತಮಿಳರಿಗೆ ಕೊನೆಯಲ್ಲಿದ್ದಂತಹ ನೆಮ್ಮದಿಯಾಗಲೀ, ಅದಕ್ಕಿರುವ ರಕ್ಷಣೆಯಾಗಲೀ ನಮಗಿಲ್ಲ. ಕೇರಳದವರಿಗಿದ್ದಂತಹ ಭೂಪ್ರದೇಶ ನಮಗಿಲ್ಲ. ನಮಗಿದ್ದದ್ದು ಯಾವ ಪ್ರದೇಶಕ್ಕೆ ಹೋಗಬೇಕಾದರೂ ಹಾದು ಹೋಗಬೇಕಾದಂತಹ ಮಧ್ಯದ ಭೂಭಾಗ. ಕರ್ನಾಟಕ. ಆದ್ದರಿಂದ ಇದರ ವಿವೇಕ ಎಷ್ಟು ದೊಡ್ದದು ಎಂದರೆ ಕವಿರಾಜಮಾರ್ಗಕಾರ ಅದರ ಕನ್ನಡಿಯಾಗಿ ನುಡಿತಾಯಿದ್ದಾನೆ. ಅಂದರೆ ಅದರ ವಿವೇಕ ಎಷ್ಟು ದೊಡ್ದದಿರಬಹುದು. ತಮಿಳು ತನ್ನ ಅಕ್ಷರ ಲಿಪಿಯಾಗಿ 22 ಅಕ್ಷರಗಳನ್ನು ಮಾತ್ರ ಹೊಂದಿದ್ದರೆ, ಕನ್ನಡಿಗರು ಐವತ್ತಾರೂ ಅಕ್ಷರಗಳನ್ನು, ನಮ್ಮ ವರ್ಣಮಾಲೆಯಲ್ಲಿ ಸೇರಿಸಿದ್ದಾರೆ. ಕೆಲವರು ಹೊರೆ ಅದೂ ಇದೂ ಅಂತ ಮಾತಾಡ್ತಾರೆ, ಮಾತಾಡ್ಲಿ ತೊಂದರೆ ಇಲ್ಲ. ಜಾಣತನ ಎಷ್ಟಿದೆ, ವಿವೇಕ ಎಷ್ಟಿದೆ. ಹಾಗಾಗಿ ಇಡೀ ಭಾರತದಲ್ಲಿ ಯಾವುದೇ ಭಾಷೆಯನ್ನು ಅಪಭ್ರಂಶವಿಲ್ಲದೆ ಮಾತನಾಡಬಹುದಾದ ನುಡಿಗರೆಂದರೆ ಅವರು ಕನ್ನಡಿಗರು. ಕೆಲವು ಭಾಷೆಗಳಿಗೆ ‘ವ’ ಅನ್ನಕೆ ಬರಲ್ಲ, ‘ಗ’ ಅನ್ನಕೆ ಬರಲ್ಲ. ಬಂಗಾಳಿಗರು ರವೀಂದ್ರ ಅನ್ನೋದನ್ನು ರಬೀಂದ್ರ ಅಂತಾರೆ. ಇನ್ನು ಕೆಲವು ಭಾಷಿಕರಿಗೆ ‘ಸ’ ಗೂ ‘ಶ’ ಗೂ ವ್ಯತ್ಯಾಸ ಹೇಳೋಕೆ ಬರಲ್ಲ. ಉತ್ತರ ಭಾರತದಿಂದ ಬಂದಿರುವ ಬಹಳ ಪಂಡಿತರಾದ ವಿದ್ವಾಂಸರೂ, ಬಹಳ ದೊಡ್ಡ ಐ ಎ ಎಸ್, ಐ ಪಿ ಎಸ್ ಆಫೀಸರ್‌ಗಳೂ ಕೂಡ ಶಂಕರ ಅನ್ನು ಅಂದ್ರೆ ಸಂಕರ ಅಂತಾರೆ. ಕೇರಳದವರಿಗೆ ‘ಕ’ ನು ‘ಗ’ ನು ವ್ಯತ್ಯಾಸ ಮಾಡೋದಕ್ಕೆ ಬರೋದಿಲ್ಲ. ಗರ್ಲ್ಸ್ ಅನ್ರೋ ಅಂದ್ರೆ ಕರ್ಲ್ಸ್ ಅಂತಾರೆ. ನುಡಿ ಉಚ್ಚಾರಣೆಯ ಸುಲಲಿತತೆ ಇದ್ಯಲ್ಲ ನಮಗೆ, ಪ್ರಪಂಚದ ಯಾವ ಭಾಷೆಯನ್ನಾದರೂ ಕೂಡ ಅವರದೇ ವಿಧಾನದಲ್ಲಿ ಉಚ್ಚರಿಸಬಹುದಾಗಿರುವ ಸುಲಲಿತತೆ ನಮ್ಮ ನಾಲಿಗೆಗಿದೆ. ಯಾಕೆಂದರೆ ದೊಡ್ಡ ವರ್ಣಾಕ್ಷರಮಾಲೆಯನ್ನು ನಾವು ಉಳಿಸಿಕೊಂಡಿದ್ದೇವೆ.
ಶಂಕರ ಶ, ಷಡಕ್ಷರ ಷ ಗೆ ಹೇಗೆ ವ್ಯತ್ಯಾಸ ಮಾಡ್ತೀರಾ ಅನ್ನೋದನ್ನು ಹೇಳೋಕಾಗಲ್ಲ. ಬಳಕೆಯಲ್ಲಿ ಮಾತ್ರ ಬಳಸಬಹುದು. ವಿವರಿಸೋದಕ್ಕೆ ಬರಲ್ಲ. ಹೀಗೆ ನಮ್ಮ ಭಾಷೆ ಬಹಳ ವಿಸ್ತಾರವಾಗಿ ಬೆಳೀತು. ಇಂಗ್ಲಿಷಿನ ಶಬ್ದಗಳನ್ನು ಕೂಡ ಯಾವುದೇ ತೊಂದರೆಯಿಲ್ಲದೆ ಒಂದು ಪ್ರತ್ಯಯವನ್ನು ಸೇರಿಸುವುದರ ಮುಖಾಂತರ ನಾವು ಒಳಪಡಿಸಿಕೊಳ್ಳಬಹುದು. ಬಸ್ ಗೆ ಉ ಸೇರಿಸಿ ಬಸ್ಸು, ಕಾಲೇಜ್ ಉ ಸೇರಿಸಿ ಕಾಲೇಜು. ಕೆಲವನ್ನು ತತ್ಸಮ ತದ್ಭವ ಮಾಡ್ತೀವಿ ಹಾಸ್ಪಿಟಲ್‌ನ ಆಸ್ಪತ್ರೆ- ಹೀಗೆ ಬೇಕಿದ್ದ ಕಡೆ ಅದೂ ಮಾಡ್ತೀವಿ. ಇನ್ನು ಕೆಲವು ಕಡೆ ಅದೇ ಪದವನ್ನು ಬಳಸ್ತೀವಿ, ಏನೂ ಆಗಲ್ಲ ಅದನ್ನು ಕನ್ನಡಿಸುತ್ತೀವಿ. ಕನ್ನಡಕ್ಕೆ ಒಳಪಡಿಸ್ತೀವಿ. ಬಸ್ಸು, ಕಾಲೇಜು ತರವೇ. ಕಂಪ್ಯೂಟರ್ ಅಂದ್ರೆ ಇಂಗ್ಲಿಷು-ಕಂಪ್ಯೂಟರು ಕನ್ನಡ. ಹೀಗೆ ಕನ್ನಡಿಗರಿಗೆ ಶಬ್ದಗಳನ್ನು ಸ್ವೀಕರಿಸುವುದರ ಬಗ್ಗೆ ಮೊದಲಿನಿಂದಲೂ ಎಂದೂ ಕೂಡ ಹಿಂಜರಿಕೆಯಿಲ್ಲ. ಅದು ವಿವೇಕ. ಯಾಕೆಂದರೆ ಒಂದು ಭಾಷೆ ತನ್ನನ್ನು ಐಸೋಲೇಷನ್‌ನಲ್ಲಿ ಬೆಳೆಸಿಕೊಳ್ಳೋದಿಕ್ಕೆ ಆಗೋದಿಲ್ಲ. ಯಾಕೆಂದರೆ ಪ್ರಪಂಚದ ಯಾವುದೇ ಭಾಷೆ ಸಿದ್ಧವಾಗಿ ಹುಟ್ಟಿದ್ದು ಇಲ್ಲ. ಹುಟ್ಟುವುದೂ ಇಲ್ಲ. ಆಗುತ್ತಾ ಇರುತ್ತೆ. ಇಂಗ್ಲಿಷ್ ಕೂಡ ಸಿದ್ಧವಾಗಿ ಹುಟ್ಟಿದ್ದಲ್ಲ. ಇಂಗ್ಲಿಷ್ ಭಾಷೆಯ ಬಹುಪಾಲು ವಿಜ್ಞಾನಕ್ಕೆ ಸಂಬಂಧಪಟ್ಟವು, ಔಷಧಕ್ಕೆ ಸಂಬಂಧಪಟ್ಟವು, ವೈದ್ಯಕೀಯಕ್ಕೆ ಸಂಬಂಧಪಟ್ಟವು ಎಲ್ಲವೂ ಗ್ರೀಕು, ಲ್ಯಾಟಿನ್‌ನಿಂದ ಬಂದಿರೋದು. ಬಾಟನಿಗೆ ಸಂಬಂಧಪಟ್ಟವೆಲ್ಲ ಅಲ್ಲಿಂದನೇ ಬಂದಿರೋದು.
ಭಾಷೆಯನ್ನು ಸ್ವೀಕರಿಸುವುದು, ಅದರಿಂದ ನಮನ್ನು ಸಮೃದ್ಧಗೊಳಿಸಿಕೊಳ್ಳುವುದು. ಎಲ್ಲೆಲ್ಲಿ ಸಾಧ್ಯವೋ ಅದನ್ನೇ ನಾವು ನಾಟಿ ಹಾಕಿಕೊಳ್ಳುವುದು, ಕಸಿ ಮಾಡಿಕೊಳ್ಳುವುದು ಮತ್ತು ಸ್ವಂತಕ್ಕೆ ಸೃಷ್ಟಿಸಿಕೊಳ್ಳುವುದು. ಕನ್ನಡಿಗರು ವಿವೇಕಿಗಳು. ಇದರಿಂದ ನಾವು ಕಳೆದುಕೊಂಡಿದ್ದೇನೂ ಇಲ್ಲ. ಯಾವಾಗ್ಲೂ ಕೂಡ ಕನ್ನಡ ದ್ವಿಭಾಷೆ, ತ್ರಿಭಾಷೆಗಳ ಸನ್ನಿವೇಶದಲ್ಲೇ ಬದುಕುತ್ತಾ ಬಂದಿದೆ. ಎಂದೂ ಸೋತಿಲ್ಲ. ಪ್ರಾಕೃತ, ಪಾಳಿ, ಸಂಸ್ಕೃತದ ಜೊತೆಗೂ ಬದುಕಿದ್ವಿ, ಪ್ರಾಕೃತದ ಶಬ್ದಗಳೂ ಬಂದಿವೆ, ಪಾಳಿ ಶಬ್ದಗಳೂ ಬಂದಿವೆ, ಸಂಸ್ಕೃತದ ಶಬ್ದಗಳೂ ಬಂದಿವೆ. ಆಮೇಲೆ ಪಾರ್ಸಿ ಜೊತೆಗೆ, ಅರಬಿ ಜೊತೆಗೆ ಬದುಕಿದ್ವಿ. ಪಾರ್ಸಿಯಿಂದ ಬೇಕಾದಷ್ಟು ಶಬ್ದಗಳನ್ನು ಆಡಳಿತಾತ್ಮಕವಾಗಿ ತಗೊಂಡ್ವಿ. ಭಾಷಾಭಂಡಾರವನ್ನು ಗಳಿಸೋದರಲ್ಲಿ ಬೇಕಾದಷ್ಟು ನೆರವು ಕೊಟ್ಟಿವೆ ಅರಬಿ ಮತ್ತು ಪಾರ್ಸಿ. ಅದರಲ್ಲಿ ನಮಗೆ ಯಾವತ್ತೂ ಹಿಂಜರಿಕೆ ಇಲ್ಲ. ಎಷ್ಟು ಸುಲಲಿತವಾಗಿ ನಮ್ಮವಾಗೋಗಿವೆ ಅಂದ್ರೆ ಸಂಬಳ, ಎಲ್ಲರೂ ಕೂಡ ಸಂಬಳದಾರರೇ ಇವತ್ತು. ಆ ಸಂಬಳ ಅನ್ನುವಂಥದ್ದು ಕನ್ನಡದ ಪದ ಅಲ್ಲ. ಸಲಹೆ ಕೊಡೋರೆ ಎಲ್ಲಾರೂನು. ಸಲಹೆ ಕೂಡ ಕನ್ನಡ ಪದ ಅಲ್ಲ. ಜವಾಬ್ದಾರಿ ಕೂಡ ಕನ್ನಡ ಪದ ಅಲ್ಲ. ಬೇಜವಾಬ್ದಾರಿ ಜವಾಬ್ದಾರಿ ಅಲ್ಲಿಂದ ಹಿಡಿದು ತಾಲೂಕು, ಜಿಲ್ಲೆ, ಹೋಬಳಿ, ಖುಷ್ಕಿ ಜಮೀನು, ಬಾಗಾಯ್ತು ಎಲ್ಲವನ್ನೂ ಕೂಡ ಎಷ್ಟು ಚೆನ್ನಾಗಿ ಸ್ವೀಕರಿಸಿದ್ದೀವಿ. ಎಲ್ಲೆಲ್ಲಿ ಏನೇನು ಬೆಳೆದಿತ್ತು ಅದನ್ನು ಸ್ವೀಕರಿಸಿದ್ದೀವಿ, ಕನ್ನಡೀಕರಿಸಿದ್ದೀವಿ. ಆ ವಿವೇಕವನ್ನು ಹೊಂದಿರುವುದಕ್ಕೆ ಕನ್ನಡಕ್ಕೆ ಒಂದು ಶಕ್ತಿ ಇತ್ತು. ಅದನ್ನು ಕನ್ನಡಿಯ ರೀತಿಯಲ್ಲಿ ಕೃತಿಕಾರರಾಗಿ ಕವಿರಾಜಮಾರ್ಗಕಾರ ತೋರಿಸಿದ್ದಾನೆ.
ಆ ಹೊತ್ತಿಗೆ ಕನ್ನಡ ಒಂದು ಜನಪದವಾಗಿ ನೆಲೆಗೊಳ್ಳುವುದಕ್ಕೆ ಬೇಕಾಗಿರುವ ಹಿನ್ನೆಲೆಯಿತ್ತು. 6ನೇ ಶತಮಾನಕ್ಕೆ ಶುರುವಾದಂತಹ ನಮ್ಮ ಕೃಷಿ ವಿಸ್ತರಣೆ, ಬಾದಾಮಿ ಚಾಲುಕ್ಯರ ಕಾಲದಲ್ಲಿ ಶುರುವಾದ ಕೃಷಿ ವಿಸ್ತರಣೆ ಅದು. ರಾಷ್ಟ್ರಕೂಟರ ಕಾಲಕ್ಕೆ ಅದು ಉತ್ತುಂಗವನ್ನು ಮುಟ್ಟಿತು. ವಿಜಯನಗರದ ಕಾಲಕ್ಕೆ ಅದು ವಾಣಿಜ್ಯ ಬೆಳೆಗಳಿಗೆ ವಿಸ್ತರಿಸಿಕೊಂಡಿತು. ಈ ಎಲ್ಲ ಹಂತಗಳಲ್ಲಿಯೂ ಕೂಡ ಜನ ನಾವು ಪರಸ್ಪರ ವಿನಿಮಯದಿಂದಾಗಿ, ವಾಣಿಜ್ಯದಿಂದಾಗಿ, ಸಹಕಾರದಿಂದಾಗಿ ಹಲವು ಕನ್ನಡಂಗಳನ್ನ್ನು ಒಂದು ಕನ್ನಡವಾಗಿ ಬೆಸೆದೆವು.
ಬೆಳಗ್ಗೆ ಯಾರೋ ಒಬ್ಬರು ಪ್ರಶ್ನೆ ಕೇಳ್ತಿದ್ರು- ಸಾಮಾನ್ಯ ಕನ್ನಡವನ್ನು ಹೇರಿದಂತಲ್ಲವಾ ಸಾರ್ ಅಂತ. ಸರಿ, ಪ್ರಶ್ನೆ ಸರಿ, ಆಶಯ ಸರಿ. ಪ್ರಕ್ರಿಯೆಯನ್ನು ನೋಡಿ. ಕನ್ನಡವನ್ನು ಎರಕ ಹೊಯ್ದು ತಂದು ಇಲ್ಲಿ ನಮಗೆ ಮಾರ್ಗವಾಗಿ ಸೂಚಿಸಿಲ್ಲ ಮಾರ್ಗಕಾರ. ಹಲವು ಕನ್ನಡಂಗಳಿಂದ ಸಿಕ್ಕಿದ್ದೆಲ್ಲವನ್ನೂ ಬಳಸಿ, ಒಂದು ಕನ್ನಡವಾಗಿ ಅದನ್ನು ಮಿದ್ದಿದ್ದಾರೆ. ಆ ಮಿದಿಯುವುದರಲ್ಲಿ ಹೇರಿಕೆಯಿರುವುದಿಲ್ಲ. ಬೇರೆ ಬೇರೆಯವರನ್ನು ಬೆರೆಸುವ ಅದರ ಮುಖಾಂತರವಾಗಿ ಹೊಸತನ್ನ್ನು ರೂಪಿಸುವ, ಸಾಮಾನ್ಯೀಕರಿಸುವ ಒಂದು ಪ್ರಕ್ರಿಯೆ. ನಾವ್ಯಾವಾಗ ಶುದ್ಧ ಕನ್ನಡ ಮಾತಾಡ್ತೀವಿ ಅಂತ ಬೇರೆ ಯಾವುದಾದರೂ ಕನ್ನಡವನ್ನು ಹೇರಿದ್ದಿದ್ದರೆ ಆಗ ಹಲವು ಕನ್ನಡಂಗಳ ಮೇಲೆ ಸಾಮಾನ್ಯ ಕನ್ನಡವನ್ನು ಹೇರಿದಂತಾಗುತ್ತಿತ್ತು. ಶುದ್ಧೀಕರಿಸುವ ಪ್ರಶ್ನೆ ಅಲ್ಲ ಅದು. ರೂಪಿಸುವ ಕೆಲಸ. ಉಳಿಸುವ ಮತ್ತು ಬಳಸುವ ಆ ಮುಖಾಂತರ ಬೆಳೆಸುವ ಪ್ರಕ್ರಿಯೆ. ಹಾಗಾಗಿ ನಮ್ಮಲ್ಲಿ ಒಂದೊಂದು ನಾಮಪದಕ್ಕೂ ಎಷ್ಟು ಸಮಾನಾಂತರ ನಾಮಪದಗಳಿದಾವೆ. ಕ್ರಿಯಾಪದಗಳಲ್ಲೂ ಎಷ್ಟು ಸಮಾನ ಕ್ರಿಯಾಪದಗಳಿದಾವೆ. ಕನ್ನಡದಲ್ಲಿ ಅವು ಹೇರಳವಾಗಿ ಸಿಗುತ್ತೆ ಯಾಕೆಂದರೆ, ಹಲವು ಕನ್ನಡಂಗಳಿಂದ ಸ್ವೀಕರಿಸಿದ್ದೀವಿ. ಅದನ್ನು ಸಮಾನವಾಗಿ ಬಳಸ್ತಿದ್ದೀವಿ. ನೇರವಾಗಿ ಇಂತಹ ಒಂದು ಪದ ಮಾತ್ರ ಹೇಳಬೇಕು ಅಂತ ಆನಂತರದ ಕನ್ನಡದ ಯಾವ ವ್ಯಾಕರಣಕಾರನೂ ಹೇಳಿಲ್ಲ. ಶಬ್ದಕೋಶದಲ್ಲೂ ಹೇಳಿಲ್ಲ. ಹಲವು ಕನ್ನಡಂಗಳಿಂದ ಸ್ವೀಕರಿಸಿ ಸ್ವೀಕರಿಸಿ ಒಂದು ಸಾಮಾನ್ಯ ಕನ್ನಡವನ್ನು... ಯಾಕೆ ಸಾಮಾನ್ಯ ಕನ್ನಡ ಅಂದರೆ ನಾವು ನಾಡನ್ನು ಕಟ್ತಾಯಿದೀವಿ. ಪ್ರಾದೇಶಿಕವಾಗಿ, ಸ್ಥಳೀಯವಾಗಿ ನಾವೆಷ್ಟೇ ಭಿನ್ನವಾಗಿ ಮಾತಾಡಿದರೂ ಎಲ್ಲರಿಗೂ ಬೇಕಾದ ಒಂದು ಸಂವಹನ ಬೇಕು ಅಂತ ಹೇಳಿದಾಗ ಕೆಲವು ಸಾಮಾನ್ಯ ರೀತಿಗಳು, ಆ ಸಾಮಾನ್ಯ ರೀತಿಯನ್ನು ರೂಪಿಸುವ ಆಕಾಂಕ್ಷೆ ಕವಿರಾಜಮಾರ್ಗವನ್ನು ರೂಪಿಸುವಲ್ಲಿ ಇದೆ. ಅದು ಬಹಳ ಮುಖ್ಯ.
ಇವತ್ತು ಮೊದಲಬಾರಿಗೆ ದಕ್ಷಿಣ ಭಾರತದಲ್ಲಿ ಅಥವಾ ಇಡೀ ಭಾರತದಲ್ಲಿ ಇರಬಹುದೇನೋ ಸರಿಯಾಗಿ ಗೊತ್ತಿಲ್ಲ... ಇತ್ತೀಚಿನ ಸ್ಪ್ಯಾನಿಷ್ ವ್ಯಾಕರಣವನ್ನು ಬಿಟ್ಟರೆ ಆ ರೀತಿಯಾಗಿ ಜನಮಾನಸದಲ್ಲಿರುವ ಭಾಷೆಯನ್ನು ರೂಪಿಸುವುದಕ್ಕೆ, ಭಾಷಾ ಮಾರ್ಗವನ್ನು ರೂಪಿಸುವುದಕ್ಕೆ ಪ್ರಯತ್ನಪಟ್ಟವರಲ್ಲಿ ಕವಿರಾಜಮಾರ್ಗಕಾರ ಬಹಳ ಮುಖ್ಯನಾದವನಾಗಿದ್ದಾನೆ. ಅದು ತಂತಾನೆ ಹುಟ್ಟಿದ್ದಲ್ಲ, ತಲೆಯಲ್ಲಿ ಹುಟ್ಟಿದ ಆಲೋಚನೆಯಲ್ಲ. ಒಂದು ನಾಡಿನ ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ತನ್ನ ಒಂದು ಕಾಲಘಟ್ಟ ಮುಖ್ಯವಾದುದು. ಯಾಕೆಂದರೆ ಆ ಹೊತ್ತಿಗೆ ಕನ್ನಡ ಬೆಳೆಯಬೇಕಾದ, ಬೆರೆಯಬೇಕಾದ ಅಗತ್ಯ ಬಂದಿತು. ಹಲವು ಬಗೆಯ ವ್ಯವಸಾಯಗಳು, ಹಲವು ಬಗೆಯ ಕುಲಕಸುಬುಗಳು, ಹಲವು ಬಗೆಯ ವಾಣಿಜ್ಯಗಳು, ಹಲವು ಬಗೆಯ ವಾಣಿಜ್ಯ ಕಾರ್ಯಗಳು ಈ ನಾಡಿನ ತುಂಬ ಹರಿದವು. ಹಾಗಾಗಿ ಆ ನರನಾಡಿಗಳು ಹರಿದಿರುವುದೇ ನಾಡು. ಅದು ಗೋದಾವರಿಯಿಂದ ಕಾವೇರಿಯವರೆಗೆ ಇತ್ತು. ನಿಕಟವಾಗಿ ಹೆಣೆದುಕೊಂಡಿತ್ತು. ಅದರಾಚೆಗೆ ಅದು ಇರಲಿಲ್ವಾ? ಇತ್ತು. ದ್ರವೀಕೃತ ರೂಪದಲ್ಲಿ. ಸಾಂದ್ರ ಸ್ಥಿತಿಯಲ್ಲಲ್ಲ. ಯಾವುದು ಸಾಂದ್ರ ಸ್ಥಿತಿಯಲ್ಲಿತ್ತೋ ಅದನ್ನು ಕವಿರಾಜಮಾರ್ಗಕಾರ ಚೆನ್ನಾಗಿ ವ್ಯಾಖ್ಯಾನಿಸಿ ಹೇಳಿದ - ಭಾವಿಸಿದ ನಾಡದಾ ಕನ್ನಡದೊಳ್. ಭಾವಿಸಿದ ನಾಡು... ಇದನ್ನು ನಾವು ಭಾವಿಸ್ತಾಯಿದೀವಿ. ಇನ್ನು ಕೆಲವರು ಭಾವಿಸಿಲ್ಲ, ಆಚೆಗಿದಾರೆ. ಅವರು ಬೆರಿತಾರಾ ಬೆರೆಯಲ್ವಾ? ಬೆರೀತಾರೆ- ವ್ಯವಹಾರ, ವಾಣಿಜ್ಯ ಜಾಸ್ತಿಯಾದರೆ, ಸಂಚಾರ ಜಾಸ್ತಿಯಾದರೆ, ಒಡನಾಟ ಜಾಸ್ತಿಯಾದರೆ. ಒಡನಾಟದಿಂದ, ವಾಣಿಜ್ಯದಿಂದ, ಶ್ರಮವಿಭಜನೆಯಿಂದ, ಪರಸ್ಪರ ಸಹಕಾರದಿಂದ ಬೆಳೆದಂತಹ ಭಾಷೆ, ಆ ಭಾಷೆ ಒಂದು ನಾಡಾಗಿ ಹೆಪ್ಪುಗೊಂಡಿತು.
ಆ ಹೆಪ್ಪುಗೊಂಡ ನಾಡಿನ ಸನ್ನಿವೇಶಕ್ಕೆ ಇನ್ನು ಒಂದು ಪ್ರಭುತ್ವಾಂಗೀಕಾರದ ಭಾಷೆ ಬೇಕು. ಶಾಸ್ತ್ರಗ್ರಂಥಗಳನ್ನು ಬರೆಯಬೇಕು. ಯಾಕೆಂದರೆ ಇಲ್ಲಿವರೆಗೂ ಕಾವ್ಯವನ್ನು ನೀವು ಆಡುನುಡಿಗಳಲ್ಲಿ ಬರೀಬಹುದು. ಇನ್ನು ಮೇಲೆ ನೀವು ಆಡಳಿತದ ಬಗ್ಗೆ ಬರೀಬೇಕು. ಜ್ಞಾನಶಿಸ್ತುಗಳ ಬಗ್ಗೆ ಬರೀಬೇಕು. ವ್ಯವಸಾಯದ ಬಗ್ಗೆ, ಕೆರೆಗಳ ಬಗ್ಗೆ, ಬಿತ್ತನೆ ಬಗ್ಗೆ, ಗೊಬ್ಬರದ ಬಗ್ಗೆ ಬರಿಬೇಕು. ಇದು ಎಲ್ಲವೂ ಅರ್ಥ ಆಗಬೇಕು. ಅವರಿಗೆ ಮಡಕೆ ಅಂದ್ರೂ ಗೊತ್ತಾಗುತ್ತೆ, ನೇಗಿಲು ಅಂದ್ರೂ ಗೊತ್ತಾಗುತ್ತೆ. ಅಪರಿಚಿತವಾದದ್ದೇನಿಲ್ಲ. ನೇಗಿಲಿಗೆ ಮಡಕ ಅಂತಾರೆ ತೆಲುಗಿನಲ್ಲಿ. ತೆಲುಗು ಮೂಲದ ಪದಗಳನ್ನು ಬಳಸಬಲ್ಲವರಾದೆವು ಆದರೆ ಅದರ ಜೊತೆಗೆ ಸಂವಾದಿಯಾದ ಕನ್ನಡ ಪದಗಳನ್ನು ಇಡಬಲ್ಲವರಾದೆವು. ಮರಾಠಿಯಿಂದ, ತಮಿಳಿನಿಂದ ಇಂತಹ ಎಲ್ಲ ಭಾಗಗಳಿಂದ ಇರುವಂಥದ್ದನ್ನು ತಂದು, ಒಂದು ಉತ್ಪಾದಕ ಘಟಕವಾಗಿ, ಸಾಮಾಜಿಕ ಘಟಕವಾಗಿ ಈ ನಾಡನ್ನು ರೂಪಿಸುವ ಆಶಯವನ್ನು ಕನ್ನಡಿಸ್ತಾಯಿದಾನೆ. ಅದಕ್ಕೆ ಅದು ಕನ್ನಡಿ, ಕೈದೀವಿಗೆಯುಂ ಅನ್ನುವಂತಹದ್ದು ಬಹಳ ಮುಖ್ಯವಾಗಿರುವಂತಹದ್ದು. ಬರಗೂರು ಅವರು ಈಗಾಗಲೇ ಹೇಳಿದ್ದಾರೆ. ಅದು ಸಹ ಅಸ್ತಿತ್ವಗಳನ್ನು ಒಪ್ಪುತ್ತೆ. ವಿರೋಧಿ ಅಸ್ತಿತ್ವಗಳನ್ನಲ್ಲ. ಕನ್ನಡಿಗರ ವಿವೇಕ ಎಷ್ಟು ದೊಡ್ಡದು ಅಂತ ಹೇಳಿದರೆ, ಮೊದಲಿಂದಲೂ ಕೂಡ ಕನ್ನಡದ ವಿವೇಕ ಅಂತ ಒಂದು ಮಾತನ್ನು ಹೇಳ್ತಾಯಿರ್ತೀವಿ ಪಂಪನಿಂದ ಮಾತ್ರ ಅಲ್ಲ, ಕವಿರಾಜಮಾರ್ಗಕಾರನಿಂದಲೂ ಕೂಡ ಒಂದು ಕನ್ನಡದ ವಿವೇಕ ವ್ಯಕ್ತಗೊಳ್ತಾಬಂದಿದೆ. ವ್ಯಕ್ತಪಡ್ತಾ ಬಂದಿರೋದಲ್ಲ. ಹೇಳಲ್ಪಡ್ತಾ ಬಂದಿದೆ. ಇದ್ದದ್ದನ್ನು ಹೇಳಿದೆ. ಕಟ್ಟೊದಿಲ್ಲ, ಜನಪದ ತಾನೇ ಕಟ್ಟಿಕೊಳ್ತು. ನಾವು ವಿವೇಕವನ್ನು ಕೃತಿಯ ಮೂಲಕ ಕಲಿಸುವುದಿಲ್ಲ. ವಿವೇಕ ಜನಮಾನಸದಲ್ಲಿ ಮೂಡಿ ಬಂದಿದೆ. ಜನಪದದಲ್ಲಿ ಅದು ಮೂಡಿ ಬಂದಿದೆ. ಅದನ್ನು ಇವನು ಕನ್ನಡಿಯ ರೀತಿ ಹೇಳ್ತಾಯಿದಾನೆ.
ಕನ್ನಡದ ಜನಮಾನಸದಲ್ಲಿರೋದೇನು? ನಮಗೆ ಸಹ ಅಸ್ತಿತ್ವಗಳ ಬಗ್ಗೆ ಗೊತ್ತಿದೆ, ಏಕಕಾಲದಲ್ಲಿ ಕರ್ನಾಟಕದಲ್ಲಿದ್ದಷ್ಟು ವಿಭಿನ್ನವಾದ ಧರ್ಮಗಳು ಅವುಗಳ ಸಹ ಅಸ್ತಿತ್ವವನ್ನು ಬೇರೆ ಎಲ್ಲೂ ಹೊಂದಿರಲಿಲ್ಲ ಎನ್ನಬಹುದೇನೋ. ಇಲ್ಲಿ ಬೌದ್ಧ ಇತ್ತು. ಬಹಳ ಶಾಂತಿಯುತ ಪರಿವರ್ತನೆಯೊಂದಿಗೆ ಇಲ್ಲಿ ಜೈನರು ಬಂದರು. ವೈಷ್ಣವರು ಬಂದರು, ವೀರಶೈವರು ಬಂದರು. ಸ್ಮಾರ್ತರು ಬಂದರು, ತಾಂತ್ರಿಕರು ಬಂದರು, ಆರೂಢರು ಬಂದರು, ಸಿದ್ಧರು-ನಾಥರು, ಶಾಕ್ಯ್ತರು, ಎಷ್ಟು ಬಗೆಯ ಧರ್ಮಗಳು ಇಲ್ಲಿ ಬಂದು ಇದ್ದುಕೊಂಡಿವೆ ಅಂತ ಹೇಳಿದರೆ ಯಾವುದೂ ಯಾವುದನ್ನೂ ಮುಗಿಸಿಬಿಡುವ ಪ್ರಯತ್ನಪಡಲಿಲ್ಲ. ತಾಂತ್ರಿಕ ಧರ್ಮ ಅನ್ನುವಂತಹದ್ದು ಎಲ್ಲ ಧರ್ಮಗಳಲ್ಲೂ ಸಿಗುತ್ತೆ. ವೈಷ್ಣವ ಇದೆ ಮತ್ತೆ ಶೈವ ಬೇರೆ ಬೇರೆ ಇದೆ ಏನ್ಮಾಡ್ಬೇಕು? ಕೊನೆಗೆ ಹರಿಹರಪಂಥ ಒಂದಾಗುವ ಕಾಲಘಟ್ಟವೂ ಬಂತು ವಿಜಯನಗರದೊಂದಿಗೆ. ಹರಿಹರ ಅನ್ನೋದೇ ಒಂದು ಪಂಥ. ಹರಿಯೂ ಶಿವನೇ ಶಿವನೂ ಹರಿಯೇ. ಇದು ಬರೀ ಶೈವ ಅಥವಾ ವೈಷ್ಣವದಲ್ಲುಳಿದಿಲ್ಲ. ಜೈನರಿಗೂ ಹೋಯ್ತು. ಯಾಪನೀಯ ಪಂಥ ರೂಪುಗೊಂಡಿತು. ಅವರು ತಮ್ಮ ಪಾರ್ಶ್ವನಾಥನನ್ನು ಶಿವನಿಗೆ ಸಮೀಕರಿಸಿದರು, ನೇಮಿನಾಥನನ್ನು ವಿಷ್ಣುವಿಗೆ ಸಮೀಕರಿಸಿದರು. ವಿಷ್ಣು ಮತ್ತು ಶಿವನ ಪೂಜೆಯ ಜೊತೆಗೆ ಲಕ್ಷ್ಮೀ ಪೂಜೆ, ಪದ್ಮಾವತಿ ಪೂಜೆ, ಇತರ ಮಾತೃದೇವತೆಗಳ ಪೂಜೆಗಳನ್ನೂ ಕೂಡ ಈ ಧರ್ಮಗಳು ಸಮೀಕರಿಸಿಕೊಂಡವು. ತಾರಾಭಗವತಿಯ ಪೂಜೆ, ಲಜ್ಜಾಗೌರಿಯ ಪೂಜೆ ತಾಂತ್ರಿಕರಲ್ಲಿ ಇದೆ. ಬೌದ್ಧರಲ್ಲಿ ತಾರಾ ಭಗವತಿ ಇದ್ದಾಳೆ. ಜೈನರಲ್ಲಿ ಪದ್ಮಾವತಿ, ಲಕ್ಷ್ಮಿ ಇದ್ದಾರೆ. ನಮ್ಮಲ್ಲಿ ಅಮ್ಮಗಳಿದ್ದಾರೆ. ಈ ಅಮ್ಮಗಳು ಅವರಲ್ಲಿ ದೇವತೆಗಳಾಗೋದ್ರು. ಪೂಜೆ ಶುರುವಾಯ್ತು.
ಅಂದರೆ ಸಹ ಅಸ್ತಿತ್ವಗಳನ್ನು ನೀಸುವಂತಹ ಗುಣ ಕನ್ನಡ ಜನಪದರಲ್ಲಿ ಯಾವಾಗಲೂ ಕೂಡ ಇದೆ. ಇದು ಹೇರಿದ್ದಲ್ಲ, ರಾಜ ಹೇಳಿಕೊಟ್ಟದ್ದಲ್ಲ. ಅನ್ಯವನ್ನು ನಾವು ವಿರೋಧ ಅಂತ ನೋಡಿಲ್ಲ. ಆನಂತರ ಕ್ರಿಶ್ಚಿಯನ್ನರು, ಮುಸ್ಲಿಮರು ಬಂದರು. ಇಷ್ಟೆಲ್ಲಾ ಬಂದಾಗಲೂ ಕೂಡ ನಮ್ಮಲ್ಲಿ ಇದ್ದದ್ದು ಸಹ ಅಸ್ತಿತ್ವದ ಭಾವನೆ. ಮುಹರಂ ಹಬ್ಬದಲ್ಲಿ ಹುಲಿ ವೇಷ ಹಾಕಿ ಕುಣಿಯೋದಕ್ಕೆ ಹಿಂದೂಗಳಿಗೆ ಯಾವತ್ತೂ ಏನೂ ಅನ್ನಿಸಲಿಲ್ಲ. ಹಾಗೆ ಬೆಂಗಳೂರಲ್ಲಿ ಮೇರಿಯಮ್ಮನ ಗುಡಿಗೆ ಹರಕೆ ಹೊರೋದಕ್ಕೆ ನಮ್ಮ ಹೆಣ್ಣು ಮಕ್ಕಳಿಗೆ ಏನೂ ಅನ್ನಿಸಲಿಲ್ಲ. ಹಾಗೇ ಬಂದೇನವಾಝ್ ದರ್ಗಾಕ್ಕೆ ಹೋಗೋಕೆ ಹಿಂದೂ ಮತ್ತು ಮುಸ್ಲಿಮ್ ಇಬ್ಬರಿಗೂ ಆಗ್ತಾಯಿತ್ತು. ಶಿಶುನಾಳ ಶರೀಫರಿಗೆ ಗೋವಿಂದ ಭಟ್ಟನನ್ನು ಗುರುವಾಗಿ ಸ್ವೀಕರಿಸೋದಕ್ಕೆ ಯಾವುದೂ ಅಡ್ಡ ಆಗಲಿಲ್ಲ. ಬೇರೆ ಕಡೆ ಮೀರಾಗೆ ರವಿದಾಸ ಗುರುವಾದ ಹಾಗೆ, ಚೋಖಾಮೇಳ ವಾರಕರಿಗಳಿಗೆ ಗುರುವಾದ ಹಾಗೆ. ಕರ್ನಾಟಕದಲ್ಲಿ ಕನ್ನಡ ಜನಪದರು ಮೊದಲಿಂದಲೂ ಸಹ ಅಸ್ತಿತ್ವವನ್ನು, ಭಿನ್ನ ಅಸ್ತಿತ್ವಗಳನ್ನು ಅನ್ಯ ಮತ್ತು ವಿರೋಧ ಅಂತ ನೋಡದೆ ಸಹಬಾಳ್ವೆಯನ್ನು ರೂಪಿಸಿಕೊಂಡ ಕಾರಣದಿಂದ ಕರ್ನಾಟಕ ಅನ್ನುವಂತಹದ್ದು ಸುತ್ತ ಎಲ್ಲ ನಾಡುಗಳಲ್ಲೇ ಬಹಳ ಸಂಪದ್ಭರಿತವಾದ ನಾಡಾಗಿ ರೂಪುಗೊಂಡಿತು. ಆ ರೀತಿ ಆಗಬೇಕು ಅನ್ನುವುದು ಕವಿರಾಜಮಾರ್ಗಕಾರನ ಆಶಯ.
‘‘ಕಸವರವೆಂಬುದು ನೆರೆ ಸೈರಿಸಲಾರ್ಪೊಡೆ ಪರ ವಿಚಾರಮುಮಂ ಪರ ಧರ್ಮಮುಮಂ’’
‘ಮನುಷ್ಯ ಜಾತಿ ತಾನೊಂದೆ ವಲಂ’
‘ಸರ್ವಜನಾಂಗದ ಶಾಂತಿಯ ತೋಟ’
ಹೀಗೆ ಕನ್ನಡದ ವಿವೇಕದ ಝರಿ ಹೇಗೆ ಸತತವಾಗಿ ಹರಿತಾ ಬಂದಿದೆ ಎಲ್ಲೂ ಕೂಡ ತುಂಡರಿಸಲ್ಪಡದೆ.
‘ಆವಂದಿರ ಕುಲವೇನೋ’
‘ಕುಲಕುಲಕುಲವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ’
ಅಲ್ಲಿಂದ ಇಲ್ಲಿಯವರೆಗೆ ಮನುಷ್ಯತ್ವದ ಗುಣವನ್ನು ಹೇಳುತ್ತಾ ಬಂದಿದೆ. ಮನುಷ್ಯತ್ವದ ಹಿರಿಮೆಯನ್ನು ಹೇಳಿದೆ. ಮಾನವೀಯತೆಯನ್ನು, ಸಹ ಅಸ್ತಿತ್ವವನ್ನು ಗೌರವಿಸಿದೆ. ಕೀಳರಿಮೆಯಿಂದ ನರಳುವುದೂ ಇಲ್ಲ, ಮೇಲರಿಮೆಯಿಂದ ಬೀಗುವುದೂ ಇಲ್ಲ. ಸಂಸ್ಕೃತದಿಂದ ಬೇಕಾದ ಶಬ್ದವನ್ನ ಪಡೆಯಿತು, ತನಗೆ ಬೇಕಾದ ರೀತಿಯಲ್ಲಿ ಅದನ್ನು ಬಾಗಿಸಿತು. ಅದಕ್ಕೆ ಬೇಕಾದ ರೀತಿಯಲ್ಲಿ ತತ್ಸಮಗಳನ್ನು, ತದ್ಭವಗಳನ್ನು ತಂದಿತು. ಸಮಾಸವನ್ನು, ಸಂಧಿಗಳನ್ನು ಮಾಡಬೇಕಾದರೆ, ಸಂಸ್ಕೃತದ ಪದಗಳನ್ನು ಬಳಸಬೇಕಾದರೆ ಕರ್ಕಶವಾಗದಿರುವ ರೀತಿಯಲ್ಲಿ ಮಾಡಿ ಎಂದಿತು. ಕವಿರಾಜಮಾರ್ಗಕಾರನ ನಂತರ ಬಂದಿರುವ ಹತ್ತು ಶತಮಾನದ ಯಾವ ಅನುವಾದಕರೂ ಕೂಡ ಆರಕ್ಷಕ ಅಭಿಯಂತರರು, ಗುಪ್ತ ನಿರೀಕ್ಷಕ ಭಯಂಕರರು ಅನ್ನುವಂತಹ ಅನುವಾದ ಮಾಡಲಿಲ್ಲ. ಯಾರು ಸಂಸ್ಕೃತದ ಶ್ರೇಷ್ಠತೆಯ ಬಗ್ಗೆ ಬಹಳ ಅಭಿಮಾನಪಟ್ಟರೋ, ತಮ್ಮ ಭಾಷಾ ಶಕ್ತಿಯ ಬಗ್ಗೆ ಯಾರು ಕೀಳರಿಮೆಪಟ್ಟರೋ ಅವರು ಮಾತ್ರ ಅಂತಹ ಅನುವಾದಗಳನ್ನು ಮಾಡೋಕೆ ಪ್ರಯತ್ನಪಟ್ಟರು. ಆದರೆ ನಮ್ಮ ಜನ ಸಹಜವಾಗಿ, ಬಹಳ ಸುಲಭವಾಗಿ, ಅವರಿಗೆ ಯಾವ ಕಷ್ಟವೂ ಇಲ್ಲದೆ, ಯಾಕೆಂದರೆ ಅನ್ಯದ ಎದುರು ತನನ್ನು ಕೀಳಾಗಿ ಭಾವಿಸುವುದಾಗಲೀ, ಅದನ್ನು ಎದುರಾಳಿಯಾಗಿ ಭಾವಿಸುವುದಾಗಲೀ ಮಾಡದೆ ಸಹ ಅಸ್ತಿತ್ವದ ಮನೋಭಾವದಿಂದ ಮುನ್ನಡೆದರು.
ಗುಜರಾತ್‌ನಿಂದ, ತಮಿಳುನಾಡಿನಿಂದ, ಮಹಾರಾಷ್ಟ್ರದಿಂದ ಜನ ಬರ್ತಾರೆ, ಒಂದು ಕಾಲಘಟ್ಟದ ಉತ್ತರ ಕರ್ನಾಟಕದ ಎಲ್ಲ ಶಾನುಭೋಗರೂ ಕೂಡ ಮಹಾರಾಷ್ಟ್ರದ ಬ್ರಾಹ್ಮಣರು. ನಮ್ಮವರಿಗೆ ಭೂಮಿಕಾಣಿ ಲೆಕ್ಕ ಬರಿಯೋಕೆ ಬರ್ತಿರ್ಲಿಲ್ಲ, ಆದ್ರಿಂದ ಅಲ್ಲಿಂದ ಅವರನ್ನು ಕರೆತಂದರು. ನಮಗೇನೂ ಕಷ್ಟ ಆಗ್ಲಿಲ್ಲ. ಆದ್ರಿಂದ ಮರಾಠಿಯಲ್ಲೂ ದಾಖಲಾತಿಯನ್ನು ಇಟ್ವಿ. ಮೈಸೂರು ಮಹಾರಾಜರ ಆಸ್ಥಾನದಲ್ಲಿ ಮೂರೂ ಭಾಷೆಗಳಲ್ಲಿ ದಾಖಲಾತಿಯನ್ನು ಇಟ್ವಿ. ಕನ್ನಡ, ಪರ್ಷಿಯನ್ ಮತ್ತು ಮರಾಠಿ. ಅಲ್ಲಿ ದ್ವೇಷ ಅನ್ನುವಂಥದ್ದು ಏನೂ ಇರಲಿಲ್ಲ. ಆದ್ದರಿಂದ ಮರಾಠಿಗರು ನಮ್ಮ ಸಹೋದರ ಸಹೋದರಿಯರಾಗಿ ನಮ್ಮಿಂದ ಬೇಕಾದಷ್ಟು ಶಬ್ದಗಳನ್ನು ಪಡೆದರು. ಮರಾಠಿಗರಿಗೆ ತುಪ್ಪ ಅನ್ನುವ ಸ್ವಂತ ಶಬ್ದ ಇಲ್ಲ, ತೂಪ ಅಂತಾರೆ. ನಮ್ಮಿಂದಲೇ ತಗೊಂಡಿರೋ ಶಬ್ದ ಅದು. ಯಾಕೆಂದರೆ ಹೈನುಗಾರಿಕೆಯಲ್ಲಿ ಕರ್ನಾಟಕ ಮೊದಲಿನಿಂದಲೂ ಕೂಡ ಬಹಳ ಸಮೃದ್ಧಿ. ಹಾಗೇನೇ ಪರ್ಷಿಯಾದವರು ಕೃಷಿಯಲ್ಲಿ ನಮಗಿಂತ ಮುಂದಿದ್ದರು. ಅವರಿಂದಲೂ ಕಲಿತೆವು.
ಆದ್ದರಿಂದ ಈ ಕನ್ನಡಿಯೂ ಕೈದೀವಿಗೆಯೂ... ನಮ್ಮ ಅಸ್ಮಿತೆಯನ್ನು ಹೇಳ್ತಾಯಿರುವ ಕಾಲಘಟ್ಟದಲ್ಲಿ ಕನ್ನಡಿಗರು ಒಂದು ಜನಪದವಾಗಿದ್ದೇವೆ, ಒಂದು ನಾಡಾಗಿದ್ದೇವೆ. ಸಾಮ್ರಾಜ್ಯವಾಗಿದೀವಿ ಅನ್ನಲಿಲ್ಲ ಕವಿರಾಜ ಮಾರ್ಗಕಾರ. ಸಾಮ್ರಾಜ್ಯಗಳು ಮಸಳಿಸಿ, ಪ್ರಾದೇಶಿಕ ರಾಜ್ಯಗಳು ಉದಯವಾಗುವ ಒಂದು ಕಾಲಘಟ್ಟದಲ್ಲಿ ಜನಮಾನಸದ ಅಭಿವ್ಯಕ್ತಿಯ ಪ್ರತೀಕವಾಗಿ ಕವಿರಾಜಮಾರ್ಗ ತನ್ನ ಆಶಯಗಳನ್ನು ಮಂಡಿಸುತ್ತಾ ಇದೆ. ನಾವೊಂದು ಭಾಷಾ ಜನಪದ. ರಾಜರ ಸಾಮ್ರಾಜ್ಯ ಏಳುತ್ತೆ ಬೀಳುತ್ತೆ. ಕನ್ನಡನಾಡು ಮಾತ್ರ ಒಂದ ಭಾವಿಸಿದಾ ಜನಪದವಾಗಿ ಒಂದಾಗಿ ಇರುತ್ತೆ. ಯಾವ ರಾಜನ ಆಳ್ವಿಕೆಗಾದರೂ ಒಳಗಾಗಬಹುದು ಆದರೆ ಒಂದು ಭಾಷಾ ಜನಪದವಾಗಿ ಒಂದಾಗಿರುತ್ತದೆ . ಅದೇ ಸಂದರ್ಭದಲ್ಲಿ ತಮಿಳುನಾಡು ರೂಪಗೊಳ್ತು. ಆಂಧ್ರಪ್ರದೇಶವೂ ರೂಪಗೊಳ್ತು. ರಾಜರ ಚಕ್ರಾಧಿಪತ್ಯಗಳು ವಿಸ್ತರಣೆಗೊಂಡವು ಮತ್ತು ಕುಸಿದವು. ವಿಜಯನಗರ ಸಾಮ್ರಾಜ್ಯವು ಬೇಕಾದಷ್ಟು ಭೂಭಾಗ ಹೊಂದಿತ್ತು. ಟಿಪ್ಪುಸುಲ್ತಾನ್ ಆಳ್ವಿಕೆಯಲ್ಲಿ ದಕ್ಷಿಣ ಭಾರತದ ಬಹಳ ಭಾಗಗಳು ಸೇರಿದ್ದವು. ಆದರೆ ಕನ್ನಡನಾಡು ಮಾತ್ರ ಒಂದು ಸಾಂಸ್ಕೃತಿಕ ಭಾಷಾ ಘಟಕವಾಗಿ ಇದ್ದೇ ಇತ್ತು. ಅದರ ವಹಿವಾಟನ್ನು ಅದು ನಡೆಸ್ತಾನೇ ಇತ್ತು. ಅದರಿಂದ ಆ ರೀತಿಯಾಗಿರುವ ಒಂದು ಕಾಲಘಟ್ಟದ ಪ್ರತೀಕವಾಗಿರುವ ಇದು ನಮಗೆ ಏನು ಆಶಯಾತ್ಮಕವಾಗಿ ಹೇಳಿದೆ, ಕನ್ನಡಿ ಹಿಡಿದು ನಮ್ಮ ಸ್ವಭಾವ ಏನು ಅಂತ ಹೇಳಿದೆ ಮತ್ತು ಈ ಸ್ವಭಾವ ಹೇಗೆ ಮುಂದುವರಿಯಬೇಕು ಎಂದಿದೆ, ಅದನ್ನು ಮುಂದುವರಿಸಿಕೊಂಡೇ ಕನ್ನಡದ ಜನ ಇವತ್ತಿನವರೆಗೂ ಬಂದಿದ್ದಾರೆ. ಅದರಿಂದ ಇಲ್ಲಿಯವರೆಗೆ ಇದಕ್ಕೆ ಬಂದಿರುವಂತಹ ವೈಭೋಗ ಯವುದಾದರೂ ಇದ್ರೆ ಅದು ಕನ್ನಡದ ವಿವೇಕದಿಂದ ಬಂದಿರುವಂಥದ್ದು. ಅನ್ಯವನ್ನು ಅಸಹ್ಯಿಸಿಕೊಳ್ಳದ, ಸಹ ಅಸ್ತಿತ್ವವನ್ನು ಸದಾ ಒಪ್ಪಿಕೊಳ್ಳುವ, ಪರ ವಿಚಾರಕ್ಕೂ-ಪರ ಧರ್ಮಕ್ಕೂ -ಪರರಿಗೂ ಯಾವಾಗಲೂ ಕೂಡ ವಿನಯವಂತರಾಗಿ ನಡೆದುಕೊಳ್ಳುವ ಗುಣ ಉಳಿಸಿಕೊಂಡು ಬಂದಿದೆ. ನಮ್ಮಲ್ಲಿ ಕಲಹ ಕಡಿಮೆ. ಹೊಂದಾಣಿಕೆ ಮತ್ತು ಜೊತೆಗೆ ಸೇರಿ ಬಾಳುಕಟ್ಟುವುದು ಜಾಸ್ತಿ.
ಈ ರೀತಿಯಾಗಿರುವ ಚಾರಿತ್ರಿಕ ಕೃತಿಗಳು ಕಾಲಘಟ್ಟ ಬೇರೆ ಆದರೂ ಕೂಡ ಮಸುಕಾಗಲ್ಲ. ಯಾಕೆಂದರೆ ಅದರಲ್ಲಿ ನಿರಂತರವಾಗಿ ಹರಿಯುವಂತಹ ಯಾವುದೋ ಒಂದು ಪ್ರೇರಣೆ ಇದೆ. ಕವಿರಾಜಮಾರ್ಗಕಾರನ ಪ್ರೇರಣೆ ಕನ್ನಡ ಭಾಷೆಯ ಬಗ್ಗೆ, ಕನ್ನಡ ಜನರ ಬಗ್ಗೆ, ಕನ್ನಡದ ಜನಪದದ ಬಗ್ಗೆ ಇದೆ. ಆದ್ದರಿಂದ ಅದನ್ನು ನಾವು ಸರಿಯಾಗಿ ಎದುರುಗೊಳ್ಳಬೇಕು. ನಾನಿದನ್ನು ಯಾಕೆ ಹೇಳ್ತಾಯಿದ್ದೀನಿ ಅಂದ್ರೆ ಬೆಳಗ್ಗೆಯಿಂದ ಮಾತಾಡಿದ್ದು ಅದರ ಕಾವ್ಯಾಲಂಕಾರದ ಬಗ್ಗೆ, ಛಂದಸ್ಸಿನ ಬಗ್ಗೆ, ಅದರಲ್ಲಿರಬಹುದಾದ ಬೇರೆ ಬೇರೆ ಗುಣಲಕ್ಷಣಗಳು, ಕಾವ್ಯಕ್ಕೆ ಮಾರ್ಗದರ್ಶನ ನೀಡುವ ಮಾತಾಡಿದ್ದೀವಿ. ಅದು ಭಾಷೆಗೆ ಯಾವ ಬಗೆಯ ಮಾರ್ಗದರ್ಶನ ನೀಡಿದೆ, ಬದುಕಿನ ನಿರ್ಮಾಣದ ಬಗ್ಗೆ ಹೇಗೆ ಕನ್ನಡಿ ಹಿಡಿದಿದೆ ಮತ್ತು ಅದು ಯಾವ ರೀತಿ ಕೈದೀವಿಗೆಯಾಗಿದೆ ಎನ್ನುವುದನ್ನೂ ಕೂಡ ನಾವು ಮುಖ್ಯಾಂಶವಾಗಿ ಭಾವಿಸಬೇಕು. ಯಾಕೆಂದರೆ ನಾವು ಅದನ್ನು ಕೇವಲ ಅಲಂಕಾರ ಗ್ರಂಥವಾಗಿ ಸೀಮಿತಗೊಳಿಸಬಾರದು. ಯಾವುದೇ ಕೃತಿ ಒಂದು ಕಾಲಘಟ್ಟದಲ್ಲಿ ಬಂತು ಅಂದರೆ ಅದಕ್ಕೆ ಆ ಕಾಲಘಟ್ಟದ ಆಶಯಗಳು ಬಹಳ ಪ್ರೇರಣೆ ನೀಡಿರುತ್ತವೆ.
ಯಾಕೆ ಪಂಪನಲ್ಲಿಯೇ ಕರ್ಣನ ಮಾತು ಬಂತು- ಕುಲಂ ಕುಲಮಲ್ತು ಚಲಂ ಕುಲಮ್ ಅಂತ, ಅದು ಶೌರ್ಯದ ಯುಗ. ಎಂಟನೆಯ ಶತಮಾನದ ನಂತರ ಕರ್ಣಾಟಕದಲ್ಲಿ ಬಂದ ಬದಲಾವಣೆಗಳೇನು ಎನ್ನುವುದರ ಬಗ್ಗೆ ಒಂದು ಶಾಸನ ಹೇಳುತ್ತೆ. ಎಂಟನೇ ಶತಮಾನದ ನಂತರ ತಮ್ಮ ಗೋತ್ರ ಯಾವುದು ಅಂತ ಹೇಳಲಾಗದ ಕುಲಗಳೆಲ್ಲಾ ರಾಜರಾಗಿ ಆಳ್ತಾಯಿದ್ದಾರೆ ಅಂತ ಆ ಶಾಸನ ಹೇಳ್ತಾಯಿದೆ. ಗೋತ್ರ ಯಾವುದು ಅಂತ ಹೇಳಲಾಗದ ಕುಲಗಳೆಲ್ಲವೂ ರಾಜರಾಗಿ ಕರ್ನಾಟಕವನ್ನು ಆಳ್ತಾಯಿದ್ದಾರೆ ಅಂದ್ರೆ ಅರ್ಥ, ಶುದ್ಧ ಕ್ಷತ್ರಿಯ, ಶುದ್ಧ ಬ್ರಾಹ್ಮಣ, ಶುದ್ಧ ಆರ್ಯ ಅನ್ನೋ ಕುಲಗಳು ಆಳ್ತಾ ಇಲ್ಲ. ಗೋತ್ರ ಹೇಳೋಕಾಗ್ದೇ ಇರೋರು ನಾವೇ ತಾನೆ. ನಾವು ಪಣಕಟ್ಟಿನವರು. ನಮಗೆ ಪಣಕಟ್ಟು ಗೊತ್ತೇ ಹೊರತು, ನಮಗೆ ಬಳಿಗಳು ಗೊತ್ತೇ ಹೊರತು, ಗೋತ್ರ ಗೊತ್ತಿಲ್ಲ. ಅಂತಹವರು ರಾಜರಾಗಿರುವ ಕಾಲಘಟ್ಟ ಬಂದಿದೆ ಅಂತ ಆ ಶಾಸನ ಹೇಳ್ತಾಯಿದೆಯಲ್ಲ, ಅಂತಹ ಮಾತಿನ ಹಿನ್ನೆಲೆಯಲ್ಲೇ ‘ಕುಲ ಅನ್ನುವುದು ಕುಲ ಅಲ್ಲ’ ಅನ್ನುವ ಕರ್ಣನ ಮಾತು ಬಂದಿದೆ. ಹುಟ್ಟಿನಿಂದ ಬರೋದಲ್ಲ ಕುಲ. ಅದು ಅಭಿಮಾನ ಕುಲ, ಅಣ್ಮು ಕುಲ, ಪರಾಕ್ರಮ ಕುಲ. ಕಾಲಘಟ್ಟದ ಆಶಯಗಳು ಒಂದು ಕೃತಿಯಲ್ಲಿ ಪ್ರತಿಬಿಂಬಿತವಾಗಿ, ಸೂಕ್ಷ್ಮಜ್ಞನಾದ ಕೃತಿಕಾರ ಅದಕ್ಕೆ ಕನ್ನಡಿಯಾಗ್ತಾನೆ. ಅದರಿಂದಲೇ ಅದು ಕಾಲದ ಕೊರಳಾಗುತ್ತೆ.
ಆ ರೀತಿಯಲ್ಲೇ ಕವಿರಾಜಮಾರ್ಗ ಕೂಡ ನಾವೆಲ್ಲರೂ ಮರೆಯಲಾಗದಿರುವಂತಹ ಒಂದು ಅಭೂತಪೂರ್ವ ಆಶಯವನ್ನು ಆ ಕಾಲಘಟ್ಟದಲ್ಲಿ ಕಟ್ಟಿಕೊಡ್ತು. ಅದು ಕಡೆಯಲ್ಲ, ಅದು ಮುಂದೆ ಹೋಗಬೇಕಿರುವಂಥ, ಆ ಪ್ರೇರಣೆಯನ್ನು ಸ್ವೀಕರಿಸಿ ನಾವು ಮುಂದೆ ನಡೆಯಬೇಕಾಗಿರುವಂತಹ ಆಶಯಗಳನ್ನೂ ಕೊಟ್ಟಿದೆ. ಅದಕ್ಕೋಸ್ಕರವಾಗಿ ಕವಿರಾಜಮಾರ್ಗಕಾರನಿಗೆ ಅಭಿನಂದಿಸಿ, ವಂದಿಸಿ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ.
(ತುಮಕೂರು ವಿ.ವಿ.ಯಲ್ಲಿ 18 ಮತ್ತು 19 ಡಿಸೆಂಬರ್ 2023ರಲ್ಲಿ ನಡೆದ ‘ಕವಿರಾಜಮಾರ್ಗ-125 ವರ್ಷ’ ರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಭಾಷಣದ ಬರಹ ರೂಪ)