ನೆಲಸಮವಾದ ಬೌದ್ಧ ವಿಹಾರಗಳು ಸ್ತೂಪಗಳ ಸಂಗತಿಯೇನು?

ಡಿ. ಉಮಾಪತಿಯವರು ಕನ್ನಡದ ಹಿರಿಯ ಪತ್ರಕರ್ತರು. ಪತ್ರಿಕೋದ್ಯಮದ ಇವರ ಸಾಧನೆಗಾಗಿ ಇತ್ತೀಚೆಗೆ ಸರಕಾರ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರು ಕನ್ನಡ ಪ್ರಭ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದು, ಈಟಿವಿ ದಿಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಪತ್ರಿಕಾ ಸಂಪಾದಕರ ಸಂಘ ನೀಡುವ ರಾಜ್ಯ ಮಟ್ಟದ ರಾಚಯ್ಯ ಸ್ಮಾರಕ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ಅಂಬೇಡ್ಕರ್ ದತ್ತಿ ಪ್ರಶಸ್ತಿಗೂ ಇವರು ಭಾಜನರಾಗಿದ್ದಾರೆ. ಪ್ರಜಾವಾಣಿಯಲ್ಲಿ ‘‘ದಿಲ್ಲಿ ನೋಟ’’ ಎಂಬ ಅಂಕಣ ಬರೆಯುತ್ತಿದ್ದರು. ಅದೇ ಅಂಕಣದ ಹೆಸರಿನ ಪುಸ್ತಕವನ್ನೂ ಪ್ರಕಟಿಸಿದ್ದಾರೆ. ‘ಪದ ಕುಸಿಯೇ ನೆಲವಿಲ್ಲ’ ಇವರ ಇನ್ನೊಂದು ಪ್ರಮುಖ ಅನುವಾದಿತ ಕೃತಿ.

Update: 2025-01-08 10:05 GMT
Editor : Musaveer | Byline : ಡಿ. ಉಮಾಪತಿ

ಸಮುದಾಯಗಳು ಮತ್ತು ದೇಶಗಳ ಗಾಯಗಳ ಕಲೆಗಳನ್ನು ಮತ್ತೊಮ್ಮೆ ಸೀಳುವ ಅಲಗು ಮತ್ತು ಗಾಯಗಳ ಮೇಲೆ ಸವರುವ ಮುಲಾಮು ಇತಿಹಾಸ ಎಂಬುದು ಈ ಎರಡೂ ಬಗೆಯಲ್ಲಿ ಬಳಸಬಹುದು ಎನ್ನುತ್ತಾರೆ ಚಿಂತಕ ಬದ್ರೀನಾರಾಯಣ್. ಇತಿಹಾಸವನ್ನು ಮುಲಾಮಿನಂತೆ ಬಳಸುವ ಬದಲು ಗಾಯಗಳ ಕಲೆಗಳನ್ನು ಸೀಳುವ ಹರಿತ ಅಲಗಿನಂತೆ ಬಳಸಲಾಗುತ್ತಿದೆ. ರಾಜ್ಯಶಕ್ತಿ ಅಥವಾ ಪ್ರಭುತ್ವವು ಈ ಅಲಗಿಗೆ ಮತ್ತಷ್ಟು ಹರಿತವನ್ನೂ ಹೊಳಪನ್ನೂ ನೀಡಿ ಗಟ್ಟಿಗೊಳಿಸತೊಡಗಿದೆ.

ಭಾರತವನ್ನು ಮೂರು ದಶಕಗಳ ಕಾಲ ರಾಮಜನ್ಮಭೂಮಿ-ಬಾಬರಿ ಮಸೀದಿ ಸುತ್ತ ಕವಿದಿದ್ದ ವಿವಾದ ‘ಬಗೆಹರಿಯುತ್ತಿದ್ದಂತೆ’ ಸಂಭಲ್ ಮಸೀದಿಗಳು, ಅಜ್ಮೀರ್ ಷರೀಫ್‌ನ ಸೂಫಿ ದರ್ಗಾಗಳನ್ನು, ದೇವಾಲಯಗಳನ್ನು ಕೆಡವಿ ಕಟ್ಟಲಾಗಿದೆ ಎಂದು ಭುಗಿಲೆಬ್ಬಿಸಲಾಗುತ್ತಿದೆ. ತಾಜ್‌ಮಹಲಿನಲ್ಲಿ ಪೂಜೆಗೆ ಅವಕಾಶ ನೀಡಬೇಕೆಂಬ ಆಗ್ರಹ ಎದ್ದಿದೆ.

1991ರ ಪೂಜಾಸ್ಥಳಗಳ ಕಾಯ್ದೆಯ (ಪಿಒಡಬ್ಲ್ಯು-ದಿ ಪ್ಲೇಸಸ್ ಆಫ್ ವರ್ಶಿಪ್ ಆ್ಯಕ್ಟ್-1991) ಸಂವಿಧಾನಬದ್ಧತೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಆದರೆ ಈಗಲೂ ಈ ಸಂಗತಿ ವಿಚಾರಣಾಧೀನ. ಈ ಕಾಯ್ದೆಯ ಪ್ರಕಾರ ದೇಶದ ಎಲ್ಲ ಪೂಜಾ ಸ್ಥಳಗಳನ್ನೂ 1947ರ ಆಗಸ್ಟ್ 15ರಂದು ಇದ್ದ ಸ್ಥಿತಿಯಲ್ಲಿಯೇ ಇರಿಸಬೇಕು. ಅವುಗಳ ಮತಾಂತರ ಸಲ್ಲದು. ಅಯೋಧ್ಯೆಯೊಂದಕ್ಕೆ ಮಾತ್ರ ಈ ಕಾಯ್ದೆಯಿಂದ ರಿಯಾಯಿತಿ ನೀಡಲಾಯಿತು.

ಈ ಕಾಯ್ದೆಯ ಸಂವಿಧಾನಬದ್ಧತೆಯನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಗಿದೆ. ಕೇಂದ್ರ ಸರಕಾರ ಮತ್ತು ನ್ಯಾಯಾಲಯ ಈ ಅಂಶವನ್ನು ಆದ್ಯತೆಯ ಮೇರೆಗೆ ಇತ್ಯರ್ಥಗೊಳಿಸಬೇಕಿತ್ತು. ವಿಳಂಬವಾಗುತ್ತಿದೆ. ಆದರೆ ಕೆಳಹಂತದ ಅಧೀನ ನ್ಯಾಯಾ ಲಯಗಳು ಇತರ ಮಂದಿರ-ಮಸೀದಿ ವಿವಾದಗಳ ಮಹಾ ಪ್ರವಾಹದ್ವಾರಗಳನ್ನೇ ತೆರೆಯುತ್ತಲಿವೆ. ಸಂಭಲ್‌ನ ಮಸೀದಿಯನ್ನು ದೇವಾಲಯದ ಅವಶೇಷಗಳ ಮೇಲೆ ಕಟ್ಟಲಾಗಿದೆ ಎಂದು ಕೆಳಹಂತದ ನ್ಯಾಯಾಲಯವೊಂದರಲ್ಲಿ ತಕರಾರು ಅರ್ಜಿ ಸಲ್ಲಿಸಲಾಯಿತು. ನ್ಯಾಯಾಲಯ ಸರ್ವೇ ಆದೇಶ ನೀಡಿತು. ಸರ್ವೇಗೆ ಏಜೆನ್ಸಿಯ ತರಾತುರಿಗೆ ಜಿಲ್ಲಾಡಳಿತವೂ ಕೈ ಜೋಡಿಸಿತು. ಪರಿಸ್ಥಿತಿ ಭುಗಿಲೆದ್ದು ಹಿಂಸಾಚಾರಕ್ಕೆ, ಹತ್ಯೆಗಳಿಗೆ ದಾರಿ ಮಾಡಿದೆ. ಹೈಕೋರ್ಟು, ಸುಪ್ರೀಂ ಕೋರ್ಟುಗಳು ಗಮನ ಹರಿಸಿಲ್ಲ. ಜ್ಞಾನವಾಪಿ ಮಸೀದಿಯ ಸರ್ವೇಗೆ ಆದೇಶ ನೀಡಿದವರು ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ಡಿ.ವೈ.ಚಂದ್ರಚೂಡ್. ಈ ಕಾಯ್ದೆಯ ಪತನದ ಹಾದಿಯನ್ನು ತೆರೆದವರೇ ಅವರು ಎಂಬ ಗಂಭೀರ ಆರೋಪ ಚಂದ್ರಚೂಡ್ ಮೇಲಿದೆ.

ಎಲ್ಲ ಮಸೀದಿಗಳ ಕೆಳಗೂ ಶಿವಲಿಂಗವನ್ನು ಹುಡುಕುವುದು ಸರಿಯಲ್ಲ ಎಂದಿದ್ದರು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್. ಈ ಹೇಳಿಕೆ ನೀಡಿದ್ದು ಬಹಳ ಹಿಂದೆಯೇನೂ ಅಲ್ಲ, ಕೇವಲ ಎರಡು ವರ್ಷಗಳ ಕೆಳಗೆ. ಅಯೋಧ್ಯೆಯಲ್ಲಿ ರಾಮಮಂದಿರ ಮೇಲೆದ್ದ ಸಂದರ್ಭದಲ್ಲಿ ರಾಮಭಕ್ತಿ-ರಹೀಮಭಕ್ತಿಗಳನ್ನು ಒತ್ತಟ್ಟಿಗಿಟ್ಟು ಭಾರತ ಭಕ್ತಿಯನ್ನು ಸಶಕ್ತಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶವಾಸಿಗಳಲ್ಲಿ ಮಾಡಿರುವ ಮನವಿ ಸ್ವಾಗತಾರ್ಹ ಮತ್ತು ಸಮಯೋಚಿತವಾಗಿತ್ತು. ಆದರೆ ಭಾಗವತರೇ ಆಗಲಿ, ಮೋದಿಯವರೇ ಇರಲಿ, ಮಾತು ಮತ್ತು ಕೃತಿಯ ನಡುವೆ ಕಂದಕ ಬಿದ್ದಿರುವ ನಿದರ್ಶನಗಳೇ ಹೆಚ್ಚು.

ಇವರಿಬ್ಬರ ಮಾತುಗಳು ನಂಬಲು ಕಠಿಣವೆನಿಸಿದ್ದರೂ ಬಲುದೂರದ ಕ್ಷೀಣ ಆಶಾಕಿರಣವೊಂದನ್ನು ಹುಟ್ಟಿಸಿತ್ತು. ಆದರೆ ಸಂಭಲ್‌ನ ದುರ್ಘಟನೆ ಮತ್ತು ಆನಂತರದ ಬೆಳವಣಿಗೆಗಳು ಈ ಕ್ಷೀಣ ಆಶಾಕಿರಣ ಕೇವಲ ಬಿಸಿಲುಕುದುರೆಯಷ್ಟೇ ಎಂದು ಸಾಬೀತು ಮಾಡಿದೆ.

1991ರ ಪೂಜಾ ಸ್ಥಳಗಳ ಈ ಕಾಯ್ದೆ ಜಾರಿಯ ದಿನಾಂಕವನ್ನು 1947ರ ಆಗಸ್ಟ್ 15ರಿಂದ ಹಿಂದಕ್ಕೆ ಒಯ್ದು ಬಾಬರ್ ಅಥವಾ ಘಜನಿಯ ದಾಳಿಗಳ ಕಾಲಕ್ಕೆ ನಿಗದಿಪಡಿಸಬೇಕೆಂದು ಆಗ್ರಹಿಸಲಾಗುತ್ತಿದೆ. ಆದರೆ ಬೌದ್ಧರು ಮತ್ತು ಜೈನರು ಈ ದಿನಾಂಕವನ್ನು ಕ್ರಿಸ್ತಪೂರ್ವದ ಹಲವಾರು ಶತಮಾನಗಳಷ್ಟು ಹಿಂದಕ್ಕೆ ಒಯ್ಯಬೇಕೆಂದು ಆಗ್ರಹಪಡಿಸಿದರೆ ಅದನ್ನು ಹಿಂದುತ್ವವಾದಿಗಳು ಒಪ್ಪುವರೇ ಎಂಬ ಪ್ರಶ್ನೆ ಎದ್ದಿದೆ.

ಅಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ ಕುರಿತು ಸುಪ್ರೀಂ ಕೋರ್ಟ್ 2019ರ ಕಡೆಯ ಭಾಗದಲ್ಲಿ ನೀಡಿದ ತೀರ್ಪಿನಿಂದ ಸ್ಫೂರ್ತಿ ಪಡೆದಿರುವ ಶಕ್ತಿಗಳು ಕಾಶಿ-ಮಥುರಾ, ಸಂಭಲ್, ಅಜ್ಮೀರ್ ಷರೀಫ್ ವಿವಾದಗಳ ಬಡಿದೆಬ್ಬಿಸಲು ತೊಡಗಿವೆ. ಹಿಂದೂ ದೇವಾಲಯಗಳನ್ನು ಕೆಡವಿ ಕಟ್ಟಿರುವ ಮಸೀದಿಗಳಿವು ಎಂಬುದು ಈ ಶಕ್ತಿಗಳ ವಾದ. ಮುಸ್ಲಿಮ್ ದಾಳಿಕೋರರು- ದೊರೆಗಳು ಹಲವು ದೇವಾಲಯಗಳನ್ನು ಕೆಡವಿದ್ದು ಹೌದು. ಆದರೆ ಹಿಂದೂ ರಾಜರು ಕೂಡ ಹಿಂದೂ ಧರ್ಮದ ಪುನರುತ್ಥಾನದ ಹೆಸರಿನಲ್ಲಿ ಬೌದ್ಧ ಮತ್ತು ಜೈನ ಧಾರ್ಮಿಕ ನೆಲೆಗಳನ್ನು ಕೆಡವಿರುವ ಹೇರಳ ಉದಾಹರಣೆಗಳಿವೆ.

ಸೋಮೇಶ್ವರ ದೇವಾಲಯವನ್ನು ಅಪವಿತ್ರಗೊಳಿಸಿ ಮೂರ್ತಿಯನ್ನು ಭಂಗ ಮಾಡಿದ ಮುಹಮ್ಮದ್ ಘಜನಿ ಮುಲ್ತಾನದ ಮಸೀದಿಗಳ ಮೇಲೆಯೂ ದಾಳಿ ನಡೆಸಿದ್ದ ಮತ್ತು ಐವತ್ತು ಸಾವಿರ ಮಂದಿ ಶಿಯಾ ಮುಸಲ್ಮಾನರನ್ನೂ ಕೊಂದು ಹಾಕಿದ್ದ ಎಂಬ ಸಂಗತಿಗೆ ಹೆಚ್ಚು ಪ್ರಚಾರ ಸಿಕ್ಕಿಲ್ಲ.ವಿವಾದಗಳನ್ನು ಕೆದಕುವವರು ಇತಿಹಾಸದ ಓದಿನ ಕುರಿತು ತಲೆಕೆಡಿಸಿಕೊಳ್ಳುತ್ತಿಲ್ಲ.

ಸಾಮಾಜಿಕ ಸಾಮರಸ್ಯದಿಂದ ಕೂಡಿದ್ದು, ಧಾರ್ಮಿಕ ಹಿಂಸಾಚಾರವೇ ಇಲ್ಲದ ಸುವರ್ಣಯುಗ ಎಂಬ ಪ್ರಾಚೀನ ಭಾರತದ ಕಾಲಮಾನದ ಬಣ್ಣನೆಯನ್ನು ಇತಿಹಾಸಜ್ಞ ದ್ವಿಜೇಂದ್ರ ನಾರಾಯಣ ಝಾ ಅವರು ಒಪ್ಪಿಲ್ಲ.

ಎದುರಾಳಿಗಳ ಧಾರ್ಮಿಕ ಸಂಸ್ಥೆಗಳು ಮತ್ತು ಅವುಗಳಲ್ಲಿನ ಪ್ರತಿಮೆಗಳನ್ನು ನೆಲ ಸಮಗೊಳಿಸಿ ಅಪವಿತ್ರಗೊಳಿಸುವುದೇ ಅಲ್ಲದೆ ಅವುಗಳ ಸ್ವಾಧೀನ- ಬಳಕೆಯು ಇಸ್ಲಾಮ್ ಆಗಮಿಸುವ ಮುನ್ನವೇ ಭಾರತದಲ್ಲಿ ರೂಢಿಯಲ್ಲಿತ್ತು ಎಂದು ಝಾ ವಿವರಿಸಿದ್ದಾರೆ.

ಹಿಂದೂ ರಾಜವಂಶಗಳ ನಡುವೆ ನಡೆದ ಘರ್ಷಣೆಗಳಲ್ಲಿ ಕೂಡ ದೇಗುಲಗಳ ಅಪವಿತ್ರೀಕರಣದ ಹಲವು ಉದಾಹರಣೆಗಳಿವೆ. ಹನ್ನೊಂದನೆಯ ಶತಮಾನದ ಚೋಳ ರಾಜ ರಾಜಾಧಿರಾಜ ಚಾಲುಕ್ಯರನ್ನು ಸೋಲಿಸಿದ ನಂತರ ಅವರ ರಾಜಧಾನಿ ಕಲ್ಯಾಣಿಯನ್ನು ಕೊಳ್ಳೆ ಹೊಡೆದು ಕಪ್ಪುಶಿಲೆಯ ಭಾರೀ ಗಾತ್ರದ ದ್ವಾರಪಾಲಕ ವಿಗ್ರಹವನ್ನು ತನ್ನೊಂದಿಗೆ ತಂಜಾವೂರಿಗೆ ಒಯ್ದದನೆಂದು ರಿಚರ್ಡ್ ಈಟನ್ ಹೇಳುತ್ತಾರೆ. ಹಾಗೆಯೇ ಪಲ್ಲವ ವಂಶದ ಒಂದನೆಯ ನರಸಿಂಹವರ್ಮನು ಚಾಲುಕ್ಯ ರಾಜಧಾನಿ ವಾತಾಪಿಯಿಂದ ಗಣೇಶ ವಿಗ್ರಹವನ್ನು ಲೂಟಿ ಮಾಡಿ ಸಾಗಿಸಿದ ಎಂಬ ಉದಾಹರಣೆಯನ್ನೂ ಅವರು ನೀಡುತ್ತಾರೆ.

ಏಳನೆಯ ಶತಮಾನದಿಂದ ಹಿಂದೂ ರಾಜರು ಮತ್ತು ಹನ್ನೆರಡನೆಯ ಶತಮಾನದಿಂದ ಮುಸ್ಲಿಮ್ ರಾಜರು ತಮ್ಮ ಶತ್ರು ರಾಜರು ಇಲ್ಲವೇ ಬಂಡುಕೋರ ಸಾಮಂತರ ದೇವಾಲಯಗಳನ್ನು ಮಾಮೂಲಾಗಿ ಲೂಟಿ ಮಾಡಿದರು, ನಾಶಗೈದರು ಇಲ್ಲವೇ ಮತಾಂತರಿಸಿದರು. ಕಾಂಚೀಪುರದ ಪಲ್ಲವರು, ಬಾದಾಮಿಯ ಚಾಲುಕ್ಯರು, ಬಂಗಾಳದ ಪಾಲರು, ಕಾಶ್ಮೀರದ ಕರ್ಕೋಟರು, ಮಾನ್ಯಖೇಟದ ರಾಷ್ಟ್ರಕೂಟರು, ಮದುರೈನ ಪಾಂಡ್ಯರು, ಕನ್ನೌಜದ ಪ್ರತೀಹಾರರು, ಖಜುರಾಹೋದ ಚಂದೇಲರು, ತಂಜಾವೂರಿನ ಚೋಳರು, ಕಲ್ಯಾಣದ ಚಾಲುಕ್ಯರು, ಒಡಿಶಾದ ಕಳಿಂಗರು, ವೆಂಗಿಯ ಚಾಲುಕ್ಯರು, ಕಟಕ್‌ನ ಶೂರ್ಯವಂಶಿ ಗಜಪತಿಗಳು ಹಾಗೂ ವಿಜಯನಗರದ ತುಳುವ ರಾಜವಂಶಗಳಲ್ಲಿ ಈ ಪದ್ಧತಿಯಿತ್ತು ಎಂದು ಈಟನ್ ಪಟ್ಟಿ ಮಾಡುತ್ತಾರೆ.

ಭಾರತದ ಪ್ರಾಚೀನ ಮತ್ತು ಮಧ್ಯಕಾಲೀನ ಇತಿಹಾಸ ತಜ್ಞ ಝಾ ಅವರು "Against the Grain- Notes on Identity, Intoleranceh and History” ಎಂಬ ತಮ್ಮ ಕೃತಿಯಲ್ಲಿ ಈ ಸಂಗತಿಯನ್ನು ವಿಶದವಾಗಿ ತಿಳಿಸಿದ್ದಾರೆ.

ಬೌದ್ಧ್ದ ಮಠಗಳು, ಸ್ತೂಪಗಳು ಹಾಗೂ ಇತರ ಕಟ್ಟಡಗಳನ್ನು ಬ್ರಾಹ್ಮಣ್ಯ ಶಕ್ತಿಗಳು ಅಪವಿತ್ರ ಗೊಳಿಸಿ, ಕೆಡವಿ, ಸ್ವಾಧೀನಕ್ಕೆ ಪಡೆದು ಬಳಸಿರುವುದಕ್ಕೆ ಸಾಕ್ಷ್ಯಗಳಿವೆ. ಇಂತಹ ಸಾಕ್ಷ್ಯಗಳು ಅಶೋಕನ ಆಳ್ವಿಕೆಯ ಅಂತ್ಯದವರೆಗೆ ವಿಸ್ತರಿಸಿವೆ.

ಅಶೋಕನ ಮಕ್ಕಳಲ್ಲೊಬ್ಬನಾದ ಜಾಲೌಕನು ವೈಷ್ಣವನಾಗಿದ್ದ. ಬೌದ್ಧ ವಿಹಾರಗಳನ್ನು ನೆಲಸಮಗೊಳಿಸಿದ ಕುರಿತು ಹನ್ನೆರಡನೆಯ ಶತಮಾನದ ಕಲ್ಹಣನ ಕಾಶ್ಮೀರಿ ಪಠ್ಯ ‘ರಾಜತರಂಗಿಣಿ’ಯಲ್ಲಿ ಉಲ್ಲೇಖವಿದೆ. ಈ ಪುರಾವೆಯನ್ನು ಗಮನಿಸಿದರೆ ಶ್ರಮಣ ಧರ್ಮ ಗಳ ಮೇಲಿನ ದಾಳಿ ಅಶೋಕನ ಜೀವಿತಕಾಲ ಇಲ್ಲವೇ ಆತನ ಮರಣದ ತಕ್ಷಣವೇ ಆರಂಭವಾಯಿತು ಎಂಬುದಕ್ಕೆ ಈ ಉಲ್ಲೇಖವೇ ಸಾಕ್ಷಿ ಎಂದು ಹೇಳಿದ್ದಾರೆ.

ಮೌರ್ಯರ ಆಳ್ವಿಕೆಯ ನಂತರದ ಅವಧಿಯ ಶ್ರಮಣರನ್ನು ಕಾಡಿದ ಸಾಕ್ಷ್ಯವನ್ನು ದಿವ್ಯವದನ ಎಂಬ ಬೌದ್ಧ- ಸಂಸ್ಕೃತ ಪಂಡಿತನು ದಾಖಲಿಸಿದ್ದಾನೆ. ಪುಷ್ಯಮಿತ್ರ ಶುಂಗನೆಂಬ ಬ್ರಾಹ್ಮಣ ದೊರೆಯು ಬೌದ್ಧ ಧರ್ಮದ ಮಹಾನ್ ಪೀಡಕನೆಂದು ಗುರುತಿಸಿದ್ದಾನೆ. ಅವನ ಭಾರೀ ಸೇನೆಯು ಸ್ತೂಪಗಳನ್ನು ಹಾಳುಗೆಡವುತ್ತ, ವಿಹಾರಗಳನ್ನು ಸುಡುತ್ತ, ಭಿಕ್ಷುಗಳನ್ನು ಕೊಲ್ಲುತ್ತ ಸಾಕಲದತ್ತ (ಈಗಿನ ಸಿಯಾಲ್ ಕೋಟ್) ಸಾಗಿತು. ಪ್ರತೀ ಶ್ರಮಣನ ತಲೆಗೆ ನೂರು ವರಹಗಳ ಬಹುಮಾನವನ್ನು ಶುಂಗನು ಸಾಕಲದಲ್ಲಿ ಘೋಷಿಸಿದ. ಬ್ರಾಹ್ಮಣರು ಮತ್ತು ಶ್ರಮಣರು ಹಾವು ಮುಂಗುಸಿಗಳಂತೆ ಶಾಶ್ವತ ಶತ್ರುಗಳು ಎಂದು ಪತಂಜಲಿಯು ತನ್ನ ಮಹಾಭಾಷ್ಯ ಕೃತಿಯಲ್ಲಿ ಬಣ್ಣಿಸಿದ್ದಾನೆ. ವಿಶೇಷವಾಗಿ ಮಧ್ಯಪ್ರದೇಶದ ಅನೇಕ ಬೌದ್ಧ ಕೇಂದ್ರಗಳಲ್ಲಿ ಕಂಡು ಬಂದಿರುವ ಅವಶೇಷಗಳ ರಾಶಿಯ ಪದರಗಳು ಬೌದ್ಧ ಸ್ಮಾರಕಗಳ ಮೇಲೆ ಶುಂಗನು ನಡೆಸಿದ ದಾಳಿಯ ಸಾಧ್ಯತೆಯನ್ನು ಗಟ್ಟಿಗೊಳಿಸುತ್ತವೆ. ಉದಾಹರಣೆಗೆ ಅಶೋಕನ ಕಾಲದಿಂದ ಪ್ರಮುಖ ಬೌದ್ಧ ತಾಣವಾಗಿದ್ದ ಸಾಂಚಿಯು ಶುಂಗನ ಕಾಲದಲ್ಲಿ ಹಲವು ಸೌಧಗಳನ್ನು ಒಡೆದು ಹಾಕಿದ ಪುರಾವೆಗಳತ್ತ ಬೆರಳು ಮಾಡುತ್ತದೆ. ಸುತ್ತಮುತ್ತಲ ಕಟನಿ ಮತ್ತು ರೇವಾ ಜಿಲ್ಲೆಗಳ ಸತಧಾರ ಮತ್ತು ದೂರಕೊಥಾರದಂತಹ ಜಾಗಗಳಲ್ಲಿಯೂ ಇಂತಹುದೇ ಪುರಾವೆಗಳು ದೊರೆಯುತ್ತವೆ ಎಂದು ಝಾ ವಿವರಿಸಿದ್ದಾರೆ.

ಇಂತಹ ದಾಳಿಗಳು ಮಧ್ಯಪ್ರದೇಶದಲ್ಲಿ ಶುಂಗನ ನಂತರವೂ ನಡೆಯುತ್ತವೆ. ಉದಾಹರಣೆಗೆ ಅಹ್ಮದ್ ಪುರದಲ್ಲಿ ಐದನೆಯ ಶತಮಾನದ ಸ್ತೂಪವೊಂದರ ಮೇಲೆ ಬ್ರಾಹ್ಮಣ ದೇಗುಲವನ್ನು ಕಟ್ಟಿದಂತೆ ತೋರುತ್ತದೆ. ವಿದಿಶಾದ ಸುತ್ತಮುತ್ತ ಎಂಟನೆಯ ಶತಮಾನದಲ್ಲಿ ಬೌದ್ಧ ಕೇಂದ್ರಗಳು ಶೈವ ಅಥವಾ ಜೈನ ಪೂಜಾ ಸ್ಥಾನಗಳಾಗಿ ಬದಲಾಗಿರುವ ಹಲವು ತಾಣಗಳು ಪತ್ತೆಯಾಗಿವೆ. ವಿದಿಶಾದ ಈಶಾನ್ಯ ದಿಕ್ಕಿನಲ್ಲಿ 250 ಕಿ.ಮೀ.ದೂರದಲ್ಲಿ ಹತ್ತನೆಯ ಶತಮಾನದ ನಂತರ ಚಾಂದೇಲರ ಆಳ್ವಿಕೆಯಲ್ಲಿ ದೇವಾಲಯ ನಗರವಾಗಿ ಖಜುರಾಹೋ ತಲೆಯೆತ್ತುವ ಮುನ್ನ ಅಲ್ಲಿದ್ದದ್ದು ಬೌದ್ಧ ನೆಲೆ. ಐದನೆಯ ಶತಮಾನದ ಸ್ತೂಪದ ತಳಹದಿಯ ಮೇಲೆ ಬ್ರಾಹ್ಮಣ ದೇವಾಲಯವನ್ನು ನಿರ್ಮಿಸಿರುವಂತೆ ಕಂಡು ಬಂದಿದೆ. ಸುತ್ತಮುತ್ತ ಪ್ರತೀಕಗಳು ಪತ್ತೆಯಾಗಿವೆ. ಇದೇ ತಾಣದಲ್ಲಿ ಬೌದ್ಧ ಸ್ಮಾರಕವೊಂದರ ಅವಶೇಷಗಳ ಮೇಲೆ ಒಂಭತ್ತನೆಯ ಅಥವಾ ಹತ್ತನೆಯ ಶತಮಾನದಲ್ಲಿ ಘಂಟೈ ದೇವಾಲಯವನ್ನು ಆಗಿನ ಕಾಲಮಾನದಲ್ಲಿ ಪ್ರಬಲ ನೆಲೆ ಹೊಂದಿದ್ದ ಜೈನರು ನಿರ್ಮಿಸಿದ್ದಾಗಿ ತೋರುತ್ತದೆ.

ಪಶ್ಚಿಮೀ ಉತ್ತರಪ್ರದೇಶದ ಮಥುರಾದಲ್ಲಿ ಕುಶಾನರ ಕಾಲದಲ್ಲಿ ಈಗ ನೆಲೆ ನಿಂತಿರುವ ಭೂತೇಶ್ವರ ಮತ್ತು ಗೋಕರ್ಣೇಶ್ವರ ದೇವಾಲಯಗಳು ಪ್ರಾಚೀನ ಕಾಲದ ಬೌದ್ಧ ಕೇಂದ್ರಗಳಾಗಿದ್ದವು. ಅಲಹಾಬಾದಿನ ಸನಿಹದ ಕೌಶಾಂಬಿಯಲ್ಲಿ ಘೋಸಿತಾರಂ ಎಂಬ ಮಹಾನ್ ಬೌದ್ಧಮಠವನ್ನು ಸುಟ್ಟು ಹಾಕಿ ಧ್ವಂಸ ಮಾಡಿದ ಕೃತ್ಯ ಪುಷ್ಯಮಿತ್ರ ಶುಂಗನದೇ. ಬುದ್ಧ ತನ್ನ ಮೊದಲ ಪ್ರವಚನ ನೀಡಿದ ವಾರಣಾಸಿ ಬಳಿಯ ಸಾರನಾಥ ಕೂಡ ಬ್ರಾಹ್ಮಣ ದಾಳಿಗೆ ಗುರಿಯಾಯಿತು. ಮೌರ್ಯರ ಕಾಲದ ವಸ್ತುಗಳನ್ನು ಮರುಬಳಸಿ ಬ್ರಾಹ್ಮಣ ಕಟ್ಟಡಗಳನ್ನು ನಿರ್ಮಿಸಲಾಯಿತು. ಬುದ್ಧನು ತನ್ನ ಬಹುಪಾಲು ಜೀವಿತಕಾಲವನ್ನು ಕಳೆದ ಶ್ರಾವಸ್ತಿಯ ಕುಶಾನ ಬೌದ್ಧ ತಾಣವನ್ನು ಬ್ರಾಹ್ಮಣರು ಸ್ವಾಧೀನಪಡಿಸಿಕೊಂಡು ಗುಪ್ತರ ಕಾಲದಲ್ಲಿ ರಾಮಾಯಣ ಗೋಡೆ ಚಿತ್ರಗಳ ಗುಡಿಯನ್ನು ನಿರ್ಮಿಸಿದರು. ಈ ಮಾತಿಗೆ ಐದನೆಯ ಶತಮಾನದ ಚೀನೀ ಯಾತ್ರಿಕ ಫಾಹಿಯಾನನ ಉಲ್ಲೇಖವೇ ಸಾಕ್ಷಿ ಎಂದು ಝಾ ಹೇಳಿದ್ದಾರೆ.

ಬೌದ್ಧ ಮತದ ಮೇಲೆ ಬ್ರಾಹ್ಮಣವಾದವು ಅಂತಿಮ ವಿಜಯಗಳ ಸಾಧಿಸಿದ ನಂತರ ಉತ್ತರಪ್ರದೇಶದ ಸುಲ್ತಾನ್‌ಪುರ ಜಿಲ್ಲೆಯೊಂದರಲ್ಲೇ 49 ಬೌದ್ಧ ತಾಣಗಳಿಗೆ ಬೆಂಕಿ ಇಟ್ಟು ನಾಶ ಮಾಡಿರುವುದಾಗಿ ಕಂಡು ಬಂದಿದೆ. ಪುರಾತತ್ವ ಶಾಸ್ತ್ರಜ್ಞ ಆಲೋಯ್ಸ್ ಆ್ಯಂಟನ್ ಫೂಹ್ರರ್ ಅವರ ಸಂಶೋಧನಾ ಪ್ರಬಂಧವೊಂದು ಈ ಸಂಗತಿಯ ಮೇಲೆ ಬೆಳಕು ಚೆಲ್ಲಿದೆ.

ಆರನೆಯ ಶತಮಾನದ ಹೂಣ ರಾಜ ಮಿಹಿರಕುಲನು ಶಿವನ ಆರಾಧಕ. ಸುಮಾರು 1,600 ಬೌದ್ಧ ಸ್ತೂಪಗಳು ಮತ್ತು ವಿಹಾರಗಳನ್ನು ನಾಶ ಮಾಡಿದ್ದಷ್ಟೇ ಅಲ್ಲದೆ ಸಾವಿರಾರು ಮಂದಿ ಭಿಕ್ಷುಗಳನ್ನು ಕೊಂದು ಹಾಕಿದ. ಗಾಂಧಾರದ ಸಾವಿರ ಸಂಘಾರಾಮಗಳು ಅಳಿದು ಅವಶೇಷಗಳಾದವು. ಉಡ್ಡಿಯಾನದ 1,400 ಸಂಘಾರಾಮಗಳಿಗೂ ಇದೇ ಸ್ಥಿತಿ ಒದಗಿತ್ತು ಎಂದು ಗುಪ್ತರ ಆಳ್ವಿಕೆಯ ನಂತರದ ಶತಮಾನಗಳಲ್ಲಿ 631ರಿಂದ 645ರ ನಡುವೆ ಹರ್ಷವರ್ಧನನ ಆಳ್ವಿಕೆಯಲ್ಲಿ ಪ್ರವಾಸ ನಡೆಸಿದ ಚೀನೀ ಯಾತ್ರಿಕ ಹ್ಯೂಯನ್ ತ್ಸಾಂಗ್ ದಾಖಲಿಸಿದ್ದಾನೆ. ಗೌಡದೇಶದ ರಾಜ ಶಶಾಂಕನು ಬಿಹಾರದ ಬೋಧ ಗಯಾದ ಬೋಧಿವೃಕ್ಷದ ನಾಶಕ್ಕೆ ಪ್ರಯತ್ನಿಸಿದ್ದ. ಸ್ಥಳೀಯ ದೇವಾಲಯವೊಂದರಿಂದ ಬುದ್ಧನ ಪ್ರತಿಮೆಯನ್ನು ತೆಗೆದು ಮಹೇಶ್ವರನ ವಿಗ್ರಹವನ್ನು ಇರಿಸುವಂತೆ ಆದೇಶ ನೀಡಿದನೆಂದೂ ಹ್ಯೂಯೆನ್ ತ್ಸಾಂಗ್ ಹೇಳಿದ್ದಾನೆ. ಬೋಧ ಗಯಾ ಪುನಃ ಬೌದ್ಧರ ಸುಪರ್ದಿಗೆ ಬಂದದ್ದು ಬೌದ್ಧ ಮತಾವಲಂಬಿ ಪಾಲ ಸಂತತಿಯ ದೊರೆಗಳ ಕಾಲದಲ್ಲಿ. ಅಂತರ್‌ರಾಷ್ಟ್ರೀಯ ಖ್ಯಾತಿಯ ನಳಂದ ವಿಶ್ವವಿದ್ಯಾಲಯದ ವಿಶಾಲ ಸಮುಚ್ಚಯದಲ್ಲಿ ಹ್ಯೂಯೆನ್ ತ್ಸಾಂಗ್ ಐದು ವರ್ಷಗಳಿಗೂ ಹೆಚ್ಚು ಕಾಲ ವಾಸವಿದ್ದ. ಈ ವಿಶ್ವವಿದ್ಯಾಲಯದ ಗ್ರಂಥಾಲಯವನ್ನು ಸುಟ್ಟು ಹಾಕಿದ್ದು ಭಕ್ತಿಯಾರ್ ಖಿಲ್ಜಿ ಎಂಬ ಪ್ರಚಾರದಲ್ಲಿ ತಥ್ಯಾಂಶವಿಲ್ಲ ಎಂದು ಝಾ ಹೇಳುತ್ತಾರೆ. ಹನ್ನೆರಡನೆಯ ಶತಮಾನದಲ್ಲಿ ನಿರ್ಮಿಸಲಾದ ಪುರಿಯ ಜಗನ್ನಾಥ ಮಂದಿರ ಕೂಡ ತಲೆಯೆತ್ತಿದ್ದು ಬೌದ್ಧ ತಾಣದ ಮೇಲೆಯೇ. ಸ್ವಾಮಿ ವಿವೇಕಾನಂದರು ಕೂಡ ಈ ಅಂಶವನ್ನು ಪುಷ್ಟೀಕರಿಸಿದ್ದಾರೆ. ಜಗನ್ನಾಥ ರಥೋತ್ಸವದ ಜಗನ್ನಾಥ, ಬಲರಾಮ ಹಾಗೂ ಸುಭದ್ರರ ಪ್ರತಿಮೆಗಳ ಮೆರವಣಿಗೆಯು ಬೌದ್ಧ ಧರ್ಮದ ಬುದ್ಧ, ದಮ್ಮ ಹಾಗೂ ಸಂಘದ ರಥೋತ್ಸವನ್ನು ಆಧರಿಸಿದಂತಹವು ಎಂದು ಬಂಕಿಮ ಚಂದ್ರ ಚಟರ್ಜಿ ಕೂಡ ಹೇಳಿದ್ದಾರೆ.

ಪುರಿ ಜಿಲ್ಲೆಯ ಪೂರ್ಣೇಶ್ವರ, ಕಾಂತೇಶ್ವರ, ಕೇದಾರೇಶ್ವರ, ಸೋಮೇಶ್ವರ ಹಾಗೂ ಅಂಗೇಶ್ವರ ದೇವಾಲಯಗಳನ್ನು ಬೌದ್ಧ ವಿಹಾರಗಳ ಮೇಲೆ ಕಟ್ಟಲಾಗಿದೆ ಇಲ್ಲವೇ ಬೌದ್ಧ ವಿಹಾರಗಳ ಸಾಮಗ್ರಿಗಳಿಂದ ಕಟ್ಟಲಾಗಿದೆ ಎಂಬುದು ಝಾ ವಾದ.

ನಾಶಪಡಿಸಲಾಗಿರುವ ಬೌದ್ಧಮಠಗಳು, ಸ್ತೂಪಗಳ ಸಂಖ್ಯೆ ಚರ್ಚಾಸ್ಪದ. ಆದರೆ ಬೌದ್ಧ ಮತ್ತು ಬ್ರಾಹ್ಮಣರ ನಡುವೆ ಭಾರೀ ಹಗೆತನವಿತ್ತು ಎಂಬುದನ್ನು ನಿರಾಕರಿಸುವುದು ಅಸಾಧ್ಯ ಎನ್ನುತ್ತಾರೆ ಗೇಲ್ ಓಮ್ವೆಡ್ಟ್ (ಛಾಲೆಂಜಿಂಗ್ ಬ್ರಾಹ್ಮಿನಿಸಮ್ ಆ್ಯಂಡ್ ಕಾಸ್ಟ್ 2003).

 

1991ರ ಪೂಜಾಸ್ಥಳಗಳ ಕಾಯ್ದೆಯ ಬಳಕೆ ದುರ್ಬಳಕೆಗಳ ಇಂದಿನ ದಿನಮಾನಕ್ಕೆ ವಾಪಸ್ ಬರೋಣ.

‘‘ಪೂಜಾಸ್ಥಳವೊಂದನ್ನು ಮತಾಂತರ ಮಾಡಿಕೊಡಿ ಎಂದು ಯಾರೂ ನ್ಯಾಯಾಲಯ ವನ್ನು ಕೇಳುತ್ತಿಲ್ಲ. ಬದಲಾಗಿ 1947ರ ಆಗಸ್ಟ್ 15ರಂದು ಅದರ ಸ್ವರೂಪ ಏನಿತ್ತು ಎಂಬುದನ್ನಷ್ಟೇ ತೀರ್ಮಾನಿಸಿ ಎಂದಷ್ಟೇ ಕೇಳುತ್ತಿದ್ದೇವೆ’’ ಎಂಬುದು ಹಿಂದೂ ಕಟ್ಟರ್ ಪಂಥೀಯರ ವಾದ. ಜ್ಞಾನವಾಪಿ ಮಸೀದಿಯ ವಿವಾದದ ವಿಚಾರಣೆ ನಡೆಸಿದ್ದಾಗ ಈ ಹಿಂದೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ಡಿ.ವೈ.ಚಂದ್ರಚೂಡ್ ಅನುಸರಿಸಿದ್ದು ಇದೇ ತರ್ಕವನ್ನು. ಯಾವುದೇ ಸ್ಥಳದ ಧಾರ್ಮಿಕ ಸ್ವರೂಪ ಏನಿತ್ತು ಎಂದು ನ್ಯಾಯಾಲಯ ತೀರ್ಮಾನಿಸುವುದನ್ನು 1991ರ ಪೂಜಾಸ್ಥಳ ಕಾಯ್ದೆಯು ಯಾವುದೇ ರೀತಿಯಲ್ಲಿ ತಡೆಯುವುದಿಲ್ಲ. ಹಿಂದೂ-ಮುಸ್ಲಿಮರಿಬ್ಬರೂ ಪೂಜಿಸಿ ಪ್ರಾರ್ಥಿಸಿದ್ದರು ಎಂಬ ವಿವಾದದ ಕೇಸುಗಳಲ್ಲಿ 1947ರ ಆಗಸ್ಟ್ 15ರಂದು ಇದ್ದ ಪರಿಸ್ಥಿತಿ ಏನೆಂದು ನ್ಯಾಯಾಲಯ ತೀರ್ಮಾನಿಸಬೇಕು. ಈ ಪ್ರಕ್ರಿಯೆಯಲ್ಲಿ ತಾಂತ್ರಿಕವಾಗಿ ನ್ಯಾಯಾಲಯ ಪೂಜಾಸ್ಥಳವನ್ನು ಮತಾಂತರಗೊಳಿಸುತ್ತಿಲ್ಲ. ಅಂತಹ ಮತಾಂತರವನ್ನು ಪೂಜಾಸ್ಥಳಗಳ ಕಾಯ್ದೆಯು ನಿಷೇಧಿಸಿದೆ. ಆದರೆ ಇಲ್ಲಿ ರಾಜಕೀಯ ಉದ್ದೇಶಗಳಿಗಾಗಿ ಚೇಷ್ಟೆ ಮಾಡಲು ಮಿತಿಯೇ ಇಲ್ಲದಷ್ಟು ವ್ಯಾಪ್ತಿ ಇದೆ ಎನ್ನುತ್ತಾರೆ ಪ್ರತಿಭಾವಂತ ಪತ್ರಕರ್ತ ಸೌರವದಾಸ್.

ಆದರೆ ಎಲ್ಲೆಲ್ಲಿ ಜಂಟಿ ಆರಾಧನೆಯ ಸನ್ನಿವೇಶಗಳು ಇರಲಿಲ್ಲವೋ ಅಲ್ಲೆಲ್ಲ ರಾಜಕೀಯ ಚೇಷ್ಟೆ-ಕುಚೇಷ್ಟೆಗೆ ಅಮಿತ ಅವಕಾಶವಿದೆ. ಇಂತಹ ಸ್ಥಳಗಳ ಧಾರ್ಮಿಕ ಸ್ವರೂಪವನ್ನು ತೀರ್ಮಾನಿಸುವಂತೆ ನ್ಯಾಯಾಲಯಗಳಲ್ಲಿ ಕೇಸುಗಳನ್ನು ಹೂಡಿದಾಗ ರಾಜಕೀಯ ಚೇಷ್ಟೆ-ಕುಚೇಷ್ಟೆಗೆ ಇನ್ನಿಲ್ಲದಷ್ಟು ಅವಕಾಶವಿದೆ. ವಿಶ್ವಹಿಂದೂ ಪರಿಷತ್ತು ತಾನು ಮತಾಂತರಿಸಲು ಬಯಸುವ 3,000 ಮಸೀದಿಗಳ ಪಟ್ಟಿ ಮಾಡಿದೆ. ಸೈದ್ಧಾಂತಿಕವಾಗಿ ಭವ್ಯ ಹಿಂದುತ್ವ ಯೋಜನೆಯ ಪರವಾಗಿ ಬಾಗುವ ಪಕ್ಷಪಾತೀಯ ನ್ಯಾಯಾಧೀಶರಿಗೆ ಈಗ ಬರ ಇಲ್ಲ. ಪೂಜಾಸ್ಥಳವೊಂದರ ಧಾರ್ಮಿಕ ಸ್ವರೂಪದ ತೀರ್ಮಾನಕ್ಕೆ ಆದೇಶ ನೀಡುವ ನ್ಯಾಯಾಲಯದ ಅಧಿಕಾರವನ್ನು ಉದಾರವಾಗಿ ಬಳಸಿದ್ದೇ ಆದರೆ ದೇಶದಲ್ಲಿ ಹಾಹಾಕಾರ ಭುಗಿಲೆದ್ದೀತು. ಮಸೀದಿಯೊಂದು ಹೂತು ಹೋದ ಮಂದಿರಗಳ ಅವಶೇಷಗಳ ಮೇಲೆ ನಿಂತಿದೆಯೆಂದು ಯಾರು ಬೇಕಾದರೂ ಯಾವೊತ್ತು ಬೇಕಾದರೂ ದಾವೆ ಹೂಡಬಹುದು. ಈ ಸ್ಥಳದಲ್ಲಿ 500, ಸಾವಿರ, ಐದು ಸಾವಿರ ವರ್ಷಗಳ ಹಿಂದೆ ಹಿಂದೂಗಳು ಪ್ರಾರ್ಥಿಸುತ್ತಿದ್ದರು ಎಂದು ವಾದಿಸಬಹುದು. ಧಾರ್ಮಿಕ ಸ್ವರೂಪ ಕುರಿತು ನ್ಯಾಯಾಲಯ ತೀರ್ಮಾನ ಹೇಳಬೇಕೆಂದು ಕೋರಬಹುದು. ಮುಸಲ್ಮಾನರು ಕೇವಲ ತಾವು ಮಾತ್ರ ಈ ಸ್ಥಳವನ್ನು ಬಳಸುತ್ತಿದ್ದುದಾಗಿ ಹೇಳಬಹುದು. ಆದರೆ ಎರಡೂ ಕಡೆಯಿಂದ ದಾವೆಗಳು ಇರುವ ಪ್ರಯುಕ್ತ 1947ರಲ್ಲಿ ಇದ್ದ ಧಾರ್ಮಿಕ ಸ್ವರೂಪ ಏನೆಂದು ತೀರ್ಮಾನಿಸಿಯೇ ಬಿಡೋಣ ಎಂದು ನ್ಯಾಯಾಲಯ ಸಾರಿಬಿಡಬಹುದು. ಹೀಗೆ ಜರುಗಿದಲ್ಲಿ ಈ ಭುಗಿಲು ಎಲ್ಲಿಗೆ ಮುಟ್ಟಬಹುದು? ಎಲ್ಲಿ ನಿಲ್ಲಬಹುದು? ಮೂರು ಸಾವಿರ ಮಸೀದಿಗಳು ಮಾತ್ರವೇ ಅಲ್ಲ, ಎಲ್ಲ ಮಸೀದಿಗಳೂ ಈ ಬೆದರಿಕೆ ಎದುರಿಸಲಿವೆ.

ಪಿಒಡಬ್ಲ್ಯು ಕಾಯ್ದೆ ತಂದ ಮೂಲ ಉದ್ದೇಶವೇ ಯಥಾಸ್ಥಿತಿಯನ್ನು ಕಾಯ್ದುಕೊಂಡು ಇಂತಹ ದಾವೆಗಳಿಗೆ ಪೂರ್ಣವಿರಾಣ ಇರಿಸುವುದಾಗಿತ್ತು. ಈ ಕಾಯ್ದೆಯು ತ್ವೇಷ, ಬೇಗುದಿ, ಉದ್ವಿಗ್ನತೆ, ತಳಮಳವನ್ನು ಹತ್ತಿಕ್ಕುತ್ತದೆಯೇ ವಿನಾ ನಿವಾರಿಸುವುದಿಲ್ಲ ಎಂದು ವಾದಿಸ ಲೂಬಹುದು. ಆದರೆ ಇದನ್ನು ಬಿಟ್ಟರೆ ಬೇರೆ ಉಪಾಯ ಅಥವಾ ಪರಿಹಾರವಾದರೂ ಏನಿದೆ?

ಪೂಜಾಸ್ಥಳಗಳ ಧಾರ್ಮಿಕ ಸ್ವರೂಪವನ್ನು ತೀರ್ಮಾನಿಸಲು ಸರ್ವೇಗಳನ್ನು ನಡೆಸಬೇಕು, ಮಸೀದಿಗಳ ಅಡಿಯನ್ನು ಅಗೆದು ಉತ್ಖನನ ಮಾಡಬೇಕು ಎಂದು ನ್ಯಾಯಾಲಯಗಳು ಆದೇಶಗಳನ್ನು ಹೊರಡಿಸಲು ಶುರು ಮಾಡಿದವು ಎಂದುಕೊಳ್ಳಿ, ಆಗ ಪರಿಸ್ಥಿತಿ ಏನಾದೀತು?

ನಾಳೆ ಸರ್ವೇಗಳು ಮತ್ತು ಉತ್ಖನನಗಳ ನಂತರ ಮಸೀದಿಯ ಕೆಳಗೆ 5,000 ವರ್ಷಗಳಷ್ಟು ಹಳೆಯ ಮಂದಿರದಂತಹ ನಿರ್ಮಿತಿಯೊಂದು ಪತ್ತೆಯಾಯಿತು ಅಥವಾ ಮಂದಿರದ ಕೆಳಗೆ ಮಸೀದಿಯಂತಹ ನಿರ್ಮಿತಿಯೊಂದು ಕಂಡುಬಂದಿತು ಎಂದೇ ಇಟ್ಟುಕೊಳ್ಳೋಣ. ಆಗ ಜನ ಧಾರ್ಮಿಕ ಸ್ವರೂಪ ‘ತೀರ್ಮಾನ’ಕ್ಕಷ್ಟೇ ತೃಪ್ತರಾಗಿ ಸುಮ್ಮನಿರುವರೇ? ಇಂತಹ ಸ್ಥಳಗಳನ್ನು ಮತಾಂತರಿಸಬೇಕು ಎಂದು ಆಗ್ರಹಿಸುವುದಿಲ್ಲ ಎಂಬ ಖಾತರಿಯಾದರೂ ಏನು?

ತಳದಲ್ಲಿ ಕಂಡು ಬರುವ ಕೆಲ ನಿರ್ಮಿತಿಗಳು ಮಂದಿರ ಅಥವಾ ಮಸೀದಿಯ ‘ಧಾರ್ಮಿಕ ಸ್ವರೂಪ’ವನ್ನು ಬದಲಿಸಬಲ್ಲವೇ? ಕೋಮುವಾದಿ ಭಾವನೆಗಳಿಂದ ಕೆರಳಿ ಕ್ರೋಧತಪ್ತರಾದ ಜನಸಮೂಹಗಳನ್ನು ಈ ಕುರಿತು ಮನವರಿಕೆ ಮಾಡಿಸುವವರಾದರೂ ಯಾರು ಎಂಬುದಾಗಿ ಸೌರವದಾಸ್ ಎತ್ತಿರುವ ಪ್ರಶ್ನೆಗಳು ಅತ್ಯಂತ ಜ್ವಲಂತ.

Writer - ವಾರ್ತಾಭಾರತಿ

contributor

Editor - Musaveer

contributor

Byline - ಡಿ. ಉಮಾಪತಿ

contributor

Similar News

ಒಳಗಣ್ಣು
ವೃತ್ತಾಂತ