ಕುಲಾಂತರಿ ಹತ್ತಿ, ಜೋಳ ತಳಿ ಪ್ರಯೋಗಕ್ಕೆ 95 ಮಂದಿ ಆಕ್ಷೇಪ

Update: 2024-03-05 03:23 GMT

Photo: freepik

ಬೆಂಗಳೂರು: ರಾಜ್ಯದಲ್ಲಿ ಕುಲಾಂತರಿ ಹತ್ತಿ ಮತ್ತು ಜೋಳ ತಳಿ ಪ್ರಯೋಗ ನಡೆಸಲು 95 ಮಂದಿ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಇದರ ನಡುವೆಯೇ 2024-26ನೇ ಸಾಲಿಗೆ ಧಾರವಾಡ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದಲ್ಲಿ ಕುಲಾಂತರಿ ಹತ್ತಿ ಪ್ರಯೋಗ ನಡೆಸಲು ರ್‍ಯಾಲೀಸ್‌ ಇಂಡಿಯಾ ಲಿಮಿಟೆಡ್‌ ಗೆ ರಾಜ್ಯ ಸರಕಾರವು ನಿರಾಕ್ಷೇಪಣಾ ಪತ್ರವನ್ನು ನೀಡಿದೆ.

ಕುಲಾಂತರಿ ತಳಿಗಳನ್ನು ಪ್ರಯೋಗ ನಡೆಸುವ ಕುರಿತು ರಾಜ್ಯದ ಜೈವಿಕ ತಂತ್ರಜ್ಞಾನ ಸಮನ್ವಯ ಸಮಿತಿಯು 2024ರ ಫೆ.23ರಂದು ಸಭೆ ನಡೆಸಿದೆ. ರಾಜ್ಯದ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯಲ್ಲಿ ಬಿಟಿ ಹತ್ತಿ ಮತ್ತು ಜೋಳ ಪ್ರಯೋಗ ನಡೆಸಲು ಎರಡು ಕೃಷಿ ವಿಶ್ವವಿದ್ಯಾನಿಲಯಗಳಿಗೆ ನಿರಾಕ್ಷೇಪಣಾ ಪತ್ರ ನೀಡಿದೆ. ಈ ಸಂಬಂಧ ಸಭೆಯ ನಡಾವಳಿಗಳು ‘The-file.in’ಗೆ ಲಭ್ಯವಾಗಿದೆ.

2021-22, 2022-23ರಲ್ಲಿ ಪ್ರಯೋಗ ಚಟುವಟಿಕೆ ನಡೆಸಲು ರ್‍ಯಾಲೀಸ್‌ ಇಂಡಿಯಾ ಲಿಮಿಟೆಡ್‌ ಗೆ ಅನುಮತಿ ನೀಡಲಾಗಿತ್ತು. ಆದರೆ ಈ ಅವಧಿಯಲ್ಲಿ ರ್ಯಾಲೀಸ್ ಇಂಡಿಯಾ ಲಿಮಿಟೆಡ್ ಪ್ರಯೋಗ ನಡೆಸಲಿಲ್ಲ. ಹೀಗಾಗಿ 2023-24ಕ್ಕೆ ಪರಿಷ್ಕರಿಸಲಾಗಿತ್ತು. ಇದೀಗ 2024-26ರ ವರ್ಷಕ್ಕೆ ಎನ್‌ಒಸಿ ನೀಡಿರುವುದು ಸಭೆ ನಡವಳಿಯಿಂದ ತಿಳಿದು ಬಂದಿದೆ.

ರ್ಯಾಲೀಸ್ ಇಂಡಿಯಾ ಲಿಮಿಟೆಡ್ ಮೊದಲ ವರ್ಷದಲ್ಲಿ ಎರಡು ಸ್ಥಳಗಳಲ್ಲಿ ಪ್ರಯೋಗಗಳನ್ನು ನಡೆಸಿತ್ತು. ಇದರಲ್ಲಿ ಕುಲಾಂತರಿ ಜೋಳ ಮತ್ತಿತರರ ತಳಿಗಳು ಒಳಗೊಂಡಿದ್ದವು. ಸಸ್ಯ ಮೂಲಗಳನ್ನು ತಿಂದು ಜೀವಿಸುವ ಎರಡು ಪ್ರಯೋಗಗಳನ್ನು ನಡೆಸಿತ್ತು. ಇದನ್ನು ಭೀಮರಾಯನಗುಡಿ ಮತ್ತು ಅಗರಿಯಲ್ಲಿ ನಡೆಸಿತ್ತು.

ಮೊದಲ ಅವಧಿಯಲ್ಲಿ (202-23 ಮತ್ತು 2023-24)ರಲ್ಲಿ ಕುಲಾಂತರಿ ಹತ್ತಿಯ ಪ್ರಯೋಗಗಳನ್ನು ನಡೆಸಿರಲಿಲ್ಲ. ಹೀಗಾಗಿ ತಳಿ ಎಂಎಲ್‌ಎಸ್ 4301, ಎಂಎಲ್‌ಎಸ್ 2531 ಕೈಗೊಳ್ಳಲು ಪ್ರಸ್ತಾವ ಮುಂದಿಟ್ಟಿತ್ತು. ಅದರಂತೆ 2024-26ರ ಹಂಗಾಮಿನಲ್ಲಿ ರಾಜ್ಯದಲ್ಲಿ ಈ ಎರಡೂ ತಳಿಗಳ ಪ್ರಯೋಗ ನಡೆಸಲು ಸಭೆಯು ನಿರ್ಧಾರ ಕೈಗೊಂಡಿರುವುದು ಗೊತ್ತಾಗಿದೆ.

ಹೊಸ ತಳಿಯು ಕಳೆ ಮತ್ತು ಕ್ರಿಮಿನಾಶಕ ತಡೆಯಲಿದೆ ಮತ್ತು ಭಾರೀ ಪ್ರಮಾಣದಲ್ಲಿ ಅಂದರೆ ಶೇ.30ರಿಂದ ಶೇ.70ರಷ್ಟು ಉತ್ಪಾದಕತೆಯನ್ನು ಹೆಚ್ಚಿಸಲಿದೆ. ಕಳೆ ತೇವಾಂಶ ತನ್ನಿಂತಾನೇ ಕುಂಠಿಗೊಳ್ಳಲಿದೆ. ಹತ್ತಿ ತಳಿಯನ್ನು ರಕ್ಷಿಸುವ ಉದ್ದೇಶದಿಂದ ಹೊಸ ತಳಿ ಪರಿಚಯಿಸಬಹುದಾಗಿದೆ ಎಂದು ಸಭೆಯಲ್ಲಿ ತಜ್ಞರು ಪ್ರತಿಪಾದಿಸಿರುವುದು ತಿಳಿದು ಬಂದಿದೆ.

ಈ ಪ್ರಯೋಗಗಳ ಕುರಿತು ಸಾರ್ವಜನಿಕರಿಂದ ಅನಿಸಿಕೆಗಳನ್ನು ಆಹ್ವಾನಿಸಿತ್ತು. 1,171 ಮಂದಿ ಇದರ ಪರವಾಗಿ ಒಲವು ವ್ಯಕ್ತಪಡಿಸಿದ್ದರೆ, 95 ಮಂದಿ ಹೊಸ ತಳಿ ಪ್ರಯೋಗಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅಭಿವೃದ್ಧಿ ಆಯುಕ್ತರು ಸಭೆಗೆ ತಿಳಿಸಿರುವುದು ಗೊತ್ತಾಗಿದೆ.

ಈ ಆಕ್ಷೇಪಣೆಗಳ ಕುರಿತು ರ್‍ಯಾಲೀಸ್‌ ಇಂಡಿಯಾ ಲಿಮಿಟೆಡ್‌ ಕಂಪೆನಿಯ ಪ್ರತಿನಿಧಿಗಳು ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಬೇಕು ಎಂದು ಸೂಚಿಸಿದೆ.

ರೈತರು ಈಗ ಕೃಷಿಯಲ್ಲಿ ಅನುಸರಿಸುತ್ತಿರುವ ವಿಧಾನ ಮತ್ತು ಕ್ರಿಮಿನಾಶಗಳನ್ನು ಬಳಕೆ ಮಾಡುತ್ತಿರುವ ಕುರಿತು ವಿವರಗಳನ್ನು ಕೃಷಿ ಇಲಾಖೆಯಿಂದ ಪಡೆಯಬೇಕು. 95 ಆಕ್ಷೇಪಣೆಗಳ ಕುರಿತು ಕೃಷಿ ಇಲಾಖೆ ಮತ್ತು ರ್‍ಯಾಲೀಸ್‌ ಇಂಡಿಯಾ ಲಿಮಿಟೆಡ್‌ ನಿಂದ ಮಾಹಿತಿಯನ್ನು ಪಡೆಯಬೇಕು.

ಅಲ್ಲದೇ ರ್‍ಯಾಲೀಸ್‌ ಇಂಡಿಯಾ ಲಿಮಿಟೆಡ್‌ ಗೆ 2024-26ರ ಹಂಗಾಮಿಗೆ ಪ್ರಯೋಗ ನಡೆಸಲು ನಿರಾಕ್ಷೇಪಣೆ ಪತ್ರ ನೀಡಲು ಸಭೆಯು ಒಪ್ಪಿಗೆ ನೀಡಲು ಸಮ್ಮತಿ ವ್ಯಕ್ತಪಡಿಸಿರುವುದು ತಿಳಿದು ಬಂದಿದೆ.

ಮಹಾರಾಷ್ಟ್ರ ಹೈಬ್ರಿಡ್ಸ್ ಸೀಡ್ ಕಂಪೆನಿ ಲಿಮಿಟೆಡ್ (ಮಹಿಕೋ)ಯು ಬೋಲ್‌ಗಾರ್ಡ್ ಬಿಟಿ ಹತ್ತಿ ತಳಿಯ ಮಾರ್ಪಾಡಿತ ಬಿಟಿ ಹತ್ತಿಯ ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟ, ಕೀಟ ಮತ್ತು ಕಳೆ ನಿರ್ವಹಣೆ ಹಾಗೂ ಜೈವಿಕ ದಕ್ಷತೆಯನ್ನು ರಾಜ್ಯದಲ್ಲಿ ಪ್ರಯೋಗ ಮಾಡಲು ಸರಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು.

ಈ ಕುರಿತು 2022ರ ಮಾರ್ಚ್ 9ರಂದೇ ಸರ್ಕಾರಕ್ಕೆ ಪತ್ರವನ್ನು ಬರೆದಿರುವ ಕಂಪೆನಿಯು ರಾಜ್ಯದಲ್ಲಿ ಪ್ರಯೋಗ ಮಾಡಲು ನಿರಾಕ್ಷೇಪಣಾ ಪತ್ರ ನೀಡಲು ಕೋರಿತ್ತು. ಈ ಕುರಿತು ತೀರ್ಮಾನ ಕೈಗೊಳ್ಳಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2022ರ ಜುಲೈ 4ರಂದು ಸಭೆ ನಡೆದಿತ್ತು.

ಮಹಿಕೋ ಕಂಪೆನಿಯು ದೇಶದಲ್ಲಿ ಇದೇ ಮೊದಲ ಬಾರಿಗೆ ಬೋಲ್‌ಗಾರ್ಡ್ ಬಿಟಿ ಹತ್ತಿ ಮತ್ತು ಬೋಲ್‌ಗಾರ್ಡ್ II ಬಿಟಿ ಹತ್ತಿಯನ್ನು ಪರಿಚಯಿಸುತ್ತಿದೆ. ಇದು ಹತ್ತಿ ಹುಳುಗಳನ್ನು ನಿರ್ವಹಿಸುವ ಭಾರತದ ರೈತರಿಗೆ ಪರಿಣಾಮಕಾರಿಯಾಗಿ ಉಪಯೋಗವಾಗಲಿದೆ. ಅಲ್ಲದೆ ಮುಂದಿನ ಪೀಳಿಗೆಗೆ ಜಿಎಂ ಕಾಟನ್ ತಂತ್ರಜ್ಞಾನವನ್ನೂ ಪರಿಚಯಿಸುತ್ತಿದೆ. ಇದಕ್ಕೆ ಬೋಲೋಗಾರ್ಡ್ ರೌಂಡ್‌ಅಪ್ ರೆಡಿ ಫ್ಲೆಕ್ಸ್ ಬಿಟಿ ಹತ್ತಿ ಎಂದು ಹೆಸರಿಟ್ಟಿತ್ತು. 2007, 2008, 2009ರಲ್ಲಿಯೂ ಜೈವಿಕ ತಂತ್ರಜ್ಞಾನ ಮಂಡಳಿಯ ಅನುಮತಿ ಪಡೆದು ಈ ಹಿಂದೆಯೂ ಬಿಜಿಆರ್‌ಆರ್‌ಎಫ್ ಮತ್ತು ಆರ್‌ಆರ್‌ಎಫ್ ತಳಿಯ ಹತ್ತಿ ಬೆಳೆ ಪ್ರಯೋಗಕ್ಕೆ ಒಡ್ಡಲಾಗಿತ್ತು. ಹೀಗಾಗಿ ಹೊಸದಾಗಿ ಪರಿಚಯಿಸುತ್ತಿರುವ ಬಿಟಿ ಹತ್ತಿಯ ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟ, ಕೀಟ ಮತ್ತು ಕಳೆ ನಿರ್ವಹಣೆ ಹಾಗೂ ಜೈವಿಕ ದಕ್ಷತೆಯನ್ನು ರಾಜ್ಯದಲ್ಲಿ ಪ್ರಯೋಗ ಮಾಡಲು ಮಂಡಳಿಯು ಅನುಮತಿ ನೀಡಬೇಕು ಎಂದು ಕಂಪೆನಿ ಕೋರಿತ್ತು.

‘ರಾಜ್ಯದಲ್ಲಿ ಜೈವಿಕ ಸಂಶೋಧನೆ, ಸಂಶೋಧನೆಯ 2ನೇ ಹಂತದ ಪ್ರಯೋಗ ಮಾಡಲು ಉದ್ದೇಶಿಸಿದೆ. ಜೈವಿಕ ಸುರಕ್ಷತೆ ಸಂಶೋಧನಾ ಮಟ್ಟ, ಕೀಟ ಮತ್ತು ಕಳೆ ನಿರ್ವಹಣೆ ಹಾಗೂ ಜೈವಿಕ ದಕ್ಷತೆ, ಸಾಮಾಜಿಕ, ಆರ್ಥಿಕ ಲಾಭಗಳು ಕುರಿತಾಗಿ ಪ್ರಯೋಗಕ್ಕೆ ಒಡ್ಡಬೇಕಿದೆ’ ಎಂದು ಪತ್ರದಲ್ಲಿ ವಿವರಿಸಿತ್ತು. ಕಂಪೆನಿಯು ಹೊಸದಾಗಿ ಪರಿಚಯಿಸುತ್ತಿರುವ ಬಿಟಿ ಹತ್ತಿಯ ತಳಿಯನ್ನು ರಾಯಚೂರು, ಧಾರವಾಡ ಕೃಷಿ ವಿವಿಯಲ್ಲಿ ಪ್ರಯೋಗ ಮಾಡಲು ಮುಂದಾಗಿತ್ತು.

Writer - ವಾರ್ತಾಭಾರತಿ

contributor

Editor - jafar sadik

contributor

Byline - ಜಿ.ಮಹಾಂತೇಶ್

contributor

Similar News