ಲೋಕಾಯುಕ್ತದಲ್ಲಿ ವರ್ಷಕ್ಕೆ 8,000 ಪ್ರಕರಣಗಳು ದಾಖಲು: ನ್ಯಾಯಮೂರ್ತಿ ಬಿ.ಎಸ್.ಪಾಟೀಲ್

Update: 2023-12-16 20:42 IST
ಲೋಕಾಯುಕ್ತದಲ್ಲಿ ವರ್ಷಕ್ಕೆ 8,000 ಪ್ರಕರಣಗಳು ದಾಖಲು: ನ್ಯಾಯಮೂರ್ತಿ ಬಿ.ಎಸ್.ಪಾಟೀಲ್
  • whatsapp icon

ಮಂಗಳೂರು, ಡಿ.16 ಈ ಹಿಂದೆ ವರ್ಷಕ್ಕೆ 3,000-4,000 ಪ್ರಕರಣಗಳು ದಾಖಲಾಗುತ್ತಿದ್ದವು. ಇತ್ತಿಚಿನ ವರ್ಷಗಳಲ್ಲಿ ವರ್ಷಕ್ಕೆ ಸುಮಾರು 8,000 ಪ್ರಕರಣಗಳು ದಾಖಲಾಗುತ್ತಿವೆ. ಲೋಕಾಯುಕ್ತದ ಬಗ್ಗೆ ಜಾಗೃತಿ, ವಿಶ್ವಾಸ ಮೂಡಿರುವುದು ಇದಕ್ಕೆ ಕಾರಣ. ಬಾಕಿ ಇರುವ ಪ್ರಕರಣಗಳ ಇತ್ಯರ್ಥಕ್ಕೆ ಪ್ರಯತ್ನ ನಡೆಸಲಾಗುತ್ತಿದೆ ಎಂದು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ತಿಳಿಸಿದ್ದಾರೆ.

ದ.ಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಹಲವು ಕೊರತೆಗಳ ನಡುವೆಯೂ ಲೋಕಾಯುಕ್ತಕ್ಕೆ ಬಂದಿರುವ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಲೋಕಾಯುಕ್ತರು ತಿಳಿಸಿದರು.

ಲೋಕಾಯುಕ್ತದಲ್ಲಿ ವಿವಿಧ ವಿಭಾಗಗಳಲ್ಲಿ ಸುಮಾರು 600ರಿಂದ 700 ಹುದ್ದೆಗಳು ಖಾಲಿ ಇವೆ. ಈ ಬಗ್ಗೆ ಸರಕಾರಕ್ಕೆ ಈಗಾಗಲೇ ತಿಳಿಸಲಾಗಿದೆ. ಕೊರತೆಗಳ ಬಗ್ಗೆ ಗಮನ ಹರಿಸದೆ ನಿಗದಿತ ಅವಧಿಯಲ್ಲಿ ಕೆಲಸ ಪೂರ್ಣಗೊಳಿಸಲು ಲೋಕಾಯುಕ್ತದ ಪೊಲೀಸ್, ಆಡಳಿತ, ನ್ಯಾಯಾಂಗ ಮತ್ತು ತಾಂತ್ರಿಕ ಘಟಕಗಳಿಗೆ ಸೂಚಿಸಲಾಗಿದೆ ಎಂದರು.

ಪ್ರಕರಣಗಳಲ್ಲಿ ಶಿಕ್ಷೆಯಾಗುವ ಪ್ರಮಾಣವನ್ನು ಹೆಚ್ಚಿಸುವುದಕ್ಕಾಗಿ ಪ್ರಾಸಿಕ್ಯೂಷನ್ ಮತ್ತು ತನಿಖೆ ಎರಡೂ ವಿಭಾಗಗ ಳೊಂದಿಗೆ ನಿರಂತರ ಸಂವಾದ ನಡೆಸಲಾಗುತ್ತಿದೆ. ಇದಕ್ಕೆ ಪೂರಕವಾಗಿ ತರಬೇತಿ ನೀಡಲಾಗುತ್ತಿದೆ. ತನಿಖೆ ವೇಳೆ ಲೋಪವಾಗದಂತೆ ನೋಡಿಕೊಳ್ಳಲು, ವಿಚಾರಣೆ ವೇಳೆ ಸಾಕ್ಷಿಗಳು ಪ್ರತಿಕೂಲವಾಗದಂತೆ ಗಮನ ಹರಿಸಲು ಅಗತ್ಯ ತರಬೇತಿ ನೀಡಲಾಗುತ್ತಿದೆ. ಸುಪ್ರೀಂ ಕೋರ್ಟ್‌ನ ಆದೇಶಗಳನ್ನು ಮುಂದಿಟ್ಟು ಪ್ರಕರಣಗಳನ್ನು ಪರಿಶೀಲಿಸಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗಲು ಹಲವು ಅಂಶಗಳು ಕಾರಣವಾಗಿದ್ದು ಲೋಕಾಯುಕ್ತರ ಕಡೆಯಿಂದ ಆಗಬೇಕಾಗಿರುವ ಎಲ್ಲ ಅಗತ್ಯ ಕೆಲಸಗಳನ್ನು ಮಾಡಲಾಗುವುದು ಎಂದು ಹೇಳಿದರು.

*ಉತ್ತಮ ಅಧಿಕಾರಿಗಳಿಗೆ ಮಾತ್ರ ಅವಕಾಶ: ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲೋಕಾಯುಕ್ತರು, ಯಾವುದೇ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳನ್ನು ಲೋಕಾಯುಕ್ತಕ್ಕೆ ಸೇರಿಸಿಕೊಳ್ಳುವುದಿಲ್ಲ. ನೇಮಕಾತಿ ಮಾಡಿಕೊಳ್ಳುವ ಮೊದಲು ಪೂರ್ವಾ ಪರಗಳನ್ನು ಪರಿಶೀಲಿಸಲಾಗುತ್ತದೆ. ಅವರ ವಿರುದ್ಧ ತನಿಖೆ, ದಾಳಿ ಆಗಿದೆಯೇ ಎಂಬುದನ್ನು ವಿಚಾರಿಸಲಾಗುತ್ತದೆ. ಒಂದು ವೇಳೆ ಸರಕಾರ ಕಳುಹಿಸಿಕೊಟ್ಟ ಅಧಿಕಾರಿಗಳು ಲೋಕಾಯುಕ್ತಕ್ಕೆ ಬೇಡವೆಂದಾದರೆ ಅವರನ್ನು ವಾಪಸ್ ಕಳುಹಿಸಲಾಗು ತ್ತಿದೆ ಎಂದು ಹೇಳಿದರು.

ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡಿರುವ ಕ್ರಮಗಳ ಕುರಿತು ಆಯುಕ್ತರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಮೂಡಾ ಏಕನಿವೇಶನ ಸಮಸ್ಯೆಯ ಬಗ್ಗೆಯೂ ದೂರು ಸ್ವೀಕರಿಸಲಾಗಿದೆ. ಈ ಬಗ್ಗೆ ಕೂಲಂಕಷ ವಿಚಾರಣೆ ನಡೆಸಲಾಗುವುದು. ತಪ್ಪತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮದ ಜತೆಗೆ ಸಮಸ್ಯೆಯ ಪರಿಹಾರಕ್ಕೂ ಪ್ರಯತ್ನಿಸಲಾಗುತ್ತದೆ ಎಂದು ಲೋಕಾಯುಕ್ತರು ತಿಳಿಸಿದರು.

*ಬಸ್ ಪ್ರಯಾಣಿಕರ ತಂಗುದಾಣ ಅವೈಜ್ಞಾನಿಕ ದೂರು: ಸ್ಮಾರ್ಟ್‌ಸಿಟಿಯಿಂದ ಕೆಲವೆಡೆ ನಿರ್ಮಿಸಿರುವ ಬಸ್ ಪ್ರಯಾಣಿಕರ ತಂಗುದಾಣಗಳು ಅವೈಜ್ಞಾನಿಕವಾಗಿರುವ ಬಗ್ಗೆ ಓರ್ವರು ದೂರು ನೀಡಿದರು. ಉಳ್ಳಾಲ ನಗರಸಭೆ, ಮಾಲಿನ್ಯ ನಿಯಂತ್ರಣ ಮಂಡಳಿಗೆ ಸಂಬಂಧಿಸಿದಂತೆಯೂ ಲೋಕಾಯುಕ್ತರಿಗೆ ದೂರುಗಳನ್ನು ನೀಡಲಾಯಿತು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್‌ಪಿ ಸಿ.ಬಿ.ರಿಷ್ಯಂತ್, ಜಿ.ಪಂ. ಸಿಇಒ ಡಾ.ಆನಂದ್ ಕೆ., ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್, ಲೋಕಾಯುಕ್ತ ಎಸ್‌ಪಿ ಸಿ.ಎ.ಸೈಮನ್ ಮೊದಲಾದವರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News