ಮಾ.22: ವಿಜಯ- ವಿಕ್ರಮ ಜೋಡುಕರೆ ಕಂಬಳ

ಉಪ್ಪಿನಂಗಡಿ: 39ನೇ ವರ್ಷದ ವಿಜಯ- ವಿಕ್ರಮ ಜೋಡುಕರೆ ಕಂಬಳವು ಕೂಟೇಲು ದಡ್ಡುವಿನ ನೇತ್ರಾವತಿ ನದಿ ಕಿನಾರೆಯಲ್ಲಿ ಮಾ. 22ರಂದು ನಡೆಯಲಿದ್ದು, ಕಂಬಳ ಸಮಿತಿಯ ಅಧ್ಯಕ್ಷರು ಹಾಗೂ ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರೂ ಆದ ಅಶೋಕ್ ಕುಮಾರ್ ರೈಯವರ ಆಶಯದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಜೋಡಿಸಿಕೊಂಡು ಕಂಬಳವನ್ನು ಉಬಾರ್ ಕಂಬಳೋತ್ಸವವಾಗಿ ನಡೆಸಲು ಭರದ ಸಿದ್ಧತೆ ನಡೆಯುತ್ತಿದೆ. ಕಂಬಳದ ಪರಿಸರದಲ್ಲಿ ಸಸ್ಯಮೇಳ, ಆಹಾರ ಮೇಳ, ಮಕ್ಕಳ ಮನೋರಂಜನಾ ಕಾರ್ಯಕ್ರಮಗಳು ಹಾಗೂ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಬೋಟಿಂಗ್ ವ್ಯವಸ್ಥೆ ಯನ್ನು ಆಯೋಜಿಸಲಾಗಿದೆ ಎಂದು ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ತಿಳಿಸಿದರು.
ಉಪ್ಪಿನಂಗಡಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾ. 22ರಂದು ಬೆಳಗ್ಗೆ 8 ರಿಂದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ಅಮ್ಮನವರ ಸನ್ನಿಧಿಯಿಂದ ಕಂಬಳ ಕರೆಯವರೆಗೆ ಕಂಬಳ ಕೋಣಗಳ ಆಕರ್ಷಕ ಮೆರವಣಿಗೆ ನಡೆಯಲಿದ್ದು, ಮೆರವಣಿಗೆಗೆ ಪುತ್ತೂರು ಸಹಾಯಕ ಆಯುಕ್ತರಾದ ಸ್ಪೇಲ್ಲಾ ವರ್ಗಿಸ್ ಚಾಲನೆ ನೀಡಲಿದ್ದಾರೆ. 9:31ಕ್ಕೆ ಕಂಬಳ ಕರೆಯಲ್ಲಿ ಕಂಬಳದ ಉದ್ಘಾಟನೆ ನಡೆಯಲಿದ್ದು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾೈಕ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಬೆಂಗಳೂರಿನ ಉದ್ಯಮಿ, ವಿಜಯ- ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಉಪಾಧ್ಯಕ್ಷರಾದ ನಟೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷೆ ಲಲಿತಾ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಶೆಟ್ಟಿ ಮಲಾರು ಬೀಡು, ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಅವಿನಾಶ್ ಎಚ್. ಗೌಡ, ಉದ್ಯಮಿ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕದಿಕ್ಕಾರು ಬೀಡಿನ ಪ್ರವೀಣ್ ಕುಮಾರ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರವೀಂದ್ರ ಶೆಟ್ಟಿ ನುಳಿಯಾಲು, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ರಾಜೇಶ್ ಎಲೆಕ್ಟ್ರಿಕಲ್ಸ್‌ನ ರಾಜೇಶ್ ಶೆಟ್ಟಿ, ಉಪ್ಪಿನಂಗಡಿ ದೀನರ ಕನ್ಯಾ ಮಾತೆ ದೇವಾಲಯದ ಧರ್ಮಗುರು ಗಳಾದ ರೆ.ಫಾ. ಜೆರಾಲ್ಡ್ ಡಿಸೋಜ, ಉಪ್ಪಿನಂಗಡಿ ಮಾಲೀಕುದ್ದೀನಾರ್ ಜುಮಾ ಮಸೀದಿಯ ಅಧ್ಯಕ್ಷ ಯೂಸುಫ್ ಹಾಜಿ, ಉಪ್ಪಿನಂಗಡಿ ಗ್ರಾ.ಪಂ. ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರರಾದ ಸಂಕಪ್ಪ ಶೆಟ್ಟಿ ಭಾಗವಹಿಸಲಿದ್ದಾರೆ ಎಂದರು.
ಶಾಸಕರು, ಕಂಬಳ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ಸಂಜೆ 6ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರಕಾರದ ಸಭಾಪತಿ ಯು.ಟಿ. ಖಾದರ್, ಇಂಧನ ಸಚಿವ ಕೆ.ಜೆ. ಜಾರ್ಜ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತ ಖಾತೆ ಸಚಿವರಾದ ಜಮೀರ್ ಅಹ್ಮದ್, ಯುವಜನ ಸಬಲೀಕರಣ, ಕ್ರೀಡಾ ಹಾಗೂ ಪರಿಶಿಷ್ಟ ವರ್ಗಗಳ ಸಚಿವರಾದ ನಾಗೇಂದ್ರ, ಆರೋಗ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ಸಂಸದ ಬ್ರಿಜೇಶ್ ಚೌಟ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಕಿಶೋರ್ ಕುಮಾರ್, ಕೇಂದ್ರದ ಮಾಜಿ ಸಚಿವರಾದ ಡಿ.ವಿ. ಸದಾನಂದ ಗೌಡ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಈಶ್ವರ ಭಟ್ ಪಂಜಿಗುಡ್ಡೆ, ಸಂಗೀತ ನಿರ್ದೇಶಕ ಶಕುಂತಳಾ ಟಿ. ಶೆಟ್ಟಿ, ವಿಧಾನ ಪರಿಷತ್ ಮಾಜಿ ಸಚಿವ ಹರೀಶ್ ಕುಮಾರ್, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೋಶಾಧಿ ಕಾರಿ ಪದ್ಮರಾಜ್ ಆರ್., ಮಾಜಿ ಸಚಿವ ವಿನಯಕುಮಾರ್ ಸೊರಕೆ, ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಅಖಿಲ ಭಾರತ ಕುಸ್ತಿ ಫೆಡರೇಶನ್ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ, ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ, ಮಿಥುನ್ ರೈ, ಉದ್ಯಮಿ ಪ್ರಮೋದ್ ಶೆಟ್ಟಿ, ದ.ಕ. ಜಿಲ್ಲಾ ಸಹಕಾರಿ ಯೂನಿಯನ್‍ನ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುಗುತ್ತು, ಮಾಜಿ ಶಾಸಕ ರಾದ ಸಂಜೀವ ಮಠಂದೂರು, ವಿಟ್ಲ- ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಡಾ. ರಾಜಾ ರಾಮ್ ಕೆ.ಬಿ., ಪುತ್ತೂರು ಬ್ಲಾಕ್ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಎಂ.ಬಿ. ವಿಶ್ವನಾಥ ರೈ, ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಉದ್ಯಮಿ ಉಮ್ಮರ್ ಹಾಜಿ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
ಬಹುಮಾನ ವಿತರಣೆ ಕಾರ್ಯಕ್ರಮವು ಮಾ.23ರಂದು ನಡೆಯಲಿದ್ದು, ಅತಿಥಿಗಳಾಗಿ ಪುತ್ತೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಬಿ.ಎಸ್.ಎಫ್.ನ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಡಿ. ಚಂದಪ್ಪ ಮೂಲ್ಯ, ನ್ಯಾಯವಾದಿ ಮಹೇಶ್ ಕಜೆ, ಉಪ್ಪಿನಂಗಡಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘಗಳ ಅಧ್ಯಕ್ಷ ಪ್ರಶಾಂತ್ ಡಿಕೋಸ್ತ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಆರು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ನೇಗಿಲು ಕಿರಿಯ ಬೆಳಿಗ್ಗೆ 10-31ಕ್ಕೆ, ಹಗ್ಗ ಕಿರಿಯ ಬೆಳಗ್ಗೆ 11.30ಕ್ಕೆ, ನೇಗಿಲು ಹಿರಿಯ ಮಧ್ಯಾಹ್ನ 12.30ಕ್ಕೆ, ಹಗ್ಗ ಹಿರಿಯ ಮಧ್ಯಾಹ್ನ 2.00ಕ್ಕೆ ಹಾಗೂ ಅಡ್ಡ ಹಲಗೆ ಮತ್ತು ಕನೆ ಹಲಗೆ ಸಂಜೆ 4ಗಂಟೆಗೆ ಕರೆಗೆ ಇಳಿಯಲಿವೆ. ಕಂಬಳ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಿಗೆ ಚಿನ್ನದ ಬಹುಮಾನ ಲಭಿಸಿದರೆ, ವಿಜೇತ ಕೋಣಗಳ ಮಾಲಕರಿಗೆ ವಿಜಯ ವಿಕ್ರಮ ಟ್ರೋಪಿಯನ್ನು ನೀಡಿ ಗೌರವಿಸಲಾಗುವುದು. ಮಾತ್ರವಲ್ಲದೆ ಈ ಬಾರಿ ವಿಜೇತ ಕೋಣಗಳ ಇಬ್ಬರು ರಕ್ಷಕರಿಗೂ ಬಹುಮಾನದ ಗೌರವ ನೀಡುವ ಯೋಜನೆ ಇದ್ದು, ಈ ಮೂಲಕ ಕಂಬಳದ ಎಲ್ಲಾ ಸ್ತರದ ಪ್ರಮುಖರಿಗೂ ಮಾನ್ಯತೆಯನ್ನು ನೀಡಲಾಗುವುದು ಎಂದು ಅಶೋಕ್ ಕುಮಾರ್ ರೈ ಅರ್ಪಿಣಿ ಗುತ್ತು ತಿಳಿಸಿದರು.
ವಿಶೇಷ ಆಕರ್ಷಣೆಯಾಗಿ ರಚನಾ ರೈ (ಕನ್ನಡ ಚಿತ್ರನಟಿ), ವಿನಿತ್ ಕುಮಾರ್ (ನಾಯಕ ನಟ), ಸಮಂತ ಅಮೀನ್ (ನಾಯಕ ನಟಿ), ಹರ್ಷಿತಾ ರಾಮಚಂದ್ರ (ಕನ್ನಡ ಚಿತ್ರನಟಿ), ಸುಜಿತ್ ಸುಪ್ರಭ (ಕನ್ನಡ ಚಿತ್ರನಟ), ಮನೀಶ್ ಶೆಟ್ಟಿ (ಕಾಮಿಡಿ ಕಿಲಾಡಿ), ಹಿತೇಶ್ (ಕಾಮಿಡಿ ಕಿಲಾಡಿ) ಭಾಗವಹಿಸಲಿದ್ದಾರೆ ಎಂದು ತಿಳಿಸಿದ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ಅವರು, ಕಂಬಳದ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಕಂಬಳ ಕೋಣಗಳ ಓಟಗಾರ ಮಿಜಾರು ಅಶ್ವಥಪುರ ಶ್ರೀನಿವಾಸ ಗೌಡ ಹಾಗೂ ಕಂಬಳ ಕೋಣಗಳ ಹಿರಿಯ ಓಟಗಾರ ಮಹಾಬಲ ಶೆಟ್ಟಿ ಬಾಲಾಜೆ ಗುತ್ತು ಅವರನ್ನು ಸನ್ಮಾನಿಸಲಾ ಗುವುದು. ಸಂಜೆಯ ಸಭಾ ಕಾರ್ಯಕ್ರಮದ ಮೊದಲು ಅತಿಥಿ ಅಭ್ಯಾಗತರನ್ನು ಕೂಟೇಲು ಸೇತುವೆಯ ಬಳಿಯಿಂದ ವೈಭವರ ಮೆರವಣಿಗೆ ಮೂಲಕ ವೇದಿಕೆಗೆ ಕರೆ ತರಲಾಗುವುದು ಎಂದು ತಿಳಿಸಿದರು.
ಕಂಬಳ ಸಮಿತಿಯ ಗೌರವಾಧ್ಯಕ್ಷ ನಂದಾವರ ಉಮೇಶ್ ಶೆಣೈ ಮಾತನಾಡಿ, ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ಮೂರು ಮಖೆ ಜಾತ್ರೆಗಳಿಗೆ ಬಹಳ ವರ್ಷಗಳ ಹಿಂದೆ ಕಂಬಳ ಆಯೋಜನೆ ಮಾಡಲಾಗುತ್ತಿತ್ತು. ಈ ಬಾರಿ ಇಲ್ಲಿನ ಮಖೆ ಜಾತ್ರೆ ಮುಗಿದು ಶ್ರೀ ಮಹಾಕಾಳಿ ಅಮ್ಮನವರ ಮೆಚ್ಚಿಯು ಮಾ.21ರ ರಾತ್ರಿ ನಡೆಯಲಿದ್ದು, ಅದು ಮುಗಿದ ಕೆಲವೇ ಸಮಯದಲ್ಲಿ ಅದೇ ಸನ್ನಿಧಿಯಿಂದ ಕಂಬಳದ ಮೆರವಣಿಗೆ ಬರುವ ಯೋಗ ಭಾಗ್ಯ ಈ ಬಾರಿ ಕೂಡಿ ಬಂದಿರುವುದು ನಮ್ಮೆಲ್ಲರ ಪುಣ್ಯ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಕಂಬಳ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪ, ಗೌರವ ಸಲಹೆಗಾರ ನಿರಂಜನ್ ರೈ ಮಠಂತಬೆಟ್ಟು, ಸಂಘಟನಾ ಕಾರ್ಯದರ್ಶಿ ಯೋಗೀಶ್ ಸಾಮಾನಿ ಉಪಸ್ಥಿತರಿದ್ದರು.