ಅಜಿಲಮೊಗರು: ಮೀನು ಹಿಡಿಯುತ್ತಿದ್ದ ವ್ಯಕ್ತಿ ನದಿಗೆ ಬಿದ್ದು ಮೃತ್ಯು

Update: 2024-07-05 06:50 GMT

ಬಂಟ್ವಾಳ: ನೇತ್ರಾವತಿ ನದಿ ಬಳಿಯ ತೋಡೊಂದರಲ್ಲಿ ಮೀನು ಹಿಡಿಯಲು ಗಾಳ ಹಾಕುತ್ತಿದ್ದ ವ್ಯಕ್ತಿಯೋರ್ವ ನದಿಗೆ ಬಿದ್ದು ನೀರು ಪಾಲಾದ ಘಟನೆ ಗುರುವಾರ ಸಂಜೆ ತಾಲೂಕಿನ ಅಜಿಲಮೊಗರು ಕೂಟೇಲು ಬಳಿ ಸಂಭವಿಸಿದೆ.

ಸುರತ್ಕಲ್‌ ಕಾನ ಮೂಲದ ಮೈಕಲ್‌ (53) ನೀರುಪಾಲಾದವರು.  ಮಣಿನಾಲ್ಕೂರು ಗ್ರಾಮದ ಮಾವಿನಕಟ್ಟೆಯ ಸ್ನೇಹಿತ ಸುದೀಪ್‌ ಜೊತೆ  ಮೀನು ಹಿಡಿಯಲು ಅಜಿಲಮೊಗರು ಭಾಗಕ್ಕೆ ಹೋಗಿದ್ದರು. 

ಉಪ್ಪಿನಂಗಡಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್‌ ಠಾಣಾ ಗಡಿ ಪ್ರದೇಶವಾದ ಅಜಿಲಮೊಗರು ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ಸೇರುವ ಪಕ್ಕದಲ್ಲೇ ತೋಡಿಗೆ ಅಡ್ಡವಾಗಿ ನಿರ್ಮಿಸಿರುವ ಹಳೆಯ ಕಿಂಡಿ ಅಣೆಕಟ್ಟಿನ ಮೇಲೆ ನಿಂತು ಗಾಳ ಹಾಕುತ್ತಿದ್ದ ವೇಳೆ ಮೈಕೆಲ್ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆಎನ್ನಲಾಗಿದೆ. ತೋಡಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು, ಹೀಗಾಗಿ ಘಟನೆಯಲ್ಲಿ ಅಲ್ಲೇ ಪಕ್ಕದಲ್ಲಿದ್ದವರು ನೋಡಿದರೂ ಏನೂ ಮಾಡುವುದಕ್ಕೆ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ.

ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ನದಿಯಲ್ಲಿ ಹುಡುಕುವ ಪ್ರಯತ್ನ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಿಗ್ಗೆ ನೇತ್ರಾವತಿ ನದಿಯಲ್ಲಿ ನೀರು ಇಳಿಕೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಒಟ್ಟು ನಾಲ್ವರು ಮೀನು ಹಿಡಿಯಲು ಬಂದಿದ್ದು, ಇಬ್ಬರು ಮನೆಗೆ ತೆರಳಿದ್ದರು. ಬಳಿಕ ಇಬ್ಬರೇ ಇದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೈಕಲ್‌ ಕೆಲವು ವರ್ಷಗಳ ಕಾಲ ವಿದೇಶದಲ್ಲಿದ್ದು, ಬಳಿಕ ಊರಿಗೆ ಮರಳಿ ವೆಲ್ಡಿಂಗ್‌ ಕೆಲಸ ಮಾಡುತ್ತಿದ್ದರು. 

ಬಂಟ್ವಾಳ ಗ್ರಾಮಾಂತರ ಹಾಗೂ ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News