ವರದಿಯು ವೈದ್ಯರು, ಆಸ್ಪತ್ರೆಯನ್ನು ರಕ್ಷಿಸುವ ಪ್ರಯತ್ನದ ಭಾಗ: ಬಾಲಕನ ಕುಟುಂಬದ ಆರೋಪ

Update: 2024-03-23 18:14 GMT

ಸುರತ್ಕಲ್: ಕಾಲಿಗೆ ಆಗಿದ್ದ ಸಣ್ಣ ಮಟ್ಟದ ಗಾಯದ ಚಿಕಿತ್ಸೆಗೆಂದು ಸುರತ್ಕಲ್ ಅಥರ್ವ ಆರ್ಥೋ ಕೇರ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಕುಳಾಯಿ ನಿವಾಸಿ ಮೊಯ್ದಿನ್ ಫರ್ಹಾನ್ ಸಾವಿನ ಅಂತಿಮ ವರದಿಯನ್ನು ಅಡ್ಡಗೋಡೆಯಲ್ಲಿ ದೀಪ ಇಟ್ಟಂತೆ ನೀಡಿದ್ದು, ನಮಗೆ ನ್ಯಾಯ ನಿರಾಕರಿಸಲಾಗಿದೆ ಎಂದು ಬಾಲಕನ ಕುಟುಂಬ ಆರೋಪಿಸಿದೆ.

ಅನಸ್ತೇಶಿಯಾದ ಅಡ್ಡ ಪರಿಣಾಮದಿಂದ ಮೂರ್ಛೆ ರೋಗ ಕಾಣಿಸಿಕೊಂಡಿರುವ ಸಾಧ್ಯತೆಗಳಿವೆ ಎಂದು ಹೇಳಿರುವ ಜಿಲ್ಲಾಡಳಿತ ನೇಮಿಸಿದ್ದ ತಜ್ಞವೈದ್ಯರ ತಂಡದ ವರದಿ, ಅನಸ್ತೇಶಿಯಾದಿಂದಲೇ ಮೂರ್ಛೆ ರೋಗ ಕಾಣಿಸಿಕೊಂಡಿದೆ ಎಂಬ ಬಗ್ಗೆ ಸ್ಪಷ್ಟ ಪಡಿಸಿಲ್ಲ. ಜೊತೆಗೆ ಕಾಲಿಗೆ ಆಗಿದ್ದ ಸಣ್ಣ ಗಾಯಕ್ಕೆ ಶಸ್ತ್ರಕ್ರಿಯೆ ಆವಶ್ಯಕತೆ ಇತ್ತೇ ಎಂಬ ಕುರಿತೂ ಸ್ಪಷ್ಟನೆ ನೀಡಿಲ್ಲ. ಅನಸ್ತೇಶಿಯಾ ನೀಡಿದ ಬಳಿಕ ಕಾಣಿಸಿಕೊಡಿತೆನ್ನಲಾದ ಮೂರ್ಛೆರೋಗಕ್ಕೆ ಪ್ರಥಮ ಪ್ರಾಶಸ್ತ್ಯದಲ್ಲಿ ಚಿಕಿತ್ಸೆ ನೀಡಿದೆ, ಶಸ್ತ್ರಕ್ರಿಯೆ ನಡೆಸಿರುವುದು ತಪ್ಪೇ ಅಥವಾ ಸರಿಯಾದ ಕ್ರಮವೇ ಎಂಬ ಬಗ್ಗೆಯೂ ತಜ್ಞವೈದ್ಯರ ಸಮಿತಿ ಸ್ಪಸ್ಟತೆ ನೀಡಿಲ್ಲ ಎಂದು ಕುಟುಂಬ ಆರೋಪಿಸಿದೆ.

ಇನ್ನೊಂದೆಡೆ ತಜ್ಞ ವೈದ್ಯರ ವರದಿಯಲ್ಲಿ ಯಾವುದೇ ರೀತಿಯ ಸ್ಪಷ್ಟತೆ ಇಲ್ಲದಿರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಾಗದೆ ಕುಳಿತುಕೊಳ್ಳುವಂತಾಗಿದೆ. ಸದ್ಯ ಪ್ರಕರಣದ ತನಿಖಾಧಿಕಾರಿ ರಘುನಾಯಕ್ ವರದಿಯಲ್ಲಿ ಯಾವುದೇ ಸ್ಪಷ್ಟತೆ ಇಲ್ಲದಿರುವುದರಿಂದ ಮರು ತನಿಖೆ ನಡೆಸಿ ಸ್ಪಷ್ಟವಾದ ಅಂತಿಮ ವರದಿ ನೀಡುವಂತೆ ತನಿಖಾ ವರದಿಯನ್ನು ತಜ್ಞವೈದ್ಯರ ಸಮಿತಿಗೆ ಹಿಂದಿರುಗಿಸಿದೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಮೂರು ತಿಂಗಳಕಾಲ ಸಮಯ ಪಡದುಕೊಂಡು ಸುಮಾರು 300 ಪುಟಗಳ ಅಂತಿಮ ವರದಿಯಲ್ಲಿ ಯಾವುದೇ ಸ್ಪಷ್ಟ ಕಾರಣವನ್ನು ನೀಡದೆ ಜಿಲ್ಲಾಡಳಿತ ನೇಮಿಸಿರುವ ತಜ್ಞವೈದ್ಯರ ಸಮಿತಿ ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ವರದಿ ಸಲ್ಲಿಸಿ ಆರೋಪಿತ ಅಥರ್ವ ಆರ್ಥೋ ಕೇರ್ ಆಸ್ಪತ್ರೆಯ ವೈದ್ಯರ ರಕ್ಷಣೆಗೆ ಮುಂದಾಗಿದೆ ಎಂದು ಮೃತ ಬಾಲಕ ಫರ್ಹಾನ್ ಕುಟುಂಬ ಗಂಭೀರ ಆರೋಪ ಮಾಡಿದೆ.

ಫರ್ಹಾನ್ ಸಾವಿನ ಕುರಿತು ಜಿಲ್ಲಾಡಳಿತವು ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಆರ್.ತಿಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಗರದ ವಿವಿಧ ಆಸ್ಪತ್ರೆಗಳ ತಜ್ಞ ವೈದ್ಯರ ತಂಡವನ್ನು ರಚಿಸಿ ವರದಿ ನೀಡುವಂತೆ ಆದೇಶಿಸಿತ್ತು. ಅದರಂತೆ ತನಿಖಾ ಸಮಿತಿಯು ತನ್ನ ವರದಿಯನ್ನು ಜಿಲ್ಲಾಢಿಕಾರಿಯವರಿಗೆ ಸಲ್ಲಿಸಿ ತಿಂಗಳಾದರೂ ಜಿಲ್ಲಾಧಿಕಾರಿ ವರದಿಯ ಕುರಿತಾಗಲೀ ಅಥವಾ ಸಂತ್ರಸ್ತರ ಕುರಿತಾಗಲೀ ಯಾವುದೇ ಹೇಳಿಕೆಗಳನ್ನೂ ನೀಡಿಲ್ಲ. ಇದು ಜಿಲ್ಲಾಡಳಿತ ಫರ್ಹಾನ್ ಸಾವಿನ ಪ್ರಕರಣವನ್ನು ನಿರ್ಲಕ್ಷಿಸುತ್ತಿದೆ ಮತ್ತು ವೈದ್ಯರ ರಕ್ಷಣೆಗೆ ನಿಂತಿದೆ ಎನ್ನುವುದಕ್ಕೆ ಸಾಕ್ಷಿ ಎಂದು ಹೋರಾಟಗಾರ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಬಾಲಕನ ಸಾವಿನ ಬಳಿಕ ನಡೆಸಲಾಗಿದ್ದ ಪ್ರಾಥಮಿಕ ವರದಿಯಲ್ಲಿ ಶಸ್ತ್ರ ಚಿಕಿತ್ಸೆಗೆ ಮುನ್ನ ರೋಗಿಯ ಬೆನ್ನು ಹುರಿಗೆ (spinal anaesthsia) ಅನಸ್ತೇಶಿಯಾ ನೀಡಿದ ನಂತರ ಮೂರ್ಛೆರೋಗ ತರಹದ ಅಸಹಜ ಚಲನೆ ಕಾಣಿಸತೊಡಗಿತು. ಅದನ್ನು ನಿಯಂತ್ರಿಸಲು ಜನರಲ್ ಅನಸ್ತೇಶಿಯಾ ನೀಡಿ ಶಸ್ತ್ರ ಚಿಕಿತ್ಸೆಯನ್ನು ನಡೆಸಲಾಯಿತು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳು ಒಪ್ಪಿಕೊಂಡಿರುವುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೂ ವರದಿಯನ್ನು ಅಡ್ಡಗೋಡೆಯಲ್ಲಿ ದೀಪವಿಟ್ಟಂತೆ ನೀಡಲಾಗಿದೆ ಎಂದು ಫರ್ಹಾನ್ ಕುಟುಂಬ ಆರೋಪಿಸಿದೆ.

ತಜ್ಞ ವೈದ್ಯರ ವರದಿಯಲ್ಲಿ ವೈದ್ಯರನ್ನು ರಕ್ಷಿಸುವ ಪ್ರಯತ್ನ ಮಾಡಲಾಗಿದೆ. ವರದಿಯಲ್ಲಿ ಸ್ಪಷ್ಟತೆ ಇಲ್ಲದಿರುವುದಿಂದ ಪೊಲೀಸರೂ ಚಾರ್ಜ್ ಶೀಟ್ ಹಾಕಲಾಗದೆ ಗೊಂದಲದಲ್ಲಿದ್ದಾರೆ. ಘಟನೆಗೆ ಸಂಬಂಧಿಸಿದ ವರದಿ ಜಿಲ್ಲಾಧಿಕಾರಿಯವರ ಬಳಿ ಇದೆ. ಪ್ರಕರಣ ಕುರಿತ ಜಿಲ್ಲಾಧಿಕಾರಿಯವರ ಹೇಳಿಕೆಯ ಬಳಿಕ ಬಾಲಕನ ಕುಟುಂದ ಜೊತೆ ಮಾತುಕತೆ ನಡೆಸಿ ಮುಂದಿನ ಹೋರಾಟ ಸಂಘಟಿಸಲಾಗುವುದು.

ಮುನೀರ್ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯಾಧ್ಯಕ್ಷ

ವರದಿಯಲ್ಲಿ ನಮ್ಮ ಸಂಶಯಗಳಿಗೆ ಉತ್ತರ ದೊರೆತಿಲ್ಲ. ಫರ್ಹಾನ್ ಸಾವಿಗೆ ನಿಖರ ಕಾರಣ ಏನು? ಕಾಲಿಗಾದ ಸಣ್ಣ ಗಾಯಕ್ಕೆ ಬೆನ್ನುಹುರಿಗೆ ಅನಸ್ತೇಶಿಯಾ ನೀಡಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗಿದ್ದ ಅವಶ್ಯಕತೆ ಇತ್ತೇ? ಮತ್ತು ವೈದ್ಯರೇ ಹೇಳಿದಂತೆ ಮೂರ್ಛೆ ರೋಗ ಕಾಣಿಸಿಕೊಂಡಿತ್ತು ಎಂದಾದರೆ ಮೊದಲು ಅದಕ್ಕೆ ಚಿಕಿತ್ಸೆ ನೀಡದೆ ಶಸ್ತ್ರಚಿಕಿತ್ಸೆ ಮುಂದುವರಿಸಲು ಕಾರಣ ಏನು? ಎಂಬಿತ್ಯಾದಿ ಸಂಶಯಗಳಿಗೆ ವರದಿಯಲ್ಲಿ ಉತ್ತರ ಸಿಕ್ಕಿಲ್ಲ. ತೋರಿಕೆಗಾಗಿ ತಜ್ಞವೈದ್ಯರು ತನಿಖೆ ನಡೆಸಿ ವರದಿ ನೀಡಿದ್ದಾರೆ. ಇದು ವೈದ್ಯರು ಮತ್ತು ಆಸ್ಪತ್ರೆಯನ್ನು ರಕ್ಷಿಸುವ ವರದಿ ಅಷ್ಟೇ ವಿನಹಾ ಸಂತ್ರಸ್ತರಿಗೆ ನ್ಯಾಯ ನೀಡುವ ವರದಿಯಲ್ಲ.

ಶಮೀಮ್ ಬದವಿದೆ, ಮೃತ ಫರ್ಹಾನ್‌ರ ಮಾವ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News