ಪ್ರಾಸಿಕ್ಯೂಷನ್ ಅನುಮತಿ ಕೇಳಿರುವ ಎಲ್ಲ ಅರ್ಜಿಗಳನ್ನು ರಾಜ್ಯಪಾಲರು ವಿಲೇವಾರಿ ಮಾಡಲಿ: ಹರೀಶ್ ಕುಮಾರ್
ಮಂಗಳೂರು: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತರಾತುರಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ತಮಗೆ ತನಿಖಾ ಸಂಸ್ಥೆಗಳು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತು ಕೆಲವು ಮಾಜಿ ಸಚಿವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಕ್ಷಣ ವಿಲೇವಾರಿ ಮಾಡುವಂತೆ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ಮಲ್ಲಿಕಟ್ಟೆಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸಚಿವ ಎಚ್.ಡಿ.ಕೆ.ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ವಿರುದ್ಧದ ಆರೋಪಕ್ಕೆ ಸಂಬಂಧಿಸಿ ಕಾನೂನುಕ್ರಮಕ್ಕೆ ಈವರೆಗೂ ಅನುಮತಿ ನೀಡದ ರಾಜ್ಯಪಾಲರು ಈಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ವಿರುದ್ಧ ಯಾಕೆ ತರಾತುರಿಯಲ್ಲಿ ಪ್ರಾಸಿಕ್ಯೂಷನ್ ಅನುಮತಿ ನೀಡಿದರು ಎಂದು ಪ್ರಶ್ನಿಸಿದರು.
ಕುಮಾರಸ್ವಾಮಿ ವಿರುದ್ಧ ಇರುವ ಗಂಭೀರ ಆರೋಪಕ್ಕೆ ಸಂಬಂಧಿಸಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಕಚೇರಿ ಯಿಂದ 2023ರಲ್ಲಿ ರಾಜ್ಯಪಾಲರಲ್ಲಿ ಅನುಮತಿ ಕೋರಲಾಗಿತ್ತು. ಆದರೆ ರಾಜ್ಯಪಾಲರು ಯಾವುದೇ ತೀರ್ಮಾನ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲೋಕಾಯುಕ್ತ ಅನುಮತಿ ಕೇಳಿದೆ. ರಾಜ್ಯಪಾಲರು ಕೂಡಲೇ ಇದಕ್ಕೆ ಅನುಮತಿ ನೀಡಲಿ ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಸರಕಾರದ ಜನಪ್ರಿಯತೆ ನೋಡಿ ಸಹಿಸಲು ಬಿಜೆಪಿ ನಾಯಕರಿಗೆ ಆಗು ತ್ತಿಲ್ಲ. ಇನ್ನು ಹತ್ತು ವರ್ಷ ಬಿಜೆಪಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಮನವರಿಕೆಯಾಗಿದೆ. ಅದಕ್ಕಾಗಿ ಏನಾದರೂ ಮಾಡಿ ಸರಕಾರವನ್ನು ಉರುಳಿಸಬೇಕು,ಸಿಎಂ ಮುಖಕ್ಕೆ ಮಸಿ ಬಳಿಯಲು ಬಿಜೆಪಿ ನಾಯಕರು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ ಎಂದರು.
ಕಲ್ಲು ತೂರಿದ್ದು ತಪ್ಪು: ಮಹಾನಗರಪಾಲಿಕೆಯ ಮುಂಭಾಗದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಸ್‌ಗೆ ಕಲ್ಲು ತೂರಾಟ ನಡೆಸಿದ್ದು ತಪ್ಪು. ಅದನ್ನು ನಾವು ಸಮರ್ಥಿಸುವುದಿಲ್ಲ. ಅದರೆ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಹರೀಶ್ ಕುಮಾರ್ ಉತ್ತರಿಸಿದರು.
ಶಾಂತಿಯುತವಾಗಿಯೇ ಪ್ರತಿಭಟನೆ ಆಯೋಜಿಸಿದ್ದೆವು. ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮಾಡಬಾರದಿತ್ತು. ಆದರೆ ಆಗಿದೆ ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಐವನ್ ಡಿ ಸೋಜ ಹೇಳಿಕೆಗೆ ಸಂಬಂಧಿಸಿ ಪ್ರಕ್ರಿಯೆ ನೀಡಿದ ಹರೀಶ್ ಕುಮಾರ್ ಅವರು ಐವನ್ ಡಿ ಸೋಜ ಅವರು ಅರಾ ಜಕತೆ ವಿಷಯದ ಕುರಿತು ಮಾತನಾಡುವಾಗ ಶ್ರೀಲಂಕಾ ಮತ್ತು ಬಾಂಗ್ಲಾದ ಉದಾಹರಣೆ ನೀಡಿದ್ದಾರೆ. ಅವರ ಹೇಳಿಕೆ ಯಲ್ಲಿ ಅಂಥ ಘಟನೆ ನಡೆಯಬಾರದು ಎಂಬ ಉದ್ದೇಶ ಇತ್ತೇ ಹೊರತು ತಾವು ಹಾಗೆ ಮಾಡುವುದಾಗಿ ಹೇಳಿಲ್ಲ ಎಂದರು.
ಬೆಳ್ತಂಗಡಿಯಲ್ಲಿ ಇತ್ತೀಚೆಗೆ ರೌಡಿಯೊಬ್ಬನನ್ನು ಪೊಲೀಸರು ಬಂಧಿಸಿದಾಗ ಶಾಸಕ ಹರೀಶ್ ಪೂಂಜ ಸ್ಟೇಶನ್‌ಗೆ ತೆರಳಿ ಪೊಲೀಸರನ್ನೇ ಅವಹೇಳನ ಮಾಡಿ ಸರಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. , ಬೆದರಿಕೆಯೊಡ್ಡಿದ್ದರು. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಜಿಲ್ಲೆಗೆ ಬೆಂಕಿ ಹಚ್ಚುವುದಾಗಿ ಹೇಳಿಕೆ ನೀಡಿದ್ದರು. ಶಾಸಕ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಕೆನ್ನೆಗೆ ಹೊಡೆಯಬೇಕು ಎಂದು ಬೆದರಿಕೆಯೊಡ್ಡಿದ್ದರು. ಅಲ್ಲದೆ, ಸೆಕ್ಷನ್ 144 ಜಾರಿಯಲ್ಲಿದ್ದಾಗ ಬಿಜೆಪಿಯವರು ಮೆರವಣಿಗೆ ನಡೆಸಿದ್ದಾರೆ. ಅವರ ಮಟ್ಟಕ್ಕೆ ನಾವು ಇಳಿಯುವುದಿಲ್ಲ. ಐವನ್ ಡಿಸೋಜ ಹೇಳಿಕೆಯಲ್ಲಿ ಯಾವ ದುರುದ್ದೇಶವೂ ಇಲ್ಲ ಎಂದು ಹೇಳಿದರು.
ಈ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಇದ್ದ ಪೊಲೀಸರೇ ಈಗ ಇರೋದೇ ಹೊರತು ಅಮೆರಿಕದಿಂದ ಪೊಲೀಸರನ್ನು ತಂದಿಲ್ಲ. ಕಾನೂನು ಪ್ರಕಾರ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಹರೀಶ್ ಕುಮಾರ್ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಇಬ್ರಾಹೀಂ ಕೊಡಿಜಾಲ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪದ್ಮರಾಜ್.ಆರ್ ಪೂಜಾರಿ, ಶಾಹುಲ್ ಹಮೀದ್ ಕೆ.ಕೆ, ಎಂ.ಜಿ ಹೆಗ್ಡೆ, ಶಬೀರ್ ಎಸ್, ವಿಶ್ವಾಸ್ ದಾಸ್ ಕುಮಾರ್, ವಿಕಾಸ್ ಶೆಟ್ಟಿ, ನಿರಾಜ್ ಚಂದ್ರ ಪಾಲ್, ಜಿತೇಂದ್ರ ಸುವರ್ಣ, ಪ್ರಕಾಶ್ ಆಲ್ವಿನ್, ಶುಭೋದಯ ಆಳ್ವ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.