ಹಂಪನಕಟ್ಟೆ: ಬಸ್ ನಿಲ್ದಾಣದ ಮೇಲ್ಛಾವಣಿ ಕಾಮಗಾರಿಗೆ ಶಿಲಾನ್ಯಾಸ

Update: 2024-09-06 08:42 GMT

ಮಂಗಳೂರು, ಸೆ.6: ನಗರದ ಹಂಪನಕಟ್ಟೆಯ ಸರ್ವಿಸ್ ಬಸ್ ನಿಲ್ದಾಣದಲ್ಲಿ ಬಾಕಿ ಇರುವ ಮೇಲ್ಛಾವಣಿ ಕಾಮಗಾರಿಗೆ ಶಿಲಾನ್ಯಾಸವನ್ನು ಶುಕ್ರವಾರ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನೆರವೇರಿಸಿದರು. ಶಾಸಕ ವೇದವ್ಯಾಸ ಕಾಮತ್, ಉಪ ಮೇಯರ್  ಸುನಿತಾ, ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ ಆಳ್ವ, ಸದಸ್ಯರಾದ ದಿವಾಕರ ಪಾಂಡೇಶ್ವರ, ಗಣೇಶ್ ಕುಲಾಲ್, ಶೈಲೇಶ್, ಸಂದೀಪ್ ಗರೋಡಿ, ಸಾಮಾಜಿಕ ಕಾರ್ಯಕರ್ತ ಜಿ.ಕೆ.ಭಟ್, ಬಸ್ ಮಾಲೀಕರ ಸಂಘದ ಅಧ್ಯಕ್ಷ ಅಝೀಝ್ ಪಾರ್ತಿಪ್ಪಾಡಿ, ಉಪಾಧ್ಯಕ್ಷ ರಾಮಚಂದ್ರ ನಾಯ್ಕ್, ಜಯಶೀಲ ಅಡ್ಯಂತಾಯ, ಸ್ಮಾರ್ಟ್‌ಸಿಟಿ ಜನರಲ್ ಮೆನೇಜರ್ ಅರುಣ್ ಪ್ರಭ ಉಪಸ್ಥಿತರಿದ್ದರು.

ಸರ್ವಿಸ್ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಬಸ್ ಶೆಲ್ಟರ್‌ಗಳನ್ನು ನಿರ್ಮಿಸಲಾಗಿದೆ. ಎಲ್ಲ ಕಡೆಗಳಿಂದ ಆಗಮಿಸುವ ಪ್ರಯಾಣಿಕರಿಗೆ ಈ ಶೆಲ್ಟರ್ ಪ್ರಯೋಜನವಾಗಲಿದೆ. ಒಂದು ಶೆಲ್ಟರ್ ತಲಾ 85 ಮೀಟರ್ ಉದ್ದ ಇದ್ದು, 3 ಮೀಟರ್ ಅಗಲ ಹಾಗೂ 4.25 ಮೀಟರ್ ವಿಸ್ತಾರ ಇರಲಿದೆ. ಒಂದು ಬದಿಯಲ್ಲಿ ಆರರಂತೆ ಒಟ್ಟು 12 ಬಸ್‌ಗಳಿಗೆ ನಿಲ್ಲಲು ಅವಕಾಶ ಇದೆ. ಈ ರೀತಿ ಒಟ್ಟು ಐದೂವರೆ ಶೆಲ್ಟರ್‌ಗಳಿದ್ದು, ಏಕಕಾಲದಲ್ಲಿ ಒಟ್ಟು 66 ಬಸ್ ನಿಲುಗಡೆ ಸಾಧ್ಯ. ಪಾಲಿಕೆ

 ಎರಡು ಶೌಚಾಲಯಗಳು ನಿರ್ಮಾಣವಾಗಲಿದ್ದು, ಆಸನದ ವ್ಯವಸ್ಥೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳು 3 ಕೋಟಿ ರೂ. ವೆಚ್ಚದಲ್ಲಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ತಿಳಿಸಿದರು.

ಪ್ರಯಾಣಿಕರು ಬಿಸಿಲು, ಮಳೆ ಲೆಕ್ಕಿಸದೆ ಬಸ್‌ಗೆ ಕಾಯಬೇಕಾಗುತ್ತದೆ. ಅವರ ಸಂಕಷ್ಟಕ್ಕೆ ಸ್ಪಂದಿಸಲು ಸ್ಮಾರ್ಟ್‌ಸಿಟಿ ವತಿಯಿಂದ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಎರಡು ಕಡೆ ನಿರ್ಮಿಸಲಾಗಿದ್ದು, ಉಳಿದ ಕಡೆಗಳಲ್ಲಿ ತ್ವರಿತವಾಗಿ ನಿರ್ಮಿಸಿ ಪ್ರಯಾಣಿಕರ ಉಪಯೋಗಕ್ಕೆ ಬಿಟ್ಟುಕೊಡಲಿದ್ದಾರೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಸರ್ವಿಸ್ ಬಸ್ ನಿಲ್ದಾಣ ಪಾಲಿಕೆ ವ್ಯಾಪ್ತಿಗೆ ಒಳಪಟ್ಟರೂ ಅದರ ಜಾಗ ಜಿಲ್ಲಾಡಳಿತದ ಸುಪರ್ದಿಯಲ್ಲಿದೆ. ಹಾಗಾಗಿ ಈ ಬಸ್ ಶೆಲ್ಟರ್‌ಗಳ ನಿರ್ವಹಣೆಯನ್ನು ಬಸ್ ಮಾಲೀಕರ ಸಂಘಗಳಿಗೆ ಜಿಲ್ಲಾಡಳಿತ ಬಿಟ್ಟುಕೊಟ್ಟರೆ, ಸುಗಮ ನಿರ್ವಹಣೆ ಸಾಧ್ಯವಾಗಲಿದೆ ಎಂದರು.

ಬಸ್ ಮಾಲೀಕರ ಸಂಘದಿಂದ ಈ ಶೆಲ್ಟರ್‌ಗಳಲ್ಲಿ ಕುಡಿಯುವ ನೀರು, ಡೆಸ್ಟಿನೇಷನ್ ಬೋರ್ಡ್‌ಗಳು, ಬಸ್ ಮಾಲೀಕರ ಸಂಘಕ್ಕೆ ಕಚೇರಿ, ವಿಶ್ರಾಂತಿ ಕೊಠಡಿ ಸೇರಿದಂತೆ ಮೂಲಸೌಲಭ್ಯ ಕಲ್ಪಿಸುವಂತೆ ಶಾಸಕರು ಹಾಗೂ ಮೇಯರ್‌ಗೆ ಮನವಿ ಸಲ್ಲಿಸಲಾಯಿತು.

ಲೇಡಿಗೋಷನ್ ಬಸ್ ಸ್ಟಾಪ್ ರದ್ದು ಅವೈಜ್ಞಾನಿಕ

ನಗರದ ಸರ್ವಿಸ್ ಬಸ್ ನಿಲ್ದಾಣದ ಎದುರಿನ ಲೇಡಿಗೋಷನ್ ಬಸ್ ಸ್ಟಾಪ್ ರದ್ದುಪಡಿಸಿರುವ ಜಿಲ್ಲಾಡಳಿತದ ಕ್ರಮ ಅವೈಜ್ಞಾನಿಕ. ಈ ಸಂಚಾರ ಕ್ರಮವನ್ನು ಮರು ಪರಿಶೀಲಿಸಿ ಹಿಂದಿನಂತೆಯೇ ಮುಂದುವರಿಸಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಮರು ಆಗ್ರಹಿಸಿದ್ದಾರೆ.

ಯಾವುದೇ ಬಸ್ ಸ್ಟಾಪ್ ರದ್ದುಪಡಿಸಬೇಕಾದರೆ ಸ್ಥಳೀಯರ, ಪ್ರಯಾಣಿಕರು, ಬಸ್ ಮಾಲೀಕರು, ಜನಪ್ರತಿನಿಧಿಗಳ ಸಲಹೆ ಸೂಚನೆಗಳನ್ನು ಪರಿಗಣಿಸಬೇಕು. ಆದರೆ ಇದಾವುದೂ ಇಲ್ಲದೆ ಕೇವಲ ಹೊರಗಿನವರಾದ ಉಸ್ತುವಾರಿ ಸಚಿವರು ಮೌಖಿಕವಾಗಿ ಹೇಳಿದ್ದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಪಾಲಿಸುತ್ತಿದೆ. ದಿನ ಬೆಳಗಾಗುವುದರ ಒಳಗೆ ಈ ರೀತಿ ಸಂಚಾರ ಮಾರ್ಪಾಟು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲ. ಈ ಕ್ರಮವನ್ನು ಮರು ಪರಿಶೀಲಿಸಬೇಕು ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News