ಸೆ.30ರಂದು ಪ್ರಥಮ ತುಳು ಭಾಷಾ ಭಾಗವತಿಕೆ ಸಹಿತ ‘ಸಿರಿ ದೇವಿ ಮೈಮೆ’ ಯಕ್ಷಗಾನ
ಮಂಗಳೂರು, ಸೆ.27: ತುಳುವೆರೆ ಆಯನೊ ಕೂಟದ ವತಿಯಿಂದ ಪ್ರಥಮ ಬಾರಿಗೆ ತುಳು ಭಾಷೆಯಲ್ಲಿ ಭಾಗವತಿಕೆ ಸಹಿತ ಶ್ರೀದೇವಿ ಮಹಾತ್ಮೆ ಯಕ್ಷಗಾನವು ‘ಸಿರಿ ದೇವಿ ಮೈಮೆ’ ಎಂಬ ಹೆಸರಿನಲ್ಲಿ ಸೆ.30ರಂದು ನಗರದ ಪುರಭವನದಲ್ಲಿ ಪ್ರದರ್ಶನಗೊಳ್ಳಲಿದೆ ಎಂದು ಕೂಟದ ಅಧ್ಯಕ್ಷೆ ಶಮಿನಾ ಆಳ್ವ ತಿಳಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಪರಾಹ್ನ 2 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಕೂಟದ 2023-24ನೇ ಸಾಲಿನ ಕಾರ್ಯಕಾರಿ ಸಮಿತಿಯ ಪದಗ್ರಹಣ ನಡೆಯಲಿದೆ. ಕಾರ್ಯಕ್ರಮದಲ್ಲಿ ಕನ್ಯಾನ ಸದಾಶಿವ ಶೆಟ್ಟಿಯವರಿಗೆ 'ತುಳುವೆರೆ ಕರ್ಣ ಬಿರುದು' ನೀಡಿ ಗೌರವಿಸಲಾಗುವುದು ಎಂದರು.
ಸಿರಿ ದೇವಿ ಮೈಮೆ ಯಕ್ಷಗಾನದ ಸಂಚಾಲಕ ಸರಪಾಡಿ ಅಶೋಕ್ ಶೆಟ್ಟಿ ಮಾತನಾಡಿ, ತುಳು ಭಾಷೆ ಸಂರಕ್ಷಣೆ ಹಾಗೂ ತುಳು ಭಾಷೆಗೆ ಮಾನ್ಯತೆಯನ್ನು ಒದಗಿಸುವ ನಿಟ್ಟಿನಲ್ಲಿ ತುಳು ಭಾಗವತಿಕೆಯೊಂದಿಗೆ ಯಕ್ಷಗಾನದ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ ಎಂದರು.
ಸಂಜೆ 4 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮವನ್ನು ವಿಧಾನಸಭಾ ಅಧ್ಯಕ್ಷ ಯು.ಟಿ.ಖಾದರ್ ನಿರ್ವಹಿಸಲಿದ್ದಾರೆ. ಕಟೀಲು ಕ್ಷೇತ್ರದ ಹರಿನಾರಾಯಣ ಅಸ್ರಣ ದೀಪ ಪ್ರಜ್ವಲನ ಮಾಡಲಿದ್ದಾರೆ. ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಬಿ.ರಮಾನಾಥ ರೈ, ಜಾಗತಿಕ ಬಂಟ್ಸ್ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ.
ಯಕ್ಷಬ್ರಹ್ಮ ಅಗರಿ ಶ್ರೀನಿವಾಸ ಭಾಗವತರು ಬರೆದ ಯಕ್ಷಗಾನವನ್ನು ತುಳುವಿಗೆ ದೇವದಾಸ ಈಶ್ವರ ಮಂಗಲ ಭಾಷಾಂತರಿಸಿ ಸರಪಾಡಿ ಅಶೋಕ್ ಶೆಟ್ಟಿ ಸಂಪಾದಿಸಿದ 'ಸಿರಿ ದೇವಿ ಮೈಮೆ' ಪುಸ್ತಕ ಈ ಸಂದರ್ಭ ಬಿಡುಗಡೆಗೊಳ್ಳಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕೂಟದ ಉಪಾಧ್ಯಕ್ಷರಾದ ಗೋಪಾಡ್ಕರ್, ಆಶಾ ಶೆಟ್ಟಿ ಅತ್ತಾವರ, ಕಾರ್ಯದರ್ಶಿ ರಾಜೇಶ್ ಹೆಗ್ಡೆ ಪೊಳಲಿ ಮೊದಲಾದವರು ಉಪಸ್ಥಿತರಿದ್ದರು.