ವಿಟ್ಲ: ಕೋಡಪದವು ಸರ್ಕಾರಿ ಶಾಲೆಯಲ್ಲಿ ಕಳ್ಳತನಕ್ಕೆ ಯತ್ನ
ವಿಟ್ಲ: ಇಲ್ಲಿನ ಕೋಡಪದವು ದ.ಕ.ಜಿ.ಪಂಚಾಯತ್ ಉನ್ನತೀಕರಿಸಿದ ಶಾಲೆಯ ಆಹಾರ ಸಾಮಾಗ್ರಿಗಳ ದಾಸ್ತಾನು ಕೊಠಡಿ ಮತ್ತು ಮುಖ್ಯ ಶಿಕ್ಷಕರ ಕೊಠಡಿಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಸೋಮವಾರ ಬೆಳಿಗ್ಗೆ ಎಂದಿನಂತೆ ಶಾಲಾ ಆರಂಭ ಸಂದರ್ಭದಲ್ಲಿ ಮುಖ್ಯ ಶಿಕ್ಷಕಿ ಮೋಹಲತಾ ಅವರು ಕಳವು ಯತ್ನ ಗಮನಕ್ಕೆ ಬಂದ ತಕ್ಷಣವೇ ಎಸ್.ಡಿ.ಎಂ.ಸಿ ಅಧ್ಯಕ್ಷರ ಮೂಲಕ ಪೊಲೀಸರಿಗೆ ಹಾಗೂ ಶಿಕ್ಷಣ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇತ್ತೀಚೆಗೆ ಕಳ್ಳರ ಕಾಟ ಜಾಸ್ತಿಯಾಗುತ್ತಿದ್ದು ಆರು ತಿಂಗಳ ಹಿಂದೆ ಶಾಲೆಯ ಹತ್ತಿರ ಇರುವ ಬ್ಯಾಂಕ್ ಕಳವಿಗೆ ಪ್ರಯತ್ನ ನಡೆಸಿರುವ ಬೆನ್ನಲ್ಲೇ ಶಾಲೆಗೂ ಕಳ್ಳರು ಲಗ್ಗೆ ಇಟ್ಟಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಶತಮಾನದ ಹೊಸ್ತಿಲಲ್ಲಿರುವ ಈ ಶಾಲೆಯಲ್ಲಿ ಮುಂದಿನ ತಿಂಗಳು ಉದ್ಘಾಟನೆಗೊಳ್ಳಲಿರುವ ಎರಡು ನೂತನ ಕೊಠಡಿಗಳಲ್ಲಿ ವಸ್ತುಗಳು ಚೆಲ್ಲಾಪಿಲ್ಲಿಯಾಗಿರುವುದು ಕಂಡುಬಂದಿದ್ದು, ಶಾಲಾ ಹಿತೈಷಿಗಳು, ದಾನಿಗಳು ನೀಡಿರುವ ಟಿ.ವಿ.,ಕಂಪ್ಯೂಟರ್ ಗಳ ಕಳವಿಗೆ ಯತ್ನಿಸಿರಬಹುದು ಎಂದು ಶಂಕಿಸಲಾಗಿದೆ.
ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ಫಾರೂಕ್, ಸ್ಥಳೀಯ ಗ್ರಾ.ಪಂ.ಸದಸ್ಯ ಅರ್ಶದ್ ಕುಕ್ಕಿಲ, ಹಳೆ ವಿದ್ಯಾರ್ಥಿ ಸಂಘದ ಹಸೈನಾರ್ ತಾಳಿತ್ತನೂಜಿ, ಫಾರೂಕ್ ಬೊಣ್ಯಕುಕ್ಕು, ಮುಖ್ಯ ಶಿಕ್ಷಕಿ ಮೋಹಲತಾ ಇದ್ದರು.