ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣ: 7 ಮಂದಿ ದೋಷಿಗಳು

Update: 2024-03-29 18:05 GMT

ಲಕ್ನೊ: ಬಿಎಸ್‌ಪಿಯ ಶಾಸಕ ರಾಜು ಪಾಲ್ ಅವರನ್ನು 2005ರಲ್ಲಿ ಹತ್ಯೆಗೈದ ಪ್ರಕರಣದಲ್ಲಿ 7 ಮಂದಿ ದೋಷಿಗಳು ಎಂದು ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯ ಶುಕ್ರವಾರ ಪರಿಗಣಿಸಿದೆ.

ನ್ಯಾಯಾಲಯ 6 ಮಂದಿ ದೋಷಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಹಾಗೂ 11.62 ಲಕ್ಷ ರೂ. ದಂಡ ಕೂಡ ವಿಧಿಸಿದೆ. ಓರ್ವ ದೋಷಿ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಆತನ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಾಗುವುದು ಎಂದು ನ್ಯಾಯಾಲಯ ತಿಳಿಸಿದೆ.

ಹತ ಭೂಗತ ಪಾತಕಿ ಅತೀಕ್ ಅಹ್ಮದ್ ಹಾಗೂ ಆತನ ಸಹೋದರ ಅಶ್ರಫ್ ಕೂಡ ಈ ಪ್ರಕರಣದ ಆರೋಪಿಗಳು. ಆದರೆ, ಅವರಿಬ್ಬರು ಪ್ರಯಾಗ್‌ರಾಜ್‌ನಲ್ಲಿ ಕಳೆದ ವರ್ಷ ಹತ್ಯೆಯಾಗಿದ್ದರು.

ನ್ಯಾಯಾಲಯ ದೋಷಿಗಳು ಎಂದು ಪರಿಗಣಿಸಿದವರೆಂದರೆ ಅಬಿದ್, ಫರ್ಹಾನ್ ಅಹ್ಮದ್, ಜಾವೇದ್, ರಂಜಿತ್, ಗುಲ್ ಹಸನ್ ಹಾಗೂ ಅಬ್ದುಲ್ ಕವಿ. 7ನೇ ದೋಷಿ ಇಸ್ರಾರ್ ಅಹ್ಮದ್ ನ್ಯಾಯಾಲಯದಲ್ಲಿ ಹಾಜರಾಗಿರಲಿಲ್ಲ. ಇನ್ನೋರ್ವ ಆರೋಪಿ ಗುಲ್‌ಫೂಲ್ ಆಲಿಯಾಸ್ ರಫೀಕ್ ಅಹ್ಮದ್ ವಿಚಾರಣೆ ಸಂದರ್ಭ ಸಾವನ್ನಪ್ಪಿದ್ದರು.

ಪ್ರಯಾಗ್‌ರಾಜ್ ಪಶ್ಚಿಮಕ್ಷೇತ್ರಕ್ಕೆ 2004ರಲ್ಲಿ ನಡೆದ ವಿಧಾನ ಸಭೆ ಉಪ ಚುನಾವಣೆಯಲ್ಲಿ ರಾಜು ಪಾಲ್ ಅವರು ಅಶ್ರಫ್ ವಿರುದ್ಧ ಜಯ ಗಳಿಸಿದ್ದರು. ಇದು ರಾಜಕೀಯ ದ್ವೇಷಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ 2005 ಜನವರಿ 25ರಂದು ರಾಜು ಪಾಲ್ ಅವರನ್ನು ಹತ್ಯೆಗೈಯಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News