ಗೋವಾದಲ್ಲಿ 100 ರೂಪಾಯಿಯ ಮದ್ಯಕ್ಕೆ ರಾಜ್ಯದಲ್ಲಿ ರೂ. 513!
ಹೊಸದಿಲ್ಲಿ: ಗೋವಾ ಜನಪ್ರಿಯ ಕಡಲ ಕಿನಾರೆಗಳಿಗೆ ಮಾತ್ರ ಹೆಸರುವಾಸಿಯಲ್ಲ. ಮದ್ಯಪ್ರಿಯರಿಗೆ ದೇಶದಲ್ಲೇ ಅತ್ಯಂತ ಅಗ್ಗದ ರಾಜ್ಯ. ಮದ್ಯದ ಮೇಲೆ ವಿಧಿಸುವ ತೆರಿಗೆ ಕನಿಷ್ಠವಾಗಿರುವುದು ಇದಕ್ಕೆ ಕಾರಣ. ಗೋವಾ ಮದ್ಯದ ಮೇಲೆ ಕನಿಷ್ಠ ತೆರಿಗೆ ವಿಧಿಸುವ ರಾಜ್ಯವಾಗಿದ್ದರೆ, ನೆರೆಯ ಕರ್ನಾಟಕದಲ್ಲಿ ಮದ್ಯದ ಮೇಲಿನ ತೆರಿಗೆ ಅತ್ಯಧಿಕ.
ಇಂಟರ್ ನ್ಯಾಷನಲ್ ಸ್ಪಿರಿಟ್ಸ್ ಅಂಡ್ ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾ ನಡೆಸಿದ ವಿಶ್ಲೇಷಣೆಯ ಪ್ರಕಾರ, ವಿಸ್ಕಿ, ರಮ್, ವೋಡ್ಕಾ ಮತ್ತು ಜಿನ್ ನಂತಹ ಮದ್ಯದ ಪ್ರತಿ ಬಾಟಲಿ ಬೆಲೆ ಗೋವಾದಲ್ಲಿ 100 ರೂಪಾಯಿ ಇದ್ದರೆ, ದೆಹಲಿಯಲ್ಲಿ ಇದು 134 ರೂಪಾಯಿ ಆಗಿದೆ. ಕರ್ನಾಟಕದಲ್ಲಿ ಗರಿಷ್ಠ ಬೆಲೆ ಇದ್ದು, ಈ ರಾಜ್ಯದಲ್ಲಿ ಒಂದು ಬಾಟಲಿ ಮದ್ಯದ ಬೆಲೆ 513 ರೂಪಾಯಿ ಆಗಿರುತ್ತದೆ.
ಗೋವಾದಲ್ಲಿ ಮದ್ಯದ ಮೇಳೆ ಶೇಕಡ 49ರಷ್ಟು ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇದು ಕರ್ನಾಟಕ (ಶೇಕಡ 83) ಮತ್ತು ಮಹಾರಾಷ್ಟ್ರ (ಶೇಕಡ 73)ದಲ್ಲಿ ವಿಧಿಸುವ ತೆರಿಗೆಗೆ ಹೋಲಿಸಿದರೆ ತೀರಾ ಕಡಿಮೆ. ವಿದೇಶಿ ಉತ್ಪನ್ನಗಳಿಗೆ ವಿಧಿಸಲಾಗುವ ಆಮದು ಸುಂಕದ ಬೆಲೆ ಸೂಚ್ಯಂಕ ಅಂಶಗಳು ಎಲ್ಲ ರಾಜ್ಯಗಳಲ್ಲಿ ಸಮಾನವಾಗಿರುತ್ತವೆ.
ಸುಧೀರ್ಘ ಕಾಲದಿಂದ ವಿದೇಶಿ ಮದ್ಯ ಪೂರೈಕೆ ಕಂಪನಿಗಳು ವೈನ್ ಹಾಗೂ ಸ್ಪಿರಿಟ್ ಗಳ ಮೇಲಿನ ಆಮದು ಸುಂಕ ಕಡಿತಗೊಳಿಸುವಂತೆ ಒತ್ತಾಯಿಸುತ್ತಲೇ ಬಂದಿವೆ. ಇದು ಈಗ ಶೇಕಡ 150ರಷ್ಟಿದೆ. ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್ ಜತೆ ಮಾಡಿಕೊಂಡ ಮುಕ್ತ ವ್ಯಾಪಾರ ಒಪ್ಪಂದಗಳ ಅನ್ವಯ ಆಮದು ಸುಂಕವನ್ನು ಕಡಿತಗೊಳಿಸುವಂತೆ ಈ ದೇಶಗಳು ಆಗ್ರಹಿಸುತ್ತಿವೆ.