ಡ್ರಗ್ ಮಾಫಿಯಾ ವಿರುದ್ಧ ಪಂಜಾಬ್ ಸಿಎಂ ಭಗವಂತ್ ಮಾನ್ ಪ್ರಹಾರ: 10 ಸಾವಿರ ಪೊಲೀಸರ ವರ್ಗಾವಣೆ
ಅಮೃತಸರ: ಪಂಜಾಬ್‍ನಲ್ಲಿ ಡ್ರಗ್ ಮಾಫಿಯಾ ವಿರುದ್ಧ ಪ್ರಹಾರ ಕೈಗೊಳ್ಳುವ ಕ್ರಮವಾಗಿ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮಂಗಳವಾರ 10 ಸಾವಿರ ಪೊಲೀಸ್ ಸಿಬ್ಬಂದಿಯ ವರ್ಗಾವಣೆಗೆ ಆದೇಶ ನೀಡಿದ್ದಾರೆ. ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಯಿಂದ ಆರಂಭಿಸಿ ಎಲ್ಲ ವರ್ಗದ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದ್ದು, ಇನ್ನಷ್ಟು ವರ್ಗಾವಣೆಗಳಿಗೆ ಉದ್ದೇಶಿಸಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಗೌರವ್ ಯಾದವ್, ಆಯುಕ್ತರು ಮತ್ತು ಎಸ್‍ಎಸ್‍ಪಿಗಳ ಸಭೆಯ ಬಳಿಕ ಮಾತನಾಡಿದ ಸಿಎಂ, ಪೊಲೀಸರ ಜತೆಗೆ ಡ್ರಗ್ ಮಾಫಿಯಾ ಸಂಬಂಧ ಹೊಂದಿದೆ ಎನ್ನುವುದು ಮನವರಿಕೆಯಾದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಹಲವು ದೂರುಗಳಿಗೆ ಪೊಲೀಸ್ ಇಲಾಖೆಯಿಂದ ಸ್ಪಂದನೆಯೇ ಸಿಕ್ಕಿಲ್ಲ; ಮತ್ತೆ ಕೆಲ ಪ್ರಕರಣಗಳಲ್ಲಿ ದೂರುದಾರರು ತಮ್ಮ ಹಳ್ಳಿಗಳಿಗೆ ತಲುಪುವ ಮುನ್ನ ಆರೋಪಿಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾನ್ ಆಪಾದಿಸಿದರು.
ಠಾಣಾಧಿಕಾರಿಗಳು ಒಂದೇ ಠಾಣೆಯಲ್ಲಿ 10-20 ವರ್ಷಗಳಿಂದ ಠಿಕಾಣಿ ಹೂಡಿದ್ದಾರೆ. ಆದ್ದರಿಂದ ಸಾಮೂಹಿಕ ವರ್ಗಾವಣೆಗೆ ಆದೇಶಿಸಲಾಗಿದೆ. ಒಬ್ಬ ಪೊಲೀಸ್ ಅಧಿಕಾರಿ ಶಾಮೀಲಾಗಿರುವುದು ಗೊತ್ತಾದರೆ ಅಂಥವರನ್ನು ತಕ್ಷಣ ಸೇವೆಯಿಂದ ವಜಾ ಮಾಡಲಾಗುವುದು. ಮುಂದಿನ ಏಳು ದಿನಗಳಲ್ಲಿ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸಲಾಗುವುದು. ಪೊಲೀಸ್ ಅಧಿಕಾರಿ ಇದನ್ನು ಮಾಡಿದರೆ ಅದು ಪಾಪ. ಅದಕ್ಕೆ ಬೆಲೆ ತೆರಲೇಬೇಕು ಎಂದು ಮಾನ್ ವಿವರಿಸಿದರು.