ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟ ಘಟನೆ ಬೆನ್ನಲ್ಲೇ ದಿಲ್ಲಿಯ 13 ಕೋಚಿಂಗ್ ಸೆಂಟರ್ ಗಳಿಗೆ ಬೀಗ

Update: 2024-07-29 07:20 GMT

Photo:X/@OberoiShelly

ಹೊಸದಿಲ್ಲಿ: ದಿಲ್ಲಿಯ ಐಎಎಸ್ ತರಬೇತಿ ಕೇಂದ್ರವೊಂದರ ನೆಲ ಅಂತಸ್ತಿಗೆ ದಿಢೀರ್ ಎಂದು ಪ್ರವಾಹ ನುಗ್ಗಿ, ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟ ಮರುದಿನ, ಹಳೆಯ ರಾಜಿಂದರ್ ನಗರ್ ಪ್ರದೇಶದಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕಾರ್ಯಾಚರಿಸುತ್ತಿದ್ದ 13 ತರಬೇತಿ ಕೇಂದ್ರಗಳಿಗೆ ದಿಲ್ಲಿ ಮಹಾನಗರ ಪಾಲಿಕೆ ಬೀಗ ಮುದ್ರೆ ಜಡಿದಿದೆ.

ರವಿವಾರ ಮಹಾನಗರ ಪಾಲಿಕೆಯ ತಂಡವೊಂದು ಶೋಧ ಕಾರ್ಯ ಕೈಗೊಂಡಿದ್ದು, ಈ ಪ್ರದೇಶದಲ್ಲಿ ನೆಲ ಅಂತಸ್ತಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದ ಸಂಸ್ಥೆಗಳಿಗೆ ಬೀಗ ಮುದ್ರೆ ಹಾಕಲಾಗಿದೆ ಎಂದು ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಿಮದಲ್ಲಿ ಪೋಸ್ಟ್ ಮಾಡಿರುವ ಅವರು, “ನಿನ್ನೆಯ ದುರಂತಮಯ ಘಟನೆಯ ನಂತರ, ದಿಲ್ಲಿ ಮಹಾನಗರ ಪಾಲಿಕೆಯು ನಿಯಮಗಳನ್ನು ಉಲ್ಲಂಘಿಸಿ ನೆಲ ಅಂತಸ್ತಿನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ರಾಜಿಂದರ್ ನಗರ್ ಪ್ರದೇಶದ ಎಲ್ಲ ತರಬೇತಿ ಕೇಂದ್ರಗಳಿಗೆ ಬೀಗ ಮುದ್ರೆ ಹಾಕಲಾಗಿದೆ. ಅಗತ್ಯ ಬಿದ್ದರೆ, ಈ ಅಭಿಯಾನವನ್ನು ದಿಲ್ಲಿಯಾದ್ಯಂತ ನಡೆಸಲಾಗುವುದು” ಎಂದು ತಿಳಿಸಿದ್ದಾರೆ.

ನಿನ್ನೆ ದಿಲ್ಲಿ ಮಹಾನಗರ ಪಾಲಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶೋಧ ಕಾರ್ಯಾಚರಣೆಯಲ್ಲಿ ಹಳೆ ರಾಜಿಂದರ್ ನಗರ್ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿದ್ದ ಐಎಎಸ್ ಗುರುಕುಲ್, ಚಾಹಲ್ ಅಕಾಡೆಮಿ, ಪ್ಲೂಟಸ್ ಅಕಾಡೆಮಿ, ಸಾಯಿ ಟ್ರೇಡಿಂಗ್, ಐಎಎಸ್ ಸೇತು, ಟಾಪರ್ಸ್ ಅಕಾಡೆಮಿ, ದೈನಿಕ್ ಸಂವಾದ್, ಸಿವಿಲ್ಸ್ ಡೈಲಿ ಐಎಎಸ್, ಕ್ಯಾರಿಯರ್ ಪವರ್, 99 ನೋಟ್ಸ್, ವಿದ್ಯಾ ಗುರು, ಗೈಡೆನ್ಸ್ ಐಎಎಸ್ ಹಾಗೂ ಎಸ್ಸೆ ಫಾರ್ ಐಎಎಸ್ ತರಬೇತಿ ಕೇಂದ್ರಗಳಿಗೆ ಬೀಗ ಮುದ್ರೆ ಹಾಕಲಾಗಿದೆ.

ಇದಕ್ಕೂ ಮುನ್ನ ಇಂದು ಬೆಳಗ್ಗೆ, ದಿಲ್ಲಿಯಾದ್ಯಂತ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ನಿಯಮಗಳನ್ನು ಉಲ್ಲಂಘಿಸಿ ನೆಲ ಅಂತಸ್ತಿನಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವ ಎಲ್ಲ ತರಬೇತಿ ಕೇಂದ್ರಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಮಹಾನಗರ ಪಾಲಿಕೆಯ ಆಯುಕ್ತರಿಗೆ ದಿಲ್ಲಿ ಮೇಯರ್ ಶೆಲ್ಲಿ ಒಬೆರಾಯ್ ನಿರ್ದೇಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News